ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅಕ್ಟೋಬರ್ 5 ರಂದು ರಾಜಸ್ಥಾನ ಮತ್ತು ಮಧ್ಯಪ್ರದೇಶಕ್ಕೆ ಪ್ರಧಾನಿ ಭೇಟಿ


ರಾಜಸ್ಥಾನದಲ್ಲಿ ಸುಮಾರು 5,000 ಕೋಟಿ ರೂಪಾಯಿ ಮೊತ್ತದ ಬಹುವಿಧ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಸಮರ್ಪಣೆ

ಯೋಜನೆಗಳು ರಸ್ತೆ, ರೈಲು, ವಾಯುಯಾನ, ಆರೋಗ್ಯ ಮತ್ತು ಉನ್ನತ ಶಿಕ್ಷಣ ಕ್ಷೇತ್ರಗಳಿಗೆ ಸಂಬಂಧಿಸಿವೆ

ಐಐಟಿ ಜೋಧ್‌ಪುರ ಕ್ಯಾಂಪಸ್ ರಾಷ್ಟ್ರಕ್ಕೆ ಸಮರ್ಪಿಸಲಿರುವ ಪ್ರಧಾನಿ

ಜೋಧ್‌ಪುರ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನ ಮಂತ್ರಿ

ಜೋಧ್‌ಪುರ ಏಮ್ಸ್‌ನಲ್ಲಿ 'ಟ್ರಾಮಾ ಸೆಂಟರ್ ಮತ್ತು ಕ್ರಿಟಿಕಲ್ ಕೇರ್ ಹಾಸ್ಪಿಟಲ್ ಬ್ಲಾಕ್'ಗೆ ಪ್ರಧಾನ ಮಂತ್ರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ

ಮಧ್ಯಪ್ರದೇಶದಲ್ಲಿ 12,600 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಬಹುವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಿ

ರಸ್ತೆ, ರೈಲು, ಗ್ಯಾಸ್ ಪೈಪ್‌ಲೈನ್, ವಸತಿ ಮತ್ತು ಶುದ್ಧ ಕುಡಿಯುವ ನೀರು ಕ್ಷೇತ್ರಗಳಿಗೆ ಸಂಬಂಧಿಸಿದ ಯೋಜನೆಗಳಾಗಿವೆ

ಇಂದೋರ್‌ನಲ್ಲಿ ಲೈಟ್ ಹೌಸ್ ಯೋಜನೆಯಡಿ ನಿರ್ಮಿಸಲಾದ 1,000ಕ್ಕಿಂತ ಅಧಿಕ ಮನೆಗಳನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ

Posted On: 04 OCT 2023 9:14AM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023 ಅಕ್ಟೋಬರ್ 5ರಂದು ರಾಜಸ್ಥಾನ ಮತ್ತು ಮಧ್ಯಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ.

ಬೆಳಗ್ಗೆ 11.15ರ ಹೊತ್ತಿಗೆ ಪ್ರಧಾನಿ ಅವರು ರಾಜಸ್ಥಾನದ ಜೋಧ್‌ಪುರದಲ್ಲಿ, ರಸ್ತೆ, ರೈಲು, ವಿಮಾನಯಾನ, ಆರೋಗ್ಯ ಮತ್ತು ಉನ್ನತ ಶಿಕ್ಷಣದಂತಹ ಕ್ಷೇತ್ರ ಸೇರಿದಂತೆ ಸುಮಾರು 5000 ಕೋಟಿ ರೂಪಾಯಿ ಮೊತ್ತದ ಬಹು-ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ಕೆಲವು ಯೋಜನೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಮಧ್ಯಾಹ್ನ 3.30ರ ಸುಮಾರಿಗೆ ಪ್ರಧಾನಿ ಅವರು ಮಧ್ಯಪ್ರದೇಶದ ಜಬಲ್‌ಪುರವನ್ನು ತಲುಪಲಿದ್ದಾರೆ. ಅಲ್ಲಿ ಅವರು ರಸ್ತೆ, ರೈಲು, ಗ್ಯಾಸ್ ಪೈಪ್‌ಲೈನ್, ವಸತಿ ಮತ್ತು ಶುದ್ಧ ಕುಡಿಯುವ ನೀರು ಸೇರಿದಂತೆ ವಿವಿಧ ಕ್ಷೇತ್ರಗಳ 12,600 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ರಾಷ್ಟ್ರೀಯ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ, ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಮಾಡಲಿದ್ದಾರೆ.

ರಾಜಸ್ಥಾನದಲ್ಲಿ ಪ್ರಧಾನ ಮಂತ್ರಿ

ರಾಜಸ್ಥಾನದಲ್ಲಿ ಆರೋಗ್ಯ ಮೂಲಸೌಕರ್ಯ ಬಲಪಡಿಸುವ ಪ್ರಮುಖ ಯೋಜನೆಗಳಿಗೆ ಪ್ರಧಾನ ಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಯೋಜನೆಗಳ ಪೈಕಿ 350 ಹಾಸಿಗೆಗಳ 'ಟ್ರಾಮಾ ಸೆಂಟರ್ ಮತ್ತು ಜೋಧ್‌ಪುರದ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ ಕ್ರಿಟಿಕಲ್ ಕೇರ್ ಹಾಸ್ಪಿಟಲ್ ಬ್ಲಾಕ್' ಮತ್ತು ಪ್ರಧಾನ ಮಂತ್ರಿ - ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ (ಪಿಎಂ-ಎಬಿಐಎಂ) ಅಡಿ, 7 ಕ್ರಿಟಿಕಲ್ ಕೇರ್ ಬ್ಲಾಕ್‌ಗಳನ್ನು ರಾಜಸ್ಥಾನದಾದ್ಯಂತ ಅಭಿವೃದ್ಧಿಪಡಿಸಲಾಗುವುದು. ಎಐಐಎಂಎಸ್ ಜೋಧ್‌ಪುರದಲ್ಲಿರುವ ‘ಟ್ರಾಮಾ, ಎಮರ್ಜೆನ್ಸಿ ಮತ್ತು ಕ್ರಿಟಿಕಲ್ ಕೇರ್’ ಸಂಯೋಜಿತ ಕೇಂದ್ರವನ್ನು 350 ಕೋಟಿ ರೂಪಾಯಿಗಿಂತ ಹೆಚ್ಚಿನ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಇದು ಚಿಕಿತ್ಸೆಯ ಸರಣಿ ಸೌಲಭ್ಯಗಳಾದ ಡಯಾಗ್ನೋಸ್ಟಿಕ್ಸ್, ಡೇ ಕೇರ್, ವಾರ್ಡ್‌ಗಳು, ಖಾಸಗಿ ಕೊಠಡಿಗಳು, ಮಾಡ್ಯುಲರ್ ಆಪರೇಟಿಂಗ್ ಥಿಯೇಟರ್‌ಗಳು, ಐಸಿಯುಗಳು ಮತ್ತು ಡಯಾಲಿಸಿಸ್ ಕೇಂದ್ರಗಳಂತಹ ವಿವಿಧ ಅನುಕೂಲಗಳನ್ನು ಒಳಗೊಂಡಿರುತ್ತದೆ. ಇದು ರೋಗಿಗಳಿಗೆ ಬಹುಶಿಸ್ತೀಯ ಮತ್ತು ಸಮಗ್ರ ಆರೈಕೆ ಒದಗಿಸುವ ಮೂಲಕ ಆಘಾತ ಮತ್ತು ತುರ್ತು ಪ್ರಕರಣಗಳ ನಿರ್ವಹಣೆಯಲ್ಲಿ ಸಮಗ್ರ ಕಾರ್ಯ(ಚಿಕಿತ್ಸೆ) ವಿಧಾನವನ್ನು ತರುತ್ತದೆ. ರಾಜಸ್ಥಾನದಾದ್ಯಂತ ಇರುವ 7 ಕ್ರಿಟಿಕಲ್ ಕೇರ್ ಬ್ಲಾಕ್‌ಗಳು ರಾಜ್ಯದ ಜನರಿಗೆ ಅನುಕೂಲವಾಗುವಂತೆ ಜಿಲ್ಲಾ ಮಟ್ಟದ ಕ್ರಿಟಿಕಲ್ ಕೇರ್ ಮೂಲಸೌಕರ್ಯವನ್ನು ಹೆಚ್ಚಿಸುತ್ತವೆ.

ಜೋಧ್‌ಪುರ ವಿಮಾನ ನಿಲ್ದಾಣದಲ್ಲಿ ಅತ್ಯಾಧುನಿಕ ಹೊಸ ಟರ್ಮಿನಲ್ ಕಟ್ಟಡದ ಅಭಿವೃದ್ಧಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಒಟ್ಟು 480 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಹೊಸ ಟರ್ಮಿನಲ್ ಕಟ್ಟಡವನ್ನು ಸುಮಾರು 24,000 ಚದರ ಮೀಟರ್ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಜನದಟ್ಟಣೆ ಸಮಯದಲ್ಲಿ 2,500 ಪ್ರಯಾಣಿಕರಿಗೆ ಸೇವೆಗಳನ್ನು ಒದಗಿಸಲು ಇದು ಸಜ್ಜಾಗಲಿದೆ. ಇದು ವಾರ್ಷಿಕವಾಗಿ 35 ಲಕ್ಷ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಿದೆ, ಸಂಪರ್ಕ ಸುಧಾರಿಸುವ ಜತೆಗೆ, ಈ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ.

ಪ್ರಧಾನ ಮಂತ್ರಿ ಅವರು ಐಐಟಿ-ಜೋಧಪುರ ಕ್ಯಾಂಪಸ್ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. 1135 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ಅತ್ಯಾಧುನಿಕ ಕ್ಯಾಂಪಸ್ ನಿರ್ಮಿಸಲಾಗಿದೆ. ಇದು ಉನ್ನತ ಗುಣಮಟ್ಟದ ಸಮಗ್ರ ಶಿಕ್ಷಣ ಒದಗಿಸುವ ಮತ್ತು ಅತ್ಯಾಧುನಿಕ ಸಂಶೋಧನೆ ಮತ್ತು ನಾವೀನ್ಯತೆ ಉಪಕ್ರಮಗಳನ್ನು ಬೆಂಬಲಿಸಲು ಮೂಲಸೌಕರ್ಯಗಳನ್ನು ನಿರ್ಮಿಸುವ  ಒಂದು ದಿಟ್ಟ ಹೆಜ್ಜೆಯಾಗಿದೆ.

ರಾಜಸ್ಥಾನದ ಸೆಂಟ್ರಲ್ ವಿಶ್ವವಿದ್ಯಾಲಯದಲ್ಲಿ ಮೂಲಸೌಕರ್ಯ ನವೀಕರಿಸಲು, ಪ್ರಧಾನ ಮಂತ್ರಿ ಅವರು ರಾಷ್ಟ್ರಕ್ಕೆ 'ಕೇಂದ್ರೀಯ ಉಪಕರಣ ಪ್ರಯೋಗಾಲಯ', ಸಿಬ್ಬಂದಿ ವಸತಿ ಗೃಹಗಳು ಮತ್ತು 'ಯೋಗ ಮತ್ತು ಕ್ರೀಡಾ ವಿಜ್ಞಾನಗಳ ಕಟ್ಟಡ'ವನ್ನು ಸಮರ್ಪಿಸಲಿದ್ದಾರೆ. ರಾಜಸ್ಥಾನದ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕೇಂದ್ರ ಗ್ರಂಥಾಲಯ, 600 ವಿದ್ಯಾರ್ಥಿಗಳು ತಂಗುವ ಸಾಮರ್ಥ್ಯದ ಹಾಸ್ಟೆಲ್ ಮತ್ತು ವಿದ್ಯಾರ್ಥಿಗಳ ಭೋಜನ ಶಾಲೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ರಾಜಸ್ಥಾನದಲ್ಲಿ ರಸ್ತೆ ಮೂಲಸೌಕರ್ಯ ಸುಧಾರಿಸುವ ಒಂದು ಹಂತವಾಗಿ, ಎನ್ಎಚ್-125ಎ ಮಾರ್ಗದಲ್ಲಿ ಜೋಧ್‌ಪುರ ವರ್ತುಲ ರಸ್ತೆಯ ಕಾರವಾರದಿಂದ ಡಾಂಗಿಯಾವಾಸ್ ಭಾಗಕ್ಕೆ ಚತುಷ್ಪಥ ರಸ್ತೆ ಸೇರಿದಂತೆ ಅನೇಕ ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ; ಜಾಲೋರ್ (ಎನ್ಎಚ್-325) ಮೂಲಕ ಬಲೋತ್ರಾದಿಂದ ಸಂದೇರಾವ್ ವಿಭಾಗಕ್ಕೆ 7 ಬೈಪಾಸ್‌ ರಸ್ತೆಗಳು/ಮರು-ಜೋಡಣೆ ರಸ್ತೆಗಳ ನಿರ್ಮಾಣ, ಎನ್ಎಚ್-25ರಲ್ಲಿ ಪಚ್ಪದ್ರ-ಬಗುಂಡಿ ವಿಭಾಗದ ಚತುಷ್ಪಥ ರಸ್ತೆ ಯೋಜನೆ ಇದರಲ್ಲಿ ಸೇರಿವೆ. ಈ ರಸ್ತೆ ಯೋಜನೆಗಳನ್ನು ಸುಮಾರು 1,475 ಕೋಟಿ ರೂ. ಒಟ್ಟು ವೆಚ್ಚದಲ್ಲಿ ನಿರ್ಮಿಸಲಾಗುವುದು. ಜೋಧ್‌ಪುರ ವರ್ತುಲ ರಸ್ತೆಯು ಟ್ರಾಫಿಕ್ ಒತ್ತಡ  ಕಡಿಮೆ ಮಾಡಲು ಮತ್ತು ನಗರದಲ್ಲಿ ವಾಹನಗಳ ಮಾಲಿನ್ಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಯೋಜನೆಗಳು ಸಂಪರ್ಕ ಸುಧಾರಿಸಲು, ವ್ಯಾಪಾರ ವಹಿವಾಟು ಉತ್ತೇಜಿಸಲು, ಉದ್ಯೋಗ ಸೃಷ್ಟಿ ಮತ್ತು ಈ ಪ್ರದೇಶದಲ್ಲಿ ಆರ್ಥಿಕ ಬೆಳವಣಿಗೆ ಹೆಚ್ಚಲು ಸಹಾಯ ಮಾಡುತ್ತವೆ.

ರಾಜಸ್ಥಾನದಲ್ಲಿ 2 ಹೊಸ ರೈಲು ಸೇವೆಗಳಿಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ಇವುಗಳಲ್ಲಿ ಹೊಸ ರೈಲು - ರುನಿಚಾ ಎಕ್ಸ್‌ಪ್ರೆಸ್ - ಜೈಸಲ್ಮೇರ್‌ನಿಂದ್ ದೆಹಲಿಗೆ ಸಂಪರ್ಕ ಕಲ್ಪಿಸುವ ಮತ್ತು ಹೊಸ ಹೆರಿಟೇಜ್ ರೈಲು ಮಾರ್ವಾರ್ ಜೂ. - ಖಂಬ್ಲಿ ಘಾಟ್ ಗೆ ಸಂಪರ್ಕ ಕಲ್ಪಿಸುತ್ತದೆ. ರುನಿಚಾ ಎಕ್ಸ್‌ಪ್ರೆಸ್ ಜೋಧ್‌ಪುರ್, ದೇಗಾನಾ, ಕುಚಮನ್ ಸಿಟಿ, ಫುಲೇರಾ, ರಿಂಗಾಸ್, ಶ್ರೀಮಧೋಪುರ್, ನೀಮ್ ಕಾ ಥಾನಾ, ನರ್ನಾಲ್, ಅಟೆಲಿ, ರೆವಾರಿ ಮೂಲಕ ಹಾದುಹೋಗುತ್ತದೆ, ಇದು ರಾಷ್ಟ್ರ ರಾಜಧಾನಿಯೊಂದಿಗೆ ಎಲ್ಲಾ ಪಟ್ಟಣಗಳ ಸಂಪರ್ಕವನ್ನು ಸುಧಾರಿಸುತ್ತದೆ. ಮಾರ್ವಾರ್ ಜಂ.-ಖಾಂಬ್ಲಿ ಘಾಟ್ ಸಂಪರ್ಕಿಸುವ ಹೊಸ ಪಾರಂಪರಿಕ ರೈಲು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತದೆ, ಈ ಪ್ರದೇಶದಲ್ಲಿ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಇದಲ್ಲದೆ, ಇನ್ನೆರಡು ರೈಲು ಯೋಜನೆಗಳನ್ನು ಪ್ರಧಾನಿ ಅವರು ದೇಶಕ್ಕೆ ಸಮರ್ಪಿಸಲಿದ್ದಾರೆ. ಇವುಗಳಲ್ಲಿ 145 ಕಿಮೀ ಉದ್ದದ ‘ದೇಗಾನಾ-ರಾಯ್ ಕಾ ಬಾಗ್’ ರೈಲು ಮಾರ್ಗ ಮತ್ತು 58 ಕಿಮೀ ಉದ್ದದ ‘ದೇಗಾನಾ-ಕುಚಮನ್ ಸಿಟಿ’ ಜೋಡಿ ರೈಲು ಮಾರ್ಗ ಯೋಜನೆಗಳು ಸೇರಿವೆ.

ಮಧ್ಯಪ್ರದೇಶದಲ್ಲಿ ಪ್ರಧಾನ ಮಂತ್ರಿ

ಮಧ್ಯಪ್ರದೇಶದ ಇಂದೋರ್‌ನಲ್ಲಿ ಲೈಟ್ ಹೌಸ್ ಯೋಜನೆ ಉದ್ಘಾಟನೆಯಾಗುತ್ತಿದ್ದಂತೆ 'ಎಲ್ಲರಿಗೂ ವಸತಿ' ಒದಗಿಸುವ ಪ್ರಧಾನ ಮಂತ್ರಿ ಅವರ ದೂರದೃಷ್ಟಿ ಬಲಗೊಳ್ಳುತ್ತದೆ. ಪ್ರಧಾನ ಮಂತ್ರಿ ಆವಾಸ್ - ನಗರ ಯೋಜನೆ ಅಡಿ, ಸುಮಾರು 128 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಯೋಜನೆಯು 1,000ಕ್ಕಿಂತ ಹೆಚ್ಚಿನ ಫಲಾನುಭವಿ ಕುಟುಂಬಗಳಿಗೆ ಪ್ರಯೋಜನ ನೀಡುತ್ತದೆ. ಇದು ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ಗುಣಮಟ್ಟದ ಮನೆಗಳನ್ನು ನಿರ್ಮಿಸುವ ಜತೆಗೆ, ಗಣನೀಯವಾಗಿ ಕಡಿಮೆ ನಿರ್ಮಾಣ ಸಮಯದಲ್ಲಿ ನಿರ್ಮಿಸಲು ನವೀನ ತಂತ್ರಜ್ಞಾನ 'ಪ್ರಿ-ಇಂಜಿನಿಯರ್ಡ್ ಸ್ಟೀಲ್ ಸ್ಟ್ರಕ್ಚರಲ್ ಸಿಸ್ಟಮ್ ಜತೆಗೆ ಪ್ರಿಫ್ಯಾಬ್ರಿಕೇಟೆಡ್ ಸ್ಯಾಂಡ್ವಿಚ್ ಪ್ಯಾನಲ್ ಸಿಸ್ಟಮ್' ತಂತ್ರತ್ಜ್ಞಾನ ಬಳಸಲಾಗಿದೆ.

ಪ್ರತಿ ಮನೆಗೆ ನಲ್ಲಿ ನೀರಿನ ಸಂಪರ್ಕ ನೀಡುವ ಸುರಕ್ಷಿತ ಮತ್ತು ಸಮರ್ಪಕ ಕುಡಿಯುವ ನೀರು ಒದಗಿಸುವ ಪ್ರಧಾನ ಮಂತ್ರಿ ಅವರ ದೂರದೃಷ್ಟಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ, ಮಂಡ್ಲಾ, ಜಬಲ್‌ಪುರ ಮತ್ತು ದಿಂಡೋರಿ ಜಿಲ್ಲೆಗಳಲ್ಲಿ 2,350 ಕೋಟಿ ರೂ. ವೆಚ್ಚದ ಜಲಜೀವನ್ ಮಿಷನ್ ನ ನಾನಾ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ. ಸಿಯೋನಿ ಜಿಲ್ಲೆಯಲ್ಲಿ 100 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಜಲಜೀವನ್ ಮಿಷನ್ ಯೋಜನೆಯನ್ನು ಪ್ರಧಾನಿ ದೇಶಕ್ಕೆ ಸಮರ್ಪಿಸಲಿದ್ದಾರೆ. ರಾಜ್ಯದ 4 ಜಿಲ್ಲೆಗಳಲ್ಲಿ ಈ ಯೋಜನೆಗಳು ಮಧ್ಯಪ್ರದೇಶದ ಸುಮಾರು 1,575 ಹಳ್ಳಿಗಳಿಗೆ ಪ್ರಯೋಜನ ನೀಡುತ್ತವೆ.

ಪ್ರಧಾನ ಮಂತ್ರಿ ಅವರು ಮಧ್ಯಪ್ರದೇಶದಲ್ಲಿ ರಸ್ತೆ ಮೂಲಸೌಕರ್ಯ ಸುಧಾರಿಸಲು 4,800 ಕೋಟಿ ರೂಪಾಯಿಗಿಂತ ಹೆಚ್ಚಿನ ಮೌಲ್ಯದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ದೇಶಕ್ಕೆ ಸಮರ್ಪಿಸಲಿದ್ದಾರೆ. ಪ್ರಧಾನ ಮಂತ್ರಿ ಅವರು ಎನ್ಎಚ್-346ರಲ್ಲಿ ಜಾರ್ಖೇಡಾ- ಬೆರಾಸಿಯಾ - ಧೋಲ್ಖೇಡಿ ಸಂಪರ್ಕಿಸುವ ರಸ್ತೆಯ ಮೇಲ್ದರ್ಜೆ ಸೇರಿದಂತೆ ವಿವಿಧ ಯೋಜನೆಗಳಿಗೆ ಅಡಿಗಲ್ಲು ಹಾಕಲಿದ್ದಾರೆ.  ಬಾಲಘಾಟ್‌ನ ಚತುಷ್ಪಥ ರಸ್ತೆ – ಎನ್ಎಚ್-543 ರ ಗೊಂಡಿಯಾ ವಿಭಾಗ, ರೂಧಿ ಮತ್ತು ದೇಶಗಾಂವ್ ಸಂಪರ್ಕಿಸುವ ಖಾಂಡ್ವಾ ಬೈಪಾಸ್‌ನ ಚತುಷ್ಪಥ ರಸ್ತೆ, ತೆಮಗಾಂವ್‌ನಿಂದ 4 ಲೇನಿಂಗ್‌ ಒಳಗೊಂಡ ಎನ್ಎಚ್-47ರ ಚಿಚೋಲಿ ವಿಭಾಗ, ಬೋರೆಗಾಂವ್‌ನಿಂದ ಶಹಪುರಕ್ಕೆ ಸಂಪರ್ಕ ಕಲ್ಪಿಸುವ ಚತುಷ್ಪಥ ರಸ್ತೆ ಮತ್ತು ಶಹಪುರದಿಂದ ಮುಕ್ತೈನಗರಕ್ಕೆ ಸಂಪರ್ಕ ಕಲ್ಪಿಸುವ ಚತುಷ್ಪಥ ರಸ್ತೆ,  ಖಾಲ್‌ಘಾಟ್‌ನಿಂದ ಎನ್ಎಚ್-347ಸಿ ಮೂಲಕ ಸರ್ವರ್‌ದೇವ್ಲಾಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲ್ದರ್ಜೆ ಯೋಜನಗಳನ್ನು ಪ್ರಧಾನಿ ಅವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

ಪ್ರಧಾನಿ ಅವರು 1,850 ಕೋಟಿ ರೂ.ಗಿಂತ ಅಧಿಕ ಮೊತ್ತದ ರೈಲು ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಕಟ್ನಿ-ವಿಜಯ್ಸೋಟಾ(102 ಕಿ.ಮೀ.) ಮತ್ತು ಮಾರ್ವಾಸ್ ಗ್ರಾಮ್-ಸಿಂಗ್ರೌಲಿ(78.50 ಕಿ.ಮೀ.) ಸಂಪರ್ಕಿಸುವ ಜೋಡಿರೈಲು ಮಾರ್ಗಗಳು ಇವುಗಳಲ್ಲಿ ಸೇರಿವೆ. ಈ ಎರಡೂ ಯೋಜನೆಗಳು ಕಟ್ನಿ-ಸಿಂಗ್ರೌಲಿ ವಿಭಾಗವನ್ನು ಸಂಪರ್ಕಿಸುವ ಜೋಡಿ ರೈಲು ಮಾರ್ಗ ಯೋಜನೆಯ ಭಾಗವಾಗಿದೆ. ಈ ಯೋಜನೆಗಳು ಮಧ್ಯಪ್ರದೇಶದಲ್ಲಿ ರೈಲು ಮೂಲಸೌಕರ್ಯ ಸುಧಾರಿಸುವ ಜತೆಗೆ,  ರಾಜ್ಯದ ವ್ಯಾಪಾರ ಮತ್ತು ಪ್ರವಾಸೋದ್ಯಮಕ್ಕೆ ಪ್ರಯೋಜನ ನೀಡುತ್ತದೆ.

ಪ್ರಧಾನ ಮಂತ್ರಿ ಅವರು ವಿಜಯಪುರ-ಔರಾಯನ್-ಫುಲ್ಪುರ್ ಪೈಪ್‌ಲೈನ್ ಯೋಜನೆಯನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ., 1750 ಕೋಟಿ ರೂ.ಗಿಂತ ಹೆಚ್ಚಿನ ವೆಚ್ಚದಲ್ಲಿ 352 ಕಿಮೀ ಉದ್ದದ ಪೈಪ್‌ಲೈನ್‌ ನಿರ್ಮಿಸಲಾಗಿದೆ. ಪ್ರಧಾನ ಮಂತ್ರಿ ಅವರು ನಾಗ್ಪುರ ಜಬಲ್‌ಪುರ್ ವಿಭಾಗದ ಮುಂಬೈ ನಾಗ್ಪುರ ಜರ್ಸುಗುಡ ಪೈಪ್‌ಲೈನ್ ಯೋಜನೆ(317 ಕಿಮೀ)ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 1100 ಕೋಟಿ ರೂ.ಗಿಂತ ಹೆಚ್ಚಿನ ವೆಚ್ಚದಲ್ಲಿ ಯೋಜನೆ ನಿರ್ಮಾಣವಾಗಲಿದೆ. ಗ್ಯಾಸ್ ಪೈಪ್‌ಲೈನ್ ಯೋಜನೆಗಳು ಕೈಗಾರಿಕೆಗಳು ಮತ್ತು ಮನೆಗಳಿಗೆ ಶುದ್ಧ ಮತ್ತು ಕೈಗೆಟುಕುವ ನೈಸರ್ಗಿಕ ಅನಿಲವನ್ನು ಪೂರೈಸುತ್ತವೆ. ಪರಿಸರದಲ್ಲಿ ಇಂಗಾಲ ಹೊರಸೂಸುವಿಕೆ ಕಡಿಮೆ ಮಾಡುವತ್ತ ಒಂದು ದಿಟ್ಟ ಹೆಜ್ಜೆಯಾಗಿದೆ. ಜಬಲ್‌ಪುರದಲ್ಲಿ ಸುಮಾರು 147 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಹೊಸ ಬಾಟ್ಲಿಂಗ್ ಪ್ಲಾಂಟ್ ಅನ್ನು ಪ್ರಧಾನಿ ಅವರು ಲೋಕಾರ್ಪಣೆ ಮಾಡಲಿದ್ದಾರೆ.

 

***

 



(Release ID: 1964136) Visitor Counter : 116