ಪ್ರಧಾನ ಮಂತ್ರಿಯವರ ಕಛೇರಿ

ದೇಶದ ಉಷ್ಣ ಅಲೆಯ ಪರಿಸ್ಥಿತಿ ಬಗ್ಗೆ ಮತ್ತು ಮುಂಗಾರು ಆರಂಭದ ಸಿದ್ಧತೆ ಬಗ್ಗೆ ಪರಾಮರ್ಶೆ ನಡೆಸಿದ ಪ್ರಧಾನ ಮಂತ್ರಿಗಳು


ನಿಯಮಿತವಾಗಿ ಅಗ್ನಿ ಅವಘಡಗಳನ್ನು ತಡೆಗಟ್ಟಲು ಮತ್ತು ನಿರ್ವಹಿಸಲು ಸೂಕ್ತ ಕ್ರಮ ಕೈಗೊಳ್ಳಲು ಪ್ರಧಾನಿ ಸೂಚನೆ 

ಆಸ್ಪತ್ರೆಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳ ಅಗ್ನಿಶಾಮಕ ಮತ್ತು ವಿದ್ಯುತ್ ಸುರಕ್ಷತಾ ಲೆಕ್ಕಪರಿಶೋಧನೆಯನ್ನು ನಿಯಮಿತವಾಗಿ ನಡೆಸಲು ಪ್ರಧಾನಿ ಸೂಚನೆ 

ದೇಶದ ಬಹುತೇಕ ಭಾಗಗಳಲ್ಲಿ ಮುಂಗಾರು ಸಾಮಾನ್ಯ ಮತ್ತು ಸಾಮಾನ್ಯಕ್ಕಿಂತ ಹೆಚ್ಚಾಗಿದ್ದು, ಪರ್ಯಾಯ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆಯಾಗಿದೆ ಎಂದು ಪ್ರಧಾನಿಗಳಿಗೆ ಮಾಹಿತಿ

Posted On: 02 JUN 2024 3:00PM by PIB Bengaluru

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಮುಂಜಾನೆ ದೆಹಲಿಯ 7, ಲೋಕ ಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ದೇಶದಲ್ಲಿ ಉಷ್ಣ ಅಲೆಯ ಪರಿಸ್ಥಿತಿ ಮತ್ತು ಮುಂಗಾರು ಆರಂಭದ ಸಿದ್ಧತೆ ಬಗ್ಗೆ ಪರಿಶೀಲಿಸಲು ಸಭೆ ನಡೆಸಿದರು. 

ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ರಾಜಸ್ಥಾನ, ಗುಜರಾತ್ ಮತ್ತು ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ ಉಷ್ಣ ಅಲೆಯು ಮುಂದುವರಿಯುವ ಸಾಧ್ಯತೆಯಿದೆ ಎಂದು ಪ್ರಧಾನಿಗೆ ವಿವರಿಸಲಾಯಿತು. ಈ ವರ್ಷ, ಮುಂಗಾರು ಮಳೆ ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯ ಮತ್ತು ಕೆಲವು ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ಪರ್ಯಾಯ ಭಾರತದ ಕೆಲವು ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಇರುತ್ತದೆ ಎಂದು ಪ್ರಧಾನ ಮಂತ್ರಿಗಳಿಗೆ ಸಭೆಯಲ್ಲಿ ಅಧಿಕಾರಿಗಳು ವಿವರ ನೀಡಿದರು. 

ಅಗ್ನಿ ಅವಘಡಗಳನ್ನು ತಡೆಗಟ್ಟಲು ಮತ್ತು ನಿರ್ವಹಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪ್ರಧಾನ ಮಂತ್ರಿಗಳು ಸೂಚನೆ ನೀಡಿದರು. ಆಸ್ಪತ್ರೆಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳ ಅಗ್ನಿಶಾಮಕ ಮತ್ತು ವಿದ್ಯುತ್ ಸುರಕ್ಷತಾ ಲೆಕ್ಕಪರಿಶೋಧನೆಯನ್ನು ನಿಯಮಿತವಾಗಿ ಕೈಗೊಳ್ಳಬೇಕು. ಅರಣ್ಯಗಳಲ್ಲಿ ಅಗ್ನಿ ಅವಘಡಗಳು ಆಗದಂತೆ ತಪ್ಪಿಸಲು ಮತ್ತು ಜೀವರಾಶಿಯ ಉತ್ಪಾದಕ ಬಳಕೆಗಾಗಿ ನಿಯಮಿತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರಧಾನ ಮಂತ್ರಿಗಳು ಸೂಚಿಸಿದರು. 

ಕಾಡ್ಗಿಚ್ಚುಗಳನ್ನು ಸಮಯೋಚಿತವಾಗಿ ಗುರುತಿಸಲು ಮತ್ತು ಅದರ ನಿರ್ವಹಣೆಯಲ್ಲಿ “ವನ ಅಗ್ನಿ” ಪೋರ್ಟಲ್‌ನ ಉಪಯುಕ್ತತೆಯ ಕುರಿತು ಪ್ರಧಾನ ಮಂತ್ರಿಗಳಿಗೆ ಮಾಹಿತಿ ನೀಡಲಾಯಿತು.

ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ, ಸಂಪುಟ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ, ಡಿಜಿ ಎನ್‌ಡಿಆರ್‌ಎಫ್ ಮತ್ತು ಸದಸ್ಯ ಕಾರ್ಯದರ್ಶಿ, ಪ್ರಧಾನ ಮಂತ್ರಿಗಳ ಕಾರ್ಯಾಲಯದ ಹಿರಿಯ ಅಧಿಕಾರಿಗಳ ಜೊತೆಗೆ ಎನ್‌ಡಿಎಂಎ ಮತ್ತು ಸಂಬಂಧಿಸಿದ ಸಚಿವಾಲಯಗಳ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

*****



(Release ID: 2022569) Visitor Counter : 43