ವಾರ್ತಾ ಮತ್ತು ಪ್ರಸಾರ ಸಚಿವಾಲಯ

77ನೇ ಕ್ಯಾನ್ಸ್  ಚಲನಚಿತ್ರೋತ್ಸವದಲ್ಲಿ ಎಫ್.ಟಿ.ಐ.ಐ ವಿದ್ಯಾರ್ಥಿಗೆ 'ಲಾ ಸಿನೆಫ್' ಪ್ರಶಸ್ತಿ


ಎಫ್.ಟಿ.ಐ.ಐ ವಿದ್ಯಾರ್ಥಿ ಚಿದಾನಂದ ಎಸ್ ನಾಯಕ್ (ನಿರ್ದೇಶಕ) ಮತ್ತು ಅವರ ತಂಡವು “ಸನ್ ಫ್ಲವರ್ಸ್ ವರ್ ದ ಫಸ್ಟ್ ಒನ್ಸ್ ಟು ನೋ”  ಚಿತ್ರದ ಮೂಲಕ ಕ್ಯಾನ್ಸ್ ನಲ್ಲಿ ಮಿಂಚಿತು

ಚಿದಾನಂದ ಎಸ್ ನಾಯಕ್- 'ನಾಳೆಯ 75 ಸೃಜನಶೀಲ ಮನಸ್ಸುಗಳಲ್ಲಿ'   ಸದಸ್ಯ ಮತ್ತು ಅವರು 2022 ರ ಎಫ್.ಟಿ.ಐ.ಐ ತಂಡದ ವಿದ್ಯಾರ್ಥಿ

Posted On: 24 MAY 2024 3:15PM by PIB Bengaluru

ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಫ್.ಟಿ.ಐ.ಐ) ವಿದ್ಯಾರ್ಥಿ ಚಿದಾನಂದ ನಾಯಕ್ ಅವರ ಕೋರ್ಸ್ ಅಂತ್ಯದ “ಸನ್ ಫ್ಲವರ್ಸ್ ವರ್ ದ ಫಸ್ಟ್ ಒನ್ಸ್ ಟು ನೋ” ಎಂಬ ಚಲನಚಿತ್ರವು ಫ್ರಾನ್ಸ್ ನಲ್ಲಿ ನಡೆದ 77 ನೇ ಕ್ಯಾನ್ಸ್  ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಕಿರುಚಿತ್ರಕ್ಕಾಗಿ ಇರುವ ಕ್ಯಾನ್ಸ್  ಲಾ ಸಿನೆಫ್ ಪ್ರಶಸ್ತಿಯನ್ನು ಪಡೆಯಿತು. 2024 ರ ಮೇ 23 ರಂದು ನಡೆದ ಉತ್ಸವದಲ್ಲಿ ವಿಜೇತರನ್ನು ಅಧಿಕೃತವಾಗಿ ಘೋಷಿಸಲಾಯಿತು, ಅಲ್ಲಿ ವಿದ್ಯಾರ್ಥಿ ನಿರ್ದೇಶಕ ಶ್ರೀ ಚಿದಾನಂದ ನಾಯಕ್ ಪ್ರಶಸ್ತಿಯನ್ನು ಸ್ವೀಕರಿಸಿದರು.

ಚಿತ್ರವನ್ನು ಚಿದಾನಂದ ಎಸ್ ನಾಯಕ್ ನಿರ್ದೇಶಿಸಿದ್ದಾರೆ, ಸೂರಜ್ ಠಾಕೂರ್ ಚಿತ್ರೀಕರಿಸಿದ್ದಾರೆ, ಮನೋಜ್ ವಿ ಸಂಕಲನ ಮಾಡಿದ್ದಾರೆ ಮತ್ತು ಅಭಿಷೇಕ್ ಕದಮ್ ಧ್ವನಿ ನೀಡಿದ್ದಾರೆ.

ಇದು ಭಾರತೀಯ ಚಿತ್ರರಂಗಕ್ಕೆ ಐತಿಹಾಸಿಕ ಕ್ಷಣ. ಭಾರತೀಯ ಚಲನಚಿತ್ರಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗಳನ್ನು ಪಡೆಯುತ್ತಿವೆ, ವಿಶೇಷವಾಗಿ ಎಫ್.ಟಿ.ಐ.ಐ ಕಳೆದ ಕೆಲವು ವರ್ಷಗಳಿಂದ ತನ್ನ ವಿದ್ಯಾರ್ಥಿಗಳ ಚಲನಚಿತ್ರಗಳನ್ನು ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸುವುದರೊಂದಿಗೆ ಕ್ಯಾನ್ಸ್ ನಲ್ಲಿ ಗಮನಾರ್ಹವಾಗಿ ಉತ್ತಮ ಸಾಧನೆ ತೋರಿದೆ. ಮತ್ತೊಂದು ಎಫ್ ಟಿಐಐ ವಿದ್ಯಾರ್ಥಿ ಚಿತ್ರ 'ಕ್ಯಾಟ್ ಡಾಗ್' 73ನೇ ಕ್ಯಾನ್ಸ್  ನಲ್ಲಿ ಪ್ರಶಸ್ತಿಯನ್ನು ಗೆದ್ದ ನಾಲ್ಕು ವರ್ಷಗಳ ನಂತರ ಈಗಿನ ಪ್ರಶಸ್ತಿ ಮಾನ್ಯತೆ ಲಭಿಸಿದೆ. 77 ನೇ ಕ್ಯಾನ್ಸ್  ಚಲನಚಿತ್ರೋತ್ಸವದಲ್ಲಿ ಭಾರತದಿಂದ ವಿವಿಧ ವಿಭಾಗಗಳಲ್ಲಿ ಅನೇಕ ಚಿತ್ರಗಳು ಪ್ರವೇಶ ಪಡೆದು ಪ್ರದರ್ಶನಗೊಂಡವು.ಎಫ್.ಟಿ.ಐ.ಐ ನ ಹಳೆಯ ವಿದ್ಯಾರ್ಥಿಗಳಾದ ಪಾಯಲ್ ಕಪಾಡಿಯಾ, ಮೈಸಮ್ ಅಲಿ, ಸಂತೋಷ್ ಶಿವನ್, ಚಿದಾನಂದ ಎಸ್ ನಾಯಕ್ ಮತ್ತು ಅವರ ತಂಡವು ಈ ವರ್ಷದ ಕ್ಯಾನ್ಸ್  ನಲ್ಲಿ ಮಾನ್ಯತೆ ಪಡೆದಿದೆ.

“ಸನ್ ಫ್ಲವರ್ಸ್ ವರ್ ದ ಫಸ್ಟ್ ಒನ್ಸ್ ಟು ನೋ” -ಇದು ಹಳ್ಳಿಯ ಹುಂಜವನ್ನು ಕದಿಯುವ ವಯಸ್ಸಾದ, ಹಿರಿಯ ಮಹಿಳೆಯ ಕಥೆಯಾಗಿದ್ದು, ಅದು ಸಮುದಾಯವನ್ನು ಗೊಂದಲಕ್ಕೆ ದೂಡುತ್ತದೆ. ಹುಂಜವನ್ನು ಮರಳಿ ತರಲು, ಒಂದು ಭವಿಷ್ಯವಾಣಿಯನ್ನು ಅವಲಂಬಿಸಲಾಗುತ್ತದೆ, ಇದು ಆ ಮುದುಕಿಯ ಕುಟುಂಬವನ್ನು ಗಡೀಪಾರು ಮಾಡುತ್ತದೆ.

ಈ ಎಫ್.ಟಿ.ಐ.ಐ ಚಲನಚಿತ್ರವು ಟಿವಿ ವಿಂಗ್ ನ ಒಂದು ವರ್ಷದ ಕಾರ್ಯಕ್ರಮದ ಫಲವಾಗಿ ನಿರ್ಮಾಣವಾಗಿದೆ. ಇದರಲ್ಲಿ ನಿರ್ದೇಶನ, ಎಲೆಕ್ಟ್ರಾನಿಕ್ ಛಾಯಾಗ್ರಹಣ, ಸಂಕಲನ, ಧ್ವನಿ ಮುಂತಾದ ವಿವಿಧ ವಿಭಾಗಗಳ ನಾಲ್ಕು ವಿದ್ಯಾರ್ಥಿಗಳು ವರ್ಷಾಂತ್ಯದ ಸಂಘಟಿತ ಯೋಜನೆಯಾಗಿ ಒಂದು ಪ್ರಾಜೆಕ್ಟ್ ಗಾಗಿ ಒಟ್ಟಿಗೆ ಕೆಲಸ ಮಾಡಿದ್ದರು. ಈ ಚಿತ್ರವನ್ನು ಚಿದಾನಂದ ಎಸ್ ನಾಯಕ್ ನಿರ್ದೇಶಿಸಿದ್ದಾರೆ, ಸೂರಜ್ ಠಾಕೂರ್ ಚಿತ್ರೀಕರಿಸಿದ್ದಾರೆ, ಮನೋಜ್ ವಿ ಸಂಕಲನ ಮಾಡಿದ್ದಾರೆ ಮತ್ತು ಅಭಿಷೇಕ್ ಕದಮ್ ಧ್ವನಿ ನೀಡಿದ್ದಾರೆ. ಈ ವಿದ್ಯಾರ್ಥಿಗಳು ತಮ್ಮ ಅಂತಿಮ ವರ್ಷದ ಸಂಘಟಿತ ಯೋಜನೆಯ  ಭಾಗವಾಗಿ ಚಲನಚಿತ್ರದಲ್ಲಿ ಕೆಲಸ ಮಾಡಿದ್ದರು ಮತ್ತು 2023 ರಲ್ಲಿ ಎಫ್ಟಿಐಐನಿಂದ ಉತ್ತೀರ್ಣರಾದರು.

ಎಫ್.ಟಿ.ಐ.ಐ ನ 1 ವರ್ಷದ ಟೆಲಿವಿಷನ್ ಕೋರ್ಸ್ ನ ವಿದ್ಯಾರ್ಥಿಯೊಬ್ಬರ ಚಿತ್ರವು ಪ್ರತಿಷ್ಠಿತ ಕೇನ್ಸ್  ಚಲನಚಿತ್ರೋತ್ಸವದಲ್ಲಿ ಆಯ್ಕೆಯಾಗಿ ಗೆದ್ದಿರುವುದು ಇದೇ ಮೊದಲು. 2022 ರಲ್ಲಿ ಎಫ್.ಟಿ.ಐ.ಐ ಗೆ ಸೇರುವ ಮೊದಲು, ಚಿದಾನಂದ ಎಸ್ ನಾಯಕ್ ಅವರು 53 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್ಎಫ್ಐ) 75 ಸೃಜನಶೀಲ ಮನಸ್ಸುಗಳಲ್ಲಿ ಒಬ್ಬರಾಗಿ ಆಯ್ಕೆಯಾಗಿದ್ದರು. ಇದು ಸಿನೆಮಾ ಕ್ಷೇತ್ರದಲ್ಲಿ ಉದಯೋನ್ಮುಖ ಯುವ ಕಲಾವಿದರನ್ನು ಗುರುತಿಸಲು ಮತ್ತು ಬೆಂಬಲಿಸಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಕೈಗೊಂಡ ಉಪಕ್ರಮವಾಗಿದೆ.

ಎಫ್.ಟಿ.ಐ.ಐ ಅಧ್ಯಕ್ಷರಾದ ಶ್ರೀ ಆರ್. ಮಾಧವನ್ ಅವರು ಚಿತ್ರದ ಇಡೀ ವಿದ್ಯಾರ್ಥಿ ಘಟಕವನ್ನು ಅಭಿನಂದಿಸಿದ್ದಾರೆ. "ಈ ಪ್ರತಿಷ್ಠಿತ ಗೌರವಕ್ಕಾಗಿ ಶ್ರೀ ಚಿದಾನಂದ ನಾಯಕ್ ಮತ್ತು “ಸನ್ ಫ್ಲವರ್ಸ್ ವರ್ ದ ಫಸ್ಟ್ ಒನ್ಸ್ ಟು ನೋ”  ತಂಡಕ್ಕೆ ಅಭಿನಂದನೆಗಳು. ಇದು ಇನ್ನೂ ಅನೇಕ ಅಸಾಧಾರಣ ಮನ್ನಣೆ ಮತ್ತು ಪ್ರೀತಿಯೊಂದಿಗೆ ಶ್ರೇಷ್ಠ ವೃತ್ತಿಜೀವನಕ್ಕೆ  ಆರಂಭಿಕ ಹೆಜ್ಜೆಯಾಗಲಿ.  ಅಲ್ಲದೆ, ಇಂತಹ ವಿಶ್ವ ದರ್ಜೆಯ ಪ್ರತಿಭೆಗಳನ್ನು ರೂಪಿಸಿದ್ದು  ಎಫ್ ಟಿಐಐ ನ ಎಲ್ಲಾ ಸಿಬ್ಬಂದಿ ಮತ್ತು ಆಡಳಿತಕ್ಕೆ ಸಂತೋಷದ ಸಂಗತಿಯಾಗಿದೆ  ಮತ್ತು ಅವರಿಗೆ ಉತ್ಸಾಹಭರಿತ ಅಭಿನಂದನೆಗಳು” ಎಂದವರು ಹೇಳಿದ್ದಾರೆ.

'ಲಾ ಸಿನೆಫ್' ಚಲನಚಿತ್ರೋತ್ಸವದ ಅಧಿಕೃತ ವಿಭಾಗವಾಗಿದ್ದು, ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ ಮತ್ತು ಪ್ರಪಂಚದಾದ್ಯಂತದ ಚಲನಚಿತ್ರ ಶಾಲೆಗಳ ಚಲನಚಿತ್ರಗಳನ್ನು ಅದು ಗುರುತಿಸುತ್ತದೆ. ಪ್ರಪಂಚದಾದ್ಯಂತದ 555 ಚಲನಚಿತ್ರ ಶಾಲೆಗಳು ಸಲ್ಲಿಸಿದ ಒಟ್ಟು 2,263 ಚಲನಚಿತ್ರಗಳಿಂದ ಆಯ್ಕೆಯಾದ 18 ಕಿರುಚಿತ್ರಗಳಲ್ಲಿ (14 ಲೈವ್-ಆಕ್ಷನ್ ಮತ್ತು 4 ಅನಿಮೇಟೆಡ್ ಚಲನಚಿತ್ರಗಳು) ಈ ಚಿತ್ರವೂ ಸೇರಿದೆ.

'ಎಫ್.ಟಿ.ಐ.ಐನಲ್ಲಿಯ  ವಿಶಿಷ್ಟ ಬೋಧನೆ ಮತ್ತು ಸಿನೆಮಾ ಹಾಗು ದೂರದರ್ಶನ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಅಭ್ಯಾಸ ಆಧಾರಿತ ಸಹ-ಕಲಿಕೆಯ ವಿಧಾನದ ಮೇಲೆ ಗಮನ ಕೇಂದ್ರೀಕರಿಸಿದ ಪರಿಣಾಮವಾಗಿ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಅದರ ಹಳೆಯ ವಿದ್ಯಾರ್ಥಿಗಳು ಹಲವಾರು ವರ್ಷಗಳಿಂದ ವಿವಿಧ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಶಂಸೆಗಳನ್ನು ಪಡೆದಿದ್ದಾರೆ. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿರುವುದು ಭಾರತೀಯ ಚಿತ್ರರಂಗಕ್ಕೆ ಐತಿಹಾಸಿಕ ಸಾಧನೆಯಾಗಿದೆ. ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ವಿಶ್ವದ ಅತ್ಯುತ್ತಮ ಚಲನಚಿತ್ರ ಶಾಲೆಗಳಲ್ಲಿ ಒಂದಾಗಿದೆ ಮತ್ತು ಇಂದು ಭಾರತವನ್ನು ಹೆಮ್ಮೆಪಡುವಂತೆ ಮಾಡಿದೆ.
 

*****



(Release ID: 2021517) Visitor Counter : 47