ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಗೋವಾದ ಐಎಫ್ಎಫ್ಐನಲ್ಲಿ ಫಿಲ್ಮ್ ಬಜಾರಿನ 17 ನೇ ಆವೃತ್ತಿಗೆ  ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರಿಂದ ಚಾಲನೆ


ಫಿಲ್ಮ್ ಬಜಾರ್ ಸೃಜನಶೀಲತೆ ಮತ್ತು ವಾಣಿಜ್ಯ, ಆಲೋಚನೆಗಳು ಮತ್ತು ಸ್ಫೂರ್ತಿಗಳ ಸಂಗಮ: ವಾರ್ತಾ ಮತ್ತು ಪ್ರಸಾರ ಸಚಿವರು

ಭಾರತೀಯ ಮಾಧ್ಯಮ ಮತ್ತು ಮನರಂಜನಾ ಉದ್ಯಮವು ವಾರ್ಷಿಕ 20% ಬೆಳವಣಿಗೆಯ ದರವನ್ನು ಹೊಂದಿದ್ದು, ವಿಶ್ವದ ಐದನೇ ಅತಿದೊಡ್ಡ ಮತ್ತು ಹೆಚ್ಚು ಜಾಗತೀಕರಣಗೊಂಡ ಉದ್ಯಮವೆಂದು ಪ್ರಶಂಸಿಸಲ್ಪಟ್ಟಿದೆ: ಮಾಹಿತಿ ಮತ್ತು ಪ್ರಸಾರ ಸಚಿವರು

Posted On: 20 NOV 2023 6:18PM by PIB Bengaluru

ಕೇಂದ್ರ ಮಾಹಿತಿ ಮತ್ತು ಪ್ರಸಾರ, ಹಾಗು ಯುವಜನ  ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಇಂದು ಗೋವಾದ ಮ್ಯಾರಿಯಟ್ ರೆಸಾರ್ಟ್ ನಲ್ಲಿ ದಕ್ಷಿಣ ಏಷ್ಯಾದ ಅತಿದೊಡ್ಡ ಚಲನಚಿತ್ರ ಮಾರುಕಟ್ಟೆಯಾದ ಫಿಲ್ಮ್ ಬಜಾರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ  ಮಾತನಾಡಿದ ಅವರು, ಚಲನಚಿತ್ರ ಬಜಾರ್, ಆಲೋಚನೆಗಳು, ಚಿಂತನೆಗಳು ಹೊರಹೊಮ್ಮುವ ಮಾರುಕಟ್ಟೆಯಂತೆ, ಅದು ವಿಶ್ವದ ಎಲ್ಲಾ ಮೂಲೆಗಳ ಚಲನಚಿತ್ರ ತಯಾರಕರು, ನಿರ್ಮಾಪಕರು ಮತ್ತು ಕಥೆಗಾರರಿಗೆ ಸ್ವರ್ಗವಾಗಿದೆ ಎಂದು ಹೇಳಿದರು. ಇದು ಸೃಜನಶೀಲತೆ ಮತ್ತು ವಾಣಿಜ್ಯ, ಆಲೋಚನೆಗಳು ಮತ್ತು ಸ್ಫೂರ್ತಿಗಳ ಸಂಗಮವಾಗಿದ್ದು, ಅದು ಅಭಿವೃದ್ಧಿ ಹೊಂದುತ್ತಿರುವ ಸಿನಿಮಾ ಮಾರುಕಟ್ಟೆಯ ನಿರ್ಮಾಣ ಘಟಕಗಳಂತೆ ಕಾರ್ಯಾಚರಿಸುತ್ತದೆ ಎಂದೂ ಅವರು ಹೇಳಿದರು.

ತಮ್ಮ ಮಾತುಗಳನ್ನು ಮುಂದುವರೆಸಿದ  ಶ್ರೀ ಅನುರಾಗ್ ಸಿಂಗ್ ಠಾಕೂರ್, ಭಾರತೀಯ ಮಾಧ್ಯಮ ಮತ್ತು ಮನರಂಜನಾ ಉದ್ಯಮವು ವಾರ್ಷಿಕ 20% ಬೆಳವಣಿಗೆಯ ದರವನ್ನು ಹೊಂದಿದ್ದು, ವಿಶ್ವದ ಐದನೇ ಅತಿದೊಡ್ಡ ಮತ್ತು ಅತ್ಯಂತ ಜಾಗತೀಕರಣಗೊಂಡ ಉದ್ಯಮ ಎಂದು ಪ್ರಶಂಸಿಸಲ್ಪಟ್ಟಿದೆ. ತನ್ನ 17 ನೇ ವರ್ಷದಲ್ಲಿ, ಫಿಲ್ಮ್ ಬಜಾರ್ ಐಎಫ್ಎಫ್ಐನ ಅನಿವಾರ್ಯ ಮೂಲಾಧಾರವಾಗಿ ರೂಪುಗೊಂಡಿದೆ, ಅದು ಗಡಿಗಳ ಎಲ್ಲೆಗಳನ್ನು ಮೀರಿದೆ ಮತ್ತು ಏಷ್ಯಾದ ಅತಿದೊಡ್ಡ ಚಲನಚಿತ್ರ ಮಾರುಕಟ್ಟೆಗಳಲ್ಲಿ ಒಂದಾಗಿ ರೂಪುಗೊಳ್ಳುತ್ತಿದೆ ಎಂದೂ  ಹೇಳಿದರು.

ಈ ವರ್ಷ, ಫಿಲ್ಮ್ ಬಜಾರ್ ಗೆ ಚಲನಚಿತ್ರಗಳ ಆಯ್ಕೆಯು ಕಾಲ್ಪನಿಕ, ಡಾಕ್ಯು-ಶಾರ್ಟ್ ಗಳು, ಸಾಕ್ಷ್ಯಚಿತ್ರಗಳು, ಭಯಾನಕ ಚಲನಚಿತ್ರಗಳು ಮತ್ತು ವಲಸಿಗ  ಜನಸಮುದಾಯ, ಪಿತೃಪ್ರಭುತ್ವ, ನಗರ ತಲ್ಲಣಗಳು/ ಉದ್ವೇಗ, ತೀವ್ರವಾದ ಬಡತನ, ಹವಾಮಾನ ಬಿಕ್ಕಟ್ಟು, ರಾಷ್ಟ್ರೀಯತೆ, ಕ್ರೀಡೆ ಮತ್ತು ದೈಹಿಕ ಕ್ಷಮತೆ (ಫಿಟ್ ನೆಸ್) ಗೆ ಸಂಬಂಧಿಸಿದ ಸಾರ್ವತ್ರಿಕ ವಿಷಯಗಳೊಂದಿಗೆ ವ್ಯವಹರಿಸುವ ಅನಿಮೇಟೆಡ್ ಚಲನಚಿತ್ರಗಳ ವೈವಿಧ್ಯಮಯ ಮಿಶ್ರಣವನ್ನು ಪ್ರತಿಬಿಂಬಿಸುತ್ತದೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದರು.
ಸಹ-ನಿರ್ಮಾಣ ಮಾರುಕಟ್ಟೆಯ ಬಗ್ಗೆ ಮಾತನಾಡಿದ ಸಚಿವರು, "ನಾವು 7 ದೇಶಗಳ ಹನ್ನೆರಡು ಸಾಕ್ಷ್ಯಚಿತ್ರಗಳನ್ನು ಸಹ-ನಿರ್ಮಾಣ ಮಾರುಕಟ್ಟೆಯಲ್ಲಿ ಹೆಮ್ಮೆಯಿಂದ ಪ್ರಸ್ತುತಪಡಿಸುತ್ತಿದ್ದೇವೆ, 17 ವಿವಿಧ ಭಾಷೆಗಳಲ್ಲಿ ಬದುಕನ್ನು/ಜೀವನವನ್ನು ಅನ್ವೇಷಣೆಗೆ ಒಡ್ಡುತ್ತಿದ್ದೇವೆ. ಇದು ಚಲನಚಿತ್ರ ನಿರ್ಮಾಪಕರ ದೃಷ್ಟಿಕೋನದ ಮೂಲಕ ವಾಸ್ತವದ ಹೃದಯಕ್ಕೆ ಸಾಗುವ ಒಂದು ಪ್ರಯಾಣವಾಗಿದೆ ಎಂದೂ ನುಡಿದರು. 


ವೀಡಿಯೊ ಲೈಬ್ರರಿ ಪ್ಲಾಟ್ಫಾರ್ಮ್, ವೀಕ್ಷಣಾ ಕೊಠಡಿ 190 ಸಲ್ಲಿಕೆಗಳನ್ನು ತೋರಿಸುತ್ತದೆ, ಅವುಗಳಲ್ಲಿ ಕೆಲವು ಸಲ್ಲಿಕೆಗಳನ್ನು ಫಿಲ್ಮ್ ಬಜಾರ್ ಶಿಫಾರಸುಗಳಿಗೆ (ಎಫ್ಬಿಆರ್) ಆಯ್ಕೆ ಮಾಡಲಾಗುವುದು ಎಂದು ಅವರು ಹೇಳಿದರು. "ವರ್ಕ್-ಇನ್-ಪ್ರೊಗ್ರೆಸ್ ಲ್ಯಾಬ್ ಚಲನಚಿತ್ರ ನಿರ್ಮಾಪಕರು ತಮ್ಮ ಕೆಲಸದ ಕಚ್ಚಾ ಸೌಂದರ್ಯವನ್ನು ತೋರಿಸುವ ಸ್ಥಳವಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಯೋಜನೆಯ ಸಂಖ್ಯೆಗಳನ್ನು ದ್ವಿಗುಣಗೊಳಿಸಿದ್ದು, ಈ ವರ್ಷ 10 ಯೋಜನೆಗಳು ಅನಾವರಣಗೊಳ್ಳಲು ಸಿದ್ಧವಾಗಿವೆ" ಎಂದೂ  ಸಚಿವರು ಹೇಳಿದರು.

ನಾವಿನ್ಯತೆಗೆ ಬೆಂಬಲವಾಗಿ   ಮತ್ತು ಸುಗಮವಾಗಿ ವಾಣಿಜ್ಯ ವ್ಯವಹಾರ  ನಡೆಸುವ ಪ್ರಧಾನಮಂತ್ರಿಯವರ ಕರೆಗೆ ಅನುಗುಣವಾಗಿ, "ಬುಕ್ ಟು ಬಾಕ್ಸ್ ಆಫೀಸ್" ಎಂಬ ಅತ್ಯಾಕರ್ಷಕ ಹೊಸ ಘಟಕವನ್ನು ಸೇರಿಸಲಾಗಿದೆ, ಇದು 59 ಸಲ್ಲಿಕೆಗಳನ್ನು ಪ್ರದರ್ಶಿಸುತ್ತದೆ ಮತ್ತು ಇದು ಪುಸ್ತಕಗಳಿಂದ ಪರದೆಗಳಿಗೆ ಜಿಗಿಯುವ ಅವಕಾಶವಾಗಿದೆ ಎಂದು ಶ್ರೀ ಠಾಕೂರ್ ಘೋಷಿಸಿದರು. ಕಾರ್ಯಕ್ರಮದ ನೇಪಥ್ಯದಲ್ಲಿ  ಸಚಿವರು ಗೂಗಲ್ ಕಲೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ  ಹಿಂದಿ ಪ್ರದರ್ಶನವನ್ನು ಉದ್ಘಾಟಿಸಿದರು, ಇದು ಹಿಂದಿ ಚಲನಚಿತ್ರಗಳ ಕಿರು ವೀಡಿಯೊಗಳನ್ನು ಮತ್ತು ಇಮೇಜ್ ಗಳನ್ನು ಹೊಂದಿರುವ ಆನ್ಲೈನ್ ತಾಣವಾಗಿದೆ.    

ಸಾಕ್ಷ್ಯಚಿತ್ರ, ಭಯಾನಕ ಚಲನ ಚಿತ್ರ, ಹವಾಮಾನ ಬಿಕ್ಕಟ್ಟು, ಕಾದಂಬರಿ ಸೇರಿದಂತೆ ವಿವಿಧ ಪ್ರಕಾರಗಳ 10 ಚಲನಚಿತ್ರಗಳನ್ನು ಐಎಫ್ಎಫ್ಐಯ  54ನೇ  ಫಿಲ್ಮ್ ಬಜಾರಿನಲ್ಲಿ  ಪ್ರದರ್ಶಿಸಲು ಶಿಫಾರಸು ಮಾಡಲಾಗಿದೆ. ಚಲನಚಿತ್ರಗಳು ಇಂಗ್ಲಿಷ್, ಹಿಂದಿ, ಬಂಗಾಳಿ, ಮಾರ್ವಾಡಿ, ಕನ್ನಡ ಮತ್ತು ಮಾವೊರಿ (ನ್ಯೂಜಿಲೆಂಡ್ ಭಾಷೆ) ಭಾಷೆಗಳಲ್ಲಿವೆ.  ಈ ವರ್ಷ, ಫಿಲ್ಮ್ ಬಜಾರ್ ಹೊಸದಾಗಿ ರೂಪಿಸಲಾದ  "ವಿಎಫ್ಎಕ್ಸ್ & ಟೆಕ್ ಪೆವಿಲಿಯನ್" ಅನ್ನು ಹೊಂದಿದೆ, ಇದು ಚಲನಚಿತ್ರ ನಿರ್ಮಾಪಕರಿಗೆ ಸಾಂಪ್ರದಾಯಿಕ ವಿಧಾನವಾದ "ಶಾಟ್ ತೆಗೆದುಕೊಳ್ಳುವ" ವಿಧಾನಕ್ಕೆ ಬದಲು ಇತ್ತೀಚಿನ ಆವಿಷ್ಕಾರಗಳ ಬಗ್ಗೆ ಅರಿವು ಮೂಡಿಸಲು, ಮತ್ತು ಆ ಮೂಲಕ ಕಥೆ ಹೇಳುವ ಸಾಧ್ಯತೆಗಳನ್ನು ಅನ್ವೇಷಿಸಲು ನೆರವಾಗಲಿದೆ ಎಂದರು. 

ಫಿಲ್ಮ್ ಬಜಾರ್ ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ಯುಎಸ್ಎ, ಯುಕೆ, ಸಿಂಗಾಪುರ್, ಜರ್ಮನಿ, ಫ್ರಾನ್ಸ್, ಪೋಲೆಂಡ್, ಲಕ್ಸೆಂಬರ್ಗ್ ಮತ್ತು ಇಸ್ರೇಲ್ ಗಳಿಂದ ಅಧಿಕೃತವಾಗಿ ಆಯ್ಕೆಗೊಂಡ  ಸಹ-ನಿರ್ಮಾಣ ಮಾರುಕಟ್ಟೆಯ ವೈಶಿಷ್ಟ್ಯಪೂರ್ಣ ಕಥಾಚಿತ್ರಗಳನ್ನು ಪ್ರದರ್ಶಿಸುತ್ತದೆ. ಆಯ್ಕೆಯಾದ ಚಲನಚಿತ್ರಗಳ ನಿರ್ಮಾಪಕರು ತಮ್ಮ ಯೋಜನೆಗಳನ್ನು ಅಂತರರಾಷ್ಟ್ರೀಯ ಮತ್ತು ಭಾರತೀಯ ನಿರ್ಮಾಪಕರು, ವಿತರಕರು, ಉತ್ಸವಗಳ ಆಯೋಜಕರು, ಹಣಕಾಸು ಒದಗಣೆದಾರರು ಮತ್ತು ಮಾರಾಟ ಏಜೆಂಟರಿಗೆ ಮುಕ್ತ ವ್ಯವಸ್ಥೆಯಲ್ಲಿ  ಪ್ರಸ್ತುತಪಡಿಸಲಿದ್ದಾರೆ.
ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್ಎಫ್ ಡಿ ಸಿ) ಪ್ರಾರಂಭಿಸಿದ ಫಿಲ್ಮ್ ಬಜಾರ್ ದಕ್ಷಿಣ ಏಷ್ಯಾದ ಅತಿದೊಡ್ಡ ಚಲನಚಿತ್ರ ಮಾರುಕಟ್ಟೆಯಾಗಿ ವಿಕಸನಗೊಂಡಿದೆ, ಸ್ಥಳೀಯ ಚಲನಚಿತ್ರ ತಯಾರಕರನ್ನು ಜಾಗತಿಕ ನಿರ್ಮಾಪಕರು ಮತ್ತು ವಿತರಕರೊಂದಿಗೆ ಬೆಸೆಯುತ್ತಿದೆ. 

****



(Release ID: 1978370) Visitor Counter : 101