ಸಂಪುಟ
azadi ka amrit mahotsav

81.35 ಕೋಟಿ ಫಲಾನುಭವಿಗಳಿಗೆ ಐದು ವರ್ಷಗಳವರೆಗೆ ಉಚಿತ ಆಹಾರ ಧಾನ್ಯ: ಸಚಿವ ಸಂಪುಟ ನಿರ್ಧಾರ


ಆಹಾರ ಮತ್ತು ಪೌಷ್ಠಿಕಾಂಶ ಭದ್ರತೆಗಾಗಿ ಐತಿಹಾಸಿಕ ನಿರ್ಧಾರ: ʻಪಿಎಂಜಿಕೆಎವೈʼ ಅಡಿಯಲ್ಲಿ ಆಹಾರ ಸಬ್ಸಿಡಿಗಾಗಿ ಮುಂದಿನ 5 ವರ್ಷಗಳಲ್ಲಿ ಅಂದಾಜು 11.80 ಲಕ್ಷ ಕೋಟಿ ರೂ. ವೆಚ್ಚ ಮಾಡಲಿರುವ ಕೇಂದ್ರ ಸರಕಾರ

ಪಿಎಂಜಿಕೆಎವೈ: 81.35 ಕೋಟಿ ಜನರಿಗಾಗಿ ಅಂದಾಜು 11.80 ಲಕ್ಷ ಕೋಟಿ ರೂ.ಗಳ ವೆಚ್ಚದ ವಿಶ್ವದ ಅತಿದೊಡ್ಡ ಆಹಾರ ಭದ್ರತಾ ಯೋಜನೆಗಳಲ್ಲಿ ಒಂದಾಗಿದೆ

ಬಡವರು ಮತ್ತು ದುರ್ಬಲರಿಗೆ ಆಹಾರ ಧಾನ್ಯಗಳ ಲಭ್ಯತೆ, ಕೈಗೆಟುಕುವಿಕೆ ಮತ್ತು ಲಭ್ಯತೆಯನ್ನು ಬಲಪಡಿಸಲು ʻಪಿಎಂಜಿಕೆಎವೈʼ ಅಡಿಯಲ್ಲಿ ಉಚಿತ ಆಹಾರ ಧಾನ್ಯಗಳನ್ನು ಐದು ವರ್ಷಗಳವರೆಗೆ ಮುಂದುವರಿಸಲಾಗುವುದು

Posted On: 29 NOV 2023 2:26PM by PIB Bengaluru

ʻಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆʼ(ಪಿಎಂಜಿಕೆಎವೈ) ಅಡಿಯಲ್ಲಿ ಸುಮಾರು 81.35 ಕೋಟಿ ಫಲಾನುಭವಿಗಳಿಗೆ 2024ರ ಜನವರಿ 1 ರಿಂದ ಜಾರಿಗೆ ಬರುವಂತೆ ಐದು ವರ್ಷಗಳ ಅವಧಿಗೆ ಕೇಂದ್ರ ಸರ್ಕಾರ ಉಚಿತ ಆಹಾರ ಧಾನ್ಯಗಳನ್ನು ಒದಗಿಸಲು ನಿರ್ಧರಿಸಿದೆ.

ಇದೊಂದು ಐತಿಹಾಸಿಕ ನಿರ್ಧಾರವಾಗಿದ್ದು, 5 ವರ್ಷಗಳ ಅವಧಿಯಲ್ಲಿ 11.80 ಲಕ್ಷ ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ 81.35 ಕೋಟಿ ಜನರಿಗೆ ಆಹಾರ ಮತ್ತು ಪೌಷ್ಠಿಕಾಂಶದ ಭದ್ರತೆಯನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿರುವ ವಿಶ್ವದ ಅತಿದೊಡ್ಡ ಸಾಮಾಜಿಕ ಕಲ್ಯಾಣ ಯೋಜನೆಯಾಗಿ ʻಪಿಎಂಜಿಕೆಎವೈʼ ಹೊರಹೊಮ್ಮಿದೆ.

ಈ ನಿರ್ಧಾರವು ದೇಶದ ಜನರ ಮೂಲಭೂತ ಆಹಾರ ಮತ್ತು ಪೌಷ್ಠಿಕಾಂಶದ ಅವಶ್ಯಕತೆಗಳನ್ನು ಪೂರೈಸುವ ಮೂಲಕ, ದಕ್ಷ ರೀತಿಯಲ್ಲಿ ಉದ್ದೇಶಿತ ಫಲಾನುಭವಿಗಳ ಕಲ್ಯಾಣವನ್ನು ಸಾಧಿಸುವ ನಿಟ್ಟಿನಲ್ಲಿ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಬಲವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ʻಅಮೃತ್ ಕಾಲʼದ ಈ ಸಮಯದಲ್ಲಿ ಇಷ್ಟು ಪ್ರಮಾಣದಲ್ಲಿ ಆಹಾರ ಭದ್ರತೆಯನ್ನು ಖಾತರಿಪಡಿಸುವ ನಡೆಯು, ಮಹತ್ವಾಕಾಂಕ್ಷೆಯ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಒಂದು ಸಮರ್ಪಿತ ಪ್ರಯತ್ನವಾಗಿ ಪ್ರಮುಖ ಪಾತ್ರ ವಹಿಸುತ್ತದೆ.

1.1.2024 ರಿಂದ 5 ವರ್ಷಗಳವರೆಗೆ ʻಪಿಎಂಜಿಕೆಎವೈʼ ಅಡಿಯಲ್ಲಿ ಉಚಿತ ಆಹಾರ ಧಾನ್ಯಗಳ ವಿತರಣೆಯು (ಅಕ್ಕಿ, ಗೋಧಿ ಮತ್ತು ಧಾನ್ಯಗಳು / ಸಿರಿಧಾನ್ಯಗಳು) ಆಹಾರ ಭದ್ರತೆಯನ್ನು ಬಲಪಡಿಸುತ್ತದೆ ಮತ್ತು ದೇಶದ ಬಡ ಮತ್ತು ದುರ್ಬಲ ವರ್ಗಗಳ ಆರ್ಥಿಕ ಸಂಕಷ್ಟವನ್ನು ತಗ್ಗಿಸುತ್ತದೆ. ಇದರ ಭಾಗವಾಗಿ, ಸಾಮಾನ್ಯ ಲಾಂಛನದ ಅಡಿಯಲ್ಲಿ 5 ಲಕ್ಷಕ್ಕೂ ಹೆಚ್ಚು ನ್ಯಾಯಬೆಲೆ ಅಂಗಡಿಗಳ ಜಾಲದ ಮೂಲಕ ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಹಾರ ಧಾನ್ಯಗಳನ್ನು ಉಚಿತವಾಗಿ ತಲುಪಿಸಲಾಗುವುದು. ಈ ನಡೆಯು ಆಹಾರ ಧಾನ್ಯಗಳ ವಿತರಣೆಯಲ್ಲಿ ರಾಷ್ಟ್ರವ್ಯಾಪಿ ಏಕರೂಪತೆಯನ್ನು ಮೂಡಿಸಲಿದೆ.

ʻಒಂದು ದೇಶ, ಒಂದು ಪಡಿತರ ಚೀಟಿʼ(ಒಎನ್‌ಒಆರ್‌ಸಿ) ಉಪಕ್ರಮದ ಅಡಿಯಲ್ಲಿ ದೇಶದ ಯಾವುದೇ ನ್ಯಾಯಬೆಲೆ ಅಂಗಡಿಯಿಂದ ಫಲಾನುಭವಿಗಳು ಉಚಿತವಾಗಿ ಆಹಾರ ಧಾನ್ಯಗಳನ್ನು ಪಡೆಯಲು ಸಾಧ್ಯವಾಗಲಿದ್ದು, ಇದು ಇದು ಜನರ ಜೀವನವನ್ನು ಸುಗಮಗೊಳಿಸುತ್ತದೆ. ಈ ಉಪಕ್ರಮವು ವಲಸಿಗರಿಗೆ ಅಪಾರ ಪ್ರಯೋಜನವನ್ನು ಒದಗಿಸುತ್ತದೆ.  ʻಡಿಜಿಟಲ್ ಇಂಡಿಯಾʼ ಅಡಿಯಲ್ಲಿ ತಂತ್ರಜ್ಞಾನ ಆಧಾರಿತ ಸುಧಾರಣೆಗಳ ಭಾಗವಾಗಿ ಫಲಾನುಭವಿಗಳು ಯಾವುದೇ ರಾಜ್ಯ ಒಳಗೆ ಮತ್ತು ಅಂತರ-ರಾಜ್ಯ ಮಟ್ಟದಲ್ಲಿ ಎಲ್ಲಿ ಬೇಕಾದರೂ ಆಹಾರ ಧಾನ್ಯಗಳನ್ನು ಪಡೆಯಲು (ಪೋರ್ಟಬಿಲಿಟಿ) ಅನುವು ಮಾಡಿಕೊಡುತ್ತದೆ. ಇದೇ ವೇಳೆ, ಉಚಿತ ಆಹಾರ ಧಾನ್ಯಗಳ ಯೋಜನೆಯು ದೇಶಾದ್ಯಂತ ʻಒಂದು ದೇಶ, ಒಂದು ಪಡಿತರ ಚೀಟಿʼ(ಒಎನ್ಒಆರ್‌ಸಿ) ಅಡಿಯಲ್ಲಿ ಪೋರ್ಟಬಿಲಿಟಿಯ ಏಕರೂಪದ ಅನುಷ್ಠಾನವನ್ನು ಖಾತರಿಪಡಿಸುತ್ತದೆ. ಈ ಆಯ್ಕೆ ಆಧಾರಿತ ವೇದಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ.

ʻಪಿಎಂಜಿಕೆಎವೈʼ ಅಡಿಯಲ್ಲಿ ಐದು ವರ್ಷಗಳ ಅವಧಿಗೆ ಆಹಾರ ಧಾನ್ಯಗಳ ವಿತರಣೆಗೆ ಅಂದಾಜು 11.80 ಲಕ್ಷ ಕೋಟಿ ರೂ. ಆಹಾರ ಸಬ್ಸಿಡಿ ಬೇಕಾಗಲಿದೆ. ಹೀಗಾಗಿ, ಉದ್ದೇಶಿತ ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸಲು ʻಪಿಎಂಜಿಕೆಎವೈʼ ಅಡಿಯಲ್ಲಿ ಆಹಾರ ಸಬ್ಸಿಡಿಯಾಗಿ ಮುಂದಿನ ಐದು ವರ್ಷಗಳ ಅವಧಿಯಲ್ಲಿ ಕೇಂದ್ರವು ಅಂದಾಜು 11.80 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡಲಿದೆ.

2024ರ ಜನವರಿ 1ರಿಂದ ಜಾರಿಗೆ ಬರುವಂತೆ ʻಪಿಎಂಜಿಕೆಎವೈʼ ಅಡಿಯಲ್ಲಿ ಐದು ವರ್ಷಗಳವರೆಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸುವ ಈ ಕ್ರಮವು  ರಾಷ್ಟ್ರೀಯ ಆಹಾರ ಮತ್ತು ಪೌಷ್ಠಿಕಾಂಶದ ಭದ್ರತೆಯನ್ನು ಖಾತರಿಪಡಿಸುವ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೀರ್ಘಕಾಲೀನ ಬದ್ಧತೆ ಮತ್ತು ದೃಷ್ಟಿಕೋನವನ್ನು ಸೂಚಿಸುತ್ತದೆ. ಉಚಿತ ಆಹಾರ ಧಾನ್ಯಗಳನ್ನು ಒದಗಿಸುವುದರಿಂದ ಸಮಾಜದ ಕೆಳ ಸ್ತರಗಳ ಜನರು ಎದುರಿಸುವ ಆರ್ಥಿಕ ಸಂಕಷ್ಟವನ್ನು ಸುಸ್ಥಿರ ರೀತಿಯಲ್ಲಿ ತಗ್ಗಿಸಿದಂತಾಗಲಿದೆ. ಜೊತೆಗೆ, ಫಲಾನುಭವಿಗಳಿಗೆ ಶೂನ್ಯ ವೆಚ್ಚದೊಂದಿಗೆ ದೀರ್ಘಕಾಲೀನ ಬೆಲೆ ಕಾರ್ಯತಂತ್ರವನ್ನು ಇದು ಖಾತರಿಪಡಿಸುತ್ತದೆ. ಸಾರ್ವಜನಿಕ ವಿತರಣಾ ವ್ಯವಸ್ಥೆತಯು ಪರಿಣಾಮಕಾರಿಯಾಗಿ ಜನರನ್ನು ತಲುಪಲು ಇದು ಅಗತ್ಯವಾಗಿದೆ.

ಉದಾಹರಣೆಗೆ, ಅಂತ್ಯೋದಯ ಕುಟುಂಬಕ್ಕೆ 35 ಕೆಜಿ ಅಕ್ಕಿಯ ಆರ್ಥಿಕ ವೆಚ್ಚ 1371 ರೂ.ಗಳಾಗಿದ್ದರೆ, 35 ಕೆಜಿ ಗೋಧಿಯ ವೆಚ್ಚವು 946 ರೂ.ಗಳಷ್ಟಿದೆ. ಇದನ್ನು ʻಪಿಎಂಜಿಕೆಎವೈʼ ಅಡಿಯಲ್ಲಿ ಭಾರತ ಸರ್ಕಾರ ಭರಿಸುತ್ತಿದೆ ಮತ್ತು ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ಸಂಪೂರ್ಣವಾಗಿ ಉಚಿತವಾಗಿ ಒದಗಿಸಲಾಗುತ್ತಿದೆ. ಈ ರೀತಿಯ ಉಚಿತ ಆಹಾರ ಧಾನ್ಯಗಳ ವಿತರಣೆಯಿಂದಾಗಿ ಪಡಿತರ ಚೀಟಿದಾರರಿಗೆ ಮಾಸಿಕ ಗಮನಾರ್ಹ ಮಟ್ಟದಲ್ಲಿ ಹಣ ಉಳಿತಾಯವಾಗುತ್ತಿದೆ.

ಸಾಕಷ್ಟು ಪ್ರಮಾಣದ ಗುಣಮಟ್ಟದ ಆಹಾರ ಧಾನ್ಯಗಳ ಲಭ್ಯತೆಯ ಮೂಲಕ ಹಾಗೂ ಆಹಾರ ಮತ್ತು ಪೌಷ್ಠಿಕಾಂಶದ ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ದೇಶದ ಜನರಿಗೆ ಗೌರವಯುತ ಜೀವನ ಒದಗಿಸುವ ಬದ್ಧತೆಯನ್ನು ಭಾರತ ಸರ್ಕಾರವು ಹೊಂದಿದೆ. ಈ ಯೋಜನೆಯು ʻಪಿಎಂಜಿಕೆಎವೈʼ ವ್ಯಾಪ್ತಿಯ 81.35 ಕೋಟಿ ಜನರಿಗೆ ಭಾರತ ಸರ್ಕಾರದ ಬದ್ಧತೆಯನ್ನು ಪೂರೈಸಲು ಅನುವು ಮಾಡಿಕೊಡುತ್ತದೆ.

ಫಲಾನುಭವಿಗಳ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಮತ್ತು ಉದ್ದೇಶಿತ ಫಲಾನುಭವಿಗಳಿಗೆ ಆಹಾರ ಧಾನ್ಯಗಳ ಲಭ್ಯತೆ, ಕೈಗೆಟುಕುವಿಕೆ ಕಾಯ್ದುಕೊಳ್ಳುವ ಮೂಲಕ ಆಹಾರ ಭದ್ರತೆಯನ್ನು ಬಲಪಡಿಸಲು ಹಾಗೂ ರಾಜ್ಯಗಳಾದ್ಯಂತ ಏಕರೂಪತೆಯನ್ನು ಕಾಪಾಡಿಕೊಳ್ಳಲು, ʻಪಿಎಂಜಿಕೆಎವೈʼ ಅಡಿಯಲ್ಲಿ ಐದು ವರ್ಷಗಳವರೆಗೆ ಉಚಿತವಾಗಿ ಆಹಾರ ಧಾನ್ಯಗಳನ್ನು ಒದಗಣೆಯನ್ನು ಮುಂದುವರಿಸಲು ನಿರ್ಧಾರ ಕೈಗೊಳ್ಳಲಾಗಿದೆ.

ಇದೊಂದು ಐತಿಹಾಸಿಕ ನಿರ್ಧಾರವಾಗಿದ್ದು, ದೇಶದಲ್ಲಿ ಆಹಾರ ಮತ್ತು ಪೌಷ್ಠಿಕಾಂಶದ ಭದ್ರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಭಾರತದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಮರ್ಪಣೆ ಮತ್ತು ಬದ್ಧತೆಯನ್ನು ಸೂಚಿಸುತ್ತದೆ.

 

*****

 


(Release ID: 1980791) Visitor Counter : 142