ವಾರ್ತಾ ಮತ್ತು ಪ್ರಸಾರ ಸಚಿವಾಲಯ

18ನೇ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ(ಎಂಐಎಫ್ಎಫ್) ಪರಿಸರ ಪ್ರೇರಿತ ಚಲನಚಿತ್ರಗಳ ಗುಚ್ಛದೊಂದಿಗೆ  'ಮಿಷನ್ ಲೈಫ್' ಅನುಸಂಧಾನ ಮಾಡಿಕೊಳ್ಳಿ

Posted On: 17 JUN 2024 11:46AM by PIB Bengaluru

ಸುಸ್ಥಿರ ಜೀವನಶೈಲಿಯನ್ನು ಉತ್ತೇಜಿಸುವ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ನಾಗರಿಕ ಜವಾಬ್ದಾರಿಯ ಪ್ರಜ್ಞೆಯನ್ನು ಮೂಡಿಸುವ ಪ್ರಯತ್ನದ ಭಾಗವಾಗಿ, ʻಮುಂಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವʼದ (ಎಂಐಎಫ್ಎಫ್) 18ನೇ ಆವೃತ್ತಿಯು "ಮಿಷನ್ ಲೈಫ್" ಎಂಬ ವಿಶೇಷ ಪ್ಯಾಕೇಜ್ ಅನ್ನು ಪ್ರಸ್ತುತಪಡಿಸಲಿದೆ. ಸಿಎಂಎಸ್ ವತಾವರನ್ ಅವರು ಪ್ರಸ್ತುತಪಡಿಸುವ ಈ ಸಂಗ್ರಹವು ಮಾನವಕುಲ ಮತ್ತು ಭೂಮಿಯ ನಡುವಿನ ಸಂಕೀರ್ಣ ಮತ್ತು ಸಹಜೀವನದ ಸಂಬಂಧವನ್ನು ಅನ್ವೇಷಿಸುವ ಆಯ್ದ ಐದು ಚಲನಚಿತ್ರಗಳನ್ನು ಒಳಗೊಂಡಿದೆ. ಈ ಚಲನಚಿತ್ರಗಳು ಭೂಗ್ರಹದೊಂದಿಗಿನ ನಮ್ಮ ಆಳವಾದ ನಂಟಿನ ಬಗ್ಗೆ ಮಾರ್ಮಿಕ ನೆನಪುಗಳಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಸಾಮರಸ್ಯದ ಸಹಬಾಳ್ವೆಯ ತುರ್ತು ಅಗತ್ಯವನ್ನು ಒತ್ತಿಹೇಳುತ್ತವೆ.
 
"ಮಿಷನ್ ಲೈಫ್" ವಿಶೇಷ ಪ್ಯಾಕೇಜ್ ಅಡಿಯಲ್ಲಿ ಪ್ರದರ್ಶಿಸಲಾಗುವ ಚಲನಚಿತ್ರಗಳು: 
1.    ಸೇವಿಂಗ್ ದಿ ಡಾರ್ಕ್


 ವಿಶ್ವದ ಜನಸಂಖ್ಯೆಯ 80% ಜನರು ಇನ್ನು ಮುಂದೆ ಆಗಸದಲ್ಲಿ ‌ʻಮಿಲ್ಕಿ ವೇʼ (ಕ್ಷೀರಪಥ) ನೋಡಲು ಸಾಧ್ಯವಿಲ್ಲ. ನಾವು ನಕ್ಷತ್ರಗಳ ನೋಟವನ್ನು ಕಳೆದುಕೊಂಡಾಗ ನಾವು ಏನನ್ನು ಕಳೆದುಕೊಳ್ಳುತ್ತೇವೆ? ಅತಿಯಾದ ಮತ್ತು ಅಸಮರ್ಪಕವಾದ ಬೆಳಕು ನಮ್ಮ ರಾತ್ರಿಯ ಆಗಸವನ್ನು ಕಸಿದುಕೊಳ್ಳುತ್ತದೆ, ನಮ್ಮ ನಿದ್ರೆಯ ಮಾದರಿಗಳನ್ನು ಅಡ್ಡಿಪಡಿಸುತ್ತದೆ ಮತ್ತು ನಿಶಾಚರ ಜೀವಿಗಳಿಗೆ ಅಪಾಯವನ್ನುಂಟುಮಾಡುತ್ತದೆ. ಎಲ್ಇಡಿ ತಂತ್ರಜ್ಞಾನದಲ್ಲಿನ ಪ್ರಸ್ತುತ ಪ್ರಗತಿಯು ಹಲವಾರು ನಗರಗಳಿಗೆ ರಾತ್ರಿಯ ವಾತಾವರಣಕ್ಕೆ ಅಡ್ಡಿಯಾಗದಂತೆ ತಮ್ಮ ಬೀದಿಗಳನ್ನು ಸುರಕ್ಷಿತವಾಗಿ ಬೆಳಗಿಸಲು ಮತ್ತು ಶಕ್ತಿಯನ್ನು ಉಳಿಸಲು ಅನುವು ಮಾಡಿಕೊಟ್ಟಿದೆ. 'ಸೇವಿಂಗ್ ದಿ ಡಾರ್ಕ್' ಚಲನಚಿತ್ರವು ರಾತ್ರಿ ಆಕಾಶವನ್ನು ಸಂರಕ್ಷಿಸುವ ಅಗತ್ಯವನ್ನು ಮತ್ತು ಬೆಳಕಿನ ಮಾಲಿನ್ಯವನ್ನು ಎದುರಿಸಲು ನಾವು ಏನು ಮಾಡಬಹುದು ಎಂಬುದನ್ನು ಅನ್ವೇಷಿಸುತ್ತದೆ.
 
2.    ಲಕ್ಷ್ಮಣ-ರೇಖಾ 


 "ಲಕ್ಷ್ಮಣ್-ರೇಖಾ" ಚಿತ್ರವು ಶಾಲೆಯಿಂದ ಹೊರಗುಳಿದ ಲಕ್ಷ್ಮಣ್ ಸಿಂಗ್, ಬರಪೀಡಿತ ಹಳ್ಳಿಯನ್ನು ಸ್ವಯಂಪ್ರೇರಿತ ಶಕ್ತಿಯಾಗಿ ಹೇಗೆ ಹುರಿದುಂಬಿಸಿದರು ಮತ್ತು ಥಾರ್ ಮರುಭೂಮಿಯ (ಗ್ರೇಟ್ ಇಂಡಿಯನ್ ಡೆಸರ್ಟ್) 58 ಹಳ್ಳಿಗಳ ಹಣೆಬರಹವನ್ನು ಹೇಗೆ ಬದಲಾಯಿಸಿದರು ಎಂಬುದರ ಬಗ್ಗೆ ಆಳವಾದ, ಸಿನಿಮೀಯ ಕಥಾಹಂದರವನ್ನು ಒಳಗೊಂಡಿದೆ. ಇಂದಿಗೂ ಇಲ್ಲಿ ನೀರು ಸರಬರಾಜು ವ್ಯತ್ಯಯದಿಂದ ಕೂಡಿದೆ ಮತ್ತು ಅವರು ಪ್ರತಿ ಹನಿ ನೀರನ್ನು ಸಂರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸುವ ಧ್ಯೇಯವನ್ನು ಮುಂದುವರಿಸಿದ್ದಾರೆ. ಆದರೆ ಜನರು ಅವರನ್ನು ಗಂಭೀರವಾಗಿ ಪರಿಗಣಿಸುತ್ತಾರೆಯೇ ಅಥವಾ ಅವರು ಪವಾಡಕ್ಕಾಗಿ ಕಾಯುತ್ತಿದ್ದಾರೆಯೇ?
 
3.    ದಿ ಕ್ಲೈಮೇಟ್ ಚಾಲೆಂಜ್

 


 

 

ನಾವು ಹವಾಮಾನ ಬಿಕ್ಕಟ್ಟಿನ ಅಂಚಿನಲ್ಲಿದ್ದೇವೆ. ಹವಾಮಾನ ಬದಲಾವಣೆಯ ಪರಿಣಾಮವನ್ನು ತೀವ್ರವಾಗಿ ಎದುರಿಸುತ್ತಿರುವ ಪ್ರದೇಶಗಳೆಂದರೆ ವಿಶ್ವದ ಕ್ರಯೋಸ್ಫೆರಿಕ್ ಪ್ರದೇಶಗಳು (ಆರ್ಕ್ಟಿಕ್, ಅಂಟಾರ್ಕ್ಟಿಕ್ ಮತ್ತು ಹಿಮಾಲಯ) ಹಾಗೂ ಸಾಗರಗಳು. ಇತ್ತೀಚಿನ ವರ್ಷಗಳಲ್ಲಿ ಆರ್ಕ್ಟಿಕ್ ಮಹಾಸಾಗರದ ಹಿಮದ ಹೊದಿಕೆ ಶೇಕಡಾ 30ಕ್ಕಿಂತ ಕಡಿಮೆಯಾಗಿದೆ ಮತ್ತು ಈ ಪ್ರದೇಶವು ವೇಗವಾಗಿ ಕರಗುವಿಕೆಗೆ ಸಾಕ್ಷಿಯಾಗುತ್ತಿದೆ. ವಿಜ್ಞಾನಿಗಳು ಈಗ ಇತ್ತೀಚಿನ ತಂತ್ರಜ್ಞಾನವನ್ನು ಬಳಸಿ, ಭೂಗ್ರಹದ ಕೆಲವು ಕಠಿಣ ಪರಿಸ್ಥಿತಿಗಳಲ್ಲಿ ಈ ವಿದ್ಯಮಾನಗಳನ್ನು ಅಧ್ಯಯನ ಮಾಡುತ್ತಿದಾರೆ. ʻಕ್ಲೈಮೇಟ್ ಚಾಲೆಂಜ್ʼ ಚಿತ್ರವು ನಿಮ್ಮನ್ನು ಆರ್ಕ್ಟಿಕ್, ಹಿಮಾಲಯ ಮತ್ತು ದಕ್ಷಿಣ ಮಹಾಸಾಗರದಲ್ಲಿ ಕೆಲವೊಂದು ಮಾರಣಾಂತಿಕ ಸಂದರ್ಭಗಳಿಗೆ ಸಾಕ್ಷಿಯಾಗಿಸುತ್ತದೆ ಮತ್ತು ಕಾರಣಗಳನ್ನು ಅರ್ಥಮಾಡಿಕೊಳ್ಳುವ ಪ್ರಯಾಣದಲ್ಲಿ ನಿಮ್ಮನ್ನು ಕರೆದೊಯ್ಯುತ್ತದೆ.
 
4.    ದಿ ಜೋವರ್ ಬ್ಯಾಲಡ್(ಜೋಳದ ಗಾಥೆ)


 
ಸಿರಿಧಾನ್ಯಗಳ ಸ್ಥಳೀಯ ಪ್ರಭೇದಗಳು, ವೈವಿಧ್ಯಮಯ ಪಾಕಪದ್ಧತಿ, ಸಿರಿಧಾನ್ಯಗಳನ್ನು ಬೆಳೆಯುವ ಸಾಂಪ್ರದಾಯಿಕ ಅಭ್ಯಾಸ ಹಾಸುಹೊಕ್ಕಾಗಿ ಬೆರೆತಿರುವುದು ʻಜೋವರ್ ಬ್ಯಾಲಡ್ʼ ಚಿತ್ರದಲ್ಲಿ ಜೀವಂತವಾಗಿದೆ. ಶ್ರೀಮಂತ ಸಂಪ್ರದಾಯಗಳು ಹಾಡುಗಳು, ಆಚರಣೆಗಳು, ಕಥೆಗಳ ಮೂಲಕ ಇದು ಇಲ್ಲಿ ಪ್ರಕಟವಾಗುತ್ತದೆ, ಜೊತೆಗೆ ಒಣಭೂಮಿಗಳಲ್ಲಿ ಸಿರಿಧಾನ್ಯಗಳ ಅವನತಿಯ ಬಗ್ಗೆ ರೈತರ ವಿಷಾದವನ್ನೂ ಇದು ತೆರದಿಡುತ್ತದೆ. ಹೊಸ ಕೃಷಿ ಬೆಳೆ ಪ್ರಭೇದಗಳು ಆರೋಗ್ಯ ಮತ್ತು ಕೊಯ್ಲಿಗೆ ಮಾರಕವಾಗಿವೆ ಎಂದು ಹಿರಿಯರು ಪುನರುಚ್ಚರಿಸುತ್ತಾರೆ.
 
5.    ಪೆಂಗ್ ಯು ಸಾಯಿ


 
ʻಪೆಂಗ್ ಯು ಸಾಯ್ʼ ಒಂದು ತನಿಖಾ ಸಾಕ್ಷ್ಯಚಿತ್ರವಾಗಿದ್ದು, ಇದು ಭಾರತದ ಸಾಗರಗಳಿಂದ ʻಮಂಟಾ ರಾಯ್ʼಗಳ (ಒಂದು ಬಗೆಯ ಮೀನು) ಅಕ್ರಮ ವ್ಯಾಪಾರದ ಬಗ್ಗೆ ಬೆಳಕು ಚೆಲ್ಲುತ್ತದೆ. ಈ ಸಾಕ್ಷ್ಯಚಿತ್ರದ ಮೂಲಕ, ವನ್ಯಜೀವಿ ನಿರೂಪಕಿ ಮಲೈಕಾ ವಾಜ್ ಅವರು ಹಿಂದೂ ಮಹಾಸಾಗರದ ಮೀನುಗಾರಿಕಾ ಹಡಗುಗಳಿಂದ ಹಿಡಿದು ಇಂಡೋ-ಮ್ಯಾನ್ಮಾರ್ ಗಡಿಯವರೆಗೆ ಅಕ್ರಮ ವ್ಯಾಪಾರದ ಜಾಲವನ್ನು ಅನುಸರಿಸುತ್ತಾರೆ ಮತ್ತು ಅಂತಿಮವಾಗಿ ಹಾಂಗ್ ಕಾಂಗ್ ಮತ್ತು ಚೀನಾದ ಗುವಾಂಗ್ಝೌನ ಕೇಂದ್ರಗಳಲ್ಲಿ ವನ್ಯಜೀವಿ ಕಳ್ಳಸಾಗಣೆಯನ್ನು ಬಯಲು ಮಾಡುತ್ತಾರೆ. ದಾರಿಯುದ್ದಕ್ಕೂ – ಅವರು ಮೀನುಗಾರರು, ಮಧ್ಯವರ್ತಿಗಳು, ಕಳ್ಳಸಾಗಣೆದಾರರು, ಸಶಸ್ತ್ರಪಡೆಗಳ ಸಿಬ್ಬಂದಿ ಮತ್ತು ವನ್ಯಜೀವಿ ವ್ಯಾಪಾರದ ಕಿಂಗ್ಪಿನ್ಗಳನ್ನು ಭೇಟಿಯಾಗುತ್ತಾರೆ, ಈ ಭವ್ಯವಾದ ದೈತ್ಯ ಸಾಗರ ಜೀವಿಗಳನ್ನು ರಕ್ಷಿಸಲು ಏನು ಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ.
 

 

*****



(Release ID: 2025977) Visitor Counter : 19