ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಮಿಥ್ಯ ಮತ್ತು ವಾಸ್ತವ
ಔಷಧಿಗಳ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ ಎಂದು ಮಾಧ್ಯಮ ವರದಿಗಳು ಸುಳ್ಳು ಮತ್ತು ತಪ್ಪುದಾರಿಗೆಳೆಯುವಂತಿವೆ ಎನ್ ಪಿ ಪಿ ಎ ವಾರ್ಷಿಕವಾಗಿ ಸಗಟು ಬೆಲೆ ಸೂಚ್ಯಂಕದ ಆಧಾರದ ಮೇಲೆ ನಿಗದಿತ ಔಷಧಿಗಳ ಗರಿಷ್ಠ ಬೆಲೆಗಳನ್ನು ಪರಿಷ್ಕರಿಸುತ್ತದೆ
0.00551% ನಷ್ಟು ಡಬ್ಲ್ಯುಪಿಐ ಹೆಚ್ಚಳದ ಆಧಾರದ ಮೇಲೆ, 782 ಔಷಧಿಗಳಿಗೆ ಚಾಲ್ತಿಯಲ್ಲಿರುವ ಗರಿಷ್ಠ ಬೆಲೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಕೆಲವು 54 ಔಷಧಿಗಳ ಬೆಲೆಯಲ್ಲಿ ಮಾತ್ರ ರೂ. 0.01 (ಒಂದು ಪೈಸೆ)ರಷ್ಟು ಕನಿಷ್ಠ ಹೆಚ್ಚಳವಿರುತ್ತದೆ
ಡಬ್ಲ್ಯುಪಿಐ ಹೆಚ್ಚಳವು ಡಿಪಿಸಿಒ 2013 ರ ಪ್ರಕಾರ ಅನುಮತಿಸಲಾದ ಗರಿಷ್ಠ ಹೆಚ್ಚಳವಾಗಿದೆ ಮತ್ತು ತಯಾರಕರು ತಮ್ಮ ಔಷಧಿಗಳಲ್ಲಿ ಈ ಅತ್ಯಲ್ಪ ಹೆಚ್ಚಳದ ಪ್ರಯೋಜನವನ್ನು ಪಡೆಯಬಹುದು ಅಥವಾ ಪಡೆಯದಿರಬಹುದು
Posted On:
03 APR 2024 12:31PM by PIB Bengaluru
ಏಪ್ರಿಲ್, 2024 ರಿಂದ ಔಷಧಿಗಳ ಬೆಲೆಯಲ್ಲಿ ಶೇಕಡಾ 12 ರಷ್ಟು ಭಾರಿ ಏರಿಕೆಯಾಗಲಿದೆ ಎಂದು ಕೆಲವು ಮಾಧ್ಯಮ ವರದಿಗಳು ಪ್ರಮುಖವಾಗಿ ಹೇಳಿವೆ. ಈ ಬೆಲೆ ಏರಿಕೆಯಿಂದ 500 ಕ್ಕೂ ಹೆಚ್ಚು ಔಷಧಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ಅಂತಹ ವರದಿಗಳಲ್ಲಿ ಹೇಳಲಾಗಿದೆ. ಇಂತಹ ವರದಿಗಳು ಸುಳ್ಳಾಗಿದ್ದು, ತಪ್ಪುದಾರಿಗೆಳೆಯುವ ಮತ್ತು ದುರುದ್ದೇಶಪೂರಿತವಾಗಿವೆ.
ಔಷಧ ಬೆಲೆ ನಿಯಂತ್ರಣ ಆದೇಶಗಳ (ಡಿಪಿಸಿಒ) 2013 ರ ನಿಬಂಧನೆಗಳ ಪ್ರಕಾರ, ಔಷಧಿಗಳನ್ನು ನಿಗದಿತ ಮತ್ತು ನಿಗದಿತವಲ್ಲದ ಮಿಶ್ರಣ (ಫಾರ್ಮ್ಯುಲೇಶನ್) ಗಳನ್ನಾಗಿ ವರ್ಗೀಕರಿಸಲಾಗಿದೆ. ಡಿಪಿಸಿಒ 2013 ರ ಅನುಸೂಚಿ-I ರಲ್ಲಿ ಪಟ್ಟಿ ಮಾಡಲಾದ ಫಾರ್ಮ್ಯುಲೇಶನ್ ಗಳು ನಿಗದಿತ ಫಾರ್ಮ್ಯುಲೇಶನ್ ಗಳಾಗಿವೆ ಮತ್ತು ಡಿಪಿಸಿಒ 2013 ರ ಅನುಸೂಚಿ-I ರಲ್ಲಿ ಇಲ್ಲದ ಫಾರ್ಮ್ಯುಲೇಶನ್ ಗಳು ನಿಗದಿತವಲ್ಲದ ಫಾರ್ಮ್ಯುಲೇಶನ್ ಗಳಾಗಿವೆ.
ಔಷಧೀಯ ಇಲಾಖೆಯ ಅಡಿಯಲ್ಲಿ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (ಎನ್ ಪಿ ಪಿ ಎ) ವಾರ್ಷಿಕವಾಗಿ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರದ ಮೇಲೆ ನಿಗದಿತ ಔಷಧಿಗಳ ಗರಿಷ್ಠ ಬೆಲೆಗಳನ್ನು ಪರಿಷ್ಕರಿಸುತ್ತದೆ. ಡಿಪಿಸಿಒ, 2013 ರ ಅನುಸೂಚಿ-I ರಲ್ಲಿ ಸೇರಿಸಲಾದ ನಿಗದಿತ ಔಷಧಿಗಳು ಅತ್ಯಗತ್ಯ ಔಷಧಿಗಳಾಗಿವೆ. 2022 ರ ಅನುಗುಣವಾದ ಅವಧಿಯಲ್ಲಿ 2023 ರ ಕ್ಯಾಲೆಂಡರ್ ವರ್ಷದಲ್ಲಿ, 2011-12 ರ ಮೂಲ ವರ್ಷದೊಂದಿಗೆ ಸಗಟು ಬೆಲೆ ಸೂಚ್ಯಂಕದಲ್ಲಿನ ವಾರ್ಷಿಕ ಬದಲಾವಣೆಯು (+) 0.00551% ನಷ್ಟಿತ್ತು ಎಂದು ಉದ್ಯಮ ಮತ್ತು ಆಂತರಿಕ ವ್ಯಾಪಾರದ ಉತ್ತೇಜನದ ಇಲಾಖೆ (ಡಿಪಿಐಐಟಿ) ಪ್ರಕಟಿಸಿದೆ. ಅದರಂತೆ, 20.3.2024 ರಂದು ನಡೆದ ತನ್ನ ಸಭೆಯಲ್ಲಿ ಪ್ರಾಧಿಕಾರವು ನಿಗದಿತ ಔಷಧಿಗಳಿಗೆ ಡಬ್ಲ್ಯುಪಿಐ ಹೆಚ್ಚಳ @ (+) 0.00551% ರಷ್ಟನ್ನು ಅನುಮೋದಿಸಿದೆ.
923 ಔಷಧಿಗಳ ಮೇಲಿನ ಗರಿಷ್ಠ ಬೆಲೆಗಳು ದಿನಾಂಕದಿಂದ ಜಾರಿಯಲ್ಲಿವೆ. ಮೇಲೆ ತಿಳಿಸಿದ ಡಬ್ಲ್ಯುಪಿಐ ಅಂಶದ (+) 0.00551% ಆಧಾರದ ಮೇಲೆ, 782 ಔಷಧಿಗಳಿಗೆ ಚಾಲ್ತಿಯಲ್ಲಿರುವ ಗರಿಷ್ಠ ಬೆಲೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಮತ್ತು ಅಸ್ತಿತ್ವದಲ್ಲಿರುವ ಗರಿಷ್ಠ ಬೆಲೆಗಳು 31.3.2025 ರವರೆಗೆ ಚಾಲ್ತಿಯಲ್ಲಿರುತ್ತವೆ. 90 ರೂಪಾಯಿಯಿಂದ 261 ರೂಪಾಯಿಗಳ ಗರಿಷ್ಠ ಬೆಲೆಯನ್ನು ಹೊಂದಿರುವ ಐವತ್ನಾಲ್ಕು (54) ಔಷಧಿಗಳು ರೂ.0.01(ಒಂದು ಪೈಸೆ) ರಷ್ಟು ಕನಿಷ್ಠ ಹೆಚ್ಚಳವನ್ನು ಹೊಂದಿರುತ್ತದೆ. ಅನುಮತಿಸಿದ ಬೆಲೆ ಹೆಚ್ಚಳವು ಅತ್ಯಲ್ಪವಾಗಿರುವುದರಿಂದ, ಕಂಪನಿಗಳು ಈ ಹೆಚ್ಚಳದ ಪ್ರಯೋಜನ ಪಡೆಯಬಹುದು ಅಥವಾ ಪಡೆಯದಿರಬಹುದು. ಹೀಗಾಗಿ, 2024-25 ರ ಹಣಕಾಸು ವರ್ಷದಲ್ಲಿ, ಡಬ್ಲ್ಯುಪಿಐ ಆಧಾರಿತ ಔಷಧಿಗಳ ಗರಿಷ್ಠ ಬೆಲೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಡಬ್ಲ್ಯುಪಿಐ ಹೆಚ್ಚಳವು ಡಿಪಿಸಿಒ, 2013 ರ ಪ್ರಕಾರ ಅನುಮತಿಸಲಾದ ಗರಿಷ್ಠ ಹೆಚ್ಚಳವಾಗಿದೆ ಮತ್ತು ತಯಾರಕರು ಮಾರುಕಟ್ಟೆಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಹೆಚ್ಚಳವನ್ನು ಮಾಡಬಹುದು ಅಥವಾ ಮಾಡದಿರಬಹುದು. ಕಂಪನಿಗಳು ತಮ್ಮ ಔಷಧಿಗಳ ಗರಿಷ್ಠ ಬೆಲೆಯನ್ನು ಅವಲಂಬಿಸಿ ತಮ್ಮ ಗರಿಷ್ಠ ಚಿಲ್ಲರೆ ಬೆಲೆಯನ್ನು (ಎಂಆರ್ ಪಿ) ಸರಿಹೊಂದಿಸುತ್ತವೆ, ಏಕೆಂದರೆ ಗರಿಷ್ಠ ಚಿಲ್ಲರೆ ಬೆಲೆ (ಜಿಎಸ್ ಟಿ ಹೊರತುಪಡಿಸಿ) ಯು ಗರಿಷ್ಠ ಬೆಲೆಗಿಂತ ಕಡಿಮೆ ಇರುವ ಯಾವುದೇ ಬೆಲೆಯಾಗಿರಬಹುದು. ಪರಿಷ್ಕೃತ ಬೆಲೆಗಳು 1ನೇ ಏಪ್ರಿಲ್ 2024 ರಿಂದ ಅನ್ವಯವಾಗುತ್ತವೆ ಮತ್ತು ಪರಿಷ್ಕೃತ ಬೆಲೆಗಳ ವಿವರವು ಎನ್ ಪಿ ಪಿ ಎನ ಜಾಲತಾಣ http://www.nppaindia.nic.in ನಲ್ಲಿ ಲಭ್ಯವಿದೆ.
ನಿಗದಿತವಲ್ಲದ ಫಾರ್ಮ್ಯುಲೇಶನ್ ಔಷಧಿಗಳ ವಿಷಯದಲ್ಲಿ, ಬೆಲೆಯನ್ನು ನಿಗದಿಪಡಿಸಲು ತಯಾರಕರು ಸ್ವಾತಂತ್ರ್ಯರು. ಆದಾಗ್ಯೂ, ಡಿಪಿಸಿಒ, 2013 ರ ಪ್ಯಾರಾ 20 ರ ಅಡಿಯಲ್ಲಿ ಹಿಂದಿನ 12 ತಿಂಗಳುಗಳಲ್ಲಿ ನಿಗದಿತವಲ್ಲದ ಫಾರ್ಮ್ಯುಲೇಶನ್ ಔಷಧಿಗಳ ಯಾವುದೇ ತಯಾರಕರು ಗರಿಷ್ಠ ಚಿಲ್ಲರೆ ಬೆಲೆಯನ್ನು 10% ಕ್ಕಿಂತ ಮೇಲೆ ಹೆಚ್ಚಿಸಲು ಸಾಧ್ಯವಿಲ್ಲ.
*****
(Release ID: 2017102)
Visitor Counter : 83