ವಾರ್ತಾ ಮತ್ತು ಪ್ರಸಾರ ಸಚಿವಾಲಯ

18ನೇ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ(ಎಂಐಎಫ್ಎಫ್)ದಲ್ಲಿ ಉತ್ಸಾಹಿ ಆನಿಮೇಟರ್‌ಗಳಿಗಾಗಿ ಆನಿಮೇಷನ್ ಕಾರ್ಯಾಗಾರ ಮತ್ತು ವಿಎಫ್ಎಕ್ಸ್ ಸರಣಿ

Posted On: 17 JUN 2024 7:08PM by PIB Bengaluru

18ನೇ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ(ಎಂಐಎಫ್ಎಫ್)ವು ವಾರ್ನರ್ ಬ್ರದರ್ಸ್‌ನಲ್ಲಿ ಹಿರಿಯ ಆನಿಮೇಟರ್ ರಾಹುಲ್ ಬಾಬು ಕನ್ನಿಕ್ಕರ ನೇತೃತ್ವದಲ್ಲಿ ಕುತೂಹಲದ ಆನಿಮೇಷನ್ ಕಾರ್ಯಾಗಾರ ಮತ್ತು ವಿಎಫ್ಎಕ್ಸ್ ಸರಣಿಯನ್ನು ಹೆಮ್ಮೆಯಿಂದ ಪ್ರಾರಂಭಿಸಿದೆ. ನ್ಯಾಷನಲ್ ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (ಎನ್‌ಎಫ್‌ಡಿಸಿ) ಆಯೋಜಿಸಿರುವ ಈ ವಿಶೇಷ 5 ದಿನಗಳ ವರ್ಣರಂಜಿತ ಮತ್ತು ಆಕರ್ಷಕ ಕಾರ್ಯಕ್ರಮ ನಿನ್ನೆ ಪ್ರಾರಂಭವಾಗಿದ್ದು, ಮುಂಬೈನ ಎನ್‌ಎಫ್‌ಡಿಸಿ ಆವರಣದಲ್ಲಿ ಬಹಳ ಉತ್ಸಾಹದಿಂದ ತೆರೆದುಕೊಂಡಿದೆ.

ದೇಶ, ವಿದೇಶಗಳ ವಿವಿಧ ಭಾಗಗಳಿಂದ 23 ಆಕಾಂಕ್ಷಿತ ಆನಿಮೇಟರ್‌ಗಳು ಈ ಉನ್ನತ ತಾಂತ್ರಿಕ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ, ಇದು ಆನಿಮೇಷನ್, ಚಲನಚಿತ್ರಗಳು, ಸರಣಿಗಳು ಮತ್ತು ಗೇಮಿಂಗ್‌ ಜಗತ್ತಿನಲ್ಲಿ ಆಳವಾಗಿ ಅಧ್ಯಯನ ಮಾಡಲು ಅಪ್ರತಿಮ ಅವಕಾಶ ನೀಡುತ್ತದೆ. ಕಾರ್ಯಾಗಾರವು 16ರಿಂದ 55 ವರ್ಷ ವಯಸ್ಸಿನ ವ್ಯಾಪಕ ಶ್ರೇಣಿಯ ಪ್ರತಿನಿಧಿಗಳನ್ನು ಆಕರ್ಷಿಸಿದೆ. ಬ್ಲೆಂಡರ್ ಸಾಫ್ಟ್‌ವೇರ್ ಬಳಸಿಕೊಂಡಿರುವ ಕಾರ್ಯಾಗಾದಲ್ಲಿ ಭಾಗವಹಿಸುವವರಿಗೆ ಮೊದಲಿನಿಂದಲೂ ಆನಿಮೇಷನ್ ಒಳನೋಟಗಳನ್ನು ಕಂಡುಹಿಡಿಯಲು ಮತ್ತು ಅವರ ಸೃಜನಶೀಲತೆಯನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಬ್ಯಾಟ್‌ಮ್ಯಾನ್ ಮತ್ತು ವಂಡರ್ ವುಮನ್‌ನಂತಹ ಜನಪ್ರಿಯ ನಿರ್ಮಾಣಗಳಿಂದ  ಹೆಸರುವಾಸಿಯಾದ ರಾಹುಲ್ ಬಾಬು ಕನ್ನಿಕ್ಕರ ಅವರು ಪ್ರಾಯೋಗಿಕ ಜ್ಞಾನ ಮತ್ತು ಉದ್ಯಮದ ಕುಶಾಗ್ರಮತಿಯ ಮೂಲಕ ಭಾಗವಹಿಸುವವರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ, ತಮ್ಮದೇ ಆದ ಆನಿಮೇಷನ್ ಕ್ಲಿಪ್‌ಗಳನ್ನು ರೂಪಿಸಲು ಮತ್ತು ಚಲನಚಿತ್ರ ಮತ್ತು ಗೇಮಿಂಗ್ ಆನಿಮೇಷನ್ ಸರಣಿಗಳ ಸೂಕ್ಷ್ಮ ವ್ಯತ್ಯಾಸಗಳನ್ನು ಅರ್ಥ ಮಾಡಿಕೊಳ್ಳಲು ಅವರು ಆಸಕ್ತರಿಗೆ ಸಹಾಯ ಮಾಡುತ್ತಿದ್ದಾರೆ. ಕೆನಡಾದ ಮಾಂಟ್ರಿಯಲ್ ಮೂಲದ ಅನುಭವಿ ಆನಿಮೇಟರ್ ಕನ್ನಿಕ್ಕರ ಮಾತನಾಡಿ, ಕಾರ್ಯಾಗಾರವು ಆರಂಭಿಕವಾಗಿ ಆನಿಮೇಷನ್‌ನಲ್ಲಿ ಆಸಕ್ತಿ ಹುಟ್ಟುಹಾಕುವ ಅಡಿಪಾಯದ ಕೋರ್ಸ್‌ನಂತೆ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಿದರು.

 

(ಫೋಟೊ: ರಾಹುಲ್ ಬಾಬು ಕನ್ನಿಕ್ಕರ, ವಾರ್ನರ್ ಬ್ರದರ್ಸ್ ನಲ್ಲಿ ಆಯೋಜಿತವಾಗಿದ್ದ 18ನೇ ಎಂಐಎಫ್ಎಫ್ ಚಲನಚಿತ್ರೋತ್ಸವದ ಪ್ರಮುಖ ಅನಿಮೇಷನ್ ಕಾರ್ಯಾಗಾರ ಮತ್ತು ವಿಎಫ್ಎಕ್ಸ್ ಸರಣಿಯ ಹಿರಿಯ ಆನಿಮೇಟರ್)

 

ಕಾರ್ಯಾಗಾರದ ಕೊನೆಯಲ್ಲಿ ಪ್ರತಿನಿಧಿಗಳಿಗೆ 10 ರಿಂದ 15 ಸೆಕೆಂಡುಗಳ ಆನಿಮೇಷನ್ ವೀಡಿಯೊ ತಯಾರಿಸಲು ಪ್ರೋತ್ಸಾಹ ನೀಡಲಾಗುತ್ತದೆ. "ಹೆಚ್ಚಿನ ವಿದ್ಯಾರ್ಥಿಗಳು ಆನಿಮೇಷನ್‌ ರಂಗಕ್ಕೆ ಹೊಸಬರಾಗಿದ್ದರೂ, ಅವರ ಪ್ರತಿಕ್ರಿಯೆ ತುಂಬಾ ಸಕಾರಾತ್ಮಕವಾಗಿದೆ, ಅವರು ತ್ವರಿತವಾಗಿ ವಿಷಯಗಳನ್ನು ಹಿಡಿಯುತ್ತಿದ್ದಾರೆ. ಬ್ಲೆಂಡರ್ ಸಾಫ್ಟ್‌ವೇರ್‌ನೊಂದಿಗೆ ವಿದ್ಯಾರ್ಥಿಗಳಿಗೆ ಆರಾಮದಾಯಕವಾಗುವಂತೆ ಮಾಡುವುದು ಮತ್ತು ವಿಶ್ವಾದ್ಯಂತ ಆನಿಮೇಷನ್ ಉದ್ಯಮದ ಬಗ್ಗೆ ಮೂಲಭೂತ ಮಾಹಿತಿ ಒದಗಿಸುವುದು ಮುಖ್ಯ ಉದ್ದೇಶವಾಗಿದೆ. ಕೋರ್ಸ್‌ನ ಅಂತ್ಯದ ವೇಳೆಗೆ, ವಿದ್ಯಾರ್ಥಿಗಳು ವಿಎಫ್‌ಎಕ್ಸ್ ಮತ್ತು ಗೇಮಿಂಗ್ ಸರಣಿಗಳ ಅನುಭವವನ್ನು ಸಹ ಪಡೆಯುತ್ತಾರೆ ಎಂದು ರಾಹುಲ್ ಬಾಬು ಕನ್ನಿಕ್ಕರ ತಿಲಿಸಿದರು. ಭಾಗವಹಿಸುವವರಿಗೆ ವೃತ್ತಿ ಮಾರ್ಗದರ್ಶನವನ್ನು ಸಹ ಒದಗಿಸಲಾಗುತ್ತದೆ, ಇದು ಭಾರತ ಮತ್ತು ವಿದೇಶಗಳಲ್ಲಿ ಆನಿಮೇಷನ್-ಸಂಬಂಧಿತ ಉದ್ಯೋಗಾವಕಾಶ ಹುಡುಕಲು ಸಹಾಯ ಮಾಡುತ್ತದೆ.

ಕಾರ್ಯಾಗಾರವು ಪ್ರವರ್ಧಮಾನಕ್ಕೆ ಬರುವ ಅಗತ್ಯ ಕೌಶಲ್ಯಗಳೊಂದಿಗೆ ಭಾಗವಹಿಸುವವರನ್ನು ಸಜ್ಜುಗೊಳಿಸುವ ಗುರಿ ಹೊಂದಿದೆ. ಕಾರ್ಯಾಗಾರದಲ್ಲಿ ಭಾಗವಹಿಸುತ್ತಿರುವ ಆಸ್ಟ್ರೇಲಿಯಾದ ಮಹತ್ವಾಕಾಂಕ್ಷಿ ಆನಿಮೇಟರ್ ಮ್ಯಾಕ್ಸಿನ್ ಜಾರ್ಡಿನರ್ ಅವರು ಪಾತ್ರಗಳನ್ನು ಸ್ಕ್ರಾಲ್ ಮಾಡುವುದು ಮತ್ತು ಜಂಪ್ ಮಾಡುವುದು ಮತ್ತು ಪಾತ್ರದ ಭಾಗಗಳನ್ನು ಸರಿಯಾದ ಸ್ಥಾನದಲ್ಲಿ ಇರಿಸುವುದು ಮುಂತಾದ ಮೂಲಭೂತ ಅಂಶಗಳನ್ನು ಕಲಿಯುತ್ತಿದ್ದೇನೆ ಎಂದು ವಿಷಯ ಹಂಚಿಕೊಂಡಿದ್ದಾರೆ. “ನಾವು ಕೀಫ್ರೇಮ್‌ಗಳ ಬ್ಯಾಕೆಂಡ್ ಬಗ್ಗೆಯೂ ಕಲಿಯುತ್ತಿದ್ದೇವೆ. ಹೊಸ ಜನರನ್ನು ಭೇಟಿ ಮಾಡಲು ಮತ್ತು ಆಸಕ್ತಿದಾಯಕ ಚಲನಚಿತ್ರಗಳನ್ನು ವೀಕ್ಷಿಸಲು ಚಿತ್ರೋತ್ಸವವು ಉತ್ತಮ ಅನುಭವವಾಗಿದೆ. ಸಂವಾದ ಚರ್ಚೆಗಳನ್ನು ನಾನು ನಿಜವಾಗಿಯೂ ಆನಂದಿಸಿದೆ. ಎಲ್ಲರೂ ಸಂಪೂರ್ಣ ತೊಡಗಿಸಿಕೊಂಡಿದ್ದು, ವಿಭಿನ್ನ ಚಲನಚಿತ್ರ ನಿರ್ಮಾಪಕರ ಒಳನೋಟಗಳನ್ನು ನೀಡುತ್ತಿದ್ದಾರೆ. ವೈವಿಧ್ಯಮಯ ಕಥೆಗಳನ್ನು ದಾಖಲಿಸುವ ಮತ್ತು ಹಂಚಿಕೊಳ್ಳುವ ಬಗ್ಗೆ ಪ್ರಾಮುಖ್ಯತೆ ನೀಡುತ್ತಾರೆ. ನಾನು ಹೆಚ್ಚಿನ ಚಲನಚಿತ್ರಗಳನ್ನು ನೋಡಲು ಎದುರು ನೋಡುತ್ತಿದ್ದೇನೆ, ”ಎಂದು ಮ್ಯಾಕ್ಸಿನ್ ಹೇಳಿದ್ದಾರೆ.

 

(ಫೋಟೊ: 18ನೇ ಎಂಐಎಫ್ಎಫ್ ನಲ್ಲಿ ಆನಿಮೇಷನ್ ಕಾರ್ಯಾಗಾರ ಮತ್ತು ವಿಎಫ್ಎಕ್ಸ್ ಸರಣಿ ಪ್ರಗತಿಯಲ್ಲಿದೆ)

 

ಸ್ವತಂತ್ರ ಉದ್ಯೋಗಿ ಮತ್ತು ನಿವೃತ್ತ ಪಾಲಿಮರ್ ತಂತ್ರಜ್ಞ ಜೋಸ್ ಪಾಲ್ ಅವರು ಸ್ವತಃ ಕೌಶಲ್ಯ ಹೆಚ್ಚಿಸಿಕೊಳ್ಳಲು ಮತ್ತು ಆನಿಮೇಷನ್ ಕಲಿಯಲು ಈ ಕೋರ್ಸ್‌ಗೆ ನೋಂದಾಯಿಸಿಕೊಂಡಿದ್ದಾರೆ. ಇದು ಅವರ ವೃತ್ತಿಪರ ಬೆಳವಣಿಗೆಗೆ ಸಹಾಯ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ. “ಇಲ್ಲಿ ಆನಿಮೇಟರ್‌ಗಳಿಗೆ ಸಾಕಷ್ಟು ಅವಕಾಶವಿದೆ. ಈ ಕೋರ್ಸ್‌ನ ಮೂಲ ಕಲ್ಪನೆಯು ಆನಿಮೇಷನ್‌ನಲ್ಲಿ ಆಸಕ್ತಿ ಹುಟ್ಟುಹಾಕುವುದಾಗಿದೆ. ಇದರಿಂದ ಹೆಚ್ಚಿನ ಜನರು ಈ ಉದಯೋನ್ಮುಖ ಕ್ಷೇತ್ರದಲ್ಲಿ ವೃತ್ತಿಜೀವನ ಆಯ್ಕೆ ಮಾಡಿಕೊಳ್ಳುತ್ತಾರೆ, ”ಎಂದು ಅವರು ಹೇಳಿದರು.

ಕಾರ್ಯಾಗಾರದಲ್ಲಿ ಭಾಗವಹಿಸಿರುವವರಿಗೆ ಚಲನಚಿತ್ರೋತ್ಸವವನ್ನು ಅನುಭವಿಸಲು ಮತ್ತು ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರಗಳು ಮತ್ತು ಆನಿಮೇಷನ್ ಕಿರುಚಿತ್ರಗಳಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಲಾಗಿದೆ. ಅವರು ಉದ್ಯಮದ ತಜ್ಞರು ಮತ್ತು ಗಣ್ಯರ ನೇತೃತ್ವದ ವಿಶೇಷ ಮಾಸ್ಟರ್‌ಕ್ಲಾಸ್ ಕಲಾಪಗಳಿಗೆ ಹಾಜರಾಗುತ್ತಿದ್ದಾರೆ. ಕಾರ್ಯಾಗಾರವು 2024 ಜೂನ್ 20ರಂದು ಮುಕ್ತಾಯಗೊಳ್ಳುತ್ತದೆ.

 

*****



(Release ID: 2026381) Visitor Counter : 21