ಪ್ರಧಾನ ಮಂತ್ರಿಯವರ ಕಛೇರಿ

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಸಿಂಧಿಯಾ ಶಾಲೆಯ 125ನೇ ಸ್ಥಾಪಕರ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಮಂತ್ರಿಯವರ ಭಾಷಣ


ಶಾಲೆಯಲ್ಲಿ ವಿವಿಧೋದ್ದೇಶ ಕ್ರೀಡಾ ಸಂಕೀರ್ಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು

ಸಿಂಧಿಯಾ ಶಾಲೆಯ 125ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಿದರು

ಪ್ರತಿಭಾವಂತ ಹಳೆಯ ವಿದ್ಯಾರ್ಥಿಗಳು ಮತ್ತು ಉನ್ನತ ಸಾಧಕರಿಗೆ ಶಾಲೆಯ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು

"ಮಹಾರಾಜ ಮಾಧೋ ರಾವ್ ಸಿಂಧಿಯಾ-1 ಅವರು ದೂರದೃಷ್ಟಿಯುಳ್ಳವರಾಗಿದ್ದರು, ಅವರು ಮುಂದಿನ ಪೀಳಿಗೆಗೆ ಉಜ್ವಲ ಭವಿಷ್ಯವನ್ನು ಸೃಷ್ಟಿಸುವ ಕನಸನ್ನು ಹೊಂದಿದ್ದರು"

"ಕಳೆದ ದಶಕದಲ್ಲಿ, ರಾಷ್ಟ್ರದ ಅಭೂತಪೂರ್ವ ದೀರ್ಘಕಾಲೀನ ಯೋಜನೆಗಳು ಅದ್ಭುತ ನಿರ್ಧಾರಗಳಿಗೆ ಕಾರಣವಾಗಿವೆ"

"ಇಂದಿನ ಯುವಕರು ಏಳಿಗೆ ಹೊಂದಲು ದೇಶದಲ್ಲಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುವುದು ನಮ್ಮ ಪ್ರಯತ್ನವಾಗಿದೆ"

" ಅದು ವೃತ್ತಿಪರ ಜಗತ್ತಿನಲ್ಲಿರಲಿ ಅಥವಾ ಇನ್ನಾವುದೇ ಕ್ಷೇತ್ರದಲ್ಲಾಗಲಿ ಸಿಂಧಿಯಾ ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಯು ಭಾರತವನ್ನು ʻವಿಕಸಿತ  ಭಾರತʼವನ್ನಾಗಿ ಮಾಡಲು ಶ್ರಮಿಸಬೇಕು"

"ಭಾರತ ಇಂದು ಏನನ್ನೇ ಮಾಡಿದರೂ, ಅದನ್ನು ದೊಡ್ಡ ಪ್ರಮಾಣದಲ್ಲಿ ಮಾಡುತ್ತಿದೆ"

"ನಿಮ್ಮ ಕನಸು ನನ್ನ ಸಂಕಲ್ಪ"

Posted On: 21 OCT 2023 7:14PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ 'ದಿ ಸಿಂಧಿಯಾ ಶಾಲೆಯ' 125ನೇ ಸ್ಥಾಪಕರ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಭಾಗವಾಗಿ ಪ್ರಧಾನಮಂತ್ರಿಯವರು ಶಾಲೆಯಲ್ಲಿ 'ವಿವಿಧೋದ್ದೇಶ ಕ್ರೀಡಾ ಸಂಕೀರ್ಣ'ಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಇದೇ ವೇಳೆ, ಪ್ರತಿಭಾವಂತ ಹಳೆಯ ವಿದ್ಯಾರ್ಥಿಗಳು ಮತ್ತು ಉನ್ನತ ಸಾಧಕರಿಗೆ ಶಾಲೆಯ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಸಿಂಧಿಯಾ ಶಾಲೆಯನ್ನು 1897ರಲ್ಲಿ ಸ್ಥಾಪಿಸಲಾಯಿತು ಮತ್ತು ಇದು ಐತಿಹಾಸಿಕ ಗ್ವಾಲಿಯರ್ ಕೋಟೆಯ ಮೇಲಿದೆ. ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ಸ್ಮರಣಾರ್ಥ ಅಂಚೆ ಚೀಟಿಯನ್ನೂ ಬಿಡುಗಡೆ ಮಾಡಿದರು.

ಪ್ರಧಾನಮಂತ್ರಿಯವರು ಶಿವಾಜಿ ಮಹಾರಾಜರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರದರ್ಶಿಸಲಾದ ವಸ್ತುಪ್ರದರ್ಶನದಲ್ಲೂ ಅವರು ಹೆಜ್ಜೆ ಹಾಕಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಸಿಂಧಿಯಾ ಶಾಲೆಯ 125ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ʻಆಜಾದ್ ಹಿಂದ್ ಸರ್ಕಾರ್ ಸಂಸ್ಥಾಪನಾ ದಿನʼದ ಸಂದರ್ಭದಲ್ಲಿ ಅವರು ನಾಗರಿಕರನ್ನು ಅಭಿನಂದಿಸಿದರು. ಸಿಂಧಿಯಾ ಶಾಲೆ ಮತ್ತು ಗ್ವಾಲಿಯರ್ ನಗರದ ಪ್ರತಿಷ್ಠಿತ ಇತಿಹಾಸಿಕ ಆಚರಣೆಯ ಭಾಗವಾಗಲು ಅವಕಾಶ ಸಿಕ್ಕಿದ್ದಕ್ಕಾಗಿ ಪ್ರಧಾನಿ ಕೃತಜ್ಞತೆ ಸಲ್ಲಿಸಿದರು. ರಿಷಿ ಗ್ವಾಲಿಪಾ, ಸಂಗೀತ ಮಾಂತ್ರಿಕ ತಾನ್ಸೇನ್, ಮಹದ್ ಜಿ ಸಿಂಧಿಯಾ, ರಾಜಮಾತಾ ವಿಜಯ ರಾಜೆ, ಅಟಲ್ ಬಿಹಾರಿ ವಾಜಪೇಯಿ ಮತ್ತು ಉಸ್ತಾದ್ ಅಮ್ಜದ್ ಅಲಿ ಖಾನ್ ಅವರನ್ನು ಉಲ್ಲೇಖಿಸಿದ ಪ್ರಧಾನಿಯವರು, ಗ್ವಾಲಿಯರ್ ಭೂಮಿಯು ಸದಾ ಇತರರಿಗೆ ಸ್ಫೂರ್ತಿ ನೀಡುವವರಿಗೆ ಜನ್ಮ ನೀಡಿದೆ ಎಂದರು. "ಇದು ನಾರಿ ಶಕ್ತಿ ಮತ್ತು ಶೌರ್ಯದ ನಾಡು" ಎಂದು ಹೇಳಿದ ಪ್ರಧಾನಮಂತ್ರಿಯವರು, ಈ ಭೂಮಿಯಲ್ಲಿಯೇ ಮಹಾರಾಣಿ ಗಂಗಾಬಾಯಿ ಅವರು ʻಸ್ವರಾಜ್ ಹಿಂದ್ ಫೌಜ್‌ʼಗೆ ಧನಸಹಾಯ ನೀಡಲು ತಮ್ಮ ಆಭರಣಗಳನ್ನು ಮಾರಾಟ ಮಾಡಿದರು ಎಂದು ಒತ್ತಿ ಹೇಳಿದರು. "ಗ್ವಾಲಿಯರ್‌ಗೆ ಬರುವುದು ಸದಾ ಸಂತೋಷದಾಯಕ ಅನುಭವ", ಎಂದು ಪ್ರಧಾನಿ ಹೇಳಿದರು. ಭಾರತ ಮತ್ತು ವಾರಣಾಸಿಯ ಸಂಸ್ಕೃತಿಯ ಸಂರಕ್ಷಣೆಗೆ ಸಿಂಧಿಯಾ ಕುಟುಂಬದ ಕೊಡುಗೆಯನ್ನು ಪ್ರಧಾನಿ ಉಲ್ಲೇಖಿಸಿದರು. ಕಾಶಿಯಲ್ಲಿ ಕುಟುಂಬವು ನಿರ್ಮಿಸಿದ ಹಲವಾರು ಘಾಟ್‌ಗಳನ್ನು ಮತ್ತು ಬನಾರಸ್‌ ಹಿಂದೂ ವಿಶ್ವವಿದ್ಯಾಲಯಕ್ಕೆ ನೀಡಿದ ಕೊಡುಗೆಗಳನ್ನು ಅವರು ಸ್ಮರಿಸಿದರು. ಕಾಶಿಯಲ್ಲಿನ ಇಂದಿನ ಅಭಿವೃದ್ಧಿ ಯೋಜನೆಗಳು ಈ ಕುಟುಂಬದ ಗಣ್ಯರಿಗೆ ತೃಪ್ತಿ ತಂದಿರಬಹುದು ಎಂದು ಅವರು ಹೇಳಿದರು. ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಅವರು ಗುಜರಾತ್‌ನ ಅಳಿಯ ಎಂದು ಉಲ್ಲೇಖಿಸಿದ ಪ್ರಧಾನಿ, ಗುಜರಾತ್‌ನ ತಮ್ಮ ಹುಟ್ಟೂರಿಗೆ ಗಾಯಕ್ವಾಡ್ ಕುಟುಂಬದ ಕೊಡುಗೆಯನ್ನೂ ಉಲ್ಲೇಖಿಸಿದರು.

ಕರ್ತವ್ಯನಿಷ್ಠ ವ್ಯಕ್ತಿಗಳು ಕ್ಷಣಿಕ ಪ್ರಯೋಜನಗಳಿಗಾಗಿ ಕೆಲಸ ಮಾಡುವ ಬದಲು ಮುಂಬರುವ ಪೀಳಿಗೆಯ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಾರೆ ಎಂದು ಪ್ರಧಾನಿ ಹೇಳಿದರು. ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ದೀರ್ಘಕಾಲೀನ ಪ್ರಯೋಜನಗಳನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಮಹಾರಾಜ ಒಂದನೇ ಮಾಧೋ ರಾವ್ ಅವರಿಗೆ ಗೌರವ ನಮನ ಸಲ್ಲಿಸಿದರು. ಮಹಾರಾಜರು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸ್ಥಾಪಿಸಿದರು, ಅದು ದೆಹಲಿಯಲ್ಲಿ ಇನ್ನೂ ʻಡಿಟಿಸಿʼಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಬಹುಜನರಿಗೆ ಅರಿವಿಲ್ಲದ ಸಂಗತಿಯನ್ನು ಶ್ರೀ ಮೋದಿ ಉಲ್ಲೇಖಿಸಿದರು. ಜಲ ಸಂರಕ್ಷಣೆ ಮತ್ತು ನೀರಾವರಿಗಾಗಿ ಅವರ ಉಪಕ್ರಮವನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ʻಹರ್ಸಿʼ ಅಣೆಕಟ್ಟು 150 ವರ್ಷಗಳ ನಂತರವೂ ಏಷ್ಯಾದ ಅತಿದೊಡ್ಡ ಮಣ್ಣಿನ ಅಣೆಕಟ್ಟಾಗಿ ಹಿರಿಮೆ ಉಳಿಸಿಕೊಂಡಿದೆ ಎಂದು ಮಾಹಿತಿ ನೀಡಿದರು. ಅವರ ದೃಷ್ಟಿಕೋನವು ದೀರ್ಘಾವಧಿಯವರೆಗೆ ಕೆಲಸ ಮಾಡಲು ಮತ್ತು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಅಡ್ಡಹಾದಿಗಳನ್ನು ತಪ್ಪಿಸಲು ನಮಗೆ ಕಲಿಸುತ್ತದೆ ಎಂದು ಪ್ರಧಾನಿ ಹೇಳಿದರು.

2014ರಲ್ಲಿ ಭಾರತದ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ತಕ್ಷಣದ ಫಲಿತಾಂಶಗಳಿಗಾಗಿ ಕೆಲಸ ಮಾಡುವ ಅಥವಾ ದೀರ್ಘಕಾಲೀನ ವಿಧಾನವನ್ನು ಅಳವಡಿಸಿಕೊಳ್ಳುವ ಎರಡು ಆಯ್ಕೆಗಳು ತಮ್ಮ ಮುಂದಿದ್ದವು ಎಂದು ಪ್ರಧಾನಿ ಒತ್ತಿ ಹೇಳಿದರು. 2, 5, 8, 10, 15 ಮತ್ತು 20 ವರ್ಷಗಳವರೆಗಿನ ವಿವಿಧ ಕಾಲಮಿತಿಗಳೊಂದಿಗೆ ಕೆಲಸ ಮಾಡಲು ಸರ್ಕಾರ ನಿರ್ಧರಿಸಿದೆ ಮತ್ತು ಈಗ ಸರ್ಕಾರವು 10 ವರ್ಷಗಳನ್ನು ಪೂರ್ಣಗೊಳಿಸುವ ಸಮೀಪದಲ್ಲಿದೆ, ದೀರ್ಘಕಾಲೀನ ವಿಧಾನದೊಂದಿಗೆ ಈ ಹಿಂದೆ ಬಾಕಿ ಉಳಿದಿದ್ದ ಅನೇಕ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸುವ ಆರು ದಶಕಗಳ ಹಿಂದಿನ ಬೇಡಿಕೆ, ಸೇನೆಯ ಮಾಜಿ ಸೈನಿಕರಿಗೆ ʻಸಮಾನ ಶ್ರೇಣಿ, ಸಮಾನ ಪಿಂಚಣಿʼ ನೀಡುವ ನಾಲ್ಕು ದಶಕಗಳ ಹಿಂದಿನ ಬೇಡಿಕೆ, ʻಜಿಎಸ್‌ಟಿʼ ಮತ್ತು ತ್ರಿವಳಿ ತಲಾಖ್ ಕಾನೂನಿಗಾಗಿ ಇದ್ದ ನಾಲ್ಕು ದಶಕಗಳ ಹಿಂದಿನ ಬೇಡಿಕೆಯನ್ನು ಶ್ರೀ ಮೋದಿ ಉಲ್ಲೇಖಿಸಿದರು. ಇತ್ತೀಚೆಗೆ ಸಂಸತ್ತಿನಲ್ಲಿ ಅಂಗೀಕರಿಸಲಾದ ʻನಾರಿ ಶಕ್ತಿ ವಂದನ ಅಧಿನಿಯಮ್ʼ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ಅವಕಾಶಗಳ ಕೊರತೆಯಿಲ್ಲದಂತಹ, ಯುವ ಪೀಳಿಗೆಗೆ ಸಕಾರಾತ್ಮಕವಾದ ವಾತಾವರಣವನ್ನು ಸೃಷ್ಟಿಸಲು ಶ್ರಮಿಸುತ್ತಿರುವ ಪ್ರಸ್ತುತ ಸರ್ಕಾರ ಇಲ್ಲದಿದ್ದರೆ ಈ ಬಾಕಿ ಇರುವ ನಿರ್ಧಾರಗಳನ್ನು ಮುಂದಿನ ಪೀಳಿಗೆಗೆ ಮುಂದೂಡಿಕೆ ಮಾಡಲಾಗುತ್ತಿತ್ತು ಎಂದು ಶ್ರೀ ಮೋದಿ ಒತ್ತಿ ಹೇಳಿದರು. "ದೊಡ್ಡ ಕನಸು ಕಾಣಿರಿ ಮತ್ತು ದೊಡ್ಡದನ್ನು ಸಾಧಿಸಿ" ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದ ಪ್ರಧಾನಮಂತ್ರಿಯವರು, ಭಾರತವು ಸ್ವಾತಂತ್ರ್ಯದ 100 ವರ್ಷಗಳನ್ನು ಪೂರ್ಣಗೊಳಿಸಿದಾಗ ಸಿಂಧಿಯಾ ಶಾಲೆಯೂ 150 ವರ್ಷಗಳನ್ನು ಪೂರೈಸುತ್ತದೆ ಎಂದು ಹೇಳಿದರು. ಮುಂದಿನ 25 ವರ್ಷಗಳಲ್ಲಿ, ಯುವ ಪೀಳಿಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುತ್ತದೆ ಎಂಬ ವಿಶ್ವಾಸವನ್ನುಪ್ರಧಾನಿ ವ್ಯಕ್ತಪಡಿಸಿದರು. "ನಾನು ಯುವಕರನ್ನು ಮತ್ತು ಅವರ ಸಾಮರ್ಥ್ಯಗಳನ್ನು ನಂಬುತ್ತೇನೆ" ಎಂದು ಹೇಳಿದ ಪ್ರಧಾನಮಂತ್ರಿಯವರು, ರಾಷ್ಟ್ರವು ಕೈಗೊಂಡ ಸಂಕಲ್ಪವನ್ನು ಯುವಕರು ಸಾಧಿಸುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಮುಂದಿನ 25 ವರ್ಷಗಳು ಭಾರತದಷ್ಟೇ ವಿದ್ಯಾರ್ಥಿಗಳಿಗೂ ಮಹತ್ವದ್ದಾಗಿದೆ ಎಂದು ಅವರು ಪುನರುಚ್ಚರಿಸಿದರು. "ಅದು ವೃತ್ತಿಪರ ಜಗತ್ತಿನಲ್ಲಾಗಲೀ ಅಥವಾ ಇನ್ನಾವುದೇ ಕ್ಷೇತ್ರದಲ್ಲಾಗಲೀ, ಸಿಂಧಿಯಾ ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಯು ಭಾರತವನ್ನು ವಿಕಸಿತ  ಭಾರತವನ್ನಾಗಿ ಮಾಡಲು ಶ್ರಮಿಸಬೇಕು," ಎಂದು ಅವರು ಒತ್ತಿ ಹೇಳಿದರು.

ಸಿಂಧಿಯಾ ಶಾಲೆಯ ಹಳೆಯ ವಿದ್ಯಾರ್ಥಿಗಳೊಂದಿಗಿನ ತಮ್ಮ ಸಂವಾದವು ವಿಕಸಿತ ಭಾರತದ ಸಂಕಲ್ಪವನ್ನು ಪೂರೈಸುವ ಅವರ ಸಾಮರ್ಥ್ಯದ ಮೇಲಿನ ತಮ್ಮ ನಂಬಿಕೆಯನ್ನು ಬಲಪಡಿಸಿದೆ ಎಂದು ಪ್ರಧಾನಿ ಹೇಳಿದರು. ಕೇಂದ್ರ ಸಚಿವ ಜಿತೇಂದ್ರ ಸಿಂಗ್, ರೇಡಿಯೋ ದಂತಕಥೆ ಅಮೀನ್ ಸಯಾನಿ; ತಮ್ಮೊಂದಿಗೆ ಗಾರ್ಭಾ ಗೀತೆ ರಚಿಸಿದ ಸಲ್ಮಾನ್ ಖಾನ್, ಗಾಯಕ ನಿತಿನ್ ಮುಖೇಶ್ ಹಾಗೂ ಆ ಗಾರ್ಭಾವನ್ನು ಪ್ರಸ್ತುತಪಡಿಸಿದ ಮೀಟ್ ಸಹೋದರರನ್ನು ಶ್ರೀ ಮೋದಿ ಅವರು ಉಲ್ಲೇಖಿಸಿದರು.

ಭಾರತದ ಬೆಳೆಯುತ್ತಿರುವ ಜಾಗತಿಕ ಚಿತ್ರಣದ ಬಗ್ಗೆ ಪ್ರಧಾನಿ ಮಾತನಾಡಿದರು. ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದದ್ದು ಮತ್ತು ಯಶಸ್ವಿ ʻಜಿ-20ʼ ಆಯೋಜನೆಯನ್ನು ಅವರು ಉಲ್ಲೇಖಿಸಿದರು. ಭಾರತವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂದು ಅವರು ಹೇಳಿದರು. ʻಫಿನ್‌ಟೆಕ್‌ʼ, ʻರಿಯಲ್ ಟೈಮ್ ಡಿಜಿಟಲ್ ವಹಿವಾಟುʼ ಮತ್ತು ಸ್ಮಾರ್ಟ್‌ಫೋನ್‌ ಡೇಟಾ ಬಳಕೆಯಲ್ಲಿ ಭಾರತವು ಮೊದಲ ಸ್ಥಾನದಲ್ಲಿದೆ. ಇಂಟರ್ನೆಟ್ ಬಳಕೆದಾರರ ಸಂಖ್ಯೆ ಮತ್ತು ಮೊಬೈಲ್ ಉತ್ಪಾದನೆಯಲ್ಲಿ ಭಾರತವು ಎರಡನೇ ಸ್ಥಾನದಲ್ಲಿದೆ ಎಂದು ಅವರು ಮಾಹಿತಿ ನೀಡಿದರು. ಭಾರತವು ಮೂರನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಹೊಂದಿದೆ ಮತ್ತು ವಿಶ್ವದ ಮೂರನೇ ಅತಿದೊಡ್ಡ ಇಂಧನ ಗ್ರಾಹಕವಾಗಿದೆ ಎಂದರು. ಬಾಹ್ಯಾಕಾಶ ನಿಲ್ದಾಣಕ್ಕಾಗಿ ಭಾರತದ ಸಿದ್ಧತೆ ಮತ್ತು ಇಂದೇ ನಡೆಸಿದ ಗಗನಯಾನ ಸಂಬಂಧಿತ ಯಶಸ್ವಿ ಪರೀಕ್ಷೆಯನ್ನು ಅವರು ಉಲ್ಲೇಖಿಸಿದರು. ಅವರು ʻತೇಜಸ್ʼ ಮತ್ತು ʻಐಎನ್ಎಸ್ ವಿಕ್ರಾಂತ್ʼ ಬಗ್ಗೆಯೂ ಹೇಳಿದರು ಮತ್ತು "ಭಾರತಕ್ಕೆ ಅಸಾಧ್ಯವಾದುದು ಯಾವುದೂ ಇಲ್ಲ," ಎಂದು ಹೇಳಿದರು.

ಜಗತ್ತು ವಿದ್ಯಾರ್ಥಿಗಳ ಪಾಲಿಗೆ ಅವರ ʻಕಾಮ್ಯ ಸಂಪುಟʼ ಎಂದು ಹೇಳಿದ ಪ್ರಧಾನಮಂತ್ರಿಯವರು, ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರಗಳು ಸೇರಿದಂತೆ ಅವರಿಗಾಗಿ ತೆರೆಯಲಾದ ಹೊಸ ಮಾರ್ಗಗಳ ಬಗ್ಗೆ ತಿಳಿಸಿದರು. ಶತಾಬ್ದಿ ರೈಲುಗಳನ್ನು ಪ್ರಾರಂಭಿಸಲು ಮಾಜಿ ರೈಲ್ವೆ ಸಚಿವ ಶ್ರೀ ಮಾಧವರಾವ್ ಅವರು ಕೈಗೊಂಡ ಉಪಕ್ರಮಗಳು ಮೂರು ದಶಕಗಳವರೆಗೆ ಪುನರಾವರ್ತನೆಯಾಗಲಿಲ್ಲ. ಮತ್ತು ಈಗ ದೇಶವು ʻವಂದೇ ಭಾರತ್ʼ ಮತ್ತು ʻನಮೋ ಭಾರತ್ʼ ರೈಲುಗಳನ್ನು ನೋಡುತ್ತಿದೆ ಎಂದು ಪ್ರಧಾನಿ ವಿದ್ಯಾರ್ಥಿಗಳಿಗೆ ನೆನಪಿಸಿದರು.

ʻಸ್ವರಾಜ್ಯʼ ನಿರ್ಣಯಗಳ ಆಧಾರದ ಮೇಲೆ ಸಿಂಧಿಯಾ ಶಾಲೆಯಲ್ಲಿನ ಸದನಗಳ ಹೆಸರುಗಳ ಬಗ್ಗೆ ಪ್ರಧಾನಿ ಒತ್ತಿ ಹೇಳಿದರು. ಇದು ಸ್ಫೂರ್ತಿಯ ದೊಡ್ಡ ಮೂಲವಾಗಿದೆ ಎಂದರು. ʻಶಿವಾಜಿ ಸದನʼ, ʻಮಹದ್ ಜಿ ಸದನʼ, ʻರಾನೋ ಜಿ ಸದನʼ, ʻದತ್ತಾ ಜಿ ಸದನʼ, ʻಕನಾರ್ಖೇಡ್ ಸದನʼ, ʻನಿಮಾ ಜಿ ಸದನʼ ಮತ್ತು ʻಮಾಧವ್ ಸದನʼಗಳನ್ನು ಉಲ್ಲೇಖಿಸಿದ ಅವರು, ಇದು ಸಪ್ತ ಋಷಿಗಳ ಶಕ್ತಿಯಂತಿದೆ ಎಂದರು. ಶ್ರೀ ಮೋದಿ ಅವರು ವಿದ್ಯಾರ್ಥಿಗಳಿಗೆ 9 ಕಾರ್ಯಗಳನ್ನು ಮಾಡಬೇಕೆಂದು ಸೂಚಿಸಿದರು, ಅವುಗಳೆಂದರೆ: ನೀರಿನ ಸುರಕ್ಷತೆಗಾಗಿ ಜಾಗೃತಿ ಅಭಿಯಾನವನ್ನು ನಡೆಸುವುದು, ಡಿಜಿಟಲ್ ಪಾವತಿಗಳ ಬಗ್ಗೆ ಜಾಗೃತಿ ಮೂಡಿಸುವುದು, ಗ್ವಾಲಿಯರ್ ಅನ್ನು ಭಾರತದ ಸ್ವಚ್ಛ ನಗರವನ್ನಾಗಿ ಮಾಡಲು ಶ್ರಮಿಸುವುದು, ʻಮೇಡ್ ಇನ್ ಇಂಡಿಯಾʼ ಉತ್ಪನ್ನಗಳನ್ನು ಉತ್ತೇಜಿಸುವುದು ಮತ್ತು ʻವೋಕಲ್ ಫಾರ್ ಲೋಕಲ್ʼ ವಿಧಾನವನ್ನು ಅಳವಡಿಸಿಕೊಳ್ಳುವುದು, ಭಾರತವನ್ನು ಅನ್ವೇಷಿಸುವುದು ಮತ್ತು ವಿದೇಶಗಳಿಗೆ ತೆರಳುವ ಮೊದಲು ದೇಶದೊಳಗೆ ಪ್ರಯಾಣಿಸುವುದು,  ಪ್ರಾದೇಶಿಕ ರೈತರಲ್ಲಿ ನೈಸರ್ಗಿಕ ಕೃಷಿಯ ಬಗ್ಗೆ ಜಾಗೃತಿ ಮೂಡಿಸುವುದು, ದೈನಂದಿನ ಆಹಾರದಲ್ಲಿ ಸಿರಿಧಾನ್ಯಗಳನ್ನು ಅಳವಡಿಸಿಕೊಳ್ಳುವುದು; ಕ್ರೀಡೆ, ಯೋಗ ಅಥವಾ ಯಾವುದೇ ರೀತಿಯ ಫಿಟ್‌ನೆಸ್‌ ಅನ್ನು ಜೀವನಶೈಲಿಯ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳುವುದು ಮತ್ತು ಕೊನೆಯದಾಗಿ ಕನಿಷ್ಠ ಒಂದು ಬಡ ಕುಟುಂಬವನ್ನು ಕೈಹಿಡಿಯುವುದು. ಈ ಮಾರ್ಗವನ್ನು ಅನುಸರಿಸುವ ಮೂಲಕ ಕಳೆದ ಐದು ವರ್ಷಗಳಲ್ಲಿ 13 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ಪ್ರಧಾನಿ ಹೇಳಿದರು.

"ಭಾರತ ಇಂದು ಏನನ್ನೇ ಮಾಡಿದರೂ ಅದನ್ನು ದೊಡ್ಡ ಪ್ರಮಾಣದಲ್ಲಿ ಮಾಡುತ್ತಿದೆ," ಎಂದು ಹೇಳಿದ ಪ್ರಧಾನಮಂತ್ರಿಯವರು, ವಿದ್ಯಾರ್ಥಿಗಳು ತಮ್ಮ ಕನಸುಗಳು ಮತ್ತು ಸಂಕಲ್ಪಗಳ ಬಗ್ಗೆ ದೊಡ್ಡದಾಗಿ ಯೋಚಿಸಬೇಕು ಎಂದು ಒತ್ತಾಯಿಸಿದರು. "ನಿಮ್ಮ ಕನಸೇ ನನ್ನ ಸಂಕಲ್ಪ" ಎಂದು ಅವರು ಹೇಳಿದರು. ವಿದ್ಯಾರ್ಥಿಗಳು ತಮ್ಮ ಆಲೋಚನೆಗಳು ಮತ್ತು ಅಭಿಪ್ರಾಯಗಳನ್ನು ʻನಮೋ ಅಪ್ಲಿಕೇಶನ್ʼ ಮೂಲಕ ತಮ್ಮೊಂದಿಗೆ ಹಂಚಿಕೊಳ್ಳಲು ಹಾಗೂ ವಾಟ್ಸ್‌ಆಪ್‌ನಲ್ಲಿ ತಮ್ಮೊಂದಿಗೆ ಸಂಪರ್ಕ ಸಾಧಿಸಲು ಪ್ರಧಾನಿ ಸಲಹೆ ನೀಡಿದರು.

ತಮ್ಮ ಭಾಷಣವನ್ನು ಮುಗಿಸುವ ಮುನ್ನ ಪ್ರಧಾನಮಂತ್ರಿಯವರು, "ಸಿಂಧಿಯಾ ಶಾಲೆ ಕೇವಲ ಒಂದು ಸಂಸ್ಥೆಯಲ್ಲ, ಅದೊಂದು ಪರಂಪರೆಯಾಗಿದೆ," ಎಂದು ಹೇಳಿದರು. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯಾನಂತರ ಮಹಾರಾಜ್ ಮಾಧೋ ರಾವ್ ಅವರ ಸಂಕಲ್ಪಗಳನ್ನು ಶಾಲೆ ನಿರಂತರವಾಗಿ ಮುಂದುವರಿಸಿಕೊಂಡು ಬಂದಿದೆ ಎಂದು ಅವರು ಹೇಳಿದರು. ಸ್ವಲ್ಪ ಸಮಯದ ಹಿಂದೆ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳನ್ನು ಮತ್ತೊಮ್ಮೆ ಶ್ರೀ ಮೋದಿ ಅವರು ಅಭಿನಂದಿಸಿದರು ಮತ್ತು ಸಿಂಧಿಯಾ ಶಾಲೆಯ ಉತ್ತಮ ಭವಿಷ್ಯಕ್ಕಾಗಿ ತಮ್ಮ ಶುಭಾಶಯಗಳನ್ನು ತಿಳಿಸಿದರು.

ಮಧ್ಯಪ್ರದೇಶದ ರಾಜ್ಯಪಾಲ ಶ್ರೀ ಮಂಗುಭಾಯ್ ಪಟೇಲ್, ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಕೇಂದ್ರ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ, ನರೇಂದ್ರ ಸಿಂಗ್ ತೋಮರ್ ಮತ್ತು ಜಿತೇಂದ್ರ ಸಿಂಗ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

***



(Release ID: 1971332) Visitor Counter : 68