ಪ್ರಧಾನ ಮಂತ್ರಿಯವರ ಕಛೇರಿ

ಶ್ರೀ ಖೋಡಲ್‌ ಧಾಮ್ ಟ್ರಸ್ಟ್-ಕ್ಯಾನ್ಸರ್ ಆಸ್ಪತ್ರೆಯ ಶಂಕುಸ್ಥಾಪನೆ ಸಮಾರಂಭ ಉದ್ದೇಶಿಸಿ ವಿಡಿಯೋ ಸಂದೇಶದ ಮೂಲಕ ಮಾತನಾಡಿದ ಪ್ರಧಾನಮಂತ್ರಿಗಳು


"ಅದು ಶಿಕ್ಷಣ, ಕೃಷಿ ಅಥವಾ ಆರೋಗ್ಯ ಹೀಗೆ ಅದು ಯಾವುದೇ ಕ್ಷೇತ್ರವಾಗಿರಲಿ, ʻಖೋಡಲ್‌ ಧಾಮ್‌ ಟ್ರಸ್ಟ್ʼ ಪ್ರತಿಯೊಂದರಲ್ಲೂ ಅತ್ಯುತ್ತಮ ಕೆಲಸಗಳನ್ನು ಮಾಡಿದೆ"

"ಕಳೆದ 9 ವರ್ಷಗಳಲ್ಲಿ ದೇಶದಲ್ಲಿ 30 ಹೊಸ ಕ್ಯಾನ್ಸರ್ ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದೆ"

"ರೋಗಗಳನ್ನು ಮುಂಚಿತವಾಗಿ ಪತ್ತೆಹಚ್ಚುವಲ್ಲಿ ʻಆಯುಷ್ಮಾನ್ ಆರೋಗ್ಯ ಮಂದಿರʼವು ಪ್ರಮುಖ ಪಾತ್ರ ವಹಿಸುತ್ತಿದೆ"

"ಕಳೆದ 20 ವರ್ಷಗಳಲ್ಲಿ ಗುಜರಾತ್ ಆರೋಗ್ಯ ಕ್ಷೇತ್ರದಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದೆ"

Posted On: 21 JAN 2024 12:47PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ʻಶ್ರೀ ಖೋಡಲ್‌ ಧಾಮ್ ಟ್ರಸ್ಟ್-ಕ್ಯಾನ್ಸರ್ ಆಸ್ಪತ್ರೆʼಯ ಶಂಕುಸ್ಥಾಪನೆ ಸಮಾರಂಭ ಉದ್ದೇಶಿಸಿ ವಿಡಿಯೋ ಸಂದೇಶದ ಮೂಲಕ ಮಾತನಾಡಿದರು.

ಈ ಸಂದರ್ಭದಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ʻಖೋಡಲ್‌ ಧಾಮ್ʼನ ಪವಿತ್ರ ನೆಲ ಮತ್ತು ಖೋಡಲ್‌ ಮಾತೆ ಭಕ್ತರೊಂದಿಗೆ ಸಂಪರ್ಕ ಸಾಧಿಸುವ ಸೌಭಾಗ್ಯ ತಮಗೆ ದೊರೆತಿದೆ ಎಂದರು. ಅಮ್ರೇಲಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸುವ ಮೂಲಕ ಶ್ರೀ ಖೋಡಲ್‌ ಧಾಮ್ ಟ್ರಸ್ಟ್ ಸಾರ್ವಜನಿಕ ಕಲ್ಯಾಣ ಮತ್ತು ಸೇವಾ ಕ್ಷೇತ್ರದಲ್ಲಿ ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಕಾಗವಾಡದ ʻಶ್ರೀ ಖೋಡಲ್‌ ಧಾಮ್ ಟ್ರಸ್ಟ್ʼ ಸ್ಥಾಪನೆಯಾಗಿ 14 ವರ್ಷಗಳನ್ನು ಪೂರೈಸಲಿದೆ ಎಂದು ಅವರು ತಿಳಿಸಿದರು. ಇದಕ್ಕಾಗಿ ತಮ್ಮ ಶುಭ ಹಾರೈಕೆಗಳನ್ನು ತಿಳಿಸಿದರು.
ಲುವಾ ಪಾಟೀದಾರ್ ಸಮುದಾಯವು 14 ವರ್ಷಗಳ ಹಿಂದೆ ಸೇವೆ, ಮೌಲ್ಯಗಳು ಮತ್ತು ಸಮರ್ಪಣೆಯ ಸಂಕಲ್ಪದೊಂದಿಗೆ ʻಶ್ರೀ ಖೋಡಲ್‌ ಧಾಮ್ ಟ್ರಸ್ಟ್ʼ ಅನ್ನು ಸ್ಥಾಪಿಸಿತು ಎಂದು ಪ್ರಧಾನಿ ಮಾಹಿತಿ ನೀಡಿದರು. ಅಂದಿನಿಂದ, ಈ ಟ್ರಸ್ಟ್ ತನ್ನ ಸೇವೆಯ ಮೂಲಕ ಲಕ್ಷಾಂತರ ಜನರ ಜೀವನವನ್ನು ಬದಲಾಯಿಸುವ ಕೆಲಸ ಮಾಡಿದೆ ಎಂದು ಪ್ರಧಾನಿ ಹೇಳಿದರು. "ಶಿಕ್ಷಣ, ಕೃಷಿ ಅಥವಾ ಆರೋಗ್ಯ ಹೀಗೆ ಯಾವುದೇ ಕ್ಷೇತ್ರವಾಗಿರಲಿ, ಈ ಟ್ರಸ್ಟ್ ಪ್ರತಿಯೊಂದು ದಿಕ್ಕಿನಲ್ಲಿಯೂ ಅತ್ಯುತ್ತಮ ಕೆಲಸ ಮಾಡಿದೆ," ಎಂದು ಹೇಳಿದ ಪ್ರಧಾನಿ, ಅಮ್ರೇಲಿಯಲ್ಲಿ ನಿರ್ಮಿಸಲಾಗುತ್ತಿರುವ ಕ್ಯಾನ್ಸರ್ ಆಸ್ಪತ್ರೆಯು ಟ್ರಸ್ಟ್‌ನ ಸೇವಾ ಮನೋಭಾವಕ್ಕೆ ಮತ್ತೊಂದು ಉದಾಹರಣೆಯಾಗಲಿದೆ ಎಂದರು. ಅಮ್ರೇಲಿ ಸೇರಿದಂತೆ ಸೌರಾಷ್ಟ್ರದ ದೊಡ್ಡ ಭಾಗಕ್ಕೆ ಇದರಿಂದ ಭಾರಿ ಪ್ರಯೋಜನವಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಯ ಚಿಕಿತ್ಸೆಯು ಯಾವುದೇ ವ್ಯಕ್ತಿ ಮತ್ತು ಕುಟುಂಬಕ್ಕೆ ದೊಡ್ಡ ಸವಾಲಾಗಿದೆ ಎಂದು ಹೇಳಿದ ಪ್ರಧಾನಿ, ಕ್ಯಾನ್ಸರ್ ಚಿಕಿತ್ಸೆಯಲ್ಲಿ ಯಾವುದೇ ರೋಗಿಯು ತೊಂದರೆಗಳನ್ನು ಎದುರಿಸದಂತೆ ಖಚಿತಪಡಿಸಿಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಒತ್ತಿ ಹೇಳಿದರು. ಈ ಚಿಂತನೆಯೊಂದಿಗೆ, ಕಳೆದ 9 ವರ್ಷಗಳಲ್ಲಿ ದೇಶದಲ್ಲಿ ಸುಮಾರು 30 ಹೊಸ ಕ್ಯಾನ್ಸರ್ ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದೆ ಮತ್ತು 10 ಹೊಸ ಕ್ಯಾನ್ಸರ್ ಆಸ್ಪತ್ರೆಗಳ ನಿರ್ಮಾಣ ಕೆಲಸ ನಡೆಯುತ್ತಿದೆ ಎಂದು ಪ್ರಧಾನಿ ತಿಳಿಸಿದರು.

ಕ್ಯಾನ್ಸರ್ ಚಿಕಿತ್ಸೆಯನ್ನು ಸರಿಯಾದ ಹಂತದಲ್ಲಿ ಪತ್ತೆಹಚ್ಚುವ ಮಹತ್ವವನ್ನು ಪ್ರಧಾನಿ ಒತ್ತಿ ಹೇಳಿದರು. ಹಳ್ಳಿಗಳ ಜನರು ರೋಗನಿರ್ಣಯ ಮಾಡುವ ಹೊತ್ತಿಗೆ ಕ್ಯಾನ್ಸರ್ ಹರಡಲು ಪ್ರಾರಂಭಿಸುತ್ತದೆ ಎಂದು ಅವರು ಗಮನಸೆಳೆದರು. ಇಂತಹ ಸಂದರ್ಭಗಳನ್ನು ತಪ್ಪಿಸಲು, ಕೇಂದ್ರ ಸರ್ಕಾರವು ಗ್ರಾಮ ಮಟ್ಟದಲ್ಲಿ 1.5 ಲಕ್ಷಕ್ಕೂ ಹೆಚ್ಚು ʻಆಯುಷ್ಮಾನ್ ಆರೋಗ್ಯ ಮಂದಿರʼಗಳನ್ನು ನಿರ್ಮಿಸಿದೆ. ಅಲ್ಲಿ ಕ್ಯಾನ್ಸರ್ ಸೇರಿದಂತೆ ಅನೇಕ ಗಂಭೀರ ಕಾಯಿಲೆಗಳನ್ನು ಮುಂಚಿತವಾಗಿ ಪತ್ತೆಹಚ್ಚಲು ಒತ್ತು ನೀಡಲಾಗುತ್ತಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. "ಕ್ಯಾನ್ಸರ್ ಅನ್ನು ಮೊದಲೇ ಪತ್ತೆಹಚ್ಚಿದಲ್ಲಿ, ಅದರಿಂದ ವೈದ್ಯರಿಗೆ ಚಿಕಿತ್ಸೆ ನೀಡಲು ಸಾಕಷ್ಟು ಸಹಾಯಕವಾಗುತ್ತದೆ, " ಎಂದು ಅವರು ಹೇಳಿದರು. ಗರ್ಭಕಂಠದ ಕ್ಯಾನ್ಸರ್ ಅಥವಾ ಸ್ತನ ಕ್ಯಾನ್ಸರ್‌ನಂತಹ ರೋಗಗಳನ್ನು ಆರಂಭಿಕವಾಗಿ ಪತ್ತೆ ಮಾಡುವಲ್ಲಿ ʻಆಯುಷ್ಮಾನ್ ಆರೋಗ್ಯ ಮಂದಿರʼ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಉಲ್ಲೇಖಿಸಿದ ಶ್ರೀ ಮೋದಿ ಅವರು, ಕೇಂದ್ರ ಸರ್ಕಾರದ ಪ್ರಯತ್ನಗಳಿಂದ ಮಹಿಳೆಯರಿಗೂ ಹೆಚ್ಚಿನ ಲಾಭವಾಗಿದೆ ಎಂದರು.

ಕಳೆದ 20 ವರ್ಷಗಳಲ್ಲಿ ಗುಜರಾತ್ ಆರೋಗ್ಯ ಕ್ಷೇತ್ರದಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದೆ ಮತ್ತು ರಾಜ್ಯವು ಭಾರತದ ಬೃಹತ್ ವೈದ್ಯಕೀಯ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. 2002ರವರೆಗೆ ಗುಜರಾತ್‌ನಲ್ಲಿ ಕೇವಲ 11 ವೈದ್ಯಕೀಯ ಕಾಲೇಜುಗಳಿದ್ದವು, ಆದರೆ ಇಂದು ಇವುಗಳ ಸಂಖ್ಯೆ 40ಕ್ಕೆ ಏರಿದೆ. 20 ವರ್ಷಗಳಲ್ಲಿ ಇಲ್ಲಿ ʻಎಂಬಿಬಿಎಸ್ʼ ಸೀಟುಗಳ ಸಂಖ್ಯೆ ಸುಮಾರು 5 ಪಟ್ಟು ಹೆಚ್ಚಾಗಿದೆ ಮತ್ತು ಪಿಜಿ ಸೀಟುಗಳ ಸಂಖ್ಯೆಯೂ ಸುಮಾರು 3 ಪಟ್ಟು ಹೆಚ್ಚಾಗಿದೆ ಎಂದು ಅವರು ಮಾಹಿತಿ ನೀಡಿದರು. "ಈಗ ನಾವು ರಾಜ್‌ಕೋಟ್‌ನಲ್ಲಿ ʻಏಮ್ಸ್ʼ ಅನ್ನು ಸಹ ಹೊಂದಿದ್ದೇವೆ," ಎಂದು ಅವರು ಹೇಳಿದರು. 2002ರವರೆಗೆ ಗುಜರಾತ್‌ನಲ್ಲಿ ಕೇವಲ 13 ʻಫಾರ್ಮಸಿʼ ಕಾಲೇಜುಗಳಿದ್ದವು, ಆದರೆ ಅವುಗಳ ಸಂಖ್ಯೆ ಇಂದು ಸುಮಾರು 100ಕ್ಕೆ ಏರಿದೆ. ಜೊತೆಗೆ, ಕಳೆದ 20 ವರ್ಷಗಳಲ್ಲಿ ಡಿಪ್ಲೊಮಾ ಫಾರ್ಮಸಿ ಕಾಲೇಜುಗಳ ಸಂಖ್ಯೆಯೂ 6 ರಿಂದ 30ಕ್ಕೆ ಏರಿದೆ ಎಂದು ಅವರು ತಿಳಿಸಿದರು. ಪ್ರತಿ ಹಳ್ಳಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳನ್ನು ತೆರೆಯುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಪ್ರಮುಖ ಸುಧಾರಣೆಯ ಮಾದರಿಯನ್ನು ಗುಜರಾತ್ ಪ್ರಸ್ತುತಪಡಿಸಿದೆ, ಆ ಮೂಲಕ ಬುಡಕಟ್ಟು ಮತ್ತು ಬಡ ಪ್ರದೇಶಗಳಿಗೆ ಆರೋಗ್ಯ ಸೌಲಭ್ಯಗಳನ್ನು ವಿಸ್ತರಿಸಿದೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು. "ಗುಜರಾತ್ನಲ್ಲಿ 108 ಆಂಬ್ಯುಲೆನ್ಸ್‌ಗಳ ಸೌಲಭ್ಯದ ಮೇಲಿನ ಜನರ ನಂಬಿಕೆ ನಿರಂತರವಾಗಿ ಬಲಗೊಂಡಿದೆ," ಎಂದು ಅವರು ಹೇಳಿದರು.

ಯಾವುದೇ ದೇಶದ ಅಭಿವೃದ್ಧಿಗೆ ಆರೋಗ್ಯಕರ ಮತ್ತು ಬಲವಾದ ಸಮುದಾಯದ ಅಗತ್ಯವನ್ನು ಶ್ರೀ ಮೋದಿ ಒತ್ತಿ ಹೇಳಿದರು. "ಖೋಡಲ್‌ ಮಾತೆಯ ಆಶೀರ್ವಾದದಿಂದ, ನಮ್ಮ ಸರ್ಕಾರ ಇಂದು ಈ ಚಿಂತನೆಯ ಹಾದಿಯಲ್ಲಿ ನಡೆಯುತ್ತಿದೆ," ಎಂದು ಹೇಳಿದ ಪ್ರಧಾನಮಂತ್ರಿಯವರು, ʻಆಯುಷ್ಮಾನ್ ಭಾರತ್ʼ ಯೋಜನೆಯನ್ನು ಉಲ್ಲೇಖಿಸಿದರು. ಇದು ಇಂದು ಹೆಚ್ಚಿನ ಸಂಖ್ಯೆಯ ಕ್ಯಾನ್ಸರ್ ರೋಗಿಗಳು ಸೇರಿದಂತೆ 6 ಕೋಟಿಗೂ ಹೆಚ್ಚು ಜನರ ಚಿಕಿತ್ಸೆಗೆ ಸಹಾಯ ಮಾಡಿದೆ. ಜೊತೆಗೆ, ಒಂದು ಲಕ್ಷ ಕೋಟಿ ರೂಪಾಯಿಗಳನ್ನು ಉಳಿಸಲು ಸಹಾಯ ಮಾಡಿದೆ ಎಂದರು. 10,000 ʻಜನೌಷಧʼ ಕೇಂದ್ರಗಳನ್ನು ತೆರೆದಿರುವ ಬಗ್ಗೆಯೂ ಅವರು ಮಾತನಾಡಿದರು. ಶೇ. 80 ರಷ್ಟು ರಿಯಾಯಿತಿಯಲ್ಲಿ ಔಷಧಗಳು ಲಭ್ಯವಾಗುವ ಪ್ರಧಾನಮಂತ್ರಿ ʻಜನೌಷಧʼ ಕೇಂದ್ರಗಳ ಸಂಖ್ಯೆಯನ್ನು 25,000ಕ್ಕೆ ಹೆಚ್ಚಿಸುವ ಬಗ್ಗೆಯೂ ಪ್ರಧಾನಿ ಮಾಹಿತಿ ನೀಡಿದರು. ಜನೌಷಧ ಕೇಂದ್ರಗಳಿಂದಾಗಿ ರೋಗಿಗಳು ಔಷಧಗಳಿಗೆ ಖರ್ಚು ಮಾಡುವ 30,000 ಕೋಟಿ ರೂ.ಗಳನ್ನು ಉಳಿಸಲಾಗಿದೆ ಎಂದು ಅವರು ಹೇಳಿದರು. "ಸರ್ಕಾರವು ಕ್ಯಾನ್ಸರ್ ಔಷಧಗಳ ಬೆಲೆಗಳನ್ನು ಸಹ ನಿಯಂತ್ರಿಸಿದೆ, ಇದರಿಂದ ಅನೇಕ ಕ್ಯಾನ್ಸರ್ ರೋಗಿಗಳಿಗೆ ಪ್ರಯೋಜನವಾಗಿದೆ," ಎಂದು ಅವರು ಹೇಳಿದರು.

ʻಟ್ರಸ್ಟ್ʼನೊಂದಿಗಿನ ತಮ್ಮ ದೀರ್ಘಕಾಲೀನ ಒಡನಾಟವನ್ನು ಎತ್ತಿ ತೋರಿಸಿದ ಪ್ರಧಾನಿ ಮೋದಿ ಅವರು, 9 ವಿನಂತಿಗಳನ್ನು ಮುಂದಿಟ್ಟರು. ಮೊದಲನೆಯದಾಗಿ, ಪ್ರತಿ ಹನಿ ನೀರನ್ನು ಉಳಿಸುವುದು ಮತ್ತು ನೀರಿನ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು. ಎರಡನೆಯದು - ಗ್ರಾಮ ಮಟ್ಟದಲ್ಲಿ ಡಿಜಿಟಲ್ ವಹಿವಾಟಿನ ಬಗ್ಗೆ ಜಾಗೃತಿ ಮೂಡಿಸುವುದು. ಮೂರನೆಯದು- ನಿಮ್ಮ ಗ್ರಾಮ, ಪ್ರದೇಶ ಮತ್ತು ನಗರವನ್ನು ಸ್ವಚ್ಛತೆಯಲ್ಲಿ ನಂಬರ್ ಒನ್ ಮಾಡಲು ಕೆಲಸ ಮಾಡುವುದು. ನಾಲ್ಕನೆಯದು- ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸುವುದು ಮತ್ತು ಸಾಧ್ಯವಾದಷ್ಟು ʻಮೇಡ್ ಇನ್ ಇಂಡಿಯಾʼ ಉತ್ಪನ್ನಗಳನ್ನು ಬಳಸುವುದು. ಐದನೆಯದು- ದೇಶದಲ್ಲಿರುವ ಪ್ರವಾಸಿ ಸ್ಥಳಗಳಿಗೆ ಪ್ರಯಾಣಿಸುವುದು ಮತ್ತು ದೇಶೀಯ ಪ್ರವಾಸೋದ್ಯಮವನ್ನು ಉತ್ತೇಜಿಸುವುದು. ಆರನೆಯದು- ನೈಸರ್ಗಿಕ ಕೃಷಿಯ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವುದು. ಏಳನೇಯದು – ʻಶ್ರೀ ಅನ್ನʼ ಅಥವಾ ಸಿರಿಧಾನ್ಯಗಳನ್ನು ದೈನಂದಿನ ಆಹಾರದಲ್ಲಿ ಸೇರಿಸುವುದು. ಎಂಟನೇಯದು - ಫಿಟ್ನೆಸ್, ಯೋಗ ಅಥವಾ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಮತ್ತು ಅದನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳುವುದು.  ಮತ್ತು ಅಂತಿಮವಾಗಿ - ಯಾವುದೇ ರೀತಿಯ ಮಾದಕವಸ್ತುಗಳು ಮತ್ತು ವ್ಯಸನದಿಂದ ದೂರವಿರುವುದು.

ಟ್ರಸ್ಟ್ ಪೂರ್ಣ ಪ್ರಮಾಣದ ಶ್ರದ್ಧೆ ಮತ್ತು ಸಾಮರ್ಥ್ಯದೊಂದಿಗೆ ತನ್ನ ಜವಾಬ್ದಾರಿ  ಪೂರೈಸುವುದನ್ನು ಮುಂದುವರಿಸುತ್ತದೆ ಮತ್ತು ಅಮ್ರೇಲಿಯಲ್ಲಿ ನಿರ್ಮಿಸಲಾಗುತ್ತಿರುವ ಕ್ಯಾನ್ಸರ್ ಆಸ್ಪತ್ರೆ ಇಡೀ ಸಮಾಜದ ಕಲ್ಯಾಣಕ್ಕೆ ಉದಾಹರಣೆಯಾಗಲಿದೆ ಎಂಬ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದರು. ಲುವಾ ಪಾಟೀದಾರ್ ಸಮಾಜ ಮತ್ತು ʻಶ್ರೀ ಖೋಡಲ್‌ ಧಾಮ್ ಟ್ರಸ್ಟ್ʼಗೆ ಶುಭ ಕೋರಿದ ಪ್ರಧಾನಿ. "ತಾಯಿ ಖೋಡಲ್‌ ಅವರ ಕೃಪೆಯಿಂದ, ನೀವು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದನ್ನು ಮುಂದುವರಿಸಬೇಕು," ಎಂದು ಮನವಿ ಮಾಡಿದರು. 

ತಮ್ಮ ಭಾಷಣವನ್ನು ಮುಗಿಸುವ ಮುನ್ನ ಪ್ರಧಾನಮಂತ್ರಿಯವರು, ದೇಶದಲ್ಲೇ ವಿವಾಹ ಸಮಾರಂಭಗಳನ್ನು ನಡೆಸುವಂತೆ ಹಾಗೂ ವಿದೇಶಿ ʻಗಮ್ಯಸ್ಥಾನದ ವಿವಾಹʼಗಳಿಂದ (ಡೆಸ್ಟಿನೇಷನ್‌ ವೆಡ್ಡಿಂಗ್‌) ದೂರವಿರಲು ಶ್ರೀಮಂತ ವರ್ಗವನ್ನು ಒತ್ತಾಯಿಸಿದರು. "ಮೇಡ್ ಇನ್ ಇಂಡಿಯಾʼದಂತೆಯೇ, ಈಗ ʻವೆಡ್ ಇನ್ ಇಂಡಿಯಾʼ,"ಕ್ಕೆ ಒತ್ತು ನೀಡುವಂತೆ ಕೋರಿ ಪ್ರಧಾನಿ ತಮ್ಮ ಮಾತು ಮುಗಿಸಿದರು

Sharing my remarks at foundation stone laying ceremony of Khodaldham Trust Cancer Hospital in Gujarat. https://t.co/ouPCMUpNgt

— Narendra Modi (@narendramodi) January 21, 2024

****



(Release ID: 1998431) Visitor Counter : 66