ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಪಿಎಂ ಗತಿಶಕ್ತಿ ಅಡಿಯಲ್ಲಿ ನೆಟ್ವರ್ಕ್ ಯೋಜನಾ ಗುಂಪಿನ 73 ನೇ ಸಭೆಯಲ್ಲಿ ಎಂಟು ಪ್ರಮುಖ ಮೂಲಸೌಕರ್ಯ ಯೋಜನೆಗಳ ಮೌಲ್ಯಮಾಪನ


ಎನ್.ಪಿ.ಜಿ ಯಿಂದ ಎರಡು ರೈಲ್ವೆ ಮತ್ತು ಆರು ಎನ್ಐಸಿಡಿಸಿ ಯೋಜನೆಗಳ ಮೌಲ್ಯಮಾಪನ

Posted On: 27 JUN 2024 4:20PM by PIB Bengaluru

ನೆಟ್ವರ್ಕ್ ಪ್ಲಾನಿಂಗ್ ಗ್ರೂಪ್ (ಎನ್ಪಿಜಿ) ನ 73 ನೇ ಸಭೆಯನ್ನು 2024 ರ ಜೂನ್ 21 ರಂದು ಹೊಸದಿಲ್ಲಿಯಲ್ಲಿ ಕರೆಯಲಾಯಿತು. ಸಭೆಯ ಅಧ್ಯಕ್ಷತೆಯನ್ನು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ (ಡಿಪಿಐಐಟಿ) ಹೆಚ್ಚುವರಿ ಕಾರ್ಯದರ್ಶಿ ಶ್ರೀ ರಾಜೀವ್ ಸಿಂಗ್ ಠಾಕೂರ್ ವಹಿಸಿದ್ದರು. ರೈಲ್ವೆ ಸಚಿವಾಲಯದ (ಎಂಒಆರ್) ಎರಡು ಮತ್ತು ಡಿಪಿಐಐಟಿಯ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ನಿಗಮ (ಎನ್ಐಸಿಡಿಸಿ)ದ  ಆರು ಸೇರಿದಂತೆ 8 ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಮೌಲ್ಯಮಾಪನ ಮಾಡಲು ಸಭೆ ಗಮನ ಕೇಂದ್ರೀಕರಿಸಿತ್ತು.

ರೈಲ್ವೆ ಸಚಿವಾಲಯದ ಮೊದಲ ಯೋಜನೆ ಮಹಾರಾಷ್ಟ್ರದ ನಾಸಿಕ್ ಮತ್ತು ಜಲ್ಗಾಂವ್ ಜಿಲ್ಲೆಗಳ ಮನ್ಮಾಡ್ನಿಂದ ಜಲ್ಗಾಂವ್ ವರೆಗೆ 160 ಕಿ.ಮೀ ಉದ್ದದ 4 ನೇ ಬ್ರಾಡ್ ಗೇಜ್ ರೈಲ್ವೆ ಮಾರ್ಗದ ನಿರ್ಮಾಣಕ್ಕೆ ಸಂಬಂಧಿಸಿದುದಾಗಿದೆ. 2,594 ಕೋಟಿ ರೂ.ಗಳ ಅಂದಾಜು ಹೂಡಿಕೆಯೊಂದಿಗೆ, ಈ ಯೋಜನೆಯು ಅಸ್ತಿತ್ವದಲ್ಲಿರುವ ಮಾರ್ಗದ ವಿಭಾಗ ಸಾಮರ್ಥ್ಯವನ್ನು ಹೆಚ್ಚಿಸಲು ಯತ್ನಿಸುತ್ತದೆ, ಸರಕು ಮತ್ತು ಪ್ರಯಾಣಿಕರ ರೈಲುಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ. ಇದು ರಾಷ್ಟ್ರೀಯ ಮೂಲಸೌಕರ್ಯ ಆದ್ಯತೆಗಳೊಂದಿಗೆ ನಿಕಟವಾಗಿ ಹೊಂದಿಕೆಯಾಗುತ್ತದೆ ಮತ್ತು ಈ ಪ್ರದೇಶದಲ್ಲಿ ಭವಿಷ್ಯದ ಸಾರಿಗೆ ಬೇಡಿಕೆಗಳನ್ನು ಪೂರೈಸಲು ನಿರ್ಣಾಯಕವಾಗಿದೆ.

ರೈಲ್ವೆ ಸಚಿವಾಲಯದ ಎರಡನೇ ಯೋಜನೆಯು ಮಹಾರಾಷ್ಟ್ರದ ಜಲ್ಗಾಂವ್ ಜಿಲ್ಲೆಯ ಭುಸಾವಾಲ್ ನಿಂದ ಮಧ್ಯಪ್ರದೇಶದ ಬುರ್ಹಾನ್ಪುರ ಮತ್ತು ಖಾಂಡ್ವಾ ಜಿಲ್ಲೆಗಳವರೆಗೆ 130.5 ಕಿ.ಮೀ ಉದ್ದದ 3 ಮತ್ತು 4 ನೇ ಬ್ರಾಡ್ ಗೇಜ್ ರೈಲ್ವೆ ಮಾರ್ಗಗಳ ನಿರ್ಮಾಣಕ್ಕೆ ಸಂಬಂಧಿಸಿದುದಾಗಿದೆ. 3,285 ಕೋಟಿ ರೂ.ಗಳ ಅಂದಾಜು ವೆಚ್ಚದ ಈ ಯೋಜನೆಯು ವಿಭಾಗದ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ, ಪ್ರಾದೇಶಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಭಾರತೀಯ ರೈಲ್ವೆಯ ಮಾರುಕಟ್ಟೆ ಪಾಲನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಈ ಪ್ರದೇಶದ ಆರ್ಥಿಕ ಬೆಳವಣಿಗೆ ಮತ್ತು ಸುಸ್ಥಿರ ಸಾರಿಗೆ ಪರಿಹಾರಗಳಿಗೆ ಕೊಡುಗೆ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಎರಡೂ ಯೋಜನೆಗಳು ಕಲ್ಲಿದ್ದಲು, ಸಿಮೆಂಟ್ ಮತ್ತು ಖನಿಜ ಉತ್ಪಾದನಾ ಪ್ರದೇಶಗಳಿಗೆ ಸಂಪರ್ಕವನ್ನು ಒದಗಿಸಲು ರೈಲ್ವೆ ಸಚಿವಾಲಯ ಹಮ್ಮಿಕೊಂಡ  ಇಂಧನ ಖನಿಜ ಸಿಮೆಂಟ್ ಕಾರಿಡಾರ್ (ಇಎಂಸಿಸಿ) ಕಾರ್ಯಕ್ರಮದ ಭಾಗವಾಗಿವೆ.

ಎನ್ಐಸಿಡಿಸಿಯ ನಾಲ್ಕು ಯೋಜನೆಗಳು ಉತ್ತರ ಪ್ರದೇಶದ ಆಗ್ರಾ ಮತ್ತು ಪ್ರಯಾಗ್ರಾಜ್, ಹರಿಯಾಣದ ಹಿಸಾರ್ ಮತ್ತು ಬಿಹಾರದ ಗಯಾದಲ್ಲಿ 8,175 ಕೋಟಿ ರೂ.ಗಳ ಅಂದಾಜು ಹೂಡಿಕೆಯೊಂದಿಗೆ ಸಮಗ್ರ ಉತ್ಪಾದನಾ ಕ್ಲಸ್ಟರ್ (ಐಎಂಸಿ) ಅಭಿವೃದ್ಧಿಗೆ ಸಂಬಂಧಿಸಿವೆ. ಶೈಕ್ಷಣಿಕ ಮತ್ತು ಆರೋಗ್ಯ ಸೇವೆಗಳ ಜೊತೆಗೆ ಸ್ಮಾರ್ಟ್ ತಂತ್ರಜ್ಞಾನಗಳು, ಲಾಜಿಸ್ಟಿಕ್ಸ್, ವಸತಿ ಮತ್ತು ವಾಣಿಜ್ಯ ಸೌಲಭ್ಯಗಳು ಸೇರಿದಂತೆ ಇಂಡಸ್ಟ್ರಿ 4.0 ಮಾನದಂಡಗಳಿಗೆ ಅನುಗುಣವಾಗಿ/ಬದ್ಧವಾಗಿ ಅತ್ಯಾಧುನಿಕ ಉತ್ಪಾದನಾ ಕೇಂದ್ರಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಈ ಯೋಜನೆಗಳು ಹೊಂದಿವೆ. ಐಎಂಸಿಗಳು ಇ-ಮೊಬಿಲಿಟಿ, ಆಹಾರ ಸಂಸ್ಕರಣೆ, ಎಫ್ ಎಂಸಿಜಿ, ಚರ್ಮ, ಉಡುಪು ಮುಂತಾದ ಕ್ಷೇತ್ರಗಳ ಬೇಡಿಕೆಗಳನ್ನು ಪೂರೈಸಲಿವೆ.

ಎನ್ಐಸಿಡಿಸಿಯ ಎರಡು ಯೋಜನೆಗಳು ಕರ್ನೂಲ್ ಜಿಲ್ಲೆಯ ಒರವಕಲ್ ಕೈಗಾರಿಕಾ ಪ್ರದೇಶ ಮತ್ತು ಆಂಧ್ರಪ್ರದೇಶದ ವೈಎಸ್ಆರ್ ಕಡಪ ಜಿಲ್ಲೆಯ ಕೊಪ್ಪರ್ತಿ ಕೈಗಾರಿಕಾ ಪ್ರದೇಶವನ್ನು 5,367 ಕೋಟಿ ರೂ.ಗಳ ಅಂದಾಜು ಹೂಡಿಕೆಯೊಂದಿಗೆ ಅಭಿವೃದ್ಧಿಪಡಿಸುವುದನ್ನು ಒಳಗೊಂಡಿವೆ. ಈ ಯೋಜನೆಯು ಕೈಗಾರಿಕೆಗಳನ್ನು ಆಕರ್ಷಿಸಲು ಸುಧಾರಿತ ಮೂಲಸೌಕರ್ಯಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿವೆ ಮತ್ತು ಅವು ಪ್ರಮುಖ ಹೆದ್ದಾರಿಗಳು, ರೈಲ್ವೆ ಮಾರ್ಗಗಳು ಮತ್ತು ಬಂದರುಗಳ ಬಳಿ ಆಯಕಟ್ಟಿನ ಸ್ಥಳದಲ್ಲಿವೆ. ಈ ಯೋಜನೆಗಳು ಸಾಮಾಜಿಕ-ಆರ್ಥಿಕ ಪ್ರಗತಿಯನ್ನು ಉತ್ತೇಜಿಸುವ ಮತ್ತು ಗಮನಾರ್ಹ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿವೆ.

ಸಭೆಯಲ್ಲಿ, ಎಲ್ಲಾ ಯೋಜನೆಗಳನ್ನು ಅವುಗಳ ಸಮಗ್ರ ಯೋಜನೆ ಮತ್ತು ಪಿಎಂ ಗತಿಶಕ್ತಿ ತತ್ವಗಳಿಗೆ ಅನುಗುಣವಾಗಿ ಮೌಲ್ಯಮಾಪನ ಮಾಡಲಾಯಿತು. ಸಾಮಾಜಿಕ-ಆರ್ಥಿಕ ಪ್ರಯೋಜನಗಳು, ಸುಧಾರಿತ ಸಂಪರ್ಕ, ಕಡಿಮೆ ಸಾರಿಗೆ ವೆಚ್ಚ ಮತ್ತು ದಕ್ಷತೆ ವರ್ಧನೆಗೆ ಒತ್ತು ನೀಡಲಾಯಿತು.

ಈ ಯೋಜನೆಗಳು ಸಂಪರ್ಕವನ್ನು ಸುಧಾರಿಸುವಲ್ಲಿ, ಲಾಜಿಸ್ಟಿಕ್ಸ್ ದಕ್ಷತೆಯನ್ನು ಹೆಚ್ಚಿಸುವಲ್ಲಿ ಮತ್ತು ಭಾರತದಾದ್ಯಂತ ಸುಧಾರಿತ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. ಮತ್ತು ಇವು ಕೈಗಾರಿಕಾ ಬೆಳವಣಿಗೆಯನ್ನು ಹೆಚ್ಚಿಸಲು, ಸ್ಪರ್ಧಾತ್ಮಕತೆಯನ್ನು ವರ್ಧಿಸಲು ಮತ್ತು ರಾಷ್ಟ್ರದ ಆರ್ಥಿಕ ಅಭಿವೃದ್ಧಿ ಗುರಿಗಳಿಗೆ ಗಮನಾರ್ಹವಾಗಿ ಕೊಡುಗೆ ನೀಡಲು ನೆರವಾಗುತ್ತವೆ.
 



(Release ID: 2029290) Visitor Counter : 6