ರಾಷ್ಟ್ರಪತಿಗಳ ಕಾರ್ಯಾಲಯ
ಮಹಾತ್ಮಾ ಗಾಂಧಿ ಕಾಶಿ ವಿದ್ಯಾಪೀಠದ 45ನೇ ಘಟಿಕೋತ್ಸವ ಉದ್ದೇಶಿಸಿ ರಾಷ್ಟ್ರಪತಿ ಭಾಷಣ
Posted On:
11 DEC 2023 2:07PM by PIB Bengaluru
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಡಿಸೆಂಬರ್ 11, 2023) ವಾರಣಾಸಿಯಲ್ಲಿ ನಡೆದ ಮಹಾತ್ಮ ಗಾಂಧಿ ಕಾಶಿ ವಿದ್ಯಾಪೀಠದ 45ನೇ ಘಟಿಕೋತ್ಸವವನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂಸ್ಥೆಯೊಂದಿಗೆ ಇಬ್ಬರು ಭಾರತ ರತ್ನಗಳ ಸಂಬಂಧ ಇರುವುದು ಮಹಾತ್ಮ ಗಾಂಧಿ ಕಾಶಿ ವಿದ್ಯಾಪೀಠದ ಭವ್ಯ ಪರಂಪರೆಗೆ ಸಾಕ್ಷಿಯಾಗಿದೆ. ಭಾರತರತ್ನ ಡಾ. ಭಗವಾನ್ ದಾಸ್ ಅವರು ಈ ವಿದ್ಯಾಪೀಠದ ಮೊದಲ ಉಪಕುಲಪತಿಗಳಾಗಿದ್ದರು ಮತ್ತು ಮಾಜಿ ಪ್ರಧಾನಿ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಈ ಸಂಸ್ಥೆಯ ಮೊದಲ ಬ್ಯಾಚ್‌ನ ವಿದ್ಯಾರ್ಥಿಯಾಗಿದ್ದರು. ಈ ಸಂಸ್ಥೆಯ ವಿದ್ಯಾರ್ಥಿಗಳು ತಮ್ಮ ನಡವಳಿಕೆಯಲ್ಲಿ ಶಾಸ್ತ್ರಿಯವರ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಗಾಂಧೀಜಿಯವರು ರೂಪಿಸಿದ ಸ್ವಾವಲಂಬನೆ ಮತ್ತು ಸ್ವರಾಜ್ಯದ ಗುರಿಗಳೊಂದಿಗೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಗುವ 26 ವರ್ಷಗಳ ಹಿಂದೆಯೇ ಈ ವಿದ್ಯಾಪೀಠದ ಪಯಣ ಆರಂಭವಾಯಿತು ಎಂದು ರಾಷ್ಟ್ರಪತಿಗಳು ತಿಳಿಸಿದರು. ಈ ವಿಶ್ವವಿದ್ಯಾನಿಲಯವು ಅಸಹಕಾರ ಚಳವಳಿಯಿಂದ ಹುಟ್ಟಿದ ಸಂಸ್ಥೆಯಾಗಿ ನಮ್ಮ ಮಹಾನ್ ಸ್ವಾತಂತ್ರ್ಯ ಹೋರಾಟದ ಜೀವಂತ ಸಂಕೇತವಾಗಿದೆ. ಮಹಾತ್ಮಾ ಗಾಂಧಿ ಕಾಶಿ ವಿದ್ಯಾಪೀಠದ ಎಲ್ಲ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟದ ನಮ್ಮ ರಾಷ್ಟ್ರೀಯ ಆದರ್ಶಗಳ ಧ್ವಜಧಾರಿಗಳಾಗಿದ್ದಾರೆ ಎಂದು ಅವರು ಹೇಳಿದರು.
ಕಾಶಿ ವಿದ್ಯಾಪೀಠಕ್ಕೆ ಮಹಾತ್ಮಾ ಗಾಂಧಿ ಕಾಶಿ ವಿದ್ಯಾಪೀಠ ಎಂದು ನಾಮಕರಣ ಮಾಡುವುದರ ಹಿಂದಿನ ಉದ್ದೇಶ ನಮ್ಮ ಸ್ವಾತಂತ್ರ್ಯ ಹೋರಾಟದ ಆದರ್ಶಗಳನ್ನು ಗೌರವಿಸುವುದಾಗಿದೆ ಎಂದು ರಾಷ್ಟ್ರಪತಿಗಳು ಹೇಳಿದರು. ಆ ಆದರ್ಶಗಳನ್ನು ಅನುಸರಿಸಿ ಮತ್ತು ಅಮೃತ ಕಾಲದ ಸಮಯದಲ್ಲಿ ದೇಶದ ಪ್ರಗತಿಗೆ ಪರಿಣಾಮಕಾರಿ ಕೊಡುಗೆ ನೀಡುವುದು ವಿದ್ಯಾಪೀಠದ ರಾಷ್ಟ್ರ ನಿರ್ಮಾಣದ ಸಂಸ್ಥಾಪಕರಿಗೆ ನಿಜವಾದ ಗೌರವವಾಗಿದೆ ಎಂದರು.
ಪುರಾತನ ಕಾಲದಿಂದಲೂ ವಾರಾಣಸಿ ಭಾರತೀಯ ಜ್ಞಾನ ಪರಂಪರೆಯ ಕೇಂದ್ರವಾಗಿದೆ. ಇಂದಿಗೂ, ಈ ನಗರದಲ್ಲಿನ ಸಂಸ್ಥೆಗಳು ಆಧುನಿಕ ಜ್ಞಾನ ಮತ್ತು ವಿಜ್ಞಾನದ ಪ್ರಚಾರದಲ್ಲಿ ಕೊಡುಗೆ ನೀಡುತ್ತಿವೆ. ಮಹಾತ್ಮಾ ಗಾಂಧಿ ಕಾಶಿ ವಿದ್ಯಾಪೀಠದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಜ್ಞಾನ ಕೇಂದ್ರದ ಸಂಪ್ರದಾಯಕ್ಕೆ ಅನುಗುಣವಾಗಿ ತಮ್ಮ ಸಂಸ್ಥೆಯ ವೈಭವವನ್ನು ಶ್ರೀಮಂತಗೊಳಿಸುವುದನ್ನು ಮುಂದುವರಿಸಬೇಕೆಂದು ಅವರು ಒತ್ತಾಯಿಸಿದರು.
ರಾಷ್ಟ್ರಪತಿಗಳ ಭಾಷಣವನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ..
****
(Release ID: 1984971)
Visitor Counter : 117