ರಾಷ್ಟ್ರಪತಿಗಳ ಕಾರ್ಯಾಲಯ

ಪುರಿಯ ಸಮುದ್ರ ತೀರದಲ್ಲಿ ಕೊಂಚ ಕಾಲ ಸಮಯ ಕಳೆದ ಭಾರತದ ರಾಷ್ಟ್ರಪತಿಗಳು


ಪರ್ವತಗಳು, ಕಾಡುಗಳು, ನದಿಗಳು ಮತ್ತು ಕಡಲತೀರಗಳು ನಮ್ಮ ಮನದಾಳದೊಳಗಿರುವ ಯಾವುದೋ ಅಂಶವನ್ನು ಆಕರ್ಷಿಸುತ್ತವೆ: ರಾಷ್ಟ್ರಪತಿ ದ್ರೌಪದಿ ಮುರ್ಮು

Posted On: 08 JUL 2024 10:56AM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಪವಿತ್ರ ನಗರ ಪುರಿಯ ವಾರ್ಷಿಕ ರಥಯಾತ್ರೆಯಲ್ಲಿ ಭಾಗವಹಿಸಿದ ಒಂದು ದಿನದ ಬಳಿಕ, ಇಂದು ಬೆಳಗ್ಗೆ(ಜುಲೈ 8, 2024) ಅಲ್ಲಿನ ಸಮುದ್ರ ತೀರದಲ್ಲಿ ಸ್ವಲ್ಪ ಸಮಯ ಕಳೆದರು. ನಂತರ ಅವರು ಪ್ರಕೃತಿಯೊಂದಿಗೆ ನಿಕಟ ಸಂಪರ್ಕದಿಂದ ತಮ್ಮಲ್ಲಿ ಉಂಟಾದ ಆಳ ಅನುಭೂತಿಯ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.

ಈ ಬಗ್ಗೆ ರಾಷ್ಟ್ರಪತಿಗಳು ತಮ್ಮ ʻಎಕ್ಸ್‌ʼ ವೇದಿಕೆಯಲ್ಲಿ ಮಾಡಿದ ಪೋಸ್ಟ್‌ನ ಪಠ್ಯಾಂತರ ಇಲ್ಲಿದೆ: "ಜೀವನದ ಅಸ್ತಿತ್ವದೊಂದಿಗೆ ನಮ್ಮನ್ನು ನಿಕಟ ಸಂಪರ್ಕಕ್ಕೆ ತರುವ ಹಾಗೂ ನಾವು ಸಹ ಪ್ರಕೃತಿಯ ಭಾಗವೇ ಆಗಿದ್ದೇವೆ ಎಂದು ನೆನಪಿಸುವ ಹಲವು ತಾಣಗಳಿವೆ. ಪರ್ವತಗಳು, ಕಾಡುಗಳು, ನದಿಗಳು ಮತ್ತು ಕಡಲತೀರಗಳು ನಮ್ಮ ಮನದಾಳದೊಳಗೆ ಇರುವ ಯಾವುದೋ ಅಂಶವೊಂದನ್ನು ಆಕರ್ಷಿಸುತ್ತವೆ. ನಾನು ಇಂದು ಸಮುದ್ರ ತೀರದುದ್ದಕ್ಕೂ ಹೆಜ್ಜೆ ಹಾಕುವಾಗ ಸುತ್ತಮುತ್ತಲಿನ – ತಂಗಾಳಿ, ಅಲೆಗಳ ನಾದ, ಅಗಾಧವಾದ ನೀರಿನ ವಿಸ್ತಾರತೆಯೊಂದಿಗೆ ಅನ್ಯೋನ್ಯತೆಯನ್ನು ನಾನು ಅನುಭವಿಸಿದೆ. ಅದೊಂದು ಧ್ಯಾನದ ಅನುಭವವಾಗಿತ್ತು.

ನಿನ್ನೆ ನಾನು ಮಹಾಪ್ರಭು ಶ್ರೀ ಜಗನ್ನಾಥನ ದರ್ಶನ ಪಡೆದಾಗ ಅನುಭವಿಸಿದ ಆಳವಾದ ಅದೇ ಶಾಂತಿಯ ಭಾವವನ್ನು ಇಂದು ಇದು ನನ್ನಲ್ಲಿ ಉಂಟು ಮಾಡಿತು. ಅಂತಹ ಅನುಭವ ನನ್ನೊಬ್ಬಳದ್ದೇ ಅಲ್ಲ, ನಮಗಿಂತಲೂ ಅಗಾಧವಾದ, ನಮ್ಮನ್ನು ಪೋಷಿಸುವ ಮತ್ತು ನಮ್ಮ ಜೀವನವನ್ನು ಅರ್ಥಪೂರ್ಣವಾಗಿಸುವ ಯಾವುದರ ಜೊತೆಗೂ ನಾವು ಒಡನಾಡಿದಾಗ ನಾವೆಲ್ಲರೂ ಆ ರೀತಿ ಅನುಭವವನ್ನು ಪಡೆಯುತ್ತೇವೆ.

ದೈನಂದಿನ ಜೀವನದ ಜಂಜಾಟದಲ್ಲಿ, ನಾವು ಪ್ರಕೃತಿ ಮಾತೆಯೊಂದಿಗಿನ ಈ ಸಂಪರ್ಕವನ್ನು ಕಳೆದುಕೊಳ್ಳುತ್ತೇವೆ. ಮಾನವಕುಲವು ತಾನು ಪ್ರಕೃತಿಯನ್ನು ಕೈವಶ ಮಾಡಿಕೊಂಡಿದ್ದೇನೆ ಎಂದು ನಂಬಿದೆ ಮತ್ತು ತನ್ನದೇ ಆದ ಅಲ್ಪಾವಧಿಯ ಪ್ರಯೋಜನಗಳಿಗಾಗಿ ಪ್ರಕೃತಿಯನ್ನು ಬಳಸಿಕೊಳ್ಳುತ್ತಿದೆ. ಇದರ ಫಲವನ್ನು ಎಲ್ಲರೂ ಅನುಭವಿಸಬೇಕಾಗಿದೆ. ಈ ಬಾರಿಯ ಬೇಸಿಗೆಯಲ್ಲಿ, ಭಾರತದ ಅನೇಕ ಭಾಗಗಳು ಭಯಾನಕ ಸರಣಿ ಉಷ್ಣಮಾರುತದ ತಾಪಕ್ಕೆ ತತ್ತರಿಸಿದವು. ಇತ್ತೀಚಿನ ವರ್ಷಗಳಲ್ಲಿ ಪ್ರಪಂಚದಾದ್ಯಂತ ಅತೀವ ಹವಾಮಾನ ವೈಪರೀತ್ಯಗಳು ಹೆಚ್ಚಾಗಿ ಕಂಡುಬರುತ್ತಿವೆ. ಮುಂಬರುವ ದಶಕಗಳಲ್ಲಿ ಪರಿಸ್ಥಿತಿ ಇನ್ನೂ ಬಿಗಡಾಯಿಸಲಿದೆ ಎಂದು ಅಂದಾಜಿಸಲಾಗಿದೆ.

ಭೂಮಿಯ ಮೇಲ್ಮೈನ ಶೇಕಡಾ ಎಪ್ಪತ್ತಕ್ಕಿಂತಲೂ ಹೆಚ್ಚಿನ ಭಾಗ ಹೆಚ್ಚು ಸಾಗರಗಳಿಂದ ಆವರಿಸಿದೆ, ಮತ್ತು ಜಾಗತಿಕ ತಾಪಮಾನವು ಜಾಗತಿಕ ಸಮುದ್ರ ಮಟ್ಟ ಏರಿಕೆಗೆ ಕಾರಣವಾಗುತ್ತಿದೆ, ಕರಾವಳಿ ಪ್ರದೇಶಗಳು ಮುಳುಗುವ ಆತಂಕ ಸೃಷ್ಟಿಯಾಗಿದೆ.  ಸಾಗರಗಳು ಮತ್ತು ಅಲ್ಲಿ ಕಂಡುಬರುವ ಶ್ರೀಮಂತ, ವೈವಿಧ್ಯಮಯ ಸಸ್ಯ ಹಾಗೂ ಪ್ರಾಣಿ ಸಂಕುಲವು ವಿವಿಧ ರೀತಿಯ ಮಾಲಿನ್ಯದಿಂದಾಗಿ ಭಾರಿ ತೊಂದರೆ ಅನುಭವಿಸುತ್ತಿದೆ.

ಅದೃಷ್ಟವಶಾತ್, ಪ್ರಕೃತಿಯ ಮಡಿಲಲ್ಲಿ ವಾಸಿಸುವ ಜನರು ನಮಗೆ ದಾರಿ ತೋರಿಸುವ ಸಂಪ್ರದಾಯಗಳನ್ನು ಇನ್ನೂ ಉಳಿಸಿಕೊಂಡಿದ್ದಾರೆ. ಉದಾಹರಣೆಗೆ, ಕರಾವಳಿ ಪ್ರದೇಶದ ನಿವಾಸಿಗಳು ಗಾಳಿ ಮತ್ತು ಸಮುದ್ರದ ಅಲೆಗಳ ಭಾಷೆಯನ್ನು ಅರಿತಿದ್ದಾರೆ. ನಮ್ಮ ಪೂರ್ವಜರ ಹಾದಿಯಲ್ಲೇ ನಡೆದು, ಸಮುದ್ರವನ್ನು ಅವರು ದೇವರಂತೆ ಪೂಜಿಸುತ್ತಾರೆ.

ಪರಿಸರ ಸಂರಕ್ಷಣೆಯ ಸವಾಲನ್ನು ಎದುರಿಸಲು ನಮ್ಮ ಮುಂದೆ ಎರಡು ಮಾರ್ಗಗಳಿವೆ ಎಂದು ನಾನು ನಂಬುತ್ತೇನೆ; ಸರ್ಕಾರಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಕೈಗೊಳ್ಳಬಹುದಾದ ದೊಡ್ಡಮಟ್ಟದ ಕ್ರಮಗಳು ಮತ್ತು ನಾಗರಿಕರಾಗಿ ನಾವು ಕೈಗೊಳ್ಳಬಹುದಾದ ಸಣ್ಣ, ಸ್ಥಳೀಯ ಕ್ರಮಗಳು. ಇವೆರಡೂ ಒಂದಕ್ಕೊಂದು ಪೂರಕವಾಗಿವೆ. ಉತ್ತಮ ನಾಳೆಗಾಗಿ ನಾವು ವೈಯಕ್ತಿಕವಾಗಿ, ಸ್ಥಳೀಯವಾಗಿ ಏನು ಮಾಡಬಹುದೋ ಅದನ್ನು ಮಾಡಲು ಸಂಕಲ್ಪ ತೊಡೋಣ. ನಾವು ನಮ್ಮ ಮಕ್ಕಳಿಗಾಗಿ ಇದನ್ನು ಮಾಡಬೇಕಿದೆ."
 

 

*****



(Release ID: 2031660) Visitor Counter : 11