ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ವಿಂಗ್ಸ್ ಟು ಅವರ್ ಹೋಪ್ಸ್ - ಸಂಪುಟ 1, ರಾಷ್ಟ್ರಪತಿ ಭವನ: ಹೆರಿಟೇಜ್ ಮೀಟ್ಸ್ ದಿ ಪ್ರೆಸೆಂಟ್ ಮತ್ತು ಕಹಾನಿ ರಾಷ್ಟ್ರಪತಿ ಭವನ್ ಕಿ ಪುಸ್ತಕಗಳನ್ನು ಬಿಡುಗಡೆ ಮಾಡಿದರು


ಈ ಪುಸ್ತಗಳು ಎಲ್ಲಾ ದೇಶವಾಸಿಗಳ ಬಗ್ಗೆ ರಾಷ್ಟ್ರಪತಿ ಮುರ್ಮು ಅವರ ಸಹಾನುಭೂತಿಯ ಪರಿಣಾಮಕಾರಿ ಅಭಿವ್ಯಕ್ತಿ ಮತ್ತು ನಮ್ಮ ಪ್ರಜಾಪ್ರಭುತ್ವಕ್ಕೆ  ನಿಧಿ: ಶ್ರೀ ಚೌಹಾಣ್

ಈ ಪುಸ್ತಕಗಳು ಮುಂಬರುವ ಪೀಳಿಗೆಗೆ ಉತ್ತಮ ಸಂಗ್ರಹವಾಗಿ ಕಾರ್ಯನಿರ್ವಹಿಸುತ್ತವೆ: ವಾರ್ತಾ ಮತ್ತು ಪ್ರಸಾರ ರಾಜ್ಯ ಸಚಿವರಾದ ಡಾ. ಎಲ್ ಮುರುಗನ್

Posted On: 18 JUL 2024 5:35PM by PIB Bengaluru

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಮತ್ತು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಅವರೊಂದಿಗೆ ವಿಂಗ್ಸ್ ಟು ಅವರ್ ಹೋಪ್ಸ್- ಸಂಪುಟ 1 (ಇಂಗ್ಲಿಷ್ ಮತ್ತು ಹಿಂದಿ), ರಾಷ್ಟ್ರಪತಿ ಭವನ: ಹೆರಿಟೇಜ್ ಮೀಟ್ಸ್ ದಿ ಪ್ರೆಸೆಂಟ್ ಮತ್ತು ಕಹಾನಿ ರಾಷ್ಟ್ರಪತಿ ಭವನ ಕಿ ಎಂಬ ನಾಲ್ಕು ಪುಸ್ತಕಗಳನ್ನು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ಬಿಡುಗಡೆಯಾದ ಪುಸ್ತಕಗಳು ಭಾರತೀಯ ಗಣರಾಜ್ಯದ ಸಂಕೇತವಾದ ರಾಷ್ಟ್ರಪತಿ ಭವನದ ಶ್ರೀಮಂತ ಪರಂಪರೆಯ ಕಸೂತಿಯಾಗಿವೆ ಎಂದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣಗಳ ಸಂಕಲನವು ನಮ್ಮ ಪ್ರಜಾಪ್ರಭುತ್ವ ಮತ್ತು ಇಡೀ ಸಮಾಜಕ್ಕೆ ಒಂದು ನಿಧಿಯಾಗಿದೆ. ಈ ಸಂಕಲನವು ಮಹಿಳೆಯರು, ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಇತರ ವಂಚಿತ ವರ್ಗಗಳು, ರೈತರು, ಸಶಸ್ತ್ರ ಪಡೆಗಳು ಮತ್ತು ಯುವಜನರು ಸೇರಿದಂತೆ ಎಲ್ಲಾ ದೇಶವಾಸಿಗಳ ಬಗ್ಗೆ ರಾಷ್ಟ್ರಪತಿ ಮುರ್ಮು ಅವರ ಸಹಾನುಭೂತಿಯ ಪರಿಣಾಮಕಾರಿ ಅಭಿವ್ಯಕ್ತಿಯಾಗಿದೆ. ಈ ಪುಸ್ತಕದ ಮುಖಪುಟದಲ್ಲಿರುವ ಚಿತ್ರ ಮತ್ತು ಶೀರ್ಷಿಕೆಯು ನಮ್ಮ ಪ್ರಜಾಪ್ರಭುತ್ವದ ಕಥೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.

ಪುಸ್ತಕಗಳಲ್ಲಿನ ಸಂದೇಶವು ಪ್ರತಿಯೊಬ್ಬ ಭಾರತೀಯನನ್ನು ಭರವಸೆಯೊಂದಿಗೆ ಎತ್ತರಕ್ಕೆ ಹಾರಲು ಪ್ರೇರೇಪಿಸುತ್ತದೆ. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಕುರಿತು ಅವರು ಪ್ರಮುಖ ದೃಷ್ಟಿಕೋನಗಳನ್ನು ಹೊಂದಿದ್ದಾರೆ ಎಂದು ಸಚಿವರು ಹೇಳಿದರು. ರಾಷ್ಟ್ರಪತಿಯವರ ಭಾಷಣಗಳ ಈ ಸಂಕಲನವನ್ನು ಓದುವುದರಿಂದ ದೇಶದ ಸಾಮಾಜಿಕ-ಆರ್ಥಿಕ ಸವಾಲುಗಳು, ಸಾಧನೆಗಳ ದಿಕ್ಕು ಮತ್ತು ಸ್ವಾವಲಂಬನೆಯ ಉಪಕ್ರಮಗಳನ್ನು ಕುರಿತು ನಮ್ಮ ದೃಷ್ಟಿಕೋನವನ್ನು ವಿಸ್ತರಿಸುತ್ತದೆ ಎಂದು ಶ್ರೀ ಚೌಹಾಣ್ ಅವರು ಹೇಳಿದರು.

ಕೇಂದ್ರ ವಾರ್ತಾ ಮತ್ತು ಪ್ರಸಾರ ರಾಜ್ಯ ಸಚಿವ ಡಾ.ಎಲ್. ಮುರುಗನ್ ಅವರು ಈ ಪುಸ್ತಕಗಳನ್ನು ಪ್ರಕಟಿಸಿದ್ದಕ್ಕಾಗಿ ಮತ್ತು ಸಾರ್ವಜನಿಕ ಹಿತಾಸಕ್ತಿಯ ವಿವಿಧ ವಿಷಯಗಳನ್ನು ಕುರಿತು ನಿಯಮಿತವಾಗಿ ಪುಸ್ತಕಗಳನ್ನು ಹೊರತರುವ ಹೆಗ್ಗಳಿಕೆಗೆ ಪಾತ್ರರಾಗಿರುವುದಕ್ಕಾಗಿ ಪ್ರಕಾಶನ ವಿಭಾಗವನ್ನು ಅಭಿನಂದಿಸಿದರು. ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಈ ಪುಸ್ತಕಗಳು ವಿವಿಧ ವಿಷಯಗಳ ಕುರಿತು ರಾಷ್ಟ್ರಪತಿಯವರ ಚಿಂತನೆಗಳ ಅತ್ಯಂತ ಅಧಿಕೃತ ಸಂಕಲನವಾಗಿದ್ದು, ಮುಂದಿನ ಪೀಳಿಗೆಗೆ ಉತ್ತಮ ಸಂಗ್ರಹವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಹೇಳಿದರು.

ಕಾರ್ಯಕ್ರಮದ ನಂತರ ಗಣ್ಯರು ಪುಸ್ತಕಗಳ ಪ್ರತಿಯನ್ನು ರಾಷ್ಟ್ರಪತಿಯವರಿಗೆ ನೀಡಿದರು.

ಪುಸ್ತಕಗಳ ಬಗ್ಗೆ:

ವಿಂಗ್ಸ್ ಟು ಅವರ್ ಹೋಪ್ಸ್ ಪುಸ್ತಕವು ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾದ ಮೊದಲ ವರ್ಷದಲ್ಲಿ ವಿವಿಧ ಸಂದರ್ಭಗಳಲ್ಲಿ ಮಾಡಿದ ಭಾಷಣಗಳನ್ನು ಒಳಗೊಂಡಿದೆ. ಈ ಅವಧಿಯಲ್ಲಿ - ಜುಲೈ 2022-ಜುಲೈ 2023 - ರಾಷ್ಟ್ರಪತಿ ಮುರ್ಮು ಅವರು ತಮ್ಮ ಸರಳತೆ, ಚಿಂತನಶೀಲತೆ ಮತ್ತು ಪಾಂಡಿತ್ಯದ ಮೂಲಕ ತಾವು ಪ್ರೀತಿಸುವ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ದೇಶದ ಜನರೊಂದಿಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. ರಾಷ್ಟ್ರದ ಜೀವನದ ವಿವಿಧ ಅಂಶಗಳನ್ನು ಸ್ಪರ್ಶಿಸುವುದರ ಜೊತೆಗೆ, ಈ ಭಾಷಣಗಳು ಜನಸಾಮಾನ್ಯರಿಗೆ ಭರವಸೆಯನ್ನು ನೀಡುವ ಪ್ರಥಮ ಪ್ರಜೆಯ ಸಹಜ ಸ್ವಭಾವವನ್ನು ಒತ್ತಿಹೇಳುತ್ತವೆ.

ಪ್ರಕಾಶನ ವಿಭಾಗವು ಹೊರತಂದಿರುವ ಪುಸ್ತಕವು XI ವಿಭಾಗಗಳಲ್ಲಿ 75 ಭಾಷಣಗಳನ್ನು ಒಳಗೊಂಡಿದೆ. ರಾಷ್ಟ್ರವನ್ನು ಉದ್ದೇಶಿಸಿ ಭಾಷಣ, ಶಿಕ್ಷಣ- ಸಬಲೀಕರಣದ ಕೀಲಿಕೈ, ಕರ್ತವ್ಯ ಮಾರ್ಗದಲ್ಲಿ ಸಾರ್ವಜನಿಕ ಸೇವಕರಿಗೆ ಮಾರ್ಗದರ್ಶನ, ನಮ್ಮ ಪಡೆಗಳು ನಮ್ಮ ಹೆಮ್ಮೆ, ಸಂವಿಧಾನ ಮತ್ತು ಕಾನೂನಿನ ಚೈತನ್ಯ, ಪ್ರತಿಫಲ ನೀಡುವ ಶ್ರೇಷ್ಠತೆ, ಜಾಗತಿಕ ಔಟ್‌ರೀಚ್, ವೈವಿಧ್ಯತೆ ಮತ್ತು ಶ್ರೀಮಂತ ಸಂಸ್ಕೃತಿಯನ್ನು ಆಚರಿಸುವುದು, ಸುಸ್ಥಿರ ಅಭಿವೃದ್ಧಿಗಾಗಿ ನಾವೀನ್ಯತೆ ಮತ್ತು ತಂತ್ರಜ್ಞಾನ, ಭೂತಕಾಲವನ್ನು ಸಂರಕ್ಷಿಸುವುದು, ಭವಿಷ್ಯವನ್ನು ಭದ್ರಪಡಿಸುವುದು ಮತ್ತು ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಉತ್ತೇಜಿಸುವುದು- ಮುಂತಾದ ವಿಭಾಗಗಳು ಪುಸ್ತದಲ್ಲಿ ಇವೆ.

"ರಾಷ್ಟ್ರಪತಿ ಭವನ: ಹೆರಿಟೇಜ್ ಮೀಟ್ಸ್ ದಿ ಪ್ರೆಸೆಂಟ್" ಪುಸ್ತಕವು ರಾಷ್ಟ್ರಪತಿ ಭವನದ ಆಳವಾದ ಪರಿಶೋಧನೆಯಾಗಿದ್ದು, ಅದರ ಇತಿಹಾಸ, ಪರಂಪರೆ ಮತ್ತು ವಾಸ್ತುಶಿಲ್ಪದ ವೈಭವವನ್ನು ಹೇಳುತ್ತದೆ. ಈ ಪುಸ್ತಕವು ಓದುಗರಿಗೆ ಅದರ ಪರಿಕಲ್ಪನೆಯಿಂದ ಭಾರತದ ರಾಷ್ಟ್ರಪತಿಯವರ ಅಧಿಕೃತ ನಿವಾಸವಾಗಿ ಪ್ರಸ್ತುತ ಸ್ಥಾನಮಾನದವರೆಗೆ ರಾಷ್ಟ್ರಪತಿ ಭವನದ ವೈಭವದ ಬಗ್ಗೆ ನಿಕಟ ನೋಟವನ್ನು ಒದಗಿಸುತ್ತದೆ. ಈ ಪುಸ್ತಕವು ರಾಷ್ಟ್ರದ ಶ್ರೀಮಂತ ವಾಸ್ತುಶಿಲ್ಪದ ಪರಂಪರೆ ಮತ್ತು ಅದರ ರೋಮಾಂಚಕ ಪ್ರಸ್ತುತಕ್ಕೆ ಸಾಕ್ಷಿಯಾಗಿರುವ ಭಾರತದ ಅತ್ಯಂತ ಅಪ್ರತಿಮ ಹೆಗ್ಗುರುತುಗಳಲ್ಲಿ ಒಂದಾದ ರಾಷ್ಟ್ರಪತಿ ಭವನಕ್ಕೆ ಗೌರವವಾಗಿದೆ.

ರಾಷ್ಟ್ರಪತಿ ಭವನದ ಪ್ರತಿಯೊಂದು ಮೂಲೆ ಮೂಲೆಯ ಬಗ್ಗೆ ವಿವರಣೆಗಳು ಮತ್ತು ಬೆರಗುಗೊಳಿಸುವ ಛಾಯಾಚಿತ್ರಗಳ ಮೂಲಕ ಪುಸ್ತವನ್ನು ಜೀವಂತಗೊಳಿಸಲಾಗಿದೆ. ಪುಸ್ತಕವು ಓದುಗರನ್ನು ರಾಷ್ಟ್ರಪತಿ ಭವನದೊಳಗಿನ ವಿವಿಧ ಕೊಠಡಿಗಳು ಮತ್ತು ಸಭಾಂಗಣಗಳ ಮಾರ್ಗದರ್ಶಿ ಪ್ರವಾಸಕ್ಕೆ ಕರೆದೊಯ್ಯುತ್ತದೆ, ಪ್ರತಿಯೊಂದೂ ತನ್ನದೇ ಆದ ವಿಶಿಷ್ಟ ಉದ್ದೇಶ ಮತ್ತು ಇತಿಹಾಸವನ್ನು ಹೊಂದಿದೆ. ಪುಸ್ತಕವು ಒಳಗೊಂಡಿರುವ ಪ್ರಮುಖ ಪ್ರದೇಶಗಳು ಹೀಗಿವೆ:

  • ಅಶೋಕ ಹಾಲ್‌: ಅದ್ಭುತವಾದ ಭಿತ್ತಿಚಿತ್ರಗಳು ಮತ್ತು ದೀಪ ಗೊಂಚಲುಗಳಿಂದ ಅಲಂಕರಿಸಲ್ಪಟ್ಟ ಭವ್ಯವಾದ ಬಾಲ್ ರೂಂ.
  • ದರ್ಬಾರ್ ಹಾಲ್: ರಾಷ್ಟ್ರದ ಮಹತ್ವದ ಕಾರ್ಯಕ್ರಮಗಳು ನಡೆಯುವ ಭವ್ಯ ಸಮಾರಂಭದ ಸಭಾಂಗಣ.
  • ಅಮೃತ ಉದ್ಯಾನ: ಮೊಘಲ್ ಮತ್ತು ಇಂಗ್ಲಿಷ್ ಶೈಲಿಗಳ ಮಿಶ್ರಣವನ್ನು ಪ್ರದರ್ಶಿಸುವ ಸೊಗಸಾದ ಉದ್ಯಾನಗಳು.
  • ಗ್ರಂಥಾಲಯ: ಜ್ಞಾನ ಮತ್ತು ಐತಿಹಾಸಿಕ ದಾಖಲೆಗಳ ಭಂಡಾರ.
  • ಡ್ರಾಯಿಂಗ್ ರೂಮ್‌ ಗಳು ಮತ್ತು ಸಮ್ಮೇಳನ ಸಭಾಂಗಣಗಳು: ಔಪಚಾರಿಕ ಸ್ವಾಗತಗಳು ಮತ್ತು ಸಭೆಗಳಿಗಾಗಿರುವ ಸ್ಥಳ.
  • ರಾಷ್ಟ್ರಪತಿಯವರ ಅಧ್ಯಯನ ಸ್ಥಳ: ರಾಷ್ಟ್ರಪತಿಯವರ ವೈಯಕ್ತಿಕ ಕಾರ್ಯಕ್ಷೇತ್ರ.

ಪುಸ್ತಕವು ರಾಷ್ಟ್ರಪತಿ ಭವನದಲ್ಲಿ ನೆಲೆಸಿದ ಪ್ರತಿಷ್ಠಿತ ವ್ಯಕ್ತಿಗಳ ಆಕರ್ಷಕ ನಿರೂಪಣೆಯನ್ನು ಸಹ ನೀಡುತ್ತದೆ. ಇದು ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರಿಂದ ಪ್ರಸ್ತುತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರವರೆಗಿನ ಭಾರತದ ಪ್ರತಿಯೊಬ್ಬ ರಾಷ್ಟ್ರಪತಿಯವರ ಪ್ರಯಾಣವನ್ನು ಗುರುತಿಸುತ್ತದೆ. ಭಾರತದ ಪ್ರಜಾಪ್ರಭುತ್ವ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅವರ ಕೊಡುಗೆಗಳು ಮತ್ತು ಅವರ ಅಧಿಕಾರಾವಧಿಯಲ್ಲಿನ ಮಹತ್ವದ ಘಟನೆಗಳು ರಾಷ್ಟ್ರಪತಿ ಭವನದ ಇತಿಹಾಸದ ಶ್ರೀಮಂತ ಚಿತ್ರಣವನ್ನು ಒದಗಿಸುತ್ತವೆ.

ಕಹಾನಿ ರಾಷ್ಟ್ರಪತಿ ಭವನ್ ಕಿಪುಸ್ತಕವು ರಾಷ್ಟ್ರಪತಿ ಮತ್ತು ರಾಷ್ಟ್ರಪತಿ ಭವನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮಕ್ಕಳಿಗಾಗಿ ಒಳಗೊಂಡಿದೆ. ಇದನ್ನು ಮೂರು ಅಧ್ಯಾಯಗಳಾಗಿ ವಿಂಗಡಿಸಲಾಗಿದೆ - 'ನಮ್ಮ ರಾಷ್ಟ್ರಪತಿ', 'ರಾಷ್ಟ್ರಪತಿ ಭವನದ ಮುಖ್ಯ ಆಕರ್ಷಣೆಗಳು' ಮತ್ತು 'ರಾಷ್ಟ್ರಪತಿ ಭವನ ವಸ್ತುಸಂಗ್ರಹಾಲಯ ಸಂಕೀರ್ಣ'. ಈ ಪುಸ್ತಕವು ರಾಷ್ಟ್ರಪತಿ ಭವನದ ಸುಮಾರು ನೂರು ವರ್ಷಗಳ ಇತಿಹಾಸವನ್ನು ಸರಳ ಪದಗಳಲ್ಲಿ ಪ್ರಸ್ತುತಪಡಿಸುತ್ತದೆ. ಪುಸ್ತಕವನ್ನು ರಾಷ್ಟ್ರಪತಿ ಭವನದ ವಿವಿಧ ಚಿತ್ರಗಳೊಂದಿಗೆ ಆಕರ್ಷಕ ಶೈಲಿಯಲ್ಲಿ ಪ್ರಸ್ತುತಪಡಿಸಲಾಗಿದೆ.

 

*****

 

 


(Release ID: 2034126) Visitor Counter : 58