ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿಯವರಿಂದ ಮೊದಲ ರಾಷ್ಟ್ರೀಯ ಕ್ರಿಯೇಟರ್ಸ್‌ ಪ್ರಶಸ್ತಿಗಳ ಪ್ರದಾನ


"ರಾಷ್ಟ್ರೀಯ ಕ್ರಿಯೇಟರ್ಸ್‌ ಪ್ರಶಸ್ತಿಗಳು ನಮ್ಮ ಕ್ರಿಯೇಟರ್ಸ್‌ ಸಮುದಾಯದ ಪ್ರತಿಭೆಯನ್ನು ಗುರುತಿಸುತ್ತವೆ ಮತ್ತು ಧನಾತ್ಮಕ ಬದಲಾವಣೆಯನ್ನು ಚಾಲನೆ ನೀಡುವ ಅವರ ಹುರುಪನ್ನು ಸಂಭ್ರಮಿಸುತ್ತವೆ"

"ರಾಷ್ಟ್ರೀಯ ಕ್ರಿಯೇಟರ್ಸ್‌ ಪ್ರಶಸ್ತಿಗಳು ನವ ಯುಗಕ್ಕೆ ಅದರ ಆರಂಭಕ್ಕೂ ಮೊದಲು ಗುರುತನ್ನು ನೀಡುತ್ತಿವೆ"

"ಡಿಜಿಟಲ್ ಇಂಡಿಯಾ ಅಭಿಯಾನವು ಕಂಟೆಂಟ್‌ ಕ್ರಿಯೇಟರ್‌ ಗಳ ಹೊಸ ಜಗತ್ತನ್ನು ಸೃಷ್ಟಿಸಿದೆ"

"ನಮ್ಮ ಶಿವನು ನಟರಾಜ, ಅವನ ಡಮರುಗ ಮಹೇಶ್ವರ ಸೂತ್ರವನ್ನು ಸೃಷ್ಟಿಸುತ್ತದೆ, ಅವನ ತಾಂಡವ ಲಯ ಮತ್ತು ಸೃಷ್ಟಿಗೆ ಬುನಾದಿಯನ್ನು ಹಾಕುತ್ತದೆ"

"ಯುವಜನರು ತಮ್ಮ ಸಕಾರಾತ್ಮಕ ಕ್ರಿಯೆಗಳೊಂದಿಗೆ ಸರ್ಕಾರವು ಕಂಟೆಂಟ್‌ ಕ್ರಿಯೇಟರ್‌ ಗಳ ಕಡೆಗೆ ನೋಡುವಂತೆ ಮಾಡಿದ್ದಾರೆ"

“ನೀವು ಒಂದು ಕಲ್ಪನೆಯನ್ನು ರೂಪಿಸಿದ್ದೀರಿ, ಹೊಸತನವನ್ನು ತುಂಬಿದ್ದೀರಿ ಮತ್ತು ಪರದೆಯ ಮೇಲೆ ಅದಕ್ಕೆ ಜೀವ ನೀಡಿದ್ದೀರಿ. ನೀವು ಅಂತರ್ಜಾಲದ ಎಂವಿಪಿಗಳು"

"ಕಂಟೆಂಟ್ ರಚನೆಯು ದೇಶದ ಬಗೆಗಿನ ತಪ್ಪು ಗ್ರಹಿಕೆಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ"

"ಮಾದಕ ವಸ್ತುಗಳ ಕೆಟ್ಟ ಪರಿಣಾಮಗಳ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸುವ ಕಂಟೆಂಟ್‌ ಅನ್ನು ನಾವು ರಚಿಸಬಹುದೇ? ನಾವು ಹೇಳಬಹುದು - ಡ್ರಗ್ಸ್ ಒಳ್ಳೆಯದಲ್ಲ"

Posted On: 08 MAR 2024 1:45PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತ ಮಂಟಪದಲ್ಲಿ ಮೊಟ್ಟಮೊದಲ ರಾಷ್ಟ್ರೀಯ ಕ್ರಿಯೇಟರ್ಸ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ವಿಜೇತರೊಂದಿಗೆ ಸಂವಾದವನ್ನೂ ನಡೆಸಿದರು. ರಾಷ್ಟ್ರೀಯ ಕ್ರಿಯೇಟರ್ಸ್ ಪ್ರಶಸ್ತಿಯು ಕಥೆ ಹೇಳುವಿಕೆ, ಸಾಮಾಜಿಕ ಬದಲಾವಣೆಗೆ ಪ್ರೋತ್ಸಾಹ, ಪರಿಸರ ಸುಸ್ಥಿರತೆ, ಶಿಕ್ಷಣ ಮತ್ತು ಗೇಮಿಂಗ್ ಸೇರಿದಂತೆ ಹಲವು ವಲಯಗಳಲ್ಲಿ ಶ್ರೇಷ್ಠತೆ ಮತ್ತು ಪರಿಣಾಮವನ್ನು ಗುರುತಿಸುವ ಪ್ರಯತ್ನವಾಗಿದೆ. ಸಕಾರಾತ್ಮಕ ಬದಲಾವಣೆಗಾಗಿ ಸೃಜನಶೀಲತೆಯನ್ನು ಬಳಸುವುದಕ್ಕಾಗಿ ಪ್ರಶಸ್ತಿಯನ್ನು ಚಿಮ್ಮುಹಲಗೆಯಾಗಿ ರೂಪಿಸಲಾಗಿದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಈ ಸಂದರ್ಭಕ್ಕಾಗಿ ಆಯ್ಕೆ ಮಾಡಲಾದ ಭಾರತ ಮಂಟಪದ ಸ್ಥಳದ ಬಗ್ಗೆ ಪ್ರಸ್ತಾಪಿಸಿ, ಜಿ 20 ಶೃಂಗಸಭೆಯಲ್ಲಿ ವಿಶ್ವ ನಾಯಕರು ಭವಿಷ್ಯತ್ತಿಗೆ ಮಾರ್ಗದರ್ಶನ ನೀಡಿದ ಸ್ಥಳದಲ್ಲಿಯೇ ಇಂದು ರಾಷ್ಟ್ರೀಯ ಕ್ರಿಯೇಟರ್ಸ್ ಸೇರಿದ್ದಾರೆ ಎಂದು ಹೇಳಿದರು.

ಬದಲಾಗುವ ಕಾಲಮಾನ ಮತ್ತು ನವಯುಗದೊಂದಿಗೆ ನಡೆಯುವುದು ದೇಶದ ಜವಾಬ್ದಾರಿಯಾಗಿದೆ ಎಂದು ಒತ್ತಿ ಹೇಳಿದ ಪ್ರಧಾನಿ, ರಾಷ್ಟ್ರವು ಇಂದು ಮೊದಲ ರಾಷ್ಟ್ರೀಯ ಕ್ರಿಯೇಟರ್ಸ್ ಪ್ರಶಸ್ತಿಗಳೊಂದಿಗೆ ಆ ಹೊಣೆಗಾರಿಕೆಯನ್ನು ಪೂರೈಸುತ್ತಿದೆ ಎಂದರು. "ರಾಷ್ಟ್ರೀಯ ಕ್ರಿಯೇಟರ್ಸ್ ಪ್ರಶಸ್ತಿಗಳು ಹೊಸ ಯುಗದ ಆರಂಭಕ್ಕೂ ಮೊದಲೇ ಅದಕ್ಕೆ ಗುರುತನ್ನು ನೀಡುತ್ತಿವೆ" ಎಂದು ಅವರು ಹೇಳಿದರು. ಭವಿಷ್ಯವನ್ನು ಮುಂಚಿತವಾಗಿಯೇ ವಿಶ್ಲೇಷಿಸುವ ಪಾರಮ್ಯವನ್ನು ಎತ್ತಿ ತೋರಿಸಿದರು. ಹೊಸ ಯುಗಕ್ಕೆ ಶಕ್ತಿ ತುಂಬುವ ಮೂಲಕ ಮತ್ತು ಯುವಜನರ ಸೃಜನಶೀಲತೆ ಮತ್ತು ದೈನಂದಿನ ಜೀವನದ ಬಗ್ಗೆ ಸಂವೇದನಾಶೀಲವಾಗುವ ಮೂಲಕ ರಾಷ್ಟ್ರೀಯ ಕ್ರಿಯೇಟರ್ಸ್‌ ಪ್ರಶಸ್ತಿಗಳು ಮುಂದಿನ ದಿನಗಳಲ್ಲಿ ಬಲವಾದ ಪ್ರಭಾವವನ್ನು ಬೀರುತ್ತವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಭವಿಷ್ಯದಲ್ಲಿ, ರಾಷ್ಟ್ರೀಯ ಕ್ರಿಯೇಟರ್ಸ್‌ ಪ್ರಶಸ್ತಿಗಳು ಕಂಟೆಂಟ್‌ ರಚನೆಕಾರರಿಗೆ ಸ್ಫೂರ್ತಿಯ ದೊಡ್ಡ ಮೂಲವಾಗುತ್ತವೆ ಮತ್ತು ಅವರ ಕೆಲಸಕ್ಕೆ ಗುರುತನ್ನು ನೀಡುತ್ತವೆ ಎಂದು ಪ್ರಧಾನಮಂತ್ರಿ ಹೇಳಿದರು. ಪ್ರಧಾನಮಂತ್ರಿಯವರು ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದರು ಮತ್ತು ಸ್ಪರ್ಧಿಗಳು ಅತ್ಯಂತ ಕಡಿಮೆ ಸಮಯದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಎರಡು ಲಕ್ಷಕ್ಕೂ ಹೆಚ್ಚು ಸೃಜನಶೀಲ ಮನಸ್ಸುಗಳ ಒಕ್ಕೂಟವು ರಾಷ್ಟ್ರಕ್ಕೆ ಒಂದು ಗುರುತನ್ನು ಸೃಷ್ಟಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು.

ಮಹಾ ಶಿವರಾತ್ರಿಯ ಶುಭ ಸಂದರ್ಭದಲ್ಲಿ ಮೊಟ್ಟಮೊದಲ ರಾಷ್ಟ್ರೀಯ ಕ್ರಿಯೇಟರ್ಸ್‌ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿದೆ ಎಂದು ತಿಳಿಸಿದ ಪ್ರಧಾನಿ, ಭಗವಾನ್ ಶಿವನನ್ನು ಭಾಷೆ, ಕಲೆ ಮತ್ತು ಸೃಜನಶೀಲತೆಯ ಸೃಷ್ಟಿಕರ್ತ ಎಂದು ಸಂಬೋಧಿಸಲಾಗುತ್ತದೆ ಎಂದು ಹೇಳಿದರು. "ನಮ್ಮ ಶಿವ ನಟರಾಜ, ಅವ ಡಮರುಗವು ಮಹೇಶ್ವರ ಸೂತ್ರವನ್ನು ಸೃಷ್ಟಿಸುತ್ತದೆ, ಅವನ ತಾಂಡವ ಲಯ ಮತ್ತು ಸೃಷ್ಟಿಗೆ ಬುನಾದಿಯನ್ನು ಹಾಕುತ್ತದೆ" ಎಂದು ಪ್ರಧಾನಮಂತ್ರಿ ಹೇಳಿದರು, ಅವರು ಮಹಾ ಶಿವರಾತ್ರಿಯಂದು ಎಲ್ಲರಿಗೂ ತಮ್ಮ ಶುಭಾಶಯಗಳನ್ನು ತಿಳಿಸಿದರು.

ಅಂತಾರಾಷ್ಟ್ರೀಯ ಮಹಿಳಾ ದಿನವಾದ ಇಂದಿನ ಸಂದರ್ಭವನ್ನು ಗಮನಿಸಿದ ಪ್ರಧಾನಮಂತ್ರಿಯವರು ಪ್ರಶಸ್ತಿಗಳನ್ನು ಪಡೆದ ಮಹಿಳೆಯರನ್ನು ಅಭಿನಂದಿಸಿದರು. ಭಾರತದ ಸೃಜನಶೀಲ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯ ಬಗ್ಗೆ ಅವರು ಹೆಮ್ಮೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಮಹಿಳೆಯರಿಗೆ ಶುಭ ಹಾರೈಸಿದ ಅವರು ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ 100 ರೂ. ಕಡಿತಗೊಳಿಸುವ ನಿರ್ಧಾರದ ಬಗ್ಗೆ ತಿಳಿಸಿದರು. ನೆರೆದ ಸಭಿಕರು ಭಾರೀ ಕರತಾಡನ ಮಾಡಿದರು.

ರಾಷ್ಟ್ರದ ಅಭಿವೃದ್ಧಿ ಪಯಣದ ಮೇಲೆ ಒಂದು ಯೋಜನೆ ಅಥವಾ ನೀತಿಯ ಪರಿಣಾಮದ ಪರಿಣಾಮದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿಯವರು, ಕಳೆದ 10 ವರ್ಷಗಳಲ್ಲಿ ಡೇಟಾ ಕ್ರಾಂತಿ ಮತ್ತು ಕಡಿಮೆ-ವೆಚ್ಚದ ಡೇಟಾ ಲಭ್ಯತೆಯನ್ನು ಉಲ್ಲೇಖಿಸಿದರು. ಕಂಟೆಂಟ್ ಕ್ರಿಯೇಟರ್‌ ಗಳು ಹೊಸ ಜಗತ್ತನ್ನು ರೂಪಿಸುವ ಶ್ರೇಯಸ್ಸು ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ಸಲ್ಲಬೇಕು ಎಂದ ಅವರು ಈ ದಿಸೆಯಲ್ಲಿ ಯುವಜನರ ಪ್ರಯತ್ನವನ್ನು ಶ್ಲಾಘಿಸಿದರು. ಯುವಜನರು ತಮ್ಮ ಸಕಾರಾತ್ಮಕ ಕ್ರಿಯೆಗಳೊಂದಿಗೆ ಸರ್ಕಾರವು ಕಂಟೆಂಟ್ ರಚನೆಕಾರರ ಕಡೆಗೆ ನೋಡುವಂತೆ ಮಾಡಿದ್ದಾರೆ ಎಂದರು.

ಯಾವುದೇ ರಚನೆಕಾರರು ಕಂಟೆಂಟ್ ರಚನೆಯ ಕೋರ್ಸ್‌ ಪಡೆದಿಲ್ಲ, ಏಕೆಂದರೆ ಅಂತಹ ಯಾವುದೂ ಅಸ್ತಿತ್ವದಲ್ಲಿರಲಿಲ್ಲ ಮತ್ತು ತಮ್ಮ ಶಿಕ್ಷಣದಿಂದ ಕಂಟೆಂಟ್ ರಚನೆಯತ್ತ ಅವರ ಪ್ರಯಾಣ ನಡೆದಿದೆ ಎಂದು ಪ್ರಧಾನಿ ಹೇಳಿದರು. "ನೀವು ನಿಮ್ಮ ಸ್ವಂತ ಯೋಜನೆಗಳ ಲೇಖಕರು, ನಿರ್ದೇಶಕರು, ನಿರ್ಮಾಪಕರು ಮತ್ತು ಸಂಪಾದಕರು" ಎಂದು ಅವರು ಹೇಳಿದರು. “ನೀವು ಒಂದು ಕಲ್ಪನೆಯನ್ನು ರೂಪಿಸಿದ್ದೀರಿ, ಹೊಸತನವನ್ನು ತುಂಬಿದ್ದೀರಿ ಮತ್ತು ಪರದೆಯ ಮೇಲೆ ಅದಕ್ಕೆ ಜೀವ ನೀಡಿದ್ದೀರಿ. ನೀವು ನಿಮ್ಮ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸಿದ್ದು ಮಾತ್ರವಲ್ಲದೆ ಅವರಿಗೆ ಜಗತ್ತನ್ನು ತೋರಿಸಿದ್ದೀರಿ”ಎಂದು ಪ್ರಧಾನಮಂತ್ರಿಯವರು ಕಂಟೆಟ್ ರಚನೆಕಾರರ ಧೈರ್ಯ ಮತ್ತು ದೃಢತೆಯನ್ನು ಶ್ಲಾಘಿಸಿದರು. ಭಾರತದಾದ್ಯಂತ ಕಂಟೆಂಟ್‌‌ ನ ಪ್ರಭಾವವನ್ನು ಒಪ್ಪಿಕೊಂಡ ಪ್ರಧಾನಿಯವರು ನೀವು ಅಂತರ್ಜಾಲದ ಎಂವಿಪಿಗಳು ಎಂದು ಹೇಳಿದರು.

ಕಂಟೆಂಟ್ ಮತ್ತು ಸೃಜನಶೀಲತೆಯ ಸಹಯೋಗವು ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ, ಕಂಟೆಂಟ್ ಮತ್ತು ಡಿಜಿಟಲ್ ಸಹಯೋಗವು ರೂಪಾಂತರವನ್ನು ತರುತ್ತದೆ ಮತ್ತು ಉದ್ದೇಶದೊಂದಿಗೆ ಕಂಟೆಂಟ್ ಸಹಯೋಗವು ಪರಿಣಾಮವನ್ನು ತೋರಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಕಂಟೆಂಟ್ ಮೂಲಕ ಸ್ಫೂರ್ತಿಯನ್ನು ತುಂಬಲು ಕಂಟೆಂಟ್ ರಚನೆಕಾರರನ್ನು ವಿನಂತಿಸಿದರು ಮತ್ತು ಮಹಿಳೆಯರ ಬಗೆಗಿನ ಅಗೌರವದ ವಿಷಯವನ್ನು ಕೆಂಪುಕೋಟೆಯಿಂದ ಪ್ರಸ್ತಾಪಿಸಿದ್ದನ್ನು ಸ್ಮರಿಸಿದರು. ಗಂಡು ಮತ್ತು ಹೆಣ್ಣು ಮಕ್ಕಳನ್ನು ಬೆಳೆಸುವಾಗ ಪೋಷಕರಲ್ಲಿ ಸಮಾನತೆಯ ಮನೋಭಾವವನ್ನು ಬೆಳೆಸಬೇಕೆಂದು ಅವರು ಒತ್ತಾಯಿಸಿದರು. ಕಂಟೆಂಟ್ ರಚನೆಕಾರರು ಸಮಾಜದೊಂದಿಗೆ ಬೆರೆಯಬೇಕು ಮತ್ತು ಈ ಮನೋಭಾವವನ್ನು ಪ್ರತಿ ಮನೆಗೂ ಕೊಂಡೊಯ್ಯುವ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಭಾರತದ ನಾರಿ ಶಕ್ತಿಯ ಸಾಮರ್ಥ್ಯಗಳನ್ನು ತೋರಿಸುವಂತೆ ಕಂಟೆಂಟ್‌ ರಚನೆಕಾರರಿಗೆ ಪ್ರಧಾನಿ ಕರೆ ನೀಡಿದರು ಮತ್ತು ತಾಯಿ ತನ್ನ ದೈನಂದಿನ ಕಾರ್ಯಗಳನ್ನು ನಿರ್ವಹಿಸುವ ಮತ್ತು ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶದ ಮಹಿಳೆಯರು ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಕಲ್ಪನೆಗಳನ್ನು ನೀಡಿದರು. ಕಂಟೆಂಟ್ ರಚನೆಯು ತಪ್ಪು ಗ್ರಹಿಕೆಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.

ಸ್ವಚ್ಛ ಭಾರತ ಅಭಿಯಾನವು ನಿರಂತರವಾದ ಪ್ರಯತ್ನವಾಗಿದೆ ಎಂದು ಒತ್ತಿಹೇಳಿದ ಪ್ರಧಾನಿ, ಹುಲಿಯೊಂದು ಪ್ಲಾಸ್ಟಿಕ್ ಬಾಟಲಿಯನ್ನು ಎತ್ತಿಕೊಳ್ಳುತ್ತಿರುವ ಇತ್ತೀಚಿನ ವೀಡಿಯೊವನ್ನು ಪ್ರಸ್ತಾಪಿಸಿದರು. ಈ ದಿಕ್ಕಿನಲ್ಲಿ ಕೆಲಸ ಮಾಡುವುದನ್ನು ಮುಂದುವರಿಸುವಂತೆ ಕಂಟೆಂಟ್‌ ರಚನೆಕಾರರನ್ನು ಒತ್ತಾಯಿಸಿದರು. ಮಕ್ಕಳಲ್ಲಿ ಮಾನಸಿಕ ಆರೋಗ್ಯ ಮತ್ತು ಒತ್ತಡದ ಗಂಭೀರ ಸಮಸ್ಯೆಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಮತ್ತು ಸ್ಥಳೀಯ ಭಾಷೆಗಳಲ್ಲಿ ಕಂಟೆಂಟ್ ರಚನೆಗೆ ಗಮನ ಹರಿಸಲು ಸಲಹೆ ನೀಡಿದರು. ಸುಮಾರು 15 ವರ್ಷಗಳ ಹಿಂದೆ ತಾವು ವೀಕ್ಷಿಸಿದ ಈ ವಿಷಯದ ಬಗೆಗಿನ ಕಿರುಚಿತ್ರವನ್ನು ಪ್ರಧಾನಿ ಶ್ಲಾಘಿಸಿದರು. ಪರೀಕ್ಷೆಗೂ ಮೊದಲು ಮಕ್ಕಳೊಂದಿಗೆ ಬೆರೆಯುವ ಅವಕಾಶವನ್ನು ಪಡೆಯುವ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮವನ್ನು ಪ್ರಧಾನಿ ಪ್ರಸ್ತಾಪಿಸಿದರು. ಯುವಜನರ ಮೇಲೆ ಮಾದಕ ದ್ರವ್ಯಗಳ ಕೆಟ್ಟ ಪರಿಣಾಮಗಳನ್ನು ಎತ್ತಿ ತೋರಿಸುವ ವಿಷಯವನ್ನು ರಚಿಸಲು ಶ್ರೀ ಮೋದಿ ಶಿಫಾರಸು ಮಾಡಿದರು ಮತ್ತು “ನಾವು ಹೇಳಲೇಬೇಕು - ಡ್ರಗ್ಸ್ ಒಳ್ಳೆಯದಲ್ಲ" ಎಂದು ಅವರು ಹೇಳಿದರು.

ಮುಂಬರುವ ಲೋಕಸಭೆ ಚುನಾವಣೆ ಬಗ್ಗೆ ಪ್ರಧಾನಿ ಗಮನ ಸೆಳೆದರು, ಮುಂದಿನ ವರ್ಷವೂ ಕಂಟೆಂಟ್ ರಚನೆಕಾರರನ್ನು ಭೇಟಿ ಮಾಡುವ ವಿಶ್ವಾಸ ವ್ಯಕ್ತಪಡಿಸಿದರು. ಇದು ಮೋದಿಯವರ ಗ್ಯಾರಂಟಿ ಅಲ್ಲ, ಭಾರತದ 140 ಕೋಟಿ ಜನರ ಗ್ಯಾರಂಟಿ ಎಂದು ಪ್ರಧಾನಿ ಮೋದಿ ಹೇಳಿದರು. ಚುನಾವಣೆಯಲ್ಲಿ ಗೆದ್ದವರು ಮತ್ತು ಸೋತವರನ್ನು ಘೋಷಿಸಲು ಚುನಾವಣೆಗಳು ನಡೆಯುತ್ತಿಲ್ಲ, ಈ ಬೃಹತ್‌ ದೇಶದ ಭವಿಷ್ಯವನ್ನು ರೂಪಿಸುವ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಭಾಗಿಗಳಾಗಲು ಮತದಾನವನ್ನು ಮಾಡಬೇಕು ಎಂಬ ಭಾವನೆಯನ್ನು ದೇಶದ ಯುವಜನರು ಮತ್ತು ಮೊದಲ ಬಾರಿಯ ಮತದಾರರಲ್ಲಿ ಮೂಡಿಸಬೇಕು ಎಂದು ಅವರು ಒತ್ತಾಯಿಸಿದರು. ಅನೇಕ ರಾಷ್ಟ್ರಗಳು ವಿಭಿನ್ನ ರೀತಿಯಲ್ಲಿ ಸಮೃದ್ಧವಾಗಿದ್ದರೂ, ಅವುಗಳು ಅಂತಿಮವಾಗಿ ಪ್ರಜಾಪ್ರಭುತ್ವವನ್ನು ಆರಿಸಿಕೊಂಡವು ಎಂದು ಅವರು ಹೇಳಿದರು. "ಭಾರತವು ನೂರು ಪ್ರತಿಶತ ಪ್ರಜಾಪ್ರಭುತ್ವದ ಬಗ್ಗೆ ಹೆಮ್ಮೆ ಪಡುವ ಮೂಲಕ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಸಂಕಲ್ಪವನ್ನು ಮಾಡಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಭಾರತವನ್ನು ವಿಶ್ವಕ್ಕೆ ಮಾದರಿಯನ್ನಾಗಿ ಮಾಡಲು ಯುವಜನರ  ಕೊಡುಗೆ ಹಾಗೂ ಅವರ ನಿರೀಕ್ಷೆಗಳ ಬಗ್ಗೆ ಪ್ರಸ್ತಾಪಿಸಿದರು. ಸಾಮಾಜಿಕ ಮಾಧ್ಯಮದ ಶಕ್ತಿಯೊಂದಿಗೆ ಭಾರತದ ವಿಕಲಚೇತನರ ಅಂತರ್ಗತ ಶಕ್ತಿಯನ್ನು ಹೊರತರುವ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು.

ವಿಶ್ವದಲ್ಲಿ ಭಾರತದ ಹೆಚ್ಚುತ್ತಿರುವ ಪ್ರಭಾವದ ಮೇಲೆ ಬೆಳಕು ಚೆಲ್ಲಿದ ಪ್ರಧಾನಿ, ಉಕ್ರೇನ್‌ ನಿಂದ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಸಂದರ್ಭದಲ್ಲಿ ಕಂಡುಬಂದ ತ್ರಿವರ್ಣ ಧ್ವಜದ ಶಕ್ತಿಯ ಬಗ್ಗೆ ಮಾತನಾಡಿದರು. ಭಾರತದೆಡೆಗೆ ಜಗತ್ತಿನ ವಾತಾವರಣ ಮತ್ತು ಭಾವನೆ ಬದಲಾಗಿದ್ದರೂ, ದೇಶದ ಚಿತ್ರಣವನ್ನು ಪರಿವರ್ತಿಸಲು ಹೆಚ್ಚಿನ ಒತ್ತು ನೀಡುವುದನ್ನು ಪ್ರಧಾನಿ ಒತ್ತಿ ಹೇಳಿದರು. ತಮ್ಮ ವಿದೇಶಿ ಭೇಟಿಯೊಂದರಲ್ಲಿ ಆಹ್ವಾನಿತ ರಾಷ್ಟ್ರದ ಸರ್ಕಾರದ ಇಂಟರ್ಪ್ರಿಟರ್ ಆಗಿ ಕೆಲಸ ಮಾಡುತ್ತಿದ್ದ ಕಂಪ್ಯೂಟರ್ ಇಂಜಿನಿಯರ್ ಜೊತೆಗಿನ ಸಂವಾದವನ್ನು ಪ್ರಧಾನಿ ಮೋದಿ ನೆನಪಿಸಿಕೊಂಡರು, ಭಾರತವು ಹಾವಾಡಿಗರ ಮತ್ತು ವಾಮಾಚಾರಗಳ ದೇಶವೇ ಎಂದು ಅವರು ಕೇಳಿದ್ದನ್ನು ಸ್ಮರಿಸಿದರು. ಆ ದಿನಗಳಲ್ಲಿ ಭಾರತವು ಅತ್ಯಂತ ಶಕ್ತಿಶಾಲಿಯಾಗಿದ್ದರೂ, ಅದರ ಶಕ್ತಿಯು ಈಗ ಪ್ರಪಂಚದ ದಿಕ್ಕನ್ನು ರೂಪಿಸುವ ಕಂಪ್ಯೂಟರ್ ಮೌಸ್‌ ನಲ್ಲಿ ಕೇಂದ್ರೀಕೃತವಾಗಿದೆ ಎಂದು ಪ್ರಧಾನಿ ವಿವರಿಸಿದರು.

“ನೀವು ಪ್ರಪಂಚದಾದ್ಯಂತ ಭಾರತದ ಡಿಜಿಟಲ್ ರಾಯಭಾರಿಗಳು. ನೀವು ವೋಕಲ್‌ ಫಾರ್‌ ಲೋಕಲ್‌ ನ ಬ್ರಾಂಡ್ ಅಂಬಾಸಿಡರ್‌ಗಳು”ಎಂದು ಪ್ರಧಾನಿ ಮೋದಿ ಹೇಳಿದರು. ಅವರು ನಿನ್ನೆ ಶ್ರೀನಗರಕ್ಕೆ ನೀಡಿದ ಭೇಟಿಯನ್ನು ನೆನಪಿಸಿಕೊಂಡರು ಮತ್ತು ಡಿಜಿಟಲ್ ಇಂಡಿಯಾದ ಶಕ್ತಿಯೊಂದಿಗೆ ಜಾಗತಿಕ ಬ್ರಾಂಡ್ ಅನ್ನು ಸೃಷ್ಟಿಸಿದ ಜೇನುಸಾಕಣೆಯ ಉದ್ಯಮಿಯೊಂದಿಗಿನ ತಮ್ಮ ಸಂವಾದವನ್ನು ಪ್ರಸ್ತಾಪಿಸಿದರು.

 “ಬನ್ನಿ, ಭಾರತದ ಬಗ್ಗೆ ರಚಿಸುವ ಆಂದೋಲನವನ್ನು ಆರಂಭಿಸೋಣ. ಭಾರತದ ಕಥೆಗಳು, ಸಂಸ್ಕೃತಿ, ಪರಂಪರೆ ಮತ್ತು ಸಂಪ್ರದಾಯಗಳನ್ನು ಇಡೀ ಪ್ರಪಂಚದೊಂದಿಗೆ ಹಂಚಿಕೊಳ್ಳೋಣ. ನಾವು ಭಾರತದ ಬಗ್ಗೆ ರಚಿಸೋಣ ಮತ್ತು ಪ್ರಪಂಚಕ್ಕಾಗಿ ರಚಿಸೋಣ. ಕ್ರಿಯೇಟರ್‌ ಗಳಿಗೆ ಮಾತ್ರವಲ್ಲದೆ ದೇಶಕ್ಕೂ ಗರಿಷ್ಠ ಲೈಕ್‌ ಗಳನ್ನು ನೀಡುವ ಕಂಟೆಂಟ್‌ ರಚಿಸಲು ಜಾಗತಿಕ ಪ್ರೇಕ್ಷಕರನ್ನು ತೊಡಗಿಸಿಕೊಳ್ಳುವಂತೆ ಅವರು ಒತ್ತಾಯಿಸಿದರು. ಭಾರತದ ಕಡೆಗೆ ಪ್ರಪಂಚದ ಕುತೂಹಲವನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ತಮ್ಮ ವ್ಯಾಪ್ತಿಯನ್ನು ವರ್ಧಿಸಲು ಜರ್ಮನ್, ಫ್ರೆಂಚ್, ಸ್ಪ್ಯಾನಿಷ್ ಮುಂತಾದ ವಿಶ್ವಸಂಸ್ಥೆಯ ಭಾಷೆಗಳಲ್ಲಿ ತಮ್ಮ ಕೆಲಸವನ್ನು ಅಭಿವೃದ್ಧಿಪಡಿಸುವಂತೆ ಕಂಟೆಂಟ್ ರಚನೆಕಾರರನ್ನು ಒತ್ತಾಯಿಸಿದರು. ಎಐ ಕುರಿತು ಬಿಲ್ ಗೇಟ್ಸ್ ಜೊತೆಗಿನ ತಮ್ಮ ಇತ್ತೀಚಿನ ಮಾತುಕತೆಯನ್ನು ಶ್ರೀ ಮೋದಿ ನೆನಪಿಸಿಕೊಂಡರು ಮತ್ತು ಇಂಡಿಯಾ ಎಐ ಮಿಷನ್‌ ಗೆ ಸಂಪುಟ ಅನುಮೋದನೆ ನೀಡಿರುವ ಬಗ್ಗೆ ತಿಳಿಸಿದರು. ಸೆಮಿಕಂಡಕ್ಟರ್ ಮಿಷನ್ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿಯವರು 5ಜಿ ತಂತ್ರಜ್ಞಾನದ ಅಳವಡಿಕೆಯಂತೆಯೇ ಭಾರತವು ಈ ಕ್ಷೇತ್ರದಲ್ಲಿಯೂ ಮುನ್ನಡೆಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಂಬಂಧಗಳನ್ನು ವರ್ಧಿಸಲು ನೆರೆಯ ರಾಷ್ಟ್ರಗಳಲ್ಲಿ ಚಾಲ್ತಿಯಲ್ಲಿರುವ ಭಾಷೆಗಳ ಬಳಕೆಯ ಬಗ್ಗೆ ಅವರು ಒತ್ತಿಹೇಳಿದರು. ಪ್ರಧಾನಮಂತ್ರಿಯವರು ತಮ್ಮ ಈ ಭಾಷಣವನ್ನು ಕಡಿಮೆ ಸಮಯದಲ್ಲಿ ವಿವಿಧ ಭಾಷೆಗಳಲ್ಲಿ ಭಾಷಾಂತರಿಸಲು ಎಐ ಅನ್ನು ಬಳಸುವ ಬಗ್ಗೆ ಮತ್ತು NaMo ಅಪ್ಲಿಕೇಶನ್‌ ನಿಂದ ಛಾಯಾಚಿತ್ರಗಳನ್ನು ಸೋರ್ಸಿಂಗ್ ಮಾಡುವ ಬಗ್ಗೆ ಸಭೆಗೆ ತಿಳಿಸಿದರು.

ಕಂಟೆಂಟ್‌ ರಚನೆಕಾರರ ಸಾಮರ್ಥ್ಯವು ಭಾರತದ ಬ್ರ್ಯಾಂಡಿಂಗ್ ಅನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ಯಬಹುದು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಸೃಜನಶೀಲತೆಯ ಶಕ್ತಿಯನ್ನು ಎತ್ತಿ ತೋರಿಸಿದ ಪ್ರಧಾನಿಯವರು, ವೀಕ್ಷಕರನ್ನು ಹಿಂದಿನ ಯುಗಕ್ಕೆ ಮರಳಿ ಕರೆದೊಯ್ಯುವ ಸಾಮರ್ಥ್ಯವನ್ನು ಹೊಂದಿರುವ ಉತ್ಖನನದ ಕಲಾಕೃತಿಗಳನ್ನು ದೃಶ್ಯೀಕರಿಸಿದ ಉದಾಹರಣೆಯನ್ನು ನೀಡಿದರು. ದೇಶದ ಅಭಿವೃದ್ಧಿಗೆ ವೇಗವರ್ಧಕವಾಗಲು ಭಾರತದ ಸೃಜನಶೀಲತೆಯ ಶಕ್ತಿಯನ್ನು ಪ್ರಧಾನಿ ಒಪ್ಪಿಕೊಂಡರು. ಈ ಸಂದರ್ಭದಲ್ಲಿ ಅವರು ಎಲ್ಲರನ್ನು ಅಭಿನಂದಿಸಿದರು ಮತ್ತು ಕಡಿಮೆ ಸಮಯದಲ್ಲಿ 2 ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ಪರಿಶಿಳಿಸಿದ ತೀರ್ಪುಗಾರರ ಪ್ರಯತ್ನವನ್ನು ಶ್ಲಾಘಿಸಿದರು.

ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ರಾಷ್ಟ್ರೀಯ ಕ್ರಿಯೇಟರ್ಸ್ ಪ್ರಶಸ್ತಿಯು ಅನುಕರಣೀಯ ಸಾರ್ವಜನಿಕ ತೊಡಗಿಸಿಕೊಳ್ಳುವಿಕೆಗೆ ಸಾಕ್ಷಿಯಾಗಿದೆ. ಮೊದಲ ಸುತ್ತಿನಲ್ಲಿ, 20 ವಿವಿಧ ವಿಭಾಗಗಳಲ್ಲಿ 1.5 ಲಕ್ಷಕ್ಕೂ ಹೆಚ್ಚು ನಾಮನಿರ್ದೇಶನಗಳನ್ನು ಸ್ವೀಕರಿಸಲಾಯಿತು ತರುವಾಯ, ಮತದಾನದ ಸುತ್ತಿನಲ್ಲಿ, ವಿವಿಧ ಪ್ರಶಸ್ತಿ ವಿಭಾಗಗಳಲ್ಲಿ ಡಿಜಿಟಲ್ ರಚನೆಕಾರರಿಗೆ ಸುಮಾರು 10 ಲಕ್ಷ ಮತಗಳು ಚಲಾವಣೆಯಾದವು. ಇದರ ನಂತರ, ಮೂವರು ಅಂತಾರಾಷ್ಟ್ರೀಯ ರಚನೆಕಾರರು ಸೇರಿದಂತೆ 23 ವಿಜೇತರನ್ನು ನಿರ್ಧರಿಸಲಾಯಿತು. ಪ್ರಶಸ್ತಿಯು ನಿಜವಾಗಿಯೂ ಜನರ ಆಯ್ಕೆಯನ್ನು ಪ್ರತಿಬಿಂಬಿಸುತ್ತದೆ ಎಂಬುದಕ್ಕೆ ಈ ಅಗಾಧ ಸಾರ್ವಜನಿಕ ತೊಡಗಿಸಿಕೊಳ್ಳುವಿಕೆ ಸಾಕ್ಷಿಯಾಗಿದೆ.

ಅತ್ಯುತ್ತಮ ಕಥೆಗಾರ ಪ್ರಶಸ್ತಿ ಸೇರಿದಂತೆ ಇಪ್ಪತ್ತು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಯಿತು; ದಿ ಡಿಸ್ಟ್ರಪ್ಟರ್ ಆಫ್ ದಿ ಇಯರ್; ವರ್ಷದ ಸೆಲೆಬ್ರಿಟಿ ಕ್ರಿಯೇಟರ್; ಗ್ರೀನ್ ಚಾಂಪಿಯನ್ ಪ್ರಶಸ್ತಿ; ಸಾಮಾಜಿಕ ಬದಲಾವಣೆಗಾಗಿ ಅತ್ಯುತ್ತಮ ಕ್ರಿಯೇಟರ್; ಅತ್ಯಂತ ಪ್ರಭಾವಶಾಲಿ ಕೃಷಿ ಕ್ರಿಯೇಟರ್; ವರ್ಷದ ಸಾಂಸ್ಕೃತಿಕ ರಾಯಭಾರಿ; ಅಂತಾರಾಷ್ಟ್ರೀಯ ಕ್ರಿಯೇಟರ್ ಪ್ರಶಸ್ತಿ; ಅತ್ಯುತ್ತಮ ಟ್ರಾವೆಲ್ ಕ್ರಿಯೇಟರ್ ಪ್ರಶಸ್ತಿ; ಸ್ವಚ್ಛತಾ ರಾಯಭಾರಿ ಪ್ರಶಸ್ತಿ; ನ್ಯೂ ಇಂಡಿಯಾ ಚಾಂಪಿಯನ್ ಪ್ರಶಸ್ತಿ; ಟೆಕ್ ಕ್ರಿಯೇಟರ್ ಪ್ರಶಸ್ತಿ; ಹೆರಿಟೇಜ್ ಫ್ಯಾಷನ್ ಐಕಾನ್ ಪ್ರಶಸ್ತಿ; ಅತ್ಯಂತ ಸೃಜನಶೀಲ ಕ್ರಿಯೇಟರ್ (ಪುರುಷ ಮತ್ತು ಸ್ತ್ರೀ); ಆಹಾರ ವರ್ಗದಲ್ಲಿ ಅತ್ಯುತ್ತಮ ಕ್ರಿಯೇಟರ್; ಶಿಕ್ಷಣ ವಿಭಾಗದಲ್ಲಿ ಅತ್ಯುತ್ತಮ ಕ್ರಿಯೇಟರ್; ಗೇಮಿಂಗ್ ವಿಭಾಗದಲ್ಲಿ ಅತ್ಯುತ್ತಮ ಕ್ರಿಯೇಟರ್; ಅತ್ಯುತ್ತಮ ಮೈಕ್ರೋ ಕ್ರಿಯೇಟರ್; ಅತ್ಯುತ್ತಮ ನ್ಯಾನೋ ಕ್ರಿಯೇಟರ್; ಅತ್ಯುತ್ತಮ ಆರೋಗ್ಯ ಮತ್ತು ಫಿಟ್ನೆಸ್ ಕ್ರಿಯೇಟರ್.

 

***

 

 


(Release ID: 2013331) Visitor Counter : 97