ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಜಾಹೀರಾತುಗಳನ್ನು ಬಿಡುಗಡೆ ಮಾಡುವ ಮೊದಲು ಜಾಹೀರಾತುದಾರರು ಹಾಗೂ ಜಾಹೀರಾತು ಏಜೆನ್ಸಿಗಳಿಂದ ಸ್ವಯಂ ಘೋಷಣೆಯನ್ನು ಸುಪ್ರೀಂ ಕೋರ್ಟ್ ಕಡ್ಡಾಯಗೊಳಿಸಿದೆ 


18ನೇ ಜೂನ್, 2024 ರಿಂದ ಎಲ್ಲಾ ಹೊಸ ಜಾಹೀರಾತುಗಳಿಗೆ ಸ್ವಯಂ ಘೋಷಣೆಯ ಪ್ರಮಾಣಪತ್ರವು ಕಡ್ಡಾಯವಾಗಿದೆ

ಟಿವಿ ಮತ್ತು ರೇಡಿಯೋ ಜಾಹೀರಾತುಗಳಿಗಾಗಿ, ಜಾಹೀರಾತುದಾರರು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಬ್ರಾಡ್ ಕಾಸ್ಟ್ ಸೇವಾ ಪೋರ್ಟಲ್ ನಲ್ಲಿ ಸ್ವಯಂ ಘೋಷಣೆ ಪ್ರಮಾಣಪತ್ರವನ್ನು ಸಲ್ಲಿಸಬೇಕು.

ಮುದ್ರಣ ಮತ್ತು ಡಿಜಿಟಲ್ ಮಾಧ್ಯಮ ಜಾಹೀರಾತುಗಳಿಗಾಗಿ, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಪೋರ್ಟಲ್ನಲ್ಲಿ ಪ್ರಮಾಣಪತ್ರವನ್ನು ಸಲ್ಲಿಸಬೇಕು 

Posted On: 03 JUN 2024 6:32PM by PIB Bengaluru

ಗೌರವಾನ್ವಿತ ಸುಪ್ರೀಂ ಕೋರ್ಟ್, ಐಎಂಎ  & ಎಎನ್ಆರ್ ವರ್ಸಸ್ ಯುಒಐ  & ಇತರರು ರಿಟ್ ಅರ್ಜಿ ಸಿವಿಲ್ ಸಂಖ್ಯೆ. 645/2022 ರಲ್ಲಿ ಯಾವುದೇ ಜಾಹೀರಾತನ್ನು ಪ್ರಕಟಿಸುವ ಅಥವಾ ಪ್ರಸಾರ ಮಾಡುವ ಮೊದಲು ಎಲ್ಲಾ ಜಾಹೀರಾತುದಾರರು ಹಾಗೂ ಜಾಹೀರಾತು ಏಜೆನ್ಸಿಗಳು 'ಸ್ವಯಂ-ಘೋಷಣಾ ಪ್ರಮಾಣಪತ್ರ'ವನ್ನು ಸಲ್ಲಿಸಬೇಕು ಎಂದು 07.05.2024 ದಿನಾಂಕದ ತನ್ನ ಆದೇಶದಲ್ಲಿ ನಿರ್ದೇಶನವನ್ನು ಹೊರಡಿಸಿದೆ.  ಗೌರವಾನ್ವಿತ ಸುಪ್ರೀಂ ಕೋರ್ಟ್ನ ನಿರ್ದೇಶನದ ನಂತರ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಟಿವಿ ಮತ್ತು ರೇಡಿಯೊ ಜಾಹೀರಾತುಗಳಿಗಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ  ಬ್ರಾಡ್ ಕಾಸ್ಟ್ ಸೇವಾ ಪೋರ್ಟಲ್ನಲ್ಲಿ ಮತ್ತು ಮುದ್ರಣ, ಡಿಜಿಟಲ್ ಹಾಗೂ ಜಾಲತಾಣದಲ್ಲಿ ಜಾಹೀರಾತುಗಳಿಗಾಗಿ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಪೋರ್ಟಲ್ ನಲ್ಲಿ ಹೊಸ  ವಿಭಾಗವನ್ನು ಹೊಂದಿದೆ. ಜಾಹೀರಾತುದಾರ ಹಾಗೂ ಜಾಹೀರಾತು ಏಜೆನ್ಸಿಯ ಅಧಿಕೃತ ಪ್ರತಿನಿಧಿಯಿಂದ ಸಹಿ ಮಾಡಲಾದ ಪ್ರಮಾಣಪತ್ರವನ್ನು ಈ ಪೋರ್ಟಲ್ಗಳ ಮೂಲಕ ಸಲ್ಲಿಸಬೇಕಾಗುತ್ತದೆ.

ಪೋರ್ಟಲ್ ಅನ್ನು 4ನೇ ಜೂನ್, 2024 ರಂದು ಸಕ್ರಿಯಗೊಳಿಸಲಾಗುತ್ತದೆ. 18ನೇ ಜೂನ್, 2024 ರಂದು ಅಥವಾ ನಂತರ ನೀಡಲಾಗುವ, ಟೆಲಿಕಾಸ್ಟ್, ಪ್ರಸಾರ ಮತ್ತು ಪ್ರಕಟಿಸುವ ಎಲ್ಲಾ ಹೊಸ ಜಾಹೀರಾತುಗಳಿಗಾಗಿ ಎಲ್ಲಾ ಜಾಹೀರಾತುದಾರರು ಹಾಗೂ ಜಾಹೀರಾತು ಏಜೆನ್ಸಿಗಳು ಸ್ವಯಂ-ಘೋಷಣೆ ಪ್ರಮಾಣಪತ್ರವನ್ನು ಪಡೆಯಬೇಕಾಗುತ್ತದೆ. ಸ್ವಯಂ-ಪ್ರಮಾಣೀಕರಣದ ಪ್ರಕ್ರಿಯೆಯ ಬಗ್ಗೆ ತಿಳಿದುಕೊಳ್ಳಲು ಸಂಬಂಧಪಟ್ಟ ಎಲ್ಲರಿಗೂ ಸಾಕಷ್ಟು ಸಮಯ ಅಂದರೆ ಎರಡು ವಾರಗಳ ಅವಧಿಯನ್ನು ನೀಡಲಾಗಿದೆ. ಚಾಲ್ತಿಯಲ್ಲಿರುವ ಜಾಹೀರಾತುಗಳಿಗೆ ಈಗ  ಸ್ವಯಂ ಪ್ರಮಾಣೀಕರಣವನ್ನು ಸಲ್ಲಿಸುವ ಅಗತ್ಯವಿಲ್ಲ.

ಸ್ವಯಂ ಘೋಷಣೆಯ ಪ್ರಮಾಣಪತ್ರವು ಜಾಹೀರಾತು (i) ತಪ್ಪುದಾರಿಗೆಳೆಯುವ ಪ್ರತಿಪಾದನೆಗಳನ್ನು ಹೊಂದಿಲ್ಲ ಮತ್ತು (ii) ಕೇಬಲ್ ಟೆಲಿವಿಷನ್ ನೆಟ್ವರ್ಕ್ ನಿಯಮಗಳು, 1994 ರ ನಿಯಮ 7 ಮತ್ತು ಪತ್ರಿಕೋದ್ಯಮದ ನಿಯಮಗಳು ಸೇರಿದಂತೆ ಎಲ್ಲಾ ಸಂಬಂಧಿತ ನಿಯಂತ್ರಕ ಮಾರ್ಗಸೂಚಿಗಳನ್ನು  ಮತ್ತು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ನಡವಳಿಕೆಯನ್ನು ಅನುಸರಿಸುತ್ತದೆ ಎಂದು ಪ್ರಮಾಣೀಕರಿಸುವುದು. ಜಾಹೀರಾತುದಾರರು ತಮ್ಮ ದಾಖಲೆಗಳಿಗಾಗಿ ಸಂಬಂಧಿತ ಬ್ರಾಡ್ಕಾಸ್ಟರ್, ಪ್ರಿಂಟರ್, ಪ್ರಕಾಶಕರು ಅಥವಾ ಎಲೆಕ್ಟ್ರಾನಿಕ್ ಮಾಧ್ಯಮ ಪ್ಲಾಟ್ಫಾರ್ಮ್ಗೆ ಸ್ವಯಂ-ಘೋಷಣೆ ಪ್ರಮಾಣಪತ್ರವನ್ನು ಅಪ್ಲೋಡ್ ಮಾಡುವ ಪುರಾವೆಯನ್ನು ಒದಗಿಸಬೇಕು. ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದ ಪ್ರಕಾರ, ಮಾನ್ಯವಾದ ಸ್ವಯಂ-ಘೋಷಣೆ ಪ್ರಮಾಣಪತ್ರವಿಲ್ಲದೆ ದೂರದರ್ಶನ, ಮುದ್ರಣ ಮಾಧ್ಯಮ ಅಥವಾ ಜಾಲತಾಣದಲ್ಲಿ ಯಾವುದೇ ಜಾಹೀರಾತನ್ನು ಹಾಕಲು  ಅನುಮತಿಸಲಾಗುವುದಿಲ್ಲ.

ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನವು ಪಾರದರ್ಶಕತೆ, ಗ್ರಾಹಕರ ರಕ್ಷಣೆ ಮತ್ತು ಜವಾಬ್ದಾರಿಯುತ ಜಾಹೀರಾತು ಅಭ್ಯಾಸಗಳನ್ನು ಖಾತ್ರಿಪಡಿಸುವ ಒಂದು ಹೆಜ್ಜೆಯಾಗಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಎಲ್ಲಾ ಜಾಹೀರಾತುದಾರರು, ಪ್ರಸಾರಕರು ಮತ್ತು ಪ್ರಕಾಶಕರು ಈ ನಿರ್ದೇಶನವನ್ನು ಶ್ರದ್ಧೆಯಿಂದ ಅನುಸರಿಸಲು ಒತ್ತಾಯಿಸುತ್ತದೆ.

ಸ್ವಯಂ ಘೋಷಣೆಯ ಪ್ರಮಾಣಪತ್ರದ ವಿವರವಾದ ಮಾರ್ಗಸೂಚಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

(QR ಕೋಡ್ ಜೊತೆಗೆ ಬಿಎಸ್ ಪಿ ಮತ್ತು ಪಿಸಿಐ  ಪೋರ್ಟಲ್ಗಾಗಿ ಲಿಂಕ್)

http://Embed link for BSP & PCI portal along with QR Code

*****



(Release ID: 2022703) Visitor Counter : 107