ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ರಾಷ್ಟ್ರಪತಿಯವರನ್ನು ಭೇಟಿ ಮಾಡಿದ ಭಾರತೀಯ ಆರ್ಥಿಕ ಸೇವಾ ಪ್ರೊಬೇಷನರಿ ಅಧಿಕಾರಿಗಳು

Posted On: 16 APR 2024 12:43PM by PIB Bengaluru

2022 ಮತ್ತು 2023ನೇ ಸಾಲಿನ ಭಾರತೀಯ ಆರ್ಥಿಕ ಸೇವಾ ಪ್ರೊಬೇಷನರಿ ಅಧಿಕಾರಿಗಳ ಗುಂಪು ಇಂದು, ಅಂದರೆ ಏಪ್ರಿಲ್ 16, 2024ರಂದು ರಾಷ್ಟ್ರಪತಿ ಭವನದಲ್ಲಿ ಭಾರತದ ರಾಷ್ಟ್ರಪತಿ, ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿತು.
 
ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಯವರು, ದೇಶದ ಅಭಿವೃದ್ಧಿಯಲ್ಲಿ ಆರ್ಥಿಕ ಬೆಳವಣಿಗೆ ಪ್ರಮುಖ ಅಂಶವಾಗಿದೆ ಎಂದು ಹೇಳಿದರು. ಸ್ಥೂಲ ಮತ್ತು ಸೂಕ್ಷ್ಮ ಆರ್ಥಿಕ ಸೂಚಕಗಳನ್ನು ಪ್ರಗತಿಯ ಉಪಯುಕ್ತ ನಿಯತಾಂಕಗಳು ಎಂದು ಪರಿಗಣಿಸಲಾಗುವುದರಿಂದ, ಸರ್ಕಾರದ ನೀತಿ ಮತ್ತು ಯೋಜನೆಗಳನ್ನು ಪರಿಣಾಮಕಾರಿ ಹಾಗೂ ಉಪಯುಕ್ತವಾಗಿ ಬಳಸುವಲ್ಲಿ ಅರ್ಥಶಾಸ್ತ್ರಜ್ಞರ ಪಾತ್ರ ಮುಖ್ಯವಾಗಿದೆ ಎಂದು ಅವರು ತಿಳಿಸಿದರು. ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯತ್ತ ಸಾಗುತ್ತಿರುವ ಈ ಸಂದರ್ಭದಲ್ಲಿ, ಮುಂಬರುವ ದಿನಗಳಲ್ಲಿ ಭಾರತೀಯ ಆರ್ಥಿಕ ಸೇವಾ ಅಧಿಕಾರಿಗಳು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿ, ಅದನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಲು ಅಸಂಖ್ಯಾತ ಅವಕಾಶಗಳನ್ನು ಪಡೆಯುತ್ತಾರೆ ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು. ಈ ಅವಕಾಶಗಳ ಸದುಪಾಯದ ಲಾಭವನ್ನು ಪಡೆಯುವ ಮೂಲಕ ಅಧಿಕಾರಿಗಳು ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಬಹುದು ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
 
ಭಾರತೀಯ ಆರ್ಥಿಕ ಸೇವಾ ಅಧಿಕಾರಿಗಳು ಆರ್ಥಿಕ ವಿಶ್ಲೇಷಣೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ವಿನ್ಯಾಸ ಹಾಗೂ ಸಂಪನ್ಮೂಲ ವಿತರಣಾ ವ್ಯವಸ್ಥೆಯನ್ನು ಬಲಪಡಿಸಿ, ಯೋಜನೆಗಳನ್ನು ಮೌಲ್ಯಮಾಪನ ಮಾಡಲು ಸೂಕ್ತ ಸಲಹೆ ನೀಡುವ ನಿರೀಕ್ಷೆಯನ್ನು ಹೊಂದಿರುವುದಾಗಿ ರಾಷ್ಟ್ರಪತಿಯವರು ಹೇಳಿದರು. ಅವರು ನೀಡುವ ಸಲಹೆಗಳ ಆಧಾರದ ಮೇಲೆ ನೀತಿಗಳನ್ನು ನಿರ್ಧರಿಸಲಾಗುವುದರಿಂದ ಇದು ಬಹಳ ಮುಖ್ಯವಾದ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು.
 
ದತ್ತಾಂಶಗಳ ವಿಶ್ಲೇಷಣೆ ಮತ್ತು ಪುರಾವೆ-ಆಧಾರಿತ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನವು ಜನರ ಆರ್ಥಿಕತೆಯನ್ನು ಉನ್ನತೀಕರಿಸಲು ಸರ್ಕಾರಕ್ಕೆ ಸಹಾಯ ಮಾಡಲಿದೆ ಎಂದ ರಾಷ್ಟ್ರಪತಿಯವರು, ಹೊಸ ಆಲೋಚನೆಗಳು, ವಿಧಾನಗಳು ಮತ್ತು ತಂತ್ರಗಳ ಮೂಲಕ ತಮ್ಮ ಕೆಲಸದ ದಕ್ಷತೆಯನ್ನು ಹೆಚ್ಚಿಸುವುದು ಯುವ ಭಾರತೀಯ ಆರ್ಥಿಕ ಸೇವಾ ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ಅವರು ಹೇಳಿದರು. ತ್ವರಿತವಾಗಿ ಬದಲಾಗುತ್ತಿರುವ ಈ ಯುಗದಲ್ಲಿ ದೇಶಕ್ಕೆ ಪ್ರಗತಿಯ ಹೊಸ ಅವಕಾಶಗಳನ್ನು ಸೃಷ್ಟಿಸಲು ಅವರ ಸೃಜನಶೀಲತೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
 
2022 ಮತ್ತು 2023ನೇ ಸಾಲಿನ ಭಾರತೀಯ ಆರ್ಥಿಕ ಸೇವೆಯ ಅಧಿಕಾರಿಗಳಲ್ಲಿ ಶೇಕಡಾ 60ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಮಹಿಳಾ ಅಧಿಕಾರಿಗಳಾಗಿರುವುದು ರಾಷ್ಟ್ರಪತಿಯವರ ಸಂತಸಕ್ಕೆ ಕಾರಣವಾಯಿತು. ಮಹಿಳೆಯರು ತಮ್ಮ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವುದರಿಂದ ಭಾರತದ ಅಂತರ್ಗತ ಅಭಿವೃದ್ಧಿಯ ಸಂಕಲ್ಪವನ್ನು ಇದು ಪೂರೈಸಲಿದೆ ಎಂದು ಅವರು ಹೇಳಿದರು. ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗಾಗಿ ಮಹಿಳಾ ಅಧಿಕಾರಿಗಳು ಕೆಲಸ ಮಾಡಬೇಕೆಂದು ಅವರು ಒತ್ತಾಯಿಸಿದರು.
 
ನೀತಿ ಸಂಬಂಧಿತ ಸಲಹೆಗಳನ್ನು ನೀಡುವ ಸಂದರ್ಭದಲ್ಲಿ ಅಥವಾ ತಮ್ಮ ಕಛೇರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ದೇಶದ ಬಡ ಮತ್ತು ಹಿಂದುಳಿದ ವರ್ಗಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಳ್ಳುವಂತೆ ರಾಷ್ಟ್ರಪತಿಯವರು ಯುವ ಅಧಿಕಾರಿಗಳನ್ನು ಒತ್ತಾಯಿಸಿದರು.

****


(Release ID: 2018054) Visitor Counter : 159