ರಾಷ್ಟ್ರಪತಿಗಳ ಕಾರ್ಯಾಲಯ

ರಾಷ್ಟ್ರಸಂತ ತುಕಾಡೋಜಿ ಮಹಾರಾಜ್ ನಾಗಪುರ ವಿಶ್ವವಿದ್ಯಾನಿಲಯದ 111 ನೇ ಘಟಿಕೋತ್ಸವದಲ್ಲಿ ಭಾರತದ ರಾಷ್ಟ್ರಪತಿಯವರು ಭಾಗವಹಿಸಿದರು

Posted On: 02 DEC 2023 12:32PM by PIB Bengaluru

ಮಹಾರಾಷ್ಟ್ರದ ನಾಗ್ಪುರದಲ್ಲಿ ಇಂದು (ಡಿಸೆಂಬರ್ 2, 2023)  ನಡೆದ ರಾಷ್ಟ್ರಸಂತ್ ತುಕಾಡೋಜಿ ಮಹಾರಾಜ್ ನಾಗ್ಪುರ ವಿಶ್ವವಿದ್ಯಾಲಯದ 111 ನೇ ಘಟಿಕೋತ್ಸವ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಭಾಗವಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಯವರು, “ಯಾವುದೇ ದೇಶದ ಅಭಿವೃದ್ಧಿಯಲ್ಲಿ ಸಂಶೋಧನೆ ಮತ್ತು ಆವಿಷ್ಕಾರಗಳು ಪ್ರಮುಖ ಪಾತ್ರವಹಿಸುತ್ತವೆ. ರಾಷ್ಟ್ರಸಂತ ತುಕಾಡೋಜಿ ಮಹಾರಾಜ್ ನಾಗ್ಪುರ ವಿಶ್ವವಿದ್ಯಾನಿಲಯವು ಸಂಶೋಧನೆ, ನಾವೀನ್ಯತೆ ಮತ್ತು ತಂತ್ರಜ್ಞಾನದ ಅಭಿವೃದ್ಧಿಯನ್ನು ಪ್ರೋತ್ಸಾಹಿಸುತ್ತಿದೆ. ಈ ವಿಶ್ವವಿದ್ಯಾನಿಲಯದ ಅಧ್ಯಾಪಕರಿಗೆ ಭಾರತೀಯ ಪೇಟೆಂಟ್ ಕಚೇರಿಯಿಂದ 60 ಕ್ಕೂ ಹೆಚ್ಚು ಪೇಟೆಂಟ್ಗಳನ್ನು ನೀಡಲಾಗಿದೆ. ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳಲ್ಲಿ ಸ್ಟಾರ್ಟ್-ಅಪ್ ಸಂಸ್ಕೃತಿಯನ್ನು ಉತ್ತೇಜಿಸಲು ಇನ್ಕ್ಯುಬೇಶನ್ ಕೇಂದ್ರವನ್ನು ಹೊಂದಿದೆ” ಎಂದು ಹೇಳಿದರು. ಸ್ಥಳೀಯ ಸಮಸ್ಯೆಗಳು ಮತ್ತು ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸಂಶೋಧನೆ ಮತ್ತು ಆವಿಷ್ಕಾರಗಳನ್ನು ಮಾಡಲು ಮತ್ತು ಆ ಆವಿಷ್ಕಾರಗಳನ್ನು ಕಾರ್ಯಗತಗೊಳಿಸಲು ಅವರು ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಸಲಹೆ ನೀಡಿದರು.

“ಇಂದು ಇಡೀ ವಿಶ್ವವೇ ಜಾಗತಿಕ ಗ್ರಾಮವಾಗಿದೆ. ಯಾವುದೇ ಸಂಸ್ಥೆಯು ಪ್ರಪಂಚದಿಂದ ದೂರವಿರಲು ಸಾಧ್ಯವಿಲ್ಲ. ಸಂಶೋಧನೆ ಮತ್ತು ನಾವೀನ್ಯತೆಗಳನ್ನು ಪರಸ್ಪರ ಹಂಚಿಕೊಳ್ಳುವ ಮೂಲಕ ಮಾತ್ರ ನಾವು ಪ್ರಪಂಚದ ಮುಂದೆ ಸವಾಲುಗಳನ್ನು ಎದುರಿಸಬಹುದು. ಅಂತರ-ಶಿಸ್ತಿನ ಅಧ್ಯಯನಗಳು ಮತ್ತು ಅಂತರರಾಷ್ಟ್ರೀಯ ಸಹಯೋಗವನ್ನು ಉತ್ತೇಜಿಸಲು ಅವರು ನಾಗ್ಪುರ ವಿಶ್ವವಿದ್ಯಾಲಯ ಕಾರ್ಯ ಕೈಗೊಳ್ಳಬೇಕು” ಎಂದು ರಾಷ್ಟ್ರಪತಿಯವರು ಹೇಳಿದರು.

ತಂತ್ರಜ್ಞಾನದ ಬಳಕೆಯ ಬಗ್ಗೆ ಮಾತನಾಡಿದ ರಾಷ್ಟ್ರಪತಿಯವರು, “ಯಾವುದೇ ಸಂಪನ್ಮೂಲವನ್ನು ಬಳಸಬಹುದು ಅಥವಾ ದುರುಪಯೋಗಪಡಿಸಿಕೊಳ್ಳಬಹುದು. ಸತ್ಯವು ತಂತ್ರಜ್ಞಾನಕ್ಕೂ ಅನ್ವಯಿಸುತ್ತದೆ. ಅದನ್ನು ಸರಿಯಾಗಿ ಬಳಸಿಕೊಂಡರೆ ದೇಶಕ್ಕೆ, ಸಮಾಜಕ್ಕೆ ಅನುಕೂಲವಾಗುತ್ತದೆ ಹಾಗೂ ದುರುಪಯೋಗಪಡಿಸಿಕೊಂಡರೆ ಮನುಕುಲಕ್ಕೆ ಹಾನಿಯಾಗುತ್ತದೆ. ಇಂದು ಕೃತಕ ಬುದ್ಧಿಮತ್ತೆಯ ಬಳಕೆಯು ನಮ್ಮ ಜೀವನವನ್ನು ಸುಲಭಗೊಳಿಸುತ್ತಿದೆ. ಆದರೆ ಇದನ್ನು ಡೀಪ್ಫೇಕ್ಗೆ ಬಳಸುವುದರಿಂದ ಸಮಾಜಕ್ಕೆ ಅಪಾಯವಿದೆ. ನೈತಿಕ ಶಿಕ್ಷಣ ನಮಗೆ ದಾರಿ ತೋರಿಸಬಲ್ಲದು ಎಂದು ಹೇಳಿದರು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಯವರು, “ಔಪಚಾರಿಕ ಪದವಿ ಪಡೆಯುವುದು ಶಿಕ್ಷಣದ ಅಂತ್ಯವಲ್ಲ. ಅವರು ಕುತೂಹಲದಿಂದ ಇರಬೇಕು ಮತ್ತು ಕಲಿಯುತ್ತಲೇ ಇರಬೇಕು. ಇಂದು, ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ಷಿಪ್ರ ಬದಲಾವಣೆಗಳು ಸಂಭವಿಸುತ್ತಿರುವಾಗ, ನಿರಂತರವಾಗಿ ಕಲಿಕೆಯನ್ನು ಮುಂದುವರಿಸುವುದು ಹೆಚ್ಚು ಮುಖ್ಯವಾಗಿದೆ” ಎಂದು ಹೇಳಿದರು.

ವಿದ್ಯಾರ್ಥಿಗಳು, ರಾಷ್ಟ್ರ ಮತ್ತು ಸಮಾಜದ ಆಸ್ತಿ ಎಂದು ಹೇಳಿದ ರಾಷ್ಟ್ರಪತಿಯವರು, “ಭಾರತದ ಭವಿಷ್ಯ ವಿದ್ಯಾರ್ಥಿಗಳ ಹೆಗಲ ಮೇಲೆ ನಿಂತಿದೆ. ವಿದ್ಯಾರ್ಥಿಗಳ ಜೀವನದಲ್ಲಿ ಪ್ರತಿಕೂಲ ಸಂದರ್ಭಗಳು ಬರಬಹುದು ಆದರೆ ವಿದ್ಯಾರ್ಥಿಗಳು  ಅವಗಳಿಗೆ ಭಯಪಡಬಾರದು. ಆ ಸಂದರ್ಭಗಳನ್ನು ತಮ್ಮ ಜ್ಞಾನ ಮತ್ತು ಆತ್ಮಸ್ಥೈರ್ಯದಿಂದ ಎದುರಿಸಲು, ತಮ್ಮ ಪ್ರೀತಿಪಾತ್ರರ ಜೊತೆ ಸಂಪರ್ಕದಲ್ಲಿರಲು ಮತ್ತು ಅವರ ಸಾಮರ್ಥ್ಯಗಳಲ್ಲಿ ನಂಬಿಕೆ ಇಟ್ಟುಕೊಳ್ಳಲು ವಿದ್ಯಾರ್ಥಿಗಳು ಶ್ರಮಿಸಬೇಕು” ಎಂಬ  ಸಲಹೆ ನೀಡಿದರು.

http://ರಾಷ್ಟ್ರಪತಿರ ಭಾಷಣವನ್ನು ವೀಕ್ಷಿಸಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ -

******



(Release ID: 1981927) Visitor Counter : 61