ವಾರ್ತಾ ಮತ್ತು ಪ್ರಸಾರ ಸಚಿವಾಲಯ

ವಿದೇಶಿ ಚಲನಚಿತ್ರ ನಿರ್ಮಾಣಕ್ಕೆ ಪ್ರೋತ್ಸಾಹಧನವನ್ನು ವೆಚ್ಚದ ಶೇ.40 ಕ್ಕೆ ಹೆಚ್ಚಿಸಲಾಗುವುದು, ಮಿತಿಯನ್ನು 2.5 ಕೋಟಿಯಿಂದ 30 ಕೋಟಿ ರೂ.ಗೆ ಹೆಚ್ಚಿಸಲಾಗುವುದು: ಅನುರಾಗ್ ಸಿಂಗ್ ಠಾಕೂರ್


'75 ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ' ಗಾಗಿ ನೇಮಕಾತಿ ಅಭಿಯಾನ ಪ್ರಕಟ

ಒಳಗೊಳ್ಳುವಿಕೆಯು 54ನೇ ಐ ಎಫ್‌ ಎಫ್‌ ಐ ಗೆ ಮಾರ್ಗದರ್ಶಿ ತತ್ವವಾಗಿದೆ

ಐ ಎಫ್‌ ಎಫ್‌ ಐ 40 ಗಮನಾರ್ಹ ಮಹಿಳಾ ಚಲನಚಿತ್ರ ನಿರ್ಮಾತೃಗಳ ಸಿನಿಮಾಗಳನ್ನು ಪ್ರದರ್ಶಿಸಲಿದೆ

Posted On: 20 NOV 2023 8:05PM by PIB Bengaluru

ಭಾರತದಲ್ಲಿ ವಿದೇಶಿ ಚಲನಚಿತ್ರ ನಿರ್ಮಾಣಕ್ಕಾಗಿ ಹೆಚ್ಚಿಸಿದ 30 ಕೋಟಿ ರೂ. ಮಿತಿಯೊಂದಿಗೆ (3.5 ಮಿಲಿಯನ್ ಡಾಲರ್ ಮೀರಿದ) ಪ್ರೋತ್ಸಾಹಧನವನ್ನು ವೆಚ್ಚದ ಶೇ.40 ರಷ್ಟಕ್ಕೆ ಹೆಚ್ಚಿಸಲಾಗುವುದು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಹೇಳಿದರು. ಈ ಹಿಂದೆ, ಪ್ರೋತ್ಸಾಹಧನಕ್ಕಾಗಿ ಪ್ರತಿ ಯೋಜನೆಯ ಮಿತಿ ಕೇವಲ 2.5 ಕೋಟಿ ರೂ. ಆಗಿತ್ತು. ಮಹತ್ವದ ಭಾರತೀಯ ಕಂಟೆಂಟ್‌ ಗೆ (ಎಸ್‌ ಐ ಸಿ) ಹೆಚ್ಚುವರಿ ಶೇ.5 ಬೋನಸ್ ನೀಡಲಾಗುತ್ತದೆ ಎಂದು ಇಂದು ಗೋವಾದ ಪಣಜಿಯಲ್ಲಿ ಆರಂಭವಾದ 54 ನೇ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಭಾಷಣದಲ್ಲಿ ಸಚಿವರು ಹೇಳಿದರು.

ಭಾರತದ ಗಾತ್ರ ಮತ್ತು ಅಪಾರ ಸಾಮರ್ಥ್ಯವನ್ನು ಪರಿಗಣಿಸಿ ಮಧ್ಯಮ ಮತ್ತು ದೊಡ್ಡ ಬಜೆಟ್ ಅಂತಾರಾಷ್ಟ್ರೀಯ ಯೋಜನೆಗಳನ್ನು ದೇಶಕ್ಕೆ ಆಕರ್ಷಿಸಲು ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ ಎಂದು ಶ್ರೀ ಠಾಕೂರ್ ಹೇಳಿದರು. "ಚಲನಚಿತ್ರ ನಿರ್ಮಾಣಕ್ಕೆ ಪ್ರೋತ್ಸಾಹ ನೀಡುವ ಈ ಮಾದರಿ ಬದಲಾವಣೆಯು ಭಾರತದ ಬದ್ಧತೆ ಮತ್ತು ಕಲಾತ್ಮಕ ಅಭಿವ್ಯಕ್ತಿಯ ಬೆಂಬಲಕ್ಕೆ ಸಾಕ್ಷಿಯಾಗಿದೆ ಮತ್ತು ಸಿನಿಮಾ ಯೋಜನೆಗಳಿಗೆ ಆದ್ಯತೆಯ ತಾಣವಾಗಿ ನಮ್ಮ ಸ್ಥಾನವನ್ನು ಬಲಪಡಿಸುತ್ತದೆ" ಎಂದು ಅವರು ಹೇಳಿದರು.

ಇದಲ್ಲದೆ, ಹೆಸರಾಂತ ನಟಿ ಮಾಧುರಿ ದೀಕ್ಷಿತ್ ಅವರಿಗೆ ಭಾರತದ 54 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು 'ಭಾರತೀಯ ಸಿನಿಮಾಗೆ ನೀಡಿದ ಕೊಡುಗೆಗಾಗಿ ವಿಶೇಷ ಗೌರವ' ಪ್ರಶಸ್ತಿಯನ್ನು ನೀಡಿ ಗೌರವಿಸಿತು. "ನಾಲ್ಕು ದಶಕಗಳಿಂದಲೂ ಎಲ್ಲ ವಯೋಮಾನದವರಿಗೂ ಐಕಾನ್ ಆಗಿರುವ ಮಾಧುರಿ ದೀಕ್ಷಿತ್ ಅವರು ತಮ್ಮ ಅಪ್ರತಿಮ ಪ್ರತಿಭೆಯೊಂದಿಗೆ ನಮ್ಮ ಬೆಳ್ಳಿಪರದೆಯನ್ನು ಅಲಂಕರಿಸಿದ್ದಾರೆ." ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ X ನಲ್ಲಿ ಪೋಸ್ಟ್ ಮಾಡಿದ್ದಾರೆ.

'75 ಕ್ರಿಯೇಟಿವ್ ಮೈಂಡ್ಸ್ ಆಫ್‌ ಟುಮಾರೊ' ಗೆ ಆಯ್ಕೆಯಾದ ಯುವ ಮನಸ್ಸುಗಳಿಗೆ ನೇಮಕಾತಿ ಅಭಿಯಾನವನ್ನು ಕೇಂದ್ರ ಸಚಿವರು ಘೋಷಿಸಿದರು, ಇದು ಅವರ ಅರಳುತ್ತಿರುವ ಪ್ರತಿಭೆ ಮತ್ತು ವೃತ್ತಿಜೀವನದ ಹಾದಿಗೆ ಅಪಾರ ಅವಕಾಶಗಳಿಗೆ ಬಾಗಿಲು ತೆರೆಯುತ್ತದೆ. ಇದೀಗ 3ನೇ ಆವೃತ್ತಿಯಲ್ಲಿರುವ '75 ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ', ಸಿನಿಮಾ ಮಾಧ್ಯಮದ ಮೂಲಕ ತಮ್ಮ ಸೃಜನಶೀಲ ಅಭಿವ್ಯಕ್ತಿಯನ್ನು ಪ್ರದರ್ಶಿಸಲು ಯುವಕರಿಗೆ ವೇದಿಕೆಯನ್ನು ಒದಗಿಸುವ ಪ್ರಧಾನಮಂತ್ರಿಯವರ ದೂರದೃಷ್ಟಿಯಿಂದ 2021 ರಲ್ಲಿ ಆರಂಭವಾಯಿತು. "ಈ ವರ್ಷ, 10 ವಿಭಾಗಗಳಲ್ಲಿ ಸುಮಾರು 600 ಪ್ರವೇಶಗಳ ಪೈಕಿ, ಬಿಷ್ಣುಪುರ, ಜಗತಸಿಂಗ್ ಪುರ ಮತ್ತು ಸದರ್‌ಪುರದಂತಹ ದೂರದ ಪ್ರದೇಶಗಳು ಸೇರಿದಂತೆ 19 ರಾಜ್ಯಗಳ 75 ಯುವ ಚಲನಚಿತ್ರ ನಿರ್ಮಾತೃಗಳನ್ನು ಆಯ್ಕೆ ಮಾಡಲಾಗಿದೆ" ಎಂದು ಸಚಿವರು ಹೇಳಿದರು.

ಐ ಎಫ್‌ ಎಫ್‌ ಐ ನ ಈ ಆವೃತ್ತಿಯಲ್ಲಿ ಪರಿಚಯಿಸಲಾಗಿರುವ ಅತ್ಯುತ್ತಮ ವೆಬ್ ಸರಣಿ (ಒಟಿಟಿ) ವಿಭಾಗದ ಹೊಸ ಪ್ರಶಸ್ತಿಗಳನ್ನು ಸಚಿವರು ಪ್ರಕಟಿಸಿದರು. ಉತ್ಸವದ ಹೊಸ ಅಂಶಗಳನ್ನು ಪ್ರಸ್ತಾಪಿಸಿದ ಸಚಿವರು, ಭಾರತದ ಮೂಲ ಕಂಟೆಂಟ್‌ ರಚನೆಕಾರರ ಪರಿವರ್ತಕ ಪಾತ್ರವನ್ನು ಐ ಎಫ್‌ ಎಫ್‌ ಐ ಗುರುತಿಸಿ ಗೌರವಿಸುತ್ತದೆ. ಅವರು ಉದ್ಯೋಗ ಮತ್ತು ನಾವೀನ್ಯತೆಗೆ ತಮ್ಮ ಕೊಡುಗೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದರು. ಮೊದಲ ಬಾರಿಗೆ, ಸಿನಿಮಾ ಪ್ರಪಂಚದ ಇತ್ತೀಚಿನ ಆವಿಷ್ಕಾರಗಳನ್ನು ಪ್ರದರ್ಶಿಸಲು ಉತ್ತಮವಾದ 'ವಿಎಫ್‌ಎಕ್ಸ್ ಮತ್ತು ಟೆಕ್ ಪೆವಿಲಿಯನ್' ಮತ್ತು ನಾನ್‌ ಫಿಕ್ಷನ್‌ ಕಥೆ ಹೇಳುವಿಕೆಯನ್ನು ಬೆಂಬಲಿಸಲು ಅದರ ಸಹ-ನಿರ್ಮಾಣ ಮಾರುಕಟ್ಟೆಗೆ ಸಾಕ್ಷ್ಯಚಿತ್ರ ವಿಭಾಗವನ್ನು ಪರಿಚಯಿಸುವ ಮೂಲಕ ಐ ಎಫ್‌ ಎಫ್‌ ಐ ಫಿಲ್ಮ್ ಬಜಾರ್‌ನ ವ್ಯಾಪ್ತಿಯನ್ನು ಹೆಚ್ಚಿಸಿದೆ ಎಂದು ಅವರು ಒತ್ತಿ ಹೇಳಿದರು.

ಮಹಿಳಾ ಸಬಲೀಕರಣಕ್ಕೆ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದ ಶ್ರೀ ಠಾಕೂರ್, ಈ ವರ್ಷದ ಐ ಎಫ್‌ ಎಫ್‌ ಐ 40 ಗಮನಾರ್ಹ ಮಹಿಳಾ ಚಲನಚಿತ್ರ ನಿರ್ಮಾಪಕರ ಚಲನಚಿತ್ರಗಳನ್ನು ಪ್ರದರ್ಶಿಸುತ್ತದೆ ಎಂದು ಹೇಳಿದರು. "ಅವರ ಪ್ರತಿಭೆ, ಸೃಜನಶೀಲತೆ ಮತ್ತು ವಿಶಿಷ್ಟ ದೃಷ್ಟಿಕೋನಗಳು ಉತ್ಸವವನ್ನು ವೈವಿಧ್ಯಮಯ ಧ್ವನಿಗಳು ಮತ್ತು ನಿರೂಪಣೆಗಳ ಆಚರಣೆಯನ್ನಾಗಿ ಮಾಡುತ್ತವೆ" ಎಂದು ಅವರು ಹೇಳಿದರು.

ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 'ಸಬ್ಕಾಸಾಥ್, ಸಬ್ಕಾವಿಕಾಸ್' ಮಂತ್ರದ ಮೂಲಕ ಎಲ್ಲರನ್ನೂ ಒಳಗೊಳ್ಳುವ ಮತ್ತು ಪ್ರವೇಶಿಸಬಹುದಾದ ಭಾರತ ನಿರ್ಮಾನದ ಬಗ್ಗೆ ನಿರಂತರವಾಗಿ ಒತ್ತಿಹೇಳಿದ್ದಾರೆ. ಪ್ರಧಾನಮಂತ್ರಿಯವರ ದೃಷ್ಟಿಕೋನಕ್ಕೆ ಮತ್ತೊಂದು ಆಯಾಮವನ್ನು ಸೇರಿಸಿದ ಸಚಿವರು, 'ಸಬ್ಕಾ ಮನೋರಂಜನ್' ಅಂದರೆ 'ಎಲ್ಲರಿಗೂ ಮನರಂಜನೆ' ಮೂಲಕ ಐ ಎಫ್‌ ಎಫ್‌ ಐ ಒಳಗೊಳ್ಳುವಿಕೆಯನ್ನು ಮಾರ್ಗದರ್ಶಿ ತತ್ವವನ್ನಾಗಿ ಮಾಡುತ್ತಿದೆ ಎಂದು ಒತ್ತಿ ಹೇಳಿದರು. “ಈ ವರ್ಷದ ಉತ್ಸವದ ಎಲ್ಲಾ ಸ್ಥಳಗಳು ವಿಕಲಚೇತನರಿಗೆ ಊಟೋಪಚಾರದ ಸೌಲಭ್ಯಗಳೊಂದಿಗೆ ಸಜ್ಜುಗೊಳಿಸಲಾಗುವುದು. ಎಂಬೆಡೆಡ್ ಆಡಿಯೋ ವಿವರಣೆಗಳು ಮತ್ತು ಸಂಕೇತ ಭಾಷೆಯ ಅವಕಾಶಗಳೊಂದಿಗೆ ದೃಷ್ಟಿ ಮತ್ತು ಶ್ರವಣದೋಷವುಳ್ಳ ಪ್ರತಿನಿಧಿಗಳಿಗೆ ನಾಲ್ಕು ಹೆಚ್ಚುವರಿ ವಿಶೇಷ ಪ್ರದರ್ಶನಗಳು ಇರುತ್ತವೆ" ಎಂದು ಸಚಿವರು ಹೇಳಿದರು.

ಭಾರತದಲ್ಲಿ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರವನ್ನು ವಿಸ್ತರಿಸಲು ಭಾರತ ಸರ್ಕಾರವು ಇತ್ತೀಚಿನ ದಿನಗಳಲ್ಲಿ ಕೈಗೊಂಡ ಹಲವಾರು ಕ್ರಮಗಳ ಬಗ್ಗೆ ಸಚಿವರು ಮಾತನಾಡಿದರು. “ಇತ್ತೀಚೆಗೆ, ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಸಿನಿಮಾಟೋಗ್ರಾಫ್ (ತಿದ್ದುಪಡಿ) ಮಸೂದೆ, 2023, ಲೋಕಸಭೆ ಮತ್ತು ರಾಜ್ಯಸಭೆ ಎರಡರಿಂದಲೂ ಅನುಮೋದನೆ ಪಡೆಯಿತು. ಈ ಕಾಯ್ದೆಯು ಕಾನೂನು ಚೌಕಟ್ಟನ್ನು ವಿಸ್ತರಿಸುವುದಲ್ಲದೆ, ಹಕ್ಕುಸ್ವಾಮ್ಯ ರಕ್ಷಣೆಯನ್ನು ಒಳಗೊಳ್ಳಲು ಸೆನ್ಸಾರ್‌ಶಿಪ್‌ ನ ಆಚೆಗೆ ತನ್ನ ಗಮನವನ್ನು ಹರಿಸುತ್ತದೆ, ಅಲ್ಲದೆ ಪೈರಸಿ ವಿರುದ್ಧ ಕಠಿಣ ಕ್ರಮಗಳಿಗೆ ಅವಕಾಶ ನೀಡುತ್ತದೆ" ಎಂದು ಅವರು ಒತ್ತಿ ಹೇಳಿದರು.

ಒಗ್ಗೂಡಿಸುವ ಶಕ್ತಿಯಾಗಿ ಸಿನೆಮಾದ ಮಹತ್ವದ ಪಾತ್ರವನ್ನು ಒತ್ತಿಹೇಳಿದ ಶ್ರೀ ಠಾಕೂರ್, "ವಿಭಜನೆಯಿಂದ ಹೆಚ್ಚು ತೊಂದರೆಗೊಳಗಾದ ಜಗತ್ತಿನಲ್ಲಿ ಸಿನಿಮಾವು ತನ್ನ ಇತಿಹಾಸದುದ್ದಕ್ಕೂ, ಆಲೋಚನೆಗಳು, ಕಲ್ಪನೆಗಳು ಮತ್ತು ನಾವೀನ್ಯತೆಗಳನ್ನು ಸೆರೆಹಿಡಿದಿದೆ ಮತ್ತು ಸಂಭ್ರಮಿಸಿದೆ ಮತ್ತು ಅದು ಶಾಂತಿ, ಪ್ರಗತಿ ಮತ್ತು ಸಮೃದ್ಧಿಗೆ ಪ್ರೇರಕ ಶಕ್ತಿಯಾಗಿದೆ ಎಂದು ನಾನು ಬಲವಾಗಿ ನಂಬುತ್ತೇನೆ” ಎಂದರು.

ಭಾರತದ ಯಶಸ್ವಿ ಚಂದ್ರಯಾನ-3 ಮಿಷನ್ ಅನ್ನು ದಾರ್ಶನಿಕ ಕಲಾಕೃತಿಗಳು ನೀಡುವ ವೈಜ್ಞಾನಿಕ ಸಾಧ್ಯತೆಗಳೊಂದಿಗೆ ಜೋಡಿಸಿದ ಸಚಿವರು, “1902 ರಲ್ಲಿ, ಬಾಹ್ಯಾಕಾಶ ಸಂಸ್ಥೆಗಳ ಕಲ್ಪನೆ ಅಥವಾ ಪರಿಕಲ್ಪನೆಗೂ ಮುಂಚೆಯೇ, ಜಾರ್ಜಸ್ ಮೆಲಿಯಸ್ ಅವರ ಅದ್ಭುತ ದಾರ್ಶನಿಕ ಕಲಾಕೃತಿ ಮತ್ತು ಫ್ರೆಂಚ್ ಚಲನಚಿತ್ರ ಎ ಟ್ರಿಪ್‌ ಟು ದ ಮೂನ್‌ ಜನರ ಮನಸ್ಸಿನಲ್ಲಿ ವೈಜ್ಞಾನಿಕ ಸಾಧ್ಯತೆ ಮತ್ತು ಪ್ರಗತಿಯ ಬೀಜಗಳನ್ನು ಹರಡಿತು ಎಂದರು. ಸಿನಿಮಾದ ಶಕ್ತಿಯು ಅದ್ಭುತವಾಗಿದೆ ಮತ್ತು ಈ ಆಲೋಚನೆಗಳು ನಮ್ಮ ಜಗತ್ತನ್ನು ಹೇಗೆ ರೂಪಿಸುತ್ತವೆ ಎಂಬುದು ರೋಚಕವಾಗಿದೆ" ಎಂದು ಸಚಿವರು ಹೇಳಿದರು.

ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು 2023 ರ ಪ್ರತಿಷ್ಠಿತ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಗಾಗಿ ಹಾಲಿವುಡ್ ನಟ/ನಿರ್ಮಾಪಕ ಮೈಕೆಲ್ ಡಗ್ಲಾಸ್ ಅವರಿಗೆ ಅಭಿನಂದಿಸಿದರು. ಅಂತರಾಷ್ಟ್ರೀಯ ಸ್ಪರ್ಧೆಯ ಗೌರವಾನ್ವಿತ ತೀರ್ಪುಗಾರರಿಗೆ, ಭಾರತೀಯ ಪನೋರಮಾ, ಅತ್ಯುತ್ತಮ ವೆಬ್ ಸರಣಿ (OTT) ಮತ್ತು 75 ಕ್ರಿಯೇಟಿವ್‌ ಮೈಂಡ್ಸ್‌ ಆಫ್‌ ಟುಮಾರೊ ಗಳಿಗೆ ಸಚಿವರು ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸಿದರು.

ಐ ಎಫ್‌ ಎಫ್‌ ಐ ಕುರಿತ ತಮ್ಮ ದೃಷ್ಟಿಕೋನವು ಒಂದು ಕಾರ್ಯಕ್ರಮಕ್ಕೆ ಸೀಮಿತವಾಗಿಲ್ಲ, ಬದಲಿಗೆ ನಾವು ಅಮೃತ ಮಹೋತ್ಸವದಿಂದ ಅಮೃತಕಾಲಕ್ಕೆ ಪರಿವರ್ತನೆಯಾದ ನಂತರ ಭಾರತವು ಸ್ವಾತಂತ್ರ್ಯದ 100 ನೇ ವರ್ಷವನ್ನು ಆಚರಿಸುವಾಗ ಐ ಎಫ್‌ ಎಫ್‌ ಐ ಹೇಗಿರಬೇಕು ಎಂಬುದನ್ನು ಕುರಿತದ್ದಾಗಿದೆ ಎಂದು ಹೇಳಿದ ಸಚಿವರು ತಮ್ಮ ಭಾಷಣವನ್ನು ಮುಕ್ತಾಯ ಮಾಡಿದರು.

*****



(Release ID: 1978421) Visitor Counter : 68