ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ʻಗ್ಲೋಬಲ್ ಇಂಡಿಯಾಎಐ ಶೃಂಗಸಭೆ-2024ʼ ಉದ್ಘಾಟಿಸಲಿರುವ ಶ್ರೀ ಅಶ್ವಿನಿ ವೈಷ್ಣವ್


ಎಐ ತಂತ್ರಾಂಶ, ನಿಯಂತ್ರಣ, ಪ್ರತಿಭೆಗಳ ಪೋಷಣೆ ಹಾಗೂ ಎಐ ಆವಿಷ್ಕಾರಗಳನ್ನು ಹೆಚ್ಚಿಸುವ ಕುರಿತಾದ ನಿರ್ಣಾಯಕ ಅಂಶಗಳನ್ನು ಆಳವಾಗಿ ಪರಿಶೀಲಿಸಲು ವಿನ್ಯಾಸಗೊಳಿಸಲಾದ ವೈವಿಧ್ಯಮಯ ಅಧಿವೇಶನಗಳನ್ನು ಶೃಂಗಸಭೆಯು ಒಳಗೊಂಡಿರುತ್ತದೆ

Posted On: 02 JUL 2024 3:55PM by PIB Bengaluru

2024ರ ಜುಲೈ 3 ಮತ್ತು 4ರಂದು ʻಗ್ಲೋಬಲ್ ಇಂಡಿಯಾ ಎಐ ಶೃಂಗಸಭೆ-2024ʼ ನಡೆಯಲಿದ್ದು, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (ಎಂಇಐಟಿವೈ) ಅಂತಾರಾಷ್ಟ್ರೀಯ ಪ್ರತಿನಿಧಿಗಳು, ಎಐ ತಜ್ಞರು ಹಾಗೂ ನೀತಿ ನಿರೂಪಕರು ಸೇರಿದಂತೆ ಗೌರವಾನ್ವಿತ ಗಣ್ಯರಿಗೆ ಶೃಂಗಸಭೆಯಲ್ಲಿ ಆತಿಥ್ಯ ವಹಿಸಲು ಸಜ್ಜಾಗಿದೆ. ಜಾಗತಿಕ ಮಟ್ಟದಲ್ಲಿ ʻಜವಾಬ್ದಾರಿಯುತ ಕೃತಕ ಬುದ್ಧಿಮತ್ತೆʼ(ಎಐ) ಅಭಿವೃದ್ಧಿಯನ್ನು ಉತ್ತೇಜಿಸುವ ಬದ್ಧತೆಗೆ ಭಾರತ ಒತ್ತು ನೀಡಿರುವ ಹಿನ್ನೆಲೆಯಲ್ಲಿ, ಈ ಶೃಂಗಸಭೆಯು ಭಾರತದ ಪಾಲಿಗೆ ನಿರ್ಣಾಯಕ ಘಳಿಗೆಯನ್ನು ಸೂಚಿಸುತ್ತದೆ.

ಗ್ಲೋಬಲ್ ಇಂಡಿಯಾಎಐ ಶೃಂಗಸಭೆಯನ್ನು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ; ರೈಲ್ವೆ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಉದ್ಘಾಟಿಸಲಿದ್ದಾರೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ, ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ಸಹಾಯಕ ಸಚಿವ  ಶ್ರೀ ಜಿತಿನ್ ಪ್ರಸಾದ್ ಅವರು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಲಿದ್ದಾರೆ.

 


ಜವಾಬ್ದಾರಿಯುತ ಎಐ ಅಭಿವೃದ್ಧಿಗೆ ಬದ್ಧತೆ

ಕೃತಕ ಬುದ್ಧಿಮತ್ತೆಯ ಜಾಗತಿಕ ಪಾಲುದಾರಿಕೆಯಲ್ಲಿ (ಜಿಪಿಎಐ) ಭಾರತದ ಮುಂಚೂಣೀ ಪಾತ್ರದ ಹಿನ್ನೆಲೆಯಲ್ಲಿ ಆಯೋಜಿಸಲಾದ ಈ ಶೃಂಗಸಭೆಯು ಎಐ ಒಡ್ಡಿರುವ ಬಹುಮುಖಿ ಸವಾಲುಗಳು ಮತ್ತು ಅವಕಾಶಗಳನ್ನು ಎದುರಿಸುವ ನಿಟ್ಟಿನಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಗಣಕ ಸಾಮರ್ಥ್ಯ, ಅಡಿಪಾಯದ ಮಾದರಿಗಳು(ಫೌಂಡೇಷನಲ್ ಮಾಡೆಲ್ಸ್), ಡೇಟಾಸೆಟ್ಗಳು, ತಂತ್ರಾಂಶ ಅಭಿವೃದ್ಧಿ, ಭವಿಷ್ಯದ ಕೌಶಲ್ಯಗಳು, ನವೋದ್ಯಮ ಹಣಕಾಸು ಹಾಗೂ ಸುರಕ್ಷಿತ ಮತ್ತು ʻವಿಶ್ವಾಸಾರ್ಹ ಎಐʼಗೆ ಬಗ್ಗೆ ವಿಷಯಾಧಾರಿತವಾಗಿ ಗಮನ ಹರಿಸುವ ಮೂಲಕ, ಈ ಶೃಂಗಸಭೆಯು ಇಡೀ ಎಐ ಕ್ಷೇತ್ರದ ವ್ಯಾಪ್ತಿಯ ಸಮಗ್ರ ವಿಚಾರಗಳ ಬಗ್ಗೆ ಚರ್ಚಿಸುವ ಭರವಸೆ ನೀಡುತ್ತದೆ.

ದಿನ 1: ವೇದಿಕೆಯ ಸಜ್ಜಿಗೆ

ಶೃಂಗಸಭೆಯ ಮೊದಲ ದಿನವು ಎಐ ಅನ್ವಯ ಮತ್ತು ನಿಯಂತ್ರಣ ಕುರಿತಾದ ನಿರ್ಣಾಯಕ ಅಂಶಗಳ ಬಗ್ಗೆ ಆಳವಾಗಿ ಪರಿಶೀಲಿಸುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾದ ವೈವಿಧ್ಯಮಯ ಅಧಿವೇಶನಗಳನ್ನು ಒಳಗೊಂಡಿರಲಿದೆ. ಮೊದಲ ದಿನದಂದು ನಡೆಯಲಿರುವ "ಇಂಡಿಯಾಎಐ: ಲಾರ್ಜ್ ಲಾಂಗ್ವೇಜ್ ಮಾಡೆಲ್ಸ್" ಎಂಬ ಗಮನಾರ್ಹ ಅಧಿವೇಶನವು ನೈತಿಕ ಮಾನದಂಡಗಳನ್ನು ಎತ್ತಿ ಹಿಡಿಯುತ್ತಲೇ ಸುಧಾರಿತ ಎಐ ಮಾದರಿಗಳು ಭಾರತದ ಭಾಷಾ ವೈವಿಧ್ಯತೆಯನ್ನು ಹೇಗೆ ನಿಭಾಯಿಸಬಲ್ಲವು ಎಂಬುದನ್ನು ಅನ್ವೇಷಿಸುತ್ತದೆ. ಇದೇ ಸಮಯದಲ್ಲಿ, ಜಾಗತಿಕ ಆರೋಗ್ಯ ಮತ್ತು ಎಐ ಕುರಿತ ʻಜಿಪಿಎಐʼ ಸಮಾವೇಶವು ದುರ್ಬಲ ಪ್ರದೇಶಗಳಲ್ಲಿ ಆರೋಗ್ಯ ರಕ್ಷಣೆಗಾಗಿ ಎಐ ಅನ್ನು ಬಳಸಿಕೊಳ್ಳುವ ಬಗ್ಗೆ ಒಳನೋಟಗಳತ್ತ ಗಮನ ಹರಿಸುತ್ತದೆ, ಜೊತೆಗೆ ಸಮಗ್ರ ಆರೋಗ್ಯ ನಾವೀನ್ಯತೆಗೆ ಭಾರತವನ್ನು ವೇಗವರ್ಧಕವಾಗಿ ಪರಿಗಣಿಸುತ್ತದೆ.

"ನೈಜ ಜಗತ್ತಿಗೆ ಎಐ ಪರಿಹಾರಗಳು" ಮತ್ತು "ಎಐಗಾಗಿ ಭಾರತದ ಮೂಲಸೌಕರ್ಯ ಸಿದ್ಧತೆ" ಅಧಿವೇಶನವು ಪ್ರಾಯೋಗಿಕ ಎಐ ಅನುಷ್ಠಾನಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿ ಎಐ-ಚಾಲಿತ ಉಪಕ್ರಮಗಳನ್ನು ಬೆಂಬಲಿಸಲು ಅಗತ್ಯವಾದ ಅಡಿಪಾಯ ಮೂಲಸೌಕರ್ಯಗಳ ಮೇಲೆ ಬೆಳಕು ಚೆಲ್ಲುತ್ತದೆ. ಏತನ್ಮಧ್ಯೆ, "ಎಐ ಯುಗದಲ್ಲಿ ಸುರಕ್ಷತೆ, ವಿಶ್ವಾಸಾರ್ಹತೆ ಮತ್ತು ನಿಯಂತ್ರಣವನ್ನು ಖಾತರಿಪಡಿಸುವುದು" ಕುರಿತ ಚರ್ಚೆಗಳು ನೈತಿಕ ಎಐ ನಿಯೋಜನೆಗೆ ಭಾರತದ ಬದ್ಧತೆಯನ್ನು ಒತ್ತಿಹೇಳುತ್ತವೆ, ಜಾಗತಿಕ ಸಹಕಾರ ಮತ್ತು ನಿಯಂತ್ರಕ ಚೌಕಟ್ಟುಗಳಿಗೆ ಒತ್ತು ನೀಡುತ್ತವೆ.

ದಿನ 2: ಭವಿಷ್ಯದ ಸಬಲೀಕರಣ

ಎರಡನೇ ದಿನದಂದು ಪ್ರತಿಭೆಗಳನ್ನು ಪೋಷಿಸುವ ಮತ್ತು ಎಐ ಆವಿಷ್ಕಾರಗಳನ್ನು ಹೆಚ್ಚಿಸುವತ್ತ ಗಮನ ಹರಿಸಲಾಗುತ್ತದೆ. "ಎಐ ಶಿಕ್ಷಣ ಮತ್ತು ಕೌಶಲ್ಯದ ಮೂಲಕ ಪ್ರತಿಭೆಗಳನ್ನು ಸಬಲೀಕರಣಗೊಳಿಸುವುದು" ಶೀರ್ಷಿಕೆಯ ಅಧಿವೇಶನವು ಶೈಕ್ಷಣಿಕ ಉಪಕ್ರಮಗಳು ಮತ್ತು ವೃತ್ತಿಜೀವನದ ಮಾರ್ಗಗಳ ಮೇಲೆ ಬೆಳಕು ಚೆಲ್ಲುತ್ತದೆ, ಆ ಮೂಲಕ ಎಐ ಕೌಶಲ್ಯಗಳ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಇದು ಹೊಂದಿದೆ. ಇದೇವೇಳೆ, "ಎಐ ಫಾರ್ ಗ್ಲೋಬಲ್ ಗುಡ್: ಎಂಪವರ್ನಿಂಗ್ ದಿ ಗ್ಲೋಬಲ್ ಸೌತ್" ಅಧಿವೇಶನವು ಸಮಗ್ರ ಎಐ ಅಭಿವೃದ್ಧಿಯ ಬಗ್ಗೆ ಸಂವಾದಗಳನ್ನು ಒಳಗೊಂಡಿರಲಿದೆ. ಇದು ಜಾಗತಿಕವಾಗಿ ಸಮಾನ ಎಐ ಲಭ್ಯತೆಯ ಬಗ್ಗೆ ಭಾರತದ ಸಮರ್ಥನೆಯನ್ನು ಪ್ರತಿಧ್ವನಿಸುತ್ತದೆ.

"ಆರಂಭದಿಂದ ಅಗಾಧತೆವರೆಗೆ-ಭಾರತದ ನವೋದ್ಯಮ ಪರಿಸರ ವ್ಯವಸ್ಥೆಯ ಸಬಲೀಕರಣ" ಎಂಬ ಅಧಿವೇಶನವು, ಭಾರತದ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಜಾಗತಿಕ ವೇದಿಕೆಗೆ ಕೊಂಡೊಯ್ಯಲು ನಿರ್ಣಾಯಕವಾದ ಎಐ ಉದ್ಯಮಶೀಲತೆಯನ್ನು ಉತ್ತೇಜಿಸುವ ಉಪಕ್ರಮಗಳ ಬಗ್ಗೆ ಒತ್ತಿ ಹೇಳುತ್ತದೆ. "ದತ್ತಾಂಶ ಪರಿಸರ ವ್ಯವಸ್ಥೆ" ಮತ್ತು "ಸಾರ್ವಜನಿಕ ವಲಯದ ಎಐ ಸಾಮರ್ಥ್ಯ ಚೌಕಟ್ಟು" ಕುರಿತ ಚರ್ಚೆಗಳು ಸಾರ್ವಜನಿಕ ಆಡಳಿತದಲ್ಲಿ ಸದೃಢ ದತ್ತಾಂಶ ನಿಯಂತ್ರಣ ಮತ್ತು ಎಐ ಸನ್ನದ್ಧತೆಯನ್ನು ಅನ್ವೇಷಿಸುತ್ತದೆ. ಪರಿಣಾಮಕಾರಿ ನೀತಿ ನಿರೂಪಣೆ ಮತ್ತು ಅನುಷ್ಠಾನಕ್ಕೆ ಇವು ಅಗತ್ಯವಾಗಿವೆ. 

ʻಗ್ಲೋಬಲ್ ಇಂಡಿಯಾಎಐ ಶೃಂಗಸಭೆ-2024ʼರ ವಿವರವಾದ ಕಾರ್ಯಸೂಚಿಗಾಗಿ ಇಲ್ಲಿ ಕ್ಲಿಕ್ಕಿಸಿ:

https://agenda.negd.in/assets/img/agenda.pdf

ʻಜವಾಬ್ದಾರಿಯುತ ಎಐʼಗಾಗಿ ಹಾದಿ

ʻಗ್ಲೋಬಲ್ ಇಂಡಿಯಾಎಐ ಶೃಂಗಸಭೆ-2024ʼ ಜಾಗತಿಕ ಮಧ್ಯಸ್ಥಗಾರರಿಗೆ ಸಹಯೋಗ, ನಾವೀನ್ಯತೆ ಮತ್ತು ಎಐ ಭವಿಷ್ಯವನ್ನು ರೂಪಿಸಲು ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ. ನೈತಿಕ ಮಾನದಂಡಗಳು ಮತ್ತು ಸರ್ವರ ಒಳಗೊಳ್ಳುವಿಕೆಯನ್ನು ಕಾಯ್ದುಕೊಳ್ಳುತ್ತಲೇ, ಜವಾಬ್ದಾರಿಯುತ ಎಐ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ʻಎಐʼನ ಕ್ರಾಂತಿಕಾರಿ ಸಾಮರ್ಥ್ಯವನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ತನ್ನ ಬದ್ಧತೆಯನ್ನು ಭಾರತ ಪುನರುಚ್ಚರಿಸುತ್ತದೆ. ಈ ಶೃಂಗಸಭೆಯು ಜಾಗತಿಕ ಎಐ ಕ್ಷೇತ್ರದಲ್ಲಿ ಭಾರತದ ನಾಯಕತ್ವವನ್ನು ಬಲಪಡಿಸಲು ಸಜ್ಜಾಗಿದೆ, ಆ ಮೂಲಕ ಎಐ ಪ್ರಯೋಜನಗಳು ಎಲ್ಲರಿಗೂ ಲಭ್ಯವಾಗುವ ಮತ್ತು ವಿಶ್ವಾದ್ಯಂತ ಸಾಮಾಜಿಕ-ಆರ್ಥಿಕ ಪ್ರಗತಿಗೆ ಎಐ ಗಮನಾರ್ಹವಾಗಿ ಕೊಡುಗೆ ನೀಡುವಂತಹ ಭವಿಷ್ಯದ ದಿನಗಳಿಗೆ ದಾರಿ ಮಾಡಿಕೊಡುತ್ತದೆ.

 

*****



(Release ID: 2030345) Visitor Counter : 25