ಪ್ರಧಾನ ಮಂತ್ರಿಯವರ ಕಛೇರಿ
ರಾಜಸ್ಥಾನದ ಚಿತ್ತೋರ್‌ಗಢದಲ್ಲಿ ಸುಮಾರು 7,000 ಕೋಟಿ ರೂಪಾಯಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ನೆರವೇರಿಸಿದ ಪ್ರಧಾನಮಂತ್ರಿಗಳು
"ರಾಜಸ್ಥಾನವು ಗತಕಾಲದ ಪರಂಪರೆ, ವರ್ತಮಾನದ ಶಕ್ತಿ ಮತ್ತು ಭವಿಷ್ಯದ ಸಾಧ್ಯತೆಗಳನ್ನು ಹೊಂದಿರುವ ರಾಜ್ಯವಾಗಿದೆ"
"ರಾಜಸ್ಥಾನದ ಅಭಿವೃದ್ಧಿ ಭಾರತ ಸರ್ಕಾರಕ್ಕೆ ಬಹು ಮುಖಯ ಆದ್ಯತೆಯಾಗಿದೆ"
"ನಾವು ಶೌರ್ಯ, ವೈಭವ ಮತ್ತು ಅಭಿವೃದ್ಧಿಯೊಂದಿಗೆ ಮುಂದುವರಿಯಬೇಕು ಎಂದು ರಾಜಸ್ಥಾನದ ಇತಿಹಾಸವು ನಮಗೆ ಕಲಿಸುತ್ತದೆ"
"ಹಿಂದೆ ಅವಕಾಶವಂಚಿತವಾಗಿದ್ದ ಮತ್ತು ಹಿಂದುಳಿದ ಪ್ರದೇಶಗಳು ಹಾಗೂ ವರ್ಗಗಳ ಅಭಿವೃದ್ಧಿಯು ಇಂದು ದೇಶದ ಆದ್ಯತೆಯಾಗಿದೆ"
Posted On:
02 OCT 2023 12:21PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜಸ್ಥಾನದ ಚಿತ್ತೋರ್‌ಗಢದಲ್ಲಿ ಸುಮಾರು 7,000 ಕೋಟಿ ರೂಪಾಯಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ನೆರವೇರಿಸಿದರು. ʻಮೆಹ್ಸಾನಾ - ಭಟಿಂಡಾ – ಗುರುದಾಸ್‌ಪುರ ಅನಿಲ ಪೈಪ್‌ನ್ʼ, ಅಬು ರಸ್ತೆಯಲ್ಲಿರುವ ʻಎಚ್‌ಪಿಸಿಎಲ್ʼನ ಎಲ್‌ಪಿಜಿ ಸ್ಥಾವರ, ಐಒಸಿಎಲ್‌ನ ಅಜ್ಮೀರ್ ಬಾಟ್ಲಿಂಗ್ ಸ್ಥಾವರದಲ್ಲಿ ಹೆಚ್ಚುವರಿ ಸಂಗ್ರಹಣೆ ಘಟಕ, ರೈಲ್ವೆ ಮತ್ತು ರಸ್ತೆ ಯೋಜನೆಗಳು, ನಾಥದ್ವಾರದಲ್ಲಿ ಪ್ರವಾಸೋದ್ಯಮ ಸೌಲಭ್ಯಗಳು ಮತ್ತು ಕೋಟಾದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಶಾಶ್ವತ ಕ್ಯಾಂಪಸ್ ಈ ಯೋಜನೆಗಳಲ್ಲಿ ಸೇರಿವೆ.
ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಗಳನ್ನು ಸ್ಮರಿಸಿದರು. ಅಕ್ಟೋಬರ್ 1ರಂದು ದೇಶಾದ್ಯಂತ ನಡೆದ ʻಸ್ವಚ್ಛತಾ ಅಭಿಯಾನʼವನ್ನು ಅವರು ಒತ್ತಿ ಹೇಳಿದರು ಮತ್ತು ಅದನ್ನು ಜನಾಂದೋಲನವನ್ನಾಗಿ ಮಾಡಿದ್ದಕ್ಕಾಗಿ ನಾಗರಿಕರಿಗೆ ಧನ್ಯವಾದ ಅರ್ಪಿಸಿದರು.
ಸ್ವಚ್ಛತೆ, ಸ್ವಾವಲಂಬನೆ ಮತ್ತು ಸ್ಪರ್ಧಾತ್ಮಕ ಅಭಿವೃದ್ಧಿಯ ವಿಚಾರದಲ್ಲಿ ಮಹಾತ್ಮಾ ಗಾಂಧಿಯವರ ತತ್ವಗಳನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಕಳೆದ 9 ವರ್ಷಗಳಲ್ಲಿ ಅವರು ಹಾಕಿಕೊಟ್ಟ ಈ ತತ್ವಗಳ ವಿಸ್ತರಣೆಗಾಗಿ ರಾಷ್ಟ್ರವು ಕೆಲಸ ಮಾಡಿದೆ. ಇಂದಿನ 7000 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಅಭಿವೃದ್ಧಿ ಯೋಜನೆಗಳಲ್ಲಿ ಅದರ ಪ್ರತಿಬಿಂಬವವನ್ನು ಕಾಣಬಹುದು ಎಂದರು.
ಅನಿಲ ಆಧಾರಿತ ಆರ್ಥಿಕತೆಯನ್ನು ಬಲಪಡಿಸುವ ಸಲುವಾಗಿ, ದೇಶಾದ್ಯಂತ ಅನಿಲ ಕೊಳವೆ ಮಾರ್ಗಗಳನ್ನು ಹಾಕುವ ಅಭೂತಪೂರ್ವ ಅಭಿಯಾನ ನಡೆಯುತ್ತಿದೆ ಎಂದು ಪ್ರಧಾನಿ ಹೇಳಿದರು. ʻಮೆಹ್ಸಾನಾ - ಭಟಿಂಡಾ – ಗುರುದಾಸ್‌ಪುರ್ ಅನಿಲ ಕೊಳವೆ ಮಾರ್ಗʼದ ʻಪಾಲಿ-ಹನುಮಾನ್‌ಗಢʼ ವಿಭಾಗವನ್ನು ಇಂದು ಸಮರ್ಪಿಸಲಾಯಿತು, ಇದು ರಾಜಸ್ಥಾನದಲ್ಲಿ ಕೈಗಾರಿಕೆ ಮತ್ತು ಉದ್ಯೋಗವನ್ನು ಹೆಚ್ಚಿಸುತ್ತದೆ. ಇದು ಅಡುಗೆಮನೆಗಳಲ್ಲಿ ಕೊಳವೆ ಮೂಲಕ ಅನಿಲವನ್ನು ಒದಗಿಸುವ ಅಭಿಯಾನಕ್ಕೆ ಉತ್ತೇಜನ ನೀಡುತ್ತದೆ ಎಂದು ಅವರು ಹೇಳಿದರು.
ಪ್ರಧಾನಮಂತ್ರಿಯವರು ಇಂದಿನ ರೈಲ್ವೆ ಮತ್ತು ರಸ್ತೆ ಸಂಬಂಧಿತ ಯೋಜನೆಗಳ ಬಗ್ಗೆಯೂ ಪ್ರಸ್ತಾಪಿಸಿದರು. ಇವುಗಳು ಮೇವಾರ್ ಜನರ ಜೀವನವನ್ನು ಸುಲಭಗೊಳಿಸುತ್ತವೆ, ಜೊತೆಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ ಎಂದು ಅವರು ಒತ್ತಿ ಹೇಳಿದರು. ʻಐಐಐಟಿʼ ಕ್ಯಾಂಪಸ್ ಅಭಿವೃದ್ಧಿಯೊಂದಿಗೆ, ಶೈಕ್ಷಣಿಕ ಕೇಂದ್ರವಾಗಿ ಕೋಟಾದ ಗುರುತನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಪ್ರಧಾನಿ ಹೇಳಿದರು.
ರಾಜಸ್ಥಾನವು ಗತಕಾಲದ ಪರಂಪರೆ, ವರ್ತಮಾನದ ಶಕ್ತಿ ಮತ್ತು ಭವಿಷ್ಯದ ಸಾಧ್ಯತೆಗಳನ್ನು ಹೊಂದಿರುವ ರಾಜ್ಯವಾಗಿದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದರು. ನಾಥದ್ವಾರ ಪ್ರವಾಸಿ ಮತ್ತು ಸಾಂಸ್ಕೃತಿಕ ಕೇಂದ್ರದ ಬಗ್ಗೆ ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಇದು ಜೈಪುರದ ಗೋವಿಂದ್ ದೇವ್ ಜೀ ದೇವಾಲಯ, ಸಿಕಾರ್‌ನ ಖತು ಶ್ಯಾಮ್ ಮಂದಿರ ಮತ್ತು ರಾಜ್ ಸಮಂದ್‌ನ ನಾಥದ್ವಾರವನ್ನು ಒಳಗೊಂಡ ʻಪ್ರವಾಸಿ ಸರ್ಕ್ಯೂಟ್ʼನ ಭಾಗವಾಗಿದೆ ಎಂದರು. ಇದು ರಾಜಸ್ಥಾನದ ವೈಭವವನ್ನು ಹೆಚ್ಚಿಸುವುದಲ್ಲದೆ, ಪ್ರವಾಸೋದ್ಯಮಕ್ಕೂ ಪ್ರಯೋಜನಕಾರಿಯಾಗಿದೆ.
"ಭಗವಾನ್ ಕೃಷ್ಣನಿಗೆ ಸಮರ್ಪಿತವಾಗಿರುವ ಚಿತ್ತೋರ್‌ಗಢ ಬಳಿಯ ಸವರಿಯಾ ಸೇಠ್ ದೇವಾಲಯವು ಆಧ್ಯಾತ್ಮಿಕತೆಯ ಕೇಂದ್ರವಾಗಿದೆ," ಎಂದು ಹೇಳಿದ ಪ್ರಧಾನಮಂತ್ರಿಯವರು, ಸವರಿಯಾ ಸೇಠ್ ಅವರನ್ನು ಪೂಜಿಸಲು ಪ್ರತಿವರ್ಷ ಲಕ್ಷಾಂತರ ಯಾತ್ರಾರ್ಥಿಗಳು ಬರುತ್ತಾರೆ ಎಂದರು. ವ್ಯಾಪಾರ ಮಾಲೀಕರ ಸಮುದಾಯದಲ್ಲಿ ಇದರ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ʻಸ್ವದೇಶ ದರ್ಶನʼ ಯೋಜನೆಯಡಿ ದೇವಾಲಯಕ್ಕೆ ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು. ʻನೀರಿನ ಲೇಸರ್ ಶೋʼ, ʻಪ್ರವಾಸಿ ಸೌಲಭ್ಯ ಕೇಂದ್ರʼ, ʻಆಂಫಿ ಥಿಯೇಟರ್ʼ ಮತ್ತು ಕೆಫೆಟೇರಿಯಾದ ಉದಾಹರಣೆಗಳನ್ನು ನೀಡಿದರು. ಈ ಬೆಳವಣಿಗೆಗಳು ಯಾತ್ರಾರ್ಥಿಗಳಿಗೆ ಹೆಚ್ಚಿನ ಅನುಕೂಲವನ್ನು ಒದಗಿಸುತ್ತವೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
"ರಾಜಸ್ಥಾನದ ಅಭಿವೃದ್ಧಿ ಭಾರತ ಸರ್ಕಾರದ ಬಹುಮುಖ್ಯ ಆದ್ಯತೆಯಾಗಿದೆ. ರಾಜಸ್ಥಾನದಲ್ಲಿ ಎಕ್ಸ್‌ಪ್ರೆಸ್ ವೇಗಳು, ಹೆದ್ದಾರಿಗಳು ಮತ್ತು ರೈಲ್ವೆಯಂತಹ ಆಧುನಿಕ ಮೂಲಸೌಕರ್ಯಗಳ ಮೇಲೆ ನಾವು ಸಾಕಷ್ಟು ಗಮನ ಹರಿಸಿದ್ದೇವೆ. ಅದು ದೆಹಲಿ-ಮುಂಬೈ ಎಕ್ಸ್‌ಪ್ರೆಸ್ ವೇ ಆಗಿರಲಿ ಅಥವಾ ಅಮೃತಸರ-ಜಾಮ್‌ನಗರ್ ಎಕ್ಸ್‌ಪ್ರೆಸ್‌ವೇ ಆಗಿರಲಿ, ಇವು ರಾಜಸ್ಥಾನದ ಸಾರಿಗೆ ಕ್ಷೇತ್ರಕ್ಕೆ ಹೊಸ ಶಕ್ತಿಯನ್ನು ನೀಡಲಿವೆ. ಇತ್ತೀಚೆಗೆ ಹಸಿರು ನಿಶಾನೆ ತೋರಿದ ಉದಯಪುರ-ಜೈಪುರ ʻವಂದೇಭಾರತ್ʼ ರೈಲಿನ ಬಗ್ಗೆಯೂ ಅವರು ಉಲ್ಲೇಖಿಸಿದರು. ʻಭಾರತ್ ಮಾಲಾʼ ಯೋಜನೆಯ ಅತಿದೊಡ್ಡ ಫಲಾನುಭವಿಗಳಲ್ಲಿ ರಾಜಸ್ಥಾನವೂ ಒಂದು ಎಂದು ಅವರು ಮಾಹಿತಿ ನೀಡಿದರು.
"ನಾವು ಶೌರ್ಯ, ವೈಭವ ಮತ್ತು ಅಭಿವೃದ್ಧಿಯೊಂದಿಗೆ ಮುಂದೆ ಸಾಗಬೇಕು ಎಂದು ರಾಜಸ್ಥಾನದ ಇತಿಹಾಸ ನಮಗೆ ಕಲಿಸುತ್ತದೆ," ಎಂದು ಪ್ರಧಾನಿ ಒತ್ತಿ ಹೇಳಿದರು. "ಇಂದಿನ ಭಾರತವೂ ಅದನ್ನೇ ಮಾಡುತ್ತಿದೆ. ಪ್ರತಿಯೊಬ್ಬರ ಪ್ರಯತ್ನದಿಂದ ನಾವು ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದಲ್ಲಿ ನಿರತರಾಗಿದ್ದೇವೆ. ಈ ಹಿಂದೆ ಅವಕಾಶ ವಂಚಿತವಾಗಿದ್ದ ಮತ್ತು ಹಿಂದುಳಿದ್ದ ಪ್ರದೇಶಗಳು ಹಾಗೂ ವರ್ಗಗಳ ಅಭಿವೃದ್ಧಿಯು ಇಂದು ದೇಶದ ಆದ್ಯತೆಯಾಗಿದೆ," ಎಂದು ಹೇಳಿದರು. ಕಳೆದ 5 ವರ್ಷಗಳಿಂದ ದೇಶದಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ʻಮಹತ್ವಾಕಾಂಕ್ಷೆಯ ಜಿಲ್ಲೆʼಗಳ ಕಾರ್ಯಕ್ರಮವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಈ ಅಭಿಯಾನದ ಅಡಿಯಲ್ಲಿ ಮೇವಾರ್ ಮತ್ತು ರಾಜಸ್ಥಾನದ ಹಲವು ಜಿಲ್ಲೆಗಳನ್ನು ಸಹ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಕೇಂದ್ರ ಸರ್ಕಾರವು ಈಗ ʻಮಹತ್ವಾಕಾಂಕ್ಷೆಯ ಬ್ಲಾಕ್ʼಗಳನ್ನು ಗುರುತಿಸಲು ಮತ್ತು ಅವುಗಳ ತ್ವರಿತ ಅಭಿವೃದ್ಧಿಗೆ ಗಮನ ಹರಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಮುಂಬರುವ ದಿನಗಳಲ್ಲಿ, ರಾಜಸ್ಥಾನದ ಅನೇಕ ಬ್ಲಾಕ್‌ಗಳನ್ನು ಸಹ ಈ ಅಭಿಯಾನದ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ತಿಳಿಸಿದರು.
ದೀನದಲಿತರಿಗೆ ಆದ್ಯತೆ ನೀಡುವ ಸಲುವಾಗಿ, ಕೇಂದ್ರ ಸರ್ಕಾರವು ʻರೋಮಾಂಚಕ ಗ್ರಾಮʼ ಕಾರ್ಯಕ್ರಮವನ್ನು ಸಹ ಪ್ರಾರಂಭಿಸಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. "ಕೊನೆಯದೆಂದು ಪರಿಗಣಿಸಲಾದ ಗಡಿ ಗ್ರಾಮಗಳನ್ನು ನಾವು ಈಗ ಮೊದಲ ಗ್ರಾಮಗಳಾಗಿ ಪರಿಗಣಿಸಿ ಅವುಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ರಾಜಸ್ಥಾನದ ಹತ್ತಾರು ಗಡಿ ಗ್ರಾಮಗಳು ಇದರಿಂದ ಹೆಚ್ಚಿನ ಪ್ರಯೋಜನ ಪಡೆಯುವುದು ಖಚಿತ", ಎಂದು ಶ್ರೀ ಮೋದಿ ಹೇಳಿದರು.
ಹಿನ್ನೆಲೆ
ಅನಿಲ ಆಧಾರಿತ ಆರ್ಥಿಕತೆಯನ್ನು ಉತ್ತೇಜಿಸುವ ಮತ್ತೊಂದು ಹೆಜ್ಜೆಯಾಗಿ, ʻಮೆಹ್ಸಾನಾ - ಭಟಿಂಡಾ – ಗುರುದಾಸ್‌ಪುರ ಅನಿಲ ಕೊಳವೆ ಮಾರ್ಗʼವನ್ನು ಪ್ರಧಾನಮಂತ್ರಿ ಅವರು ಸಮರ್ಪಿಸಿದರು. ಸುಮಾರು 4500 ಕೋಟಿ ರೂ.ಗಳ ವೆಚ್ಚದಲ್ಲಿ ಈ ಕೊಳವೆ ಮಾರ್ಗ ನಿರ್ಮಿಸಲಾಗಿದೆ. ಪ್ರಧಾನಮಂತ್ರಿಯವರು ಅಬು ರಸ್ತೆಯಲ್ಲಿ ʻಎಚ್‌ಪಿಸಿಎಲ್ʼನ ಎಲ್‌ಪಿಜಿ ಘಟಕವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಸ್ಥಾವರವು ವರ್ಷಕ್ಕೆ 86 ಲಕ್ಷ ಸಿಲಿಂಡರ್‌ಗಳನ್ನು ಮರುಭರ್ತಿ ಮಾಡಿ ವಿತರಿಸುತ್ತದೆ ಮತ್ತು ಸಿಲಿಂಡರ್‌ಗಳನ್ನು ಸಾಗಿಸುವ ಟ್ರಕ್‌ಗಳ ಓಡಾಟವನ್ನು ವರ್ಷಕ್ಕೆ ಸುಮಾರು 0.75 ದಶಲಕ್ಷ ಕಿ.ಮೀ.ನಷ್ಟು ಕಡಿಮೆ ಮಾಡುತ್ತದೆ. ಆ ಮೂಲಕ ಇದು ವರ್ಷಕ್ಕೆ ಸುಮಾರು 0.5 ಮಿಲಿಯನ್ ಟನ್ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ʻಐಒಸಿಎಲ್ʼನ ಅಜ್ಮೀರ್ ಬಾಟ್ಲಿಂಗ್ ಘಟಕದಲ್ಲಿ ಹೆಚ್ಚುವರಿ ಸಂಗ್ರಹಣೆ ಸೌಲಭ್ಯವನ್ನು ಪ್ರಧಾನಿ ಲೋಕಾರ್ಪಣೆ ಮಾಡಿದರು.
ರಾಷ್ಟ್ರೀಯ ಹೆದ್ದಾರಿ-12ರ(ಹೊಸ ಎನ್‌ಎಚ್-52) ʻದಾರಾ-ಝಾಲಾವರ್-ತೀಂಧರ್ʼ ವಿಭಾಗದಲ್ಲಿ 1480 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾಗಿರುವ 4 ಪಥದ ರಸ್ತೆಯನ್ನು ಪ್ರಧಾನಮಂತ್ರಿ ಅವರು ಲೋಕಾರ್ಪಣೆ ಮಾಡಿದರು. ಈ ಯೋಜನೆಯು ಕೋಟಾ ಮತ್ತು ಝಾಲಾವರ್ ಜಿಲ್ಲೆಗಳಿಂದ ಗಣಿಗಳ ಉತ್ಪನ್ನಗಳ ಸಾಗಣೆಯನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಸವಾಯಿ ಮಾಧೋಪುರದಲ್ಲಿ ರೈಲ್ವೆ ಮೇಲ್ಸೇತುವೆಯನ್ನು(ಆರ್‌ಒಬಿ) ಎರಡು ಪಥದಿಂದ ನಾಲ್ಕು ಪಥಕ್ಕೆ ಅಗಲಗೊಳಿಸುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಯು ಸಂಚಾರ ದಟ್ಟಣೆ ಸಮಸ್ಯೆಯಿಂದ ಪರಿಹಾರವನ್ನು ಒದಗಿಸಲು ಸಹಾಯ ಮಾಡುತ್ತದೆ.
ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಿದ ರೈಲ್ವೆ ಯೋಜನೆಗಳಲ್ಲಿ ʻಚಿತ್ತೋರ್‌ಗಢ – ನೀಮುಚ್ʼ ರೈಲ್ವೆ ಮಾರ್ಗ ಮತ್ತು ʻಕೋಟಾ – ಚಿತ್ತೋರ್‌ಗಢʼ ವಿದ್ಯುದ್ದೀಕೃತ ರೈಲ್ವೆ ಮಾರ್ಗದ ಡಬ್ಲಿಂಗ್ ಯೋಜನೆಗಳು ಸೇರಿವೆ. ಈ ಯೋಜನೆಗಳು 650 ಕೋಟಿ ರೂ.ಗಿಂತ ಹೆಚ್ಚು ವೆಚ್ಚದಲ್ಲಿ ಪೂರ್ಣಗೊಂಡಿವೆ ಮತ್ತು ಈ ಪ್ರದೇಶದಲ್ಲಿ ರೈಲು ಮೂಲಸೌಕರ್ಯವನ್ನು ಬಲಪಡಿಸುತ್ತವೆ. ಇವು ರಾಜಸ್ಥಾನದ ಐತಿಹಾಸಿಕ ತಾಣಗಳಿಗೆ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತವೆ.
ʻಸ್ವದೇಶ ದರ್ಶನʼ ಯೋಜನೆಯಡಿ ನಾಥದ್ವಾರದಲ್ಲಿ ಅಭಿವೃದ್ಧಿಪಡಿಸಲಾದ ಪ್ರವಾಸೋದ್ಯಮ ಸೌಲಭ್ಯಗಳನ್ನು ಪ್ರಧಾನಮಂತ್ರಿ ಅವರು ಸೇವೆಗೆ ಸಮರ್ಪಿಸಿದರು. ಸಂತ ವಲ್ಲಭಾಚಾರ್ಯರು ಪ್ರಚಾರ ಮಾಡಿದ ಪುಷ್ಟಿಮಾರ್ಗದ ಲಕ್ಷಾಂತರ ಅನುಯಾಯಿಗಳಿಗೆ ನಾಥದ್ವಾರವು ಪ್ರಮುಖ ನಂಬಿಕೆಯ ಕ್ಷೇತ್ರವಾಗಿದೆ. ನಾಥದ್ವಾರದಲ್ಲಿ ಆಧುನಿಕ 'ಪ್ರವಾಸಿ ವ್ಯಾಖ್ಯಾನ ಮತ್ತು ಸಾಂಸ್ಕೃತಿಕ ಕೇಂದ್ರ'ವನ್ನು ಅಭಿವೃದ್ಧಿಪಡಿಸಲಾಗಿದೆ, ಅಲ್ಲಿ ಪ್ರವಾಸಿಗರು ಶ್ರೀನಾಥ್ ಜೀ ಅವರ ಜೀವನದ ವಿವಿಧ ಅಂಶಗಳ ಅನುಭವವನ್ನು ಪಡೆಯಬಹುದು. ಇದಲ್ಲದೆ, ಪ್ರಧಾನಮಂತ್ರಿಯವರು ಕೋಟಾದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಶಾಶ್ವತ ಕ್ಯಾಂಪಸ್ ಅನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.
Projects being launched from Chittorgarh will have a transformative impact on infrastructure, connectivity and education in Rajasthan and further 'Ease of Living.' https://t.co/jKmDRgwuwA
— Narendra Modi (@narendramodi) October 2, 2023
***
(Release ID: 1963296)
Visitor Counter : 92
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam