ಪ್ರಧಾನ ಮಂತ್ರಿಯವರ ಕಛೇರಿ

ಮಹಾರಾಷ್ಟ್ರದಲ್ಲಿ 511 ಪ್ರಮೋದ್ ಮಹಾಜನ್ ಗ್ರಾಮೀಣ ಕೌಶಲ್ಯ ವಿಕಾಸ ಕೇಂದ್ರಗಳಿಗೆ ಪ್ರಧಾನ ಮಂತ್ರಿ ಚಾಲನೆ


"ಈ ಕೇಂದ್ರಗಳು ನಮ್ಮ ಯುವಕರಿಗೆ ಕೌಶಲ್ಯ ಅಭಿವೃದ್ಧಿ ಅವಕಾಶಗಳನ್ನು ತೆರೆಯಲು ವೇಗವರ್ಧಕಗಳಾಗಿ ಕಾರ್ಯ ನಿರ್ವಹಿಸುತ್ತವೆ"

"ಕೌಶಲ್ಯವಂತ ಭಾರತೀಯ ಯುವಕರ ಬೇಡಿಕೆ ಜಾಗತಿಕವಾಗಿ ಬೆಳೆಯುತ್ತಿದೆ"

"ಭಾರತವು ತನಗಾಗಿ ಮಾತ್ರವಲ್ಲದೆ, ಜಗತ್ತಿಗೆ ನುರಿತ ವೃತ್ತಿಪರರನ್ನು ಸಿದ್ಧಪಡಿಸುತ್ತಿದೆ"

"ಸರ್ಕಾರವು ಕೌಶಲ್ಯ ಅಭಿವೃದ್ಧಿಯ ಅಗತ್ಯವನ್ನು ಅರ್ಥ ಮಾಡಿಕೊಂಡಿದೆ ಮತ್ತು ತನ್ನದೇ ಆದ ಬಜೆಟ್ ಹಂಚಿಕೆ ಮತ್ತು ಬಹು ಯೋಜನೆಗಳೊಂದಿಗೆ ಪ್ರತ್ಯೇಕ ಸಚಿವಾಲಯವನ್ನು ಸಹ ಸ್ಥಾಪಿಸಿದೆ"

"ಸರ್ಕಾರದ ಕೌಶಲ್ಯ ಅಭಿವೃದ್ಧಿ ಉಪಕ್ರಮಗಳ ಪ್ರಯೋಜನವನ್ನು ಬಡವರು, ದಲಿತರು, ಹಿಂದುಳಿದವರು ಮತ್ತು ಆದಿವಾಸಿ ಕುಟುಂಬಗಳ ದೊಡ್ಡ ಫಲಾನುಭವಿಗಳು ಪಡೆಯುತ್ತಿದ್ದಾರೆ"

"ಮಹಿಳಾ ಶಿಕ್ಷಣ ಮತ್ತು ತರಬೇತಿಗೆ ಸರ್ಕಾರ ಒತ್ತು ನೀಡಲು ಸಾವಿತ್ರಿ ಬಾಯಿ ಫುಲೆ ಸ್ಫೂರ್ತಿಯಾಗಿದ್ದಾರೆ"

"ಪ್ರಧಾನಿ ವಿಶ್ವಕರ್ಮ ಯೋಜನೆಯು ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಕುಶಲಕರ್ಮಿಗಳನ್ನು ಸಶಕ್ತಿಗೊಳಿಸಲಿದೆ"

"ಉದ್ಯಮ 4.0 ಯೋಜನೆಗೆ ಹೊಸ ಕೌಶಲ್ಯಗಳು ಬೇಕಾಗುತ್ತವೆ"

"ದೇಶದ ವಿವಿಧ ಸರ್ಕಾರಗಳು ತಮ್ಮ ಕೌಶಲ್ಯ ಅಭಿವೃದ್ಧಿಯ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಬೇಕಾಗುತ್ತದೆ"

Posted On: 19 OCT 2023 5:46PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮಹಾರಾಷ್ಟ್ರದಲ್ಲಿ 511 ಪ್ರಮೋದ್ ಮಹಾಜನ್ ಗ್ರಾಮೀಣ ಕೌಶಲ್ಯ ವಿಕಾಸ ಕೇಂದ್ರಗಳಿಗೆ ಚಾಲನೆ ನೀಡಿದರು. ಮಹಾರಾಷ್ಟ್ರದ 34 ಗ್ರಾಮಾಂತರ ಜಿಲ್ಲೆಗಳಲ್ಲಿ ಸ್ಥಾಪಿತವಾಗಿರುವ ಈ ಕೇಂದ್ರಗಳು ಗ್ರಾಮೀಣ ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲು ವಿವಿಧ ವಲಯಗಳಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತವೆ.

ಸ್ಕಂದ ಮಾತೆಯನ್ನು ಪೂಜಿಸುವ ನವರಾತ್ರಿಯ 5ನೇ ದಿನ ಎಂದು ಪ್ರಸ್ತಾಪಿಸುವ ಮೂಲಕ ಪ್ರಧಾನಿ ತಮ್ಮ ಭಾಷಣ ಆರಂಭಿಸಿದರು. ಪ್ರತಿಯೊಬ್ಬ ತಾಯಂದಿರು ತಮ್ಮ ಮಕ್ಕಳಿಗೆ ಸಂತೋಷ ಮತ್ತು ಯಶಸ್ಸನ್ನು ಬಯಸುತ್ತಾರೆ. ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯಿಂದ ಮಾತ್ರ ಇದು ಸಾಧ್ಯ. ಮಹಾರಾಷ್ಟ್ರದಲ್ಲಿ 511 ಪ್ರಮೋದ್ ಮಹಾಜನ್ ಗ್ರಾಮೀಣ ಕೌಶಲ್ಯ ವಿಕಾಸ ಕೇಂದ್ರಗಳ ಸ್ಥಾಪನೆಯ ಈ ದಿನವನ್ನು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ, ಲಕ್ಷಾಂತರ ಯುವಕರ ಕೌಶಲ್ಯ ಅಭಿವೃದ್ಧಿಗೆ ಇದು ಒಂದು ದೊಡ್ಡ ಹೆಜ್ಜೆಯಾಗಿದೆ ಎಂದರು.

ನುರಿತ ಭಾರತೀಯ ಯುವಕರ ಬೇಡಿಕೆ ಜಾಗತಿಕವಾಗಿ ಬೆಳೆಯುತ್ತಿದೆ. ಅನೇಕ ದೇಶಗಳ ಜನಸಂಖ್ಯೆಯಲ್ಲಿ ಹೆಚ್ಚುತ್ತಿರುವ ವಯಸ್ಸಿನ ವಿವರವನ್ನು ಉಲ್ಲೇಖಿಸಿದ ಪ್ರಧಾನಿ, 16 ದೇಶಗಳು ಸುಮಾರು 40 ಲಕ್ಷ ನುರಿತ ಯುವಕರಿಗೆ ಉದ್ಯೋಗ ನೀಡಲು ಯೋಜಿಸಿವೆ. "ಭಾರತವು ತನಗಾಗಿ ಮಾತ್ರವಲ್ಲದೆ, ಜಗತ್ತಿಗೆ ನುರಿತ ವೃತ್ತಿಪರರನ್ನು ಸಿದ್ಧಪಡಿಸುತ್ತಿದೆ". ಮಹಾರಾಷ್ಟ್ರದ ಕೌಶಲ್ಯ ಕೇಂದ್ರಗಳು ಸ್ಥಳೀಯ ಯುವಕರನ್ನು ಜಾಗತಿಕ ಉದ್ಯೋಗಗಳಿಗೆ ತಯಾರಿ ಮಾಡುತ್ತವೆ. ನಿರ್ಮಾಣ, ಆಧುನಿಕ ಕೃಷಿ, ಮಾಧ್ಯಮ ಮತ್ತು ಮನರಂಜನೆ, ಎಲೆಕ್ಟ್ರಾನಿಕ್ಸ್‌ ವಲಯದಲ್ಲಿ ಯುವಕರನ್ನು ಕೌಶಲ್ಯಗೊಳಿಸುತ್ತವೆ. ಮೂಲಭೂತ ವಿದೇಶಿ ಭಾಷಾ ಕೌಶಲ್ಯಗಳಂತಹ ಸಾಫ್ಟ್ ಸ್ಕಿಲ್‌ಗಳಲ್ಲಿ ತರಬೇತಿ ನೀಡುವ ಅಗತ್ಯವಿದೆ. ಭಾಷಾ ವ್ಯಾಖ್ಯಾನಕ್ಕಾಗಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಪರಿಕರಗಳನ್ನು ಬಳಸುವುದು ನೇಮಕಾತಿದಾರರಿಗೆ ಹೆಚ್ಚು ಆಕರ್ಷಕವಾಗಿಸುತ್ತದೆ ಎಂದು ಪ್ರಧಾನಿ ತಿಳಿಸಿದರು.

ಹಿಂದಿನ ಸರ್ಕಾರಗಳು ಕೌಶಲ್ಯಾಭಿವೃದ್ಧಿಯ ಬಗ್ಗೆ ದೂರದೃಷ್ಟಿ ಮತ್ತು ಗಂಭೀರತೆ  ಹೊಂದದ ಕಾರಣ, ಕೌಶಲ್ಯದ ಕೊರತೆಯಿಂದಾಗಿ ಲಕ್ಷಗಟ್ಟಲೆ ಯುವಕರಿಗೆ ಉದ್ಯೋಗಾವಕಾಶಗಳು ಕಡಿಮೆಯಾಗಿವೆ. ಪ್ರಸ್ತುತ ಸರ್ಕಾರವು ಕೌಶಲ್ಯ ಅಭಿವೃದ್ಧಿಯ ಅಗತ್ಯವನ್ನು ಅರ್ಥ ಮಾಡಿಕೊಂಡಿದೆ. ತನ್ನದೇ ಆದ ಬಜೆಟ್ ಹಂಚಿಕೆ ಮತ್ತು ಹಲವಾರು ಯೋಜನೆಗಳೊಂದಿಗೆ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಿದೆ. ಕೌಶಲ ವಿಕಾಸ್ ಯೋಜನೆಯಡಿ, 1 ಕೋಟಿ 30 ಲಕ್ಷಕ್ಕೂ ಹೆಚ್ಚು ಯುವಕರಿಗೆ ಬಹುವಿಧದ ಗುಣಲಕ್ಷಣಗಳ ಅಡಿಯಲ್ಲಿ ತರಬೇತಿ ನೀಡಲಾಗಿದೆ. ಇದಕ್ಕೆ ಅನುಗುಣವಾಗಿ, ನೂರಾರು ಪ್ರಧಾನ ಮಂತ್ರಿ ಕೌಶಲ ಕೇಂದ್ರಗಳನ್ನು ದೇಶಾದ್ಯಂತ ಸ್ಥಾಪಿಸಲಾಗಿದೆ ಎಂದರು.

ಸಾಮಾಜಿಕ ನ್ಯಾಯ ಬಲಪಡಿಸುವಲ್ಲಿ ಕೌಶಲ್ಯ ಅಭಿವೃದ್ಧಿ ಉಪಕ್ರಮಗಳ ಕೊಡುಗೆ ಅಪಾರ. ದಲಿತರು, ಹಿಂದುಳಿದವರು ಮತ್ತು ಬುಡಕಟ್ಟು ಜನಾಂಗದವರ ಉನ್ನತಿಗಾಗಿ ಕೈಗಾರಿಕೀಕರಣದ ಮೇಲೆ ಗಮನ ಕೇಂದ್ರೀಕರಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವಶಾಸ್ತ್ರವನ್ನು ಪ್ರಧಾನಿ ಪ್ರಸ್ತಾಪಿಸಿದರು. ಏಕೆಂದರೆ ಆಗ ಭೂ ಹಿಡುವಳಿಯು ಅಲ್ಪವಾಗಿತ್ತು. ಈ ಹಿಂದೆ ಕೌಶಲ್ಯದ ಕೊರತೆಯಿಂದ ಈ ವಿಭಾಗಗಳು ಗುಣಮಟ್ಟದ ಉದ್ಯೋಗ ಪಡೆಯುವ ಅವಕಾಶದಿಂದ ವಂಚಿತರಾಗಿದ್ದರು. ಈಗಿನ ಸರ್ಕಾರದ ಕೌಶಲಾಭಿವೃದ್ಧಿ ಉಪಕ್ರಮಗಳಿಂದ ಹೆಚ್ಚಿನ ಪ್ರಯೋಜನವನ್ನು ಬಡವರು, ದಲಿತರು, ಹಿಂದುಳಿದವರು ಮತ್ತು ಆದಿವಾಸಿ ಕುಟುಂಬಗಳು ಪಡೆಯುತ್ತಿವೆ ಎಂದು ಹೇಳಿದರು.

ಮಹಿಳೆಯರ ಶಿಕ್ಷಣದ ವಿಷಯದಲ್ಲಿ ಸಮಾಜದ ಸಂಕೋಲೆಗಳನ್ನು ಮುರಿಯುವಲ್ಲಿ ಸಾವಿತ್ರಿ ಬಾಯಿ ಫುಲೆಯವರ ಕೊಡುಗೆಗಳನ್ನು ಸ್ಮರಿಸಿದ ಪ್ರಧಾನಿ, ಜ್ಞಾನ ಮತ್ತು ಕೌಶಲ್ಯ ಹೊಂದಿರುವವರು ಮಾತ್ರ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯ. ಮಹಿಳಾ ಶಿಕ್ಷಣ ಮತ್ತು ತರಬೇತಿಗೆ ಸರ್ಕಾರ ಒತ್ತು ನೀಡುವ ಹಿಂದೆ ಸಾವಿತ್ರಿ ಬಾಯಿ ಫುಲೆ ಅವರು ಸ್ಫೂರ್ತಿಯಾಗಿದ್ದಾರೆ. ಮಹಿಳೆಯರಿಗೆ ತರಬೇತಿ ನೀಡುವ ಸ್ವಸಹಾಯ ಗುಂಪುಗಳು ಅಥವಾ ‘ಸ್ವಯಂ ಸಹಾಯತಾ ಸಮೂಹ’ ಆರಂಭವವನ್ನು ಪ್ರಸ್ತಾಪಿಸಿದ ಅವರು, ಮಹಿಳಾ ಸಬಲೀಕರಣ ಕಾರ್ಯಕ್ರಮದಡಿ, 3 ಕೋಟಿಗೂ ಹೆಚ್ಚು ಮಹಿಳೆಯರಿಗೆ ವಿಶೇಷ ತರಬೇತಿ ನೀಡಲಾಗಿದೆ. ಕೃಷಿ ಕ್ಷೇತ್ರಗಳು ಮತ್ತು ಇತರ ಕ್ಷೇತ್ರಗಳಲ್ಲಿ ಡ್ರೋನ್‌ಗಳನ್ನು ಬಳಸಲು ಪ್ರೋತ್ಸಾಹಿಸಲು ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದೆ ಎಂದರು.

ಹಳ್ಳಿಗಳಲ್ಲಿ ತಲೆಮಾರುಗಳಿಂದ ಮುನ್ನಡೆಯುತ್ತಿರುವ ವೃತ್ತಿಗಳನ್ನು ಉಲ್ಲೇಖಿಸಿದ ಪ್ರಧಾನಿ, ಕ್ಷೌರಿಕ, ಬಡಗಿ, ಬಟ್ಟೆ ಒಗೆಯುವವ, ಅಕ್ಕಸಾಲಿಗ ಅಥವಾ ಕಬ್ಬಿಣದ ಕೆಲಸಗಾರರಂತಹ ವೃತ್ತಿಗಳಿಗೆ ಸಹಾಯ ಮಾಡಲು ಪ್ರಾರಂಭಿಸಲಾದ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಅಡಿ, ತರಬೇತಿ, ಆಧುನಿಕ ಉಪಕರಣಗಳು ಮತ್ತು ಆರ್ಥಿಕ ನೆರವು ನೀಡಲಾಗುತ್ತಿದೆ. ಇದಕ್ಕಾಗಿ ಸರ್ಕಾರ 13,000 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ಮಹಾರಾಷ್ಟ್ರದಲ್ಲಿ 500ಕ್ಕಿಂತ ಹೆಚ್ಚಿನ ಕೌಶಲ ಕೇಂದ್ರಗಳು ಇಡೀ ರಾಜ್ಯವನ್ನು ಮುಂದಕ್ಕೆ ಕೊಂಡೊಯ್ಯಲಿವೆ ಎಂದು ಹೇಳಿದರು.

ಕೌಶಲ್ಯ ಅಭಿವೃದ್ಧಿಯ ಈ ಪ್ರಯತ್ನಗಳ ನಡುವೆ, ದೇಶವನ್ನು ಮತ್ತಷ್ಟು ಬಲಪಡಿಸುವ ಕೌಶಲ್ಯ ಪ್ರಕಾರಗಳ ಸುಧಾರಣೆಯ ಕ್ಷೇತ್ರಗಳಿಗೆ ಪ್ರಧಾನ ಮಂತ್ರಿ ಒತ್ತು ನೀಡಿದರು. ಭಾರತದ ಉತ್ಪಾದನಾ ಅಥವಾ ತಯಾರಿಕೆ ಉದ್ಯಮದಲ್ಲಿ ಯಾವುದೇ ದೋಷಗಳಿಲ್ಲದ ಉತ್ತಮ ಗುಣಮಟ್ಟದ ಉತ್ಪನ್ನಗಳು ಅಥವಾ ಉತ್ಪನ್ನಗಳ ತಯಾರಿಕೆಯ ಅಗತ್ಯವಿದೆ. ಹೊಸ ಕೌಶಲ್ಯಗಳ ಅಗತ್ಯವಿರುವ ಉದ್ಯಮ 4.0 ಯೋಜನೆ ಪ್ರಸ್ತುವಾಗಿದೆ. ಸೇವಾ ಕ್ಷೇತ್ರ, ಜ್ಞಾನ ಆರ್ಥಿಕತೆ ಮತ್ತು ಆಧುನಿಕ ತಂತ್ರಜ್ಞಾನ ಗಮನದಲ್ಲಿಟ್ಟುಕೊಂಡು ಸರ್ಕಾರಗಳು ಹೊಸ ಕೌಶಲ್ಯಗಳಿಗೆ ಒತ್ತು ನೀಡಬೇಕು. ರಾಷ್ಟ್ರವನ್ನು ಸ್ವಾವಲಂಬನೆಯತ್ತ ಕೊಂಡೊಯ್ಯುವ ಉತ್ಪಾದನೆಗೆ ಯಾವ ರೀತಿಯ ಉತ್ಪನ್ನಗಳನ್ನು ಕಂಡುಹಿಡಿಯಬೇಕು ಎಂಬುದನ್ನು ಮನಗಾಣಬೇಕು. ಅಂತಹ ಉತ್ಪನ್ನಗಳನ್ನು ತಯಾರಿಸಲು ಅಗತ್ಯವಾದ ಕೌಶಲ್ಯಗಳನ್ನು ನಾವು ಉತ್ತೇಜಿಸಬೇಕು.

ಭಾರತದ ಕೃಷಿ ಕ್ಷೇತ್ರಕ್ಕೆ ಹೊಸ ಕೌಶಲಗಳ ಅಗತ್ಯವಿದೆ. ಭೂಮಿ ತಾಯಿ ರಕ್ಷಿಸಲು ನೈಸರ್ಗಿಕ ಕೃಷಿಗೆ ಒತ್ತು ನೀಡಬೇಕು. ಸಮತೋಲಿತ ನೀರಾವರಿ, ಕೃಷಿ ಉತ್ಪನ್ನ ಸಂಸ್ಕರಣೆ, ಪ್ಯಾಕೇಜಿಂಗ್, ಬ್ರ್ಯಾಂಡಿಂಗ್ ಮತ್ತು ಆನ್‌ಲೈನ್ ವಿಶ್ವದೊಂದಿಗೆ ಸಂಪರ್ಕ ಸಾಧಿಸಲು ಕೌಶಲ್ಯಗಳ ನಿರ್ಣಯ ಇಂದಿನ ಅಗತ್ಯವಾಗಿದೆ. "ದೇಶದ ವಿವಿಧ ಸರ್ಕಾರಗಳು ತಮ್ಮ ಕೌಶಲ್ಯ ಅಭಿವೃದ್ಧಿಯ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಬೇಕಾಗಿದೆ" ಎಂದು ಪ್ರಧಾನಿ ಮೋದಿ ಹೇಳಿದರು.

ಕೌಶಲ್ಯದ ಮೂಲಕ ಅವರು ಸರಿಯಾದ ಮಾರ್ಗವನ್ನು ಆರಿಸಿಕೊಂಡಿದ್ದಾರೆ, ಅವರು ತಮ್ಮ ಕುಟುಂಬ ಮತ್ತು ರಾಷ್ಟ್ರಕ್ಕೆ ಸಾಕಷ್ಟು ಕೊಡುಗೆ ನೀಡಬಹುದು ಎಂದು ತರಬೇತಿ ಪಡೆದವರಿಗೆ ಪ್ರಧಾನಿ ಭರವಸೆ ನೀಡಿದರು. ತಮ್ಮ ಕೋರಿಕೆಯ ಮೇರೆಗೆ ಸಿಂಗಾಪುರದ ಕೌಶಲ್ಯ ಅಭಿವೃದ್ಧಿ ಕೇಂದ್ರಕ್ಕೆ ಭೇಟಿ ನೀಡಿದ ಫಲಾನುಭವಿಗಳ ಅನುಭವವನ್ನು ಪ್ರಧಾನಿ ವಿವರಿಸಿದರು. ಸಿಂಗಾಪುರದ ಪ್ರಧಾನಿ ಅವರನ್ನು ಸ್ಮರಿಸಿದ ಪ್ರಧಾನಿ, ಕೌಶಲ್ಯ ತರಬೇತಿಯ ಇಂತಹ ಚಟುವಟಿಕೆಗಳು ಹೇಗೆ ಸಾಮಾಜಿಕ ಸ್ವೀಕಾರ ಗಳಿಸಿದವು ಎಂಬುದನ್ನು ಪ್ರಸ್ತಾಪಿಸಿದರು. ಕಾರ್ಮಿಕರ ಘನತೆಯನ್ನು ಗುರುತಿಸುವುದು ಮತ್ತು ಕೌಶಲ್ಯಪೂರ್ಣ ಕೆಲಸದ ಮಹತ್ವವನ್ನು ಗುರುತಿಸುವುದು ಸಮಾಜದ ಕರ್ತವ್ಯವಾಗಿದೆ ಎಂದು ಪ್ರಧಾನ ಮಂತ್ರಿ ಹೇಳಿದರು.

ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿಗಳಾದ ಶ್ರೀ ದೇವೇಂದ್ರ ಫಡ್ನವಿಸ್ ಮತ್ತು ಶ್ರೀ ಅಜಿತ್ ಪವಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಗ್ರಾಮೀಣ ಕೌಶಲ್ಯ ವಿಕಾಸ ಕೇಂದ್ರಗಳು ಗ್ರಾಮೀಣ ಯುವಕರಿಗೆ ಉದ್ಯೋಗಾವಕಾಶ ಒದಗಿಸಲು ವಿವಿಧ ವಲಯಗಳಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತವೆ. ಪ್ರತಿ ಕೇಂದ್ರವು ಸುಮಾರು 100 ಯುವಕರಿಗೆ ಕನಿಷ್ಠ 2 ವೃತ್ತಿಪರ ಕೋರ್ಸ್‌ಗಳಲ್ಲಿ ತರಬೇತಿ ನೀಡುತ್ತದೆ. ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮಂಡಳಿಯ ಅಡಿ, ಉದ್ಯಮ ಪಾಲುದಾರರು ಮತ್ತು ಏಜೆನ್ಸಿಗಳು ಒಟ್ಟುಗೂಡಿದ ಸಮಿತಿಯಿಂದ ತರಬೇತಿ ನೀಡಲಾಗುತ್ತದೆ. ಈ ಕೇಂದ್ರಗಳ ಸ್ಥಾಪನೆಯು ಹೆಚ್ಚು ಸಮರ್ಥ ಮತ್ತು ನುರಿತ ಮಾನವಶಕ್ತಿಯನ್ನು ಅಭಿವೃದ್ಧಿಪಡಿಸುವತ್ತ ಗಮನಾರ್ಹ ಪ್ರಗತಿಯನ್ನು ಸಾಧಿಸಲು ಆಯಾ ಪ್ರದೇಶದಲ್ಲಿ ಸಹಾಯ ಮಾಡುತ್ತದೆ.

 

***



(Release ID: 1969409) Visitor Counter : 80