ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ʻಸ್ಮಾರ್ಟ್ ಇಂಡಿಯಾ ಹ್ಯಾಕಥಾನ್-2023ʼರ ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗವಹಿಸಿದವರನ್ನು ಉದ್ದೇಶಿಸಿ ಪ್ರಧಾನಿ ಭಾಷಣ


"ಹ್ಯಾಕಥಾನ್ ನನಗೂ ಕಲಿಕೆಯ ಅವಕಾಶವಾಗಿದೆ, ನಾನು ಅದಕ್ಕಾಗಿ ಕುತೂಹಲದಿಂದ ಎದುರು ನೋಡುತ್ತಿದ್ದೇನೆ"

21 ನೇ ಶತಮಾನದ ಭಾರತವು 'ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಮತ್ತು ಜೈ ಅನುಸಂಧಾನ್' ಮಂತ್ರದೊಂದಿಗೆ ಮುಂದುವರಿಯುತ್ತಿದೆ

"ಇಂದು ನಾವು ಒಂದು ತಿರುವಿನಲ್ಲಿದ್ದೇವೆ, ಅಲ್ಲಿ ನಮ್ಮ ಪ್ರತಿಯೊಂದು ಪ್ರಯತ್ನವು ಮುಂದಿನ ಸಾವಿರ ವರ್ಷಗಳ ಭಾರತದ ಅಡಿಪಾಯವನ್ನು ಬಲಪಡಿಸುತ್ತದೆ"

"ಭಾರತವು ಜಾಗತಿಕ ಸವಾಲುಗಳಿಗೆ ಕಡಿಮೆ ವೆಚ್ಚದ, ಗುಣಮಟ್ಟದ, ಸುಸ್ಥಿರ ಮತ್ತು ದೊಡ್ಡ ಮಟ್ಟದ ಪರಿಹಾರಗಳನ್ನು ಕಂಡುಕೊಳ್ಳುತ್ತದೆ ಎಂದು ಜಗತ್ತಿಗೆ ವಿಶ್ವಾಸವಿದೆ"

"ಅನೇಕ ಅಂಶಗಳು ಒಟ್ಟಿಗೆ ಬಂದಿರುವುದರಿಂದ ಪ್ರಸ್ತುತ ಸಮಯದ ಅನನ್ಯತೆಯನ್ನು ಅರ್ಥಮಾಡಿಕೊಳ್ಳಿ"

"ನಮ್ಮ ಚಂದ್ರಯಾನ ಯೋಜನೆಯು ವಿಶ್ವದ ನಿರೀಕ್ಷೆಗಳನ್ನು ಅನೇಕ ಪಟ್ಟು ಹೆಚ್ಚಿಸಿದೆ"

"ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಮೂಲಕ, ದೇಶದ ಯುವ ಶಕ್ತಿಯು ಅಭಿವೃದ್ಧಿ ಹೊಂದಿದ ಭಾರತಕ್ಕೆ ಪರಿಹಾರಗಳ ʻಅಮೃತʼವನ್ನು ಹೊರತೆಗೆಯುತ್ತಿದೆ"

Posted On: 19 DEC 2023 10:50PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ʻಸ್ಮಾರ್ಟ್ ಇಂಡಿಯಾ ಹ್ಯಾಕಥಾನ್- 2023ʼರ ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗವಹಿಸಿದವರೊಂದಿಗೆ ಸಂವಾದ ನಡೆಸಿದರು ಮತ್ತು ವಿಡಿಯೋ ಕಾನ್ಫರೆನ್ಸ್ ಮೂಲಕ ಅವರನ್ನು ಉದ್ದೇಶಿಸಿ ಮಾತನಾಡಿದರು.

ಕಲ್ಲಿದ್ದಲು ಸಚಿವಾಲಯದ ʻಸಾರಿಗೆ ಮತ್ತು ಸರಕು-ಸಾಗಣೆʼ ವಿಷಯದ ಮೇಲೆ ಕೆಲಸ ಮಾಡಿದ ಕರ್ನಾಟಕದ ಮೈಸೂರಿನ ʻನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಎಂಜಿನಿಯರಿಂಗ್ʼನ ಶ್ರೀ ಸೋಯಿಕತ್ ದಾಸ್ ಹಾಗೂ ಶ್ರೀ ಪ್ರತೀಕ್ ಸಹಾ ಅವರೊಂದಿಗೆ ಪ್ರಧಾನಮಂತ್ರಿಯವರು ಸಂವಾದ ನಡೆಸಿದರು. ರೈಲ್ವೆ ಸರಕು-ಸಾಗಣೆಗಾಗಿ ʻಐಒಟಿʼ(ಇಂಟರ್ನೆಟ್‌ ಆಫ್‌ ಥಿಂಗ್ಸ್‌) ಆಧಾರಿತ ವ್ಯವಸ್ಥೆಯನ್ನು ಅವರು ನಿರ್ಮಿಸುತ್ತಿದ್ದಾರೆ. ಹ್ಯಾಕಥಾನ್ ತಮಗೂ ಕಲಿಕೆಯ ಅವಕಾಶವಾಗಿದ್ದು, ಇದರಲ್ಲಿ ಭಾಗವಹಿಸುವವರೊಂದಿಗೆ ಸಂವಾದ ನಡೆಸಲು ತಾವು ಸದಾ ಉತ್ಸುಕರಾಗಿರುವುದಾಗಿ ಪ್ರಧಾನಿ ಹೇಳಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡವರ ಮೊಗದಲ್ಲಿನ ಉಜ್ವಲ ಕಾಂತಿಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಅಲ್ಲಿ ಕಾಣುವ ಉತ್ಸಾಹ, ಇಚ್ಛಾಶಕ್ತಿ ಮತ್ತು ರಾಷ್ಟ್ರ ನಿರ್ಮಾಣದ ಬಯಕೆಯು ಭಾರತದ ಯುವ ಶಕ್ತಿಯ ಹೆಗ್ಗುರುತಾಗಿದೆ ಎಂದರು. ಬಾಂಗ್ಲಾದೇಶದ ವಿದ್ಯಾರ್ಥಿಗಳನ್ನೂ ಒಳಗೊಂಡ ತಂಡವು ರೈಲ್ವೆ ಕಲ್ಲಿದ್ದಲು ವ್ಯಾಗನ್‌ಗಳ ಗರಿಷ್ಠ ಸಾಮರ್ಥ್ಯ ಬಳಕೆ ವಿಚಾರದಲ್ಲಿ ವಿಚಾರದಲ್ಲಿ ತಮ್ಮ ಹೊಸ ಸಂಶೋಧನೆಯ ಬಗ್ಗೆ ಪ್ರಧಾನಿಯವರಿಗೆ ಮಾಹಿತಿ ನೀಡಿತು. ಸಾಮರ್ಥ್ಯಕ್ಕಿಂತ ಕಡಿಮೆ ಅಥವಾ ಸಾಮರ್ಥ್ಯ ಮೀರಿದ ಲೋಡ್‌ನೊಂದಿಗೆ ರೈಲ್ವೆ ವ್ಯಾಗನ್‌ಗಳ ಸಂಚಾರದಿಂದ ಉಂಟಾಗುತ್ತಿರುವ ನಷ್ಟ/ದಂಡದ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಿರುವುದಾಗಿ ತಂಡವು ಮಾಹಿತಿ ನೀಡಿತು. ಇದಕ್ಕೆ ಪರಿಹಾರವಾಗಿ, ಈ ತಂಡವು ʻಇಂಟೆರ್ನೆಟ್‌ ಆಫ್‌ ಥಿಂಗ್ಸ್‌ʼ(ಐಒಟಿ) ಮತ್ತು ʻಕೃತಕ ಬುದ್ಧಿಮತ್ತೆʼ (ಎಐ) ಆಧಾರಿತ ತಂತ್ರಜ್ಞಾನಗಳನ್ನು ಬಳಸುತ್ತಿದೆ. ಈ ತಂಡವು ಬಾಂಗ್ಲಾದೇಶ ಮತ್ತು ಭಾರತದಿಂದ ತಲಾ 3 ಮಂದಿ ಸೇರಿದಂತೆ ಒಟ್ಟು  ಸದಸ್ಯರನ್ನು ಒಳಗೊಂಡಿದೆ. ಪರಿವರ್ತನಾತ್ಮಕ ಹಂತಕ್ಕೆ ಸಾಗುತ್ತಿರುವ ಭಾರತೀಯ ರೈಲ್ವೆಗೆ ಈ ತಂಡದ ಪ್ರಯತ್ನದಿಂದ ಲಾಭವಾಗಲಿದೆ ಎಂಬ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದರು. ಸರಕು-ಸಾಗಣೆಯು ಗಮನ ಹರಿಸಬೇಕಾದ ಕ್ಷೇತ್ರವಾಗಿದೆ ಎಂದು ಮಾಹಿತಿ ಹೇಳಿದ ಅವರು, ಭವಿಷ್ಯದಲ್ಲಿ ಬಾಂಗ್ಲಾದೇಶದಿಂದ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಭಾರತಕ್ಕೆ ಬರುವರೆಂಬ ಆಶಯ ವ್ಯಕ್ತಪಡಿಸಿದರು.  'ಸ್ಟಡಿ ಇನ್ ಇಂಡಿಯಾ' ಕಾರ್ಯಕ್ರಮವು ಅಂತಹ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ ಎಂದು ಪ್ರಧಾನಿ ಹೇಳಿದರು.

ಅಹಮದಾಬಾದ್‌ನ ʻಗುಜರಾತ್ ತಾಂತ್ರಿಕ ವಿಶ್ವವಿದ್ಯಾಲʼಯದ ಶ್ರೀಮತಿ ತಿವಾರಿ, ಹರ್ಷಿತಾ ಎಸ್ ಮತ್ತು ಶ್ರೀ ಜೆತ್ವಾ ಜಯ್ ಪಿ. ಅವರು ಚಂದ್ರನ ಮೇಲಿನ ಅಪಾಯದ ಸ್ಥಳಗಳ ನಕ್ಷೆಯನ್ನು ರಚಿಸುವ ಯೋಜನೆಗೆ ಕೊಡುಗೆ ನೀಡಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಸೋಧನಾ ಸಂಸ್ಥೆಯ(ಇಸ್ರೋ) ʻಮೂನ್‌ಲ್ಯಾಂಡರ್‌ʼ ಸ್ವೀಕರಿಸಿದ ಮಧ್ಯಮ-ರೆಸಲ್ಯೂಶನ್ ಚಿತ್ರಗಳನ್ನು ʻಇಮೇಜ್ ಪ್ರೊಸೆಸಿಂಗ್ʼ ಮತ್ತು ʻಎಐʼ ಬಳಸಿ ಸೂಪರ್-ರೆಸಲ್ಯೂಶನ್ ಚಿತ್ರಗಳಾಗಿ ಪರಿವರ್ತಿಸುವ, ಚಿತ್ರಗಳನ್ನು ಸುಧಾರಿಸುವ ಯೋಜನೆಯಲ್ಲಿ ಇವರು ಕೆಲಸ ಮಾಡಿದ್ದಾರೆ. ಈ ಯೋಜನೆಯು ಫಲವಾಗಿ, ಭವಿಷ್ಯದ ಕಾರ್ಯಾಚರಣೆಗಳಿಗೆ ಸುರಕ್ಷಿತ ಲ್ಯಾಂಡಿಂಗ್ ಸ್ಥಳ ಮತ್ತು ನ್ಯಾವಿಗೇಷನ್ ಮಾರ್ಗವನ್ನು ನಿರ್ಧರಿಸಲು ಸಹಾಯಕವಾಗಲಿದೆ. ದೇಶದ ವಿವಿಧ ಬಾಹ್ಯಾಕಾಶ ನವೋದ್ಯಮಗಳ ಜೊತೆಗೆ ʻಇಸ್ರೋʼ ತಂಡದಿಂದಲೂ ಸಲಹೆ ಮತ್ತು ಮಾರ್ಗದರ್ಶನ ಪಡೆಯುವಂತೆ ಪ್ರಧಾನಿ ಇವರಿಗೆ ಸಲಹೆ ನೀಡಿದರು. ʻಚಂದ್ರಯಾನ-3ʼರ ಯಶಸ್ಸಿನ ನಂತರ ಭಾರತದ ಬಾಹ್ಯಾಕಾಶ ಕಾರ್ಯಕ್ರಮವು ಜಗತ್ತಿಗೆ ಭರವಸೆಯ ಆಶಾಕಿರಣವಾಗಿದೆ, ಭಾರತದ ಬಗ್ಗೆ ಇತರೆ ರಾಷ್ಟ್ರಗಳ ದೃಷ್ಟಿಕೋನವನ್ನು ಬದಲಾಯಿಸಿದೆ ಎಂದು ಪ್ರಧಾನಿ ಹೇಳಿದರು. ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಕೊಡುಗೆ ನೀಡಲು ಬಯಸುವ ಯುವಕರಿಗೆ ಪ್ರಸ್ತುತ ಯುಗವು ಅತ್ಯಂತ ಸೂಕ್ತ ಸಮಯವಾಗಿದೆ ಎಂದು ಒತ್ತಿ ಹೇಳಿದ ಅವರು, ಯುವಕರು ಅಭಿವೃದ್ಧಿ ಹೊಂದಲು ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿ ವಲಯಕ್ಕೆ ಮುಕ್ತಗೊಳಿಸಲಾಗಿದೆ ಎಂದು ಉಲ್ಲೇಖಿಸಿದರು. ಹೊಸ ಯುಗದ ನವೋದ್ಯಮಗಳಿಗೆ ಇಸ್ರೋ ತನ್ನ ಸೌಲಭ್ಯಗಳನ್ನು ಮುಕ್ತಗೊಳಿಸುತ್ತಿರುವುದನ್ನು ಪ್ರಸ್ತಾಪಿಸಿದ ಅವರು, ಅಹಮದಾಬಾದ್‌ನಲ್ಲಿರುವ ʻಇನ್-ಸ್ಪೇಸ್ʼ ಪ್ರಧಾನ ಕಚೇರಿಗೆ ಭೇಟಿ ನೀಡುವಂತೆ ಸಲಹೆ ನೀಡಿದರು.

ಒಡಿಶಾದ ಸಂಬಲ್‌ಪುರದ ʻವೀರ್ ಸುರೇಂದ್ರ ಸಾಯಿ ತಾಂತ್ರಿಕ ವಿಶ್ವವಿದ್ಯಾಲಯʼದ ಅಂಕಿತ್ ಕುಮಾರ್ ಮತ್ತು ಸೈಯದ್ ಸಿದ್ದಿಕಿ ಹುಸೇನ್ ಅವರು ಮಕ್ಕಳ ಮಾನಸಿಕ ಆರೋಗ್ಯ ಕುರಿತಾದ ʻಓಪನ್ ಇನ್ನೋವೇಶನ್ʼ ಮೇಲೆ ಕೆಲಸ ಮಾಡಿದ್ದಾರೆ. ಪೋಷಕರು ಮತ್ತು ವೈದ್ಯಕೀಯ ವೃತ್ತಿಪರರಿಗೆ ಮುಂಚಿತವಾಗಿ ಎಚ್ಚರಿಕೆ ನೀಡುವ ಮೂಲಕ ಅವರಿಗೆ ನೆರವಾಗುವ ʻರೇಟಿಂಗ್ʼ ಅನ್ನು ಸೃಷ್ಟಿಸಿದ್ದಾರೆ. ಪ್ರಧಾನಮಂತ್ರಿಯವರ ಒತ್ತಾಯದ ಮೇರೆಗೆ, ತಂಡದ ಮಹಿಳಾ ಸದಸ್ಯೆಯೊಬ್ಬರು ಯೋಜನೆಯ ಬಗ್ಗೆ ಪ್ರಧಾನಿಯವರಿಗೆ ವಿವರಿಸಿದರು. ಮಹತ್ವದ ಕ್ಷೇತ್ರವನ್ನು ಕೈಗೆತ್ತಿಕೊಂಡಿದ್ದಕ್ಕಾಗಿ ತಂಡವನ್ನು ಅಭಿನಂದಿಸಿದ ಪ್ರಧಾನಮಂತ್ರಿಯವರು, ಯುವ ಜನಸಂಖ್ಯೆಯಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆಯ ಬಗ್ಗೆ ವಿವರಿಸಿದರು ಮತ್ತು ಶಿಕ್ಷಣ ಇಲಾಖೆಯು ಇಂತಹ ವಿಷಯಗಳ ಬಗ್ಗೆ ಕೆಲಸ ಮಾಡುವ ಮಹತ್ವವನ್ನು ಒತ್ತಿ ಹೇಳಿದರು. ಈ  ಯೋಜನೆ ಮೂಲಕ ಕಂಡುಹಿಡಿದ ಪರಿಹಾರವನ್ನು ಶಿಕ್ಷಣ ಸಂಸ್ಥೆಗಳಲ್ಲಿ ನಿಯೋಜಿಸಲು ಮಾರ್ಗಗಳನ್ನು ಅನ್ವೇಷಿಸುವ ಮಹತ್ವವನ್ನು ಪ್ರಧಾನಿ ಒತ್ತಿ ಹೇಳಿದರು. "ಭಾರತವನ್ನು ʻವಿಕಸಿತʼ ಮಾಡಲು ಯುವಕರ ಮಾನಸಿಕ ಆರೋಗ್ಯ ಮುಖ್ಯ," ಎಂದು ಹೇಳಿದ ಪ್ರಧಾನಿ, ʻಮೈ-ಇಂಡಿಯಾʼ ಪೋರ್ಟಲ್ ಬಗ್ಗೆಯೂ ಉಲ್ಲೇಖಿಸಿದರು.

ಅಸ್ಸಾಂನ ಗುವಾಹಟಿಯ ʻಅಸ್ಸಾಂ ರಾಯಲ್ ಗ್ಲೋಬಲ್ ವಿಶ್ವವಿದ್ಯಾಲಯʼದ ಶ್ರೀಮತಿ ರೇಷ್ಮಾ ಮಸ್ತುತಾ ಅವರು ʻಎಐʼ ಸಾಧನ ʻಭಾಷಿನಿʼ ಬಳಸಿ ಪ್ರಧಾನಮಂತ್ರಿಯವರೊಂದಿಗೆ ಸಂವಾದ ನಡೆಸಿದರು. ನೈಜ-ಸಮಯದ ಅನುವಾದಕ್ಕಾಗಿ ʻಭಾಷಿನಿʼ ಸಾಧನವನ್ನು ಅಂತಹ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಬಳಸಲಾಯಿತು. ದಕ್ಷಿಣ ಭಾರತದಿಂದ ಬಂದಿರುವ ಶ್ರೀಮತಿ ರೇಷ್ಮಾ ಮತ್ತು ಅವರ ತಂಡವು ʻಏಕ ಭಾರತ-ಶ್ರೇಷ್ಠ ಭಾರತʼದ ನೈಜ ರಾಯಭಾರಿಗಳು ಎಂದು ಪ್ರಧಾನಿ ಒತ್ತಿ ಹೇಳಿದರು. ರೇಷ್ಮಾ ಅವರ ತಂಡವು ವೆಬ್ ತಂತ್ರಾಂಶವನ್ನು ಬಳಸಿಕೊಂಡು, ಜಲವಿದ್ಯುತ್ ಸ್ಥಾವರಗಳಲ್ಲಿ ಬಳಸುವ ಸಾಧನೆಗಳ ʻಇನ್‌ಪುಟ್‌ʼ ಆಧಾರಿತ ʻಎಐʼ ಸೃಜಿತ ವಿನ್ಯಾಸಗಳನ್ನು ಅಭಿವೃದ್ಧಿಪಡಿಸುವಲ್ಲಿ ಕೆಲಸ ಮಾಡಿದೆ. ಆ ಮೂಲಕ ಭಾರತವು ಇಂಧನದಲ್ಲಿ ಸ್ವಾವಲಂಬಿ ರಾಷ್ಟ್ರವಾಗಲು ಹಾಗೂ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ನೆರವಾಗಿದೆ. ವಿದ್ಯುತ್ ವಲಯವನ್ನು ಕೃತಕ ಬುದ್ಧಿಮತ್ತೆಯೊಂದಿಗೆ ಸಂಪರ್ಕಿಸುವ ಮಾರ್ಗಗಳನ್ನು ಕಂಡುಹಿಡಿಯಬೇಕೆಂದು ಪ್ರಧಾನಿ ಒತ್ತಿ ಹೇಳಿದರು. ಏಕೆಂದರೆ ಇವೆರಡೂ ʻವಿಕಸಿತ ಭಾರತʼಕ್ಕೆ ಅತ್ಯಂತ ಮುಖ್ಯ ಮತ್ತು ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ನಿರ್ಣಾಯಕವಾಗಿವೆ ಎಂದರು. ಬಳಕೆಯ ಮೇಲಿನ ನಿಗಾ ಮೂಲಕ ವಿದ್ಯುತ್ ಉತ್ಪಾದನೆ ಮತ್ತು ವಿದ್ಯುತ್ ಪ್ರಸರಣದಲ್ಲಿ ʻಎಐʼ ಆಧಾರಿತ ಪರಿಹಾರಗಳನ್ನು ಬಳಸಿಕೊಂಡು ದಕ್ಷತೆಯನ್ನು ಸಾಧಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಕಳೆದ ವರ್ಷಗಳಲ್ಲಿ ಪ್ರತಿ ಹಳ್ಳಿ ಮತ್ತು ಕುಟುಂಬಕ್ಕೆ ವಿದ್ಯುತ್ ತಲುಪಿಸುವಲ್ಲಿ ಸರ್ಕಾರದ ಸಾಧನೆಯ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿದ ಪ್ರಧಾನಿ ಮೋದಿ ಅವರು ಕೃಷಿ ಕ್ಷೇತ್ರಗಳಲ್ಲಿ ಸಣ್ಣ ಪ್ರಮಾಣದ ಸೌರ ಸ್ಥಾವರಗಳು ಹಾಗೂ ಪಟ್ಟಣಗಳಲ್ಲಿ ಮೇಲ್ಛಾವಣಿ ಸೌರ ಸ್ಥಾವರಗಳ ಬಗ್ಗೆ ಸರ್ಕಾರ ಹೆಚ್ಚು ಗಮನ ಹರಿಸುತ್ತಿರುವುದಾಗಿ ಮಾಹಿತಿ ನೀಡಿದರು. ಇದಕ್ಕೆ ʻಎಐʼ ಪರಿಹಾರಗಳನ್ನು ಕಂಡುಹಿಡಿಯಲು ಸಲಹೆ ನೀಡಿದರು. ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡುವಂತೆ ಅವರು ವಿನಂತಿಸಿದರು.

ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ʻನೋಯ್ಡಾ ಇನ್ಸ್‌ಟಿಟ್ಯೂಟ್‌ ಆಫ್ ಎಂಜಿನಿಯರಿಂಗ್ ಆಂಡ್‌ ಟೆಕ್ನಾಲಜಿʼಯ ಶ್ರೀ ರಿಷಭ್ ಎಸ್ ವಿಶ್ವಾಮಿತ್ರ ಅವರು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ʻಫಿಶಿಂಗ್ ಡೊಮೇನ್‌ʼಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ  ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆಯ (ಎನ್‌ಟಿಆರ್‌ಒ) ʻಬ್ಲಾಕ್‌ಚೈನ್‌ʼ ಮತ್ತು ʻಸೈಬರ್ ಸೆಕ್ಯುರಿಟಿʼ ಪರಿಹಾರಗಳಿಗಾಗಿ ಮೇಲೆ ಕೆಲಸ ಮಾಡಿದ್ದಾರೆ. ಸೈಬರ್ ವಂಚನೆಯ ನಿರಂತರವಾಗಿ ವಿಕಸನಗೊಳ್ಳುತ್ತಿರುವ ಸವಾಲುಗಳ ಬಗ್ಗೆ ಮಾತನಾಡಿದ ಪ್ರಧಾನಿ, ಹೊಸ ತಂತ್ರಜ್ಞಾನಗಳ ಹಿನ್ನೆಲೆಯಲ್ಲಿ ಹೆಚ್ಚಿನ ಜಾಗರೂಕತೆಯ ಅಗತ್ಯವನ್ನು ಒತ್ತಿ ಹೇಳಿದರು. ಕೃತಕ ಬುದ್ಧಿಮತ್ತೆಯ ಆಳವಾದ ನಕಲಿ ವೀಡಿಯೊಗಳನ್ನು ಉಲ್ಲೇಖಿಸಿದ ಅವರು, ಯಾವುದೇ ಫೋಟೋ ಅಥವಾ ವೀಡಿಯೊವನ್ನು ನಂಬುವ ಮೊದಲು ಜಾಗರೂಕರಾಗಿರಬೇಕು ಎಂದು ಒತ್ತಿ ಹೇಳಿದರು. ʻಎಐʼಗಾಗಿ ಜಾಗತಿಕ ನೀತಿಯನ್ನು ರಚಿಸುವ ಭಾರತದ ಅಭಿಯಾನವನ್ನು ಅವರು ಉಲ್ಲೇಖಿಸಿದರು.

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ದೇಶದ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸಲು ಯುವ ಪೀಳಿಗೆಯ ಸಮರ್ಪಣಾ ಭಾವದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಹಿಂದಿನ ʻಹ್ಯಾಕಥಾನ್‌ʼಗಳ ಯಶಸ್ಸನ್ನು ಅವರು ಪುನರುಚ್ಚರಿಸಿದರು. ಈ ಹಿಂದಿನ ʻಹ್ಯಾಕಥಾನ್ʼಗಳಿಂದ ಹೊರಹೊಮ್ಮಿದ ನವೋದ್ಯಮಗಳು ಹಾಗೂ ಪರಿಹಾರೋಪಾಯಗಳು ಸರ್ಕಾರ ಮತ್ತು ಸಮಾಜಕ್ಕೆ ಸಹಾಯ ಮಾಡುತ್ತಿವೆ ಎಂದರು.

21 ನೇ ಶತಮಾನದ ಭಾರತದ ಮಂತ್ರವಾದ ʻಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಮತ್ತು ಜೈ ಅನುಸಂಧಾನ್ʼ ಅನ್ನು ಸ್ಮರಿಸಿದ ಪ್ರಧಾನಿ ಮೋದಿ, ಪ್ರತಿಯೊಬ್ಬ ಭಾರತೀಯರೂ ಜಡತ್ವವನ್ನು ತ್ಯಜಿಸುತ್ತಿದ್ದಾರೆ ಎಂದು ಹೇಳಿದರು. ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಭಾರತದ ಹೊರಹೊಮ್ಮಲಿದೆ ಎಂದು ಉಲ್ಲೇಖಿಸಿದ ಪ್ರಧಾನಿ, ಭಾರತದ ʻಯುಪಿಐʼ ಯಶಸ್ಸು, ಸಾಂಕ್ರಾಮಿಕ ಸಮಯದಲ್ಲಿ ಲಸಿಕೆ ಯಶಸ್ಸಿನ ಬಗ್ಗೆಯೂ ಮಾತನಾಡಿದರು.

ಯುವ ಸಂಶೋಧಕರು ಮತ್ತು ಡೊಮೇನ್ ತಜ್ಞರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮುಂದಿನ ಒಂದು ಸಾವಿರ ವರ್ಷಗಳ ದಿಕ್ಕನ್ನು ನಿರ್ಧರಿಸುವ ಪ್ರಸ್ತುತ ಸಮಯದ ಮಹತ್ವವನ್ನು ಪುನರುಚ್ಚರಿಸಿದರು. ಭಾರತವು ವಿಶ್ವದ ಅತ್ಯಂತ ಕಿರಿಯ ದೇಶಗಳಲ್ಲಿ ಒಂದಾಗಿರುವುದು, ದೇಶದ ಪ್ರತಿಭಾ ಪಡೆ, ಸ್ಥಿರ ಮತ್ತು ಬಲವಾದ ಸರ್ಕಾರ, ಪ್ರವರ್ಧಮಾನಕ್ಕೆ ಬರುತ್ತಿರುವ ಆರ್ಥಿಕತೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಅಭೂತಪೂರ್ವ ಒತ್ತು ಮುಂತಾದ ಅನೇಕ ಅಂಶಗಳು ಒಗ್ಗೂಡಿರುವುದರಿಂದ ಪ್ರಸ್ತುತ ಸಮಯದ ಅನನ್ಯತೆಯನ್ನು ಅರ್ಥಮಾಡಿಕೊಳ್ಳುವಂತೆ ಪ್ರಧಾನಿ ಹೇಳಿದರು.

"ತಂತ್ರಜ್ಞಾನ ಇಂದು ನಮ್ಮ ಜೀವನದ ದೊಡ್ಡ ಭಾಗವಾಗಿದೆ," ಎಂದು ಪ್ರಧಾನಿ ಒತ್ತಿ ಹೇಳಿದರು. ಯುವ ಆವಿಷ್ಕಾರಕರ ಪಾತ್ರವನ್ನು ಒತ್ತಿ ಹೇಳಿದ ಅವರು, ಜನರು ಹೊಸದಕ್ಕೆ ಒಗ್ಗಿಕೊಳ್ಳಲು ಪ್ರಾರಂಭಿಸಿದಾಗ ತಂತ್ರಜ್ಞಾನದ ನವೀಕರಿಸಿದ ಆವೃತ್ತಿಯು ಹೊರಬರುತ್ತದೆ ಎಂದು ಗಮನಸೆಳೆದರು.

ಭಾರತದ ʻಅಮೃತಕಾಲʼದ ಮುಂದಿನ 25 ವರ್ಷಗಳು ಯುವ ಆವಿಷ್ಕಾರಕರಿಗೆ ನಿರ್ಣಾಯಕ ಅವಧಿಯಾಗಲಿದೆ ಎಂದು ಪ್ರಧಾನಿ ಪುನರುಚ್ಚರಿಸಿದರು. ಸ್ವಾವಲಂಬಿ ಭಾರತದ ಸಾಮಾನ್ಯ ಗುರಿಯನ್ನು ಒತ್ತಿಹೇಳಿದ ಅವರು, ಯಾವುದೇ ಹೊಸದನ್ನು ಆಮದು ಮಾಡಿಕೊಳ್ಳದ ಹಾಗೂ ಇತರ ರಾಷ್ಟ್ರಗಳ ಮೇಲೆ ಅವಲಂಬಿತರಾಗದಿರುವ ಉದ್ದೇಶವನ್ನು ಪ್ರತಿಪಾದಿಸಿದರು. ಸ್ವಾವಲಂಬನೆಯತ್ತ ಕೆಲಸ ಮಾಡುತ್ತಿರುವ ರಕ್ಷಣಾ ಕ್ಷೇತ್ರದ ಉದಾಹರಣೆಯನ್ನು ನೀಡಿದ ಅವರು, ಭಾರತವು ಕೆಲವು ರಕ್ಷಣಾ ತಂತ್ರಜ್ಞಾನಗಳನ್ನು ಆಮದು ಮಾಡಿಕೊಳ್ಳಲು ಒತ್ತಾಯಿಸಲಾಗುತ್ತಿದೆ ಎಂದು ಗಮನಸೆಳೆದರು. ಅರೆವಾಹಕ ಮತ್ತು ಚಿಪ್ ತಂತ್ರಜ್ಞಾನದಲ್ಲಿ ಸ್ವಾವಲಂಬನೆಯ ಅಗತ್ಯವನ್ನು ಅವರು ಒತ್ತಿ ಹೇಳಿದರು. ʻಕ್ವಾಂಟಮ್ ತಂತ್ರಜ್ಞಾನʼ ಮತ್ತು ಜಲಜನಕ ಇಂಧನ ಕ್ಷೇತ್ರಗಳಲ್ಲಿ ಭಾರತದ ಉನ್ನತ ಆಕಾಂಕ್ಷೆಗಳನ್ನು ಪಿಎಂ ಮೋದಿ ಒತ್ತಿ ಹೇಳಿದರು. 21ನೇ ಶತಮಾನದ ಆಧುನಿಕ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವ ಮೂಲಕ ಸರ್ಕಾರವು ಅಂತಹ ಎಲ್ಲಾ ಕ್ಷೇತ್ರಗಳಿಗೆ ವಿಶೇಷ ಒತ್ತು ನೀಡುತ್ತಿದೆ. ಆದರೆ ಅದರ ಯಶಸ್ಸು ಯುವಕರ ಯಶಸ್ಸಿನ ಮೇಲೆ ಅವಲಂಬಿತವಾಗಿದೆ ಎಂದು ಅವರು ಹೇಳಿದರು.

“ಜಾಗತಿಕ ಸವಾಲುಗಳಿಗೆ ಭಾರತವು ಕಡಿಮೆ ವೆಚ್ಚದ, ಗುಣಮಟ್ಟದ, ಸುಸ್ಥಿರ ಮತ್ತು ದೊಡ್ಡ ಮಟ್ಟದ ಪರಿಹಾರಗಳನ್ನು ಕಂಡುಕೊಳ್ಳುತ್ತದೆ ಎಂಬ ವಿಶ್ವಾಸವನ್ನು ಜಗತ್ತು ಹೊಂದಿದೆ. ನಮ್ಮ ʻಚಂದ್ರಯಾನʼ ಯೋಜನೆಯು ವಿಶ್ವದ ನಿರೀಕ್ಷೆಗಳನ್ನು ಅನೇಕ ಪಟ್ಟು ಹೆಚ್ಚಿಸಿದೆ," ಎಂದು ಯುವ ಆವಿಷ್ಕಾರಕರಿಗೆ ಪ್ರಧಾನಿ ಮೋದಿ ಹೇಳಿದರು. ಅದಕ್ಕೆ ಅನುಗುಣವಾಗಿ ಆವಿಷ್ಕಾರ ಮಾಡುವಂತೆ ಮನವಿ ಮಾಡಿದರು. ʻಹ್ಯಾಕಥಾನ್ʼನ ಗುರಿಯನ್ನು ವಿವರಿಸಿದ ಪ್ರಧಾನಮಂತ್ರಿಯವರು, "ದೇಶದ ಸಮಸ್ಯೆಗಳನ್ನು ಪರಿಹರಿಸುವುದು ಮತ್ತು ಪರಿಹಾರಗಳ ಮೂಲಕ ಉದ್ಯೋಗವನ್ನು ಸೃಷ್ಟಿಸುವುದು ʻಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌ʼನ ಉದ್ದೇಶವಾಗಿದೆ. ʻಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ʼ ಮೂಲಕ, ದೇಶದ ಯುವ ಶಕ್ತಿಯು ʻಅಭಿವೃದ್ಧಿ ಹೊಂದಿದ ಭಾರತʼಕ್ಕಾಗಿ ಪರಿಹಾರಗಳ ಅಮೃತವನ್ನು ಹೊರತೆಗೆಯುತ್ತಿದೆ,ʼʼ ಎಂದು ಬಣ್ಣಿಸಿದರು. ರಾಷ್ಟ್ರದ ಯುವ ಶಕ್ತಿಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಾಗ ವಿಕಸಿತ ಭಾರತದ ಸಂಕಲ್ಪವನ್ನು ಮನಸ್ಸಿನಲ್ಲಿಟ್ಟುಕೊಳ್ಳುವಂತೆ ತಿಳಿಸಿದರು. "ನೀವು ಏನೇ ಮಾಡಿದರೂ, ಅದು ಅತ್ಯುತ್ತಮವಾಗಿರಲಿ. ಜಗತ್ತು ನಿಮ್ಮನ್ನು ಅನುಸರಿಸುವಂತಹ ಕೆಲಸವನ್ನು ನೀವು ಮಾಡಬೇಕು," ಎಂದು ಪ್ರಧಾನಿ ಮೋದಿ ಹೇಳಿದರು.

ಕೇಂದ್ರ ಶಿಕ್ಷಣ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ವರ್ಚುವಲ್ ಮೂಲಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಯುವಜನತೆಯ ನೇತೃತ್ವದಲ್ಲಿ ಅಭಿವೃದ್ಧಿ ಸಾಧಿಸುವ ಪ್ರಧಾನ ಮಂತ್ರಿಯವರ ಆಶಯಕ್ಕೆ ಅನುಗುಣವಾಗಿ, ʻಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ʼ(ಎಸ್ಐಎಚ್) ಎಂಬ ರಾಷ್ಟ್ರವ್ಯಾಪಿ ಉಪಕ್ರಮ ಕೈಗೊಳ್ಳಲಾಗಿದೆ.  ಸರ್ಕಾರದ ಸಚಿವಾಲಯಗಳು ಮತ್ತು ಇಲಾಖೆಗಳು, ಕೈಗಾರಿಕೆಗಳು ಮತ್ತು ಇತರ ಸಂಸ್ಥೆಗಳ ಒತ್ತಡದ ಸಮಸ್ಯೆಗಳನ್ನು ಪರಿಹರಿಸಲು ವಿದ್ಯಾರ್ಥಿಗಳಿಗೆ ಇದು ವೇದಿಕೆಯನ್ನು ಒದಗಿಸುತ್ತದೆ. 2017ರಲ್ಲಿ ಪ್ರಾರಂಭವಾದ ʻಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ʼ, ಯುವ ಆವಿಷ್ಕಾರಕರಲ್ಲಿ ಭಾರಿ ಜನಪ್ರಿಯತೆಯನ್ನು ಗಳಿಸಿದೆ. ಕಳೆದ ಐದು ಆವೃತ್ತಿಗಳಲ್ಲಿ, ವಿವಿಧ ಕ್ಷೇತ್ರಗಳಲ್ಲಿ ನವೀನ ಪರಿಹಾರಗಳು ಹೊರಹೊಮ್ಮಿವೆ ಮತ್ತು ಅವು ನವೋದ್ಯಮಗಳ ರೂಪ ತಾಳಿವೆ.

ಈ ವರ್ಷ, ʻಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌ʼನ ಗ್ರ್ಯಾಂಡ್ ಫಿನಾಲೆಯು ಡಿಸೆಂಬರ್ 19 ರಿಂದ 23ರವರೆಗೆ ನಡೆಯಲಿದೆ. ʻಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌-2023ʼರಲ್ಲಿ, 44,000 ತಂಡಗಳಿಂದ 50,000 ಕ್ಕೂ ಹೆಚ್ಚು ಆಲೋಚನೆಗಳನ್ನು ಸ್ವೀಕರಿಸಲಾಗಿದೆ. ಇದು ಹ್ಯಾಕಥಾನ್‌ನ ಮೊದಲ ಆವೃತ್ತಿಗೆ ಹೋಲಿಸಿದರೆ ಸುಮಾರು ಏಳು ಪಟ್ಟು ಅಧಿಕವೆನಿಸಿದೆ. ದೇಶಾದ್ಯಂತ 48 ನೋಡಲ್ ಕೇಂದ್ರಗಳಲ್ಲಿ ನಡೆಯಲಿರುವ ʻಗ್ರ್ಯಾಂಡ್ ಫಿನಾಲೆʼಯಲ್ಲಿ 12,000ಕ್ಕೂ ಹೆಚ್ಚು ಭಾಗಿದಾರರು ಮತ್ತು 2500ಕ್ಕೂ ಹೆಚ್ಚು ಮಾರ್ಗದರ್ಶಕರು ಪಾಲ್ಗೊಳ್ಳಲಿದ್ದಾರೆ. ಬಾಹ್ಯಾಕಾಶ ತಂತ್ರಜ್ಞಾನ, ಸ್ಮಾರ್ಟ್ ಶಿಕ್ಷಣ, ವಿಪತ್ತು ನಿರ್ವಹಣೆ, ರೊಬೊಟಿಕ್ಸ್ ಮತ್ತು ಡ್ರೋನ್‌ಗಳು, ಪರಂಪರೆ ಮತ್ತು ಸಂಸ್ಕೃತಿ ಸೇರಿದಂತೆ ವಿವಿಧ ವಿಷಯಗಳಲ್ಲಿ ಪರಿಹಾರಗಳನ್ನು ಒದಗಿಸಲು ಈ ವರ್ಷ ʻಗ್ರ್ಯಾಂಡ್ ಫಿನಾಲೆʼಗೆ ಒಟ್ಟು 1,282 ತಂಡಗಳನ್ನು ಅಂತಿಮಗೊಳಿಸಲಾಗಿದೆ.

ಇದರಲ್ಲಿ ಭಾಗವಹಿಸುವ ತಂಡಗಳು 25 ಕೇಂದ್ರ ಸಚಿವರು ಮತ್ತು ರಾಜ್ಯ ಸರ್ಕಾರಗಳ 51 ಇಲಾಖೆಗಳು ಪಟ್ಟಿ ಮಾಡಿದ 231 ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುತ್ತವೆ (176 ಸಾಫ್ಟ್‌ವೇರ್‌ ಮತ್ತು 55 ಹಾರ್ಡ್ವೇರ್). ʻಸ್ಮಾರ್ಟ್ ಇಂಡಿಯಾ ಹ್ಯಾಕಥಾನ್-2023ʼರ ಒಟ್ಟು ಬಹುಮಾನವು 2 ಕೋಟಿ ರೂ.ಗಿಂತ ಹೆಚ್ಚಾಗಿದೆ, ಇಲ್ಲಿ ಪ್ರತಿ ವಿಜೇತ ತಂಡಕ್ಕೆ ಪ್ರತಿ ಸಮಸ್ಯೆಯ ಪರಿಹಾರಕ್ಕೆ 1 ಲಕ್ಷ ರೂ.ಗಳ ನಗದು ಬಹುಮಾನವನ್ನು ನೀಡಲಾಗುವುದು.

 

 

***


(Release ID: 1988682) Visitor Counter : 69