ಗೃಹ ವ್ಯವಹಾರಗಳ ಸಚಿವಾಲಯ
'ಏಕ್ ಪೇಡ್ ಮಾ ಕೆ ನಾಮ್' ಅಭಿಯಾನದಡಿಯಲ್ಲಿ ಇಂದೋರ್ ನಲ್ಲಿ ಒಂದು ದಿನದಲ್ಲಿ 11 ಲಕ್ಷ ಸಸಿಗಳನ್ನು ನೆಡುವ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಸಸಿಗಳನ್ನು ನೆಟ್ಟರು
'ಏಕ್ ಪೇಡ್ ಮಾ ಕೆ ನಾಮ್' ಅಭಿಯಾನದಡಿ ಇಂದೋರ್ ಒಂದು ದಿನದಲ್ಲಿ 11 ಲಕ್ಷ ಸಸಿಗಳನ್ನು ನೆಟ್ಟು ವಿಶ್ವ ದಾಖಲೆ ನಿರ್ಮಿಸಿದೆ ಮತ್ತು 51 ಲಕ್ಷ ಸಸಿಗಳನ್ನು ನೆಡುವ ಗುರಿಯನ್ನು ಸಾಧಿಸಿದೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆರಂಭಿಸಿದ ‘ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನ ಈಗ ಜನಾಂದೋಲನವಾಗಿ ಮಾರ್ಪಟ್ಟಿದೆ
ಇಂದು ‘ಏಕ್ ಪೇಡ್ ಮಾ ಕೆ ನಾಮ್’ಅಭಿಯಾನದಲ್ಲಿ ಜನರು ಸಸಿಗಳನ್ನು ನೆಟ್ಟು ತಮ್ಮ ತಾಯಿ ಹಾಗೂ ಭೂಮಿ ತಾಯಿಗೆ ಗೌರವ ಸಲ್ಲಿಸುತ್ತಿದ್ದಾರೆ
ಇಡೀ ದೇಶದಲ್ಲಿ ಸ್ವಚ್ಛತೆ, ಉತ್ತಮ ಆಡಳಿತ, ಸಹಕಾರ ಮತ್ತು ಭಾಗವಹಿಸುವಿಕೆಗೆ ಪ್ರಸಿದ್ಧಿಯಾಗಿರುವ ಇಂದೋರ್ ಇಂದಿನಿಂದ 'ಏಕ್ ಪೇಡ್ ಮಾ ಕೆ ನಾಮ್' ಅಭಿಯಾನದಲ್ಲೂ ಹೆಸರುವಾಸಿಯಾಗಲಿದೆ
ನಿಮ್ಮ ಮಗುವಿನಂತೆ ಗಿಡವನ್ನು ಅರೈಕೆ ಮಾಡಿ, ನಂತರ ಅದು ಮರವಾದಾಗ, ಅದು ನಿಮ್ಮ ತಾಯಿಯಂತೆ ನಿಮ್ಮನ್ನು ನೋಡಿಕೊಳ್ಳುತ್ತದೆ
ನಿಗದಿತ ಸಮಯಕ್ಕಿಂತ ಮುಂಚಿತವಾಗಿ 5 ಕೋಟಿ ಸಸಿಗಳನ್ನು ನೆಡುವ ಗುರಿಯನ್ನು ಸಾಧಿಸಿದ್ದಕ್ಕಾಗಿ ಕೇಂದ್ರ ಗೃಹ ಸಚಿವರು ಎಲ್ಲಾ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳನ್ನು (ಸಿಎಪಿಎಫ್) ಶ್ಲಾಘಿಸಿದ್ದಾರೆ
ಇದುವರೆಗೆ ಸಿಎಪಿಎಫ್ ಗಳು 5 ಕೋಟಿ 21 ಲಕ್ಷ ಸಸಿಗಳನ್ನು ನೆಟ್ಟಿದ್ದು, ಈ ವರ್ಷದ ಅಂತ್ಯದ ವೇಳೆಗೆ ಇನ್ನೂ 1 ಕೋಟಿ ಸಸಿಗಳನ್ನು ನೆಡಲಾಗುವುದು
ಶ್ರೀ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿದ್ದಾರೆ. ಅವರ ನಾಯಕತ್ವದಲ್ಲ
Posted On:
14 JUL 2024 6:45PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಮಧ್ಯಪ್ರದೇಶದ ಇಂದೋರ್ ನಲ್ಲಿರುವ ಬಿ ಎಸ್ ಎಫ್ ಕ್ಯಾಂಪಸ್ ನಲ್ಲಿ ಸಸಿಗಳನ್ನು ನೆಡುವ ಮೂಲಕ 'ಏಕ್ ಪೇಡ್ ಮಾ ಕೆ ನಾಮ್' ಅಭಿಯಾನದಡಿಯಲ್ಲಿ ಒಂದೇ ದಿನದಲ್ಲಿ 11 ಲಕ್ಷ ಸಸಿಗಳನ್ನು ನೆಡುವ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರೀ ಮೋಹನ್ ಯಾದವ್ ಮತ್ತು ಕೇಂದ್ರ ಸಚಿವೆ ಶ್ರೀಮತಿ ಸಾವಿತ್ರಿ ಠಾಕೂರ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. 'ಏಕ್ ಪೇಡ್ ಮಾ ಕೆ ನಾಮ್' ಅಭಿಯಾನದಡಿ ಇಂದೋರ್ 51 ಲಕ್ಷ ಸಸಿಗಳನ್ನು ನೆಡುವ ಗುರಿಯನ್ನು ಇಂದು ಸಾಧಿಸಿದ್ದು, ಒಂದೇ ದಿನದಲ್ಲಿ 11 ಲಕ್ಷ ಸಸಿಗಳನ್ನು ನೆಟ್ಟು ವಿಶ್ವ ದಾಖಲೆ ನಿರ್ಮಿಸಿದೆ.
ಇದಕ್ಕೂ ಮುನ್ನ ಬೆಳಗ್ಗೆ ಶ್ರೀ ಅಮಿತ್ ಶಾ ಅವರು ಇಂದೋರ್ ನ ಪಿತ್ರೇಶ್ವರ ಹನುಮಾನ್ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಪಿತ್ರೇಶ್ವರ ಹನುಮಾನ್ ದೇವಾಲಯವು ಭಾರತದಲ್ಲೇ ಅತಿ ಎತ್ತರದ ಕುಳಿತಿರುವ ಹನುಮಾನ್ ಪ್ರತಿಮೆಯನ್ನು ಹೊಂದಿದೆ.
ಶ್ರೀ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ, ಇದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ಕಲ್ಪನೆಯಾಗಿದ್ದು, ನಮ್ಮ ತಾಯಿ ಮತ್ತು ನಮ್ಮ ಭೂಮಿ ತಾಯಿಗಾಗಿ ಜನರು ಗಿಡಗಳನ್ನು ನೆಡಬೇಕು ಮತ್ತು ‘ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು. ಮೋದಿಯವರು ಈ ಅಭಿಯಾನ ಆರಂಭಿಸಿದಾಗ ಈ ಅಭಿಯಾನ ಜನಾಂದೋಲನವಾಗುತ್ತದೆ ಎಂಬ ಕಲ್ಪನೆ ಯಾರಿಗೂ ಇರಲಿಲ್ಲ ಎಂದು ಅವರು ಹೇಳಿದರು. ‘ಏಕ್ ಪೇಡ್ ಮಾ ಕೆ ನಾಮ್ʼ ಅಭಿಯಾನದೊಂದಿಗೆ ಇಂದು ಜನರು ಸಸಿಗಳನ್ನು ನೆಡುವ ಮೂಲಕ ತಮ್ಮ ತಾಯಿ ಮತ್ತು ಭೂಮಿ ತಾಯಿಗೆ ಗೌರವ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು. ಇಂದೋರ್ ಸ್ವಚ್ಛತೆ, ರುಚಿಕರವಾದ ತಿನಿಸುಗಳು, ಉತ್ತಮ ಆಡಳಿತ, ಸಹಕಾರ ಮತ್ತು ಭಾಗವಹಿಸುವಿಕೆಗೆ ಹೆಸರುವಾಸಿಯಾಗಿದೆ, ಆದರೆ ಇನ್ನು ಮುಂದೆ ಇಂದೋರ್ 'ಏಕ್ ಪೇಡ್ ಮಾ ಕೆ ನಾಮ್' ಅಭಿಯಾನದ ಅಡಿಯಲ್ಲೂ ಐತಿಹಾಸಿಕ ಗಿಡ ನೆಡುವ ಅಭಿಯಾನಕ್ಕಾಗಿ ಪ್ರಸಿದ್ಧವಾಗಲಿದೆ ಎಂದು ಶ್ರೀ ಶಾ ಹೇಳಿದರು. ಸ್ಮಾರ್ಟ್ ಸಿಟಿ, ಮೆಟ್ರೋ ಸಿಟಿ, ಕ್ಲೀನ್ ಸಿಟಿ, ಆಧುನಿಕ ಶಿಕ್ಷಣದ ಹಬ್ ಎಂದು ಹೆಸರು ಪಡೆದಿರುವ ಇಂದೋರ್ ಗ್ರೀನ್ ಸಿಟಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆ ಎಂದರು.
ಇದು ಕೇವಲ ಸರ್ಕಾರದ ಕಾರ್ಯಕ್ರಮವಲ್ಲ ಏಕೆಂದರೆ ಆಡಳಿತವು ಇದಕ್ಕೆ ಬೆಂಬಲ ನೀಡಬಹುದು, ಆದರೆ ಅಭಿಯಾನವನ್ನು ಯಶಸ್ವಿಗೊಳಿಸಲಾಗುವುದಿಲ್ಲ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ರಾಜ್ಯ ಸರ್ಕಾರವು ಇಂದೋರ್ ನ ಎಲ್ಲಾ ನಿವಾಸಿಗಳನ್ನು ಈ ಅಭಿಯಾನದೊಂದಿಗೆ ಸಂಯೋಜಿಸಿದೆ ಎಂದು ಅವರು ಹೇಳಿದರು. ಈ ಕಾರ್ಯಕ್ರಮದೊಂದಿಗೆ ಪ್ರತಿಯೊಂದು ಜಾತಿ ಮತ್ತು ವರ್ಗವನ್ನು ಸಂಯೋಜಿಸುವ ಮೂಲಕ ಮಹಾನ್ ಪುರುಷರ ಹೆಸರಿನಲ್ಲಿ ಕಾಡುಗಳನ್ನು ಸೃಷ್ಟಿಸುವ ಆಲೋಚನೆಯನ್ನು ಹುಟ್ಟುಹಾಕಿದ ಇಂದೋರ್ ನ ಯುವ ಮೇಯರ್ ಅವರನ್ನು ಶ್ಲಾಘಿಸಿದರು. ದೀರ್ಘಕಾಲ ಬಾಳುವ ಆಲ, ಅರಳಿ, ಬೇವು, ಪೇರಲ, ಮಧುಕಾಮಿನಿ, ಕರೋಂಡ, ಬಿಲ್ವಪತ್ರೆ, ನೆಲ್ಲಿ ಮುಂತಾದ ಔಷಧೀಯ ಗುಣಗಳಿರುವ ಗಿಡಗಳನ್ನೂ ನೆಡಲಾಗಿದೆ ಎಂದು ಶ್ರೀ ಶಾ ತಿಳಿಸಿದರು. ಒಂಬತ್ತು ವನಗಳನ್ನು ನಿರ್ಮಿಸುವ ಈ ಸಂಕೀರ್ಣದಲ್ಲಿ ಮೂರು ಕೆರೆಗಳನ್ನು ನಿರ್ಮಿಸಿ ನೀರುಣಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದರು.
ಶ್ರೀ ಅಮಿತ್ ಶಾ ಅವರು ದೇಶದ ಎಲ್ಲಾ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳನ್ನು (ಸಿಎಪಿಎಫ್) ಶ್ಲಾಘಿಸಿದರು ಮತ್ತು ಮೇ 2024 ರ ವೇಳೆಗೆ ಎಲ್ಲಾ ಸಿಎಪಿಎಫ್ ಗಳು ಒಟ್ಟಾಗಿ 5 ಕೋಟಿ ಸಸಿಗಳನ್ನು ನೆಡುವ ಗುರಿಯನ್ನು ಹೊಂದಿದ್ದೇವೆ ಎಂದು ಹೇಳಿದರು. 2023ರಲ್ಲಿ ಸಿಎಪಿಎಫ್ ಗಳು ಈ ಗುರಿಯನ್ನು ಸಾಕಷ್ಟು ಮುಂಚಿತವಾಗಿಯೇ ಸಾಧಿಸಿವೆ ಎಂದು ಅವರು ಹೇಳಿದರು. ಇಲ್ಲಿಯವರೆಗೆ ಎಲ್ಲಾ ಸಿಎಪಿಎಫ್ ಗಳು 5.2 ಕೋಟಿ ಸಸಿಗಳನ್ನು ನೆಟ್ಟಿವೆ ಮತ್ತು ಈ ವರ್ಷದ ಅಂತ್ಯದ ವೇಳೆಗೆ ಇನ್ನೂ 1 ಕೋಟಿ ಸಸಿಗಳನ್ನು ನೆಡಲಾಗುವುದು ಎಂದು ಶ್ರೀ ಶಾ ಹೇಳಿದರು. ಮರದ ಮಹತ್ವ ಕುರಿತು ಮಾತನಾಡಿದ ಅವರು, ಮತ್ಸ್ಯ ಪುರಾಣದಲ್ಲಿ ಒಂದು ಮೆಟ್ಟಿಲುಬಾವಿಯು 10 ಬಾವಿಗಳಿಗೆ ಸಮಾನವಾಗಿದೆ, ಒಂದು ಕೊಳವು 10 ಮೆಟ್ಟಿಲುಬಾವಿಗಳಿಗೆ ಸಮಾನವಾಗಿದೆ, ಒಬ್ಬ ಮಗ 10 ಕೊಳಗಳಿಗೆ ಸಮಾನವಾಗಿದೆ ಮತ್ತು ಒಂದು ಮರವು 10 ಪುತ್ರರಿಗೆ ಸಮಾನವಾಗಿದೆ ಎಂದು ಹೇಳಲಾಗಿದೆ. ಗಿಡಗಳು ಬೆಳೆಯುವವರೆಗೂ ಮಗುವಿನಂತೆ ನೋಡಿಕೊಳ್ಳಬೇಕು, ಮುಂದೆ ಬೆಳೆದ ನಂತರ ಅವುಗಳು ನಿಮ್ಮನ್ನು ತಾಯಿಯಂತೆ ನೋಡಿಕೊಳ್ಳುತ್ತವೆ ಎಂದರು.
ನಮ್ಮ ಮುಂದಿನ ಪೀಳಿಗೆಯ ಬಗ್ಗೆ ಯೋಚಿಸಬೇಕಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಜಗತ್ತು ಅಭಿವೃದ್ಧಿ ಹೊಂದುತ್ತಿರುವ ರೀತಿಯಲ್ಲಿ ಇಂದು ಭಾರತ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಪರಿಸರ ಸಂರಕ್ಷಣೆಯ ಕಾಳಜಿಯ ವಾತಾವರಣವಿದೆ ಎಂದರು. ಪ್ರಧಾನಿ ಮೋದಿ ಅವರು ಆರಂಭಿಸಿರುವ ‘ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನ ಹವಾಮಾನ ಬದಲಾವಣೆ ಸಮಸ್ಯೆಗೆ ಪರಿಪೂರ್ಣ ಉತ್ತರವಾಗಿದೆ ಎಂದರು. ಮಧ್ಯಪ್ರದೇಶವು ತನ್ನ ಒಟ್ಟು ವಿಸ್ತೀರ್ಣದ ಶೇ.31 ರಷ್ಟು ಅರಣ್ಯವನ್ನು ಹೊಂದಿದೆ ಮತ್ತು ಇದು ಇಡೀ ಭಾರತಕ್ಕೆ ಆಮ್ಲಜನಕವನ್ನು ಒದಗಿಸಲು ಸಹಾಯ ಮಾಡುತ್ತದೆ ಎಂದು ಶ್ರೀ ಶಾ ಹೇಳಿದರು. ಇಡೀ ದೇಶದ ಒಟ್ಟು ಅರಣ್ಯದಲ್ಲಿ ಮಧ್ಯಪ್ರದೇಶ ಶೇ.12ರಷ್ಟು ಅರಣ್ಯವನ್ನು ಹೊಂದಿದ್ದು, ಇದು ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಿದೆ ಎಂದರು. ಮಧ್ಯಪ್ರದೇಶವು 6 ಹುಲಿ ಸಂರಕ್ಷಿತ ಪ್ರದೇಶಗಳು, 11 ರಾಷ್ಟ್ರೀಯ ಉದ್ಯಾನವನಗಳು, 24 ಅಭಯಾರಣ್ಯಗಳನ್ನು ಹೊಂದಿದ್ದು, ಪ್ರಧಾನಿ ಮೋದಿಯವರು ಇದೀಗ ಕುನೋ ಹುಲಿ ಸಂರಕ್ಷಿತ ಪ್ರದೇಶಕ್ಕೆ ಚಿರತೆಗಳನ್ನು ತಂದಿದ್ದಾರೆ ಇದರಿಂದ ನಮ್ಮ ಪರಿಸರಕ್ಕೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಮೋದಿಯವರು ಜಿ-20 ರಲ್ಲಿ ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಮತ್ತು ಜಾಗತಿಕ ಜೈವಿಕ ಇಂಧನ ಒಕ್ಕೂಟದಂತಹ ಹಲವಾರು ಉಪಕ್ರಮಗಳನ್ನು ತೆಗೆದುಕೊಂಡರು. ಈ ಕಾರಣದಿಂದಾಗಿ ವಿಶ್ವಸಂಸ್ಥೆಯು ಮೋದಿ ಅವರಿಗೆ ಚಾಂಪಿಯನ್ ಆಫ್ ಅರ್ಥ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ ಎಂದು ಶ್ರೀ ಶಾ ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಪರಿಸರ ಸಂರಕ್ಷಣೆಗಾಗಿ ರಾಷ್ಟ್ರೀಯ ಮಟ್ಟದ ಅನೇಕ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಪೆಟ್ರೋಲ್ ಮತ್ತು ಡೀಸೆಲ್ ನಲ್ಲಿ ಶೇ.20 ರಷ್ಟು ಎಥೆನಾಲ್ ಮಿಶ್ರಣಕ್ಕೆ ಅನುಮತಿ ನೀಡಲಾಗಿದ್ದು, 2025ರ ವೇಳೆಗೆ ಭಾರತದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ನಲ್ಲಿ ಶೇ.20 ರಷ್ಟು ಮಿಶ್ರಣ ಮಾಡಲಾಗುವುದು ಎಂದು ಹೇಳಿದರು. ಇದರೊಂದಿಗೆ ಬಯೋಮಾಸ್ ಅನ್ನು ಜೈವಿಕ ಇಂಧನವನ್ನಾಗಿ ಮಾಡಲು 12ಕ್ಕೂ ಹೆಚ್ಚು ಸಂಸ್ಕರಣಾಗಾರಗಳನ್ನು ಸ್ಥಾಪಿಸಲಾಗಿದೆ, ಹಸಿರು ಹೈಡ್ರೋಜನ್ ಮಿಷನ್ ಅಡಿಯಲ್ಲಿ 20 ಸಾವಿರ ಕೋಟಿ ರೂಪಾಯಿಗಳ ಕಾರ್ಯಕ್ರಮವನ್ನು ಸಿದ್ಧಪಡಿಸಲಾಗಿದೆ. ಅಲ್ಲದೇ ಶ್ರೀ ನರೇಂದ್ರ ಮೋದಿಯವರು ತಮ್ಮ ದೂರದೃಷ್ಟಿಯಿಂದ ಪರಿಸರವನ್ನು ರಕ್ಷಿಸಲು ಗೋವರ್ಧನ್ ಯೋಜನೆ ಮತ್ತು ಹವಾಮಾನ ಬದಲಾವಣೆಗಾಗಿ ರಾಷ್ಟ್ರೀಯ ಅಳವಡಿಕೆ ನಿಧಿಯನ್ನು ಸಹ ಪ್ರಾರಂಭಿಸಿದ್ದಾರೆ ಎಂದು ಅವರು ಹೇಳಿದರು.
ಶ್ರೀ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ದೇಶದ ಪ್ರಧಾನ ಮಂತ್ರಿಯಾಗಿದ್ದಾರೆ ಮತ್ತು ಅವರ ನಾಯಕತ್ವದಲ್ಲಿ ದೇಶವು ಸುರಕ್ಷಿತ, ಸಮೃದ್ಧ, ಆಧುನಿಕ ಮತ್ತು ವಿಶ್ವದ ಪ್ರತಿಯೊಂದು ಕ್ಷೇತ್ರದಲ್ಲೂ ಮೊದಲನೆಯದಾಗಲಿದೆ ಎಂದು ನಮಗೆಲ್ಲರಿಗೂ ತಿಳಿದಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಇದರ ದೊಡ್ಡ ಶ್ರೇಯಸ್ಸು ಮಧ್ಯಪ್ರದೇಶಕ್ಕೂ ಸಲ್ಲುತ್ತದೆ ಎಂದರು. ಮಧ್ಯಪ್ರದೇಶದ ಶ್ರೀ ಮೋಹನ್ ಯಾದವ್ ಅವರ ಸರ್ಕಾರವು ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ ಎಂದು ಶ್ರೀ ಶಾ ಹೇಳಿದರು. ಮುಖ್ಯಮಂತ್ರಿ ಶ್ರೀ ಮೋಹನ್ ಯಾದವ್ ಅವರು ಇತ್ತೀಚೆಗೆ 3 ಲಕ್ಷ 65 ಸಾವಿರ ಕೋಟಿ ರೂಪಾಯಿಗಳ ಬಜೆಟ್ ಅನ್ನು ಮಂಡಿಸಿದ್ದಾರೆ, ಇದು ಮಧ್ಯಪ್ರದೇಶದ ಇದುವರೆಗಿನ ಅತಿದೊಡ್ಡ ಬಜೆಟ್ ಆಗಿದೆ. ಮಧ್ಯಪ್ರದೇಶ ಬಜೆಟ್ ಅಭಿವೃದ್ಧಿ ಮತ್ತು ರೈತರ ಕಲ್ಯಾಣದ ನಡುವೆ ಸಮತೋಲನ ತರುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದರು.
*****
(Release ID: 2033203)
Visitor Counter : 65