ಪ್ರಧಾನ ಮಂತ್ರಿಯವರ ಕಛೇರಿ

ಅಕ್ಟೋಬರ್‌ 27ರಂದು ಭಾರತೀಯ ಮೊಬೈಲ್‌ ಕಾಂಗ್ರೆಸ್‌ (ಐಎಂಸಿ) 2023ರ 7ನೇ ಆವೃತ್ತಿಯನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ


ದೇಶಾದ್ಯಂತ ಶಿಕ್ಷ ಣ ಸಂಸ್ಥೆಗಳಿಗೆ 100 ‘5ಜಿ ಯೂಸ್‌ ಕೇಸ್‌ ಲ್ಯಾಬ್‌’ಗಳನ್ನು ನೀಡಲಿರುವ ಪ್ರಧಾನಮಂತ್ರಿ

‘100 5ಜಿ ಲ್ಯಾಬ್ಸ್‌ ಉಪಕ್ರಮ’ ಸಾಮಾಜಿಕ ಆರ್ಥಿಕ ಕ್ಷೇತ್ರಗಳಲ್ಲಿ ನಾವೀನ್ಯತೆಯನ್ನು ಉತ್ತೇಜಿಸಲು 5ಜಿ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ ಮತ್ತು ದೇಶದಲ್ಲಿ 6ಜಿ-ಸಿದ್ಧ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಪ್ರಮುಖ ಹೆಜ್ಜೆಯಾಗಿದೆ

ಐಎಂಸಿ 2023 ಪ್ರಮುಖ ಅತ್ಯಾಧುನಿಕ ತಂತ್ರಜ್ಞಾನಗಳ ಡೆವಲಪರ್‌, ತಯಾರಕ ಮತ್ತು ರಫ್ತುದಾರರಾಗಿ ಭಾರತದ ಸ್ಥಾನವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ

Posted On: 26 OCT 2023 2:25PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಅಕ್ಟೋಬರ್‌ 27ರಂದು ಬೆಳಗ್ಗೆ 9:45/ಕ್ಕೆ ನವದೆಹಲಿಯ ಪ್ರಗತಿ ಮೈದಾನದ ಭಾರತ್‌ ಮಂಟಪದಲ್ಲಿ ಭಾರತೀಯ ಮೊಬೈಲ್‌ ಕಾಂಗ್ರೆಸ್‌ 2023ರ 7ನೇ ಆವೃತ್ತಿಯನ್ನು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರು ದೇಶಾದ್ಯಂತದ ಶಿಕ್ಷಣ ಸಂಸ್ಥೆಗಳಿಗೆ 100 ‘5ಜಿ ಯೂಸ್‌ ಕೇಸ್‌ ಲ್ಯಾಬ್‌’ಗಳನ್ನು ಪ್ರದಾನ ಮಾಡಲಿದ್ದಾರೆ. ಈ ಪ್ರಯೋಗಾಲಯಗಳನ್ನು ‘100 5ಜಿ ಲ್ಯಾಬ್ಸ್ ಉಪಕ್ರಮ’ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.

‘100 5ಜಿ ಲ್ಯಾಬ್ಸ್ ಉಪಕ್ರಮ’ವು ಭಾರತದ ವಿಶಿಷ್ಟ ಅಗತ್ಯತೆಗಳು ಮತ್ತು ಜಾಗತಿಕ ಬೇಡಿಕೆಗಳನ್ನು ಪೂರೈಸುವ 5 ಜಿ ಅಪ್ಲಿಕೇಶನ್‌ಗಳ ಅಭಿವೃದ್ಧಿಯನ್ನು ಉತ್ತೇಜಿಸುವ ಮೂಲಕ 5ಜಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಅವಕಾಶಗಳನ್ನು ಅರಿತುಕೊಳ್ಳುವ ಪ್ರಯತ್ನವಾಗಿದೆ. ಈ ವಿಶಿಷ್ಟ ಉಪಕ್ರಮವು ಶಿಕ್ಷಣ, ಕೃಷಿ, ಆರೋಗ್ಯ, ವಿದ್ಯುತ್‌, ಸಾರಿಗೆ ಮುಂತಾದ ವಿವಿಧ ಸಾಮಾಜಿಕ ಆರ್ಥಿಕ ಕ್ಷೇತ್ರಗಳಲ್ಲಿ ನಾವೀನ್ಯತೆಯನ್ನು ಉತ್ತೇಜಿಸುತ್ತದೆ ಮತ್ತು 5ಜಿ ತಂತ್ರಜ್ಞಾನದ ಬಳಕೆಯಲ್ಲಿ ದೇಶವನ್ನು ಮುಂಚೂಣಿಗೆ ಕೊಂಡೊಯ್ಯುತ್ತದೆ. ಈ ಉಪಕ್ರಮವು ದೇಶದಲ್ಲಿ 6ಜಿ-ಸಿದ್ಧ ಶೈಕ್ಷಣಿಕ ಮತ್ತು ನವೋದ್ಯಮ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಒಂದು ಪ್ರಮುಖ ಹೆಜ್ಜೆಯಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಈ ಉಪಕ್ರಮವು ರಾಷ್ಟ್ರೀಯ ಭದ್ರತೆಗೆ ನಿರ್ಣಾಯಕವಾದ ದೇಶೀಯ ಟೆಲಿಕಾಂ ತಂತ್ರಜ್ಞಾನದ ಅಭಿವೃದ್ಧಿಯತ್ತ ಒಂದು ಹೆಜ್ಜೆಯಾಗಿದೆ.

ಇಂಡಿಯಾ ಮೊಬೈಲ್‌ ಕಾಂಗ್ರೆಸ್‌ (ಐಎಂಸಿ) ಏಷ್ಯಾದ ಅತಿದೊಡ್ಡ ಟೆಲಿಕಾಂ, ಮಾಧ್ಯಮ ಮತ್ತು ತಂತ್ರಜ್ಞಾನ ವೇದಿಕೆಯಾಗಿದ್ದು, 2023ರ ಅಕ್ಟೋಬರ್‌ 27ರಿಂದ 29 ರವರೆಗೆ ನಡೆಯಲಿದೆ. ದೂರಸಂಪರ್ಕ ಮತ್ತು ತಂತ್ರಜ್ಞಾನದಲ್ಲಿ ಭಾರತದ ನಂಬಲಾಗದ ಪ್ರಗತಿಯನ್ನು ಬಿಂಬಿಸಲು, ಮಹತ್ವದ ಪ್ರಕಟಣೆಗಳನ್ನು ಹೊರಡಿಸಲು ಮತ್ತು ನವೋದ್ಯಮಗಳಿಗೆ ತಮ್ಮ ನವೀನ ಉತ್ಪನ್ನಗಳು ಮತ್ತು ಪರಿಹಾರಗಳನ್ನು ಪ್ರದರ್ಶಿಸಲು ಅವಕಾಶವನ್ನು ಒದಗಿಸಲು ಈ ಕಾರ್ಯಕ್ರಮ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

‘ಗ್ಲೋಬಲ್‌ ಡಿಜಿಟಲ್‌ ಇನ್ನೋವೇಶನ್‌’ ಎಂಬ ಧ್ಯೇಯ ವಾಕ್ಯದೊಂದಿಗೆ, ಐಎಂಸಿ 2023 ಪ್ರಮುಖ ಅತ್ಯಾಧುನಿಕ ತಂತ್ರಜ್ಞಾನಗಳ ಡೆವಲಪರ್‌, ತಯಾರಕ ಮತ್ತು ರಫ್ತುದಾರರಾಗಿ ಭಾರತದ ಸ್ಥಾನವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಮೂರು ದಿನಗಳ ಸಮ್ಮೇಳನದಲ್ಲಿ 5ಜಿ, 6ಜಿ, ಕೃತಕ ಬುದ್ಧಿಮತ್ತೆ (ಎಐ) ನಂತಹ ತಂತ್ರಜ್ಞಾನಗಳನ್ನು ಬಿಂಬಿಸಲಾಗುತ್ತದೆ ಮತ್ತು ಅರೆವಾಹಕ ಉದ್ಯಮ, ಹಸಿರು ತಂತ್ರಜ್ಞಾನ, ಸೈಬರ್‌ ಭದ್ರತೆ ಇತ್ಯಾದಿಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲಾಗುತ್ತದೆ.

ಈ ವರ್ಷ, ಐಎಂಸಿ ‘ಆಸ್ಪೈರ್‌’ ಎಂಬ ಸ್ಟಾರ್ಟ್‌ಅಪ್‌ ಕಾರ್ಯಕ್ರಮವನ್ನು ಪರಿಚಯಿಸುತ್ತಿದೆ. ಇದು ಹೊಸ ಉದ್ಯಮಶೀಲತಾ ಉಪಕ್ರಮಗಳು ಮತ್ತು ಸಹಯೋಗಗಳನ್ನು ವೇಗ ವರ್ಧಿಸುವ ಉದ್ದೇಶದಿಂದ ಸ್ಟಾರ್ಟ್‌ಅಪ್‌ಗಳು, ಹೂಡಿಕೆದಾರರು ಮತ್ತು ಸ್ಥಾಪಿತ ವ್ಯವಹಾರಗಳ ನಡುವೆ ಸಂಪರ್ಕವನ್ನು ಬೆಳೆಸುತ್ತದೆ.

ಐಎಂಸಿ 2023 ರಲ್ಲಿ ಸುಮಾರು 5000 ಸಿಇಒ ಮಟ್ಟದ ಪ್ರತಿನಿಧಿಗಳು, 230 ಪ್ರದರ್ಶಕರು, 400 ಸ್ಟಾರ್ಟ್‌ಅಪ್‌ಗಳು ಮತ್ತು ಇತರ ಪಾಲುದಾರರು ಸೇರಿದಂತೆ ಸುಮಾರು 22 ದೇಶಗಳಿಂದ ಒಂದು ಲಕ್ಷ ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

*****



(Release ID: 1971574) Visitor Counter : 112