ಉಪರಾಷ್ಟ್ರಪತಿಗಳ ಕಾರ್ಯಾಲಯ

ದೇಶದಲ್ಲಿ ದೈಹಿಕ ಕ್ಷಮತೆ (ಫಿಟ್ನೆಸ್) ಸಂಸ್ಕೃತಿಯನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಒತ್ತಿ ಹೇಳಿದ ಉಪರಾಷ್ಟ್ರಪತಿ


ನಮ್ಮ ಶ್ರೀಮಂತ ಸಾಂಪ್ರದಾಯಿಕ ವೈದ್ಯಕೀಯ ವ್ಯವಸ್ಥೆಗಳು ವಿಜ್ಞಾನ, ತತ್ವಶಾಸ್ತ್ರ ಮತ್ತು ಆಧ್ಯಾತ್ಮಿಕತೆಯ ಪರಿಪೂರ್ಣ ಮಿಶ್ರಣವನ್ನು ಒಳಗೊಂಡಿವೆ - ಉಪರಾಷ್ಟ್ರಪತಿ

ಪಂಚಾಯತ್ ಮಟ್ಟದಲ್ಲಿ ಔಷಧೀಯ ಮತ್ತು ಗಿಡಮೂಲಿಕೆ ಸಸ್ಯಗಳನ್ನು ಉತ್ತೇಜಿಸಲು ಉಪರಾಷ್ಟ್ರಪತಿ ಕರೆ

ಸಿಎಸ್ಆರ್ ಮೂಲಕ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು ಕಾರ್ಪೊರೇಟ್ ನಾಯಕರಿಗೆ ಉಪರಾಷ್ಟ್ರಪತಿ ಮನವಿ

ಸದಾ ಕಲಿಯುತ್ತಲೇ ಇರಿ; ಇದು ಜೀವನಪರ್ಯಂತದ ಪ್ರಕ್ರಿಯೆ – ಉಪರಾಷ್ಟ್ರಪತಿ

ಸೇವೆಗೆ ಆದ್ಯತೆ ಹೊರತು, ಹಣಕಾಸಿನ ಪರಿಗಣನೆ ಅಲ್ಲ ಎಂಬುದು ನಿಮ್ಮ ಪ್ರಾಥಮಿಕ ಧ್ಯೇಯವಾಗಿರಬೇಕು - ವಿದ್ಯಾರ್ಥಿಗಳಿಗೆ ಉಪರಾಷ್ಟ್ರಪತಿ ಸಲಹೆ

ಬೆಳಗಾವಿಯ ಐಸಿಎಂಆರ್- ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟ್ರೆಡಿಷನಲ್ ಮೆಡಿಸಿನ್ (ಎನ್ಐಟಿಎಂ) ನ 18 ನೇ ಸಂಸ್ಥಾಪನಾ ದಿನಾಚರಣೆಯನ್ನುದ್ದೇಶಿಸಿ ಉಪರಾಷ್ಟ್ರಪತಿ ಭಾಷಣ

ಬೆಳಗಾವಿಯ ಕೆಎಲ್ ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ (ಕೆಎಎಚ್ಇಆರ್) ನ 14ನೇ ಘಟಿಕೋತ್ಸವದಲ್ಲಿ ಉಪರಾಷ್ಟ್ರಪತಿ ಭಾಷಣ

Posted On: 27 MAY 2024 3:10PM by PIB Bengaluru

ದೇಶದಲ್ಲಿ ಇಂದು ದೈಹಿಕ ಕ್ಷಮತೆ (ಫಿಟ್ ನೆಸ್) ಸಂಸ್ಕೃತಿಯನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಹೇಳಿದ್ದಾರೆ. ಇದರಿಂದ ಪ್ರತಿಯೊಬ್ಬ ಭಾರತೀಯ ನಾಗರಿಕರೂ ಆರೋಗ್ಯವಂತರಾಗಿರುತ್ತಾರೆ ಮತ್ತು ದೇಹಕ್ಷಮತೆಯನ್ನು ಹೊಂದಿರಲು ಸಾಧ್ಯವಾಗುತ್ತದೆ ಹಾಗು  ಭಾರತದ ಮಾರ್ಚ್ ಫಾರ್ ವಿಕಸಿತ ಭಾರತ್ @ 2047 ಗೆ ಧನಾತ್ಮಕವಾಗಿ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಬೆಳಗಾವಿಯಲ್ಲಿಂದು ಐಸಿಎಂಆರ್ - ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟ್ರೆಡಿಷನಲ್ ಮೆಡಿಸಿನ್ (ಎನ್ಐಟಿಎಂ) ನ 18 ನೇ ಸಂಸ್ಥಾಪನಾ ದಿನಾಚರಣೆಯನ್ನುದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿಗಳು, ಆರೋಗ್ಯದ ವಿಷಯಕ್ಕೆ ಬಂದಾಗ "ನಮ್ಮ ಜ್ಞಾನ, ನಮ್ಮ ಬುದ್ಧಿವಂತಿಕೆಯೊಂದಿಗೆ ಈಗಾಗಲೇ ಏನು ಮೇಳೈಸಿಕೊಂಡಿದೆ" ಎಂಬುದರ ಬಗ್ಗೆ ಗಮನ ಹರಿಸುವ ಅಗತ್ಯವನ್ನು ಒತ್ತಿ ಹೇಳಿದರು.

 

ಆಯುರ್ವೇದ, ಸಿದ್ಧ, ಯುನಾನಿ ಮತ್ತು ಯೋಗವನ್ನು ಒಳಗೊಂಡಿರುವ ಭಾರತದ ಶ್ರೀಮಂತ ಸಾಂಪ್ರದಾಯಿಕ ಔಷಧವು ನಮ್ಮ ಪೂರ್ವಜರ ಆಳವಾದ ಬುದ್ಧಿವಂತಿಕೆಗೆ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟ ಅವರು, "ಅವು ವಿಜ್ಞಾನ, ತತ್ವಶಾಸ್ತ್ರ ಮತ್ತು ಆಧ್ಯಾತ್ಮಿಕತೆಯ ಪರಿಪೂರ್ಣ ಮಿಶ್ರಣವನ್ನು ಸಾಕಾರಗೊಳಿಸುತ್ತವೆ, ಮನಸ್ಸು, ದೇಹ ಮತ್ತು ಆತ್ಮ ಹಾಗು  ಪ್ರಕೃತಿಯ ನಡುವಿನ ಸಾಮರಸ್ಯದ ಸಮತೋಲನವನ್ನು ಒತ್ತಿಹೇಳುತ್ತವೆ" ಎಂದೂ  ಹೇಳಿದರು.

 


ಭವಿಷ್ಯದ ಪೀಳಿಗೆಗಾಗಿ ನಮ್ಮ ಜೀವವೈವಿಧ್ಯತೆ ಮತ್ತು ಸಾಂಪ್ರದಾಯಿಕ ಜ್ಞಾನವನ್ನು ರಕ್ಷಿಸುವ ಅಗತ್ಯವನ್ನು ಒತ್ತಿಹೇಳಿದ ವಿ.ಪಿ.ಧನಕರ್, ಪ್ರತಿ ಗ್ರಾಮದಲ್ಲಿ  ಆರೋಗ್ಯ ಪ್ರಜ್ಞೆ ಮತ್ತು ಆರೋಗ್ಯ ಅರಿವು ಮೂಡಿಸುವ ಮೂಲಕ  ದೇಶವನ್ನು ಆರೋಗ್ಯವಂತವಾಗಿಸುವ  ಪವಿತ್ರ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.  "ಪಂಚಾಯತ್ ಮಟ್ಟದಲ್ಲಿಯೂ ನಾವು ಔಷಧೀಯ ಮತ್ತು ಗಿಡಮೂಲಿಕೆ ಸಸ್ಯಗಳ ಮೇಲೆ ಹೆಚ್ಚಿನ ಗಮನ ಹರಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ. ಕೊನೆಯಲ್ಲಿ ಸಸ್ಯಗಳು ಪ್ರಯೋಗಾಲಯಕ್ಕೆ ಸೇರಿ ನಮ್ಮ ಮೂಲಭೂತ ಅವಶ್ಯಕತೆಗಳನ್ನು ನಮಗೆ ನೀಡುತ್ತವೆ" ಎಂದೂ ಅವರು ಹೇಳಿದರು.

ಆಧುನಿಕ ಕಾಲದ ಅನೇಕ ರೋಗಗಳಿಗೆ ಕೈಗೆಟುಕುವ ಪರಿಹಾರಕ್ಕಾಗಿ ಕೆಲಸ ಮಾಡುತ್ತಿರುವ ಎನ್ಐಟಿಎಂನ ಸಂಶೋಧಕರನ್ನು ಶ್ಲಾಘಿಸಿದ ಉಪರಾಷ್ಟ್ರಪತಿಗಳು, ಸಂಶೋಧನೆ ಮತ್ತು ಅಭಿವೃದ್ಧಿಗೆ ಬೆಂಬಲ ನೀಡಲು ಸಾಧ್ಯವಿರುವ ಎಲ್ಲವನ್ನೂ ಮಾಡುವಂತೆ ಕಾರ್ಪೊರೇಟ್ ಮತ್ತು ಸಾರ್ವಜನಿಕ ನಾಯಕರಿಗೆ ಮನವಿ ಮಾಡಿದರು. "ದಯವಿಟ್ಟು ಮುಂದೆ ಬನ್ನಿ; ಸಂಶೋಧನೆ, ಅಭಿವೃದ್ಧಿ, ನಾವೀನ್ಯತೆ ಮತ್ತು ನವೋದ್ಯಮಗಳನ್ನು ಉತ್ತೇಜಿಸಲು ನಿಮ್ಮ ಸಿಎಸ್ಆರ್ ಅನ್ನು ಬಳಸಿ. ಅದು ನಮಗೆ ಬಹಳ ದೊಡ್ಡ ಒಳಿತನ್ನು ತರುತ್ತದೆ" ಎಂದು ಅವರು ನುಡಿದರು.

 

ಡಾ. (ಶ್ರೀಮತಿ) ಸುದೇಶ್ ಧನಕರ್, ಕರ್ನಾಟಕ ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹ್ಲೋಟ್, ಐಸಿಎಂಆರ್ ನ ಡಿ.ಎಚ್.ಆರ್ ಕಾರ್ಯದರ್ಶಿ ಮತ್ತು ಮಹಾನಿರ್ದೇಶಕ ಡಾ.ರಾಜೀವ್ ಬಹ್ಲ್, ಡಿಎಚ್ಆರ್ ಜಂಟಿ ಕಾರ್ಯದರ್ಶಿ ಶ್ರೀಮತಿ ಅನು ನಗರ್, ಎನ್ಐಟಿಎಂ ನಿರ್ದೇಶಕಿ ಡಾ.ಸುಬರ್ನಾ ರಾಯ್, ಎನ್ಐಟಿಎಂ ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

 

ಕೆಎಲ್ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ (ಕೆಎಎಚ್ಇಆರ್) ನ 14ನೇ ಘಟಿಕೋತ್ಸವದಲ್ಲಿ ಉಪರಾಷ್ಟ್ರಪತಿ ಅವರ ಭಾಷಣ

ಎನ್ಐಟಿಎಂ ಕಾರ್ಯಕ್ರಮದ ನಂತರ ಉಪರಾಷ್ಟ್ರಪತಿಗಳು ಬೆಳಗಾವಿಯ ಡೀಮ್ಡ್ ವಿಶ್ವವಿದ್ಯಾಲಯವಾದ ಕೆಎಲ್ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ ಸಂಸ್ಥೆಯಲ್ಲಿ  ಘಟಿಕೋತ್ಸವ ಭಾಷಣ ಮಾಡಿದರು.

ಘಟಿಕೋತ್ಸವವನ್ನು ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ಶಿಕ್ಷಕರ ಜೀವನದಲ್ಲಿ ಒಂದು ಮೈಲಿಗಲ್ಲು ಮತ್ತು ಮರೆಯಲಾಗದ ಕ್ಷಣ ಎಂದು ಬಣ್ಣಿಸಿದ ಉಪರಾಷ್ಟ್ರಪತಿ ಅವರು, ಕಲಿಕೆಯನ್ನು ಎಂದಿಗೂ ನಿಲ್ಲಿಸದಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. "ನೀವು ಪದವಿ ಪಡೆದಾಗ ಕಲಿಕೆ ನಿಲ್ಲುತ್ತದೆ ಎಂಬುದು ಒಂದು ಮಿಥ್ಯೆ. ಸದಾ ಕಲಿಯುತ್ತಲೇ ಇರಿ; ಅದು ನಿಮ್ಮ ಅತ್ಯಂತ ಸ್ಥಿರ ಸಂಗಾತಿಯಾಗಿರಬೇಕು" ಎಂದೂ  ಅವರು ಹೇಳಿದರು.

 

ಯಾವಾಗಲೂ ರಾಷ್ಟ್ರಕ್ಕೆ ಮೊದಲ ಆದ್ಯತೆ ನೀಡುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದ ಅವರು, ಮಾನವಕುಲದ  ಸೇವೆ ಮಾಡುವಾಗ  ಹಣಕಾಸಿನ ಪರಿಗಣನೆಗಳು  ಮಾರ್ಗದರ್ಶನ ಮಾಡುವಂತಿರಬಾರದು ಎಂದು ಹೇಳಿದರು. "ಹಣಕಾಸಿನ ಪರಿಗಣನೆಗಳು ಹಿಂದೆ ಸರಿಯಬೇಕು. ಸೇವೆ ನಿಮ್ಮ ಪ್ರಾಥಮಿಕ ಧ್ಯೇಯವಾಗಿರಬೇಕು" ಎಂದೂ  ನುಡಿದರು. 

ನಮ್ಮ ಸಹಸ್ರಮಾನಗಳಷ್ಟು ಹಳೆಯ ನಾಗರಿಕತೆಯನ್ನು ಉಲ್ಲೇಖಿಸಿದ ಶ್ರೀ ಧನಕರ್, ನಮ್ಮ ನಾಗರಿಕತೆಯ ನೀತಿಗಳಿಗೆ ಬೇರೆ ಯಾವುದೇ ದೇಶವು ಪ್ರತಿಸ್ಪರ್ಧಿಯಾಗಲು ಸಾಧ್ಯವಿಲ್ಲ ಎಂದರು. “ಪ್ರಸ್ತುತ, ಭಾರತವು ವಿಶ್ವದ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ನಮ್ಮ ಯಾತ್ರೆ ಸುಸ್ಥಿರವಾಗಿದೆ ಮತ್ತು ಇಡೀ ಮಾನವಕುಲದ ಕಲ್ಯಾಣಕ್ಕಾಗಿ ಅದು ಇದೆ" ಎಂದು ಅವರು ಹೇಳಿದರು.

ಪದವಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿಗಳು, ಅವರ ಉನ್ನತ ಶೈಕ್ಷಣಿಕ ಅರ್ಹತೆಗಳು ದೇಶಕ್ಕೆ ಆಸ್ತಿಯಾಗುತ್ತವೆ ಮತ್ತು ಅವರನ್ನು ಭಾರತದ ಅಭಿವೃದ್ಧಿಯ ಕಥೆಯ ಅವಿಭಾಜ್ಯ ಅಂಗವನ್ನಾಗಿ ಮಾಡುತ್ತವೆ ಎಂದು ಅಭಿಪ್ರಾಯಪಟ್ಟರು. ವಿಕಸಿತ ಭಾರತ @ 2047 ಗಾಗಿ ದೊಡ್ಡ ಬದಲಾವಣೆಗೆ ವೇಗ ತರುವಂತೆ  ವಿದ್ಯಾರ್ಥಿಗಳನ್ನು ಆಗ್ರಹಿಸಿದ ಅವರು, ಭಾರತವು ತನ್ನ ಗತ ವೈಭವವನ್ನು ಮರಳಿ ಪಡೆಯುವುದನ್ನು ಮತ್ತು 2047 ರ ವೇಳೆಗೆ ವಿಶ್ವದ ಅತ್ಯಂತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವುದನ್ನು ಖಚಿತಪಡಿಸಿಕೊಳ್ಳುವಂತೆ ಕೇಳಿಕೊಂಡರು.

ವಿದ್ಯಾರ್ಥಿಗಳು ವೈಫಲ್ಯಕ್ಕೆ ಹೆದರಬಾರದು ಮತ್ತು ಸಮಾಜದ ಸುಧಾರಣೆಗಾಗಿ ಕೆಲಸ ಮಾಡುವುದನ್ನು ಮುಂದುವರಿಸಬೇಕು ಎಂದೂ ಉಪರಾಷ್ಟ್ರಪತಿಗಳು ಸಲಹೆ ನೀಡಿದರು.

ಕರ್ನಾಟಕ ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹ್ಲೋಟ್, ಕೆಎಎಚ್ಇಆರ್ ಕುಲಪತಿ ಡಾ.ಪ್ರಭಾಕರ್ ಕೋರೆ, ಕೆಎಎಚ್ಇಆರ್ ಉಪಕುಲಪತಿ ಪ್ರೊ.ನಿತಿನ್ ಎಂ.ಗಂಗಾನೆ, ಅಧ್ಯಾಪಕರು, ಸಿಬ್ಬಂದಿ, ಪದವಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಉಪಸ್ಥಿತರಿದ್ದರು.

*****
 



(Release ID: 2021805) Visitor Counter : 49