ಜಲ ಶಕ್ತಿ ಸಚಿವಾಲಯ

ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವರಾಗಿ ಶ್ರೀ ವಿ. ಸೋಮಣ್ಣ ಅಧಿಕಾರ ಸ್ವೀಕಾರ


ಕಳೆದ 5 ವರ್ಷಗಳಲ್ಲಿ 11 ಕೋಟಿ ಗ್ರಾಮೀಣ ಕುಟುಂಬಗಳು ಪೈಪ್‌ಲೈನ್‌ ನೀರು ಪೂರೈಕೆಗೆ ಸೇರ್ಪಡೆಯಾಗಿವೆ; ಭಾರತದ 93%ಗಿಂತ ಹೆಚ್ಚಿನ ಹಳ್ಳಿಗಳು ಬಯಲು ಶೌಚ ಮುಕ್ತ (ಒಡಿಎಫ್)ವಾಗಿವೆ: ಶ್ರೀ ವಿ. ಸೋಮಣ್ಣ

ಈ ಸಾಧನೆ ಆಧರಿಸಿ, 2025 ಮಾರ್ಚ್  ಒಳಗೆ ಎಲ್ಲಾ ಗ್ರಾಮಗಳನ್ನು ಒಡಿಎಫ್ ಪ್ಲಸ್ ಮಾದರಿ ವರ್ಗಕ್ಕೆ ತರಲು ನಾವು ಶ್ರಮಿಸುತ್ತೇವೆ: ಶ್ರೀ ವಿ. ಸೋಮಣ್ಣ

Posted On: 12 JUN 2024 1:08PM by PIB Bengaluru

ನವದೆಹಲಿಯಲ್ಲಿಂದು ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವರಾಗಿ ಶ್ರೀ ವಿ.ಸೋಮಣ್ಣ ಅವರು ಅಧಿಕಾರ ಸ್ವೀಕರಿಸಿದರು. ಅಧಿಕಾರ ವಹಿಸಿಕೊಂಡ ನಂತರ ಮಾತನಾಡಿದ ಸಚಿವರು, ತಮ್ಮ ಮೇಲೆ ವಿಶ್ವಾಸವಿಟ್ಟು ಸಚಿವ ಖಾತೆ ನೀಡಿದ ಪ್ರಧಾನಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. "ಕಳೆದ 10 ವರ್ಷಗಳಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕ್ರಿಯಾಶೀಲ ನಾಯಕತ್ವದಲ್ಲಿ ದೇಶವು ಗಮನಾರ್ಹ ಬೆಳವಣಿಗೆ ಕಂಡಿದೆ". ಸರ್ಕಾರದ 3ನೇ ಅವಧಿಯಲ್ಲೂ ಅಭಿವೃದ್ಧಿಯ ವೇಗವನ್ನು ಮುಂದುವರಿಸುವ ದೃಢ ಸಂಕಲ್ಪವನ್ನು ಸಚಿವರು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಜಲ ಜೀವನ್ ಮಿಷನ್ ಅಡಿ, ಕಳೆದ 5 ವರ್ಷಗಳಲ್ಲಿ 11 ಕೋಟಿಗೂ ಹೆಚ್ಚು ಗ್ರಾಮೀಣ ಕುಟುಂಬಗಳು ಪೈಪ್‌ಲೈನ್ ಮೂಲಕ ನೀರು ಪೂರೈಕೆಗೆ ಸೇರ್ಪಡೆ ಆಗಿವೆ. ಈಗ 76%ಗಿಂತ ಹೆಚ್ಚಿನ ಗ್ರಾಮೀಣ ಕುಟುಂಬಗಳಲ್ಲಿ ಪ್ರತಿ ವ್ಯಕ್ತಿಗೆ 55 ಲೀಟರ್ ಗುಣಮಟ್ಟದ ನೀರು ಒದಗಿಸಲಾಗುತ್ತಿದೆ. ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ್) ಅಡಿ, ಭಾರತದ 93%ಗಿಂತ ಹೆಚ್ಚಿನ ಹಳ್ಳಿಗಳನ್ನು ಬಯಲು ಶೌಚ ಮುಕ್ತ (ಒಡಿಎಫ್) ಪ್ಲಸ್ ಮಾಡಲಾಗಿದೆ. ಆದರೆ ಸುಮಾರು 33% ಒಡಿಎಫ್ ಪ್ಲಸ್ ಮಾದರಿ ಗ್ರಾಮ ವರ್ಗವನ್ನು ಸಾಧಿಸಲಾಗಿದೆ. "ಈ ಸಾಧನೆ ಆಧರಿಸಿ, ನಾವು 2025 ಮಾರ್ಚ್ ವೇಳೆಗೆ ಎಲ್ಲಾ ಹಳ್ಳಿಗಳನ್ನು ಒಡಿಎಫ್ ಪ್ಲಸ್ ಮಾದರಿ ವರ್ಗಕ್ಕೆ ತರಲು ಶ್ರಮಿಸುತ್ತೇವೆ" ಎಂದು ಸಚಿವರು ಹೇಳಿದರು.

ಶ್ರೀ ಸೋಮಣ್ಣ ಅವರು ಕರ್ನಾಟಕ ರಾಜ್ಯದ ತುಮಕೂರು ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾದ ಲೋಕಸಭಾ ಸಂಸದರಾಗಿದ್ದಾರೆ. ಅವರು ಈ ಹಿಂದೆ ರಾಜ್ಯ ಸರ್ಕಾರದಲ್ಲಿ ಸಚಿವ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಅವರು ಇಂದು ಸಿಜಿಒ ಕಾಂಪ್ಲೆಕ್ಸ್ ಕಚೇರಿಗೆ ಆಗಮಿಸಿದಾಗ, ಜಲ ಶಕ್ತಿ ಸಚಿವಾಲಯದ ಕಾರ್ಯದರ್ಶಿ (ಕುಡಿಯುವ ನೀರು ಮತ್ತು ನೈರ್ಮಲ್ಯ) ಶ್ರೀಮತಿ ವಿನಿ ಮಹಾಜನ್ ಅವರು ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಸಚಿವರನ್ನು ಸಚಿವಾಲಯಕ್ಕೆ ಸ್ವಾಗತಿಸಿದರು.

*****

 



(Release ID: 2024713) Visitor Counter : 52