ಕೃಷಿ ಸಚಿವಾಲಯ

ಕೇಂದ್ರ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರಿಂದ ಅಧಿಕೃತವಾಗಿ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಅಧಿಕಾರ ವಹಿಸಿಕೊಂಡರು


ರಾಜ್ಯ ಸಚಿವರಾದ ಶ್ರೀ ರಾಮನಾಥ್ ಠಾಕೂರ್ ಮತ್ತು ಶ್ರೀ ಭಾಗೀರಥ್ ಚೌಧರಿ ಸಹ ಅಧಿಕಾರ ಸ್ವೀಕಾರ

Posted On: 11 JUN 2024 3:09PM by PIB Bengaluru

ಕೇಂದ್ರ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರಿಂದು ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಅಧಿಕಾರ ವಹಿಸಿಕೊಂಡರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಪ್ರಧಾನಮಂತ್ರಿಗಳು ತೆಗೆದುಕೊಂಡ ಮೊದಲ ನಿರ್ಧಾರ ರೈತರ ಹಿತದೃಷ್ಟಿಯಿಂದ ಎಂಬುದನ್ನು ತಿಳಿಸಲು ತಮಗೆ ಹರ್ಷವಾಗುತ್ತದೆ ಎಂದರು. ರೈತರ ಆದಾಯವನ್ನು ದ್ವಿಗುಣಗೊಳಿಸಲು ಪ್ರಧಾನಮಂತ್ರಿಗಳು ದೃಢ ಸಂಕಲ್ಪ ಮಾಡಿದ್ದು, ಸರ್ಕಾರ ರೈತರ ಹಿತಕ್ಕಾಗಿ ಎಲ್ಲಾ ಸಾಧ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ರೈತರ ಕಲ್ಯಾಣಕ್ಕಾಗಿ ಬದ್ಧವಾಗಿ ಕಳೆದ ಹತ್ತು ವರ್ಷಗಳಿಂದ ಎನ್ ಡಿ ಎ ಸರ್ಕಾರ ಕಾರ್ಯನಿರ್ವಹಿಸಿದ್ದು, ತಮ್ಮ ಸಚಿವಾಲಯ ಗುರಿ ಸಾಧನೆಯೆಡೆಗೆ ತನ್ನ ಕಾರ್ಯ ಮುಂದುವರಿಸಲಿದೆ ಎಂದು ತಿಳಿಸಿದರು. 

 

ಅಧಿಕಾರ ಸ್ವೀಕರಿಸಿದ ಬಳಿಕ, ಸಚಿವರು ಸಚಿವಾಲಯದ ವಿವಿಧ ಕಚೇರಿಗಳಿಗೆ ಭೇಟಿ ನೀಡಿ, ಸ್ವಚ್ಛತಾ ಕಾರ್ಮಿಕರೂ ಸೇರಿದಂತೆ ವಿವಿಧ ಹಂತಗಳ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ರೈತರ ಕಲ್ಯಾಣಕ್ಕಾಗಿನ ಸರ್ಕಾರ ಮುನ್ನೋಟದ ಸಾಕಾರಕ್ಕೆ ತಂಡವಾಗಿ ಕಾರ್ಯನಿರ್ವಹಿಸುವಂತೆ ಮತ್ತು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸುವಂತೆ ಪ್ರೇರೇಪಿಸಿದರು. ಇದೇ ವೇಳೆ ಅವರು ಸಚಿವಾಲಯದಲ್ಲಿನ ಕೃಷಿ ಏಕೀಕೃತ ಆಜ್ಞೆ ಮತ್ತು ನಿಯಂತ್ರಣ ಕೇಂದ್ರಕ್ಕೂ ಭೇಟಿ ನೀಡಿ, ಬೇಸಾಯ (ಬೆಳೆ ಉತ್ಪಾದನೆ) ಮತ್ತು ಬರ ಸಿದ್ಧತೆ ಸೇರಿದಂತೆ ದೇಶದಲ್ಲಿನ ಕೃಷಿ ವಲಯದ ಪರಾಮರ್ಶೆಗೆ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು. 

 

ಬಳಿಕ ಅವರು, ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸಚಿವಾಲಯದ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಅಗತ್ಯದ ಬಗ್ಗೆ ಒತ್ತಿ ಹೇಳಿದರು. ಇದೇ ವೇಳೆ ಸಚಿವರು, ಕೃಷಿಕರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿಗಾಗಿನ ಸರ್ಕಾರದ ಪ್ರಣಾಳಿಕೆಯನ್ನು ನೀಡಿ, ಈ ಗುರಿಗಳ ಈಡೇರಿಕೆಗೆ ಪ್ರತಿಯೊಬ್ಬರೂ ಶ್ರಮಿಸುವಂತೆ ಕರೆ ನೀಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೂರದೃಷ್ಟಿಯ ನಾಯಕರಾಗಿದ್ದು, ಪ್ರಣಾಳಿಕೆಯಲ್ಲಿ ನಿಗದಿಪಡಿಸಿರುವ ಗುರಿಗಳನ್ನು ಸಾಧಿಸಲು ಮಾರ್ಗಸೂಚಿ ರೂಪಿಸುವ ಸಂಬಂಧ ಸಿಬ್ಬಂದಿ ಶ್ರಮಿಸುವಂತೆ ಶ್ರೀ ಚೌಹಾನ್ ತಿಳಿಸಿದರು. ಅನ್ನದಾತರ ಜೀವನ ಸುಧಾರಣೆಯೇ ತಮ್ಮ ಸಚಿವಾಲಯದ ಪ್ರಮುಖ ಗುರಿಯಾಗಿರಬೇಕು ಎಂದು ಅವರು ಹೇಳಿದರು. 

 

ಶ್ರೀ ರಾಮನಾಥ ಠಾಕೂರ್ ಮತ್ತು ಶ್ರೀ ಭಗೀರಥ ಚೌಧರಿ ಅವರುಗಳು ಸಹ ಇದೇ ಸಂದರ್ಭದಲ್ಲಿ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವರುಗಳಾಗಿ ಅಧಿಕಾರ ವಹಿಸಿಕೊಂಡರು. ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಶ್ರೀ. ಮನೋಜ್ ಅಹುಜಾ, ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆ ಕಾರ್ಯದರ್ಶಿ ಶ್ರೀ.ಹಿಮಾಂಶು ಪಾಠಕ್ ಮತ್ತು ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಸನ್ಮಾನ್ಯ ಸಚಿವರುಗಳನ್ನು ಸ್ವಾಗತಿಸಿದರು.
 

*****



(Release ID: 2025027) Visitor Counter : 21