ಪ್ರಧಾನ ಮಂತ್ರಿಯವರ ಕಛೇರಿ

​​​​​​​ನವದೆಹಲಿಯಲ್ಲಿ ಭಾರತ್ ಟೆಕ್ಸ್ 2024 ಉದ್ಘಾಟಿಸಿದ ಪ್ರಧಾನಿ


“ಜವಳಿ ಉದ್ಯಮದಲ್ಲಿ ಭಾರತದ ಅದ್ವಿತೀಯ ಸಾಮರ್ಥ್ಯಗಳನ್ನು ಪ್ರದರ್ಶಿಸುವ ಅತ್ಯುತ್ತಮ ವೇದಿಕೆ ಭಾರತ್ ಟೆಕ್ಸ್ 2024 ಆಗಿದೆ’’

“ಭಾರತ್ ಟೆಕ್ಸ್ ನ ಎಳೆ ಇಂದಿನ ಪ್ರತಿಭೆಯನ್ನು ಭಾರತದ ವೈಭವಯುತ ಐತಿಹಾಸಿಕ ಪರಂಪರೆಯೊಂದಿಗೆ, ತಂತ್ರಜ್ಞಾನದೊಂದಿಗೆ ಬೆಸೆಯಲಿದೆ ಮತ್ತು  ಅದು ಸ್ಟೈಲ್, ಸುಸ್ಥಿರತೆ, ಪ್ರಮಾಣ ಮತ್ತು ಕೌಶಲ್ಯವನ್ನು ಒಂದೆಡೆ ಸೇರಿಸುವ ಎಳೆಯಾಗಿದೆ’’

“ನಾವು ಪರಂಪರೆ, ತಂತ್ರಜ್ಞಾನ, ಪ್ರತಿಭೆ ಮತ್ತು ತರಬೇತಿಗೆ ಒತ್ತು ನೀಡುತ್ತಿದ್ದೇವೆ’’

“ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದಲ್ಲಿ ಜವಳಿ ಉದ್ಯಮದ ಕೊಡುಗೆಯನ್ನು ಮತ್ತಷ್ಟು ಹೆಚ್ಚಿಸುವ ವಿಸ್ತೃತ ವ್ಯಾಪ್ತಿಯಲ್ಲಿ ನಾವು ಕಾರ್ಯನಿರ್ವಹಿಸುತ್ತಿದ್ದೇವೆ’’

“ಜವಳಿ ಮತ್ತು ಖಾದಿ ಭಾರತ ಮಹಿಳೆಯರನ್ನು ಸಬಲೀಕರಣಗೊಳಿಸಿದೆ’’

“ಇಂದು ತಂತ್ರಜ್ಞಾನ ಮತ್ತು ಆಧುನೀಕರಣವು ಅನನ್ಯತೆ ಮತ್ತು ನಿಖರತೆಯೊಂದಿಗೆ ಅಸ್ಥಿತ್ವದಲ್ಲಿದೆ’’

“ಕಸ್ತೂರಿ ಕಾಟನ್ ಭಾರತಕ್ಕೆ ತನ್ನದೇ ಆದ ಅಸ್ಮಿತೆಯನ್ನು ಸೃಷ್ಟಿಸುವಲ್ಲಿ ಮಹತ್ವದ ಹಜ್ಜೆಯಾಗಲಿದೆ’’

“ಪಿಎಂ-ಮಿತ್ರಾ ಪಾರ್ಕ್‌ಗಳಲ್ಲಿ, ಪ್ಲಗ್ ಮತ್ತು ಪ್ಲೇ ಸೌಲಭ್ಯಗಳೊಂದಿಗೆ ಆಧುನಿಕ ಮೂಲಸೌಕರ್ಯಗಳು ಲಭ್ಯವಿರುವ ಒಂದೇ ಸ್ಥಳದಲ್ಲಿ ಸಂಪೂರ್ಣ ಮೌಲ್ಯ ಸರಣಿ ಪೂರಕ ವ್ಯವಸ್ಥೆಯ ಸ್ಥಾಪನೆಗೆ ಸರ್ಕಾರ ಶ್ರಮಿಸುತ್ತದೆ"

“ದೇಶದಲ್ಲಿ ಇಂದು ‘ವೋಕಲ್ ಫಾರ್ ಲೋಕಲ್ ಮತ್ತು ಲೋಕಲ್ ಟು ಗ್ಲೋಬಲ್’ ಜನಾಂದೋಲನ ನಡೆಯುತ್ತಿದೆ’’

Posted On: 26 FEB 2024 12:57PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತ್ ಮಂಟಪದಲ್ಲಿ ದೇಶದಲ್ಲಿ ಆಯೋಜಿಸಿರುವ  ಅತಿದೊಡ್ಡ ಜಾಗತಿಕ ಜವಳಿ ಮೇಳ ಎಂದು ಹೆಸರಾಗಿರುವ ಭಾರತ್ ಟೆಕ್ಸ್ 2024 ಅನ್ನು ಉದ್ಘಾಟಿಸಿದರು. ಮೇಳದಲ್ಲಿ ಪ್ರದರ್ಶಿಸಿರುವ ಮಳಿಗೆಗಳಲ್ಲಿ ಓಡಾಡಿದ ಪ್ರಧಾನಿ ಅವರು ಅಲ್ಲಿನ ವಸ್ತುಗಳನ್ನು ವೀಕ್ಷಿಸಿದರು.  

ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಭಾರತ್ ಟೆಕ್ಸ್ 2024ಗೆ ಎಲ್ಲರನ್ನೂ ಸ್ವಾಗತಿಸಿದರು ಮತ್ತು ಇಂದಿನ ಕಾರ್ಯಕ್ರಮ ಅತ್ಯಂತ ವಿಶೇಷವಾಗಿದೆ ಏಕೆಂದರೆ ಇದು ಭಾರತದ ಎರಡು ಅತಿದೊಡ್ಡ ವಸ್ತುಪ್ರದರ್ಶನ ಕೇಂದ್ರಗಳೆಂದು ಹೆಸರಾಗಿರುವ ಭಾರತ ಮಂಟಪಂ ಮತ್ತು ಯಶೋಭೂಮಿಯನ್ನು ನಡೆಯುತ್ತಿದೆ ಎಂದರು. ಸುಮಾರು 100 ದೇಶಗಳ 3000 ಕ್ಕೂ ಅಧಿಕ ಪ್ರದರ್ಶಕರು ಮತ್ತು ವ್ಯಾಪಾರಿಗಳ ಸಂಘದ ಕಾರ್ಯವನ್ನು ಅವರು ಶ್ಲಾಘಿಸಿದರು ಮತ್ತು ಸುಮಾರು 40,000 ಮಂದಿ ಭೇಟಿಗೆ ಭಾರತ್ ಟೆಕ್ಸ್ ವೇದಿಕೆಯನ್ನು ಒದಗಿಸುತ್ತದೆ ಎಂದು ಅವರು ಹೇಳಿದರು

ಇಂದಿನ ಕಾರ್ಯಕ್ರಮ ಅನೇಕ ಆಯಾಮಗಳನ್ನು ಒಳಗೊಂಡಿದೆ ಎಂದ ಪ್ರಧಾನಿ “ಭಾರತ್ ಟೆಕ್ಸ್‌ನ ಎಳೆಯು ಭಾರತೀಯ ಸಂಪ್ರದಾಯದ ಭವ್ಯ ಇತಿಹಾಸವನ್ನು ಇಂದಿನ ಪ್ರತಿಭೆಯೊಂದಿಗೆ ಸಂಪರ್ಕಿಸುತ್ತದೆ; ಸಂಪ್ರದಾಯಗಳೊಂದಿಗೆ ತಂತ್ರಜ್ಞಾನ ಮತ್ತು ಸ್ಡೈಲ್/ಸುಸ್ಥಿರತೆ/ ಪ್ರಮಾಣ/ ಕೌಶಲ್ಯವನ್ನು ಒಗ್ಗೂಡಿಸುವ ಒಂದು ಎಳೆಯಾಗಿದೆ ಎಂದರು. ಭಾರತದಾದ್ಯಂತದ ಅಸಂಖ್ಯಾತ ಜವಳಿ ಸಂಪ್ರದಾಯಗಳನ್ನು ಒಳಗೊಂಡಿರುವ ಏಕ್ ಭಾರತ್ ಶ್ರೇಷ್ಠ ಭಾರತಕ್ಕೆ ಉತ್ತಮ ಉದಾಹರಣೆಯಾಗಿ ತಾವು ನೋಡುವುದಾಗಿ ಪ್ರಧಾನಿ ಹೇಳಿದರು. ಭಾರತದ ಜವಳಿ ಸಂಪ್ರದಾಯದ ಆಳ, ದೀರ್ಘಾಯುಷ್ಯ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸಲು ಇದು ವೇದಿಕೆಯಾಗಿದೆ ಎಂದು ಪ್ರದರ್ಶನವನ್ನು ಶ್ಲಾಘಿಸಿದರು.

ಜವಳಿ ಮೌಲ್ಯ ಸರಣಿಯಲ್ಲಿ ಹಲವು ಪಾಲುದಾರರ ಉಪಸ್ಥಿತಿಯನ್ನು ಗಮನಿಸಿದ ಪ್ರಧಾನಿ ಅವರು, ಭಾರತದ ಜವಳಿ ಕ್ಷೇತ್ರವನ್ನು ಅರ್ಥಮಾಡಿಕೊಳ್ಳುವ ಜೊತೆಗೆ ಸವಾಲುಗಳು ಮತ್ತು ಆಶೋತ್ತರಗಳ ಬಗ್ಗೆ ಅರಿವು ಮೂಡಿಸುವ ಅವರ ಬುದ್ಧಿಶಕ್ತಿಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಮೌಲ್ಯ ಸರಣಿಗೆ ನಿರ್ಣಾಯಕರಾಗಿರುವ ನೇಕಾರರ ಉಪಸ್ಥಿತಿ ಮತ್ತು ತಳಮಟ್ಟದಿಂದ ಅವರ ಪೀಳಿಗೆಯ ಅನುಭವವನ್ನು ಅವರು ಗಮನಿಸಿದರು. ಅವರತ್ತ ಭಾಷಣವನ್ನು ಬದಲಿಸಿದ ಪ್ರಧಾನಿ, ವಿಕಸಿತ ಭಾರತ ಮತ್ತು ಅದರ ನಾಲ್ಕು ಮುಖ್ಯ ಸ್ತಂಭಗಳ ಸಂಕಲ್ಪವನ್ನು ಒತ್ತಿ ಹೇಳಿದರು ಮತ್ತು ಭಾರತದ ಜವಳಿ ಕ್ಷೇತ್ರವು ಬಡವರು, ಯುವಕರು, ರೈತರು ಮತ್ತು ಮಹಿಳೆಯರು ಪ್ರತಿಯೊಬ್ಬರಿಗೂ ಸಂಪರ್ಕ ಹೊಂದಿದೆ ಎಂಬುದನ್ನು ಎತ್ತಿ ತೋರಿಸಿದರು. ಆದ್ದರಿಂದ, ಭಾರತ್ ಟೆಕ್ಸ್ 2024 ರಂತಹ ಕಾರ್ಯಕ್ರಮದ ಮಹತ್ವವು ಬೆಳೆಯುತ್ತದೆ ಎಂದು ಪ್ರಧಾನಿ ಹೇಳಿದರು.

ವಿಕಸಿತ ಭಾರತದ ಪಯಣದಲ್ಲಿ ಜವಳಿ ಕ್ಷೇತ್ರದ ಪಾತ್ರವನ್ನು ವಿಸ್ತರಿಸಲು ಸರ್ಕಾರವು ಯಾವ ಉದ್ದೇಶವನ್ನು ಹೊಂದಿದೆ ಎಂಬುದನ್ನು ಪ್ರಧಾನಿ ವಿವರಿಸಿದರು. “ನಾವು ಸಂಪ್ರದಾಯ, ತಂತ್ರಜ್ಞಾನ, ಪ್ರತಿಭೆ ಮತ್ತು ತರಬೇತಿಯ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುತ್ತಿದ್ದೇವೆ" ಎಂದು ಅವರು ಹೇಳಿದರು. ಸಮಕಾಲೀನ ಪ್ರಪಂಚದ ಬೇಡಿಕೆಗಳಿಗೆ ಸಾಂಪ್ರದಾಯಿಕ ವಿನ್ಯಾಸಗಳನ್ನು ನವೀಕರಿಸಲು ಒತ್ತು ನೀಡಲಾಗಿದೆ ಎಂದು ಅವರು ತಿಳಿಸಿದರು. ಅವರು ಐದು ‘ಎಫ್‌’ಗಳ ಪರಿಕಲ್ಪನೆಯನ್ನು ಪುನರುಚ್ಚರಿಸಿದರು ಅಂದರೆ- ಫಾರ್ಮ್‌ನಿಂದ ಫೈಬರ್, ಫೈಬರ್‌ನಿಂದ ಫ್ಯಾಕ್ಟರಿ, ಫ್ಯಾಕ್ಟರಿಯಿಂದ ಫ್ಯಾಶನ್, ಫ್ಯಾಶನ್ ಟು ಫಾರಿನ್ ಇದು ಮೌಲ್ಯ ಸರಣಿಯ ಎಲ್ಲಾ ಅಂಶಗಳನ್ನು ಒಂದೆಡೆ ಸಂಧಿಸುತ್ತದೆ. ಎಂಎಸ್ ಎಂಇ ವಲಯಕ್ಕೆ ಸಹಾಯ ಮಾಡುವ ಸಲುವಾಗಿ, ಗಾತ್ರದಲ್ಲಿ ಬೆಳವಣಿಗೆಯ ನಂತರವೂ ನಿರಂತರ ಪ್ರಯೋಜನಗಳನ್ನು ಖಚಿತಪಡಿಸಿಕೊಳ್ಳಲು ಎಂಎಸ್ ಎಂಇ ಯ ವ್ಯಾಖ್ಯಾನದಲ್ಲಿ ಬದಲಾವಣೆಯನ್ನು ಪ್ರಧಾನಿ ಪ್ರಸ್ತಾಪಿಸಿದರು. ನೇರ ಮಾರಾಟ, ಪ್ರದರ್ಶನಗಳು ಮತ್ತು ಆನ್‌ಲೈನ್ ಪೋರ್ಟಲ್‌ಗಳು ಕುಶಲಕರ್ಮಿಗಳು ಮತ್ತು ಮಾರುಕಟ್ಟೆಯ ನಡುವಿನ ಅಂತರವನ್ನು ತಗ್ಗಿಸಿರುವ ಕುರಿತು ಅವರು ಮಾತನಾಡಿದರು.

ವಿವಿಧ ರಾಜ್ಯಗಳಲ್ಲಿ ಏಳು ಹೊಸ ಪಿಎಂ ಮಿತ್ರಾ ಪಾರ್ಕ್‌ಗಳನ್ನು ಸ್ಥಾಪಿಸುವ ಸರ್ಕಾರದ ವಿಸ್ತರಣೆಯ ಯೋಜನೆಗಳ ಮೇಲೆ ಬೆಳಕು ಚೆಲ್ಲಿದ ಪ್ರಧಾನಿ ಅವರು, ಇಡೀ ಜವಳಿ ಕ್ಷೇತ್ರಕ್ಕೆ ಅವಕಾಶಗಳ ಸೃಷ್ಟಿಗೆ ಒತ್ತು ನೀಡಿದಲಾಗಿದೆ ಎಂದರು. ”ಸರ್ಕಾರವು ಸಂಪೂರ್ಣ ಮೌಲ್ಯ ಸರಣಿ ಪೂರಕ ವ್ಯವಸ್ಥೆಯನ್ನು ಒಂದೇ ಸ್ಥಳದಲ್ಲಿ ಸ್ಥಾಪಿಸಲು ಶ್ರಮಿಸುತ್ತದೆ, ಅಲ್ಲಿ ಪ್ಲಗ್ ಮತ್ತು ಪ್ಲೇ ಸೌಲಭ್ಯಗಳೊಂದಿಗೆ ಆಧುನಿಕ ಮೂಲಸೌಕರ್ಯಗಳು ಲಭ್ಯವಿರುತ್ತದೆ’’ ಎಂದು ಪ್ರಧಾನಮಂತ್ರಿ ಹೇಳಿದರು. ಇದು ಪ್ರಮಾಣ ಮತ್ತು ಕಾರ್ಯಾಚರಣೆಯನ್ನು ಸುಧಾರಿಸುವುದಲ್ಲದೆ ಸಾಗಾಣೆ ವೆಚ್ಚವನ್ನು ತಗ್ಗಿಸುತ್ತದೆ ಎಂದು ಅವರು ಹೇಳಿದರು.

ಜವಳಿ ವಲಯದಲ್ಲಿ ಉದ್ಯೋಗ ಸೃಷ್ಟಿಯ ಸಂಭವನೀಯತೆ ಮತ್ತು ಗ್ರಾಮೀಣ ಜನರು ಮತ್ತು ಮಹಿಳೆಯರು ಪಾಲ್ಗೊಳ್ಳುವಿಕೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, 10 ಜವಳಿ ಸಿದ್ಧಉಡುಪು ಸಿದ್ಧಪಡಿಸುವವರಲ್ಲಿ 7 ಮಂದಿ ಮಹಿಳೆಯರೇ ಇದ್ದಾರೆ, ಕೈಮಗದಲ್ಲಿ ಆ ಸಂಖ್ಯೆ ಇನ್ನೂ ಹೆಚ್ಚು ಎಂದರು. ಕಳೆದ 10 ವರ್ಷಗಳಲ್ಲಿ ಕೈಗೊಂಡ ಕ್ರಮಗಳಿಂದಾಗಿ ಖಾದಿ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯ ಪ್ರಬಲ ಮಾಧ್ಯಮವಾಗಿ ಹೊರಹೊಮ್ಮಿದೆ ಎಂದರು. ಅಂತೆಯೇ, ಜವಳಿ ವಲಯದಲ್ಲಿ ಕಳೆದ ಒಂದು ದಶಕದಲ್ಲಿ ಕೈಗೊಂಡಿರುವ ಕಲ್ಯಾಣ ಯೋಜನೆಗಳು ಮತ್ತು ಮೂಲಸೌಕರ್ಯ ವೃದ್ಧಿಯಿಂದ ಸಾಕಷ್ಟು ಅನುಕೂಲವಾಗಿದೆ ಎಂದು ಹೇಳಿದರು.

ಹತ್ತಿ, ಸೆಣಬು ಮತ್ತು ರೇಷ್ಮೆ ಉತ್ಪಾದಕರಾಗಿ ಭಾರತದ ಬೆಳೆಯುತ್ತಿರುವ ಬಗೆಯನ್ನು ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸರ್ಕಾರವು ಹತ್ತಿ ರೈತರನ್ನು ಬೆಂಬಲಿಸುತ್ತಿದೆ ಮತ್ತು ಅವರಿಂದ ಹತ್ತಿಯನ್ನು ಖರೀದಿಸುತ್ತಿದೆ ಎಂದು ಹೇಳಿದರು. ಸರ್ಕಾರವು ಆರಂಭಿಸಿರುವ ಕಸ್ತೂರಿ ಹತ್ತಿಯು ಜಾಗತಿಕವಾಗಿ ಭಾರತದ ಬ್ರಾಂಡ್ ಮೌಲ್ಯವನ್ನು ಸೃಷ್ಟಿಸುವಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು. ಸೆಣಬು ಮತ್ತು ರೇಷ್ಮೆ ವಲಯದ ಕ್ರಮಗಳನ್ನೂ ಪ್ರಧಾನಿ ಪ್ರಸ್ತಾಪಿಸಿದರು. ಅವರು ತಾಂತ್ರಿಕ ಜವಳಿಗಳಂತಹ ಹೊಸ ಕ್ಷೇತ್ರಗಳ ಕುರಿತು ಮಾತನಾಡಿದರು ಮತ್ತು ರಾಷ್ಟ್ರೀಯ ತಾಂತ್ರಿಕ ಜವಳಿ ಮಿಷನ್ ಮತ್ತು ಈ ವಲಯದಲ್ಲಿನ ನವೋದ್ಯಮಗಳ ಬಗ್ಗೆಯೂ ತಿಳಿಸಿದರು.

ಒಂದೆಡೆ ತಂತ್ರಜ್ಞಾನ ಮತ್ತು ಯಾಂತ್ರೀಕರಣದ ಅಗತ್ಯತೆ ಮತ್ತು ಮತ್ತೊಂದೆಡೆ ಅನನ್ಯತೆ ಮತ್ತು ವಿಶ್ವಾಸಾರ್ಹತೆ ಅಗತ್ಯವನ್ನು ಎತ್ತಿ ಹೇಳಿದ ಪ್ರಧಾನಿ, ಈ ಎರಡೂ ಬೇಡಿಕೆಗಳು ಸಹಬಾಳ್ವೆ ನಡೆಸಬಲ್ಲಂತಹ ಸ್ಥಾನದಲ್ಲಿ ಭಾರತವಿದೆ ಎಂದು ಹೇಳಿದರು. ಭಾರತದ ಕುಶಲಕರ್ಮಿಗಳು ತಯಾರಿಸುವ ಉತ್ಪನ್ನಗಳಿಗೆ ಸದಾ ವಿಶಿಷ್ಟವಾದ ಅಂಶಗಳನ್ನು ಒಳಗೊಂಡಿರುತ್ತದೆ ಎಂಬುದನ್ನು ಉಲ್ಲೇಖಿಸಿದ ಪ್ರಧಾನಿ, ವಿಶಿಷ್ಟವಾದ ಫ್ಯಾಷನ್‌ಗೆ ಬೇಡಿಕೆಯೊಂದಿಗೆ ಅಂತಹ ಪ್ರತಿಭೆಗಳಿಗೂ ಬೇಡಿಕೆ ಹೆಚ್ಚಾಗುತ್ತದೆ ಎಂದು ಹೇಳಿದರು. ಆದ್ದರಿಂದ, ಸರ್ಕಾರವು ಕೌಶಲ್ಯ ಮತ್ತು ಪ್ರಮಾಣದ ಮೇಲೆ ಕೇಂದ್ರೀಕರಿಸುತ್ತಿದ್ದು, ಆ ನಿಟ್ಟಿನಲ್ಲಿ ದೇಶದಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (ಎನ್‌ಐಎಫ್‌ಟಿ) ಸಂಸ್ಥೆಗಳ ಸಂಖ್ಯೆಯನ್ನು 19 ಕ್ಕೆ ಹೆಚ್ಚಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಹೊಸ ತಂತ್ರಜ್ಞಾನದ ಬಗ್ಗೆ ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದರೊಂದಿಗೆ ಸ್ಥಳೀಯ ನೇಕಾರರು ಮತ್ತು ಕುಶಲಕರ್ಮಿಗಳನ್ನು ಸಹ ಎನ್ಐಎಫ್ ಟಿಗಳ ಸಂಪರ್ಕ ಹೊಂದುವಂತೆ ಮಾಡಲಾಗುತ್ತಿದೆ ಎಂದು ಹೇಳಿದರು. ಈವರೆಗೆ 2.5 ಲಕ್ಷಕ್ಕೂ ಅಧಿಕ ಜನರು ಸಾಮರ್ಥ್ಯ ವೃದ್ಧಿ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿ ಪಡೆದಿರುವ ಸಮರ್ಥ್ ಯೋಜನೆಯನ್ನು ಪ್ರಧಾನಿ ಪ್ರಸ್ತಾಪಿಸಿದರು. ಸುಮಾರು 1.75 ಲಕ್ಷ ಜನರು ಈಗಾಗಲೇ ಉದ್ಯಮದಲ್ಲಿ ಉದ್ಯೋಗವನ್ನು ಕಂಡುಕೊಂಡಿರುವ ಈ ಯೋಜನೆಯಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಭಾಗವಹಿಸಿದ್ದಾರೆಂದು ಅವರು ಮಾಹಿತಿ ನೀಡಿದರು.

ಪ್ರಧಾನಮಂತ್ರಿ ಅವರು ವೋಕಲ್ ಫಾರ್ (ಸ್ಥಳೀಯರಿಗಾಗಿ ಧ್ವನಿಯಯಾಗುವ) ಆಯಾಮದ ಬಗ್ಗೆಯೂ ಮಾತನಾಡಿದರು. “ಇಂದು ದೇಶದಲ್ಲಿ ವೋಕಲ್ ಫಾರ್ ಲೋಕಲ್ ಮತ್ತು ಲೋಕಲ್ ಟು ಗ್ಲೋಬಲ್’’  ಎಂಬ ಜನಾಂದೋಲನ ನಡೆಯುತ್ತಿದೆ. ಸಣ್ಣ ಕುಶಲಕರ್ಮಿಗಳಿಗೆ ವಸ್ತುಪ್ರದರ್ಶನ, ಮಾಲ್‌ಗಳಂತಹ ವ್ಯವಸ್ಥೆಯನ್ನು ಸರ್ಕಾರವೇ ರೂಪಿಸುತ್ತಿದೆ ಎಂದರು.

ಸಕಾರಾತ್ಮಕ, ಸ್ಥಿರ ಮತ್ತು ದೂರದೃಷ್ಟಿಯ ಸರ್ಕಾರದ ನೀತಿಗಳ ಪ್ರಭಾವದ ಕುರಿತು ವಿವರಿಸಿದ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಜವಳಿ ಮಾರುಕಟ್ಟೆಯ ಮೌಲ್ಯವು 2014 ರಲ್ಲಿ 7 ಲಕ್ಷ ಕೋಟಿಗಿಂತ ಕಡಿಮೆ ಇತ್ತು, ಇದೀಗ ಆ ಪ್ರಮಾಣ 12 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ ಎಂದು ಹೇಳಿದರು. ನೂಲು, ಬಟ್ಟೆ ಮತ್ತು ಜವಳಿ ಉತ್ಪಾದನೆಯಲ್ಲಿ ಶೇಕಡ 25 ರಷ್ಟು ಹೆಚ್ಚಳವಾಗಿದೆ. 380 ಹೊಸ ಬಿಐಎಸ್ ಮಾನದಂಡಗಳು ವಲಯದಲ್ಲಿ ಗುಣಮಟ್ಟದ ನಿಯಂತ್ರಣವನ್ನು ಖಾತ್ರಿಪಡಿಸುತ್ತಿವೆ. ಇದು ಕಳೆದ 10 ವರ್ಷಗಳಲ್ಲಿ ಈ ವಲಯದಲ್ಲಿ ಎಫ್‌ಡಿಐ ದ್ವಿಗುಣಗೊಳ್ಳಲು ಕಾರಣವಾಗಿದೆ ಎಂದು ಅವರು ಮಾಹಿತಿ ನೀಡಿದರು.

ಭಾರತದ ಜವಳಿ ವಲಯದಿಂದ ಹೆಚ್ಚಿನ ನಿರೀಕ್ಷೆಗಳಿವೆ ಎಂದು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ, ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಪಿಪಿಇ ಕಿಟ್‌ಗಳು ಮತ್ತು ಫೇಸ್ ಮಾಸ್ಕ್‌ಗಳ ತಯಾರಿಕೆಗಾಗಿ ಉದ್ಯಮ ನಡೆಸಿದ ಪ್ರಯತ್ನಗಳನ್ನು ಸ್ಮರಿಸಿಕೊಂಡರು. ಸರ್ಕಾರವು ಜವಳಿ ವಲಯದೊಂದಿಗೆ ಪೂರೈಕೆ ಸರಣಿಯನ್ನು ಉತ್ತಮಗೊಳಿಸಿದೆ ಮತ್ತು ಇಡೀ ಜಗತ್ತಿಗೆ ಸಾಕಷ್ಟು ಸಂಖ್ಯೆಯ ಪಿಪಿಇ ಕಿಟ್‌ಗಳು ಮತ್ತು ಫೇಸ್ ಮಾಸ್ಕ್‌ಗಳನ್ನು ಒದಗಿಸಿದೆ ಎಂದು ಅವರು ಒತ್ತಿ ಹೇಳಿದರು. ಈ ಸಾಧನೆಗಳನ್ನು ಹಿಂತಿರುಗಿ ನೋಡಿದಾಗ, ಮುಂದಿನ ದಿನಗಳಲ್ಲಿ ಭಾರತವು ಜಾಗತಿಕ ರಫ್ತು ಕೇಂದ್ರವಾಗಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು. "ನಿಮ್ಮ ಪ್ರತಿಯೊಂದು ಅಗತ್ಯಕ್ಕೂ ಸರ್ಕಾರವು ನಿಮ್ಮ ಬೆಂಬಲಕ್ಕೆ ನಿಲ್ಲುತ್ತದೆ" ಎಂದು ಪ್ರಧಾನಿ ಅವರು ಬಾಧ್ಯಸ್ಥದಾರರಿಗೆ ಭರವಸೆ ನೀಡಿದರು. ಜವಳಿ ವಲಯದೊಳಗಿನ ವಿವಿಧ ಪಾಲುದಾರರ ನಡುವೆ ಸಹಯೋಗವನ್ನು ವರ್ಧಿಸುವ ಅಗತ್ಯವಿದೆ ಎಂದು ಶಿಫಾರಸು ಮಾಡಿದ ಅವರು, ಇದರಿಂದಾಗಿ ಉದ್ಯಮದ ಅಭಿವೃದ್ಧಿಗೆ ಸಮಗ್ರ ನಿರ್ಣಯವನ್ನು ಕೈಗೊಳ್ಳಲು ಸಾದ್ಯವಾಗಲಿದೆ ಎಂದರು. ಆಹಾರ, ಆರೋಗ್ಯ ಮತ್ತು ಸಮಗ್ರ ಜೀವನಶೈಲಿ ಸೇರಿದಂತೆ ಜೀವನದ ಪ್ರತಿಯೊಂದು ಅಂಶಗಳಲ್ಲಿ 'ಮೂಲಗಳಿಗೆ ವಾಪಸ್ಸಾಗಲು’ ಮುಂದಾಗುತ್ತಿರುವ ವಿಶ್ವದಾದ್ಯಂತದ ನಾಗರಿಕರ ಪ್ರವೃತ್ತಿಯನ್ನು ಉಲ್ಲೇಖಿಸಿದ ಪ್ರಧಾನಿ, ಜವಳಿಗಳಲ್ಲಿಯೂ ಇದೇ ರೀತಿ ಆಗುತ್ತಿದೆ ಮತ್ತು ಉಡುಪು ಉತ್ಪಾದನೆಗೆ  ರಾಸಾಯನಿಕ ರಹಿತ  ಬಣ್ಣಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವತ್ತ ಗಮನ ಸೆಳೆದರು. ಜವಳಿ ಉದ್ಯಮವು ಕೇವಲ ಭಾರತೀಯ ಮಾರುಕಟ್ಟೆಗೆ ಪೂರೈಸುವ ಮನಸ್ಥಿತಿಯಿಂದ ಹೊರಬಂದು ರಫ್ತಿನತ್ತ ಗಮನಹರಿಸಬೇಕು ಎಂದು ಪ್ರಧಾನಿ ಆಗ್ರಹಿಸಿದರು. ಅವರು ಆಫ್ರಿಕನ್ ಮಾರುಕಟ್ಟೆಯ ನಿರ್ದಿಷ್ಟ ಅಗತ್ಯತೆಗಳು ಅಥವಾ ಜಿಪ್ಸಿ ಸಮುದಾಯಗಳ ಅಗತ್ಯತೆಗಳ ಉದಾಹರಣೆಯನ್ನು ನೀಡಿದರು, ಇದು ಅಪಾರ ಸಾಧ್ಯತೆಗಳನ್ನು ಪ್ರಸ್ತುತಪಡಿಸುತ್ತದೆ. ಮೌಲ್ಯ ಸರಣಿಯಲ್ಲಿ ರಾಸಾಯನಿಕ ವಿಭಾಗಗಳನ್ನು ಸೇರಿಸಲು ಮತ್ತು ನೈಸರ್ಗಿಕ ರಾಸಾಯನಿಕ ಪೂರೈಕೆದಾರರನ್ನು ಕಂಡುಕೊಳ್ಳುವ ಅಗತ್ಯತೆ ಇದೆ ಎಂದು ಅವರು ಹೇಳಿದರು.

ಖಾದಿಯನ್ನು ಅದರ ಸಾಂಪ್ರದಾಯಿಕ  ಚೌಕಟ್ಟಿನಿಂದ ಹೊರತೆಗೆದು ಯುವಜನರಲ್ಲಿ ಆತ್ಮವಿಶ್ವಾಸ ತುಂಬುವ ಫ್ಯಾಷನ್ ಸ್ಟೇಟ್‌ಮೆಂಟ್ ಆಗಿ ಪರಿವರ್ತಿಸುವ ತಮ್ಮ ಪ್ರಯತ್ನದ ಬಗ್ಗೆಯೂ ಅವರು ಮಾತನಾಡಿದರು. ಜವಳಿ ವಲಯದಲ್ಲಿ ಆಧುನಿಕ ಬೆಳವಣಿಗೆಗಳಲ್ಲಿ ಹೆಚ್ಚಿನ ಸಂಶೋಧನೆ ಮತ್ತು ವಿಶೇಷ ಜವಳಿ ಖ್ಯಾತಿಯನ್ನು ಮರಳಿ ಪಡೆಯಬೇಕೆಂದು ಅವರು ಹೇಳಿದರು. ಈಗ ಉದ್ಯಮಕ್ಕೆ ಸಂಬಂಧಿಸಿದ ಎಲ್ಲಾ ಉಪಕರಣಗಳನ್ನು ದೇಶೀಯವಾಗಿ ತಯಾರಿಸುತ್ತಿರುವ ಭಾರತದ ವಜ್ರ ಉದ್ಯಮದ ಉದಾಹರಣೆಯನ್ನು ನೀಡಿದ ಪ್ರಧಾನಿ, ಜವಳಿ ವಲಯವು ಜವಳಿ ಸಾಧನಗಳ ತಯಾರಿಕೆಯ ಕ್ಷೇತ್ರದಲ್ಲಿ ಸಂಶೋಧನೆಯನ್ನು ಕೈಗೊಳ್ಳಲು ಮತ್ತು ಹೊಸ ಆಲೋಚನೆಗಳು ಮತ್ತು ಉತ್ತಮ ಫಲಿತಾಂಶ ನೀಡುವಂತಹ ಪ್ರಯತ್ನಗಳನ್ನು ಉತ್ತೇಜಿಸಲು ಕರೆ ನೀಡಿದರು. ವೈದ್ಯಕೀಯ ಕ್ಷೇತ್ರದಲ್ಲಿ ಬಳಸುವ ಜವಳಿಗಳಂತಹ ಹೊಸ ಕ್ಷೇತ್ರಗಳನ್ನು ಅನ್ವೇಷಿಸಲು ಅವರು ಬಾಧ್ಯಸ್ಥಗಾರರನ್ನು ಕೋರಿದರು ಮತ್ತು ಜಾಗತಿಕ ಫ್ಯಾಷನ್ ಪ್ರವೃತ್ತಿಯನ್ನು ಅನುಸರಿಸಬೇಡಿ ಮತ್ತು ಮುಂದುವರಿಸಬೇಡಿ ಎಂದು ಅವರು ಹೇಳಿದರು.

ತಮ್ಮ ಭಾಷಣವನ್ನು ಮುಕ್ತಾಯಗೊಳಿಸುವ ಮುನ್ನ ಪ್ರಧಾನಮಂತ್ರಿ ಅವರು, ಜನರ ಕನಸುಗಳನ್ನು ಸುಲಭವಾಗಿ ನನಸಾಗಿಸಲು ನಿಟ್ಟಿನಲ್ಲಿ ಸರ್ಕಾರವು ವೇಗವರ್ಧಕವಾಗಿ ಕಾರ್ಯನಿರ್ವಹಿಸಲು ಸಿದ್ಧವಿದೆ ಎಂದು ಅವರು ಬಲವಾಗಿ ಪ್ರತಿಪಾದಿಸಿದರು. ಕೈಗಾರಿಕೆಗಳು ವಿಶ್ವದ ಅಗತ್ಯಗಳನ್ನು ಪೂರೈಸುವ ಮತ್ತು ಅವರ ವೈವಿಧ್ಯಮಯ ಮಾರುಕಟ್ಟೆಗಳನ್ನು ತಲುಪುವ ಹೊಸ ದೂರದೃಷ್ಟಿಯೊಂದಿಗೆ ಮುಂದೆ ಬರುವಂತೆ ಕರೆ ನೀಡಿದರು.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ಜವಳಿ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಮತ್ತು ಕೇಂದ್ರ ಜವಳಿ ಖಾತೆ ರಾಜ್ಯ ಸಚಿವರಾದ ಶ್ರೀಮತಿ. ದರ್ಶನಾ ಜರ್ದೋಶ್  ಮತ್ತಿತರರು ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ;

ಭಾರತ್ ಟೆಕ್ಸ್ 2024 ಅನ್ನು 2024ರ ಫೆಬ್ರವರಿ 26-29ರವರೆಗೆ ಆಯೋಜಿಸಲಾಗಿದೆ. ಪ್ರಧಾನಮಂತ್ರಿ ಅವರ 5ಎಫ್ ವಿಷನ್‌ನಿಂದ ಸ್ಫೂರ್ತಿ ಪಡೆದ ಪ್ರದರ್ಶನದಲ್ಲಿ ಫೈಬರ್, ಫ್ಯಾಬ್ರಿಕ್ ಮತ್ತು ಫ್ಯಾಷನ್ ಫೋಕಸ್ ಮೂಲಕ ವಿದೇಶಿಗಳಿಗೆ ತಲುಪಿಸುವ ಏಕೀಕೃತ ವ್ಯವಸ್ಥೆಯನ್ನು ಹೊಂದಿದೆ. ಇದು ಸಂಪೂರ್ಣ ಜವಳಿ ಮೌಲ್ಯ ಸರಪಳಿಯನ್ನು ಒಳಗೊಂಡಿದೆ. ಇದು ಜವಳಿ ಕ್ಷೇತ್ರದಲ್ಲಿ ಭಾರತದ ಶಕ್ತಿಯನ್ನು ಪ್ರದರ್ಶಿಸುತ್ತದೆ ಮತ್ತು ಜಾಗತಿಕ ಜವಳಿ ಶಕ್ತಿ ಕೇಂದ್ರವಾಗಿ ಭಾರತದ ಸ್ಥಾನವನ್ನು ಪುನರುಚ್ಚರಿಸುತ್ತದೆ.

ಇದನ್ನು 11 ಜವಳಿ ರಫ್ತು ಉತ್ತೇಜನಾ ಮಂಡಳಿಗಳ ಒಕ್ಕೂಟದಿಂದ ಆಯೋಜಿಸಲಾಗಿದೆ ಮತ್ತು ಸರ್ಕಾರ ಇದಕ್ಕೆ ಬೆಂಬಲ ನೀಡಿದೆ, ಭಾರತ್ ಟೆಕ್ಸ್ 2024 ಅನ್ನು ವ್ಯಾಪಾರ ಮತ್ತು ಹೂಡಿಕೆಯ ಅವಳಿ ಸ್ತಂಭಗಳ ಮೇಲೆ ಹೆಚ್ಚಿನ ಒತ್ತು ನೀಡುವತ್ತ ಕೇಂದ್ರೀಕರಿಸಲಾಗಿದೆ. ನಾಲ್ಕು ದಿನಗಳ ಪ್ರದರ್ಶನದಲ್ಲಿ 100 ಕ್ಕೂ ಅಧಿಕ ಜಾಗತಿಕ ಸಂವಾದಕಾರರೊಂದಿಗೆ 65 ಕ್ಕೂ ಅಧಿಕ ಜ್ಞಾನದ ವಿನಿಯಮ ಗೋಷ್ಠಿಗಳು, ವಲಯ ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಚರ್ಚಿಸುತ್ತವೆ. ಇದು 'ಇಂಡಿ ಹಾತ್', ನಲ್ಲಿ ಸುಸ್ಥಿರತೆ ಮತ್ತು ಆರ್ಥಿಕ ಚಲಾವಣೆಯ ಕುರಿತು ವಿಶೇಷ ಮಳಿಗೆಗಳನ್ನು ಹೊಂದಿದೆ, ಭಾರತೀಯ ಜವಳಿ ಪರಂಪರೆ, ಸುಸ್ಥಿರತೆ ಮತ್ತು ಜಾಗತಿಕ ವಿನ್ಯಾಸಗಳಂತಹ ವೈವಿಧ್ಯಮಯ ವಿಷಯಗಳ ಮೇಲೆ ಫ್ಯಾಷನ್ ಪ್ರಸ್ತುತಿಗಳು ಮತ್ತು ಇಂಟರ್ಯಾಕ್ವಿವ್ ಫ್ಯಾಬ್ರಿಕ್ ಟೆಸ್ಟಿಂಗ್ ವಲಯಗಳು ಮತ್ತು ಉತ್ಪನ್ನ ಪ್ರದರ್ಶನಗಳ ಮೇಲೆ ಮೀಸಲಾದ ಮಳಿಗೆಗಳನ್ನೂ ಸಹ ಹೊಂದಿದೆ.

3,500 ಕ್ಕೂ ಅಧಿಕ ಪ್ರದರ್ಶಕರು, 100 ಕ್ಕೂ ಅಧಿಕ ದೇಶಗಳಿಂದ 3,000 ಕ್ಕೂ ಅಧಿಕ ಖರೀದಿದಾರರು ಮತ್ತು 40,000 ಕ್ಕೂ ಅಧಿಕ ವ್ಯಾಪಾರ ಸಂದರ್ಶಕರು, ಜವಳಿ ವಿದ್ಯಾರ್ಥಿಗಳು, ನೇಕಾರರು, ಕುಶಲಕರ್ಮಿಗಳು ಮತ್ತು ಜವಳಿ ಕೆಲಸಗಾರರು ನೀತಿ ನಿರೂಪಕರು ಮತ್ತು ಜಾಗತಿಕ ಸಿಇಒ ಗಳೊಂದಿಗೆ ಭಾರತ್ ಟೆಕ್ಸ್ 2024 ರಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಪ್ರದರ್ಶನದಲ್ಲಿ  ಜವಳಿ ವಲಯದಲ್ಲಿ ಹೂಡಿಕೆ ಮತ್ತು ವ್ಯಾಪಾರಕ್ಕೆ ಮತ್ತಷ್ಟು ಉತ್ತೇಜನವನ್ನು ನೀಡಲು ಮತ್ತು ರಫ್ತುಗಳನ್ನು ಹೆಚ್ಚಿಸಲು ಸಹಾಯ ಮಾಡುವ 50 ಕ್ಕೂ ಅಧಿಕ  ಪ್ರಕಟಣೆಗಳು ಮತ್ತು ಎಂಒಯುಗಳಿಗೆ ಸಹಿ ಹಾಕುವ ನಿರೀಕ್ಷೆ ಇದೆ.  ಆತ್ಮನಿರ್ಭರ ಭಾರತ ಮತ್ತು ವಿಕಸಿತ ಭಾರತದ ಪ್ರಧಾನಮಂತ್ರಿ ಅವರ ದೂರದೃಷ್ಟಿಯ ಸಾಕಾರ ನಿಟಿನಲ್ಲಿ ಇದು ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ.

*****

 

 



(Release ID: 2009119) Visitor Counter : 43