ಪ್ರಧಾನ ಮಂತ್ರಿಯವರ ಕಛೇರಿ
ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ವಿಕಸಿತ ಭಾರತ, ವಿಕಸಿತ ಜಮ್ಮು-ಕಾಶ್ಮೀರ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಮಂತ್ರಿಯವರು ಮಾತನಾಡಿದರು
ಸುಮಾರು 5000 ಕೋಟಿ ರೂಪಾಯಿ ಮೌಲ್ಯದ ಸಮಗ್ರ ಕೃಷಿ ಅಭಿವೃದ್ಧಿ ಕಾರ್ಯಕ್ರಮವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು
ಸ್ವದೇಶ್ ದರ್ಶನ್ ಮತ್ತು ಪ್ರಸಾದ್ ಯೋಜನೆಯಡಿಯಲ್ಲಿ 1400 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ 52 ಪ್ರವಾಸೋದ್ಯಮ ವಲಯದ ಯೋಜನೆಗಳನ್ನು ಲೋಕಾಪರ್ಣೆ ಮಾಡಿದರು ಮತ್ತು ಉದ್ಘಾಟಿಸಿದರು
ಶ್ರೀನಗರದ ‘ಹಜರತ್ ಬಾಲ್ ಕ್ಷೇತ್ರದ ಸಮಗ್ರ ಅಭಿವೃದ್ಧಿ’ ಯೋಜನೆಯನ್ನು ದೇಶಕ್ಕೆ ಸಮರ್ಪಿಸಿದರು
ಸವಾಲು ಆಧರಿತ ಗಮ್ಯಸ್ಥಾನ ಅಭಿವೃದ್ಧಿ ಯೋಜನೆ (ಚಾಲೆಂಜ್ ಬೇಸ್ಡ್ ಡೆಸ್ಟಿನೇಶನ್ ಡೆವಲಪ್ ಮೆಂಟ್ ಸ್ಕೀಮ್) ಅಡಿಯಲ್ಲಿ ಆಯ್ಕೆ ಮಾಡಲಾದ ಪ್ರವಾಸಿ ತಾಣಗಳನ್ನು ಘೋಷಿಸಿದರು
‘ದೇಖೋ ಅಪ್ನಾ ದೇಶ್ ಪೀಪಲ್ಸ್ ಚಾಯ್ಸ್ 2024’ ಮತ್ತು ‘ಚಲೋ ಇಂಡಿಯಾ ಗ್ಲೋಬಲ್ ಡಯಾಸ್ಪೊರಾ ಅಭಿಯಾನ’ ಕ್ಕೆ ಚಾಲನೆ ನೀಡಿದರು
ಜಮ್ಮು ಮತ್ತು ಕಾಶ್ಮೀರದ ಹೊಸ ಸರ್ಕಾರಿ ಉದ್ಯೋಗಿಗಳಿಗೆ ನೇಮಕಾತಿ ಆದೇಶಗಳನ್ನು ವಿತರಿಸಿದರು
“ಮೋದಿಯು ಈ ಪ್ರೀತಿಯ ಋಣವನ್ನು ತೀರಿಸುವ ಯಾವುದೇ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ. ನಿಮ್ಮ ಹೃದಯವನ್ನು ಗೆಲ್ಲಲು ನಾನು ಈ ಎಲ್ಲಾ ಕಠಿಣ ಕೆಲಸವನ್ನು ಮಾಡುತ್ತಿದ್ದೇನೆ ಮತ್ತು ನಾನು ಸರಿಯಾದ ಹಾದಿಯಲ್ಲಿದ್ದೇನೆ ಎಂದು ನನಗೆ ವಿಶ್ವಾಸವಿದೆ”
"ಅಭಿವೃದ್ಧಿಯ ಶಕ್ತಿ, ಪ್ರವಾಸೋದ್ಯಮದ ಸಾಮರ್ಥ್ಯ, ರೈತರ ದಕ್ಷತೆ ಮತ್ತು ಜಮ್ಮು ಮತ್ತು ಕಾಶ್ಮೀರದ ಯುವಜನರ ನಾಯಕತ್ವವು ವಿಕಸಿತ ಜಮ್ಮು ಕಾಶ್ಮೀರಕ್ಕೆ ದಾರಿ ಮಾಡಿಕೊಡುತ್ತದೆ
Posted On:
07 MAR 2024 2:48PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ವಿಕಸಿತ ಭಾರತ ವಿಕಸಿತ ಜಮ್ಮು ಕಾಶ್ಮೀರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಅವರು ಸುಮಾರು 5000 ಕೋಟಿ ರೂಪಾಯಿ ಮೌಲ್ಯದ ಸಮಗ್ರ ಕೃಷಿ ಅಭಿವೃದ್ಧಿ ಕಾರ್ಯಕ್ರಮವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ಸ್ವದೇಶ್ ದರ್ಶನ್ ಮತ್ತು ಶ್ರೀನಗರದ ‘ಹಜರತ್ ಬಾಲ್ ಕ್ಷೇತ್ರದ ಸಮಗ್ರ ಅಭಿವೃದ್ಧಿ’ ಯೋಜನೆ ಸೇರಿದಂತೆ 1400 ಕೋಟಿ ರೂ.ಗಿಂತ ಹೆಚ್ಚಿನ ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಅನೇಕ ಯೋಜನೆಗಳನ್ನು ಉದ್ಘಾಟಿಸಿದರು. ಪ್ರಧಾನಮಂತ್ರಿಯವರು ‘ದೇಖೋ ಅಪ್ನಾ ದೇಶ್ ಪೀಪಲ್ಸ್ ಚಾಯ್ಸ್ ಟೂರಿಸ್ಟ್ ಡೆಸ್ಟಿನೇಶನ್ ಪೋಲ್’ಮತ್ತು ‘ಚಲೋ ಇಂಡಿಯಾ ಗ್ಲೋಬಲ್ ಡಯಾಸ್ಪೊರಾ ಅಭಿಯಾನ’ಕ್ಕೆ ಚಾಲನೆ ನೀಡಿದರು. ಸವಾಲು ಆಧಾರಿತ ಗಮ್ಯಸ್ಥಾನ ಅಭಿವೃದ್ಧಿ (ಸಿಬಿಡಿಡಿ) ಯೋಜನೆಯಡಿ ಆಯ್ಕೆಯಾದ ಪ್ರವಾಸಿ ತಾಣಗಳನ್ನು ಘೋಷಿಸಿದರು. ಜಮ್ಮು ಮತ್ತು ಕಾಶ್ಮೀರದ ಸುಮಾರು 1000 ಹೊಸ ಸರ್ಕಾರಿ ಉದ್ಯೋಗಿಗಳಿಗೆ ನೇಮಕಾತಿ ಆದೇಶಗಳನ್ನು ವಿತರಿಸಿದರು ಮತ್ತು ಮಹಿಳಾ ಸಾಧಕರು, ಲಕ್ಷಾಧಿಪತಿ ದೀದಿಗಳು, ರೈತರು, ಉದ್ಯಮಿಗಳು ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.
ಜೇನುಸಾಕಣೆದಾರರಾದ ಪುಲ್ವಾಮಾದ ನಜೀಮ್ ನಜೀರ್ ಅವರು 25 ಜೇನುಸಾಕಣೆ ಪೆಟ್ಟಿಗೆಗಳನ್ನು 50 ಪ್ರತಿಶತ ಸಬ್ಸಿಡಿಯಲ್ಲಿ ಖರೀದಿಸಿ ಸರ್ಕಾರದಿಂದ ಪ್ರಯೋಜನಗಳನ್ನು ಪಡೆಯುವ ಮೂಲಕ ತಮ್ಮ ವ್ಯವಹಾರವನ್ನು ವಿಸ್ತರಿಸಿದ ಬಗ್ಗೆ ಪ್ರಧಾನಿಯವರಿಗೆ ವಿವರಿಸಿದರು. ಪ್ರಧಾನ ಮಂತ್ರಿಗಳ ಉದ್ಯೋಗ ಸೃಷ್ಟಿ ಕಾರ್ಯಕ್ರಮದ ಅಡಿಯಲ್ಲಿ 5 ಲಕ್ಷ ರೂಪಾಯಿಗಳನ್ನು ಪಡೆಯುವ ಮೂಲಕ ಜೇನುಸಾಕಣೆಯನ್ನು ಕ್ರಮೇಣ 200 ಪೆಟ್ಟಿಗೆಗಳಿಗೆ ವಿಸ್ತರಿಸಿದ ತಮ್ಮ ಆರ್ಥಿಕ ಬೆಳವಣಿಗೆಯ ಪ್ರಯಾಣದ ಮೇಲೆ ಬೆಳಕು ಚೆಲ್ಲಿದರು. ಇದು ಶ್ರೀ ನಜೀರ್ ತಮ್ಮದೇ ಬ್ರಾಂಡ್ ಮತ್ತು ವೆಬ್‌ಸೈಟ್ ಅನ್ನು ನಿರ್ಮಿಸಲು ಕಾರಣವಾಯಿತು ಮತ್ತು ರಾಷ್ಟ್ರದಾದ್ಯಂತ ಸುಮಾರು 5000 ಕಿಲೋಗ್ರಾಂಗಳಷ್ಟು ಮೌಲ್ಯದ ಸಾವಿರಾರು ಆರ್ಡರ್ ಗಳನ್ನು ಪಡೆದರು. ಇದರಿಂದಾಗಿ ಅವರು ವ್ಯವಹಾರವನ್ನು ಸುಮಾರು 2000 ಜೇನುಸಾಕಣೆ ಪೆಟ್ಟಿಗೆಗಳಿಗೆ ವಿಸ್ತರಿಸಿದ್ದಾರೆ ಮತ್ತು ಪ್ರದೇಶದ ಸುಮಾರು 100 ಯುವಕರನ್ನು ತೊಡಗಿಸಿಕೊಂಡಿದ್ದಾರೆ. ಅವರು 2023 ರಲ್ಲಿ ಎಫ್.ಪಿ.ಒ. ಸ್ವೀಕರಿಸಿದ ಬಗ್ಗೆ ಪ್ರಧಾನಿಗೆ ತಿಳಿಸಿದರು, ಅದು ಅವರ ವ್ಯವಹಾರವನ್ನು ಬೆಳೆಸಲು ಸಹಾಯ ಮಾಡಿದೆ. ದೇಶದಲ್ಲಿ ಫಿನ್ ಟೆಕ್ ವಲಯವನ್ನು ಪರಿವರ್ತಿಸಿದ ಡಿಜಿಟಲ್ ಇಂಡಿಯಾ ಉಪಕ್ರಮವನ್ನು ಪ್ರಾರಂಭಿಸಿದ್ದಕ್ಕಾಗಿ ಅವರು ಪ್ರಧಾನ ಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಸಿಹಿ ಕ್ರಾಂತಿಗೆ ದಾರಿ ತೋರಿದ ಶ್ರೀ ನಜೀಮ್ ಅವರ ಪ್ರಯತ್ನವನ್ನು ಪ್ರಧಾನಿಯವರು ಶ್ಲಾಘಿಸಿದರು ಮತ್ತು ಅವರ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದರು. ವ್ಯವಹಾರವನ್ನು ಸ್ಥಾಪಿಸಲು ಸರ್ಕಾರದಿಂದ ಆರಂಭಿಕ ಬೆಂಬಲವನ್ನು ಪಡೆದ ಅನುಭವದ ಬಗ್ಗೆ ಪ್ರಧಾನ ಮಂತ್ರಿಯವರು ವಿಚಾರಿಸಿದಾಗ, ತಾವು ಆರಂಭಿಕವಾಗಿ ತೊಂದರೆಗಳನ್ನು ಎದುರಿಸಿದರೂ ಸಹ, ಕೃಷಿ ಇಲಾಖೆ ಮುಂದೆ ಬಂದು ಅವರ ಉದ್ದೇಶವನ್ನು ಬೆಂಬಲಿಸಿತು ಎಂದು ಶ್ರೀ ನಾಜಿಮ್ ಹೇಳಿದರು. ಜೇನುಸಾಕಣೆಯ ವ್ಯವಹಾರವು ಸಾಕಷ್ಟು ಹೊಸ ಕ್ಷೇತ್ರವಾಗಿದೆ ಎಂದು ಗಮನಿಸಿದ ಪ್ರಧಾನಿ, ಅದರ ಪ್ರಯೋಜನಗಳನ್ನು ಎತ್ತಿ ತೋರಿಸಿದರು ಮತ್ತು ಜೇನುನೊಣಗಳು ಒಂದು ರೀತಿಯಲ್ಲಿ ಕೃಷಿ ಕಾರ್ಮಿಕರಂತೆ ಕೆಲಸ ಮಾಡುವುದರಿಂದ ಬೆಳೆಗಳಿಗೆ ಪ್ರಯೋಜನಕಾರಿಯಾಗಿವೆ ಎಂದು ಹೇಳಿದರು. ಜೇನುಸಾಕಣೆಗೆ ಯಾವುದೇ ವೆಚ್ಚವಿಲ್ಲದೆ ಭೂಮಿ ನೀಡಲು ಭೂಮಾಲೀಕರು ಸಿದ್ಧರಿದ್ದಾರೆ. ಈ ಪ್ರಕ್ರಿಯೆಯು ರೈತರಿಗೆ ಸಹ ಪ್ರಯೋಜನಕಾರಿಯಾಗಿದೆ ಎಂದು ಶ್ರೀ ನಜೀಮ್ ಹೇಳಿದರು. ಮಧ್ಯ ಏಷ್ಯಾದಲ್ಲಿ ಹಿಂದೂಕುಶ್ ಪರ್ವತಗಳ ಸುತ್ತಲೂ ಉತ್ಪಾದನೆಯಾಗುವ ಜೇನುತುಪ್ಪದ ಬಗ್ಗೆ ಸಂಶೋಧನೆ ನಡೆಸುವಂತೆ ಶ್ರೀ ನಾಜಿಮ್ ಅವರಿಗೆ ಸೂಚಿಸಿದ ಪ್ರಧಾನಮಂತ್ರಿಯವರು, ಇದು ಸ್ಥಾಪಿತ ಮಾರುಕಟ್ಟೆಯಾಗಿರುವುದರಿಂದ ಪೆಟ್ಟಿಗೆಗಳ ಸುತ್ತಲೂ ನಿರ್ದಿಷ್ಟ ಹೂವುಗಳನ್ನು ಬೆಳೆಸುವ ಮೂಲಕ ಜೇನುತುಪ್ಪಕ್ಕೆ ಹೊಸ ಸ್ವಾದವನ್ನು ನೀಡಲು ಗಮನಹರಿಸುವಂತೆ ತಿಳಿಸಿದರು. ಉತ್ತರಾಖಂಡದಲ್ಲೂ ಇದೇ ರೀತಿಯ ಯಶಸ್ವಿ ಪ್ರಯತ್ನಗಳು ಇರುವ ಬಗ್ಗೆ ಪ್ರಧಾನಿ ಉಲ್ಲೇಖಿಸಿದರು. ವಿಶ್ವದಾದ್ಯಂತ ಹೆಚ್ಚಿನ ಬೇಡಿಕೆಯಿಂದಾಗಿ ಅಕೇಶಿಯಾ ಜೇನಿನ ಬೆಲೆ ಕೆಜಿಗೆ 400 ರಿಂದ 1000 ರೂ.ಗೆ ಏರಿಕೆಯಾಗುತ್ತಿರುವುದಕ್ಕೆ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದರು. ಆಲೋಚನೆ ಮತ್ತು ದೂರದೃಷ್ಟಿಯ ಸ್ಪಷ್ಟತೆ ಮತ್ತು ತಮ್ಮ ವ್ಯಾಪಾರವನ್ನು ನಡೆಸುವಲ್ಲಿ ಶ್ರೀ ನಜೀಮ್ ತೋರಿದ ಧೈರ್ಯವನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು ಮತ್ತು ಅವರ ಪೋಷಕರನ್ನು ಅಭಿನಂದಿಸಿದರು. ಶ್ರೀ ನಜೀಮ್ ಅವರು ಭಾರತದ ಯುವಜನರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಮತ್ತು ಸ್ಫೂರ್ತಿಯಾಗಿದ್ದಾರೆ ಎಂದು ಅವರು ಹೇಳಿದರು.
ಶ್ರೀನಗರದ ಅಹ್ತೇಷಾಮ್ ಮಜೀದ್ ಭಟ್ ಬೇಕರಿ ಉದ್ಯಮಿಯಾಗಿದ್ದು, ಅವರು ಆಹಾರ ತಂತ್ರಜ್ಞಾನ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದ ಮೂಲಕ ಬೇಕರಿಯಲ್ಲಿ ಹೊಸ ಆವಿಷ್ಕಾರಗಳನ್ನು ತಂದಿದ್ದಾರೆ. ಮಹಿಳಾ ಕೌಶಲ್ಯ ಅಭಿವೃದ್ಧಿಗಾಗಿ ಸರ್ಕಾರಿ ಪಾಲಿಟೆಕ್ನಿಕ್ ನಲ್ಲಿರುವ ಇನ್‌ಕ್ಯುಬೇಶನ್ ಸೆಂಟರ್ ಅವರಿಗೆ ಬೆಂಬಲ ನೀಡಿತು. ಸರ್ಕಾರಿ ಏಕ ಗವಾಕ್ಷಿ ವ್ಯವಸ್ಥೆಯು ವಿವಿಧ ಇಲಾಖೆಗಳಿಂದ ಎಲ್ಲಾ ಎನ್ ಒ ಸಿ ಗಳನ್ನು ಪಡೆಯಲು ಆಕೆ ಮತ್ತು ಅವರ ತಂಡಕ್ಕೆ ಸಹಾಯ ಮಾಡಿತು. ಕಳೆದ 10 ವರ್ಷಗಳಲ್ಲಿ, ಕೋಟ್ಯಂತರ ಯುವಕರು ತಮ್ಮ ಸ್ಟಾರ್ಟಪ್ ಕನಸುಗಳನ್ನು ನನಸಾಗಿಸುವಲ್ಲಿ ಸರ್ಕಾರವು ಎಲ್ಲಾ ಬೆಂಬಲವನ್ನು ನೀಡುತ್ತಿದೆ ಎಂದು ಪ್ರಧಾನಿಯವರು ಅವರಿಗೆ ತಿಳಿಸಿದರು. ತನ್ನ ಉದ್ಯಮಗಳಲ್ಲಿ ವಿವಿಧ ಜಿಲ್ಲೆಗಳ ತನ್ನ ಸ್ನೇಹಿತರನ್ನು ತೊಡಗಿಸಿಕೊಂಡಿದ್ದಕ್ಕಾಗಿ ಪ್ರಧಾನಮಂತ್ರಿ ಆಕೆಯನ್ನು ಶ್ಲಾಘಿಸಿದರು. "ನಮ್ಮ ಯುವಕರ ಆಲೋಚನೆಗಳು ಸಂಪನ್ಮೂಲಗಳು ಮತ್ತು ಹಣಕಾಸಿನ ಕೊರತೆಯಿಂದ ಬಳಲುತ್ತಿಲ್ಲ ಎಂಬುದಕ್ಕೆ ನಮ್ಮ ಪ್ರಯತ್ನಗಳು ಸಾಕ್ಷಿಯಾಗಿವೆ. ಅವರು ಆತ್ಮವಿಶ್ವಾಸದಿಂದ ಸಾಗಬೇಕು. ಜಮ್ಮು ಮತ್ತು ಕಾಶ್ಮೀರದ ಈ ಹೆಣ್ಣುಮಕ್ಕಳು ಇಡೀ ರಾಷ್ಟ್ರದ ಯುವಜನತೆಗೆ ಹೊಸ ಸ್ಪೂರ್ತಿದಾಯಕ ಉದಾಹರಣೆಗಳನ್ನು ಸೃಷ್ಟಿಸುತ್ತಿದ್ದಾರೆ” ಎಂದು ಪ್ರಧಾನಿ ಹೇಳಿದರು. ಅವಕಾಶ ವಂಚಿತ ಹೆಣ್ಣು ಮಕ್ಕಳನ್ನು ಸಲಹುತ್ತಿದ್ದಾರೆ ಎಂದು ಅವರು ಶ್ಲಾಘಿಸಿದರು.
ಗಂದರ್‌ಬಾಲ್ ನ ಹಮೀದಾ ಬಾನೊ ಡೈರಿ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ. ತಾವು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಎನ್ ಆರ್ ಎಲ್ ಎಂ) ನಿಂದ ಪ್ರಯೋಜನ ಪಡೆದಿರುವುದಾಗಿ ಮತ್ತು ಹಾಲಿನ ಉತ್ಪನ್ನಗಳ ಸಂಸ್ಕರಣಾ ಘಟಕವನ್ನು ತೆರೆದಿರುವುದಾಗಿ ಅವರು ಪ್ರಧಾನಿಗೆ ತಿಳಿಸಿದರು. ಅವರು ಇತರ ಮಹಿಳೆಯರಿಗೂ ಉದ್ಯೋಗ ನೀಡಿದ್ದಾರೆ. ತಮ್ಮ ಉತ್ಪನ್ನಗಳ ಗುಣಮಟ್ಟ ಪರಿಶೀಲನೆ, ಪ್ಯಾಕೇಜಿಂಗ್ ಮತ್ತು ಮಾರ್ಕೆಟಿಂಗ್ ಬಗ್ಗೆಯೂ ಅವರು ಪ್ರಧಾನಿಗೆ ಮಾಹಿತಿ ನೀಡಿದರು. ತಮ್ಮ ಹಾಲಿನ ಉತ್ಪನ್ನಗಳು ಪ್ರಿಸರ್ವೇಟಿವ್ಸ್ (ಕೆಡದಂತೆ ಕಾಪಾಡಲು ಬಳಸುವ ವಸ್ತು) ಹೊಂದಿರುವುದಿಲ್ಲ ಮತ್ತು ಬಹುಬೇಗ ಹಾಳಾಗುವ ತಮ್ಮ ಉತ್ಪನ್ನವನ್ನು ಮಾರಾಟ ಮಾಡುವ ವಿಸ್ತೃತ ವಿಧಾನದ ಬಗ್ಗೆ ಪ್ರಧಾನಿಗೆ ತಿಳಿಸಿದರು. ಆಕೆಯ ವ್ಯವಹಾರ ಕುಶಾಗ್ರಮತಿ ಮತ್ತು ಪೋಷಣೆಯ ಕಾರ್ಯವನ್ನು ಪ್ರಧಾನಮಂತ್ರಿ ಅವರು ಪ್ರಶಂಸಿಸಿದರು. ಗುಣಮಟ್ಟದ ಬಗ್ಗೆ ಕಾಳಜಿ ವಹಿಸಿ ಪರಿಸರ ಸ್ನೇಹಿಯಾಗಿ ವ್ಯವಹಾರ ನಡೆಸುತ್ತಿರುವುದಕ್ಕೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಭೂಮಿಯ ಮೇಲಿನ ಸ್ವರ್ಗಕ್ಕೆ ಬಂದಿರುವ ಭಾವನೆಯನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ ಎಂದರು. "ಈ ಪ್ರಕೃತಿ, ಗಾಳಿ, ಕಣಿವೆ, ಪರಿಸರ ಮತ್ತು ಕಾಶ್ಮೀರಿ ಸಹೋದರ ಸಹೋದರಿಯರ ಪ್ರೀತಿ ಮತ್ತು ವಾತ್ಸಲ್ಯ ಅಪ್ರಮತಿಮವಾವದುದು" ಎಂದು ಅವರು ಹೇಳಿದರು. ಕಾರ್ಯಕ್ರಮದ ಸ್ಥಳದ ಹೊರಗೂ ಜನರು ನೆರೆದಿದ್ದಾರೆ ಮತ್ತು 285 ಬ್ಲಾಕ್ ಗಳಿಂದ 1 ಲಕ್ಷಕ್ಕೂ ಹೆಚ್ಚು ಜನರು ವೀಡಿಯೊ ಲಿಂಕ್ ಮೂಲಕ ಕಾರ್ಯಕ್ರಮಕ್ಕೆ ಸಂಪರ್ಕ ಹೊಂದಿದ್ದಾರೆ ಎಂದರು. ದಶಕಗಳಿಂದ ಕಾಯುತ್ತಿದ್ದ ಹೊಸ ಜಮ್ಮು ಮತ್ತು ಕಾಶ್ಮೀರ ಇದಾಗಿದೆ ಎಂದು ಒತ್ತಿ ಹೇಳಿದ ಪ್ರಧಾನಿ, "ಡಾ ಶ್ಯಾಮಪ್ರಸಾದ್ ಮುಖರ್ಜಿ ಅವರು ಈ ಜಮ್ಮು ಮತ್ತು ಕಾಶ್ಮೀರಕ್ಕಾಗಿ ತ್ಯಾಗ ಮಾಡಿದರು" ಎಂದು ಹೇಳಿದರು. ಹೊಸ ಜಮ್ಮು ಮತ್ತು ಕಾಶ್ಮೀರವು ಅದರ ಕಣ್ಣುಗಳಲ್ಲಿ ಭವಿಷ್ಯದ ಹೊಳಪನ್ನು ಹೊಂದಿದೆ ಮತ್ತು ಎಲ್ಲಾ ಅಡೆತಡೆಗಳನ್ನು ನಿವಾರಿಸುವ ಸಂಕಲ್ಪವನ್ನು ಹೊಂದಿದೆ ಎಂದು ಅವರು ಹೇಳಿದರು. "ಜಮ್ಮು ಮತ್ತು ಕಾಶ್ಮೀರದ ಜನರ ನಗುಮುಖವನ್ನು ನೋಡಿದಾಗ ದೇಶದ 140 ಕೋಟಿ ನಾಗರಿಕರು ನೆಮ್ಮದಿಯಿಂದ ಇರುತ್ತಾರೆ" ಎಂದು ಪ್ರಧಾನಿ ಮೋದಿ ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ಜನರ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಿ, “ಮೋದಿಯು ಈ ಪ್ರೀತಿಯ ಋಣವನ್ನು ತೀರಿಸುವ ಯಾವುದೇ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ. ನಿಮ್ಮ ಹೃದಯವನ್ನು ಗೆಲ್ಲಲು ನಾನು ಈ ಎಲ್ಲಾ ಕಠಿಣ ಕೆಲಸವನ್ನು ಮಾಡುತ್ತಿದ್ದೇನೆ ಮತ್ತು ನಾನು ಸರಿಯಾದ ಹಾದಿಯಲ್ಲಿದ್ದೇನೆ ಎಂಬ ವಿಶ್ವಾಸ ನನಗಿದೆ. ನಿಮ್ಮ ಹೃದಯವನ್ನು ಗೆಲ್ಲುವ ನನ್ನ ಪ್ರಯತ್ನವನ್ನು ನಾನು ಮುಂದುವರಿಸುತ್ತೇನೆ. ಇದು ಮೋದಿಯ ಗ್ಯಾರಂಟಿ ಮತ್ತು ಮೋದಿಯ ಗ್ಯಾರಂಟಿ ಎಂದರೆ ಗ್ಯಾರಂಟಿಯನ್ನು ಈಡೇರಿಸುವ ಗ್ಯಾರಂಟಿ ಎಂದು ನಿಮಗೆಲ್ಲರಿಗೂ ತಿಳಿದಿದೆ” ಎಂದು ಹೇಳಿದರು.
32,000 ಕೋಟಿ ರೂಪಾಯಿ ಮೌಲ್ಯದ ಮೂಲಸೌಕರ್ಯ ಮತ್ತು ಶಿಕ್ಷಣ ಯೋಜನೆಗಳನ್ನು ಪ್ರಾರಂಭಿಸಲು ಇತ್ತೀಚೆಗೆ ತಾವು ಜಮ್ಮುವಿಗೆ ನೀಡಿದ ಭೇಟಿಯನ್ನು ಸ್ಮರಿಸಿದ ಪ್ರಧಾನಿ ಮೋದಿ, ನೇಮಕಾತಿ ಪತ್ರಗಳ ವಿತರಣೆ ಜೊತೆಗೆ ಪ್ರವಾಸೋದ್ಯಮ ಮತ್ತು ಅಭಿವೃದ್ಧಿ ಮತ್ತು ಕೃಷಿಗೆ ಸಂಬಂಧಿಸಿದ ಇಂದಿನ ಯೋಜನೆಗಳನ್ನು ಪ್ರಸ್ತಾಪಿಸಿದರು. "ಅಭಿವೃದ್ಧಿಯ ಶಕ್ತಿ, ಪ್ರವಾಸೋದ್ಯಮದ ಸಾಮರ್ಥ್ಯ, ರೈತರ ದಕ್ಷತೆ ಮತ್ತು ಜಮ್ಮು ಮತ್ತು ಕಾಶ್ಮೀರದ ಯುವಕರ ನಾಯಕತ್ವವು ವಿಕಸಿತ ಜಮ್ಮು ಕಾಶ್ಮೀರಕ್ಕೆ ದಾರಿ ಮಾಡಿಕೊಡಲಿದೆ" ಎಂದು ಪ್ರಧಾನಿ ಹೇಳಿದರು. “ಜಮ್ಮು ಕಾಶ್ಮೀರ ಕೇವಲ ಒಂದು ಸ್ಥಳವಲ್ಲ, ಜಮ್ಮು ಕಾಶ್ಮೀರ ಭಾರತದ ಶಿರಸ್ಸು ಮತ್ತು ತಲೆ ಎತ್ತಿ ನಡೆಯುವುದು ಅಭಿವೃದ್ಧಿ ಮತ್ತು ಗೌರವದ ಸಂಕೇತವಾಗಿದೆ. ಆದ್ದರಿಂದ, ವಿಕಸಿತ ಜಮ್ಮು ಮತ್ತು ಕಾಶ್ಮೀರವು ವಿಕಸಿತ ಭಾರತದ ಆದ್ಯತೆಯಾಗಿದೆ”ಎಂದು ಪ್ರಧಾನಮಂತ್ರಿ ಹೇಳಿಸಿದರು.
ದೇಶದಲ್ಲಿ ಜಾರಿಯಾದ ಕಾನೂನುಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಜಾರಿಗೆ ಬರದ ಸಮಯವನ್ನು ಸ್ಮರಿಸಿದ ಪ್ರಧಾನಿಯವರು ಬಡವರ ಕಲ್ಯಾಣ ಯೋಜನೆಗಳನ್ನು ವಂಚಿತರು ಪಡೆಯಲು ಸಾಧ್ಯವಾಗಲಿಲ್ಲ ಎಂದರು. ಇಂದು ಶ್ರೀನಗರದಿಂದ ಇಡೀ ರಾಷ್ಟ್ರಕ್ಕೆ ಯೋಜನೆಗಳನ್ನು ಪ್ರಾರಂಭಿಸಲಾಗಿದೆ ಮತ್ತು ಜಮ್ಮು ಮತ್ತು ಕಾಶ್ಮೀರವು ದೇಶದಲ್ಲಿ ಪ್ರವಾಸೋದ್ಯಮಕ್ಕೆ ದಾರಿ ಮಾಡಿಕೊಡುತ್ತಿದೆ. ಆದ್ದರಿಂದ, ಭಾರತದ 50 ಕ್ಕೂ ಹೆಚ್ಚು ಸ್ಥಳಗಳಿಂದ ಜನರು ಈ ಸಂದರ್ಭದಲ್ಲಿ ಸೇರಿಕೊಂಡಿದ್ದಾರೆ ಎಂದು ಪ್ರಧಾನಿ ಹೇಳಿದರು. ಸ್ವದೇಶ್ ದರ್ಶನ್ ಯೋಜನೆಯಡಿ ಇಂದು ರಾಷ್ಟ್ರಕ್ಕೆ ಸಮರ್ಪಿಸಲಾಗುತ್ತಿರುವ ಆರು ಯೋಜನೆಗಳು ಹಾಗೂ ಅದರ ಮುಂದಿನ ಹಂತದ ಆರಂಭದ ಕುರಿತು ಅವರು ತಿಳಿಸಿದರು. ಶ್ರೀನಗರ ಸೇರಿದಂತೆ ದೇಶದ ವಿವಿಧ ನಗರಗಳಿಗೆ ಸುಮಾರು 30 ಯೋಜನೆಗಳನ್ನು ಪ್ರಾರಂಭಿಸಲಾಗಿದ್ದು, 3 ಯೋಜನೆಗಳನ್ನು ಉದ್ಘಾಟಿಸಲಾಗಿದೆ ಮತ್ತು 14 ಇತರ ಯೋಜನೆಗಳನ್ನು ಪ್ರಸಾದ್ ಯೋಜನೆಯಡಿ ಪ್ರಾರಂಭಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಪವಿತ್ರ ಹಜರತ್‌ಬಾಲ್ ದರ್ಗಾದಲ್ಲಿ ಜನರ ಅನುಕೂಲಕ್ಕಾಗಿ ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳೂ ಪೂರ್ಣಗೊಂಡಿವೆ ಎಂದು ತಿಳಿಸಿದರು. ‘ದೇಖೋ ಅಪ್ನಾ ದೇಶ್ ಪೀಪಲ್ಸ್ ಚಾಯ್ಸ್’ಅಭಿಯಾನ ಕುರಿತು ಮಾಹಿತಿ ನೀಡಿ, ಮುಂದಿನ 2 ವರ್ಷಗಳಲ್ಲಿ 40 ಸ್ಥಳಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಲು ಸರ್ಕಾರ ಗುರುತಿಸಿದೆ. ಅಭಿಯಾನದ ಅಡಿಯಲ್ಲಿ, ಸಾರ್ವಜನಿಕ ಅಭಿಪ್ರಾಯದ ಆಧಾರದ ಮೇಲೆ ಸರ್ಕಾರವು ಹೆಚ್ಚು ಆದ್ಯತೆಯ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುತ್ತದೆ ಎಂದು ಪ್ರಧಾನಿ ವಿವರಿಸಿದರು. ಅನಿವಾಸಿ ಭಾರತೀಯರನ್ನು ಭಾರತಕ್ಕೆ ಬರುವಂತೆ ಉತ್ತೇಜಿಸುವ ‘ಚಲೋ ಇಂಡಿಯಾ’ ಅಭಿಯಾನವನ್ನೂ ಅವರು ಪ್ರಸ್ತಾಪಿಸಿದರು. ಇಂದಿನ ಅಭಿವೃದ್ಧಿ ಕಾರ್ಯಗಳಿಗಾಗಿ ಜಮ್ಮು ಮತ್ತು ಕಾಶ್ಮೀರದ ನಾಗರಿಕರನ್ನು ಅಭಿನಂದಿಸಿದ ಪ್ರಧಾನಮಂತ್ರಿ, ಇದು ಈ ಪ್ರದೇಶದ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಮತ್ತು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
"ಉದ್ದೇಶಗಳು ಉದಾತ್ತವಾಗಿದ್ದಾಗ ಮತ್ತು ಬದ್ಧತೆಗಳನ್ನು ಪೂರೈಸುವ ಸಂಕಲ್ಪ ಇದ್ದಾಗ, ಫಲಿತಾಂಶಗಳು ಉತ್ತಮವಾಗಿರುತ್ತವೆ" ಎಂದು ಪ್ರಧಾನಮಂತ್ರಿ ಹೇಳಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಜಿ-20 ಶೃಂಗಸಭೆಯ ಯಶಸ್ವಿ ಆತಿಥ್ಯವನ್ನು ಅವರು ಪ್ರಸ್ತಾಪಿಸಿದರು.
ಪ್ರವಾಸೋದ್ಯಮದಲ್ಲಿನ ಪರಿವರ್ತನಾಶೀಲ ಬೆಳವಣಿಗೆಯ ಬಗ್ಗೆ ಮಾತನಾಡಿದ ಪ್ರಧಾನಿ, "ಪ್ರವಾಸಕ್ಕಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ಯಾರು ಭೇಟಿ ನೀಡುತ್ತಾರೆ ಎಂದು ಜನರು ಪ್ರಶ್ನಿಸುತ್ತಿದ್ದ ಸಮಯವಿತ್ತು. ಇಂದು ಜಮ್ಮು ಮತ್ತು ಕಾಶ್ಮೀರವು ಎಲ್ಲಾ ಪ್ರವಾಸೋದ್ಯಮ ದಾಖಲೆಗಳನ್ನು ಮುರಿಯುತ್ತಿದೆ." ಎಂದು ಹೇಳಿದರು. 2023 ನೇ ವರ್ಷವೊಂದರಲ್ಲಿಯೇ ಜಮ್ಮು ಮತ್ತು ಕಾಶ್ಮೀರವು 2 ಕೋಟಿ ಪ್ರವಾಸಿಗರನ್ನು ಸ್ವಾಗತಿಸಿದೆ, ಹಿಂದಿನ ದಾಖಲೆಗಳನ್ನು ಮೀರಿಸಿದೆ. ಕಳೆದ 10 ವರ್ಷಗಳಲ್ಲಿ ಅಮರನಾಥ ಯಾತ್ರೆಯು ಅತಿ ಹೆಚ್ಚು ಯಾತ್ರಾರ್ಥಿಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಿದೆ ಮತ್ತು ವೈಷ್ಣೋದೇವಿ ಭಕ್ತರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವಾಗಿದೆ" ಎಂದು ಅವರು ಹೇಳಿದರು. ವಿದೇಶಿ ಪ್ರವಾಸಿಗರ ಆಗಮನದ ಹೆಚ್ಚಳ ಮತ್ತು ಸೆಲೆಬ್ರಿಟಿಗಳು ಮತ್ತು ಅಂತಾರಾಷ್ಟ್ರೀಯ ಅತಿಥಿಗಳಿಗೆ ಹೆಚ್ಚುತ್ತಿರುವ ಆಕರ್ಷಣೆಯನ್ನು ಪ್ರಸ್ತಾಪಿಸಿದ ಪ್ರಧಾನಿ, "ಈಗ ಪ್ರಮುಖ ಸೆಲೆಬ್ರಿಟಿಗಳು ಮತ್ತು ವಿದೇಶಿ ಅತಿಥಿಗಳು ಸಹ ಜಮ್ಮು ಮತ್ತು ಕಾಶ್ಮೀರದ ಕಣಿವೆಗಳಿಗೆ ವೀಡಿಯೊ ಮತ್ತು ರೀಲ್ ಗಳನ್ನು ಮಾಡಲು ಭೇಟಿ ನೀಡುತ್ತಿದ್ದಾರೆ" ಎಂದು ಹೇಳಿದರು.
ಕೃಷಿಯ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿಯವರು, ಕೇಸರಿ, ಸೇಬು, ಒಣ ಹಣ್ಣುಗಳು ಮತ್ತು ಚೆರ್ರಿ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ಕೃಷಿ ಉತ್ಪನ್ನಗಳ ಶಕ್ತಿಯು ಈ ಪ್ರದೇಶವನ್ನು ಮಹತ್ವದ ಕೃಷಿ ಕೇಂದ್ರವೆಂದು ಬ್ರಾಂಡ್ ಮಾಡಿವೆ ಎಂದು ಹೇಳಿದರು. 5,000 ಕೋಟಿ ರೂಪಾಯಿಗಳ ಕೃಷಿ ಅಭಿವೃದ್ಧಿ ಕಾರ್ಯಕ್ರಮವು ಮುಂದಿನ 5 ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಕೃಷಿ ಕ್ಷೇತ್ರದಲ್ಲಿ ಅಭೂತಪೂರ್ವ ಬೆಳವಣಿಗೆಯನ್ನು ಉಂಟುಮಾಡುತ್ತದೆ, ವಿಶೇಷವಾಗಿ ತೋಟಗಾರಿಕೆ ಮತ್ತು ಜಾನುವಾರು ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುತ್ತದೆ ಎಂದು ಅವರು ಹೇಳಿದರು. "ಈ ಉಪಕ್ರಮವು ವಿಶೇಷವಾಗಿ ತೋಟಗಾರಿಕೆ ಮತ್ತು ಪಶುಸಂಗೋಪನೆ ಕ್ಷೇತ್ರಗಳಲ್ಲಿ ಸಾವಿರಾರು ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ" ಎಂದು ಅವರು ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ರೈತರ ಖಾತೆಗಳಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಸುಮಾರು 3,000 ಕೋಟಿ ರೂಪಾಯಿಗಳ ನೇರ ವರ್ಗಾವಣೆಯನ್ನು ಅವರು ಪ್ರಸ್ತಾಪಿಸಿದರು. ಹಣ್ಣುಗಳು ಮತ್ತು ತರಕಾರಿಗಳ ಶೇಖರಣಾ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಅವುಗಳ ದೀರ್ಘಕಾಲೀನ ಸಂರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು, ಜಮ್ಮು ಮತ್ತು ಕಾಶ್ಮೀರದಲ್ಲಿ ಶೇಖರಣಾ ಸೌಲಭ್ಯಗಳನ್ನು ಹೆಚ್ಚಿಸಲು ಗಮನಾರ್ಹ ಹೂಡಿಕೆಗಳನ್ನು ಮಾಡಲಾಗಿದೆ. ಇದಲ್ಲದೆ, 'ವಿಶ್ವದ ಅತಿದೊಡ್ಡ ಉಗ್ರಾಣ ಯೋಜನೆ'ಯ ಪ್ರಾರಂಭವು ಜಮ್ಮು ಮತ್ತು ಕಾಶ್ಮೀರದಾದ್ಯಂತ ಹಲವಾರು ಗೋದಾಮುಗಳ ನಿರ್ಮಾಣವನ್ನು ಒಳಗೊಂಡಿರುತ್ತದೆ ಎಂದು ಪ್ರಧಾನಿ ಹೇಳಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿನ ಅಭಿವೃದ್ಧಿಯ ಕ್ಷಿಪ್ರಗತಿಯ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, 2 ಏಮ್ಸ್‌ಗಳನ್ನು ಇಲ್ಲಿಗೆ ನೀಡಲಾಗಿದೆ. ಏಮ್ಸ್ ಜಮ್ಮುವನ್ನು ಈಗಾಗಲೇ ಉದ್ಘಾಟಿಸಲಾಗಿದೆ ಮತ್ತು ಏಮ್ಸ್ ಕಾಶ್ಮೀರದ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು. ಈ ಪ್ರದೇಶದ 7 ಹೊಸ ವೈದ್ಯಕೀಯ ಕಾಲೇಜುಗಳು, 2 ಕ್ಯಾನ್ಸರ್ ಆಸ್ಪತ್ರೆಗಳು ಮತ್ತು ಐಐಟಿ ಮತ್ತು ಐಐಎಂನಂತಹ ಸಂಸ್ಥೆಗಳ ಕುರಿತು ಅವರು ಮಾತನಾಡಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ 2 ವಂದೇ ಭಾರತ್ ರೈಲುಗಳು ಓಡುತ್ತಿವೆ ಮತ್ತು ಶ್ರೀನಗರದಿಂದ ಸಂಗಲ್ದನ್ ಮತ್ತು ಸಂಗಲ್ದನ್‌ನಿಂದ ಬಾರಾಮುಲ್ಲಾಗೆ ರೈಲು ಸೇವೆಗಳು ಪ್ರಾರಂಭವಾಗಿವೆ ಎಂದು ಅವರು ಹೇಳಿದರು. ಸಂಪರ್ಕದ ಈ ವಿಸ್ತರಣೆಯು ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಿದೆ ಎಂದರು. ಜಮ್ಮು ಮತ್ತು ಶ್ರೀನಗರವನ್ನು ಸ್ಮಾರ್ಟ್ ಸಿಟಿಗಳನ್ನಾಗಿ ಮಾಡುವ ಹೊಸ ಯೋಜನೆಗಳನ್ನು ಉಲ್ಲೇಖಿಸಿದ ಪ್ರಧಾನಿ, "ಮುಂಬರುವ ದಿನಗಳಲ್ಲಿ, ಜಮ್ಮು ಮತ್ತು ಕಾಶ್ಮೀರದ ಯಶೋಗಾಥೆಯು ಇಡೀ ಜಗತ್ತಿಗೆ ಉದಾಹರಣೆಯಾಗಲಿದೆ" ಎಂದು ಹೇಳಿದರು.
ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕರಕುಶಲ ವಸ್ತುಗಳು ಮತ್ತು ಈ ಪ್ರದೇಶದ ಶುಚಿತ್ವದ ಬಗ್ಗೆ ತಮ್ಮ ಉಲ್ಲೇಖಗಳನ್ನು ಸ್ಮರಿಸಿಕೊಂಡ ಪ್ರಧಾನಿ, ಕಮಲದ ಜೊತೆಗೆ ಜಮ್ಮು ಕಾಶ್ಮೀರದ ಸಂಬಂಧವನ್ನು ಒತ್ತಿ ಹೇಳಿದರು.
ಪ್ರತಿಯೊಂದು ಕ್ಷೇತ್ರದಲ್ಲೂ ಜಮ್ಮು ಮತ್ತು ಕಾಶ್ಮೀರದ ಯುವಜನರ ಅಭಿವೃದ್ಧಿಗಾಗಿ ಸರ್ಕಾರದ ಪ್ರಯತ್ನಗಳನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಕೌಶಲ್ಯ ಅಭಿವೃದ್ಧಿಯಿಂದ ಕ್ರೀಡೆಯವರೆಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ ಮತ್ತು ಜಮ್ಮು ಮತ್ತು ಕಾಶ್ಮೀರದ ಪ್ರತಿ ಜಿಲ್ಲೆಗಳಲ್ಲಿ ಆಧುನಿಕ ಕ್ರೀಡಾ ಸೌಲಭ್ಯಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು. 17 ಜಿಲ್ಲೆಗಳಲ್ಲಿ ನಿರ್ಮಿಸಲಾದ ಬಹುಪಯೋಗಿ ಒಳಾಂಗಣ ಕ್ರೀಡಾ ಸಭಾಂಗಣಗಳು ಮತ್ತು ಜಮ್ಮು ಮತ್ತು ಕಾಶ್ಮೀರವು ಅನೇಕ ರಾಷ್ಟ್ರೀಯ ಕ್ರೀಡಾ ಪಂದ್ಯಾವಳಿಗಳನ್ನು ಆಯೋಜಿಸಿದ ಉದಾಹರಣೆಯನ್ನು ನೀಡಿದರು. “ಈಗ ಜಮ್ಮು ಮತ್ತು ಕಾಶ್ಮೀರವು ದೇಶದ ಚಳಿಗಾಲದ ಕ್ರೀಡಾ ರಾಜಧಾನಿಯಾಗಿ ಹೊರಹೊಮ್ಮುತ್ತಿದೆ. ಇತ್ತೀಚೆಗೆ ನಡೆದ ಖೇಲೋ ಇಂಡಿಯಾ ಚಳಿಗಾಲದ ಕ್ರೀಡಾಕೂಟದಲ್ಲಿ ಸುಮಾರು 1000 ಆಟಗಾರರು ಭಾಗವಹಿಸಿದರು”ಎಂದು ಪ್ರಧಾನಮಂತ್ರಿ ಹೇಳಿದರು.
"ಜಮ್ಮು ಮತ್ತು ಕಾಶ್ಮೀರವು ಇಂದು ಮುಕ್ತವಾಗಿ ಉಸಿರಾಡುತ್ತಿದೆ, ಆದ್ದರಿಂದ ಹೊಸ ಎತ್ತರವನ್ನು ಸಾಧಿಸುತ್ತಿದೆ" ಎಂದು ಪ್ರಧಾನಿ ಹೇಳಿದರು. ಯುವಜನರ ಪ್ರತಿಭೆ ಮತ್ತು ಎಲ್ಲರಿಗೂ ಸಮಾನ ಹಕ್ಕುಗಳು ಮತ್ತು ಸಮಾನ ಅವಕಾಶಗಳನ್ನು ಗೌರವಿಸಲು ಕಾರಣವಾದ 370 ನೇ ವಿಧಿಯನ್ನು ರದ್ದುಗೊಳಿಸಿದ ಬಗ್ಗೆ ಉಲ್ಲೇಖಿಸಿದರು. ಪಾಕಿಸ್ತಾನದ ನಿರಾಶ್ರಿತರು, ವಾಲ್ಮೀಕಿ ಸಮುದಾಯ ಮತ್ತು ನೈರ್ಮಲ್ಯ ಕಾರ್ಮಿಕರ ಮತದಾನದ ಹಕ್ಕು, ಪರಿಶಿಷ್ಟವರ್ಗಕ್ಕೆ ವಾಲ್ಮೀಕಿ ಸಮುದಾಯದ ಬೇಡಿಕೆ ಈಡೇರಿಕೆ, ಪರಿಶಿಷ್ಟ ಪಂಗಡ, ಪದ್ದರಿ ಬುಡಕಟ್ಟುಗಳಿಗೆ ವಿಧಾನಸಭೆಯಲ್ಲಿ ಸ್ಥಾನ ಮೀಸಲು ಮತ್ತು ಪರಿಶಿಷ್ಟ ಪಂಗಡಕ್ಕೆ ಪದ್ದರಿ ಬುಡಕಟ್ಟು, ಪಹಾರಿ ಜನಾಂಗ, ಗದ್ದ ಬ್ರಾಹ್ಮಣ ಮತ್ತು ಕೋಲಿ ಸಮುದಾಯಗಳ ಸೇರ್ಪಡೆ ಕುರಿತು ಅವರು ಮಾತನಾಡಿದರು. ಜಮ್ಮು ಮತ್ತು ಕಾಶ್ಮೀರದಲ್ಲಿನ ವಂಶಪಾರಂಪರ್ಯ ರಾಜಕಾರಣವು ಪಂಚಾಯತ್, ಪುರಸಭೆ ಮತ್ತು ಮುನ್ಸಿಪಲ್ ಕಾರ್ಪೊರೇಶನ್ ಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಸರ್ಕಾರವು ಒದಗಿಸಿದ ಮೀಸಲಾತಿಯ ಹಕ್ಕನ್ನು ಕಸಿದುಕೊಂಡಿತು ಎಂದು ಪ್ರಧಾನಿ ಗಮನಸೆಳೆದರು. "ಇಂದು ಪ್ರತಿಯೊಂದು ವರ್ಗಕ್ಕೂ ಅದರ ಹಕ್ಕುಗಳನ್ನು ಹಿಂತಿರುಗಿಸಲಾಗುತ್ತಿದೆ" ಎಂದು ಪ್ರಧಾನಿ ಮೋದಿ ಹೇಳಿದರು.
ಜಮ್ಮು&ಕಾಶ್ಮೀರ ಬ್ಯಾಂಕಿನ ಪರಿವರ್ತನೆಯ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು ಹಿಂದಿನ ದುರಾಡಳಿತವನ್ನು ನೆನಪಿಸಿಕೊಂಡರು ಮತ್ತು ಅದನ್ನು ವಂಶಪಾರಂರ್ಯ ರಾಜಕೀಯದ ಮತ್ತು ಭ್ರಷ್ಟಾಚಾರದ ಬಲಿಪಶು ಎಂದು ಕರೆದರು. ಬ್ಯಾಂಕಿನ ಆರೋಗ್ಯವನ್ನು ಪುನಃಸ್ಥಾಪಿಸಲು ಪ್ರಧಾನಿ ಸುಧಾರಣೆಗಳನ್ನು ಪಟ್ಟಿ ಮಾಡಿದರು. ಬ್ಯಾಂಕಿಗೆ 1000 ಕೋಟಿ ರೂಪಾಯಿ ನೆರವು ಮತ್ತು ಅಕ್ರಮ ನೇಮಕಾತಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಪ್ರಸ್ತಾಪಿಸಿದರು. ಭ್ರಷ್ಟಾಚಾರ ನಿಗ್ರಹ ದಳವು ಇಂತಹ ಸಾವಿರಾರು ನೇಮಕಾತಿಗಳ ಕುರಿತು ಇನ್ನೂ ತನಿಖೆ ನಡೆಸುತ್ತಿದೆ ಎಂದರು. ಅವರು ಕಳೆದ 5 ವರ್ಷಗಳಲ್ಲಿ ನಡೆದ ಪಾರದರ್ಶಕ ನೇಮಕಾತಿಗಳನ್ನು ಅವರು ಉಲ್ಲೇಖಿಸಿದರು. ಇದರ ಪರಿಣಾಮವಾಗಿ, ಜೆ & ಕೆ ಬ್ಯಾಂಕ್ ಲಾಭವು 1700 ಕೋಟಿ ರೂಪಾಯಿಗಳಿಗೆ ತಲುಪಿದೆ ಮತ್ತು ವ್ಯವಹಾರವು 5 ವರ್ಷಗಳ ಹಿಂದೆ ಇದ್ದ 1.25 ಕೋಟಿ ರೂಪಾಯಿಗಳಿಂದ 2.25 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿದೆ. ಠೇವಣಿ ಕೂಡ 80,000 ಕೋಟಿ ರೂಪಾಯಿಗಳಿಂದ 1.25 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. 5 ವರ್ಷಗಳ ಹಿಂದೆ ಶೇಕಡಾ 11 ದಾಟಿದ್ದ ಎನ್ ಪಿ ಎ ಯನ್ನು ಶೇಕಡಾ 5ಕ್ಕಿಂತ ಕಡಿಮೆ ಮಾಡಲಾಗಿದೆ. ಬ್ಯಾಂಕಿನ ಷೇರು ಕೂಡ 5 ವರ್ಷಗಳ ಹಿಂದಿನ 12 ರೂಪಾಯಿಯಿಂದ 140 ರೂಪಾಯಿಗೆ 12 ಪಟ್ಟು ಏರಿಕೆ ಕಂಡಿದೆ ಎಂದು ಹೇಳಿದರು. "ಪ್ರಾಮಾಣಿಕ ಸರ್ಕಾರವಿದ್ದಾಗ, ಜನ ಕಲ್ಯಾಣದ ಉದ್ದೇವಿದ್ದಾಗ, ಜನರನ್ನು ಎಲ್ಲಾ ಕಷ್ಟಗಳಿಂದ ಹೊರತರಬಹುದು" ಎಂದು ಪ್ರಧಾನಿ ಮೋದಿ ಹೇಳಿದರು.
ಸ್ವಾತಂತ್ರ್ಯದ ನಂತರ ಜಮ್ಮು ಮತ್ತು ಕಾಶ್ಮೀರವು ವಂಶಪಾರಂಪರ್ಯ ರಾಜಕೀಯದ ಅತಿದೊಡ್ಡ ಬಲಿಪಶುವಾಗಿದೆ ಎಂದು ಹೇಳಿದ ಪ್ರಧಾನಿ, ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿ ಅಭಿಯಾನವು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಮತ್ತು ಮುಂದಿನ 5 ವರ್ಷಗಳಲ್ಲಿ ಈ ಪ್ರದೇಶವು ಹೆಚ್ಚು ವೇಗವಾಗಿ ಅಭಿವೃದ್ಧಿ ಹೊಂದಲಿದೆ ಎಂದು ಜನರಿಗೆ ಭರವಸೆ ನೀಡಿದರು.
ಪವಿತ್ರ ರಂಜಾನ್ ತಿಂಗಳಿನಲ್ಲಿ ಇಡೀ ರಾಷ್ಟ್ರಕ್ಕೆ ತಮ್ಮ ಶುಭಾಶಯಗಳನ್ನು ತಿಳಿಸುವ ಮೂಲಕ ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. “ರಂಜಾನ್ ತಿಂಗಳಿನಿಂದ ಪ್ರತಿಯೊಬ್ಬರೂ ಶಾಂತಿ ಮತ್ತು ಸೌಹಾರ್ದತೆಯ ಸಂದೇಶವನ್ನು ಪಡೆಯಬೇಕು ಎಂಬುದು ನನ್ನ ಆಶಯ. ನಾಳೆ ಮಹಾಶಿವರಾತ್ರಿ, ನಾನು ಎಲ್ಲರಿಗೂ ಈ ಪವಿತ್ರ ಹಬ್ಬದ ಶುಭ ಹಾರೈಸುತ್ತೇನೆ” ಎಂದು ಪ್ರಧಾನಿ ಮೋದಿ ಮಾತು ಮುಗಿಸಿದರು.
ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಶ್ರೀ ಮನೋಜ್ ಸಿನ್ಹಾ ಮತ್ತು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ಜಮ್ಮು ಮತ್ತು ಕಾಶ್ಮೀರದ ಕೃಷಿ-ಆರ್ಥಿಕತೆಗೆ ಪ್ರಮುಖ ಉತ್ತೇಜನವನ್ನು ಒದಗಿಸುವ ಕ್ರಮವಾಗಿ, ಪ್ರಧಾನಮಂತ್ರಿಯವರು 'ಸಮಗ್ರ ಕೃಷಿ ಅಭಿವೃದ್ಧಿ ಕಾರ್ಯಕ್ರಮ' (ಹೆಚ್ ಎ ಡಿ ಪಿ) ವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಹೆಚ್ ಎ ಡಿ ಪಿ ಎಂಬುದು ಜಮ್ಮು ಮತ್ತು ಕಾಶ್ಮೀರದಲ್ಲಿ ತೋಟಗಾರಿಕೆ, ಕೃಷಿ ಮತ್ತು ಜಾನುವಾರು ಸಾಕಣೆಯ ಮೂರು ಪ್ರಮುಖ ಕೃಷಿ-ಆರ್ಥಿಕ ಕ್ಷೇತ್ರಗಳಲ್ಲಿನ ಸಂಪೂರ್ಣ ಚಟುವಟಿಕೆಗಳನ್ನು ಒಳಗೊಳ್ಳುವ ಒಂದು ಸಮಗ್ರ ಕಾರ್ಯಕ್ರಮವಾಗಿದೆ. ಪ್ರತ್ಯೇಕ ದಕ್ಷ್ ಕಿಸಾನ್ ಪೋರ್ಟಲ್ ಮೂಲಕ ಕೌಶಲ್ಯ ಅಭಿವೃದ್ಧಿಯೊಂದಿಗೆ ಸುಮಾರು 2.5 ಲಕ್ಷ ರೈತರನ್ನು ಈ ಕಾರ್ಯಕ್ರಮವು ಸಜ್ಜುಗೊಳಿಸುತ್ತದೆ. ಕಾರ್ಯಕ್ರಮದ ಅಡಿಯಲ್ಲಿ, ಸುಮಾರು 2000 ಕಿಸಾನ್ ಖಿದ್ಮತ್ ಘರ್ ಗಳನ್ನು ಸ್ಥಾಪಿಸಲಾಗುವುದು ಮತ್ತು ರೈತ ಸಮುದಾಯದ ಕಲ್ಯಾಣಕ್ಕಾಗಿ ದೃಢವಾದ ಮೌಲ್ಯ ಸರಪಳಿಗಳನ್ನು ರಚಿಸಲಾಗುತ್ತದೆ. ಈ ಕಾರ್ಯಕ್ರಮವು ಜಮ್ಮು ಮತ್ತು ಕಾಶ್ಮೀರದಲ್ಲಿ ಲಕ್ಷಾಂತರ ಅತಿ ಸಣ್ಣ ಕುಟುಂಬಗಳಿಗೆ ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ.
ವಿಶ್ವದರ್ಜೆಯ ಮೂಲಸೌಕರ್ಯ ಮತ್ತು ಸೌಕರ್ಯಗಳನ್ನು ನಿರ್ಮಿಸುವ ಮೂಲಕ ರಾಷ್ಟ್ರವ್ಯಾಪಿ ಪ್ರಮುಖ ಯಾತ್ರಾ ಸ್ಥಳಗಳು ಮತ್ತು ಪ್ರವಾಸೋದ್ಯಮ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರು ಮತ್ತು ಯಾತ್ರಾರ್ಥಿಗಳ ಒಟ್ಟಾರೆ ಅನುಭವವನ್ನು ಸುಧಾರಿಸುವುದು ಪ್ರಧಾನಿಯವರ ದೃಷ್ಟಿಯಾಗಿದೆ. ಇದಕ್ಕೆ ಅನುಗುಣವಾಗಿ, ಪ್ರಧಾನಮಂತ್ರಿಯವರು 1400 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಸ್ವದೇಶ್ ದರ್ಶನ್ ಮತ್ತು ಪ್ರಸಾದ್ ಯೋಜನೆಗಳ ಅಡಿಯಲ್ಲಿ ಬಹು ಉಪಕ್ರಮಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಿದ ಯೋಜನೆಗಳಲ್ಲಿ ಜಮ್ಮು&ಕಾಶ್ಮೀರದ ಶ್ರೀನಗರದಲ್ಲಿರುವ 'ಹಜರತ್ ಬಾಲ್ ಕ್ಷೇತ್ರದ ಸಮಗ್ರ ಅಭಿವೃದ್ಧಿ'; ಮೇಘಾಲಯದ ಈಶಾನ್ಯ ಸರ್ಕ್ಯೂಟ್ ನಲ್ಲಿ ಪ್ರವಾಸೋದ್ಯಮ ಸೌಲಭ್ಯಗಳ ಅಭಿವೃದ್ಧಿ; ಬಿಹಾರ ಮತ್ತು ರಾಜಸ್ಥಾನದಲ್ಲಿ ಆಧ್ಯಾತ್ಮಿಕ ಸರ್ಕ್ಯೂಟ್; ಬಿಹಾರದಲ್ಲಿ ಗ್ರಾಮೀಣ ಮತ್ತು ತೀರ್ಥಂಕರ ಸರ್ಕ್ಯೂಟ್; ತೆಲಂಗಾಣದ ಗದ್ವಾಲ್ ಜಿಲ್ಲೆಯ ಜೋಗುಲಾಂಬಾ ದೇವಿ ದೇವಸ್ಥಾನದ ಅಭಿವೃದ್ಧಿ ಮತ್ತು ಮಧ್ಯಪ್ರದೇಶದ ಅಣ್ಣುಪುರ್ ಜಿಲ್ಲೆಯ ಅಮರಕಂಟಕ್ ದೇವಾಲಯದ ಅಭಿವೃದ್ಧಿ, ಸೇರಿವೆ.
ಹಜರತ್ ಬಾಲ್ ದರ್ಗಾಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರಿಗೆ ವಿಶ್ವದರ್ಜೆಯ ಮೂಲಸೌಕರ್ಯ ಮತ್ತು ಸೌಕರ್ಯಗಳನ್ನು ಸೃಷ್ಟಿಸಲು ಮತ್ತು ಅವರ ಸಮಗ್ರ ಆಧ್ಯಾತ್ಮಿಕ ಅನುಭವವನ್ನು ಹೆಚ್ಚಿಸಲು, 'ಹಜರತ್‌ಬಾಲ್ ದರ್ಗಾ ಸಮಗ್ರ ಅಭಿವೃದ್ಧಿ' ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ. ಯೋಜನೆಯ ಪ್ರಮುಖ ಅಂಶಗಳೆಂದರೆ ದರ್ಗಾದ ಗಡಿ ಗೋಡೆಯ ನಿರ್ಮಾಣ ಸೇರಿದಂತೆ ಇಡೀ ಪ್ರದೇಶದ ಅಭಿವೃದ್ಧಿ; ಹಜರತ್ ಬಾಲ್ ದರ್ಗಾದ ಆವರಣದ ವಿದ್ಯುದಲಂಕಾರ; ದರ್ಗಾದ ಸುತ್ತಲಿನ ಘಾಟ್ ಗಳು ಮತ್ತು ದೇವ್ರಿ ಪಥಗಳ ಸುಧಾರಣೆ; ಸೂಫಿ ವ್ಯಾಖ್ಯಾನ ಕೇಂದ್ರದ ನಿರ್ಮಾಣ; ಟೂರಿಸ್ಟ್ ಫೆಸಿಲಿಟೇಶನ್ ಸೆಂಟರ್ ನಿರ್ಮಾಣ; ಸಂಕೇತಗಳ ಸ್ಥಾಪನೆ; ಬಹುಹಂತದ ಕಾರ್ ಪಾರ್ಕಿಂಗ್; ಸಾರ್ವಜನಿಕ ಅನುಕೂಲಕ್ಕಾಗಿ ಬ್ಲಾಕ್ ಮತ್ತು ದರ್ಗಾದ ಪ್ರವೇಶ ದ್ವಾರದ ನಿರ್ಮಾಣ.
ಪ್ರಧಾನಿಯವರು ದೇಶಾದ್ಯಂತ ವ್ಯಾಪಕವಾದ ಯಾತ್ರಾ ಮತ್ತು ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ಸುಮಾರು 43 ಯೋಜನೆಗಳಿಗೆ ಚಾಲನೆ ನೀಡಿದರು. ಇವುಗಳಲ್ಲಿ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಅಣ್ಣಾವರಂ ದೇವಾಲಯದಂತಹ ಪ್ರಮುಖ ಧಾರ್ಮಿಕ ಸ್ಥಳಗಳು ಸೇರಿವೆ; ತಮಿಳುನಾಡಿನ ತಂಜಾವೂರು ಮತ್ತು ಮೈಲಾಡುತುರೈ ಜಿಲ್ಲೆ ಹಾಗೂ ಪುದುಚೇರಿಯ ಕಾರೈಕಲ್ ಜಿಲ್ಲೆಯ ನವಗ್ರಹ ದೇವಾಲಯಗಳು; ಕರ್ನಾಟಕದ ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಿ ದೇವಸ್ಥಾನ; ರಾಜಸ್ಥಾನದ ಬಿಕಾನೇರ್ ಜಿಲ್ಲೆಯ ಕರ್ಣಿ ಮಾತಾ ಮಂದಿರ; ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಚಿಂತಪೂರ್ಣಿ ಮಾತಾ ದೇವಸ್ಥಾನ; ಗೋವಾದ ಬಾಮ್ ಜೀಸಸ್ ಚರ್ಚ್ ಬೆಸಿಲಿಕಾ ಸೇರಿವೆ. ಯೋಜನೆಗಳು ಅರುಣಾಚಲ ಪ್ರದೇಶದ ಮೆಚುಕಾ ಅಡ್ವೆಂಚರ್ ಪಾರ್ಕ್‌ನಂತಹ ಹಲವಾರು ಇತರ ತಾಣಗಳು ಮತ್ತು ಅನುಭವ ಕೇಂದ್ರಗಳ ಅಭಿವೃದ್ಧಿಯನ್ನು ಸಹ ಒಳಗೊಂಡಿವೆ; ಉತ್ತರಾಖಂಡದ ಪಿಥೋರಗಢ್ ನ ಗುಂಜಿಯಲ್ಲಿ ಗ್ರಾಮೀಣ ಪ್ರವಾಸೋದ್ಯಮ ಕ್ಲಸ್ಟರ್; ತೆಲಂಗಾಣದ ಅನಂತಗಿರಿ ಅರಣ್ಯದಲ್ಲಿ ಪರಿಸರ ಪ್ರವಾಸೋದ್ಯಮ ವಲಯ; ಮೇಘಾಲಯದ ಸೋಹ್ರಾದಲ್ಲಿ ಮೇಘಾಲಯನ್ ಏಜ್ ಗುಹೆಯ ಅನುಭವ ಮತ್ತು ಜಲಪಾತದ ಹಾದಿಗಳ ಅನುಭವ; ಸಿನ್ನಮಾರಾ ಟೀ ಎಸ್ಟೇಟ್, ಜೋರ್ಹತ್, ಅಸ್ಸಾಂ ಅನ್ನು ಮರುರೂಪಿಸುವುದು; ಪಂಜಾಬ್‌ನ ಕಪುರ್ತಲದ ಕಾಂಜ್ಲಿ ವೆಟ್ ಲ್ಯಾಂಡ್ ನಲ್ಲಿ ಪರಿಸರ ಪ್ರವಾಸೋದ್ಯಮ ಅನುಭವ; ಲೇಹ್ ನಲ್ಲಿ ಜುಲ್ಲಿ ಲೇಹ್ ಜೀವವೈವಿಧ್ಯತೆ ಪಾರ್ಕ್ ಸೇರಿವೆ.
ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಚಾಲೆಂಜ್ ಬೇಸ್ಡ್ ಡೆಸ್ಟಿನೇಶನ್ ಡೆವಲಪ್‌ಮೆಂಟ್ (ಸಿಬಿಡಿಡಿ) ಯೋಜನೆಯಡಿ ಆಯ್ಕೆಯಾದ 42 ಪ್ರವಾಸಿ ತಾಣಗಳನ್ನು ಘೋಷಿಸಿದರು. 2023-24 ರ ಕೇಂದ್ರ ಬಜೆಟ್ ನಲ್ಲಿ ಘೋಷಿಸಲಾದ ಈ ವಿನೂತನ ಯೋಜನೆಯು ಪ್ರವಾಸೋದ್ಯಮ ವಲಯದಲ್ಲಿ ಸುಸ್ಥಿರತೆಯನ್ನು ಉತ್ತೇಜಿಸುವ ಮತ್ತು ಸ್ಪರ್ಧಾತ್ಮಕತೆಯನ್ನು ಉತ್ತೇಜಿಸುವ ಮೂಲಕ ಪ್ರವಾಸಿ ತಾಣಗಳ ಅಭಿವೃದ್ಧಿಯನ್ನು ವೇಗಗೊಳಿಸುವ ಗುರಿಯನ್ನು ಹೊಂದಿದೆ. 42 ಸ್ಥಳಗಳನ್ನು ನಾಲ್ಕು ವಿಭಾಗಗಳಲ್ಲಿ ಗುರುತಿಸಲಾಗಿದೆ - 16 ಸಂಸ್ಕೃತಿ ಮತ್ತು ಪಾರಂಪರಿಕ ತಾಣಗಳಲ್ಲಿ, 11 ಆಧ್ಯಾತ್ಮಿಕ ತಾಣಗಳಲ್ಲಿ, 10 ಪರಿಸರ ಪ್ರವಾಸೋದ್ಯಮ ಮತ್ತು ಅಮೃತ್ ಧರೋಹರ್ ಮತ್ತು 5 ವೈಬ್ರಂಟ್ ವಿಲೇಜ್ ವಿಭಾಗಗಳಲ್ಲಿವೆ.
ಪ್ರವಾಸೋದ್ಯಮದಲ್ಲಿ ರಾಷ್ಟ್ರದ ನಾಡಿಮಿಡಿತವನ್ನು ಗುರುತಿಸುವ ಮೊದಲ ರಾಷ್ಟ್ರವ್ಯಾಪಿ ಉಪಕ್ರಮವಾದ 'ದೇಖೋ ಅಪ್ನಾ ದೇಶ್ ಪೀಪಲ್ಸ್ ಚಾಯ್ಸ್ 2024' ಗೆ ಪ್ರಧಾನಿ ಚಾಲನೆ ನೀಡಿದರು. ರಾಷ್ಟ್ರವ್ಯಾಪಿ ಸಮೀಕ್ಷೆಯು ಹೆಚ್ಚು ಆದ್ಯತೆಯ ಪ್ರವಾಸಿ ಆಕರ್ಷಣೆಗಳನ್ನು ಗುರುತಿಸಲು ಮತ್ತು 5 ಪ್ರವಾಸೋದ್ಯಮ ವಿಭಾಗಗಳಲ್ಲಿ - ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಪರಂಪರೆ, ಪ್ರಕೃತಿ ಮತ್ತು ವನ್ಯಜೀವಿ, ಸಾಹಸ ಮತ್ತು ಇತರ ವಿಭಾಗಗಳು- ಪ್ರವಾಸಿಗರ ಗ್ರಹಿಕೆಗಳನ್ನು ಅರ್ಥಮಾಡಿಕೊಳ್ಳಲು ನಾಗರಿಕರೊಂದಿಗೆ ತೊಡಗಿಸಿಕೊಳ್ಳುವ ಗುರಿಯನ್ನು ಇದು ಹೊಂದಿದೆ. ನಾಲ್ಕು ಪ್ರಮುಖ ವಿಭಾಗಗಳಲ್ಲದೆ, 'ಇತರ' ವರ್ಗದಲ್ಲಿ ತಮ್ಮ ವೈಯಕ್ತಿಕ ಇಷ್ಟದ ವಿಭಾಗಕ್ಕೆ ಮತ ಹಾಕಬಹುದು ಮತ್ತು ಅನ್ವೇಷಿಸದ ಪ್ರವಾಸೋದ್ಯಮ ಆಕರ್ಷಣೆಗಳು ಮತ್ತು ವೈಬ್ರೆಂಟ್ ಗಡಿಗ್ರಾಮಗಳು, ಕ್ಷೇಮ ಪ್ರವಾಸೋದ್ಯಮ, ವಿವಾಹ ಪ್ರವಾಸೋದ್ಯಮ ಇತ್ಯಾದಿ ಗುಪ್ತ ಪ್ರವಾಸೋದ್ಯಮಗಳನ್ನು ಬಹಿರಂಗಪಡಿಸಲು ಸಹಾಯ ಮಾಡಬಹುದು. ಈ ಸಮೀಕ್ಷೆಯನ್ನು ಭಾರತ ಸರ್ಕಾರದ ನಾಗರಿಕರ ತೊಡಗಿಸಿಕೊಳ್ಳುವಿಕೆಯ ಪೋರ್ಟಲ್ MyGov ಪ್ಲಾಟ್‌ಫಾರ್ಮ್‌ನಲ್ಲಿ ಹೋಸ್ಟ್ ಮಾಡಲಾಗುತ್ತಿದೆ.
ಪ್ರಧಾನಮಂತ್ರಿಯವರು ‘ಚಲೋ ಇಂಡಿಯಾ ಗ್ಲೋಬಲ್ ಡಯಾಸ್ಪೊರಾ ಅಭಿಯಾನವನ್ನು ಭಾರತೀಯ ವಲಸಿಗರನ್ನು ಇನ್‌ಕ್ರೆಡಿಬಲ್ ಇಂಡಿಯಾ ರಾಯಭಾರಿಗಳಾಗಲು ಮತ್ತು ಭಾರತಕ್ಕೆ ಪ್ರವಾಸೋದ್ಯಮವನ್ನು ಉತ್ತೇಜಿಸಲು ಚಾಲನೆ ನೀಡಿದರು. ಪ್ರಧಾನ ಮಂತ್ರಿಯವರ ಕರೆಯನ್ನು ಆಧರಿಸಿ ಈ ಅಭಿಯಾನವನ್ನು ಪ್ರಾರಂಭಿಸಲಾಗುತ್ತಿದೆ, ಇದರಲ್ಲಿ ಕನಿಷ್ಠ 5 ಭಾರತೀಯರೇತರ ಸ್ನೇಹಿತರನ್ನು ಭಾರತಕ್ಕೆ ಪ್ರಯಾಣಿಸಲು ಪ್ರೋತ್ಸಾಹಿಸುವಂತೆ ಭಾರತೀಯ ಸಮುದಾಯದ ಸದಸ್ಯರನ್ನು ವಿನಂತಿಸಿದರು. 3 ಕೋಟಿಗೂ ಹೆಚ್ಚು ಸಾಗರೋತ್ತರ ಭಾರತೀಯರೊಂದಿಗೆ, ಭಾರತೀಯ ಸಮುದಾಯವು ಸಾಂಸ್ಕೃತಿಕ ರಾಯಭಾರಿಗಳಾಗಿ ಭಾರತೀಯ ಪ್ರವಾಸೋದ್ಯಮಕ್ಕೆ ಪ್ರಬಲ ವೇಗವರ್ಧಕವಾಗಿ ಕಾರ್ಯನಿರ್ವಹಿಸಬಹುದು.
***
(Release ID: 2012574)
Visitor Counter : 98
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam