ಪ್ರಧಾನ ಮಂತ್ರಿಯವರ ಕಛೇರಿ
ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಮಂತ್ರಿಯವರ ಉತ್ತರ
"ದೇಶಕ್ಕೆ ಸೇವೆ ಸಲ್ಲಿಸುವ ನಮ್ಮ ಸರ್ಕಾರದ ಪ್ರಯತ್ನಗಳನ್ನು ಕಳೆದ 10 ವರ್ಷಗಳಿಂದ ಭಾರತದ ಜನರು ಹೃತ್ಪೂರ್ವಕವಾಗಿ ಬೆಂಬಲಿಸಿದ್ದಾರೆ ಮತ್ತು ಆಶೀರ್ವದಿಸಿದ್ದಾರೆ"
"ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನವು ವಂಶಪಾರಂಪರ್ಯವಾಗಿ ಶೂನ್ಯ ರಾಜಕೀಯ ಹಿನ್ನೆಲೆ ಹೊಂದಿರುವ ನನ್ನಂತಹ ಜನರಿಗೆ ರಾಜಕೀಯಕ್ಕೆ ಪ್ರವೇಶಿಸಲು ಮತ್ತು ಈ ಹಂತವನ್ನು ತಲುಪಲು ಅವಕಾಶ ಮಾಡಿಕೊಟ್ಟಿದೆ"
"ನಮ್ಮ ಸಂವಿಧಾನವು ನಮಗೆ ʻಲೈಟ್ ಹೌಸ್ʼನಂತೆ ಮಾರ್ಗದರ್ಶನ ನೀಡುತ್ತದೆ
“ನಾವು ಭಾರತದ ಆರ್ಥಿಕತೆಯನ್ನು ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುತ್ತೇವೆ ಎಂಬ ವಿಶ್ವಾಸ ಮತ್ತು ದೃಢ ನಂಬಿಕೆಯೊಂದಿಗೆ ಜನರು ನಮಗೆ ಮೂರನೇ ಬಾರಿಗೆ ಜನಾದೇಶ ನೀಡಿದ್ದಾರೆ”
"ಮುಂದಿನ 5 ವರ್ಷಗಳು ದೇಶಕ್ಕೆ ಅತ್ಯಂತ ನಿರ್ಣಾಯಕ"
"ಉತ್ತಮ ಆಡಳಿತದ ನೆರವಿನೊಂದಿಗೆ, ಈ ಯುಗವನ್ನು ಮೂಲಭೂತ ಅಗತ್ಯಗಳ ಪೂರೈಕೆ ವಿಚಾರದಲ್ಲಿ ಪರಿಪೂರ್ಣತೆಯ ಯುಗವನ್ನಾಗಿ ಪರಿವರ್ತಿಸಲು ನಾವು ಬಯಸುತ್ತೇವೆ"
"ನಾವು ಇದನ್ನು ಇಲ್ಲಿಗೇ ನಿಲ್ಲಿಸಲು ಬಯಸುವುದಿಲ್ಲ. ಮುಂದಿನ ಐದು ವರ್ಷಗಳಲ್ಲಿ, ಹೊಸ ಕ್ಷೇತ್ರಗಳಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ನಾವು ಅಧ್ಯಯನ ಮಾಡುವ ಮೂಲಕ ಅವುಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇವೆ"
“ಪ್ರತಿ ಹಂತದಲ್ಲೂ ಸೂಕ್ಷ್ಮ ರೀತಿಯಲ್ಲಿ ಯೋಜನೆಯನ್ನು ರೂಪಿಸುವ ಮೂಲಕ, ರೈತರಿಗೆ ಬೀಜದಿಂದ ಹಿಡಿದು ಮಾರುಕಟ್ಟೆಯವರೆಗೆ ಸದೃಢ ವ್ಯವಸ್ಥೆಯನ್ನು ಒದಗಿಸಲು ನಾವು ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇವೆ"
"ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಕೇವಲ ಘೋಷಣೆಯಾಗಿ ಉಳಿಸದೆ, ಈ ನಿಟ್ಟಿನಲ್ಲಿ ಭಾರತವು ಅಚಲ ಬದ್ಧತೆಯೊಂದಿಗೆ ಕೆಲಸ ಮಾಡುತ್ತಿದೆ"
“ತುರ್ತು ಪರಿಸ್ಥಿತಿಯ ಅವಧಿ ಕೇವಲ ರಾಜಕೀಯ ವಿಷಯವಲ್ಲ, ಬದಲಿಗೆ ಅದು ಭಾರತದ ಪ್ರಜಾಪ್ರಭುತ್ವಕ್ಕೆ, ಸಂವಿಧಾನ ಮತ್ತು ಮಾನವೀಯತೆಗೆ ಸಂಬಂಧಿಸಿದ ವಿಚಾರವಾಗಿದೆ"
“ಜಮ್ಮು-ಕಾಶ್ಮೀರದ ಜನರು ಭಾರತದ ಸಂವಿಧಾನ, ದೇಶದ ಪ್ರಜಾಪ್ರಭುತ್ವ ಮತ್ತು ಚುನಾವಣಾ ಆಯೋಗಕ್ಕೆ ಅನುಮೋದನೆಯ ಮುದ್ರೆ ಒತ್ತಿದ್ದಾರೆ "
Posted On:
03 JUL 2024 3:06PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರಿಸಿದರು.
ಸದನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಸ್ಫೂರ್ತಿದಾಯಕ ಮತ್ತು ಪ್ರೋತ್ಸಾಹದಾಯಕ ಭಾಷಣಕ್ಕಾಗಿ ರಾಷ್ಟ್ರಪತಿಗಳಿಗೆ ಧನ್ಯವಾದ ಅರ್ಪಿಸಿದರು. ರಾಷ್ಟ್ರಪತಿಗಳ ಭಾಷಣದ ಬಗ್ಗೆ ಸುಮಾರು 70 ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು ಮತ್ತು ಇದಕ್ಕಾಗಿ ಪ್ರಧಾನಮಂತ್ರಿಯವರು ಸದಸ್ಯರಿಗೆ ಧನ್ಯವಾದ ಅರ್ಪಿಸಿದರು.
ದೇಶದ ಪ್ರಜಾಪ್ರಭುತ್ವದ ಪಯಣದ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, 60 ವರ್ಷಗಳ ನಂತರ ಭಾರತದ ಮತದಾರರು ಸತತ ಮೂರನೇ ಬಾರಿಗೆ ಸರ್ಕಾರವೊಂದನ್ನು ಮರಳಿ ಅಧಿಕಾರಕ್ಕೆ ತಂದಿದ್ದಾರೆ, ಇದೊಂದು ಐತಿಹಾಸಿಕ ಸಾಧನೆ ಎಂದು ಬಣ್ಣಿಸಿದರು. ಮತದಾರರ ತೀರ್ಪನ್ನು ದುರ್ಬಲಗೊಳಿಸುವ ಪ್ರತಿಪಕ್ಷಗಳ ನಡೆಯನ್ನು ಖಂಡಿಸಿದ ಶ್ರೀ ಮೋದಿ ಅವರು, ಕೆಲವು ದಿನಗಳ ಹಿಂದೆ ಇದೇ ಜನರು ತಮ್ಮ ಸೋಲು ಮತ್ತು ಗೆಲುವನ್ನು ಭಾರವಾದ ಹೃದಯದಿಂದ ಸ್ವೀಕರಿಸಿದ್ದನ್ನು ಗಮನಿಸಿದ್ದೇನೆ ಎಂದು ಹೇಳಿದರು.
ಪ್ರಸ್ತುತ ಸರ್ಕಾರವು ತನ್ನ ಆಡಳಿತದ ಮೂರನೇ ಒಂದು ಭಾಗವನ್ನು ಅಂದರೆ 10 ವರ್ಷಗಳನ್ನು ಮಾತ್ರ ಪೂರ್ಣಗೊಳಿಸಿದೆ, ಇನ್ನೂ ಮೂರನೇ ಎರಡರಷ್ಟು ಅಥವಾ 20 ವರ್ಷಗಳು ಬಾಕಿ ಉಳಿದಿವೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು. "ಕಳೆದ 10 ವರ್ಷಗಳಲ್ಲಿ, ದೇಶಕ್ಕೆ ಸೇವೆ ಸಲ್ಲಿಸುವ ನಮ್ಮ ಸರ್ಕಾರದ ಪ್ರಯತ್ನಗಳನ್ನು ಭಾರತದ ಜನರು ಹೃತ್ಪೂರ್ವಕವಾಗಿ ಬೆಂಬಲಿಸಿದ್ದಾರೆ ಮತ್ತು ಆಶೀರ್ವದಿಸಿದ್ದಾರೆ," ಎಂದು ಪ್ರಧಾನಿ ಹೇಳಿದರು. ಅಪ್ರಚಾರಕ್ಕೆ ಸೋಲುಣಿಸಿದ, ಕಾರ್ಯದಕ್ಷತೆಗೆ ಆದ್ಯತೆ ನೀಡಿದ, ಭ್ರಮೆಗಳನ್ನು ಬಿತ್ತುವ ರಾಜಕೀಯವನ್ನು ತಿರಸ್ಕರಿಸಿದ ಹಾಗೂ ನಂಬಿಕೆಯ ರಾಜಕೀಯಕ್ಕೆ ವಿಜಯದ ಮುದ್ರೆ ಹಾಕಿದ ಮತದಾರರ ತೀರ್ಪಿನ ಬಗ್ಗೆ ಅವರು ಹೆಮ್ಮೆ ವ್ಯಕ್ತಪಡಿಸಿದರು.
ಭಾರತವು ಸಂವಿಧಾನವು 75ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಭಾರತದ ಸಂಸತ್ತು ಸಹ 75 ವರ್ಷಗಳನ್ನು ಪೂರೈಸುತ್ತಿರುವುದರಿಂದ ಇದೊಂದು ವಿಶೇಷ ಕಾಲಘಟ್ಟವಾಗಿದೆ, ಇದೊಂದು ಸಂತೋಷಕರ ಕಾಕತಾಳೀಯತೆ ಎಂದು ಹೇಳಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಭಾರತದ ಸಂವಿಧಾನವನ್ನು ಶ್ಲಾಘಿಸಿದ ಶ್ರೀ ಮೋದಿ ಅವರು, ಭಾರತದಲ್ಲಿ ಕೌಟುಂಬಿಕವಾಗಿ ರಾಜಕೀಯ ಕ್ಷೇತ್ರದೊಂದಿಗೆ ಯಾವುದೇ ನಂಟು ಹೊಂದಿರದ ವ್ಯಕ್ತಿಗಳೂ ದೇಶಕ್ಕಾಗಿ ಸೇವೆ ಸಲ್ಲಿಸುವ ಅವಕಾಶವನ್ನು ಪಡೆಯುತ್ತಿದ್ದಾರೆಂದರೆ ಅದಕ್ಕೆ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಹಕ್ಕುಗಳು ಕಾರಣ ಎಂದರು. "ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನವು ವಂಶಪಾರಂಪರ್ಯವಾಗಿ ಶೂನ್ಯ ರಾಜಕೀಯ ಹಿನ್ನೆಲೆಯನ್ನು ಹೊಂದಿರುವ ನನ್ನಂತಹ ಜನರಿಗೆ ರಾಜಕೀಯಕ್ಕೆ ಪ್ರವೇಶಿಸಲು ಮತ್ತು ಈ ಹಂತವನ್ನು ತಲುಪಲು ಅವಕಾಶ ಮಾಡಿಕೊಟ್ಟಿದೆ," ಎಂದು ಅವರು ಹೇಳಿದರು. ಈಗ ಜನರು ತಮ್ಮ ಅನುಮೋದನೆಯ ಮುದ್ರೆ ಒತ್ತಿದ್ದಾರೆ, ಸತತ ಮೂರನೇ ಬಾರಿಗೆ ಸರ್ಕಾರವು ರಚನೆಗೊಂಡಿದೆ ಎಂದು ಅವರು ಹೇಳಿದರು. ಭಾರತದ ಸಂವಿಧಾನವು ಕೇವಲ ಲೇಖನಗಳ ಸಂಕಲನವಲ್ಲ, ಅದರ ಸ್ಫೂರ್ತಿ ಮತ್ತು ಛಾಪು ಅತ್ಯಂತ ಮೌಲ್ಯಯುತವಾದುದು ಎಂದು ಪ್ರಧಾನಿ ಒತ್ತಿ ಹೇಳಿದರು.
ನವೆಂಬರ್ 26ನ್ನು 'ಸಂವಿಧಾನ ದಿನ'ವನ್ನಾಗಿ ಆಚರಿಸಲು ತಮ್ಮ ಸರ್ಕಾರ ಪ್ರಸ್ತಾಪಿಸಿದಾಗ ತೀವ್ರ ವಿರೋಧ ವ್ಯಕ್ತವಾಗಿತ್ತು ಎಂದು ಶ್ರೀ ಮೋದಿ ಸ್ಮರಿಸಿದರು. ʻಸಂವಿಧಾನ ದಿನʼವನ್ನು ಆಚರಿಸುವ ತಮ್ಮ ನಿರ್ಧಾರವು ಸಂವಿಧಾನದ ಆಶಯವನ್ನು ಮತ್ತಷ್ಟು ಪ್ರಚುರಪಡಿಸಲು, ಶಾಲೆಗಳು ಮತ್ತು ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಲ್ಲಿ ಸಂವಿಧಾನಕ್ಕೆ ಕೆಲವು ನಿಬಂಧನೆಗಳನ್ನು ಏಕೆ ಮತ್ತು ಹೇಗೆ ಸೇರಿಸಲಾಗಿದೆ ಮತ್ತು ಕೆಲವೊಂದು ನಿಬಂಧನೆಗಳನ್ನು ಏಕೆ ಕೈಬಿಡಲಾಗಿದೆ ಎಂಬುದರ ಕುರಿತು ಚರ್ಚಿಸಲು ನೆರವಾಗಿದೆ ಎಂದು ಅವರು ಹೇಳಿದರು. ನಮ್ಮ ವಿದ್ಯಾರ್ಥಿಗಳಿಗೆ ಸಂವಿಧಾನದ ವಿವಿಧ ಆಯಾಮಗಳ ಬಗ್ಗೆ ಪ್ರಬಂಧಗಳು, ಚರ್ಚೆಗಳು ಮತ್ತು ಗೋಷ್ಠಿಯಂತಹ ಸ್ಪರ್ಧೆಗಳನ್ನು ಆಯೋಜಿಸುವುದರಿಂದ ಅವರಲ್ಲಿ ಅದರ ಬಗ್ಗೆ ನಂಬಿಕೆ ಹೆಚ್ಚುವುದಲ್ಲದೆ ಮತ್ತು ಸಂವಿಧಾನದ ಬಗ್ಗೆ ತಿಳಿವಳಿಕೆಯೂ ಹೆಚ್ಚಾಗುತ್ತದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು. "ಸಂವಿಧಾನವು ನಮ್ಮ ಅತಿದೊಡ್ಡ ಸ್ಫೂರ್ತಿಯಾಗಿದೆ" ಎಂದು ಅವರು ಹೇಳಿದರು. ಸಂವಿಧಾನವು 75ನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ, ರಾಷ್ಟ್ರವ್ಯಾಪಿ ಆಚರಣೆಗಳನ್ನು ಖಾತರಿಪಡಿಸಲು ತಮ್ಮ ಸರ್ಕಾರ ಅದನ್ನು "ಜನ ಉತ್ಸವ"ವಾಗಿ ಆಚರಿಸಲು ಯೋಜನೆ ರೂಪಿಸಿತು ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಸಂವಿಧಾನದ ಆಶಯ ಮತ್ತು ಉದ್ದೇಶದ ಬಗ್ಗೆ ದೇಶದ ಮೂಲೆ ಮೂಲೆಯಲ್ಲಿ ಅರಿವು ಮೂಡಿಸಲು ಸರ್ಕಾರ ಶ್ರಮಿಸಲಿದೆ ಎಂದು ಅವರು ಹೇಳಿದರು.
'ವಿಕಸಿತ ಭಾರತ' ಮತ್ತು 'ಆತ್ಮನಿರ್ಭರ ಭಾರತ'ದ ಮೂಲಕ ಅಭಿವೃದ್ಧಿ ಮತ್ತು ಸ್ವಾವಲಂಬನೆಯ ಗುರಿಗಳನ್ನು ಸಾಧಿಸಲು ಭಾರತದ ಜನರು ತಮ್ಮ ಸರ್ಕಾರವನ್ನು ಮೂರನೇ ಬಾರಿ ಅಧಿಕಾರಕ್ಕೆ ತಂದಿದ್ದಾರೆ ಎಂದು ಮತದಾರರನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು. ಈ ಚುನಾವಣಾ ಗೆಲುವು ಕಳೆದ 10 ವರ್ಷಗಳಲ್ಲಿ ತಮ್ಮ ಸರ್ಕಾರ ಕೈಗೊಂಡ ನಿರ್ಧಾರಗಳಿಗೆ ನಾಗರಿಕರು ನೀಡಿದ ಅನುಮೋದನೆಯ ಮುದ್ರೆ ಮಾತ್ರವಲ್ಲ, ಅವರ ಭವಿಷ್ಯದ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಈಡೇರಿಸುವ ಜನಾದೇಶವಾಗಿದೆ ಎಂದು ಶ್ರೀ ಮೋದಿ ಬಣ್ಣಿಸಿದರು. "ಈ ದೇಶದ ಜನರು ತಮ್ಮ ಭವಿಷ್ಯದ ನಿರ್ಣಯಗಳನ್ನು ಕಾರ್ಯರೂಪಕ್ಕೆ ತರುವ ಅವಕಾಶವನ್ನು ನಮಗೆ ವಹಿಸಿದ್ದಾರೆ," ಎಂದು ಅವರು ಹೇಳಿದರು.
ಜಾಗತಿಕ ಸಂಕ್ಷೋಭೆಗಳು ಹಾಗೂ ಕೋವಿಡ್ ಸಾಂಕ್ರಾಮಿಕದಂತಹ ಸವಾಲುಗಳ ಹೊರತಾಗಿಯೂ ಕಳೆದ ಹತ್ತು ವರ್ಷಗಳಲ್ಲಿ ಭಾರತದ ಆರ್ಥಿಕತೆಯು ಹತ್ತನೇ ಸ್ಥಾನದಿಂದ ಐದನೇ ಅತಿದೊಡ್ಡ ಆರ್ಥಿಕತೆಯ ಸ್ಥಾನಕ್ಕೆ ಏರಿರುವುದನ್ನು ದೇಶವು ನೋಡಿದೆ ಎಂದು ಪ್ರಧಾನಿ ನೆನಪಿಸಿದರು. "ಈ ಆದೇಶ ಆರ್ಥಿಕತೆಯನ್ನು ಪ್ರಸ್ತುತ ಐದನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕೊಂಡೊಯ್ಯಿರಿ ಎಂದು ಜನಾದೇಶ ಬಂದಿದೆ," ಎಂದು ಹೇಳಿದ ಪ್ರಧಾನಿ, ಈ ಜನಾದೇಶವನ್ನು ಪೂರೈಸುವ ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ 10 ವರ್ಷಗಳಲ್ಲಿ ಆಗಿರುವ ಅಭಿವೃದ್ಧಿಯ ವೇಗ ಮತ್ತು ವ್ಯಾಪ್ತಿಯನ್ನು ಹೆಚ್ಚಿಸುವ ಸರ್ಕಾರದ ಬದ್ಧತೆಯನ್ನು ಶ್ರೀ ಮೋದಿ ಪುನರುಚ್ಚರಿಸಿದರು. ಮುಂದಿನ 5 ವರ್ಷಗಳಲ್ಲಿ, ಜನರ ಮೂಲಭೂತ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಲಿದೆ ಎಂದು ಪ್ರಧಾನಿ ಸದನಕ್ಕೆ ಭರವಸೆ ನೀಡಿದರು. "ಉತ್ತಮ ಆಡಳಿತದ ನೆರವಿನೊಂದಿಗೆ ಈ ಯುಗವನ್ನು ಮೂಲಭೂತ ಅಗತ್ಯಗಳ ಪೂರೈಕೆಯಲ್ಲಿ ಪರಿಪೂರ್ಣತೆಯ ಯುಗವನ್ನಾಗಿ ಪರಿವರ್ತಿಸಲು ನಾವು ಬಯಸುತ್ತಿದ್ದೇವೆ," ಎಂದು ಪ್ರಧಾನಿ ಮೋದಿ ಉದ್ಗರಿಸಿದರು. ಬಡತನದ ವಿರುದ್ಧದ ಹೋರಾಟಕ್ಕೆ ಮುಂದಿನ 5 ವರ್ಷಗಳು ನಿರ್ಣಾಯಕವಾಗಿವೆ ಎಂದು ಅವರು ಒತ್ತಿ ಹೇಳಿದರು. ಕಳೆದ 10 ವರ್ಷಗಳ ಅನುಭವಗಳ ಆಧಾರದ ಮೇಲೆ, ದಾರಿದ್ರ್ಯದ ವಿರುದ್ಧ ನಿಲುವು ತಳೆಯುವ ಮತ್ತು ಬಡತನ ನಿವಾರಣೆಯಲ್ಲಿ ಸಾಮೂಹಿಕ ಪಾತ್ರ ವಹಿಸುವ ಬಡವರ ಸಾಮರ್ಥ್ಯದ ಬಗ್ಗೆ ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.
ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆಯಾಗುವುದರಿಂದ ಜನರ ಜೀವನದ ಪ್ರತಿಯೊಂದು ಅಂಶದ ಮೇಲೂ ಉಂಟಾಗುವ ಪರಿಣಾಮವನ್ನು ವಿವರಿಸಿದ ಶ್ರೀ ಮೋದಿ, ಈ ಬೆಳವಣಿಗೆಯು ಜಾಗತಿಕ ಸನ್ನಿವೇಶದ ಮೇಲೂ ಅಭೂತಪೂರ್ವ ಪರಿಣಾಮ ಬೀರುತ್ತದೆ ಎಂದು ಹೇಳಿದರು. ಮುಂದಿನ ಐದು ವರ್ಷಗಳಲ್ಲಿ ಭಾರತೀಯ ನವೋದ್ಯಮಗಳು ಮತ್ತು ಕಂಪನಿಗಳ ಜಾಗತಿಕ ಪುನರುತ್ಥಾನ ಹಾಗೂ 2 ಮತ್ತು 3ನೇ ಶ್ರೇಣಿಯ ನಗರಗಳು ಬೆಳವಣಿಗೆಯ ಎಂಜಿನ್‌ಗಳಾಗಿ ಹೊರಹೊಮ್ಮಲಿರುವ ಬಗ್ಗೆ ಅವರು ಮಾತನಾಡಿದರು.
ಪ್ರಸ್ತುತ ಶತಮಾನವನ್ನು ತಂತ್ರಜ್ಞಾನ ಚಾಲಿತ ಶತಮಾನ ಎಂದು ಬಣ್ಣಿಸಿದ ಪ್ರಧಾನಿ ಮೋದಿ, ಸಾರ್ವಜನಿಕ ಸಾರಿಗೆಯಂತಹ ಅನೇಕ ಹೊಸ ಕ್ಷೇತ್ರಗಳಲ್ಲಿ ಹೊಸ ತಂತ್ರಜ್ಞಾನದ ಹೆಜ್ಜೆಗುರುತುಗಳ ಬಗ್ಗೆ ಮಾತನಾಡಿದರು. ವೈದ್ಯಕೀಯ, ಶಿಕ್ಷಣ ಅಥವಾ ನಾವೀನ್ಯತೆಯಂತಹ ಕ್ಷೇತ್ರಗಳಲ್ಲಿ ಸಣ್ಣ ನಗರಗಳು ಪ್ರಮುಖ ಪಾತ್ರ ವಹಿಸಲಿವೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.
ರೈತರು, ಬಡವರು, ನಾರಿಶಕ್ತಿ ಮತ್ತು ಯುವಜನತೆ ಎಂಬ ನಾಲ್ಕು ಸ್ತಂಭಗಳನ್ನು ಬಲಪಡಿಸುವ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಭಾರತದ ಅಭಿವೃದ್ಧಿಯ ಪಯಣದಲ್ಲಿ ಈ ಕ್ಷೇತ್ರಗಳ ಮೇಲೆ ಸರ್ಕಾರದ ಗಮನ ನಿರ್ಣಾಯಕವಾಗಿದೆ ಎಂದರು.
ಕೃಷಿ ಮತ್ತು ರೈತರ ವಿಚಾರದಲ್ಲಿ ನೀಡಿದ ಸಲಹೆಗಳಿಗಾಗಿ ಸದಸ್ಯರಿಗೆ ಧನ್ಯವಾದ ಅರ್ಪಿಸಿದ ಪ್ರಧಾನಮಂತ್ರಿಯವರು, ಕಳೆದ 10 ವರ್ಷಗಳಲ್ಲಿ ರೈತರ ಪಾಲಿಗೆ ಕೃಷಿಯನ್ನು ಲಾಭದಾಯಕವಾಗಿಸುವ ಸರ್ಕಾರದ ಪ್ರಯತ್ನವನ್ನು ವಿವರಿಸಿದರು. ಸಾಲ, ಬಿತ್ತನೆ ಬೀಜಗಳು, ಕೈಗೆಟುಕುವ ದರದಲ್ಲಿ ರಸಗೊಬ್ಬರ, ಬೆಳೆ ವಿಮೆ, ಕನಿಷ್ಠ ಬೆಂಬಲ ಬೆಲೆ ಖಾತರಿಯನ್ನು ಅವರು ಉಲ್ಲೇಖಿಸಿದರು. "ಪ್ರತಿ ಹಂತದಲ್ಲೂ ಸೂಕ್ಷ್ಮವಾಗಿ ಯೋಜನೆ ರೂಪಿಸುವ ಮೂಲಕ ರೈತರಿಗೆ ಬಿತ್ತನೆ ಬೀಜದಿಂದ ಹಿಡಿದು ಮಾರುಕಟ್ಟೆಯವರೆಗೆ ಸದೃಢವಾದ ವ್ಯವಸ್ಥೆಯನ್ನು ಒದಗಿಸಲು ನಾವು ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇವೆ," ಎಂದು ಪ್ರಧಾನಿ ಹೇಳಿದರು.
ʻಕಿಸಾನ್ ಕ್ರೆಡಿಟ್ ಕಾರ್ಡ್ʼನ ಪ್ರಯೋಜನಗಳನ್ನು ಎತ್ತಿ ತೋರಿಸಿದ ಪ್ರಧಾನಿ ಮೋದಿ, ಇದು ಸಣ್ಣ ರೈತರಿಗೆ ಸಾಲ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಿದೆ ಎಂದರು. ʻಕಿಸಾನ್ ಕ್ರೆಡಿಟ್ ಕಾರ್ಡ್ʼನ ಪ್ರಯೋಜನಗಳನ್ನು ಮೀನುಗಾರರು ಮತ್ತು ಪಶುಪಾಲಕರಿಗೂ ವಿಸ್ತರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಸಣ್ಣ ರೈತರ ಕಲ್ಯಾಣ ಯೋಜನೆಗಳ ಬಗ್ಗೆಯೂ ಪ್ರಸ್ತಾಪಿಸಿದ ಪ್ರಧಾನಿ, ʻಪಿಎಂ ಕಿಸಾನ್ ಸಮ್ಮಾನ್ ನಿಧಿʼಯ ಬಗ್ಗೆಯೂ ಉಲ್ಲೇಖಿಸಿದರು. ಇದರ ಅಡಿಯಲ್ಲಿ ಕಳೆದ 6 ವರ್ಷಗಳಲ್ಲಿ ಸುಮಾರು 3 ಲಕ್ಷ ಕೋಟಿ ರೂಪಾಯಿಗಳನ್ನು ವಿತರಿಸಲಾಗಿದ್ದು, 10 ಕೋಟಿ ರೈತರಿಗೆ ಪ್ರಯೋಜನವನ್ನು ನೀಡಿದೆ ಎಂದರು. ಹಿಂದಿನ ಆಡಳಿತಗಳಲ್ಲಿನ ಸಾಲ ಮನ್ನಾ ಯೋಜನೆಗಳ ಅಸಮರ್ಪಕತೆ ಮತ್ತು ವಿಶ್ವಾಸಾರ್ಹತೆಯ ಕೊರತೆಯ ಬಗ್ಗೆಯೂ ಗಮನಸೆಳೆದ ಪ್ರಧಾನಿ, ಪ್ರಸ್ತುತ ಆಡಳಿತದ ರೈತ ಕಲ್ಯಾಣ ಯೋಜನೆಗಳ ಕುರಿತು ಒತ್ತಿ ಹೇಳಿದರು.
ಪ್ರತಿಪಕ್ಷಗಳ ಸಭಾತ್ಯಾಗದ ನಡುವೆಯೂ ತಮ್ಮ ಭಾಷಣವನ್ನು ಮುಂದುವರಿಸಿದ ಪ್ರಧಾನಿ, ಸದನದ ಅಧ್ಯಕ್ಷರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದರು ಮತ್ತು "ನಾನು ಜನರ ಸೇವಕನಾಗಿರಲು ಬದ್ಧನಾಗಿದ್ದೇನೆ. ನನ್ನ ಸಮಯದ ಪ್ರತಿ ನಿಮಿಷಕ್ಕೂ ನಾನು ಜನರಿಗೆ ಉತ್ತರದಾಯಿಯಾಗಿದ್ದೇನೆ," ಎಂದರು. ಸದನದ ಸಂಪ್ರದಾಯಗಳಿಗೆ ಅಗೌರವ ತೋರಿದ್ದಕ್ಕಾಗಿ ಪ್ರತಿಪಕ್ಷಗಳನ್ನು ಅವರು ಟೀಕಿಸಿದರು.
ತಮ್ಮ ಸರ್ಕಾರವು ಬಡ ರೈತರಿಗೆ ರಸಗೊಬ್ಬರಗಳಿಗಾಗಿ 12 ಲಕ್ಷ ಕೋಟಿ ರೂ.ಗಳ ಸಬ್ಸಿಡಿ ನೀಡಿದೆ, ಇದು ಸ್ವಾತಂತ್ರ್ಯದ ನಂತರದ ಅತ್ಯಧಿಕ ಮೊತ್ತವಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ರೈತರನ್ನು ಸಬಲೀಕರಣಗೊಳಿಸಲು, ತಮ್ಮ ಸರ್ಕಾರವು ʻಕನಿಷ್ಠ ಬೆಂಬಲ ಬೆಲೆʼಯಲ್ಲಿ(ಎಂಎಸ್‌ಪಿ) ದಾಖಲೆಯ ಹೆಚ್ಚಳವನ್ನು ಘೋಷಿಸಿದ್ದು ಮಾತ್ರವಲ್ಲದೆ, ಅವರಿಂದ ಖರೀದಿಸುವಲ್ಲಿಯೂ ಹೊಸ ದಾಖಲೆಗಳನ್ನು ಸೃಷ್ಟಿಸಿದೆ ಎಂದು ಶ್ರೀ ಮೋದಿ ಹೇಳಿದರು. ಹಿಂದಿನ ಸರ್ಕಾರದೊಂದಿಗೆ ಹೋಲಿಕೆ ಮಾಡಿದ ಅವರು, ಕಳೆದ 10 ವರ್ಷಗಳಲ್ಲಿ ತಮ್ಮ ಸರ್ಕಾರವು ಭತ್ತ ಮತ್ತು ಗೋಧಿ ಬೆಳೆಗಾರರಗೆ 2.5 ಪಟ್ಟು ಹೆಚ್ಚು ಹಣವನ್ನು ತಲುಪಿಸಿದೆ ಎಂದು ಒತ್ತಿ ಹೇಳಿದರು. "ನಾವು ಇಲ್ಲಿಗೇ ನಿಲ್ಲಿಸಲು ಬಯಸುವುದಿಲ್ಲ. ಮುಂದಿನ ಐದು ವರ್ಷಗಳಲ್ಲಿ, ನಾವು ಹೊಸ ಕ್ಷೇತ್ರಗಳಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ಅಧ್ಯಯನ ಮಾಡಿ, ಅವುಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇವೆ. ನಾವು ಪ್ರಸ್ತುತ ವಿಶ್ವದ ಅತಿದೊಡ್ಡ ಆಹಾರ ಸಂಗ್ರಹಣೆಯ ಅಭಿಯಾನವನ್ನು ಕೈಗೊಂಡಿದ್ದೇವೆ," ಎಂದು ಹೇಳಿದರು. ಕೇಂದ್ರ ವ್ಯವಸ್ಥೆಯಡಿ ಲಕ್ಷಾಂತರ ಕಣಜಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕೆಲಸಗಳು ಪ್ರಾರಂಭವಾಗಿವೆ ಎಂದು ಮಾಹಿತಿ ನೀಡಿದರು.
ಕೃಷಿ ಕ್ಷೇತ್ರದಲ್ಲಿ ತೋಟಗಾರಿಕೆಯು ಪ್ರಮುಖ ಭಾಗವಾಗಿದ್ದು ತೋಟಗಾರಿಕಾ ಬೆಳೆಗಳ ಸುರಕ್ಷಿತ ಸಂಗ್ರಹಣೆ, ಸಾಗಣೆ ಮತ್ತು ಮಾರಾಟಕ್ಕಾಗಿ ಮೂಲಸೌಕರ್ಯಗಳನ್ನು ಹೆಚ್ಚಿಸಲು ತಮ್ಮ ಸರ್ಕಾರ ದಣಿವರಿಯದೆ ಕೆಲಸ ಮಾಡಿದೆ ಎಂದು ಪ್ರಧಾನಿ ಒತ್ತಿ ಹೇಳಿದರು.
"ಸರ್ಕಾರವು ʻಸಬ್ ಕಾ ಸಾಥ್, ಸಬ್ ಕಾ ವಿಕಾಸ್ʼ ಮೂಲ ಮಂತ್ರದೊಂದಿಗೆ ಭಾರತದ ಅಭಿವೃದ್ಧಿಯ ವ್ಯಾಪ್ತಿಯನ್ನು ನಿರಂತರವಾಗಿ ಹೆಚ್ಚಿಸಿದೆ," ಎಂದು ಪ್ರಧಾನಿ ಹೇಳಿದರು. ನಾಗರಿಕರಿಗೆ ಘನತೆಯುಕ್ತ ಜೀವನವನ್ನು ಒದಗಿಸುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಅವರು ಹೇಳಿದರು. ಸ್ವಾತಂತ್ರ್ಯದ ನಂತರ ದಶಕಗಳ ಕಾಲದಿಂದ ನಿರ್ಲಕ್ಷಕ್ಕೆ ಒಳಗಾದವರ ಬಗ್ಗೆ ಇಂದು ಆಸ್ತೆ ವಹಿಸಲಾಗುತ್ತಿರುವುದು ಮಾತ್ರವಲ್ಲದೆ ಅವರನ್ನು ಪೂಜಿಸಲಾಗುತ್ತಿದೆ ಎಂದು ಗಮನಸೆಳೆದ ಪ್ರಧಾನಮಂತ್ರಿಯವರು, 'ದಿವ್ಯಾಂಗ' ಸಹೋದರ-ಸಹೋದರಿಯರ ಸಮಸ್ಯೆಗಳನ್ನು ಸಮರೋಪಾದಿಯಲ್ಲಿ ಮತ್ತು ಸೂಕ್ಷ್ಮ ಮಟ್ಟದಲ್ಲಿ ಪರಿಹರಿಸಿರುವುದನ್ನು ಉಲ್ಲೇಖಿಸಿದರು. ಇದರಿಂದ ದಿವ್ಯಾಂಗರು ಇತರರ ಮೇಲೆ ಕನಿಷ್ಠ ಅವಲಂಬನೆಯೊಂದಿಗೆ ಘನತೆಯುತ ಜೀವನವನ್ನು ನಡೆಸಬಹುದು ಎಂದರು. ತಮ್ಮ ಸರ್ಕಾರದ ಸರ್ವವ್ಯಾಪಿ ಸ್ವರೂಪವನ್ನು ಒತ್ತಿ ಹೇಳಿದ ಶ್ರೀ ಮೋದಿ, ಸಮಾಜದ ಮರೆತುಹೋದ ವರ್ಗವಾದ ತೃತೀಯ ಲಿಂಗಿಗಳಿಗಾಗಿ ಕಾನೂನನ್ನು ಜಾರಿಗೆ ತರಲು ತಮ್ಮ ಆಡಳಿತವು ಕೆಲಸ ಮಾಡಿದೆ ಎಂದು ಹೇಳಿದರು. ಪಾಶ್ಚಿಮಾತ್ಯ ದೇಶಗಳು ಸಹ ಇಂದು ಭಾರತದ ಪ್ರಗತಿಪರ ಸ್ವರೂಪವನ್ನು ಹೆಮ್ಮೆಯಿಂದ ನೋಡುತ್ತವೆ ಎಂದು ಅವರು ಹೇಳಿದರು. ಈಗ ತಮ್ಮ ಸರ್ಕಾರವು ಪ್ರತಿಷ್ಠಿತ ʻಪದ್ಮ ಪ್ರಶಸ್ತಿʼಗಳನ್ನು ತೃತೀಯ ಲಿಂಗಿಗಳಿಗೂ ನೀಡುತ್ತಿದೆ ಎಂದು ಅವರು ಒತ್ತಿ ಹೇಳಿದರು.
ಅದೇ ರೀತಿ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳಿಗೆ ಕಲ್ಯಾಣ ಮಂಡಳಿಯನ್ನು ರಚಿಸಲಾಗಿದೆ. ʻಜನ್ ಮನ್ʼ ಯೋಜನೆಯಡಿ 24 ಸಾವಿರ ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡುವ ಮೂಲಕ ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳ(ಪಿವಿಟಿಜಿ) ಅಭಿವೃದ್ಧಿಗಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಪ್ರಧಾನಿ ಪ್ರಸ್ತಾಪಿಸಿದರು. ಇದು ಸರ್ಕಾರವು ಮತ ರಾಜಕಾರಣಕ್ಕಿಂತ ಅಭಿವೃದ್ಧಿಯ ರಾಜಕೀಯದಲ್ಲಿ ತೊಡಗಿದೆ ಎಂಬುದನ್ನು ಸೂಚಿಸುತ್ತದೆ ಎಂದು ಪ್ರಧಾನಿ ಹೇಳಿದರು.
ಭಾರತದ ಅಭಿವೃದ್ಧಿಯ ಪಯಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಭಾರತದ ವಿಶ್ವಕರ್ಮರ ಬಗ್ಗೆಯೂ ಪ್ರಧಾನಿ ಮೋದಿ ಪ್ರಸ್ತಾಪಿಸಿದರು. ಸರ್ಕಾರವು ಸುಮಾರು 13 ಸಾವಿರ ಕೋಟಿ ಸಹಾಯದೊಂದಿಗೆ ವೃತ್ತಿಪರತೆಯನ್ನು ಬೆಳೆಸುವ ಮೂಲಕ ಮತ್ತು ಕೌಶಲ್ಯ ಅಭಿವೃದ್ಧಿಗೆ ಸಂಪನ್ಮೂಲಗಳನ್ನು ಒದಗಿಸುವ ಮೂಲಕ ವಿಶ್ವಕರ್ಮರ ಜೀವನವನ್ನು ಪರಿವರ್ತಿಸಿದೆ ಎಂದು ಮಾಹಿತಿ ನೀಡಿದರು. ಬೀದಿ ಬದಿ ವ್ಯಾಪಾರಿಗಳಿಗೆ ಬ್ಯಾಂಕ್ ಸಾಲಗಳನ್ನು ಪಡೆಯಲು ಮತ್ತು ಅವರ ಆದಾಯವನ್ನು ಮತ್ತಷ್ಟು ಹೆಚ್ಚಿಸಲು ಅನುವು ಮಾಡಿಕೊಡುವ ʻಪಿಎಂ ಸ್ವನಿಧಿʼ ಯೋಜನೆಯನ್ನು ಅವರು ಉಲ್ಲೇಖಿಸಿದರು. ಬಡವರು, ದಲಿತರು, ಹಿಂದುಳಿದ ಸಮುದಾಯ, ಬುಡಕಟ್ಟು ಜನಾಂಗದವರು ಅಥವಾ ಮಹಿಳೆಯರು ನಮ್ಮನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಾರೆ ಎಂದು ಅವರು ತಿಳಿಸಿದರು.
ಮಹಿಳಾ ನೇತೃತ್ವದ ಅಭಿವೃದ್ಧಿಗೆ ಸಂಬಂಧಿಸಿದಂತೆ ಭಾರತದ ಕಾರ್ಯವಿಧಾನವನ್ನು ಒತ್ತಿಹೇಳಿದ ಪ್ರಧಾನಿ, ದೇಶವು ಕೇವಲ ಘೋಷಣೆಯಾಗಿ ಮಾತ್ರವಲ್ಲದೆ ಅಚಲ ಬದ್ಧತೆಯೊಂದಿಗೆ ಸಾಗುತ್ತಿದೆ. ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದಂತೆ ಶ್ರೀಮತಿ ಸುಧಾ ಮೂರ್ತಿ ಅವರ ಮಾತುಗಳ ಬಗ್ಗೆ ಗಮನ ಸೆಳೆದ ಪ್ರಧಾನಿ ಮೋದಿ, ಕುಟುಂಬದಲ್ಲಿ ತಾಯಿಯ ಮಹತ್ವವನ್ನು ಉಲ್ಲೇಖಿಸಿದರು. ಮಹಿಳೆಯರ ಆರೋಗ್ಯ, ನೈರ್ಮಲ್ಯ ಮತ್ತು ಸ್ವಾಸ್ಥ್ಯಕ್ಕೆ ಆದ್ಯತೆಯ ಮೇರೆಗೆ ಗಮನ ಹರಿಸುತ್ತಿರುವುದಾಗಿ ಶ್ರೀ ಮೋದಿ ವಿವರಿಸಿದರು. ಶೌಚಾಲಯಗಳು, ಸ್ಯಾನಿಟರಿ ಪ್ಯಾಡ್‌ಗಳು, ಲಸಿಕೆಗಳು, ಅಡುಗೆ ಅನಿಲ ಈ ನಿಟ್ಟಿನಲ್ಲಿ ಕೈಗೊಂಡ ಪ್ರಮುಖ ಕ್ರಮಗಳಾಗಿವೆ ಎಂದು ಅವರು ಉಲ್ಲೇಖಿಸಿದರು. ಬಡವರಿಗೆ ಹಸ್ತಾಂತರಿಸಲಾದ 4 ಕೋಟಿ ಮನೆಗಳಲ್ಲಿ ಹೆಚ್ಚಿನವು ಮಹಿಳೆಯರ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿವೆ ಎಂದು ಅವರು ಹೇಳಿದರು. ʻಮುದ್ರಾʼ ಮತ್ತು ʻಸುಕನ್ಯಾ ಸಮೃದ್ಧಿ ಯೋಜನೆʼಯಂತಹ ಯೋಜನೆಗಳು ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸಿವೆ ಮತ್ತು ಅವರನ್ನು ಸ್ವತಂತ್ರರನ್ನಾಗಿ ಮಾಡಿವೆ. ಜೊತೆಗೆ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಭಾಗವಾಗಲು ಅವರಿಗೆ ಧ್ವನಿಯನ್ನು ನೀಡಿವೆ ಎಂದು ಅವರು ಉಲ್ಲೇಖಿಸಿದರು. ಇಲ್ಲಿಯವರೆಗೆ ಸಣ್ಣ ಹಳ್ಳಿಗಳಲ್ಲಿ ಸ್ವಸಹಾಯ ಗುಂಪುಗಳಲ್ಲಿ ಕೆಲಸ ಮಾಡುವ 1 ಕೋಟಿ ಮಹಿಳೆಯರು ಇಂದು ʻಲಕ್ಷಾಧಿಪತಿ ದೀದಿʼಗಳಾಗಿದ್ದಾರೆ ಮತ್ತು ಪ್ರಸ್ತುತ ಅವಧಿಯಲ್ಲಿ ಅವರ ಸಂಖ್ಯೆಯನ್ನು 3 ಕೋಟಿಗೆ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಶ್ರೀ ಮೋದಿ ಮಾಹಿತಿ ನೀಡಿದರು.
ಪ್ರತಿಯೊಂದು ಹೊಸ ಕ್ಷೇತ್ರದಲ್ಲೂ ಮಹಿಳೆಯರನ್ನು ಮುನ್ನಡೆಸಲು ಮತ್ತು ಪ್ರತಿಯೊಂದು ಹೊಸ ತಂತ್ರಜ್ಞಾನವು ಮೊದಲು ಮಹಿಳೆಯರನ್ನು ತಲುಪುವಂತೆ ಖಚಿತಪಡಿಸಿಕೊಳ್ಳಲು ತಮ್ಮ ಸರ್ಕಾರ ಪ್ರಯತ್ನಿಸಲಿದೆ ಎಂದು ಶ್ರೀ ಮೋದಿ ವಿಶ್ವಾಸ ವ್ಯಕ್ತಪಡಿಸಿದರು. "ಇಂದು ʻನಮೋ ಡ್ರೋನ್ ದೀದಿʼ ಅಭಿಯಾನವನ್ನು ಹಳ್ಳಿಗಳಲ್ಲಿ ಯಶಸ್ವಿಯಾಗಿ ಜಾರಿಗೆ ತರಲಾಗಿದೆ, ಅದರಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ," ಎಂದು ಅವರು ಹೇಳಿದರು. ಡ್ರೋನ್‌ಗಳನ್ನು ನಿರ್ವಹಿಸುವ ಮಹಿಳೆಯರನ್ನು 'ಪೈಲಟ್ ದೀದಿಗಳು' ಎಂದು ಕರೆಯಲಾಗುತ್ತದೆ ಮತ್ತು ಅಂತಹ ಮಾನ್ಯತೆ ಮಹಿಳೆಯರಿಗೆ ಪ್ರೇರಕ ಶಕ್ತಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಮಹಿಳೆಯರ ಸಮಸ್ಯೆಗಳನ್ನು ರಾಜಕೀಯಗೊಳಿಸುವ ಪ್ರವೃತ್ತಿ ಮತ್ತು ಮನೋಭಾವವನ್ನು ಟೀಕಿಸಿದ ಪ್ರಧಾನಮಂತ್ರಿಯವರು, ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಭಾರತದ ಬಗ್ಗೆ ಜಾಗತಿಕವಾಗಿ ಮೂಡಿರುವ ಹೊಸ ಚಿತ್ರಣದ ಕುರಿತು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಭಾರತವು ವಿದೇಶಿ ಹೂಡಿಕೆಗಳನ್ನು ಸ್ವಾಗತಿಸುತ್ತಿದ್ದು, ಈ ಹಿಂದೆ ಇದ್ದ 'ಆದರೆ ಮತ್ತು ಆದಾಗ್ಯೂʼ ಯುಗವು ಈಗ ಅಸ್ತಿತ್ವದಲ್ಲಿಲ್ಲ ಎಂದರು. ಇದು ದೇಶದ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳಿಗೆ ದಾರಿ ಮಾಡಿಕೊಡುತ್ತಿದೆ ಜೊತೆಗೆ ಅಂತರರಾಷ್ಟ್ರೀಯ ವೇದಿಕೆಯಲ್ಲಿ ತಮ್ಮ ಸಾಮರ್ಥ್ಯ ಹಾಗೂ ಪ್ರತಿಭೆಯನ್ನು ಪ್ರದರ್ಶಿಸಲು ಯುವಕರಿಗೆ ಅವಕಾಶ ಕಲ್ಪಿಸಿದೆ ಎಂದರು. ಭಾರತದ ಇಂದಿನ ಗೆಲುವು ಜಾಗತಿಕ ಆರ್ಥಿಕತೆಯಲ್ಲಿ ಸಮತೋಲನವನ್ನು ಎದುರು ನೋಡುತ್ತಿರುವ ಹೂಡಿಕೆದಾರರಲ್ಲಿ ಭರವಸೆಯನ್ನು ಮೂಡಿಸಿದೆ ಎಂದು ಪ್ರಧಾನಿ ಹೇಳಿದರು. ಪಾರದರ್ಶಕತೆಯ ವಿಷಯಕ್ಕೆ ಬಂದಾಗ ಇಂದು ಭಾರತವು ಭರವಸೆಯ ಭೂಮಿಯಾಗಿ ಹೊರಹೊಮ್ಮುತ್ತಿದೆ ಎಂದು ಶ್ರೀ ಮೋದಿ ಅಭಿಪ್ರಾಯಪಟ್ಟರು.
1977ರ ಲೋಕಸಭಾ ಚುನಾವಣೆಯ ಸಮಯವನ್ನು ಪ್ರಧಾನಿ ಸ್ಮರಿಸಿದರು, ಆಗ ಪತ್ರಿಕೆಗಳು ಮತ್ತು ರೇಡಿಯೋಗಳ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾಯಿತು ಮತ್ತು ಜನರ ದನಿಯನ್ನು ಹತ್ತಿಕ್ಕಲಾಯಿತು. ಅಂದು ಭಾರತದ ಸಂವಿಧಾನವನ್ನು ರಕ್ಷಿಸಲು ಮತ್ತು ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಲು ಮತದಾರರು ಮತ ಚಲಾಯಿಸಿದರು. ಆದರೆ ಇಂದು, ಸಂವಿಧಾನವನ್ನು ಉಳಿಸುವ ಈ ಹೋರಾಟದಲ್ಲಿ, ಪ್ರಸ್ತುತ ಸರ್ಕಾರವು ಭಾರತದ ಜನರ ಮೊದಲ ಆಯ್ಕೆಯಾಗಿದೆ ಎಂದು ಅವರು ಒತ್ತಿ ಹೇಳಿದರು. ತುರ್ತು ಪರಿಸ್ಥಿತಿಯ ಸಮಯದಲ್ಲಿ ರಾಷ್ಟ್ರದ ಮೇಲೆ ನಡೆದ ದೌರ್ಜನ್ಯಗಳ ಬಗ್ಗೆಯೂ ಶ್ರೀ ಮೋದಿ ಪ್ರಸ್ತಾಪಿಸಿದರು. 38, 39 ಮತ್ತು 42ನೇ ಸಾಂವಿಧಾನಿಕ ತಿದ್ದುಪಡಿಗಳು ಮತ್ತು ತುರ್ತು ಪರಿಸ್ಥಿತಿಯ ಸಮಯದಲ್ಲಿ ತಿದ್ದುಪಡಿ ಮಾಡಲಾದ ಇತರ ಹತ್ತಾರು ಅನುಚ್ಛೇದಗಳನ್ನು ಅವರು ಉಲ್ಲೇಖಿಸಿದರು. ಸಚಿವ ಸಂಪುಟ ಕೈಗೊಂಡ ನಿರ್ಧಾರಗಳನ್ನೂ ಮೀರುವ ಅಧಿಕಾರದೊಂದಿಗೆ ʻರಾಷ್ಟ್ರೀಯ ಸಲಹಾ ಮಂಡಳಿʼಯ (ಎನ್ಎಸಿ) ಸ್ಥಾಪನೆ ಮತ್ತು ಸ್ಥಾಪಿತ ಶಿಷ್ಟಾಚಾರಗಳನ್ನು ಲೆಕ್ಕಿಸದೆ ಒಂದೇ ಕುಟುಂಬಕ್ಕೆ ನೀಡಲಾದ ಆದ್ಯತೆಯನ್ನು ಶ್ರೀ ಮೋದಿ ಖಂಡಿಸಿದರು. ತುರ್ತು ಪರಿಸ್ಥಿತಿಯ ಯುಗದ ಬಗ್ಗೆ ಚರ್ಚೆಯನ್ನು ತಪ್ಪಿಸಲು ಪ್ರತಿಪಕ್ಷಗಳು ಬಳಸುವ ಮರೆಮಾಚುವಿಕೆ ವಿಧಾನಗಳನ್ನು ಪ್ರಧಾನಿ ಮೋದಿ ಟೀಕಿಸಿದರು.
"ತುರ್ತು ಪರಿಸ್ಥಿತಿಯ ಅವಧಿ ಕೇವಲ ರಾಜಕೀಯ ವಿಷಯವಲ್ಲ, ಅದು ಭಾರತದ ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಮಾನವೀಯತೆಗೆ ಸಂಬಂಧಿಸಿದೆ" ಎಂದು ಪ್ರಧಾನಿ ಉದ್ಗರಿಸಿದರು. ಜೈಲಿನಲ್ಲಿದ್ದ ಆಗಿನ ವಿರೋಧ ಪಕ್ಷದ ನಾಯಕರ ಮೇಲೆ ನಡೆದ ದೌರ್ಜನ್ಯಗಳನ್ನು ಎತ್ತಿ ತೋರಿದ ಶ್ರೀ ಮೋದಿ, ಬಿಡುಗಡೆಯ ಬಳಿಕ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿಗೆ ತಲುಪಿದ ದಿವಂಗತ ಶ್ರೀ ಜೈ ಪ್ರಕಾಶ್ ನಾರಾಯಣ್ ಅವರನ್ನು ಉಲ್ಲೇಖಿಸಿದರು. ತುರ್ತು ಪರಿಸ್ಥಿತಿಯ ಸಮಯದಲ್ಲಿ ಮುಜಾಫರ್‌ನಗರ ಮತ್ತು ತುರ್ಕ್ಮನ್ ಗೇಟ್‌ನಲ್ಲಿನ ಅಲ್ಪಸಂಖ್ಯಾತರ ಸ್ಥಿತಿಯನ್ನು ನೆನಪಿಸಿದ ಪ್ರಧಾನಿ, "ಮನೆ ತೊರೆದಿದ್ದ ಅನೇಕರು ತುರ್ತು ಪರಿಸ್ಥಿತಿಯ ನಂತರ ಹಿಂತಿರುಗಲಿಲ್ಲ," ಎಂದು ಹೇಳಿದರು.
ಭ್ರಷ್ಟರನ್ನು ರಕ್ಷಿಸುವ ವಿರೋಧ ಪಕ್ಷದ ಕೆಲವು ಭಾಗಗಳ ಪ್ರವೃತ್ತಿಯ ಬಗ್ಗೆ ಪ್ರಧಾನಿ ಕಳವಳ ವ್ಯಕ್ತಪಡಿಸಿದರು. ವಿರೋಧ ಪಕ್ಷಗಳ ಆಡಳಿತದಲ್ಲಿ ವಿವಿಧ ಸರ್ಕಾರಗಳು ನಡೆಸಿದ ನಾನಾ ಹಗರಣಗಳನ್ನು ಉಲ್ಲೇಖಿಸಿದ ಪ್ರಧಾನಿ, ತನಿಖಾ ಸಂಸ್ಥೆಗಳ ದುರ್ಬಳಕೆ ಆರೋಪವನ್ನು ತಿರಸ್ಕರಿಸಿದರು. ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ದ್ವಂದ್ವ ನೀತಿಯನ್ನು ಅವರು ಟೀಕಿಸಿದರು. ಹಿಂದಿನ ಸರ್ಕಾರಗಳಲ್ಲಿ ತನಿಖಾ ಸಂಸ್ಥೆಗಳ ದುರ್ಬಳಕೆಯ ನಿದರ್ಶನಗಳನ್ನು ಅವರು ಮುಂದಿಟ್ಟರು. "ಭ್ರಷ್ಟಾಚಾರದ ವಿರುದ್ಧದ ಹೋರಾಟ ಎಂಬುದು ನನಗೆ ಚುನಾವಣಾ ವಿಷಯವಲ್ಲ, ನನ್ನ ಪಾಲಿಗೆ ಅದೊಂದು ಧ್ಯೇಯ" ಎಂದು ಪ್ರಧಾನಿ ಮೋದಿ ಹೇಳಿದರು. 2014ರಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ನೀಡಿದ ಬಡವರಿಗಾಗಿ ಸಮರ್ಪಣೆ ಮತ್ತು ಭ್ರಷ್ಟಾಚಾರದ ವಿರುದ್ಧ ಬಲಿಷ್ಠ ಹೋರಾಟ ನಡೆಸುವ ಎರಡು ಭರವಸೆಗಳನ್ನು ಪ್ರಧಾನಿ ಸ್ಮರಿಸಿದರು. ಇದು ವಿಶ್ವದ ಅತಿದೊಡ್ಡ ಬಡವರ ಕಲ್ಯಾಣ ಯೋಜನೆಗೆ ದಾರಿ ಮಾಡಿದೆ. ಜೊತೆಗೆ ಕಪ್ಪು ಹಣ, ಬೇನಾಮಿ ಆಸ್ತಿ ಸೇರಿದಂತೆ ಭ್ರಷ್ಟಾಚಾರದ ವಿರುದ್ಧದ ಹೊಸ ಕಾನೂನುಗಳಿಗೂ ಕಾರಣವಾಗಿದೆ. ಜೊತೆಗೆ ಇದರ ಫಲವಾಗಿ ನೇರ ನಗದು ವರ್ಗಾವಣೆ ವ್ಯವಸ್ಥೆ ಜಾರಿಗೆ ಬಂದಿದ್ದು, ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ಪ್ರಯೋಜನಗಳ ವರ್ಗಾವಣೆಯನ್ನು ಖಚಿತಪಡಿಸಿದೆ ಎಂದು ಮಾಹಿತಿ ನೀಡಿದರು. "ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳಲು ನಾನು ತನಿಖಾ ಸಂಸ್ಥೆಗಳಿಗೆ ಸಂಪೂರ್ಣ ಅಧಿಕಾರ ನೀಡಿದ್ದೇನೆ," ಎಂದು ಪ್ರಧಾನಿ ಒತ್ತಿ ಹೇಳಿದರು.
ಇತ್ತೀಚಿನ ಪ್ರಶ್ನೆಪತ್ರಿಕೆ ಸೋರಿಕೆಯ ಬಗ್ಗೆ ರಾಷ್ಟ್ರಪತಿಗಳ ಕಳವಳವನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು, ನಮ್ಮ ದೇಶದ ಭವಿಷ್ಯದೊಂದಿಗೆ ಆಟವಾಡುವವರ ವಿರುದ್ಧ ತಮ್ಮ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದೆ ಮತ್ತು ಅವರನ್ನು ಶಿಕ್ಷಿಸದೆ ಬಿಡುವುದಿಲ್ಲ ಎಂದು ಯುವಕರಿಗೆ ಭರವಸೆ ನೀಡಿದರು. "ನಮ್ಮ ಯುವಕರು ಯಾವುದೇ ರೀತಿಯ ಅನುಮಾನದಲ್ಲಿ ಬದುಕಬೇಕಾಗಿಲ್ಲ. ಯುವಕರು ಆತ್ಮವಿಶ್ವಾಸದೊಂದಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸುವುದನ್ನು ಖಾತರಿಪಡಿಸಲು ನಾವು ಇಡೀ ವ್ಯವಸ್ಥೆಯನ್ನು ಬಲಪಡಿಸುತ್ತಿದ್ದೇವೆ," ಎಂದು ಅವರು ಹೇಳಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯ ಮತದಾನದ ಅಂಕಿ-ಅಂಶಗಳನ್ನು ಉಲ್ಲೇಖಿಸಿದ ಪ್ರಧಾನಿ, ಕೇಂದ್ರಾಡಳಿತ ಪ್ರದೇಶದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಲು ಮುಂದೆ ಬಂದಿದ್ದಾರೆ, ಇದು ಕಳೆದ ನಾಲ್ಕು ದಶಕಗಳ ದಾಖಲೆಗಳನ್ನು ಮುರಿದಿದೆ ಎಂದರು. "ಜಮ್ಮು-ಕಾಶ್ಮೀರದ ಜನರು ಭಾರತದ ಸಂವಿಧಾನ, ಅದರ ಪ್ರಜಾಪ್ರಭುತ್ವ ಮತ್ತು ಚುನಾವಣಾ ಆಯೋಗಕ್ಕೆ ಒಪ್ಪಿಗೆ ಮುದ್ರೆ ಒತ್ತಿದ್ದಾರೆ," ಎಂದು ಅವರು ಜನಾದೇಶವನ್ನು ಶ್ಲಾಘಿಸಿದರು. ಇದು ಈ ದೇಶದ ನಾಗರಿಕರ ಪಾಲಿಗೆ ಬಹುನಿರೀಕ್ಷಿತ ಕ್ಷಣ ಎಂದು ಶ್ರೀ ಮೋದಿ ಅವರು ಬಣ್ಣಿಸಿದರು. ಕೇಂದ್ರಾಡಳಿತ ಪ್ರದೇಶದ ಮತದಾರರನ್ನು ಅಭಿನಂದಿಸಿದ ಪ್ರಧಾನಮಂತ್ರಿಯವರು, ಕಳೆದ ಕೆಲವು ದಶಕಗಳಿಂದ ಬಂದ್‌ಗಳು, ಪ್ರತಿಭಟನೆಗಳು, ಸ್ಫೋಟಗಳು ಮತ್ತು ಭಯೋತ್ಪಾದಕ ಚಟುವಟಿಕೆಗಳು ಜಮ್ಮು-ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವನ್ನು ಮರೆಮಾಚಿದ್ದವು ಎಂದರು. ಆದಾಗ್ಯೂ, ಜಮ್ಮು-ಕಾಶ್ಮೀರದ ಜನರು ಸಂವಿಧಾನದಲ್ಲಿ ತಮ್ಮ ಅಚಲ ನಂಬಿಕೆಯನ್ನು ಪ್ರದರ್ಶಿಸಿದ್ದಾರೆ ಮತ್ತು ತಮ್ಮ ಭವಿಷ್ಯವನ್ನು ನಿರ್ಧರಿಸಿದ್ದಾರೆ ಎಂದರು. "ಒಂದು ರೀತಿಯಲ್ಲಿ, ನಾವು ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ವಿರುದ್ಧದ ನಮ್ಮ ಹೋರಾಟದ ಅಂತಿಮ ಹಂತದಲ್ಲಿದ್ದೇವೆ. ಉಳಿದ ಭಯೋತ್ಪಾದಕ ಜಾಲಗಳನ್ನು ನಾಶಪಡಿಸಲು ನಾವು ಶ್ರಮಿಸುತ್ತಿದ್ದೇವೆ," ಎಂದು ಪ್ರಧಾನಿ ಹೇಳಿದರು. ಕೇಂದ್ರಾಡಳಿತ ಪ್ರದೇಶದ ಜನರು ಈ ಹೋರಾಟದಲ್ಲಿ ತಮಗೆ ಸಹಾಯ ಮಾಡುತ್ತಿದ್ದಾರೆ ಮತ್ತು ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು.
ಈಶಾನ್ಯ ರಾಜ್ಯವು ತ್ವರಿತ ಗತಿಯಲ್ಲಿ ರಾಷ್ಟ್ರದ ಪ್ರಗತಿಯ ಹೆಬ್ಬಾಗಿಲಾಗಿ ಮಾರ್ಪಡುತ್ತಿದೆ ಎಂದು ಪ್ರಧಾನಿ ಹೇಳಿದರು. ಕಳೆದ ಕೆಲವು ವರ್ಷಗಳಲ್ಲಿ ಈ ಭಾಗದಲ್ಲಿ ಕೈಗೊಂಡ ಕ್ರಮಗಳನ್ನು ಅವರು ವಿವರಿಸಿದರು. ಈಶಾನ್ಯದಲ್ಲಿ ಮೂಲಸೌಕರ್ಯಗಳ ಅಭೂತಪೂರ್ವ ಬೆಳವಣಿಗೆಯನ್ನು ಅವರು ಉಲ್ಲೇಖಿಸಿದರು. ರಾಜ್ಯಗಳ ನಡುವಿನ ಗಡಿ ವಿವಾದಗಳನ್ನು ಒಮ್ಮತದಿಂದ ಅರ್ಥಪೂರ್ಣ ರೀತಿಯಲ್ಲಿ ಪರಿಹರಿಸುತ್ತಿರುವುದರಿಂದ ಈ ಪ್ರದೇಶದಲ್ಲಿ ಶಾಶ್ವತ ಶಾಂತಿಯ ಖಾತರಿಯಾಗಲಿದ್ದು, ಈ ಪ್ರಯತ್ನಗಳು ದೀರ್ಘಕಾಲೀನ ಪರಿಣಾಮ ಬೀರುವ ಬಗ್ಗೆ ಅವರು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯಸಭೆಯ ಹಿಂದಿನ ಅಧಿವೇಶನದಲ್ಲಿ ಮಣಿಪುರದ ಬಗ್ಗೆ ತಾವು ಮಾಡಿದ ವಿಸ್ತೃತ ಭಾಷಣವನ್ನು ಸ್ಮರಿಸಿದ ಶ್ರೀ ಮೋದಿ, ಮಣಿಪುರದ ಪರಿಸ್ಥಿತಿಯನ್ನು ಸರಾಗಗೊಳಿಸಲು ಸರ್ಕಾರ ನಿರಂತರವಾಗಿ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಪುನರುಚ್ಚರಿಸಿದರು. ಮಣಿಪುರದಲ್ಲಿ ಅಶಾಂತಿಯ ಸಮಯದಲ್ಲಿ ಮತ್ತು ನಂತರ 11,000ಕ್ಕೂ ಹೆಚ್ಚು ʻಎಫ್ಐಆರ್ʼಗಳನ್ನು ದಾಖಲಿಸಲಾಗಿದೆ ಮತ್ತು 500ಕ್ಕೂ ಹೆಚ್ಚು ತಪ್ಪಿತಸ್ಥರನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಮಣಿಪುರದಲ್ಲಿ ಹಿಂಸಾಚಾರದ ಘಟನೆಗಳು ನಿರಂತರವಾಗಿ ಇಳಿಮುಖವಾಗಿವೆ ಎಂಬ ಅಂಶವನ್ನು ನಾವು ಒಪ್ಪಿಕೊಳ್ಳಬೇಕು ಎಂದು ಪ್ರಧಾನಿ ಒತ್ತಿ ಹೇಳಿದರು. ಇದರರ್ಥ ಮಣಿಪುರದಲ್ಲಿ ಶಾಂತಿಯ ಭರವಸೆಯು ಖಚಿತ ಸಾಧ್ಯತೆಯಾಗಿದೆ ಎಂದು ಅವರು ಹೇಳಿದರು. ಇಂದು ಮಣಿಪುರದಲ್ಲಿ ಶಾಲೆಗಳು, ಕಾಲೇಜುಗಳು, ಕಚೇರಿಗಳು ಮತ್ತು ಇತರ ಸಂಸ್ಥೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಮಕ್ಕಳ ಅಭಿವೃದ್ಧಿಯ ಪ್ರಯಾಣಕ್ಕೂ ಯಾವುದೇ ರೀತಿಯಲ್ಲಿ ಅಡ್ಡಿಯಾಗಿಲ್ಲ ಎಂದು ಶ್ರೀ ಮೋದಿ ಅವರು ಸದನಕ್ಕೆ ಮಾಹಿತಿ ನೀಡಿದರು. ಮಣಿಪುರದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲ್ಲ ಪಾಲುದಾರರೊಂದಿಗೆ ಚರ್ಚಿಸುತ್ತಿವೆ ಎಂದು ಪ್ರಧಾನಿ ಒತ್ತಿ ಹೇಳಿದರು. ಗೃಹ ಸಚಿವರು ಖುದ್ದು ತಾವೇ ಮಣಿಪುರದಲ್ಲಿದ್ದು ಶಾಂತಿಯ ಪ್ರಯತ್ನಗಳನ್ನು ಮುಂಚೂಣಿಯಿಂದ ಮುನ್ನಡೆಸಿದರು ಎಂದು ಅವರು ಒತ್ತಿ ಹೇಳಿದರು. ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯುವ ಮತ್ತು ಶಾಂತಿಯನ್ನು ಖಚಿತಪಡಿಸಿಕೊಳ್ಳುವ ಕಾರ್ಯದಲ್ಲಿ ಹಿರಿಯ ಅಧಿಕಾರಿಗಳನ್ನು ಸಹ ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.
ಪ್ರಸ್ತುತ ಮಣಿಪುರದಲ್ಲಿ ಉಂಟಾಗಿರುವ ಕಠಿಣ ಪ್ರವಾಹ ಪರಿಸ್ಥಿತಿಯ ಬಗ್ಗೆ ಪ್ರಧಾನಿ ಕಳವಳ ವ್ಯಕ್ತಪಡಿಸಿದರು. ಪ್ರವಾಹ ಪರಿಹಾರ ಕಾರ್ಯಗಳಿಗಾಗಿ ರಾಷ್ಟ್ರೀಯ ವಿಪತ್ತು ಪರಿಹಾರ ಪಡೆಯ(ಎನ್‌ಡಿಆರ್‌ಎಫ್) 2 ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಸದನಕ್ಕೆ ಮಾಹಿತಿ ನೀಡಿದ ಶ್ರೀ ಮೋದಿ, ಪರಿಹಾರ ಪ್ರಯತ್ನಗಳಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದೆ ಎಂದು ಒತ್ತಿ ಹೇಳಿದರು. ಮಣಿಪುರದಲ್ಲಿ ಶಾಂತಿ ಮತ್ತು ಸಹಜ ಸ್ಥಿತಿಯನ್ನು ಖಾತರಿಪಡಿಸಲು ರಾಜಕೀಯ ಮತ್ತು ಪಕ್ಷಭೇದ ಮರೆತು ಮುಂದೆಬರುವ ಸಮಯ ಇದಾಗಿದೆ, ಇದು ಎಲ್ಲ ಪಾಲುದಾರರ ಕರ್ತವ್ಯವೂ ಹೌದು ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಮಣಿಪುರದ ಭದ್ರತಾ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುವುದನ್ನು ಹಾಗೂ ಪ್ರಚೋದನೆಯನ್ನು ನಿಲ್ಲಿಸುವಂತೆ ಪ್ರಧಾನಿ ಭಿನ್ನಮತೀಯರನ್ನು ವಿನಂತಿಸಿದರು. ಮಣಿಪುರದಲ್ಲಿನ ಸಾಮಾಜಿಕ ಸಂಘರ್ಷವು ಅಲ್ಲಿನ ಸುದೀರ್ಘ ಇತಿಹಾಸದೊಂದಿಗೆ ಆಳವಾದ ನಂಟು ಹೊಂದಿದೆ. ಸ್ವಾತಂತ್ರ್ಯದ ನಂತರ 10 ಬಾರಿ ಅಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಲು ಇದೇ ಕಾರಣವಾಗಿದೆ ಎಂದು ಅವರು ಸದನಕ್ಕೆ ನೆನಪಿಸಿದರು. 1993ರಿಂದ ಮಣಿಪುರದಲ್ಲಿ 5 ವರ್ಷಗಳ ಕಾಲ ನಡೆದ ಸಾಮಾಜಿಕ ಸಂಘರ್ಷವನ್ನು ಗಮನಿಸಿದ ಶ್ರೀ ಮೋದಿ, ಪರಿಸ್ಥಿತಿಯನ್ನು ಬುದ್ಧಿವಂತಿಕೆ ಮತ್ತು ತಾಳ್ಮೆಯಿಂದ ನಿಭಾಯಿಸುವ ಅವಶ್ಯಕತೆಯಿದೆ ಎಂದು ಒತ್ತಿ ಹೇಳಿದರು. ಮಣಿಪುರದಲ್ಲಿ ಸಹಜತೆ ಮತ್ತು ಶಾಂತಿಯನ್ನು ಖಚಿತಪಡಿಸಿಕೊಳ್ಳುವ ತಮ್ಮ ಪ್ರಯತ್ನಗಳಿಗೆ ನೆರವಾಗುವಂತೆ ಅವರು ಎಲ್ಲಾ ಸಮಾನ ಮನಸ್ಕರಿಗೆ ಆಹ್ವಾನ ನೀಡಿದರು.
ಲೋಕಸಭೆಗೆ ಕಾಲಿಡುವ ಮುನ್ನ ಮತ್ತು ಭಾರತದ ಪ್ರಧಾನಿಯಾಗುವ ಮೊದಲು ತಾವು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಒಕ್ಕೂಟ ವ್ಯವಸ್ಥೆಯ ಮಹತ್ವವನ್ನು ಅನುಭವದಿಂದ ಕಲಿತಿದ್ದೇನೆ ಎಂದು ಪ್ರಧಾನಿ ಒತ್ತಿ ಹೇಳಿದರು. ಶ್ರೀ ಮೋದಿ ಅವರು ಸಹಕಾರ ಮತ್ತು ಸ್ಪರ್ಧಾತ್ಮಕ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ತಮ್ಮ ನಿಲುವನ್ನು ಪ್ರತಿಪಾದಿಸಿದರು. ಇದೇ ವೇಳೆ ಜಾಗತಿಕ ವೇದಿಕೆಯಲ್ಲಿ ರಾಜ್ಯ ಮತ್ತು ಅದರ ಸಾಮರ್ಥ್ಯಗಳನ್ನು ಪ್ರದರ್ಶಿಸಲು ದೇಶದ ಪ್ರತಿ ರಾಜ್ಯದಲ್ಲಿ ಪ್ರಮುಖ ಜಿ20 ಕಾರ್ಯಕ್ರಮಗಳನ್ನು ಆಯೋಜಿಸಿದ್ದನ್ನು ಉಲ್ಲೇಖಿಸಿದರು. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ರಾಜ್ಯ ಮತ್ತು ಕೇಂದ್ರದಲ್ಲಿ ದಾಖಲೆ ಸಂಖ್ಯೆಯ ಚರ್ಚೆಗಳು ಮತ್ತು ಸಮಾಲೋಚನೆಗಳು ನಡೆದಿವೆ ಎಂದು ಅವರು ಮಾಹಿತಿ ನೀಡಿದರು.
ರಾಜ್ಯಸಭೆಯು ರಾಜ್ಯಗಳ ಸದನವಾಗಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಸೆಮಿಕಂಡಕ್ಟರ್ (ಅರೆವಾಹಕ) ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಮುಂದಿನ ಕ್ರಾಂತಿಗೆ ಭಾರತ ಮಾರ್ಗದರ್ಶನ ನೀಡಲಿದೆ ಎಂದು ಪುನರುಚ್ಚರಿಸಿದರು. ಅಭಿವೃದ್ಧಿ, ಉತ್ತಮ ಆಡಳಿತ, ನೀತಿ ರಚನೆ, ಉದ್ಯೋಗ ಸೃಷ್ಟಿಯ ಜೊತೆಗೆ ವಿದೇಶಿ ಹೂಡಿಕೆಗಳನ್ನು ಆಕರ್ಷಿಸುವಲ್ಲಿ ಸ್ಪರ್ಧಿಸುವಂತೆ ಭಾರತದ ರಾಜ್ಯಗಳನ್ನು ಉತ್ತೇಜಿಸಿದರು. ಜಗತ್ತು ಭಾರತದ ಬಾಗಿಲು ತಟ್ಟುತ್ತಿರುವಾಗ ಭಾರತದ ಪ್ರತಿಯೊಂದು ರಾಜ್ಯಕ್ಕೂ ಅವಕಾಶವಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು. ಭಾರತದ ಬೆಳವಣಿಗೆಯ ಯಶೋಗಾಥೆಗೆ ಕೊಡುಗೆ ನೀಡುವಂತೆ ಮತ್ತು ಅದರ ಪ್ರಯೋಜನಗಳನ್ನು ಪಡೆಯುವಂತೆ ಅವರು ಎಲ್ಲಾ ರಾಜ್ಯಗಳನ್ನು ಒತ್ತಾಯಿಸಿದರು. ಹೊಸ ಅವಕಾಶಗಳು ಸೃಷ್ಟಿಯಾಗುವುದರಿಂದ ರಾಜ್ಯಗಳ ನಡುವಿನ ಸ್ಪರ್ಧೆಯು ಯುವಕರಿಗೆ ಭಾರಿ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು ಮತ್ತು ಅರೆವಾಹಕಗಳಿಗೆ ಸಂಬಂಧಿಸಿದ ಕೆಲಸಗಳು ವೇಗವಾಗಿ ನಡೆಯುತ್ತಿರುವ ಈಶಾನ್ಯದ ಅಸ್ಸಾಂನ ಉದಾಹರಣೆಯನ್ನು ನೀಡಿದರು.
ವಿಶ್ವಸಂಸ್ಥೆಯು 2023ನೇ ವರ್ಷವನ್ನು 'ಸಿರಿಧಾನ್ಯಗಳ ವರ್ಷ' ಎಂದು ಘೋಷಿಸಿರುವ ಬಗ್ಗೆ ಮಾತನಾಡಿದ ಪ್ರಧಾನಿ, ಇದು ಭಾರತದ ಸಣ್ಣ ಪ್ರಮಾಣದ ರೈತರ ಶಕ್ತಿಯನ್ನು ಸೂಚಿಸುತ್ತದೆ ಎಂದರು. ಸಿರಿಧಾನ್ಯಗಳ ಉತ್ಪಾದನೆಯನ್ನು ಉತ್ತೇಜಿಸಲು ನೀತಿಗಳನ್ನು ರೂಪಿಸುವಂತೆ ಮತ್ತು ಅದನ್ನು ಜಾಗತಿಕ ಮಾರುಕಟ್ಟೆಗೆ ತಲುಪಿಸಲು ಮಾರ್ಗಸೂಚಿಯನ್ನು ರಚಿಸುವಂತೆ ರಾಜ್ಯಗಳನ್ನು ಅವರು ಒತ್ತಾಯಿಸಿದರು. ವಿಶ್ವದ ಪೌಷ್ಠಿಕಾಂಶದ ಮಾರುಕಟ್ಟೆಯಲ್ಲಿ ಸಿರಿಧಾನ್ಯಗಳು ನಿರ್ಣಾಯಕ ಪಾತ್ರ ವಹಿಸಬಲ್ಲವು ಮತ್ತು ಜನರು ಅಪೌಷ್ಟಿಕತೆ ಎದುರಿಸುತ್ತಿರುವ ಪ್ರದೇಶಗಳಲ್ಲಿ ಪ್ರಧಾನ ಆಹಾರವಾಗಬಲ್ಲವು ಎಂದು ಅವರು ಗಮನ ಸೆಳೆದರು.
ಜನಸಾಮಾನ್ಯರ ʻಜೀವನ ಸುಗಮತೆʼ ಹೆಚ್ಚಿಸುವ ನೀತಿಗಳು ಮತ್ತು ಕಾನೂನುಗಳನ್ನು ರೂಪಿಸುವಂತೆ ಪ್ರಧಾನಿ ರಾಜ್ಯಗಳನ್ನು ಪ್ರೋತ್ಸಾಹಿಸಿದರು. ಪಂಚಾಯತ್, ನಗರ ಪಾಲಿಕೆ, ಮಹಾನಗರ ಪಾಲಿಕೆ, ತಾಲೂಕು ಅಥವಾ ಜಿಲ್ಲಾ ಪರಿಷತ್ ಸೇರಿದಂತೆ ಎಲ್ಲಾ ಹಂತಗಳಲ್ಲಿ ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ತೀವ್ರಗೊಳಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು ಜೊತೆಗೆ ರಾಜ್ಯಗಳು ಈ ನಿಟ್ಟಿನಲ್ಲಿ ಒಗ್ಗಟ್ಟಾಗಬೇಕು ಎಂದು ಕರೆ ನೀಡಿದರು.
ಭಾರತವನ್ನು 21ನೇ ಶತಮಾನದ ನೀಲನಕ್ಷೆಯಾಗಿ ಪರಿವರ್ತಿಸವ ನಿಟ್ಟಿನಲ್ಲಿ ಸರ್ಕಾರದ ನಿರ್ಧಾರ ಕೈಗೊಳ್ಳುವಿಕೆ, ವಿತರಣೆ ಮತ್ತು ಆಡಳಿತ ಮಾದರಿಯಲ್ಲಿ ದಕ್ಷತೆಯ ಪ್ರಾಮುಖ್ಯತೆ ಬಗ್ಗೆ ಪ್ರಧಾನಿ ಬೆಳಕು ಚೆಲ್ಲಿದರು. ಈ ಕ್ಷೇತ್ರಗಳಲ್ಲಿ ಮಾಡಿದ ಕೆಲಸದ ವೇಗಕ್ಕೆ ಉತ್ತೇಜನ ಸಿಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ದಕ್ಷತೆಯು ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರುತ್ತದೆ, ಆ ಮೂಲಕ ನಾಗರಿಕರ ಹಕ್ಕುಗಳನ್ನು ರಕ್ಷಿಸುತ್ತದೆ, ಸುಗಮ ಜೀವನವನ್ನು ಉತ್ತೇಜಿಸುತ್ತದೆ ಜೊತೆಗೆ ʻಆದರೆ, ಆದಾಗ್ಯೂʼ ಗಳನ್ನು ತೊಡೆದುಹಾಕುತ್ತದೆ ಎಂದು ಅವರು ಹೇಳಿದರು.
ನಾಗರಿಕರ ಜೀವನದಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಕಡಿಮೆ ಮಾಡುವ ಮತ್ತು ಅಗತ್ಯವಿರುವವರಿಗೆ ಸರ್ಕಾರದ ಬೆಂಬಲವನ್ನು ಮುಂದುವರಿಸುವ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು.
ಹವಾಮಾನ ಬದಲಾವಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, ನೈಸರ್ಗಿಕ ವಿಪತ್ತುಗಳು ಹೆಚ್ಚುತ್ತಿವೆ ಎಂದರು. ಎಲ್ಲಾ ರಾಜ್ಯಗಳು ಮುಂದೆ ಬಂದು ಇದರ ವಿರುದ್ಧ ಹೋರಾಡಬೇಕೆಂದು ಅವರು ಕರೆ ನೀಡಿದರು. ಎಲ್ಲರಿಗೂ ಕುಡಿಯುವ ನೀರನ್ನು ಒದಗಿಸಲು ಮತ್ತು ಆರೋಗ್ಯ ಸೇವೆಗಳನ್ನು ಮೇಲ್ದರ್ಜೆಗೇರಿಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಶ್ರೀ ಮೋದಿ ಹೇಳಿದರು. ಈ ಮೂಲಭೂತ ಗುರಿಗಳನ್ನು ರಾಜಕೀಯ ಇಚ್ಛಾಶಕ್ತಿಯ ಮೂಲಕ ಸಾಧಿಸಬಹುದು ಮತ್ತು ಪ್ರತಿ ರಾಜ್ಯವೂ ಅವುಗಳನ್ನು ಸಾಧಿಸಲು ಮುಂದೆ ಬಂದು ಸಹಕರಿಸುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಪ್ರಸಕ್ತ ಶತಮಾನವು ಭಾರತದ ಶತಮಾನವಾಗಲಿದೆ ಎಂದು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು, ಈಗ ನಾವು ಯಾವ ಕಾರಣಕ್ಕೂ ಈ ಅವಕಾಶವನ್ನು ಕೈಬಿಡಬಾರದು ಎಂದರು. ಭಾರತವು ಹಿಂದೆ ಅನೇಕ ಅವಕಾಶಗಳನ್ನು ಕಳೆದುಕೊಂಡಿದ್ದರಿಂದ, ಇದೇ ಹಂತದಲ್ಲಿದ್ದ ಅನೇಕ ದೇಶಗಳು ಈಗ ಅಭಿವೃದ್ಧಿ ಹೊಂದಿವೆ ಎಂದು ಅವರು ಗಮನ ಸೆಳೆದರು. ಸುಧಾರಣೆಗಳನ್ನು ತಪ್ಪಿಸುವ ಅಗತ್ಯವಿಲ್ಲ ಎಂದ ಪ್ರಧಾನಿ, ನಾಗರಿಕರಿಗೆ ಹೆಚ್ಚಿನ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ವರ್ಗಾಯಿಸುವುದರಿಂದ ಪ್ರಗತಿ ಮತ್ತು ಬೆಳವಣಿಗೆಗೆ ಹಾದಿಯಾಗುತ್ತದೆ ಎಂದು ಹೇಳಿದರು.
"ವಿಕಸಿತ ಭಾರತವು 140 ಕೋಟಿ ನಾಗರಿಕರ ಧ್ಯೇಯವಾಗಿದೆ," ಎಂದು ಹೇಳಿದ ಪ್ರಧಾನಿ, ಈ ಗುರಿಯನ್ನು ಸಾಧಿಸಲು ಏಕತೆಯ ಮಹತ್ವವನ್ನು ಒತ್ತಿ ಹೇಳಿದರು. ಭಾರತದ ಸಾಮರ್ಥ್ಯದಲ್ಲಿ ಹೂಡಿಕೆ ಮಾಡಲು ಇಡೀ ಜಗತ್ತು ಸಿದ್ಧವಾಗಿದೆ ಎಂದು ಪುನರುಚ್ಚರಿಸಿದ ಅವರು, "ಭಾರತವು ವಿಶ್ವದ ಮೊದಲ ಆಯ್ಕೆಯಾಗಿದೆ" ಎಂದರು. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ರಾಜ್ಯಗಳಿಗೆ ಅವರು ಕರೆ ನೀಡಿದರು.
ರಾಷ್ಟ್ರಪತಿಯವರ ಮಾರ್ಗದರ್ಶನಕ್ಕಾಗಿ ಮತ್ತು ಅವರು ತಮ್ಮ ಭಾಷಣದಲ್ಲಿ ಎತ್ತಿದ ವಿಷಯಗಳಿಗೆ ಧನ್ಯವಾದ ಅರ್ಪಿಸುವ ಮೂಲಕ ಪ್ರಧಾನಮಂತ್ರಿಯವರು ಮಾತುಗಳನ್ನು ಮುಕ್ತಾಯಗೊಳಿಸಿದರು.
*****
(Release ID: 2030656)
Visitor Counter : 81
Read this release in:
English
,
Urdu
,
Hindi
,
Hindi_MP
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam