ಗೃಹ ವ್ಯವಹಾರಗಳ ಸಚಿವಾಲಯ
2025ನೇ ಸಾಲಿನ ʻಪದ್ಮ ಪ್ರಶಸ್ತಿʼಗೆ ನಾಮನಿರ್ದೇಶನ ಸಲ್ಲಿಸಲು ಸೆಪ್ಟೆಂಬರ್ 15, 2024 ರವರೆಗೆ ಅವಕಾಶ
Posted On:
22 JUL 2024 11:27AM by PIB Bengaluru
2025ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾಗುವ 2025ನೇ ಸಾಲಿನ ʻಪದ್ಮ ಪ್ರಶಸ್ತಿʼಗಳಿಗೆ ನಾಮನಿರ್ದೇಶನಗಳು / ಶಿಫಾರಸುಗಳು 2024ರ ಮೇ 01 ರಿಂದ ಪ್ರಾರಂಭವಾಗಿವೆ. ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡಲು ಕೊನೆಯ ದಿನಾಂಕ ಸೆಪ್ಟೆಂಬರ್ 15, 2024 ಆಗಿರುತ್ತದೆ. ʻಪದ್ಮ ಪ್ರಶಸ್ತಿʼಗಳಿಗೆ ನಾಮನಿರ್ದೇಶನಗಳು / ಶಿಫಾರಸುಗಳನ್ನು ರಾಷ್ಟ್ರೀಯ ಪುರಸ್ಕಾರ ಪೋರ್ಟಲ್ (https://awards.gov.in) ಮೂಲಕ ಆನ್ ಲೈನ್‌ನಲ್ಲಿ ಸ್ವೀಕರಿಸಲಾಗುತ್ತದೆ.
ಪದ್ಮ ಪ್ರಶಸ್ತಿಗಳಾದ ʻಪದ್ಮ ವಿಭೂಷಣʼ, ʻಪದ್ಮಭೂಷಣʼ ಮತ್ತು ʻಪದ್ಮಶ್ರೀʼ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಸೇರಿವೆ. 1954ರಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಗಳನ್ನು ಪ್ರತಿವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾಗುತ್ತದೆ. ಕಲೆ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಮಾಜ ಸೇವೆ, ವಿಜ್ಞಾನ ಮತ್ತು ಎಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರಗಳು, ನಾಗರಿಕ ಸೇವೆ, ವ್ಯಾಪಾರ ಮತ್ತು ಕೈಗಾರಿಕೆ ಮುಂತಾದ ಎಲ್ಲಾ ಕ್ಷೇತ್ರಗಳು / ವಿಭಾಗಗಳಲ್ಲಿ ವಿಶಿಷ್ಟ ಮತ್ತು ಅಸಾಧಾರಣ ಸಾಧನೆಗಳು / ಸೇವೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಜನಾಂಗ, ಉದ್ಯೋಗ, ಸ್ಥಾನ ಅಥವಾ ಲಿಂಗ ಭೇದವಿಲ್ಲದೆ ಎಲ್ಲಾ ವ್ಯಕ್ತಿಗಳು ಈ ಪ್ರಶಸ್ತಿಗಳಿಗೆ ಅರ್ಹರು. ವೈದ್ಯರು ಮತ್ತು ವಿಜ್ಞಾನಿಗಳನ್ನು ಹೊರತುಪಡಿಸಿ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ(ಪಿಎಸ್‌ಯು) ಕೆಲಸ ಮಾಡುವವರು ಸೇರಿದಂತೆ ಯಾವುದೇ ಸರ್ಕಾರಿ ನೌಕರರು ʻಪದ್ಮ ಪ್ರಶಸ್ತಿʼಗಳಿಗೆ ಅರ್ಹರಾಗಿರುವುದಿಲ್ಲ.
ಪದ್ಮ ಪ್ರಶಸ್ತಿಗಳನ್ನು 'ಜನರ ಪದ್ಮ'ವನ್ನಾಗಿ ಪರಿವರ್ತಿಸಲು ಸರ್ಕಾರ ಬದ್ಧವಾಗಿದೆ. ಆದ್ದರಿಂದ, ಎಲ್ಲಾ ನಾಗರಿಕರು ಸ್ವಯಂ ನಾಮನಿರ್ದೇಶನ ಸೇರಿದಂತೆ ನಾಮನಿರ್ದೇಶನಗಳು/ ಶಿಫಾರಸುಗಳನ್ನು ಮಾಡಲು ಕೋರಲಾಗಿದೆ. ಮಹಿಳೆಯರು, ಸಮಾಜದ ದುರ್ಬಲ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು, ದಿವ್ಯಾಂಗ ವ್ಯಕ್ತಿಗಳು ಮತ್ತು ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪ್ರತಿಭಾವಂತ ವ್ಯಕ್ತಿಗಳನ್ನು ಗುರುತಿಸಲು ಸಂಘಟಿತ ಪ್ರಯತ್ನಗಳನ್ನು ಮಾಡಬಹುದು.
ಮೇಲೆ ತಿಳಿಸಿದ ಪೋರ್ಟಲ್‌ನಲ್ಲಿ ಲಭ್ಯವಿರುವ ನಮೂನೆಯಲ್ಲಿ ನಿರ್ದಿಷ್ಟಪಡಿಸಿದ ಎಲ್ಲಾ ಸಂಬಂಧಿತ ವಿವರಗಳನ್ನು ನಾಮನಿರ್ದೇಶನಗಳು/ಶಿಫಾರಸುಗಳು ಒಳಗೊಂಡಿರಬೇಕು. ಇದರಲ್ಲಿ ನಿರೂಪಣಾ ರೂಪದಲ್ಲಿ ಉಲ್ಲೇಖ(ಗರಿಷ್ಠ 800 ಪದಗಳು), ಶಿಫಾರಸು ಮಾಡಲಾದ ವ್ಯಕ್ತಿಯು ಅವರ ಸಂಬಂಧಿತ ಕ್ಷೇತ್ರ / ವಿಭಾಗದಲ್ಲಿ ಮಾಡಿದ ವಿಶಿಷ್ಟ ಹಾಗೂ ಅಸಾಧಾರಣ ಸಾಧನೆಗಳು / ಸೇವೆಯನ್ನು ಸ್ಪಷ್ಟವಾಗಿ ನಮೂದಿಸಬೇಕು.
ಈ ಕುರಿತಾದ ವಿವರಗಳು ಗೃಹ ಸಚಿವಾಲಯದ ವೆಬ್‌ಸೈಟ್ (https://mha.gov.in) ಮತ್ತು ʻಪದ್ಮ ಪ್ರಶಸ್ತಿ ಪೋರ್ಟಲ್ʼನಲ್ಲಿ(https://padmaawards.gov.in) 'ಪ್ರಶಸ್ತಿಗಳು ಮತ್ತು ಪದಕಗಳು' ಎಂಬ ಶೀರ್ಷಿಕೆಯಡಿಯಲ್ಲಿ ಲಭ್ಯವಿದೆ. ಈ ಪ್ರಶಸ್ತಿಗಳಿಗೆ ಸಂಬಂಧಿಸಿದ ಕಾನೂನುಗಳು ಮತ್ತು ನಿಯಮಗಳು https://padmaawards.gov.in/AboutAwards.aspx ವೆಬ್‌ಸೈಟ್ ಲಿಂಕ್‌ನಲ್ಲಿ ಲಭ್ಯವಿದೆ .
*****
(Release ID: 2034888)
Visitor Counter : 56
Read this release in:
Telugu
,
Tamil
,
Bengali
,
Assamese
,
English
,
Urdu
,
Marathi
,
Hindi
,
Hindi_MP
,
Manipuri
,
Gujarati