ಪ್ರಧಾನ ಮಂತ್ರಿಯವರ ಕಛೇರಿ

ಮಾರಿಷಸ್‌ನ ಅಗಲೇಗಾ ದ್ವೀಪದಲ್ಲಿ ಹೊಸ ʻಏರ್ ಸ್ಟ್ರಿಪ್ʼ ಮತ್ತು ʻಜೆಟ್ಟಿʼಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮಾರಿಷಸ್ ಪ್ರಧಾನಿ ಜಂಟಿಯಾಗಿ ಉದ್ಘಾಟಿಸಿದರು


ಅಗಲೇಗಾ ದ್ವೀಪದಲ್ಲಿ ಆರು ಸಮುದಾಯ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು

"ಮಾರಿಷಸ್ ಭಾರತದ ಅಮೂಲ್ಯ ಸ್ನೇಹಿತ. ಇಂದು ಉದ್ಘಾಟಿಸಲಾಗುತ್ತಿರುವ ಯೋಜನೆಗಳು ನಮ್ಮ ದೇಶಗಳ ನಡುವಿನ ಪಾಲುದಾರಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ"

"ಮಾರಿಷಸ್ ನಮ್ಮ ʻನೆರೆಹೊರೆಯವರು ಮೊದಲುʼ ನೀತಿಯ ಪ್ರಮುಖ ಪಾಲುದಾರ"

"ಭಾರತವು ಸದಾ ತನ್ನ ಸ್ನೇಹಿತ ಮಾರಿಷಸ್‌ಗೆ ಮೊದಲ ಸ್ಪಂದನೆ ನೀಡಿದೆ"

"ಭಾರತ ಮತ್ತು ಮಾರಿಷಸ್ ಕಡಲ ಭದ್ರತೆಯ ಕ್ಷೇತ್ರದಲ್ಲಿ ನೈಸರ್ಗಿಕ ಪಾಲುದಾರರು"

"ನಮ್ಮ ʻಜನೌಷಧʼ ಉಪಕ್ರಮಕ್ಕೆ ಸೇರುವ ಮೊದಲ ದೇಶ ಮಾರಿಷಸ್. ಇದರೊಂದಿಗೆ, ಮಾರಿಷಸ್ ಜನರು ಉತ್ತಮ ಗುಣಮಟ್ಟದ ʻಮೇಡ್ ಇನ್ ಇಂಡಿಯಾʼ ಜೆನೆರಿಕ್ ಔಷಧಗಳ ಪ್ರಯೋಜನವನ್ನು ಪಡೆಯುತ್ತಾರೆ"

Posted On: 29 FEB 2024 2:13PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಮಾರಿಷಸ್ ಪ್ರಧಾನಿ ಗೌರವಾನ್ವಿತ ಶ್ರೀ ಪ್ರವಿಂದ್ ಜುಗ್ನೌತ್ ಅವರು ಇಂದು ಮಾರಿಷಸ್‌ನ ಅಗಲೇಗಾ ದ್ವೀಪದಲ್ಲಿ ಹೊಸ ʻಏರ್ ಸ್ಟ್ರಿಪ್ʼ ಮತ್ತು ʻಸೇಂಟ್ ಜೇಮ್ಸ್ ಜೆಟ್ಟಿʼ ಹಾಗೂ ಆರು ಸಮುದಾಯ ಅಭಿವೃದ್ಧಿ ಯೋಜನೆಗಳನ್ನು ಜಂಟಿಯಾಗಿ ಉದ್ಘಾಟಿಸಿದರು. ಈ ಯೋಜನೆಗಳ ಉದ್ಘಾಟನೆಯು ಭಾರತ ಮತ್ತು ಮಾರಿಷಸ್ ನಡುವಿನ ದೃಢವಾದ ಹಾಗೂ ದಶಕಗಳಷ್ಟು ಹಳೆಯ ಅಭಿವೃದ್ಧಿ ಪಾಲುದಾರಿಕೆಗೆ ಸಾಕ್ಷಿಯಾಗಿದೆ. ಜೊತೆಗೆ ಮಾರಿಷಸ್ ಮತ್ತು ಅಗಲೇಗಾ ನಡುವಿನ ಉತ್ತಮ ಸಂಪರ್ಕದ ಬೇಡಿಕೆಯನ್ನು ಪೂರೈಸುತ್ತದೆ, ಕಡಲ ಭದ್ರತೆಯನ್ನು ಬಲಪಡಿಸುತ್ತದೆ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. 2024ರ ಫೆಬ್ರವರಿ 12ರಂದು ಮಾರಿಷಸ್‌ನಲ್ಲಿ ಉಭಯ ನಾಯಕರು ʻಯುಪಿಐʼ ಮತ್ತು ʻರುಪೇ ಕಾರ್ಡ್ʼ ಸೇವೆಗಳಿಗೆ ಚಾಲನೆ ನೀಡಿದ ಬೆನ್ನಲ್ಲೇ ಈ ಯೋಜನೆಗಳ ಉದ್ಘಾಟನೆ ಮಹತ್ವ ಪಡೆದಿದೆ.

ಮಾರಿಷಸ್ ಪ್ರಧಾನಿ ಗೌರವಾನ್ವಿತ ಶ್ರೀ ಪ್ರವಿಂದ್ ಜುಗ್ನೌತ್ ಅವರು ಮಾತನಾಡಿ, “ಮಾರಿಷಸ್‌ನ ಅಗಲೇಗಾ ದ್ವೀಪದಲ್ಲಿ ಆರು ಸಮುದಾಯ ಅಭಿವೃದ್ಧಿ ಯೋಜನೆಗಳೊಂದಿಗೆ ಹೊಸ ʻಏರ್ ಸ್ಟ್ರಿಪ್ʼ ಮತ್ತು ʻಸೇಂಟ್ ಜೇಮ್ಸ್ ಜೆಟ್ಟಿʼಯನ್ನು ಜಂಟಿಯಾಗಿ ಉದ್ಘಾಟಿಸುವ ಮೂಲಕ ಭಾರತ ಮತ್ತು ಮಾರಿಷಸ್ ಇಂದು ಇತಿಹಾಸ ನಿರ್ಮಿಸುತ್ತಿವೆ,ʼʼ ಎಂದು ಹೇಳಿದರು. ಈ ಕಾರ್ಯಕ್ರಮವನ್ನು ಉಭಯ ರಾಷ್ಟ್ರಗಳ ನಡುವಿನ ಅನುಕರಣೀಯ ಪಾಲುದಾರಿಕೆಯ ಸಂಕೇತ ಎಂದು ಬಣ್ಣಿಸಿದ ಪ್ರಧಾನಿ ಜುಗ್ನೌತ್, ಮಾರಿಷಸ್-ಭಾರತ ಸಂಬಂಧಕ್ಕೆ ಹೊಸ ಆಯಾಮವನ್ನು ನೀಡಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು ಮತ್ತು ಇಂದು ಉಪಸ್ಥಿತರಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು. "ಅಗಲೇಗಾದಲ್ಲಿ ಹೊಸ ʻಏರ್ ಸ್ಟ್ರಿಪ್ʼ ಮತ್ತು ʻಜೆಟ್ಟಿʼ ಸೌಲಭ್ಯವನ್ನು ಸ್ಥಾಪಿಸುವುದರೊಂದಿಗೆ ಮತ್ತೊಂದು ಮಾರಿಷಸ್ ಕನಸನ್ನು ಈಡೇರಿಸಿದಂತಾಗಿದೆ," ಎಂದು ಪ್ರಧಾನಿ ಜುಗ್ನೌತ್ ಹೇಳಿದರು ಮತ್ತು ಯೋಜನೆಗೆ ಸಂಪೂರ್ಣವಾಗಿ ಹಣಕಾಸು ಒದಗಿಸಲು ಭಾರತದ ಕೊಡುಗೆಯನ್ನು ಶ್ಲಾಘಿಸಿದರು. ಭಾರತದಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ದ್ವೀಪ ರಾಷ್ಟ್ರಕ್ಕೆ ವಿಶೇಷ ಪರಿಗಣನೆ ನೀಡಿದ್ದಕ್ಕಾಗಿ ಮಾರಿಷಸ್ ಸರ್ಕಾರ ಮತ್ತು ಜನರ ಪರವಾಗಿ ಅವರು ಪ್ರಧಾನಿ ಮೋದಿ ಅವರಿಗೆ ತೀವ್ರ ಕೃತಜ್ಞತೆ ಸಲ್ಲಿಸಿದರು. ವಿಶ್ವದಾದ್ಯಂತ ಪ್ರಧಾನಿ ಮೋದಿಯವರ ಬಲವಾದ ನಾಯಕತ್ವ ಮತ್ತು ರಾಜನೀತಿಯನ್ನು ಶ್ಲಾಘಿಸಿದ ಅವರು, ಭಾರತೀಯ ವಲಸಿಗರು ಮೌಲ್ಯಗಳು, ಜ್ಞಾನ ಮತ್ತು ಯಶಸ್ಸಿನ ಜಾಗತಿಕ ಶಕ್ತಿ ಕೇಂದ್ರವಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ ಎಂದು ಒತ್ತಿ ಹೇಳಿದರು. ಭಾರತದ ʻಔಷಧ ಮತ್ತು ವೈದ್ಯಕೀಯ ಉಪಕರಣಗಳ ಮಂಡಳಿʼಯಿಂದ ಸುಮಾರು 250 ಉತ್ತಮ ಗುಣಮಟ್ಟದ ಔಷಧಗಳನ್ನು ಪೂರೈಸಲು ಮಾಡಲು ಅನುವು ಮಾಡಿಕೊಡುವ 'ಜನೌಷಧ ಯೋಜನೆಯನ್ನು' ಅಳವಡಿಸಿಕೊಂಡ ಮೊದಲ ರಾಷ್ಟ್ರ ಮಾರಿಷಸ್ ಆಗಿದ್ದು, ಆ ಮೂಲಕ ಮಾರಿಷಸ್ ಜನರಿಗೆ ದೊಡ್ಡ ಪ್ರಮಾಣದಲ್ಲಿ ಪ್ರಯೋಜನವನ್ನು ನೀಡುತ್ತದೆ. ಜೊತೆಗೆ, ಉಭಯ ದೇಶಗಳ ನಡುವಿನ ಪಾಲುದಾರಿಕೆಗೆ ಮತ್ತಷ್ಟು ವೇಗವನ್ನು ನೀಡುತ್ತದೆ ಎಂದು ಅವರು ಮಾಹಿತಿ ನೀಡಿದರು. ಸಾಗರ ಕಣ್ಗಾವಲು ಮತ್ತು ಭದ್ರತೆಯಲ್ಲಿ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸುವ ಮತ್ತು ಅಭಿವೃದ್ಧಿ ಉದ್ದೇಶಗಳನ್ನು ಪೂರೈಸುವ ಇಂತಹ ಪ್ರಮುಖ ಪರಿವರ್ತನಕಾರಿ ಯೋಜನೆಗಳನ್ನು ಸಾಕಾರಗೊಳಿಸಲು ಮಾರಿಷಸ್‌ಗೆ ಸಹಾಯ ಮಾಡಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸುವ ಮೂಲಕ ಪ್ರಧಾನಮಂತ್ರಿ ಜುಗ್ನೌತ್ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ʻʻಕಳೆದ 6 ತಿಂಗಳಲ್ಲಿ ಮಾರಿಷಸ್ ಪ್ರಧಾನಿ ಗೌರವಾನ್ವಿತ ಶ್ರೀ ಪ್ರವಿಂದ್ ಜುಗ್ನೌತ್ ಅವರೊಂದಿಗೆ ಇದು ತಮ್ಮ 5ನೇ ಸಭೆಯಾಗಿದ್ದು, ಇದು ಭಾರತ ಮತ್ತು ಮಾರಿಷಸ್ ನಡುವಿನ ರೋಮಾಂಚಕ, ಬಲವಾದ ಮತ್ತು ಅನನ್ಯ ಪಾಲುದಾರಿಕೆಗೆ ಪುರಾವೆಯಾಗಿದೆ,ʼʼ ಎಂದರು. ಮಾರಿಷಸ್ ಭಾರತದ 'ನೆರೆಹೊರೆಯವರು ಮೊದಲು ನೀತಿʼಯ ಪ್ರಮುಖ ಪಾಲುದಾರ ಮತ್ತು ʻವಿಷನ್ ಸಾಗರ್ʼ ಅಡಿಯಲ್ಲಿ ವಿಶೇಷ ಪಾಲುದಾರ ಎಂದು ಅವರು ಹೇಳಿದರು. "ಜಾಗತಿಕ ದಕ್ಷಿಣದ ಸದಸ್ಯರಾಗಿ, ನಾವು ಸಮಾನ ಆದ್ಯತೆಗಳನ್ನು ಹೊಂದಿದ್ದೇವೆ ಮತ್ತು ಕಳೆದ 10 ವರ್ಷಗಳಲ್ಲಿ ಉಭಯ ದೇಶಗಳ ನಡುವಿನ ಸಂಬಂಧವು ಅಭೂತಪೂರ್ವ ವೇಗವನ್ನು ಕಂಡಿದೆ. ಪರಸ್ಪರ ಸಹಕಾರದಲ್ಲಿ ಹೊಸ ಎತ್ತರವನ್ನು ಸಾಧಿಸಲಾಗಿದೆ," ಎಂದು ಪ್ರಧಾನಿ ಹೇಳಿದರು. ಹಳೆಯ ಭಾಷೆ ಮತ್ತು ಸಾಂಸ್ಕೃತಿಕ ಬಾಂಧವ್ಯದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಈ ಸಂಬಂಧಕ್ಕೆ ಆಧುನಿಕ ಡಿಜಿಟಲ್ ಸಂಪರ್ಕವನ್ನು ಒದಗಿಸಿರುವ ʻಯುಪಿಐʼ ಮತ್ತು ʻರುಪೇ ಕಾರ್ಡ್ʼಗಳನ್ನು ಸ್ಮರಿಸಿದರು.

ಅಭಿವೃದ್ಧಿ ಪಾಲುದಾರಿಕೆಗಳು ಉಭಯ ರಾಷ್ಟ್ರಗಳ ನಡುವಿನ ರಾಜಕೀಯ ಪಾಲುದಾರಿಕೆಯ ಅಡಿಪಾಯ ಸ್ತಂಭಗಳಾಗಿವೆ ಮತ್ತು ಭಾರತ ನೀಡಿದ ಅಭಿವೃದ್ಧಿ ಕೊಡುಗೆಗಳು ಮಾರಿಷಸ್‌ನ ಆದ್ಯತೆಗಳನ್ನು ಆಧರಿಸಿವೆ, ಅದು ʻಇಇಜಡ್ʼಗೆ ಭದ್ರತೆ ಇರಬಹುದು ಅಥವಾ ಆರೋಗ್ಯ ಭದ್ರತೆಯಾಗಿರಬಹುದು ಎಂದು ಪ್ರಧಾನಿ ಒತ್ತಿ ಹೇಳಿದರು. "ಭಾರತವು ಸದಾ ಮಾರಿಷಸ್‌ನ ಅಗತ್ಯಗಳನ್ನು ಗೌರವಿಸಿದೆ ಮತ್ತು ಮೊದಲ ಸ್ಪಂದನೆಯೊಂದಿಗೆ ಕಾರ್ಯನಿರ್ವಹಿಸಿದೆ," ಎಂದು ಪ್ರಧಾನಿ ಹೇಳಿದರು, ಕೋವಿಡ್ ಸಾಂಕ್ರಾಮಿಕವಾಗಿರಲಿ ಅಥವಾ ತೈಲ ಸೋರಿಕೆಯಾಗಿರಲಿ ದ್ವೀಪ ರಾಷ್ಟ್ರಕ್ಕೆ ಭಾರತದ ದೀರ್ಘಕಾಲದ ಬೆಂಬಲವನ್ನು ಎತ್ತಿ ತೋರಿದರು. ಮಾರಿಷಸ್ ಜನತೆಯ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವುದು ಭಾರತದ ಪ್ರಮುಖ ಗುರಿಯಾಗಿದೆ ಎಂದು ಅವರು ಹೇಳಿದರು. ಕಳೆದ 10 ವರ್ಷಗಳಲ್ಲಿ, ಭಾರತವು ಮಾರಿಷಸ್ ಜನರಿಗೆ 1,000 ದಶಲಕ್ಷ ಅಮೆರಿಕನ್‌ ಡಾಲರ್‌ ಸಾಲವನ್ನು ಒದಗಿಸಿದೆ. 400 ದಶಲಕ್ಷ ಅಮೆರಿಕನ್‌ ಡಾಲರ್ ಮೌಲ್ಯದ ಸಹಾಯವನ್ನು ನೀಡಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಮಾರಿಷಸ್‌ನಲ್ಲಿ ಮೆಟ್ರೋ ರೈಲು ಮಾರ್ಗಗಳು, ಸಮುದಾಯ ಅಭಿವೃದ್ಧಿ ಯೋಜನೆಗಳು, ಸಾಮಾಜಿಕ ವಸತಿ, ʻಇಎನ್‌ಟಿʼ ಆಸ್ಪತ್ರೆ, ನಾಗರಿಕ ಸೇವಾ ಕಾಲೇಜು ಮತ್ತು ಕ್ರೀಡಾ ಸಂಕೀರ್ಣಗಳ ಮೂಲಸೌಕರ್ಯಗಳ ಅಭಿವೃದ್ಧಿಗೆ ಕೊಡುಗೆ ನೀಡಲು ಭಾರತ ಅದೃಷ್ಟಶಾಲಿಯಾಗಿದೆ ಎಂದು ಅವರು ಹೇಳಿದರು.

2015ರಲ್ಲಿ ತಾವು ಅಗಲೇಗಾ ಜನತೆಗೆ ನೀಡಿದ ಭರವಸೆಯನ್ನು ಈಡೇರಿಸಲು ಸಾಧ್ಯವಾಗಿದೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು. "ಈ ದಿನಗಳಲ್ಲಿ, ಇದನ್ನು ಭಾರತದಲ್ಲಿ ʻಮೋದಿ ಕಿ ಗ್ಯಾರಂಟಿʼ ಎಂದು ಕರೆಯಲಾಗುತ್ತಿದೆ. ಇಂದು ಜಂಟಿಯಾಗಿ ಉದ್ಘಾಟಿಸಲಾದ ಈ ಸೌಲಭ್ಯಗಳು ಜೀವನವನ್ನು ಸುಲಭಗೊಳಿಸುತ್ತವೆ", ಎಂದು ಪ್ರಧಾನಿ ಹೇಳಿದರು. ಇದು ಮಾರಿಷಸ್‌ನ ಉತ್ತರ ಮತ್ತು ದಕ್ಷಿಣ ಭಾಗಗಳ ನಡುವಿನ ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ಮುಖ್ಯ ಭೂಭಾಗದೊಂದಿಗೆ ಆಡಳಿತಾತ್ಮಕ ಸಂಪರ್ಕವನ್ನು ಸುಧಾರಿಸುತ್ತದೆ. ವೈದ್ಯಕೀಯ ಸ್ಥಳಾಂತರ ಮತ್ತು ಶಾಲಾ ಮಕ್ಕಳ ಸಾರಿಗೆ ಸುಧಾರಿಸುತ್ತದೆ ಎಂದು ಅವರು ಹೇಳಿದರು.

ಎರಡು ಆರ್ಥಿಕತೆಗಳ ಮೇಲೆ ಪರಿಣಾಮ ಬೀರುವ ಹಿಂದೂ ಮಹಾಸಾಗರ ಪ್ರದೇಶದ ಸಾಂಪ್ರದಾಯಿಕ ಮತ್ತು ಸಾಂಪ್ರದಾಯಿಕವಲ್ಲದ ಸವಾಲುಗಳನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಈ ಸವಾಲುಗಳನ್ನು ಎದುರಿಸಲು ಭಾರತ ಮತ್ತು ಮಾರಿಷಸ್ ಕಡಲ ಭದ್ರತೆಯಲ್ಲಿ ನೈಸರ್ಗಿಕ ಪಾಲುದಾರರು ಎಂದು ಹೇಳಿದರು. "ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭದ್ರತೆ, ಸಮೃದ್ಧಿ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ನಾವು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇವೆ. ವಿಶೇಷ ಆರ್ಥಿಕ ವಲಯದ ಮೇಲ್ವಿಚಾರಣೆ, ಜಂಟಿ ಗಸ್ತು, ಜಲವಿಜ್ಞಾನ ಮತ್ತು ಮಾನವೀಯ ನೆರವು ಮತ್ತು ವಿಪತ್ತು ಪರಿಹಾರದಂತಹ ಎಲ್ಲ ಕ್ಷೇತ್ರಗಳಲ್ಲಿ ನಾವು ಸಹಕಾರ ನೀಡುತ್ತಿದ್ದೇವೆ", ಎಂದು ಪ್ರಧಾನಿ ಹೇಳಿದರು. ಅಗಲೇಗಾದಲ್ಲಿ ಇಂದು ʻಏರ್ ಸ್ಟ್ರಿಪ್ʼ ಮತ್ತು ʻಜೆಟ್ಟಿʼಯ ಉದ್ಘಾಟನೆಯು ಎರಡೂ ದೇಶಗಳ ನಡುವಿನ ಸಹಕಾರವನ್ನು ಮತ್ತಷ್ಟು ಹೆಚ್ಚಿಸುತ್ತದೆ ಮತ್ತು ಮಾರಿಷಸ್‌ನ ನೀಲಿ ಆರ್ಥಿಕತೆಯನ್ನು ಬಲಪಡಿಸುತ್ತದೆ ಎಂದು ಅವರು ಒತ್ತಿ ಹೇಳಿದರು.

ಮಾರಿಷಸ್‌ನಲ್ಲಿ ʻಜನೌಷಧʼ ಕೇಂದ್ರಗಳನ್ನು ಸ್ಥಾಪಿಸುವ ಪ್ರಧಾನಿ ಜುಗ್ನೌತ್ ಅವರ ನಿರ್ಧಾರವನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ಇದರೊಂದಿಗೆ ಮಾರಿಷಸ್ ಭಾರತದ ʻಜನೌಷಧʼ ಉಪಕ್ರಮಕ್ಕೆ ಸೇರಿದ ಮೊದಲ ದೇಶವಾಗಿದೆ, ಇದು ಉತ್ತಮ ಗುಣಮಟ್ಟದ ʻಮೇಡ್ ಇನ್ ಇಂಡಿಯಾʼ ಜೆನೆರಿಕ್ ಔಷಧಗಳನ್ನು ಒದಗಿಸುವ ಮೂಲಕ ಮಾರಿಷಸ್ ಜನರಿಗೆ ಪ್ರಯೋಜನವನ್ನು ನೀಡುತ್ತದೆ ಎಂದರು.

ಭಾಷಣವನ್ನು ಮುಕ್ತಾಯಗೊಳಿಸುವ ಮುನ್ನ ಪ್ರಧಾನಿ ಮೋದಿ ಅವರು, ಮಾರಿಷಸ್‌ನ ಪ್ರಧಾನಮಂತ್ರಿಗಳು, ಅವರ ದೂರದೃಷ್ಟಿ ಮತ್ತು ಕ್ರಿಯಾತ್ಮಕ ನಾಯಕತ್ವವನ್ನು ಅಭಿನಂದಿಸಿದರು. ಮುಂಬರುವ ದಿನಗಳಲ್ಲಿ ಭಾರತ ಮತ್ತು ಮಾರಿಷಸ್ ಸಂಬಂಧಗಳು ಹೊಸ ಎತ್ತರವನ್ನು ತಲುಪಲಿವೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

***



(Release ID: 2010188) Visitor Counter : 49