ಚುನಾವಣಾ ಆಯೋಗ
azadi ka amrit mahotsav

ಐಇವಿಪಿಯ ಭಾಗವಾಗಿ 6 ರಾಜ್ಯಗಳಲ್ಲಿ ಮತದಾನ ಪ್ರಕ್ರಿಯೆಗೆ 23 ದೇಶಗಳ 75 ಪ್ರತಿನಿಧಿಗಳಿಂದ ವೀಕ್ಷಣೆ


ಸಾರ್ವತ್ರಿಕ ಚುನಾವಣೆ 2024 ಕ್ಕೆ ಅಂತಾರಾಷ್ಟ್ರೀಯ ಮೆಚ್ಚುಗೆ

ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಪಾರದರ್ಶಕತೆ, ವಿಶ್ವಾಸಾರ್ಹತೆ ಮತ್ತು ಒಳಗೊಳ್ಳುವಿಕೆ ಕಾಯ್ದುಕೊಳ್ಳುವ ಚುನಾವಣಾ ಆಯೋಗದ ಪ್ರಯತ್ನದ ಭಾಗ ಐಇವಿಪಿ

Posted On: 09 MAY 2024 7:34PM by PIB Bengaluru

2024 ರ ಸಾರ್ವತ್ರಿಕ ಚುನಾವಣೆಯ ಮತದಾನ ಪ್ರಕ್ರಿಯೆಯನ್ನು ಪ್ರತ್ಯಕ್ಷವಾಗಿ ವೀಕ್ಷಿಸಿದ ಅಂತರರಾಷ್ಟ್ರೀಯ ಪ್ರತಿನಿಧಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಕೆಲವು ಪ್ರತಿನಿಧಿಗಳು ಪಾರದರ್ಶಕತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನು ಕೆಲವರು ಹಸಿರು ಮತದಾನ ಕೇಂದ್ರದಂತಹ ಚುನಾವಣಾ ಆಯೋಗದ ಉಪಕ್ರಮಗಳು ಸ್ಪೂರ್ತಿದಾಯಕ ಎಂದು ಬಣ್ಣಿಸಿದ್ದಾರೆ. ಆಯ್ದ ಇವಿಎಂ-ವಿವಿಪ್ಯಾಟ್ಗಳ ಅಂಕಿಅಂಶ ಪ್ರಕ್ರಿಯೆ ಸೇರಿದಂತೆ ಚುನಾವಣೆಗಳಲ್ಲಿ ವ್ಯಾಪಕ ತಂತ್ರಜ್ಞಾನದ ಬಳಕೆಯ ಬಗ್ಗೆ ಕೂಡ ಪ್ರತಿನಿಧಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಜಾಸತ್ತಾತ್ಮಕ ಆದರ್ಶಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಭಾರತೀಯ ಮತದಾರರ ಅಚಲವಾದ ನಂಬಿಕೆ ಮತ್ತು ಬದ್ಧತೆಯಿಂದ ಪ್ರಭಾವಿತರಾಗಿರುವುದಾಗಿ ಕೂಡ ಕೆಲವು ಪ್ರತಿನಿಧಿಗಳು ಅಭಿಮತ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ, ಭಾರತದಲ್ಲಿ ಚುನಾವಣಾ ಪ್ರಕ್ರಿಯೆಯು ಶಾಂತಿಯುತವಾಗಿದ್ದು, ಎಲ್ಲರ ಒಳಗೊಳ್ಳುವಿಕೆ ಮತ್ತು ಲಭ್ಯವಾಗುವಂತಿದ್ದು, ಹಬ್ಬದ ವಾತಾವರಣದಲ್ಲಿ ನಡೆದಿದೆ ಎಂದು ಈ ದೇಶಗಳ ಚುನಾವಣಾ ನಿರ್ವಹಣಾ ಸಂಸ್ಥೆಗಳ  ಸದಸ್ಯರು ಒಕ್ಕೊರಲಿನಿಂದ ಹೇಳಿದ್ದಾರೆ. 

ಇತ್ತೀಚೆಗೆ ಮುಕ್ತಾಯಗೊಂಡ ಮೂರನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಅಂತರಾಷ್ಟ್ರೀಯ ಚುನಾವಣಾ ಸಂದರ್ಶಕರ ಕಾರ್ಯಕ್ರಮ (IEVP) ಭಾಗವಾಗಿ ಭಾರತದ ಸಾರ್ವತ್ರಿಕ ಚುನಾವಣೆಗಳಿಗೆ ಸಾಕ್ಷಿಯಾದ ಅಂತಾರಾಷ್ಟ್ರೀಯ ಪ್ರತಿನಿಧಿಗಳು ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ. 

ಮೂರನೇ ಹಂತದಲ್ಲಿ 11 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 93 ಲೋಕಸಭಾಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, ಅಂತಾರಾಷ್ಟ್ರೀಯ ಪ್ರತಿನಿಧಿಗಳು 6 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಮತದಾನವನ್ನು ವೀಕ್ಷಿಸಿದರು. ಅವರು ಚುನಾವಣಾ ಪ್ರಕ್ರಿಯೆಗಳ ಸಿದ್ಧತೆಗಳನ್ನೂ ವೀಕ್ಷಿಸಿದ್ದು, ಮಾನವ ಸಂಪನ್ಮೂಲ ಮತ್ತು ಯಂತ್ರಗಳ ಸಾಗಾಟದ ಅತಿದೊಡ್ಡ ಸಾಗಣೆ ಕಾರ್ಯವನ್ನು ಈ ಪ್ರಕ್ರಿಯೆ ಒಳಗೊಂಡಿದೆ ಎಂಬುದನ್ನು ಅರಿತುಕೊಂಡರು. 

 

ಐಇವಿಪಿ 2024 ವಾಸ್ತವ ಅನುಭವಗಳು

ಕರ್ನಾಟಕ

ಕಾಂಬೋಡಿಯಾ, ಟ್ಯುನೇಷಿಯಾ, ಮಾಲ್ಡೋವಾ, ಸೀಷೆಲ್ಸ್‌ ಮತ್ತು ನೇಪಾಳ ರಾಷ್ಟ್ರಗಳ ಪ್ರತಿನಿಧಿಗಳು ಕರ್ನಾಟಕದ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆ ವೀಕ್ಷಿಸಿದರು. ಮತಗಟ್ಟೆಯೊಳಗೆ ಪ್ರಿಸೈಡಿಂಗ್‌ ಅಧಿಕಾರಿ, ಪೋಲಿಂಗ್‌ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು. ಅಣಕು ಮತದಾನ ವೀಕ್ಷಿಸಿರು. ಕಮಾಂಡ್‌ ಕಂಟ್ರೋಲ್‌ ಸೆಂಟರ್‌ (ಸಂದೇಶ ನಿಯಂತ್ರಣ ಕೇಂದ್ರ) ಮತ್ತು ಮಾಧ್ಯಮ ನಿಗಾ ಸೌಲಭ್ಯ ಕೇಂದ್ರಗಳಿಗೆ ಭೇಟಿ ನೀಡಿದರು. ಅಣಕು ಮತದಾನದ ಸಂದರ್ಭದಲ್ಲಿನ ಪಾರದರ್ಶಕತೆ, ಮತಗಟ್ಟೆಯಲ್ಲಿ ಅಭ್ಯರ್ಥಿಗಳ ಪ್ರತಿನಿಧಿಗಳ ಉಪಸ್ಥಿತಿಗೆ ಅವಕಾಶದಂತಹ ವ್ಯವಸ್ಥೆಗಳ ಬಗ್ಗೆ ಪ್ರತಿನಿಧಿಗಳು ಶ್ಲಾಘಿಸಿದರು. 

 

 

ಗೋವಾ

ಭೂತಾನ್‌, ಮಂಗೋಲಿಯಾ ಮತ್ತು ಇಸ್ರೇಲ್‌ ನ ಒಂದು ಮಾಧ್ಯಮ ತಂಡದ ಪ್ರತಿನಿಧಿಗಳು ಗೋವಾದ ಎರಡೂ ಲೋಕಸಭಾ ಕ್ಷೇತ್ರಗಳ್ಲಲಿನ ಮತದಾನ ಪ್ರಕ್ರಿಯೆ ಮತ್ತು ತತ್ಸಂಬಂಧಿತ ವ್ಯವಸ್ಥೆಗಳನ್ನು ವೀಕ್ಷಿಸಿದರು. ಅವರೂ ಕೂಡ ಅಣಕು ಮತದಾನಕ್ಕೆ ಸಾಕ್ಷಿಯಾದರು. ಕಮಾಂಡ್‌ ನಿಯಂತ್ರಣ ಕೇಂದ್ರ, ಮಾಧ್ಯಮ ನಿಗಾ ಸೌಲಭ್ಯ ಮತ್ತು ರವಾನೆ ಕೇಂದ್ರಗಳಿಗೂ ಭೇಟಿ ನೀಡಿದರು. ಮತಗಟ್ಟೆಯೊಳಗೆ ಅಭ್ಯರ್ಥಿಗಳ ಪ್ರತಿನಿಧಿಗಳ ಪಾಲ್ಗೊಳ್ಳುವಿಕೆಗೆ ಅವಕಾಶದ ಮೂಲಕ    ರಾಜಕೀಯ ಪಕ್ಷಗಳು ಮತ್ತು ಮಾಧ್ಯಮದ ಒಳಗೊಳ್ಳುವಿಕೆ ಮೂಲಕ ಪಾರದರ್ಶಕತೆ ಕಾಯ್ದುಕೊಳ್ಳುವ ಪ್ರಕ್ರಿಯೆಯ ಬಗ್ಗೆ ಭೂತಾನ್ನ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಭೂತಾನ್ ಮತ್ತು ಮಂಗೋಲಿಯಾ ರಾಷ್ಟ್ರಗಳ ಚುನಾವಣಾ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ವಿಶೇಷ ಚೇತನರಿಗೆ ಮತಗಟ್ಟೆ ವ್ಯವಸ್ಥೆ, ಪಿಂಕ್‌ ಮತಗಟ್ಟೆಗಳನ್ನು ನೋಡಿ ಪ್ರತಿನಿಧಿಗಳು ಆಶ್ಚರ್ಯಚಕಿತರಾದರು. ಈ ಉಪಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇವಿಎಂ-ವಿವಿಪ್ಯಾಟ್‌ ಗಳ ಆಯ್ದ ಮಾದರಿ ಅಂಕಿಅಂಶ ವ್ಯವಸ್ಥೆಗೆ ತಂತ್ರಾಂಶ ಬಳಕೆಯ ಬಗ್ಗೆ ಕೂಡ ಪ್ರತಿನಿಧಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 

 

 

ಮಧ್ಯಪ್ರದೇಶ


ಶ್ರೀಲಂಕಾ ಮತ್ತು ಫಿಲಿಪ್ಪೀನ್ಸ್ ಗಳ ಪ್ರತಿನಿಧಿಗಳ ತಂಡದ 11 ಸದಸ್ಯರು  ಭೋಪಾಲ್‌, ವಿದಿಶಾ, ಸೆಹೋರ್‌ ಮತ್ತು ರೈಸೆನ್ ಲೋಕಸಭಾ ಕ್ಷೇತ್ರಗಳಿಗೆ ಭೇಟಿ ನೀಡಿದ್ದು ಲೋಕಸಭಾ ಚುನಾವಣಾ ಪ್ರಕ್ರಿಯೆಗಳ ಬಗ್ಗೆ ಒಳನೋಟ ಪಡೆದುಕೊಂಡರು. ಮತದಾರರೊಂದಿಗೆ ಸಂವಾದ ನಡೆಸಿದರು. ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಭಾರತೀಯ ನಾಗರಿಕರ ಉತ್ಸಾಹ ಮತ್ತು ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಅವರು ಗಮನಿಸಿದರು. ಭಾರತದ ಅದ್ಭುತ ಪ್ರಜಾಪ್ರಭುತ್ವವನ್ನು ಹೊಗಳಿರುವುದನ್ನು ಪ್ರತಿನಿಧಿಗಳ ಅನುಭವಗಳಿಂದ ತಿಳಿಯಬಹುದಾಗಿದೆ. ಭಾರತದ ಪ್ರಜಾಪ್ರಭುತ್ವ ಮೌಲ್ಯಗಳ ಬಲವರ್ಧನೆಗೆ ಇಲ್ಲಿನ ಮತದಾರರ ಅಚಲ ವಿಶ್ವಾಸ ಮತ್ತು ಬದ್ಧತೆ ಅವರನ್ನು ಮೂಕವಿಸ್ಮಿತರನ್ನಾಗಿಸಿತು. 

 

 

 

ಉತ್ತರಪ್ರದೇಶ 

ಚಿಲಿ, ಜಾರ್ಜಿಯಾ, ಮಾಲ್ಡೀವ್ಸ್‌, ನಮೀಬಿಯಾ, ಪಪುವಾ ನ್ಯೂ ಗಿನಿಯಾ ಮತ್ತು ಉಜ್ಬೇಕಿಸ್ತಾನ ರಾಷ್ಟ್ರಗಳ ಪ್ರತಿನಿಧಿಗಳು 2024ರ ಮೇ 7 ರಂದು ಉತ್ತರಪ್ರದೇಶದ ಫತೇಹ್ಪುರ್‌ ಸಿಕ್ರಿ ಮತ್ತು ಆಗ್ರಾ ಲೋಕಸಭಾ ಕ್ಷೇತ್ರಗಳಲ್ಲಿನ ಮತದಾನಕ್ಕೆ ಸಾಕ್ಷಿಯಾದರು. ಇಲ್ಲಿಗೆ ಭೇಟಿ ನೀಡಿದ ಪ್ರತಿನಿಧಿಗಳು ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಾಸ್ತುಶಿಲ್ಪದ ಕೌತುಕ ತಾಜ್‌ ಮಹಲ್‌ ಮತ್ತು ಫತೇಹ್‌ ಪುರ್‌ ಸಿಕ್ರಿಗೆ ಭೇಟಿ ನೀಡಿದರು. ಮತದಾನದ ದಿನದ ಮುನ್ನಾ ದಿನ ಮತದಾನ ಪ್ರಕ್ರಿಯೆಗಾಗಿ ವ್ಯವಸ್ಥೆಗಳು, ಚಟುವಟಿಕೆಗಳನ್ನು ಹಾಗೂ ಮತದಾನದ ದಿನದ ಪ್ರಕ್ರಿಯೆಗಳನ್ನು ನೋಡಿದರು. ಭಾರತದಲ್ಲಿನ ಚುನಾವಣಾ ಪ್ರಕ್ರಿಯೆಯು ಶಾಂತಿಯುತವಾಗಿತ್ತು, ಎಲ್ಲರ ಒಳಗೊಳ್ಳುವಿಕೆ ಇತ್ತು ಮತ್ತು ಎಲ್ಲರಿಗೂ ಲಭ್ಯವಾಗುವಂತಿತ್ತು ಎಂಬುದು ಚುನಾವಣಾ ನಿರ್ವಹಣಾ ಸಂಸ್ಥೆಗಳ ವೀಕ್ಷಕ ಪ್ರತಿನಿಧಿಗಳ ಒಮ್ಮತದ ಅಭಿಪ್ರಾಯವಾಗಿತ್ತು. 

 

 

 

ಗುಜರಾತ್

ಫಿಜಿ, ಆಸ್ಟ್ರೇಲಿಯಾ, ರಷ್ಯಾ, ಮಡಗಾಸ್ಕರ್‌, ಕಿರ್ಗಿಸ್‌ ಗಣರಾಜ್ಯ ರಾಷ್ಟ್ರಗಳ ಪ್ರತಿನಿಧಿಗಳು ಅಹಮದಾಬಾದ್‌ ನಲ್ಲಿ 2024ರ ಲೋಕಸಭಾ ಚುನಾವಣೆ ಸಂಬಂಧಿತ ಚುನಾವಣಾ ಪೂರ್ವ ಸಿದ್ಧತೆಗಳನ್ನು ಮತ್ತು ಚುನಾವಣಾ ಪ್ರಕ್ರಿಯೆಗಳನ್ನು ವೀಕ್ಷಿಸಿದರು. ಇವಿಎಂ ಗಳ ಪರಿಣಾಮಕಾರಿ ಭದ್ರತೆಗಾಗಿ ಎರಡು ಹಂತದ ಬೀಗದ ವ್ಯವಸ್ಥೆ ಇರುವ ಮತ್ತು ಸಶಸ್ತ್ರ ಪೊಲೀಸ್‌ ಸಿಬ್ಬಂದಿ ನಿಯೋಜಿಸಲ್ಪಟ್ಟ ಸ್ಟ್ರಾಂಗ್‌ ರೂಂಗಳ ಬಗ್ಗೆ ಪ್ರತಿನಿಧಿಗಳು ಪ್ರಭಾವಿತರಾದರು. ಅಹಮದಾಬಾದ್‌ ಪೂರ್ವ ಲೋಕಸಭಾ ಕ್ಷೇತ್ರದ ಸನಾದ್‌ ನ ವಿಧಾನಸಭಾ ಕ್ಷೇತ್ರದ ಮತಗಟ್ಟೆಯನ್ನು ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸಿದ್ದನ್ನು ನೋಡಿದ ಪ್ರತಿನಿಧಿಗಳ ತಂಡ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ಇದು ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಅವರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಎಲ್ಲಾ ಮತಗಟ್ಟೆಗಳಲ್ಲಿ ಹಿರಿಯ ಮತದಾರರಿಗೆ ಸಹಾಯ ಮಾಡಲು ವೀಲ್‌ ಚೇರ್‌ ಮತ್ತು ರ್ಯಾಂಪ್‌ ಸೌಲಭ್ಯದ ಜೊತೆಗೆ ಸ್ವಯಂ ಸೇವಕರ ನಿಯೋಜನೆ ಬಗ್ಗೆ ಕೂಡ ತಂಡ ಮೆಚ್ಚುಗೆ ವ್ಯಕ್ತಪಡಿಸಿದೆ. ಅಂಧ ಮತದಾರರಿಗಾಗಿ ಬ್ರೈಲ್ ಬ್ಯಾಲೆಟ್‌ ಪೇಪರ್ ಪರಿಕಲ್ಪನೆಗೂ ತಂಡ ತಲೆದೂಗಿದೆ.  

 

 

 

ಮಹಾರಾಷ್ಟ್ರ

ಬಾಂಗ್ಲಾದೇಶ, ಶ್ರೀಲಂಕಾ, ಕಜಕಸ್ತಾನ ಮತ್ತು ಜಿಂಬಾಬ್ವೆ ರಾಷ್ಟ್ರಗಳ ಚುನಾವಣಾ ನಿರ್ವಹಣಾ ಸಂಸ್ಥೆಗಳ ಪ್ರತಿನಿಧಿಗಳು ಮಹಾರಾಷ್ಟ್ರದ ರಾಯ್‌ಗಢ್‌ ಲೋಕಸಭಾ ಕ್ಷೇತ್ರಕ್ಕೆ ಭೇಟಿ ನೀಡಿ, ಚುನಾವಣಾ ಪೂರ್ವ ಸಿದ್ಧತೆಗಳನ್ನು ವೀಕ್ಷಿಸಿ, ಮತಗಟ್ಟೆ ಸಿಬ್ಬಂದಿಯು ಇವಿಎಂ ಯಂತ್ರಗಳು ಮತ್ತು ಇತರ ಸಾಮಗ್ರಿಗಳೊಂದಿಗೆ ನಿಯೋಜಿತ ಮತಗಟ್ಟೆಗೆ ತೆರಳುವುದನ್ನು ನೋಡಿದರು. ಈ ತಂಡ, ಜಿಲ್ಲಾ ಚುನಾವಣಾಧಿಕಾರಿ, ರಿಟರ್ನಿಂಗ್‌ ಅಧಿಕಾರಿ, ಪ್ರಿಸೈಡಿಂಗ್‌ ಅಧಿಕಾರಿ ಮತ್ತು ಇತರ ಚುನಾವಣಾ ಸಂಬಂಧಿತ ಅಧಿಕಾರಿಗಳೊಂದಿಗೆ ಸಂವಹನ ನಡೆಸಿ, ಭಾರತೀಯ ಚುನಾವಣಾ ಪ್ರಕ್ರಿಯೆಯ ವಿವಿಧ ಆಯಾಮಗಳ ಬಗ್ಗೆ ಮಾಹಿತಿ ಪಡೆದುಕೊಂಡಿತು. ಮತಗಟ್ಟೆಗಳಲ್ಲಿನ ಪಾರದರ್ಶಕ ವ್ಯವಸ್ಥೆಗೆ ಪ್ರತಿನಿಧಿಗಳು ಮನಸೋತರು. 

 

 

ಹಿನ್ನೆಲೆ

 


 

ಆಸ್ಟ್ರೇಲಿಯಾ, ಬಾಂಗ್ಲಾದೇಶ, ಭೂತಾನ್, ಕಾಂಬೋಡಿಯಾ, ಚಿಲಿ, ಫಿಜಿ, ಜಾರ್ಜಿಯಾ, ಕಜಕಸ್ತಾನ್, ಕಿರ್ಗಿಸ್ ಗಣರಾಜ್ಯ, ಮಡಗಾಸ್ಕರ್, ಮಾಲ್ಡೀವ್ಸ್, ಮಂಗೋಲಿಯಾ, ಮಾಲ್ಡೋವಾ, ನಮೀಬಿಯಾ, ನೇಪಾಳ, ನ್ಯೂ ಗಿನಿಯಾ, ಫಿಲಿಪ್ಪೈನ್ಸ್, ರಷ್ಯಾ, ಸೀಷೆಲ್ಸ್, ಶ್ರೀಲಂಕಾ, ಟ್ಯುನೇಷಿಯಾ, ಉಜ್ಬೇಕಿಸ್ತಾನ, ಜಿಂಬಾಬ್ವೆ- ಈ 23 ರಾಷ್ಟ್ರಗಳ ಪ್ರತಿನಿಧಿಗಳು ಭಾರತದಲ್ಲಿ ಮೂರನೇ ಹಂತದ ಚುನಾವಣಾ ಪ್ರಕ್ರಿಯೆ ವೀಕ್ಷಿಸಲು 2024ರ ಮೇ 5 ರಂದು ನವದೆಹಲಿಗೆ ಆಗಮಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಚುನಾವಣಾ ಆಯುಕ್ತರಾದ ಶ್ರೀ. ರಾಜೀವ್ ಕುಮಾರ್ ಅಧ್ಯಕ್ಷತೆಯ ಹಾಗೂ ಹಾಗೂ ಚುನಾವಣಾ ಆಯುಕ್ತರಾದ ಶ್ರೀ. ಗ್ಯಾನೇಶ್ ಕುಮಾರ್ ಮತ್ತು ಶ್ರೀ ಸುಖ್ ಬಿರ್ ಸಿಂಗ್ ಸಂಧು ಅವರ ಉಪಸ್ಥಿತಿಯಲ್ಲಿ ಭಾರತೀಯ ಚುನಾವಣಾ ಆಯೋಗದೊಂದಿಗೆ  ಸಂವಾದ ನಡೆಸಿದರು. ಬಳಿಕ, ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಉತ್ತರಪ್ರದೇಶ, ಗೋವಾ ಮತ್ತು ಮಧ್ಯಪ್ರದೇಶದ ರಾಜ್ಯಗಳಲ್ಲಿ 13 ಲೋಕಸಭಾ ಕ್ಷೇತ್ರಗಳಲ್ಲಿನ ಚುನಾವಣಾ ಪ್ರಕ್ರಿಯೆ ವೀಕ್ಷಿಸಲು  ಪ್ರತಿನಿಧಿಗಳನ್ನು ಆರು ಕಿರು ತಂಡಗಳನ್ನಾಗಿ ವಿಭಾಗಿಸಲಾಯಿತು. ಚುನಾವಣಾ ಸಿದ್ಧತೆ, ಸಾಮಗ್ರಿಗಳು ಮತ್ತು ಮಾನವ ಸಂಪನ್ಮೂಲ ರವಾನೆ ವ್ಯವಸ್ಥೆ ಮತ್ತು ವೆಬ್ ಕ್ಯಾಸ್ಟಿಂಗ್ ಸಿದ್ಧತೆಯ ಬಗ್ಗೆ ಪ್ರತಿನಿಧಿಗಳು ಅರಿತುಕೊಳ್ಳಲು ಆಯಾ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳು ಅಗತ್ಯ ವ್ಯವಸ್ಥೆ ಕಲ್ಪಿಸಿದ್ದರು. ಅಲ್ಲದೇ ಪ್ರಿಸೈಡಿಂಗ್ ಅಧಿಕಾರಿ ಮತ್ತು ಪೋಲಿಂಗ್ ಅಧಿಕಾರಿಗಳೊಂದಿಗೆ ಹೇಗೆ ವ್ಯವಹರಿಸಲಾಗುವುದು, ಮತದಾನದ ದಿನದ ಹಿಂದಿನ ದಿನದ ಕಾರ್ಯಗಳೇನು ಎಂಬ ಬಗ್ಗೆ ಪ್ರತಿನಿಧಿಗಳು ನೋಡಲು ಅವಕಾಶ ಕಲ್ಪಿಸಲಾಗಿತ್ತು. ಅಣಕು ಮತದಾನ ಮತ್ತು ವಾಸ್ತವ ಮತದಾನ ಪ್ರಕ್ರಿಯೆಗೂ ಪ್ರತಿನಿಧಿಗಳ ತಂಡ ಸಾಕ್ಷಿಯಾಗಿದ್ದು, ಮತದಾನದ ದಿನವಾದ 2024ರ ಮೇ 7 ರಂದು ಮತದಾರರೊಂದಿಗೆ ಈ ತಂಡ ಸಂವಾಧ ಕೂಡ ನಡೆಸಿದೆ.

*****
 


(Release ID: 2020193) Visitor Counter : 235