ಸಂಪುಟ

ಗೋವಾ ರಾಜ್ಯ ವಿಧಾನಸಭಾ ಕ್ಷೇತ್ರಗಳಲ್ಲಿ ಪರಿಶಿಷ್ಟ ಪಂಗಡಗಳ ಪ್ರಾತಿನಿಧ್ಯದ ಮರು ಹೊಂದಾಣಿಕೆ ಮಸೂದೆ, 2024 ಅನ್ನು ಪರಿಚಯಿಸಲು ಸಂಪುಟದ ಅನುಮೋದನೆ


ಈ ಮಸೂದೆಯು ಗೋವಾದಲ್ಲಿ ಪರಿಶಿಷ್ಟ ಪಂಗಡಗಳ ಸಾಂವಿಧಾನಿಕ ಹಕ್ಕುಗಳ ರಕ್ಷಣೆಯನ್ನು ಖಾತ್ರಿಪಡಿಸುತ್ತದೆ

Posted On: 07 MAR 2024 8:32PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಗೋವಾ ರಾಜ್ಯ ವಿಧಾನಸಭಾ ಕ್ಷೇತ್ರಗಳಲ್ಲಿ ಪರಿಶಿಷ್ಟ ಪಂಗಡಗಳ ಪ್ರಾತಿನಿಧ್ಯದ ಮರು ಹೊಂದಾಣಿಕೆ ಮಸೂದೆ, 2024ನ್ನು ಸಂಸತ್ತಿನಲ್ಲಿ ಮಂಡಿಸುವ ಕಾನೂನು ಮತ್ತು ನ್ಯಾಯ ಸಚಿವಾಲಯದ ಪ್ರಸ್ತಾವನೆಗೆ ತನ್ನ ಅನುಮೋದನೆ ನೀಡಿದೆ .

ಗೋವಾ ರಾಜ್ಯದಲ್ಲಿ ಪರಿಶಿಷ್ಟ ಪಂಗಡಗಳ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವುದನ್ನು ಖಚಿತಪಡಿಸಿಕೊಳ್ಳಲು, ಸಂಸದೀಯ ಮತ್ತು ವಿಧಾನಸಭಾ ಕ್ಷೇತ್ರಗಳ ಡಿಲಿಮಿಟೇಶನ್ ಆದೇಶ, 2008 ರಲ್ಲಿ ತಿದ್ದುಪಡಿಗಳನ್ನು ಮಾಡಲು ಮತ್ತು ಗೋವಾ ರಾಜ್ಯದ ವಿಧಾನಸಭೆಯಲ್ಲಿ ಸ್ಥಾನಗಳನ್ನು ರಾಜ್ಯದ ಪರಿಶಿಷ್ಟ ಪಂಗಡಗಳಿಗೆ ಮರುಹೊಂದಿಸಲು ಚುನಾವಣಾ ಆಯೋಗಕ್ಕೆ ಅಧಿಕಾರ ನೀಡುವ ನಿಬಂಧನೆಗಳನ್ನು ಒದಗಿಸಲು ಕಾನೂನನ್ನು ಜಾರಿಗೆ ತರುವುದು ಕಡ್ಡಾಯವಾಗಿದೆ.

ಪ್ರಸ್ತಾವಿತ ಮಸೂದೆಯ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:-

(i) 2001 ರ ಜನಗಣತಿಯ ಪ್ರಕಟಣೆಯ ನಂತರ ಪರಿಶಿಷ್ಟ ಪಂಗಡಗಳೆಂದು ಘೋಷಿಸಲಾದ ಬುಡಕಟ್ಟು ಜನಾಂಗಗಳ ಜನಸಂಖ್ಯಾ ಅಂಕಿಅಂಶಗಳನ್ನು ಗಣನೆಗೆ ತೆಗೆದುಕೊಂಡ ನಂತರ ಗೋವಾ ರಾಜ್ಯದಲ್ಲಿ ಪರಿಶಿಷ್ಟ ಪಂಗಡಗಳ ಜನಸಂಖ್ಯೆಯನ್ನು ಕಂಡುಹಿಡಿಯಲು ಮತ್ತು ನಿರ್ಧರಿಸಲು ಇದು ಜನಗಣತಿ ಆಯುಕ್ತರಿಗೆ ಅಧಿಕಾರ ನೀಡುತ್ತದೆ. ಜನಗಣತಿ ಆಯುಕ್ತರು ಭಾರತದ ಗೆಜೆಟ್ ನಲ್ಲಿ ಖಚಿತಪಡಿಸಿದ ಮತ್ತು ನಿರ್ಧರಿಸಿದ ವೈವಿಧ್ಯಮಯ ಜನಸಂಖ್ಯಾ ಅಂಕಿಅಂಶಗಳನ್ನು ಸೂಚಿಸುತ್ತಾರೆ ಮತ್ತು ನಂತರ, ಅಂತಹ ಜನಸಂಖ್ಯಾ ಅಂಕಿಅಂಶಗಳನ್ನು ಅಂತಿಮ ಅಂಕಿಅಂಶಗಳೆಂದು ಪರಿಗಣಿಸಲಾಗುತ್ತದೆ ಮತ್ತು ಸಂವಿಧಾನದ 332 ನೇ ವಿಧಿಗಳಲ್ಲಿ ಒದಗಿಸಿರುವಂತೆ ಪರಿಶಿಷ್ಟ ಪಂಗಡಗಳಿಗೆ ಪ್ರಮಾಣಾನುಗುಣ ಪ್ರಾತಿನಿಧ್ಯವನ್ನು ನೀಡುವ ಉದ್ದೇಶಕ್ಕಾಗಿ ಈ ಹಿಂದೆ ಪ್ರಕಟವಾದ ಎಲ್ಲಾ ಅಂಕಿಅಂಶಗಳನ್ನು ಮೀರಿಸುತ್ತದೆ;

(ii) ಗೋವಾ ವಿಧಾನಸಭೆಯಲ್ಲಿ ಕ್ಷೇತ್ರಗಳನ್ನು ಮರು ಹೊಂದಾಣಿಕೆ ಮಾಡುವ ಮೂಲಕ ಗೋವಾ ವಿಧಾನಸಭೆಯಲ್ಲಿ ಪರಿಶಿಷ್ಟ ಪಂಗಡಗಳಿಗೆ ಸೂಕ್ತ ಪ್ರಾತಿನಿಧ್ಯವನ್ನು ನೀಡುವ ಉದ್ದೇಶಕ್ಕಾಗಿ ಸಂಸದೀಯ ಮತ್ತು ವಿಧಾನಸಭಾ ಕ್ಷೇತ್ರಗಳ ಡಿಲಿಮಿಟೇಶನ್ ಆದೇಶ, 2008 ರಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡಲು ಇದು ಚುನಾವಣಾ ಆಯೋಗಕ್ಕೆ ಅಧಿಕಾರ ನೀಡುತ್ತದೆ;

(iii) ಚುನಾವಣಾ ಆಯೋಗವು ಪರಿಶಿಷ್ಟ ಪಂಗಡಗಳ ಪರಿಷ್ಕೃತ ಜನಸಂಖ್ಯಾ ಅಂಕಿಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಮತ್ತು ಸಂವಿಧಾನದ ಅನುಚ್ಛೇದ 170 ಮತ್ತು 332 ಮತ್ತು ಡಿಲಿಮಿಟೇಶನ್ ಕಾಯ್ದೆ, 2002 ರ ಸೆಕ್ಷನ್ 8 ರ ನಿಬಂಧನೆಗಳಿಗೆ ಸಂಬಂಧಿಸಿದಂತೆ ವಿಧಾನಸಭಾ ಕ್ಷೇತ್ರವನ್ನು ಮರುಹೊಂದಿಸಬೇಕು;

(iv) ವಿಧಾನಸಭಾ ಕ್ಷೇತ್ರಗಳ ಮರು ಹೊಂದಾಣಿಕೆಯ ಉದ್ದೇಶಕ್ಕಾಗಿ, ಭಾರತದ ಚುನಾವಣಾ ಆಯೋಗವು ತನ್ನದೇ ಆದ ಕಾರ್ಯವಿಧಾನವನ್ನು ನಿರ್ಧರಿಸುತ್ತದೆ ಮತ್ತು ಅದು ಸಿವಿಲ್ ನ್ಯಾಯಾಲಯದ ಕೆಲವು ಅಧಿಕಾರಗಳನ್ನು ಹೊಂದಿರುತ್ತದೆ;

(v) ಡಿಲಿಮಿಟೇಶನ್ ಆದೇಶದಲ್ಲಿ ಮಾಡಲಾದ ತಿದ್ದುಪಡಿಗಳು ಮತ್ತು ಅದರ ಕಾರ್ಯಾಚರಣೆಯ ದಿನಾಂಕಗಳನ್ನು ಗೆಜೆಟ್ ನಲ್ಲಿ ಪ್ರಕಟಿಸಲು ಇದು ಭಾರತದ ಚುನಾವಣಾ ಆಯೋಗಕ್ಕೆ ಅಧಿಕಾರ ನೀಡುತ್ತದೆ. ತಿದ್ದುಪಡಿಗೊಂಡ ಡಿಲಿಮಿಟೇಶನ್ ಆದೇಶವು ವಿಸರ್ಜನೆಯಾಗುವವರೆಗೆ ಅಸ್ತಿತ್ವದಲ್ಲಿರುವ ವಿಧಾನಸಭೆಯ ರಚನೆಯ ಮೇಲೆ ಪರಿಣಾಮ ಬೀರುವುದಿಲ್ಲ;

(vi) ಉದ್ದೇಶಿತ ಮಸೂದೆಯು ಸದರಿ ಡಿಲಿಮಿಟೇಶನ್ ಆದೇಶದಲ್ಲಿನ ದೋಷಗಳನ್ನು ಅಗತ್ಯ ತಿದ್ದುಪಡಿ ಮಾಡಲು ಚುನಾವಣಾ ಆಯೋಗಕ್ಕೆ ಅಧಿಕಾರ ನೀಡುತ್ತದೆ.

****



(Release ID: 2012565) Visitor Counter : 45