ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಕಾನೂನು ಮಾಪನಶಾಸ್ತ್ರ (ಸಾಮಾನ್ಯ) ನಿಯಮಗಳು, 2011ರಡಿಯಲ್ಲಿ ಉಸಿರಾಟದಲ್ಲಿ ಮದ್ಯದ ದ್ರವ್ಯರಾಶಿಯ ಸಾಂದ್ರತೆಯ ಮಾಪನ ಮತ್ತು ಪ್ರದರ್ಶನಕ್ಕಾಗಿ ಎವಿಡೆನ್ಶಿಯಲ್ ಬ್ರೀತ್  ಅನಲೈಸರ್‌  ಕರಡು ನಿಯಮಗಳ ಬಿಡುಗಡೆ  


ದೋಷಪೂರಿತ ಸಾಧನಗಳಿಂದಾಗಿ ಸಾರ್ವಜನಿಕರಿಗೆ ತಪ್ಪಾಗಿ ದಂಡ ವಿಧಿಸುವುದರಿಂದ ರಕ್ಷಿಸಲು ಒಂದು ವರ್ಷದ ಅವಧಿಗೆ ಎವಿಡೆನ್ಶಿಯಲ್ ಬ್ರೀತ್ ಅನಲೈಸರ್‌ ಗೆ ಮೊಹರು ಮಾಡಲು ಮತ್ತು ಪರಿಶೀಲನೆಗೆ ಕ್ರಮ

Posted On: 28 JUN 2024 1:21PM by PIB Bengaluru

ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯಡಿ ಬರುವ ಕಾನೂನು ಮಾಪನಶಾಸ್ತ್ರ ವಿಭಾಗ ಕಾನೂನು ಮಾಪನಶಾಸ್ತ್ರ (ಸಾಮಾನ್ಯ) ನಿಯಮಗಳು, 2011ರಡಿಯಲ್ಲಿ ಎವಿಡೆನ್ಶಿಯಲ್ ಬ್ರೀತ್  ಅನಲೈಸರ್‌ ಕರಡು ನಿಯಮಗಳ ಬಿಡುಗಡೆ ಮಾಡಿದೆ. ಈ ಉಪಕ್ರಮವು ಕಾನೂನು ಜಾರಿ ಮತ್ತು ಕೆಲಸದ ಸ್ಥಳಗಳಲ್ಲಿ ಬಳಕೆ ಮಾಡುವ ಉಸಿರಾಟದ ವಿಶ್ಲೇಷಕಗಳ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಖಾತ್ರಿಪಡಿಸಿಕೊಳ್ಳಲು ಗುರಿಯನ್ನು ಹೊಂದಿದ್ದು, ಇದರಿಂದಾಗಿ ಸಾರ್ವಜನಿಕ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ.

ಪರಿಶೀಲಿಸಿದ ಮತ್ತು ಪ್ರಮಾಣೀಕರಿಸಿದ ಎವಿಡೆನ್ಶಿಯಲ್ ಬ್ರೀತ್ ಅನಲೈಸರ್‌ ಗಳು ಉಸಿರಾಟದ ಮಾದರಿಗಳಿಂದ ರಕ್ತದಲ್ಲಿನ ಆಲ್ಕೋಹಾಲ್ ಸಾಂದ್ರತೆಯನ್ನು ನಿಖರವಾಗಿ ಅಳೆಯುತ್ತದೆ, ಅಮಲೇರಿದ ವ್ಯಕ್ತಿಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಗುರುತಿಸುವುದನ್ನು ಖಾತ್ರಿಪಡಿಸುತ್ತದೆ. ಇದು ರಸ್ತೆಯಲ್ಲಿ ಆಲ್ಕೋಹಾಲ್-ಸಂಬಂಧಿತ ಘಟನೆಗಳನ್ನು ತಡೆಯಲು ಸಹಾಯ ಮಾಡುತ್ತದೆ, ಪ್ರತಿಯೊಬ್ಬರಿಗೂ ಸುರಕ್ಷಿತ ಪ್ರಯಾಣಕ್ಕೆ ನೆರವು ನೀಡುತ್ತದೆ.

ಹೊಸ ನಿಯಮಗಳ ಪ್ರಕಾರ ಎವಿಡೆನ್ಶಿಯಲ್ ಬ್ರೀತ್ ಅನಲೈಸರ್‌ಗಳು ಪ್ರಮಾಣಿತ ಪರೀಕ್ಷಾ ಕಾರ್ಯವಿಧಾನಗಳನ್ನು ಅನುಸರಿಸುವ ಅಗತ್ಯವಿದ್ದು, ವಿವಿಧ ಸಾಧನಗಳಲ್ಲಿ ಸ್ಥಿರ ಮತ್ತು ವಿಶ್ವಾಸಾರ್ಹ ಫಲಿತಾಂಶಗಳನ್ನು ಖಾತ್ರಿಪಡಿಸುತ್ತದೆ. ಈ ಪ್ರಮಾಣೀಕರಣವು ಜಾರಿ ಕ್ರಮಗಳ ನ್ಯಾಯಸಮ್ಮತತೆ ಮತ್ತು ನಿಖರತೆಯಲ್ಲಿ ಸಾರ್ವಜನಿಕ ವಿಶ್ವಾಸವನ್ನು ವೃದ್ಧಿಸುತ್ತದೆ.

ಎವಿಡೆನ್ಶಿಯಲ್ ಬ್ರೀತ್ ಅನಲೈಸರ್ ಗಳನ್ನು ಅವುಗಳ ನಿಖರತೆಯನ್ನು ಖಾತ್ರಿಪಡಿಸಿಕೊಳ್ಳಲು ಕಾನೂನು ಮಾಪನಶಾಸ್ತ್ರ ಕಾಯ್ದೆ 2009 ರ ಪ್ರಕಾರ ಪರಿಶೀಲಿಸಬೇಕು ಮತ್ತು ಮೊಹರು ಮಾಡಬೇಕು. ಈ ಪರಿಶೀಲನೆಯಿಂದಾಗಿ ದೋಷಪೂರಿತ ಸಾಧನಗಳಿಂದಾಗಿ ಸಾರ್ವಜನಿಕರಿಗೆ ತಪ್ಪಾಗಿ ದಂಡ ವಿಧಿಸುವುದರಿಂದ ರಕ್ಷಿಸುತ್ತದೆ ಮತ್ತು ಕಾನೂನು ಮತ್ತು ದುಡಿಯುವ ಸ್ಥಳಗಳ ನೀತಿಗಳ ಸಮಗ್ರತೆ ಕಾಯ್ದುಕೊಳ್ಳಲು ನೆರವಾಗುತ್ತದೆ.

ಎವಿಡೆನ್ಶಿಯಲ್ ಬ್ರೀತ್ ಅನಲೈಸರ್‌ ಗಳು  ರಕ್ತದ ಆಲ್ಕೋಹಾಲ್ ಅಂಶವನ್ನು ಅಳೆಯಲು ಆಕ್ರಮಣಕಾರಿಯಲ್ಲದ ಮಾರ್ಗವನ್ನು ಒದಗಿಸುತ್ತದೆ, ತ್ವರಿತ ಮತ್ತು ನೋವುರಹಿತ ಮಾದರಿ ಸಂಗ್ರಹವನ್ನು ನೀಡುತ್ತದೆ. ಕ್ಷಿಪ್ರ ವಿಶ್ಲೇಷಣಾ ಸಾಮರ್ಥ್ಯಗಳು ಕಾನೂನು ಜಾರಿ ಅಧಿಕಾರಿಗಳಿಗೆ ತ್ವರಿತವಾಗಿ ತಿಳಿವಳಿಕೆಯ ನಿರ್ಧಾರಗಳನ್ನು ಮಾಡಲು, ರಸ್ತೆ ಬದಿಯ ತಪಾಸಣೆಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ.

ಸಾರ್ವಜನಿಕರಿಗೆ ಮೊಹರು ಮಾಡಿದ ಮತ್ತು ಪರಿಶೀಲಿಸಲಾದ ಎವಿಡೆನ್ಶಿಯಲ್ ಬ್ರೀತ್ ಅನಲೈಸರ್ ಗಳ ಲಭ್ಯತೆಯು ಮದ್ಯದ ಪರಿಣಾಮಗಳು ಮತ್ತು  ಕಾನೂನು ಚೌಕಟ್ಟಿನಲ್ಲಿ ವಾಹನಗಳು ಮತ್ತು ಯಂತ್ರಗಳ ಸುರಕ್ಷಿತ ಕಾರ್ಯಾಚರಣೆಗಳ ಬಗ್ಗೆ ಜಾಗೃತಿ ಮೂಡಿಸಬಹುದು. ಇದು ಜವಾಬ್ದಾರಿಯುತ ನಡವಳಿಕೆ ಮತ್ತು ತಿಳಿವಳಿಕೆಯುಳ್ಳ ನಿರ್ಧಾರವನ್ನು ಉತ್ತೇಜಿಸುತ್ತದೆ.

ಕರಡು ನಿಯಮಗಳಲ್ಲಿ “ಎವಿಡೆನ್ಶಿಯಲ್ ಬ್ರೀತ್ ಅನಲೈಸರ್‌’’ ಗಳನ್ನು ವ್ಯಾಖ್ಯಾನಿಸಲಾಗಿದ್ದು, ನಿರ್ದಿಷ್ಟ ಮಿತಿಗಳಲ್ಲಿ ಹೊರಹಾಕಿದ ಮಾನವ ಉಸಿರಾಟದಲ್ಲಿ ಮದ್ಯದ ಪ್ರಮಾಣವನ್ನು ಅಳೆಯುವ ಮತ್ತು ಪ್ರದರ್ಶಿಸುವ ಸಾಧನವಾಗಿದೆ ಮತ್ತು ಉಸಿರಾಟದ ಮಾದರಿಯನ್ನು ಪಡೆಯುವ  ಮೌತ್‌ಪೀಸ್‌ಗಳನ್ನು ಬಳಸುವ ಎವಿಡೆನ್ಶಿಯಲ್ ಬ್ರೀತ್ ಅನಲೈಸರ್ ಗಳಿಗೂ ಅನ್ವಯಿಸುತ್ತದೆ. ಉಪಕರಣದ ನಿಖರತೆಯನ್ನು ಖಾತ್ರಿಪಡಿಸಿಕೊಳ್ಳಲು ನಿಯಮಗಳು ವಿವಿಧ ರೀತಿಯ ಪರೀಕ್ಷೆಗಳನ್ನು ಒದಗಿಸುತ್ತದೆ. ವಾರ್ಷಿಕ ಪರಿಶೀಲನೆಯ ವೇಳೆ ಬಳಕೆಯ ಸಮಯದಲ್ಲಿ ಉಪಕರಣದ ನಿಖರತೆಯನ್ನು ಖಾತ್ರಿಪಡಿಸುತ್ತದೆ.

ಈ ಕರಡು ನಿಯಮಗಳ ಎವಿಡೆನ್ಶಿಯಲ್ ಬ್ರೀತ್ ಅನಲೈಸರ್ ಗಳ ತಾಂತ್ರಿಕ ಅಗತ್ಯತೆಗಳ ಬಗ್ಗೆ ಸಂಪೂರ್ಣ ಚಿತ್ರಣ ನೀಡಲಾಗಿದೆ. ಅದರಲ್ಲಿ ಇವುಗಳು ಸೇರಿವೆ.

  • ಅಂತಿಮ ಅಳತೆಯ ಫಲಿತಾಂಶವನ್ನು ಮಾತ್ರ ಪ್ರದರ್ಶಿಸುವುದು.
  • ಫಲಿತಾಂಶಗಳನ್ನು ದಾಖಲಿಸಲು ಪ್ರಿಂಟರ್ ಅನ್ನು ಸೇರಿಸುವುದು ಮತ್ತು ಸಾಧನವು ಕಾಗದವಿಲ್ಲದೆ ಕಾರ್ಯನಿರ್ವಹಿಸುವುದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು.
  • ರಕ್ತದ ಆಲ್ಕೋಹಾಲ್ ಸಾಂದ್ರತೆಯ ಫಲಿತಾಂಶದೊಂದಿಗೆ ಹೆಚ್ಚುವರಿ ಮುದ್ರಿತ ಮಾಹಿತಿಯನ್ನು ಒದಗಿಸುವುದು.
  • ರಕ್ತದಲ್ಲಿನ ಆಲ್ಕೋಹಾಲ್ ಪ್ರಮಾಣದಂತಹ ವಿಭಿನ್ನ ಸ್ವರೂಪಗಳಲ್ಲಿ ಫಲಿತಾಂಶಗಳ ವರದಿ ನೀಡುವುದು.

ಎವಿಡೆನ್ಶಿಯಲ್ ಬ್ರೀತ್ ಅನಲೈಸರ್‌ ಗಳ ಹೊಸ ಕರಡು ನಿಯಮಗಳು ರಸ್ತೆ ಸುರಕ್ಷತೆ ನಿಯಮ ಮತ್ತು ಜಾರಿ ವಿಶ್ವಾಸಾರ್ಹತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿವೆ. ಎವಿಡೆನ್ಶಿಯಲ್ ಬ್ರೀತ್ ಅನಲೈಸರ್ ನಿಖರ, ಪ್ರಮಾಣಿತ ಮತ್ತು ಬಳಸಲು ಸುಲಭವಾಗಿದೆ ಎಂದು ಖಾತ್ರಿಪಡಿಸಿಕೊಳ್ಳುವ ಮೂಲಕ, ಈ ನಿಯಮಗಳು ಉತ್ತಮ ಜಾರಿ, ಹೆಚ್ಚಿನ ಸುರಕ್ಷತೆ ಮತ್ತು ಕಾನೂನು ಮತ್ತು ದುಡಿಯುವ ಸ್ಥಳಗಳಲ್ಲಿ ಮದ್ಯ ಪರೀಕ್ಷೆಯ ಮೇಲಿನ ನಂಬಿಕೆ ಹೆಚ್ಚಾಗುವ  ಮೂಲಕ ಸಾರ್ವಜನಿಕರಿಗೆ ಪ್ರಯೋಜನವನ್ನು ಒದಗಿಸುತ್ತದೆ. ಕಠಿಣ ಮಾನದಂಡಗಳು ಮತ್ತು ವಿಶ್ವಾಸಾರ್ಹ ಮಾಪನ ಸಾಧನಗಳ ಮೂಲಕ ಸಾರ್ವಜನಿಕ ಕಲ್ಯಾಣ ಕಾಪಾಡಲು  ಗ್ರಾಹಕ ವ್ಯವಹಾರಗಳ ಇಲಾಖೆಯು ಬದ್ಧವಾಗಿದೆ.

ಕರಡು ನಿಯಮಗಳನ್ನು ವೆಬ್ ಸೈಟ್ ನಲ್ಲಿ ಸಾರ್ವಜನಿಕರ ಆಕ್ಷೇಪಣೆಗಳಾಗಿ 26.07.2024ರವರೆಗೆ ಲಭ್ಯವಿರುತ್ತವೆ. ಅದರ ಲಿಂಕ್ ಹೀಗಿದೆ https://consumeraffairs.nic.in/sites/default/files/file-uploads/latestnews/Draft_Rule_Breath_Analyser.pdf

 

*****



(Release ID: 2029321) Visitor Counter : 25