ಗೃಹ ವ್ಯವಹಾರಗಳ ಸಚಿವಾಲಯ

ಹೊಸದಿಲ್ಲಿಯಲ್ಲಿ ಇಂದು ಮಣಿಪುರದ ಭದ್ರತಾ ಪರಿಸ್ಥಿತಿ ಪರಿಶೀಲಿಸಲು ಉನ್ನತ ಮಟ್ಟದ ಸಭೆ;  ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅಧ್ಯಕ್ಷತೆ 


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಸರ್ಕಾರವು ಮಣಿಪುರದ ಎಲ್ಲ ನಾಗರಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಂಪೂರ್ಣ ಬದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವರ  ಹೇಳಿಕೆ.

ಮಣಿಪುರದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಪುನಃಸ್ಥಾಪಿಸಲು ಕೇಂದ್ರ ಪಡೆಗಳ ವ್ಯೂಹಾತ್ಮಕ ನಿಯೋಜನೆಗೆ ಒತ್ತು ನೀಡಿದ ಶ್ರೀ ಅಮಿತ್ ಶಾ, ಅಗತ್ಯವಿದ್ದರೆ ಪಡೆಗಳನ್ನು ಹೆಚ್ಚಿಸಲಾಗುವುದು ಎಂದು ಭರವಸೆ

ಗೃಹ ಸಚಿವರು ಪರಿಹಾರ ಶಿಬಿರಗಳ ಪರಿಸ್ಥಿತಿಯನ್ನು ಅವಲೋಕಿಸಿದರು ಮತ್ತು ಆಹಾರ, ನೀರು, ಔಷಧಿಗಳು ಹಾಗು  ಇತರ ಮೂಲಭೂತ ಸೌಕರ್ಯಗಳ ಸರಿಯಾದ ಲಭ್ಯತೆಗೆ ನಿರ್ದೇಶನ ನೀಡಿದರು

ಹಿಂಸಾಚಾರದಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಗೃಹ ಸಚಿವರ ನಿರ್ದೇಶನ

ಸ್ಥಳಾಂತರಗೊಂಡ ಜನರಿಗೆ ಸರಿಯಾದ ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯಗಳು ಮತ್ತು ಅವರ ಪುನರ್ವಸತಿಯನ್ನು ಖಚಿತಪಡಿಸಿಕೊಳ್ಳಲು ಮಣಿಪುರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ ಶ್ರೀ ಅಮಿತ್ ಶಾ 

ಜನಾಂಗೀಯ ವಿಭಜನೆಯನ್ನು ನಿವಾರಿಸಲು ಗೃಹ ಸಚಿವಾಲಯವು ಮೈತೀಗಳು ಮತ್ತು ಕುಕಿಗಳ ಎರಡೂ ಗುಂಪುಗಳೊಂದಿಗೆ ಆದಷ್ಟು ಬೇಗ ಮಾತುಕತೆ ನಡೆಸಲಿದೆ ಎಂದು ಕೇಂದ್ರ ಗೃಹ ಸಚಿವರ ಹೇಳಿಕೆ

Posted On: 17 JUN 2024 8:33PM by PIB Bengaluru

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಹೊಸದಿಲ್ಲಿಯಲ್ಲಿ ಮಣಿಪುರದ ಭದ್ರತಾ ಪರಿಸ್ಥಿತಿಯನ್ನು ಅವಲೋಕಿಸಲು ಆಯೋಜಿಸಲಾದ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ಕೇಂದ್ರ ಗೃಹ ಕಾರ್ಯದರ್ಶಿ, ಗುಪ್ತಚರ ಬ್ಯೂರೋ (ಐಬಿ) ನಿರ್ದೇಶಕ, ಭೂ ಸೇನಾ ಮುಖ್ಯಸ್ಥ (ನಿಯೋಜಿತ) ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ, ಮಣಿಪುರ ಸರ್ಕಾರದ ಭದ್ರತಾ ಸಲಹೆಗಾರರು, ಅಸ್ಸಾಂ ರೈಫಲ್ಸ್ ಮಹಾನಿರ್ದೇಶಕರು, ಮುಖ್ಯ ಕಾರ್ಯದರ್ಶಿ, ಮಣಿಪುರದ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಮತ್ತು ಸೇನೆ ಹಾಗು ಗೃಹ ಸಚಿವಾಲಯದ (ಎಂಎಚ್ಎ) ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

 

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಮಣಿಪುರದ ಭದ್ರತಾ ಪರಿಸ್ಥಿತಿಯ ಸಮಗ್ರ ಪರಿಶೀಲನೆ ನಡೆಸಿದರು ಮತ್ತು ಮಣಿಪುರದಲ್ಲಿ ಯಾವುದೇ ಹಿಂಸಾಚಾರದ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ನಿರ್ದೇಶನ ನೀಡಿದರು. ಮಣಿಪುರದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಪುನಃಸ್ಥಾಪಿಸಲು ಕೇಂದ್ರ ಪಡೆಗಳ ವ್ಯೂಹಾತ್ಮಕ ನಿಯೋಜನೆಯನ್ನು ಗೃಹ ಸಚಿವರು ಒತ್ತಿ ಹೇಳಿದರು. ಅಗತ್ಯವಿದ್ದರೆ ಪಡೆಗಳನ್ನು ಹೆಚ್ಚಿಸಲಾಗುವುದು ಎಂದು ಅವರು ಹೇಳಿದರು. ಹಿಂಸಾಚಾರ ನಡೆಸುವ  ದುಷ್ಕರ್ಮಿಗಳ ವಿರುದ್ಧ ಕಾನೂನಿನ ಪ್ರಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಗೃಹ ಸಚಿವರು ನಿರ್ದೇಶನ ನೀಡಿದರು.

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಸರ್ಕಾರವು ಮಣಿಪುರದ ಎಲ್ಲ ನಾಗರಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಂಪೂರ್ಣ ಬದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಶ್ರೀ ಅಮಿತ್ ಶಾ ಅವರು ಪರಿಹಾರ ಶಿಬಿರಗಳಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದರು, ವಿಶೇಷವಾಗಿ ಆಹಾರ, ನೀರು, ಔಷಧಿಗಳು ಮತ್ತು ಇತರ ಮೂಲಭೂತ ಸೌಕರ್ಯಗಳ ಸರಿಯಾದ ಲಭ್ಯತೆಗೆ ಸಂಬಂಧಿಸಿದಂತೆಯೂ ಅವರು ಪರಿಶೀಲನೆ ನಡೆಸಿದರು.  ಸ್ಥಳಾಂತರಗೊಂಡ ಜನರಿಗೆ ಸರಿಯಾದ ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯಗಳು ಹಾಗು ಅವರ ಪುನರ್ವಸತಿಯನ್ನು ಖಚಿತಪಡಿಸಿಕೊಳ್ಳಲು ಗೃಹ ಸಚಿವರು ಮಣಿಪುರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದರು.

 

ಪ್ರಸ್ತುತ ನಡೆಯುತ್ತಿರುವ ಜನಾಂಗೀಯ ಸಂಘರ್ಷವನ್ನು ಪರಿಹರಿಸಲು ಸಂಘಟಿತ ವಿಧಾನದ ಮಹತ್ವವನ್ನು ಗೃಹ ಸಚಿವರು ಒತ್ತಿ ಹೇಳಿದರು. ಜನಾಂಗೀಯ ವಿಭಜನೆಯನ್ನು ನಿವಾರಿಸಲು ಗೃಹ ಸಚಿವಾಲಯವು ಮೈತಿಗಳು  ಮತ್ತು ಕುಕಿಗಳು ಎಂಬ ಎರಡೂ ಗುಂಪುಗಳೊಂದಿಗೆ ಶೀಘ್ರದಲ್ಲೇ ಮಾತುಕತೆ ನಡೆಸಲಿದೆ ಎಂದೂ ಅವರು ಹೇಳಿದರು. ರಾಜ್ಯದಲ್ಲಿ ಭದ್ರತಾ ಪರಿಸ್ಥಿತಿಯನ್ನು ಬಲಪಡಿಸುವಲ್ಲಿ ಭಾರತ ಸರ್ಕಾರವು ಮಣಿಪುರ ಸರ್ಕಾರಕ್ಕೆ ಸಕ್ರಿಯವಾಗಿ ಬೆಂಬಲ ನೀಡುತ್ತಿದೆ ಎಂದರು.

*****



(Release ID: 2026351) Visitor Counter : 15