ಪ್ರಧಾನ ಮಂತ್ರಿಯವರ ಕಛೇರಿ
ನವದೆಹಲಿಯ ಕಾರ್ಯಪ್ಪ ಪರೇಡ್ ಮೈದಾನದಲ್ಲಿ ಎನ್‌ಸಿಸಿ ಕೆಡೆಟ್ಸ್ ರಾಲಿ(Rally) ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
Posted On:
27 JAN 2024 7:01PM by PIB Bengaluru
ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳೆ, ಶ್ರೀ ರಾಜನಾಥ್ ಸಿಂಗ್ ಜಿ, ಶ್ರೀ ಅಜಯ್ ಭಟ್ ಜಿ, ಸಶಸ್ತ್ರ ಪಡೆಗಳ ಮುಖ್ಯಸ್ಥ(ಸಿಡಿಎಸ್)ರಾದ ಜನರಲ್ ಅನಿಲ್ ಚೌಹಾಣ್ ಜಿ, ಎಲ್ಲಾ 3 ಸೇನಾಪಡೆಗಳ ಮುಖ್ಯಸ್ಥರೆ, ರಕ್ಷಣಾ ಕಾರ್ಯದರ್ಶಿ, ಎನ್‌ಸಿಸಿ ಮಹಾನಿರ್ದೇಶಕರೆ, ಇಲ್ಲಿರುವ ಎಲ್ಲಾ ಗಣ್ಯ ಅತಿಥಿಗಳೆ ಮತ್ತು ಎನ್‌ಸಿಸಿಯ ನನ್ನ ಯುವ ಒಡನಾಡಿಗಳೆ!
ಮಾಜಿ ಎನ್‌ಸಿಸಿ ಕೆಡೆಟ್ ಆಗಿರುವ ನಾನು ನಿಮ್ಮ ನಡುವೆ ಬಂದಾಗಲೆಲ್ಲಾ ಹಳೆಯ ನೆನಪುಗಳು ಮರುಕಳಿಸುತ್ತಿವೆ, ಅದು ಸಹಜವೇ. ನಾನು ಎನ್‌ಸಿಸಿ ಕೆಡೆಟ್‌ಗಳ ನಡುವೆ ಬಂದಾಗಲೆಲ್ಲಾ ನಾನು ಮೊದಲು ನೋಡುವುದು ‘ಏಕ್ ಭಾರತ್-ಶ್ರೇಷ್ಠ ಭಾರತ’ ಆವೃತ್ತಿ. ನೀವೆಲ್ಲರೂ ದೇಶದ ವಿವಿಧ ಮೂಲೆಗಳಿಂದ ಇಲ್ಲಿಗೆ ಬಂದಿದ್ದೀರಿ. ವರ್ಷಗಳ ತರುವಾಯ, ಎನ್‌ಸಿಸಿ ರಾಲಿ(Rally)ಗಳ ವ್ಯಾಪ್ತಿ ನಿರಂತರವಾಗಿ ವಿಸ್ತರಿಸುತ್ತಿದೆ ಎಂಬುದು ನನಗೆ ಸಂತೋಷ ತಂದಿದೆ. ಈ ಸಮಯದಲ್ಲಿ, ಮತ್ತೊಂದು ಹೊಸ ಆರಂಭವಿದೆ. ಇಂದು ನಮ್ಮ ನಡುವೆ ದೇಶದ ಗಡಿ ಗ್ರಾಮಗಳ 400ಕ್ಕೂ ಹೆಚ್ಚು ಸರಪಂಚ್‌ಗಳಿದ್ದು, ಅದನ್ನು ಸರ್ಕಾರ ರೋಮಾಂಚನಕಾರಿ ಗ್ರಾಮ(ವೈಬ್ರೆಂಟ್ ವಿಲೇಜ್)ಗಳಾಗಿ ಅಭಿವೃದ್ಧಿಪಡಿಸುತ್ತಿದೆ. ಇದರ ಜತೆಗೆ, ದೇಶಾದ್ಯಂತದ ಸ್ವ-ಸಹಾಯ ಗುಂಪುಗಳನ್ನು ಪ್ರತಿನಿಧಿಸುವ 100ಕ್ಕೂ ಹೆಚ್ಚು ಸಹೋದರಿಯರು ಸಹ ಇಲ್ಲಿದ್ದಾರೆ. ನಾನು ನಿಮ್ಮೆಲ್ಲರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.
ಸ್ನೇಹಿತರೆ,
ಎನ್‌ಸಿಸಿ ರಾಲಿಯು "ಒಂದು ಪ್ರಪಂಚ, ಒಂದು ಕುಟುಂಬ, ಒಂದು ಭವಿಷ್ಯ" ಎಂಬ ಭಾವನೆಯನ್ನು ನಿರಂತರವಾಗಿ ಬಲಪಡಿಸುತ್ತಿದೆ. 2014ರಲ್ಲಿ, 10 ದೇಶಗಳ ಕೆಡೆಟ್‌ಗಳು ಈ ರಾಲಿಯಲ್ಲಿ ಭಾಗವಹಿಸಿದ್ದರು. ಇಂದು 24 ಸೌಹಾರ್ದ ದೇಶಗಳ ಕೆಡೆಟ್‌ಗಳು ಇಲ್ಲಿ ಇದ್ದಾರೆ. ನಿಮ್ಮೆಲ್ಲರಿಗೂ ಮತ್ತು ವಿಶೇಷವಾಗಿ ವಿದೇಶದಿಂದ ಬಂದಿರುವ ಯುವ ಕೆಡೆಟ್‌ಗಳಿಗೆ ನಾನು ಆತ್ಮೀಯ ಸ್ವಾಗತ ನೀಡುತ್ತೇನೆ.
ನನ್ನ ಯುವ ಗೆಳೆಯರೆ,
ಈ ವರ್ಷ ದೇಶವು ತನ್ನ 75ನೇ ಗಣರಾಜ್ಯೋತ್ಸವ ಆಚರಿಸುತ್ತಿದೆ. ಈ ಐತಿಹಾಸಿಕ ಮೈಲಿಗಲ್ಲನ್ನು ರಾಷ್ಟ್ರದ 'ನಾರಿಶಕ್ತಿ' (ಮಹಿಳಾ ಶಕ್ತಿ)ಗೆ ಸಮರ್ಪಿಸಲಾಗಿದೆ. ನಿನ್ನೆ ಕರ್ತವ್ಯ ಪಥದಲ್ಲಿ ಈ ವರ್ಷದ ಕಾರ್ಯಕ್ರಮವನ್ನು ಮಹಿಳಾ ಶಕ್ತಿಗೆ ಸಮರ್ಪಿಸಲಾಗಿದೆ ಎಂಬುದನ್ನು ನಾವು ನೋಡಿದ್ದೇವೆ. ಭಾರತೀಯ ಹೆಣ್ಣುಮಕ್ಕಳು ಎಷ್ಟು ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ನಾವು ಜಗತ್ತಿಗೆ ತೋರಿಸಿದ್ದೇವೆ. ಭಾರತೀಯ ಹೆಣ್ಣು ಮಕ್ಕಳು ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ಮಾನದಂಡಗಳನ್ನು ಹೇಗೆ ಹೊಂದಿಸುತ್ತಿದ್ದಾರೆ ಎಂಬುದನ್ನು ನಾವು ಜಗತ್ತಿಗೆ ತೋರಿಸಿದ್ದೇವೆ. ಗಣರಾಜ್ಯೋತ್ಸವ ಪರೇಡ್‌ನಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಮಹಿಳಾ ತುಕಡಿಗಳು ಭಾಗವಹಿಸಿದ್ದು ಇದೇ ಮೊದಲು. ನೀವೆಲ್ಲರೂ ಅದ್ಭುತವಾಗಿ ಪ್ರದರ್ಶನ ನೀಡಿದ್ದೀರಿ. ಇಂದು ಇಲ್ಲಿ ಅನೇಕ ಕೆಡೆಟ್ ಗಳು ಪ್ರಶಸ್ತಿಯನ್ನೂ ಪಡೆದಿದ್ದಾರೆ. ಕನ್ಯಾಕುಮಾರಿಯಿಂದ ದೆಹಲಿಗೆ ಮತ್ತು ಗುವಾಹಟಿಯಿಂದ ದೆಹಲಿಗೆ ಸೈಕ್ಲಿಂಗ್ ... ಝಾನ್ಸಿಯಿಂದ ದೆಹಲಿಯವರೆಗೆ, ನಾರಿ ಶಕ್ತಿ ವಂದನ್ ಓಟ ... 6 ದಿನಗಳವರೆಗೆ 470 ಕಿಲೋಮೀಟರ್ ಓಡುವುದು, ಅಂದರೆ ಪ್ರತಿದಿನ 80 ಕಿಲೋಮೀಟರ್ ಓಡುವುದು, ಇದು ಸುಲಭವಲ್ಲ. ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಎಲ್ಲಾ ಕೆಡೆಟ್‌ಗಳನ್ನು ನಾನು ಅಭಿನಂದಿಸುತ್ತೇನೆ. ವಿಶೇಷವಾಗಿ 2 ಗುಂಪುಗಳ ಸೈಕ್ಲಿಸ್ಟ್‌ಗಳಿಗೆ, ಒಂದು ವಡೋದರದಿಂದ ಮತ್ತೊಂದು ವಾರಣಾಸಿಯಿಂದ! ನಾನು ಮೊದಲ ಬಾರಿಗೆ ವಡೋದರಾದಿಂದ ಮತ್ತು ವಾರಾಣಸಿಯಿಂದ ಸಂಸದನಾಗಿದ್ದೇನೆ.
ನನ್ನ ಯುವ ಗೆಳೆಯರೆ,
ಹೆಣ್ಣು ಮಕ್ಕಳ ಪಾಲ್ಗೊಳ್ಳುವಿಕೆ ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೀಮಿತವಾಗಿದ್ದ ಕಾಲವೊಂದಿತ್ತು. ಆದರೆ, ಇಂದು ಭಾರತೀಯ ಹೆಣ್ಣುಮಕ್ಕಳು ಭೂಮಿ, ಸಮುದ್ರ, ಆಕಾಶ ಮತ್ತು ಬಾಹ್ಯಾಕಾಶದಲ್ಲಿ ಹೇಗೆ ಶ್ರೇಷ್ಠರಾಗಿದ್ದಾರೆ ಎಂಬುದನ್ನು ಜಗತ್ತು ನೋಡುತ್ತಿದೆ. ಇದರ ಝಲಕ್ ನಿನ್ನೆ ಕರ್ತವ್ಯ ಪಥದಲ್ಲಿ ಕಂಡುಬಂತು. ಜಗತ್ತು ನಿನ್ನೆ ಕಂಡದ್ದು ಇದ್ದಕ್ಕಿದ್ದಂತೆ ಸಂಭವಿಸಿದ್ದಲ್ಲ. ಇದು ಕಳೆದ 10 ವರ್ಷಗಳ ಸತತ ಪ್ರಯತ್ನದ ಫಲ.
ಭಾರತೀಯ ಸಂಪ್ರದಾಯದಲ್ಲಿ ಮಹಿಳೆಯರನ್ನು ಯಾವಾಗಲೂ 'ಶಕ್ತಿ' ಎಂದು ನೋಡಲಾಗುತ್ತದೆ. ಭಾರತದ ನೆಲದಲ್ಲಿ ರಾಣಿ ಲಕ್ಷ್ಮೀಬಾಯಿ, ರಾಣಿ ಚೆನ್ನಮ್ಮ, ವೇಲು ನಾಚಿಯಾರ್ ಅವರಂತಹ ವೀರ ಮಹಿಳೆಯರು ಇದ್ದರು. ಸ್ವಾತಂತ್ರ್ಯ ಹೋರಾಟ ಸಮಯದಲ್ಲಿ ಹಲವಾರು ಮಹಿಳಾ ಕ್ರಾಂತಿಕಾರಿಗಳು ಬ್ರಿಟಿಷರನ್ನು ಸೋಲಿಸಿದರು. ಕಳೆದ 10 ವರ್ಷಗಳಲ್ಲಿ, ನಮ್ಮ ಸರ್ಕಾರವು ನಿರಂತರವಾಗಿ 'ನಾರಿ ಶಕ್ತಿ' (ಸ್ತ್ರೀಶಕ್ತಿ)ಯನ್ನು ಸಶಕ್ತಗೊಳಿಸಿದೆ. ಈ ಹಿಂದೆ ವಿವಿಧ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳ ಪ್ರವೇಶವನ್ನು ಮುಚ್ಚಿರುವ ಅಥವಾ ಸೀಮಿತಗೊಳಿಸಿದ್ದ ಎಲ್ಲ ಅಡೆತಡೆಗಳನ್ನು ನಾವು ತೊಡೆದುಹಾಕಿದ್ದೇವೆ. ಹೆಣ್ಣು ಮಕ್ಕಳಿಗಾಗಿ ನಾವು ಎಲ್ಲಾ 3 ಸಶಸ್ತ್ರ ಪಡೆಗಳ ಮುಂಚೂಣಿಯನ್ನು ತೆರೆದಿದ್ದೇವೆ. ಇಂದು ಸಶಸ್ತ್ರ ಪಡೆಗಳಲ್ಲಿ ಮಹಿಳಾ ಅಧಿಕಾರಿಗಳಿಗೆ ಕಾಯಂ ಆಯೋಗಗಳನ್ನು ನೀಡಲಾಗುತ್ತಿದೆ. ಎಲ್ಲಾ 3 ಪಡೆಗಳಲ್ಲಿ ಕಮಾಂಡ್ ಹುದ್ದೆಗಳು ಮತ್ತು ಯುದ್ಧ ಸ್ಥಾನಗಳಲ್ಲಿ ಇರಿಸುವ ಮೂಲಕ ಹೆಣ್ಣು ಮಕ್ಕಳಿಗೆ ಮಾರ್ಗಗಳನ್ನು ತೆರೆಯಲಾಗಿದೆ. ಇಂದು, ನೀವು ನೋಡಿ, ಹೆಣ್ಣು ಮಕ್ಕಳ ಭಾಗವಹಿಸುವಿಕೆ ಅಗ್ನಿವೀರ್‌ನಿಂದ ಫೈಟರ್ ಪೈಲಟ್‌ನವರೆಗೆ ಗಮನಾರ್ಹವಾಗಿ ಹೆಚ್ಚುತ್ತಿದೆ. ಈ ಹಿಂದೆ ಸೈನಿಕ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಓದಲು ಅವಕಾಶವಿರಲಿಲ್ಲ. ಈಗ, ಹೆಣ್ಣು ಮಕ್ಕಳು ದೇಶಾದ್ಯಂತ ಅನೇಕ ಸೈನಿಕ ಶಾಲೆಗಳಲ್ಲಿ ಓದುತ್ತಿದ್ದಾರೆ. ಕಳೆದ 10 ವರ್ಷಗಳಲ್ಲಿ ಕೇಂದ್ರ ಭದ್ರತಾ ಪಡೆಗಳಲ್ಲಿ ಮಹಿಳಾ ಸಿಬ್ಬಂದಿ ಸಂಖ್ಯೆ ದ್ವಿಗುಣಗೊಂಡಿದೆ. ರಾಜ್ಯ ಪೊಲೀಸ್ ಪಡೆಗಳಲ್ಲಿ ಮಹಿಳಾ ಪಡೆಗಳ ಸಂಖ್ಯೆ ಹೆಚ್ಚಿಸಲು ರಾಜ್ಯಗಳನ್ನು ಪ್ರೋತ್ಸಾಹಿಸಲಾಗುತ್ತಿದೆ.
ಸ್ನೇಹಿತರೆ,
ಹೆಣ್ಣು ಮಕ್ಕಳು ಇಂತಹ ವೃತ್ತಿಗೆ ಬಂದರೆ ಅದು ಸಮಾಜದ ಮನಸ್ಥಿತಿಯ ಮೇಲೂ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಮಹಿಳೆಯರ ಮೇಲಿನ ಅಪರಾಧಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ನನ್ನ ಯುವ ಗೆಳೆಯರೆ,
ಸಮಾಜದ ಇತರ ಕ್ಷೇತ್ರಗಳಲ್ಲಿಯೂ ಹೆಣ್ಣು ಮಕ್ಕಳ ಭಾಗವಹಿಸುವಿಕೆ ನಿರಂತರವಾಗಿ ಹೆಚ್ಚುತ್ತಿದೆ. ಹಳ್ಳಿಗಳಲ್ಲಿ ಬ್ಯಾಂಕಿಂಗ್, ವಿಮೆ, ಅಥವಾ ಅದಕ್ಕೆ ಸಂಬಂಧಿಸಿದ ಸೇವೆಗಳಲ್ಲಿ ನಮ್ಮ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದು ಸ್ಟಾರ್ಟಪ್ ಗಳಾಗಲಿ ಅಥವಾ ಸ್ವಸಹಾಯ ಸಂಘಗಳಾಗಲಿ, ಹೆಣ್ಣು ಮಕ್ಕಳು ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ.
ಯುವ ಸ್ನೇಹಿತರೆ,
ದೇಶವು ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳ ಪ್ರತಿಭೆಗಳಿಗೆ ಸಮಾನ ಅವಕಾಶಗಳನ್ನು ಒದಗಿಸಿದಾಗ, ಅದರ ಪ್ರತಿಭೆಯ ಪ್ರಮಾಣ ಗಮನಾರ್ಹವಾಗಿ ದೊಡ್ಡದಾಗುತ್ತದೆ. ‘ವಿಕ್ಷಿತ್ ಭಾರತ್’ (ವಿಕಸಿತ ಭಾರತ) ನಿರ್ಮಾಣದಲ್ಲಿ ಇದು ಅತ್ಯಂತ ದೊಡ್ಡ ಶಕ್ತಿಯಾಗಿದೆ. ಇಂದು, ಇಡೀ ಪ್ರಪಂಚದ ಶಕ್ತಿಯು ಭಾರತದ ಈ ಪ್ರತಿಭೆಗಳಲ್ಲಿ ಅಡಗಿದೆ. ಇಂದು ಇಡೀ ಜಗತ್ತು ಭಾರತವನ್ನು ‘ವಿಶ್ವ ಮಿತ್ರ’ (ಜಾಗತಿಕ ಸ್ನೇಹಿತ) ಎಂದು ನೋಡುತ್ತಿದೆ. ಭಾರತದ ಪಾಸ್‌ಪೋರ್ಟ್‌ನ ಶಕ್ತಿ ಗಣನೀಯವಾಗಿ ಹೆಚ್ಚುತ್ತಿದೆ. ಇದು ನಿಮ್ಮಂತಹ ಯುವ ಸ್ನೇಹಿತರಿಗೆ, ನಿಮ್ಮ ವೃತ್ತಿಗೆ ಹೆಚ್ಚಾಗಿ ಪ್ರಯೋಜನಕಾರಿಯಾಗಿದೆ. ಪ್ರಪಂಚದ ಅನೇಕ ದೇಶಗಳು ಈಗ ಭಾರತೀಯ ಯುವಕರ ಪ್ರತಿಭೆಯನ್ನು ಒಂದು ಅವಕಾಶವಾಗಿ ನೋಡುತ್ತಿವೆ.
ಯುವ ಸ್ನೇಹಿತರೆ,
ನಾನು ಆಗಾಗ್ಗೆ ಒಂದು ಮಾತು ಹೇಳುತ್ತಿರುತ್ತೇನೆ. ನಾವು ಇರುವ ಈ ‘ಅಮೃತ ಕಾಲ’, ಮುಂದಿನ 25 ವರ್ಷಗಳಲ್ಲಿ, ನಾವು ಕೆಲಸ ಮಾಡುತ್ತಿರುವ ‘ವಿಕ್ಷಿತ್ ಭಾರತ್’, ಇದರ ಫಲಾನುಭವಿ ಮೋದಿಯಲ್ಲ. ನನ್ನ ದೇಶದಲ್ಲಿ ನಿಮ್ಮಂತಹ ಯುವಕರೇ ಹೆಚ್ಚು ಫಲಾನುಭವಿಗಳು. ಫಲಾನುಭವಿಗಳು ಇನ್ನೂ ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯದಲ್ಲಿ ಇರುವ ವಿದ್ಯಾರ್ಥಿಗಳು. ‘ವೀಕ್ಷಿತ್ ಭಾರತ್’ ಮತ್ತು ಭಾರತದ ಯುವಕರ ವೃತ್ತಿ ಜೀವನದ ಪಥವು ಒಟ್ಟಿಗೆ ಮೇಲಕ್ಕೆ ಸಾಗುತ್ತದೆ. ಆದುದರಿಂದ ನೀವೆಲ್ಲರೂ ಕಷ್ಟಪಟ್ಟು ದುಡಿಯುವುದರಲ್ಲಿ ಒಂದು ಕ್ಷಣವನ್ನೂ ವ್ಯರ್ಥ ಮಾಡಬಾರದು. ಕಳೆದ 10 ವರ್ಷಗಳಲ್ಲಿ, ಕೌಶಲ್ಯ ಅಭಿವೃದ್ಧಿ, ಉದ್ಯೋಗ ಅಥವಾ ಸ್ವಯಂ ಉದ್ಯೋಗವೇ ಆಗಿರಲಿ ಪ್ರತಿಯೊಂದು ಕ್ಷೇತ್ರದಲ್ಲೂ ವ್ಯಾಪಕವಾದ ಕೆಲಸಗಳನ್ನು ಮಾಡಲಾಗಿದೆ. ಯುವಕರ ಪ್ರತಿಭೆ ಮತ್ತು ಕೌಶಲ್ಯಗಳನ್ನು ಗರಿಷ್ಠವಾಗಿ ಬಳಸಿಕೊಳ್ಳಲು ಒತ್ತು ನೀಡಲಾಗುತ್ತಿದೆ. ಹೊಸ ಶತಮಾನದ ಹೊಸ ಸವಾಲುಗಳಿಗೆ ನಿಮ್ಮನ್ನು ಸಿದ್ಧಪಡಿಸಲು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ. ಇಂದು ಪ್ರಧಾನ ಮಂತ್ರಿಗಳ ಶ್ರೀ ಶಾಲಾ ಅಭಿಯಾನದ ಅಡಿ, ದೇಶಾದ್ಯಂತ ಸಾವಿರಾರು ಶಾಲೆಗಳನ್ನು ಸ್ಮಾರ್ಟ್ ಮಾಡಲಾಗುತ್ತಿದೆ. ಕಳೆದ ದಶಕದಲ್ಲಿ ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ವೃತ್ತಿಪರ ಶಿಕ್ಷಣಕ್ಕೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಅಭೂತಪೂರ್ವ ಬೆಳವಣಿಗೆ ಕಂಡುಬಂದಿದೆ. ಕಳೆದ 10 ವರ್ಷಗಳಲ್ಲಿ ಭಾರತೀಯ ವಿಶ್ವವಿದ್ಯಾಲಯಗಳ ಜಾಗತಿಕ ಶ್ರೇಯಾಂಕದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ. ಭಾರತದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ ದಾಖಲೆಯ ಏರಿಕೆ ಕಂಡಿದ್ದು, ವೈದ್ಯಕೀಯ ಸೀಟುಗಳಲ್ಲೂ ಗಣನೀಯ ಏರಿಕೆಯಾಗಿದೆ. ಹಲವಾರು ರಾಜ್ಯಗಳಲ್ಲಿ ಹೊಸ ಐಐಟಿಗಳು ಮತ್ತು ಏಮ್ಸ್‌ಗಳನ್ನು ಸ್ಥಾಪಿಸಲಾಗಿದೆ. ಯುವ ಪ್ರತಿಭೆಗಳಿಗೆ ರಕ್ಷಣೆ, ಬಾಹ್ಯಾಕಾಶ ಮತ್ತು ಮ್ಯಾಪಿಂಗ್‌ನಂತಹ ಕ್ಷೇತ್ರಗಳನ್ನು ಸರ್ಕಾರ ತೆರೆದಿದೆ. ಸಂಶೋಧನೆ ಉತ್ತೇಜಿಸಲು ಹೊಸ ಕಾನೂನನ್ನು ಸಹ ಜಾರಿಗೆ ತರಲಾಗಿದೆ. ಈ ಎಲ್ಲಾ ಪ್ರಯತ್ನಗಳು ನಿಮಗಾಗಿ, ನನ್ನ ಯುವ ಸ್ನೇಹಿತರೇ, ಭಾರತದ ಯುವಕರಿಗಾಗಿ.
ಸ್ನೇಹಿತರೆ,
'ಮೇಕ್ ಇನ್ ಇಂಡಿಯಾ' ಮತ್ತು 'ಆತ್ಮನಿರ್ಭರ್ ಭಾರತ್' ಬಗ್ಗೆ ನಾನು ಮಾತನಾಡುವುದನ್ನು ನೀವು ಆಗಾಗ್ಗೆ ನೋಡುತ್ತಿರುತ್ತೀರಿ. ಈ ಎರಡೂ ಅಭಿಯಾನಗಳು ನಿಮ್ಮಂತಹ ಯುವಕರಿಗಾಗಿ. ಈ ಎರಡೂ ಅಭಿಯಾನಗಳು ಭಾರತದ ಯುವಕರಿಗೆ ಉದ್ಯೋಗಕ್ಕೆ ಹೊಸ ಅವಕಾಶಗಳನ್ನು ಒದಗಿಸುತ್ತಿವೆ. ಕಳೆದ 10 ವರ್ಷಗಳಲ್ಲಿ ಸರ್ಕಾರದ ಪ್ರಯತ್ನಗಳೊಂದಿಗೆ, ಭಾರತದ ಡಿಜಿಟಲ್ ಆರ್ಥಿಕತೆಯು ನಮ್ಮ ಯುವ ಶಕ್ತಿಯ ಹೊಸ ಶಕ್ತಿಯಾಗಿ, ನಮ್ಮ ಯುವ ಶಕ್ತಿಯ ಹೊಸ ಗುರುತಾಗಿ ಪರಿಣಮಿಸುತ್ತದೆ. ಒಂದು ದಶಕದ ಹಿಂದೆ ಭಾರತವೂ ಪ್ರಮುಖ ಡಿಜಿಟಲ್ ಆರ್ಥಿಕತೆಯಾಗಬಹುದೆಂದು ಯೋಚಿಸುವುದು ಕಷ್ಟವಾಗಿತ್ತು. ‘ಸ್ಟಾರ್ಟಪ್‌ಗಳು’ ಎಂಬ ಪದವು ಸಾಮಾನ್ಯ ಸಂಭಾಷಣೆಯಲ್ಲೂ ಬರುತ್ತಿರಲಿಲ್ಲ. ಆದರೆ ಇಂದು, ಭಾರವು ವಿಶ್ವದ 3ನೇ ಅತಿದೊಡ್ಡ ಸ್ಟಾರ್ಟಪ್ ಪರಿಸರ ವ್ಯವಸ್ಥೆಯಾಗಿದೆ. ಇಂದು ಪ್ರತಿ ಮಗು ಸ್ಟಾರ್ಟಪ್‌ಗಳು ಮತ್ತು ಯುನಿಕಾರ್ನ್‌ಗಳ ಬಗ್ಗೆ ಮಾತನಾಡುತ್ತದೆ. ಇಂದು ಭಾರತದಲ್ಲಿ 1.25 ಲಕ್ಷಕ್ಕೂ ಹೆಚ್ಚು ನೋಂದಾಯಿತ ಸ್ಟಾರ್ಟಪ್‌ಗಳು ಮತ್ತು 100 ಯುನಿಕಾರ್ನ್‌ಗಳಿವೆ. ಈ ಸ್ಟಾರ್ಟಪ್‌ಗಳಲ್ಲಿ ಲಕ್ಷಾಂತರ ಯುವಕರು ಗುಣಮಟ್ಟದ ಉದ್ಯೋಗಗಳನ್ನು ಮಾಡುತ್ತಿದ್ದಾರೆ. ಈ ಸ್ಟಾರ್ಟಪ್‌ಗಳಲ್ಲಿ ಹೆಚ್ಚಿನವರು ಡಿಜಿಟಲ್ ಇಂಡಿಯಾದಿಂದ ನೇರವಾಗಿ ಲಾಭ ಪಡೆಯುತ್ತಿದ್ದಾರೆ. ದಶಕದ ಹಿಂದೆ 2ಜಿ-3ಜಿಗಾಗಿಯೇ ಹೆಣಗಾಡುತ್ತಿದ್ದ ನಾವು ಇಂದು ಪ್ರತಿ ಹಳ್ಳಿಗೂ 5ಜಿ ತಂತ್ರಜ್ಞಾನವನ್ನು ತಲುಪಿಸುತ್ತಿದ್ದೇವೆ. ಆಪ್ಟಿಕಲ್ ಫೈಬರ್ ಪ್ರತಿ ಹಳ್ಳಿಗೂ ತಲುಪುತ್ತಿದೆ.
ಸ್ನೇಹಿತರೆ,
ನಾವು ನಮ್ಮ ಹೆಚ್ಚಿನ ಮೊಬೈಲ್ ಫೋನ್‌ಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದಾಗ, ಅವು ತುಂಬಾ ದುಬಾರಿಯಾಗಿದ್ದವು. ಆ ಸಮಯದಲ್ಲಿ ಹೆಚ್ಚಿನ ಯುವಕರಿಗೆ ಅವುಗಳನ್ನು ಖರೀದಿಸಲು ಸಾಧ್ಯವಾಗಲಿಲ್ಲ. ಇಂದು, ಭಾರವು ವಿಶ್ವದ 2ನೇ ಅತಿದೊಡ್ಡ ಮೊಬೈಲ್ ಫೋನ್ ತಯಾರಕ ಮತ್ತು 2ನೇ ಅತಿದೊಡ್ಡ ರಫ್ತುದಾರನಾಗಿದೆ. ಇದು ನಿಮ್ಮ ಮೊಬೈಲ್ ಫೋನ್ ಅನ್ನು ಅಗ್ಗವಾಗಿಸಿದೆ. ಆದರೆ ಡೇಟಾ ಇಲ್ಲದೆ ಫೋನ್‌ನ ಪ್ರಾಮುಖ್ಯತೆ ಏನೂ ಇಲ್ಲ ಎಂಬುದು ನಿಮಗೆ ತಿಳಿದಿದೆ. ನಾವು ನೀತಿಗಳನ್ನು ರೂಪಿಸಿದ್ದೇವೆ ಆದ್ದರಿಂದ ಇಂದು ಭಾರತವು ವಿಶ್ವದ ಅತ್ಯಂತ ಅಗ್ಗದ ಡೇಟಾವನ್ನು ಒದಗಿಸುವ ದೇಶಗಳಲ್ಲಿ ಒಂದಾಗಿದೆ.
ಸ್ನೇಹಿತರೆ,
ಇಂದು ದೇಶದಲ್ಲಿ ಇ-ಕಾಮರ್ಸ್, ಆನ್‌ಲೈನ್ ಶಾಪಿಂಗ್, ಹೋಮ್ ಡೆಲಿವರಿ, ಆನ್‌ಲೈನ್ ಶಿಕ್ಷಣ ಮತ್ತು ರಿಮೋಟ್ ಹೆಲ್ತ್‌ಕೇರ್‌ಗಳ ಬೆಳವಣಿಗೆಯು ಕಾಕತಾಳೀಯವಲ್ಲ. ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ಸಂಭವಿಸಿದ ಡಿಜಿಟಲ್ ಕ್ರಾಂತಿಯಿಂದ ಯುವ ಸೃಜನಶೀಲತೆ ಹೆಚ್ಚು ಪ್ರಯೋಜನ ಪಡೆದಿದೆ. ಇಂದು ಭಾರತದಲ್ಲಿ ಡಿಜಿಟಲ್ ಕಂಟೆಂಟ್ ರಚನೆ ಎಷ್ಟು ವಿಸ್ತಾರವಾಗಿದೆ ಎಂಬುದನ್ನು ನೋಡಿ. ಇದು ಸ್ವತಃ ಗಮನಾರ್ಹ ಆರ್ಥಿಕತೆಯಾಗಿ ಮಾರ್ಪಟ್ಟಿದೆ. ಕಳೆದ 10 ವರ್ಷಗಳಲ್ಲಿ, ದೇಶಾದ್ಯಂತ 5 ಲಕ್ಷಕ್ಕೂ ಹೆಚ್ಚು ಸಾಮಾನ್ಯ ಸೇವಾ ಕೇಂದ್ರಗಳನ್ನು ಹಳ್ಳಿಗಳಲ್ಲಿ ಸ್ಥಾಪಿಸಲಾಗಿದೆ. ಈ ಕೇಂದ್ರಗಳಲ್ಲಿ ಲಕ್ಷಾಂತರ ಯುವಕರು ಕೆಲಸ ಮಾಡುತ್ತಿದ್ದಾರೆ. ಡಿಜಿಟಲ್ ಇಂಡಿಯಾ ಅನುಕೂಲ ಮತ್ತು ಉದ್ಯೋಗ ಎರಡನ್ನೂ ಹೇಗೆ ಸಬಲಗೊಳಿಸುತ್ತಿದೆ ಎಂಬುದನ್ನು ತೋರಿಸುವ ಹಲವು ಉದಾಹರಣೆಗಳಿವೆ.
ನನ್ನ ಯುವ ಗೆಳೆಯರೆ,
ಸರ್ಕಾರವು ಭವಿಷ್ಯದ ಸಾಧ್ಯತೆಗಳನ್ನು ಪರಿಗಣಿಸಿ ವರ್ತಮಾನದಲ್ಲಿ ನೀತಿಗಳನ್ನು ರೂಪಿಸುತ್ತದೆ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಸರ್ಕಾರವು ತನ್ನ ಆದ್ಯತೆಗಳನ್ನು ಸ್ಪಷ್ಟಪಡಿಸುತ್ತದೆ. ನಮ್ಮ ದೇಶದಲ್ಲಿ ಗಡಿ ಪ್ರದೇಶದ ಅಭಿವೃದ್ಧಿಯನ್ನು ಹೆಚ್ಚಾಗಿ ಕಡೆಗಣಿಸಿದ ಕಾಲವೊಂದಿತ್ತು. ಗಡಿಯಲ್ಲಿ ರಸ್ತೆ ನಿರ್ಮಿಸುವುದು ಶತ್ರುಗಳಿಗೆ ಸುಲಭವಾಗುತ್ತದೆ ಎಂದು ಹಿಂದಿನ ಸರ್ಕಾರ ಹೇಳುತ್ತಿತ್ತು. ಗಡಿಯ ಸಮೀಪವಿರುವ ಗ್ರಾಮಗಳನ್ನು ಅನತಿ ಗ್ರಾಮಗಳೆಂದು ಪರಿಗಣಿಸಲಾಯಿತು. ನಮ್ಮ ಸರ್ಕಾರ ಈ ಮನಸ್ಥಿತಿಯನ್ನು ಬದಲಾಯಿಸಿದೆ. ಹಿಂದಿನ ಸರ್ಕಾರದಿಂದ ಕೊನೆಯ ಗ್ರಾಮಗಳೆಂದು ಪರಿಗಣಿಸಲ್ಪಟ್ಟ ಗ್ರಾಮಗಳು ಈಗ ನಮ್ಮ ಸರ್ಕಾರದಿಂದ ಮೊದಲ ಗ್ರಾಮಗಳೆಂದು ಪರಿಗಣಿಸಲ್ಪಟ್ಟಿವೆ. ಇಂದು ಈ ಗ್ರಾಮಗಳ ಅಭಿವೃದ್ಧಿಗಾಗಿ ವೈಬ್ರಂಟ್ ವಿಲೇಜ್ ಯೋಜನೆ ಜಾರಿಗೊಳಿಸಲಾಗುತ್ತಿದೆ. ಈ ಗ್ರಾಮಗಳ ಅನೇಕ ಸರಪಂಚರರು ಇಂದು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಾರೆ, ಅವರು ನಿಮ್ಮನ್ನು ನೋಡುತ್ತಿದ್ದಾರೆ, ನಿಮ್ಮ ಶಕ್ತಿಯನ್ನು ಗಮನಿಸುತ್ತಿದ್ದಾರೆ ಮತ್ತು ಸಂತೋಷಪಡುತ್ತಾರೆ. ಗಡಿ ಭಾಗದಲ್ಲಿರುವ ಇದೇ ಗ್ರಾಮಗಳು ಭವಿಷ್ಯದಲ್ಲಿ ಪ್ರವಾಸೋದ್ಯಮದ ಪ್ರಮುಖ ಕೇಂದ್ರಗಳಾಗಲಿವೆ. ವೈಬ್ರೆಂಟ್ ವಿಲೇಜ್ ಕಾರ್ಯಕ್ರಮದ ಕುರಿತು ನೀವು ಇನ್ನಷ್ಟು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ.
ನನ್ನ ಯುವ ಗೆಳೆಯರೆ,
‘ವಿಕ್ಷಿತ್ ಭಾರತ್’ ನಿಮ್ಮ ಕನಸುಗಳನ್ನು ಈಡೇರಿಸುತ್ತದೆ. ಆದ್ದರಿಂದ, ‘ವಿಕ್ಷಿತ್ ಭಾರತ್’ ನಿರ್ಮಾಣದ ಕೆಲಸದಲ್ಲಿ ನಿಮ್ಮ ಭಾಗವಹಿಸುವಿಕೆ ನಿರ್ಣಾಯಕವಾಗಿದೆ. ನಿಮ್ಮಂತಹ ಯುವಕರಿಗಾಗಿ, ಸರ್ಕಾರವು ಮೇರಾ ಯುವ ಭಾರತ್ ಅಂದರೆ, ಮೈ ಭಾರತ್ ಅನ್ನು ಸಹ ಸ್ಥಾಪಿಸಿದೆ. ಇದು 21ನೇ ಶತಮಾನದ ಭಾರತದ ಯುವಕರ ಅತಿದೊಡ್ಡ ಸಂಘಟನೆಯಾಗಿದೆ. ಕೇವಲ 3 ತಿಂಗಳಲ್ಲಿ 1 ಕೋಟಿಗೂ ಹೆಚ್ಚು ಯುವಕರು ಈಗಾಗಲೇ ಇದರಲ್ಲಿ ನೋಂದಾಯಿಸಿಕೊಂಡಿದ್ದಾರೆ. ನಿಮ್ಮಂತಹ ಎಲ್ಲಾ ಯುವಕರು ಮೇರಾ ಯುವ ಭಾರತ್ ಸಂಸ್ಥೆಯಲ್ಲಿ ನೋಂದಾಯಿಸಿಕೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ. MyGovಗೆ ಭೇಟಿ ನೀಡುವ ಮೂಲಕ ನೀವು ‘ವಿಕ್ಷಿತ್ ಭಾರತ್’ ಗಾಗಿ ನಿಮ್ಮ ಸಲಹೆಗಳನ್ನು ಸಹ ನೀಡಬಹುದು. ನಿಮ್ಮ ಭಾಗವಹಿಸುವಿಕೆಯಿಂದ ಮಾತ್ರ ನಿಮ್ಮ ಕನಸುಗಳು ನನಸಾಗುತ್ತವೆ. ನೀವು ‘ವಿಕ್ಷಿತ್ ಭಾರತ’ದ ವಾಸ್ತುಶಿಲ್ಪಿಗಳು. ದೇಶದ ಯುವ ಪೀಳಿಗೆಯಲ್ಲಿ ನಿಮ್ಮ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಮತ್ತೊಮ್ಮೆ, ಈ ಭವ್ಯವಾದ ಕಾರ್ಯಕ್ರಮಕ್ಕಾಗಿ ನಿಮ್ಮೆಲ್ಲರಿಗೂ ಅಭಿನಂದನೆಗಳು. ನೀವು ಅದಕ್ಕೆ ಅರ್ಹರು. ನಿಮ್ಮೆಲ್ಲರ ಉಜ್ವಲ ಭವಿಷ್ಯಕ್ಕಾಗಿ ನಾನು ನಿಮಗೆ ಶುಭ ಹಾರೈಸುತ್ತೇನೆ!
ನನ್ನೊಂದಿಗೆ ಹೇಳಿ:
ಭಾರತ್ ಮಾತಾ ಕೀ ಜೈ!
ಭಾರತ್ ಮಾತಾ ಕೀ ಜೈ!
ಭಾರತ್ ಮಾತಾ ಕೀ ಜೈ!
ತುಂಬು ಧನ್ಯವಾದಗಳು.
ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
***
(Release ID: 2000794)
Visitor Counter : 89
Read this release in:
English
,
Urdu
,
Hindi
,
Marathi
,
Bengali
,
Assamese
,
Manipuri
,
Punjabi
,
Gujarati
,
Tamil
,
Telugu
,
Malayalam