ಪ್ರಧಾನ ಮಂತ್ರಿಯವರ ಕಛೇರಿ

ಗುಜರಾತ್‌ನ ಬೋಡೆಲಿ, ಛೋಟೌಡೆಪುರ್‌ನಲ್ಲಿ 5,200 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತದ ರಾಷ್ಟ್ರೀಯ ಯೋಜನೆಗಳಿಗೆ ಪ್ರಧಾನಮಂತ್ರಿ ಶಂಕುಸ್ಥಾಪನೆ ಮತ್ತು ಸಮರ್ಪಣೆ


‘ಮಿಷನ್ ಸ್ಕೂಲ್ಸ್ ಆಫ್ ಎಕ್ಸಲೆನ್ಸ್’ ಕಾರ್ಯಕ್ರಮದ ಅಡಿ 4,500 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಬಹುಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ

‘ವಿದ್ಯಾ ಸಮೀಕ್ಷಾ ಕೇಂದ್ರ 2.0’ ಮತ್ತು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅಡಿಗಲ್ಲು

"ನಮಗೆ, ಬಡವರ ಮನೆ ಕೇವಲ ಒಂದು ಸಂಖ್ಯೆ ಅಲ್ಲ, ಆದರೆ ಅದು ಘನತೆಯನ್ನು ಸಕ್ರಿಯಗೊಳಿಸುತ್ತದೆ"

"ನಾವು ಬುಡಕಟ್ಟು ಪ್ರದೇಶಗಳ ಯುವಕರಿಗೆ ಅವಕಾಶಗಳನ್ನು ಒದಗಿಸುವ ಮೂಲಕ ಅರ್ಹತೆ ಉತ್ತೇಜಿಸುವ ಗುರಿ ಹೊಂದಿದ್ದೇವೆ"

ಛೋಟಾ ಉದಯಪುರ ಸೇರಿದಂತೆ ಇಡೀ ಬುಡಕಟ್ಟು ಪ್ರದೇಶದ ತಾಯಂದಿರು ಮತ್ತು ಸಹೋದರಿಯರಿಗೆ ನಿಮ್ಮ ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಮಗ ಇಲ್ಲಿಗೆ ಬಂದಿದ್ದಾನೆ ಎಂದು ಹೇಳುತ್ತೇನೆ.

Posted On: 27 SEP 2023 3:45PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತಿನ ಬೋಡೆಲಿ, ಛೋಟೌಡೆಪುರದಲ್ಲಿ 5,200 ಕೋಟಿ ರೂ.ಗಿಂತ ಅಧಿಕ ಮೊತ್ತದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ರಾಷ್ಟ್ರಕ್ಕೆ ಸಮರ್ಪಿಸಿದರು. ‘ಮಿಷನ್ ಸ್ಕೂಲ್ಸ್ ಆಫ್ ಎಕ್ಸಲೆನ್ಸ್’ ಕಾರ್ಯಕ್ರಮದಡಿ 4,500 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಬಹುವಿಧದ ಯೋಜನೆಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ, ‘ವಿದ್ಯಾ ಸಮೀಕ್ಷಾ ಕೇಂದ್ರ 2.0’ಗೆ ಶಂಕುಸ್ಥಾಪನೆ ಮತ್ತು ಇತರ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಇದು ಒಳಗೊಂಡಿದೆ.

ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, ಈ ಪ್ರದೇಶದೊಂದಿಗಿನ ತಮ್ಮ ಸುದೀರ್ಘ ಒಡನಾಟ ಸ್ಮರಿಸಿ, ಇಂದು ಉದ್ಘಾಟಿಸಲಾದ ಯೋಜನೆಗಳು ಅಥವಾ ಶಂಕುಸ್ಥಾಪನೆಯಾದ ಯೋಜನೆಗಳಿಗೆ ಹರ್ಷ ವ್ಯಕ್ತಪಡಿಸಿದರು. ಅವರು ಕಾರ್ಯಕರ್ತರಾಗಿದ್ದ ದಿನಗಳನ್ನು ಮತ್ತು ಈ ಪ್ರದೇಶದ ಹಳ್ಳಿಗಳಲ್ಲಿ ಅವರು ಕಳೆದ ಸಮಯವನ್ನು ನೆನಪಿಸಿಕೊಂಡರು. ಸಭಿಕರಲ್ಲಿ ಅನೇಕ ಪರಿಚಿತ ಮುಖಗಳನ್ನು ನೋಡಿ ಸಂತಸ ವ್ಯಕ್ತಪಡಿಸಿದರು. ಈ ಪ್ರದೇಶದ ಬುಡಕಟ್ಟು ಸಮುದಾಯದ ಪರಿಸ್ಥಿತಿಗಳು ಮತ್ತು ಜೀವನದೊಂದಿಗೆ ನಿಕಟ ಪರಿಚಯ ಹೊಂದಿದ್ದೇನೆ. ಅಧಿಕೃತ ಜವಾಬ್ದಾರಿಗಳನ್ನು ವಹಿಸಿಕೊಂಡಾಗ ಪ್ರದೇಶ ಮತ್ತು ಇತರ ಬುಡಕಟ್ಟು ಪ್ರದೇಶಗಳನ್ನು ಅಭಿವೃದ್ಧಿಪಡಿಸುವ ತಮ್ಮ ಸಂಕಲ್ಪವನ್ನು ಪ್ರಸ್ತಾಪಿಸಿದರು. ತಮ್ಮ ಅಧಿಕಾರಾವಧಿಯಲ್ಲಿ ಜಾರಿಗೆ ತಂದ ಹಲವು ಯೋಜನೆಗಳ ಸಕಾರಾತ್ಮಕ ಪರಿಣಾಮಗಳನ್ನು ಕಂಡು ಸಂತಸ ವ್ಯಕ್ತಪಡಿಸಿದರು. ಮೊದಲ ಬಾರಿಗೆ ಶಾಲೆ ನೋಡಿದ ಆ ಮಕ್ಕಳು, ಈಗ ಶಿಕ್ಷಕರಾಗಿ ಮತ್ತು ಎಂಜಿನಿಯರ್‌ಗಳಾಗಿ ಜೀವನದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ನೋಡಿ ಸಂತೋಷವಾಗಿದೆ ಎಂದರು.

ಶಾಲೆಗಳು, ರಸ್ತೆಗಳು, ವಸತಿ ಮತ್ತು ನೀರಿನ ಲಭ್ಯತೆಯ ಕುರಿತು ಮಾತನಾಡಿದ ಪ್ರಧಾನ ಮಂತ್ರಿ, ಸಮಾಜದ ಬಡ ವರ್ಗದವರಿಗೆ ಇವುಗಳು ಘನತೆಯ ಜೀವನದ ಆಧಾರವಾಗಿದೆ ಮತ್ತು ಇವುಗಳಿಗಾಗಿ ಕಾರ್ಯಾಚರಣೆ ಮಾದರಿಯಲ್ಲಿ ಕೆಲಸ ಮಾಡುವುದು ತಮ್ಮ ಆದ್ಯತೆಗಳಾಗಿವೆ. ದೇಶದಲ್ಲಿ ಬಡವರಿಗಾಗಿ 4 ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ. "ನಮಗೆ, ಬಡವರಿಗೆ ಮನೆ ಕೇವಲ ಒಂದು ಸಂಖ್ಯೆ ಅಲ್ಲ, ಆದರೆ ಅದು ಘನತೆಯನ್ನು ಸಕ್ರಿಯಗೊಳಿಸುತ್ತದೆ". ಈ ಮನೆಗಳ ವಿನ್ಯಾಸದ ತೀರ್ಮಾನವನ್ನು ಫಲಾನುಭವಿಗಳಿಗೆ ಬಿಡಲಾಗಿದೆ. ಬಹುತೇಕ ಮನೆಗಳು ಮನೆಯ ಮಹಿಳೆಯರ ಹೆಸರಿನಲ್ಲಿ ನೋಂದಣಿಯಾಗಿವೆ. ಅದೇ ರೀತಿ, ಪ್ರತಿ ಮನೆಗೂ ಪೈಪ್‌ಲೈನ್‌ ನೀರು ಸಿಗುತ್ತಿದ್ದು, ಜೀವನ ಸುಗಮವಾಗಿದೆ. ಜಲ ಜೀವನ್ ಮಿಷನ್ ಅಡಿ, 10 ಕೋಟಿ ಹೊಸ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಕೆಲಸ ಮಾಡುವಾಗ ಸಿಕ್ಕ ಅನುಭವ ರಾಷ್ಟ್ರ ಮಟ್ಟದಲ್ಲೂ ಉಪಯೋಗಕ್ಕೆ ಬರುತ್ತಿದೆ. ಹಾಗಾಗಿ, "ನೀವು ನನ್ನ ಗುರುಗಳು" ಎಂದರು.

ಶೈಕ್ಷಣಿಕ ಕ್ಷೇತ್ರದ ಬಗ್ಗೆ ಮಾತನಾಡಿದ ಪ್ರಧಾನಿ, ಇಂದಿನ ಯೋಜನೆಗಳು ಗುಜರಾತ್ ಅನ್ನು ಅಗ್ರಸ್ಥಾನದಲ್ಲಿ ಇರಿಸುವ ನಿಟ್ಟಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ. ಇದಕ್ಕಾಗಿ ಮುಖ್ಯಮಂತ್ರಿ ಭೂಪೇಂದರ್ ಪಟೇಲ್ ಅವರ ಇಡೀ ತಂಡವನ್ನು ಅಭಿನಂದಿಸಿದರು. "ಮಿಷನ್ ಸ್ಕೂಲ್ ಆಫ್ ಎಕ್ಸಲೆನ್ಸ್ ಮತ್ತು ವಿದ್ಯಾ ಸಮೀಕ್ಷಾ 2.0 ಶಾಲೆಯಲ್ಲಿ ಶಿಕ್ಷಣದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಿದೆ". ವಿದ್ಯಾ ಸಮೀಕ್ಷಾ ಕೇಂದ್ರಗಳ ಕುರಿತು ವಿಶ್ವಬ್ಯಾಂಕ್ ಅಧ್ಯಕ್ಷರೊಂದಿಗೆ ತಾವು ನಡೆಸಿದ ಸಂವಾದ ಸ್ಮರಿಸಿದ ಶ್ರೀ ಮೋದಿ, ಭಾರತದ ಪ್ರತಿ ಜಿಲ್ಲೆಯಲ್ಲಿ ವಿದ್ಯಾ ಸಮೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲು ಅಧ್ಯಕ್ಷರು ಒತ್ತಾಯಿಸಿದರು, ಉದಾತ್ತ ಉದ್ದೇಶಕ್ಕೆ ವಿಶ್ವ ಬ್ಯಾಂಕ್ ಬೆಂಬಲ ನೀಡಲು ಸಿದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ಇಂತಹ ಉಪಕ್ರಮಗಳು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಸಂಪನ್ಮೂಲಗಳ ಕೊರತೆ ಇರುವವರಿಗೆ ಹೆಚ್ಚು ಪ್ರಯೋಜನ ನೀಡುತ್ತದೆ. "ನಾವು ಬುಡಕಟ್ಟು ಪ್ರದೇಶಗಳ ಯುವಕರಿಗೆ ಅವಕಾಶಗಳನ್ನು ಒದಗಿಸುವಾಗ ಅರ್ಹತೆಯನ್ನು ಉತ್ತೇಜಿಸುವ ಗುರಿ ಹೊಂದಿದ್ದೇವೆ" ಎಂದರು,

ಕಳೆದ 2 ದಶಕಗಳಿಂದ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯ ಮೇಲೆ ಸರ್ಕಾರ ಗಮನ ನೀಡಿದೆ. ಕಳೆದ 2 ದಶಕಗಳ ಹಿಂದೆ, ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ಮತ್ತು ಇತರ ಶೈಕ್ಷಣಿಕ ಸೌಲಭ್ಯಗಳ ಕೊರತೆ ಇತ್ತು. ಇದು ಅಪಾರ ಸಂಖ್ಯೆಯ ಮಕ್ಕಳು ಶಾಲೆಗಳನ್ನು ತ್ಯಜಿಸಲು ಕಾರಣವಾಯಿತು. ನಾನು ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ರಾಜ್ಯದ ಬುಡಕಟ್ಟು ಪ್ರದೇಶಗಳಲ್ಲಿ ವಿಜ್ಞಾನ ಶಾಲೆ ಇರಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಆದರೆ "ಸರ್ಕಾರವು ಪರಿಸ್ಥಿತಿಯನ್ನು ಸಂಪೂರ್ಣವಾಗಿ ಬದಲಾಯಿಸಿದೆ", ಕಳೆದ 2 ದಶಕಗಳಲ್ಲಿ 2 ಲಕ್ಷ ಶಿಕ್ಷಕರನ್ನು ನೇಮಕ ಮಾಡಲಾಗಿದೆ, 1.25 ಲಕ್ಷಕ್ಕೂ ಹೆಚ್ಚು ತರಗತಿ ಕೊಠಡಿಗಳನ್ನು ನಿರ್ಮಿಸಲಾಗಿದೆ. ಬುಡಕಟ್ಟು ಪ್ರದೇಶಗಳಲ್ಲಿ, ಕಳೆದ 2 ದಶಕಗಳಲ್ಲಿ ವಿಜ್ಞಾನ, ವಾಣಿಜ್ಯ ಮತ್ತು ಕಲಾ ಸಂಸ್ಥೆಗಳ ಉದಯೋನ್ಮುಖ ಜಾಲಕ್ಕೆ ಸಾಕ್ಷಿಯಾಗಿದೆ. ಬುಡಕಟ್ಟು ಪ್ರದೇಶದಲ್ಲಿ ಸರಕಾರ 25,000 ತರಗತಿ ಕೊಠಡಿಗಳು ಹಾಗೂ 5 ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಿದೆ. ಗೋವಿಂದ ಗುರು ವಿಶ್ವವಿದ್ಯಾಲಯ ಮತ್ತು ಬಿರ್ಸಾ ಮುಂಡಾ ವಿಶ್ವವಿದ್ಯಾಲಯವನ್ನು ಉದಾಹರಣೆ ನೀಡಿದ ಅವರು, ಈ ಪ್ರದೇಶಗಳಲ್ಲಿ ಅನೇಕ ಕೌಶಲ್ಯ ಅಭಿವೃದ್ಧಿ ಸಂಸ್ಥೆಗಳು ಸಹ ಬಂದಿವೆ ಎಂದು ಅವರು ತಿಳಿಸಿದರು.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಮಾತನಾಡಿದ ಪ್ರಧಾನಿ, ಮಾತೃಭಾಷೆಯಲ್ಲಿ ಶಿಕ್ಷಣವು ಬುಡಕಟ್ಟು ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಅವರನ್ನು ಸಬಲಗೊಳಿಸುತ್ತದೆ. 14 ಸಾವಿರಕ್ಕೂ ಹೆಚ್ಚು ಪಿಎಂ ಎಸ್‌ಎಚ್‌ಆರ್‌ಐ ಶಾಲೆಗಳು ಮತ್ತು ಏಕಲವ್ಯ ವಸತಿ ಶಾಲೆಗಳು ಬುಡಕಟ್ಟು ಪ್ರದೇಶಗಳಲ್ಲಿ ಜೀವನ  ಪರಿವರ್ತಿಸುತ್ತಿವೆ. ಎಸ್ಸಿ, ಎಸ್ಟಿ ವಿದ್ಯಾರ್ಥಿವೇತನಗಳು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿವೆ. ದೇಶದ ಸ್ಟಾರ್ಟಪ್ ಪರಿಸರ ವ್ಯವಸ್ಥೆಯಲ್ಲಿ ಬುಡಕಟ್ಟು ಯುವಕರನ್ನು ಪ್ರೋತ್ಸಾಹಿಸುವ ಪ್ರಯತ್ನ ಇದಾಗಿದೆ. ದೂರದ ಶಾಲೆಗಳಲ್ಲಿ ಅಟಲ್ ಟಿಂಕರಿಂಗ್ ಪ್ರಯೋಗಾಲಯಗಳು ಬುಡಕಟ್ಟು ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುತ್ತಿವೆ.

ಇಂದಿನ ಜಗತ್ತಿನಲ್ಲಿ ಕೌಶಲ್ಯಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಪ್ರಧಾನ ಮಂತ್ರಿ,  ಕೌಶಲ ವಿಕಾಸ ಕೇಂದ್ರಗಳು ಮತ್ತು ಕೌಶಲ ವಿಕಾಸ್ ಯೋಜನೆ ಅಡಿ, ಲಕ್ಷಾಂತರ ಯುವಕರಿಗೆ ತರಬೇತಿ ನೀಡಲಾಗುತ್ತಿದೆ. ಕೋಟಿಗಟ್ಟಲೆ ಚೊಚ್ಚಲ ಉದ್ಯಮಶೀಲರನ್ನು ಸೃಷ್ಟಿಸುತ್ತಿರುವ ಮುದ್ರಾ ಯೋಜನೆಯಡಿ ಮೇಲಾಧಾರ ರಹಿತ ಸಾಲ ನೀಡಲಾಗುತ್ತಿದೆ. ವಂದನಾ ಕೇಂದ್ರಗಳು ರಾಜ್ಯದ ಲಕ್ಷಾಂತರ ಆದಿವಾಸಿಗಳಿಗೂ ಪ್ರಯೋಜನ  ನೀಡುತ್ತಿವೆ. ಬುಡಕಟ್ಟು ಉತ್ಪನ್ನಗಳು ಮತ್ತು ಕರಕುಶಲ ವಸ್ತುಗಳ ವಿಶೇಷ ಮಳಿಗೆಗಳನ್ನು ಸ್ಥಾಪಿಸಲಾಗಿದೆ ಎಂದರು.

 

ಸೆಪ್ಟೆಂಬರ್ 17 ರಂದು ಪ್ರಾರಂಭಿಸಲಾದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಕುರಿತು ಪ್ರಧಾನಮಂತ್ರಿ ಮಾಹಿತಿ ನೀಡಿದರು. ನಾಯಿ, ದರ್ಜಿ, ಧೋಬಿ, ಕುಮ್ಹಾರ್, ಲೋಹರ್, ಸುನಾರ್, ಸುತಾರ್, ಮಲಕಾರ, ಮೋಚಿ, ರಾಜಮಿಸ್ತ್ರಿ ಮುಂತಾದ ಸಮುದಾಯಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಉಪಕರಣಗಳು ಮತ್ತು ತರಬೇತಿಯೊಂದಿಗೆ ಸಾಲ ಸಿಗುತ್ತದೆ ಎಂದರು. ಇದು ಈ ಕೌಶಲ್ಯ ಮತ್ತು ಸಂಪ್ರದಾಯಗಳನ್ನು ಜೀವಂತವಾಗಿಡುವ ಪ್ರಯತ್ನವಾಗಿದೆ. ಯೋಜನೆಯಡಿ ಸಾಲಕ್ಕೆ ಯಾವುದೇ ಗ್ಯಾರಂಟಿ ಅಗತ್ಯವಿಲ್ಲ, ಮೋದಿ ಅವರೇ ಇದಕ್ಕೆ ಒಂದೇ ಒಂದು ಗ್ಯಾರಂಟಿ ಎಂದರು.

ದಲಿತರು, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಜನಾಂಗದವರು ಮತ್ತು ಒಂದು ಕಾಲದಲ್ಲಿ ಸೌಲಭ್ಯಗಳಿಂದ ವಂಚಿತರಾದವರು ಇಂದು ಸರ್ಕಾರ ಜಾರಿಗೊಳಿಸಿದ ವಿವಿಧ ಯೋಜನೆಗಳ ನೆರವಿನಿಂದ ಅಭಿವೃದ್ಧಿಯ ಎತ್ತರಕ್ಕೆ ಏರುತ್ತಿದ್ದಾರೆ. ಸ್ವಾತಂತ್ರ್ಯದ ಹಲವು ದಶಕಗಳ ನಂತರ ಬುಡಕಟ್ಟು ಜನಾಂಗದವರ ವೈಭವಕ್ಕೆ ಗೌರವ ಸಲ್ಲಿಸುವ ಅವಕಾಶ ಬಂದಿದೆ. ಈಗ ಜನಜಾತಿಯ ಗೌರವ್ ದಿವಸ್ ಎಂದು ಆಚರಿಸಲಾಗುವ ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವನ್ನು ಪ್ರಸ್ತಾಪಿಸಿದರು. ಈಗಿನ ಸರ್ಕಾರವು ಬುಡಕಟ್ಟು ಸಮುದಾಯಗಳ ಬಜೆಟ್ ಅನ್ನು ಮೊದಲಿಗಿಂತ 5 ಪಟ್ಟು ಹೆಚ್ಚಿಸಿದೆ ಎಂದರು.

ಪ್ರಧಾನ ಮಂತ್ರಿ ಅವರು ನಾರಿಶಕ್ತಿ ವಂದನ್ ಅಧಿನಿಯಮದ ಕುರಿತು ಮಾತನಾಡಿದರು, ಇದು ಹೊಸ ಸಂಸತ್ತಿನ ಕಟ್ಟಡದಿಂದ ಅಂಗೀಕರಿಸಲ್ಪಟ್ಟ ಮೊದಲ ಕಾನೂನಾಗಿದೆ. ಇಷ್ಟು ದಿನ ಆದಿವಾಸಿಗಳು ಮತ್ತು ಮಹಿಳೆಯರು ಹಕ್ಕುಗಳಿಂದ ವಂಚಿತರಾಗಿರಲು ಕಾರಣವೇನು? ಛೋಟಾ ಉದಯಪುರ ಸೇರಿದಂತೆ ಇಡೀ ಬುಡಕಟ್ಟು ಪ್ರದೇಶದ ತಾಯಂದಿರು ಮತ್ತು ಸಹೋದರಿಯರಿಗೆ ನಿಮ್ಮ ಈ ಮಗ ನಿಮ್ಮ ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು ಬಂದಿದ್ದಾನೆ ಎಂದು ಹೇಳುತ್ತೇನೆ.

ಎಲ್ಲಾ ಮಹಿಳೆಯರಿಗೆ ಸಂಸತ್ತು ಮತ್ತು ಅಸೆಂಬ್ಲಿಯಲ್ಲಿ ಭಾಗವಹಿಸಲು ಈಗ ಮಾರ್ಗಗಳು ತೆರೆದಿವೆ. ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸುವ ಸಂವಿಧಾನವನ್ನು ಅವರು ಉಲ್ಲೇಖಿಸಿದರು. ಹೊಸ ಕಾನೂನಿನಲ್ಲಿ ಎಸ್‌ಸಿ/ಎಸ್‌ಟಿ ವರ್ಗಗಳ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲು ಅವಕಾಶವಿದೆ. ಭಾರತದ ಮೊದಲ ಬುಡಕಟ್ಟು ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು ಜಿ ಈ ಕಾನೂನಿಗೆ ಸಹಿ ಹಾಕುತ್ತಿರುವುದು ಕಾಕತಾಳೀಯ ಸಂದರ್ಭ ಎಂದರು.

ಅಮೃತ ಕಾಲದ ಆರಂಭವು ಅದ್ಭುತವಾಗಿರುವುದರಿಂದ ಅದರ ನಿರ್ಣಯಗಳು ಈಡೇರುವ ವಿಶ್ವಾಸವಿದೆ ಎಂದು ಪ್ರಧಾನ ಮಂತ್ರಿ, ತಮ್ಮ ಭಾಷಣ ಮುಕ್ತಾಯಗೊಳಿಸಿದರು.

ಈ ಸಂದರ್ಭದಲ್ಲಿ ಗುಜರಾತ್ ರಾಜ್ಯಪಾಲ ಶ್ರೀ ಆಚಾರ್ಯ ದೇವವ್ರತ್, ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್, ಸಂಸದರಾದ ಶ್ರೀ ಸಿ ಆರ್ ಪಾಟೀಲ್ ಮತ್ತು ಗುಜರಾತ್ ಸರ್ಕಾರದ ಸಚಿವರು ಉಪಸ್ಥಿತರಿದ್ದರು.

 

ಹಿನ್ನೆಲೆ

ಪ್ರಧಾನ ಮಂತ್ರಿ ಅವರು ರಾಷ್ಟ್ರಕ್ಕೆ ಯೋಜನೆಗಳನ್ನು ಸಮರ್ಪಿಸಿದ್ದರಿಂದ ಗುಜರಾತ್‌ನಾದ್ಯಂತ ಶಾಲಾ ಮೂಲಸೌಕರ್ಯ ಬೃಹತ್ ಉತ್ತೇಜನ ಪಡೆದುಕೊಂಡಿತು. ‘ಮಿಷನ್ ಸ್ಕೂಲ್ಸ್ ಆಫ್ ಎಕ್ಸಲೆನ್ಸ್’ ಕಾರ್ಯಕ್ರಮದ ಅಡಿ, 4,500 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಬಹುಯೋಜನೆಗಳಿಗೆ ಅಡಿಪಾಯ ಹಾಕಿತು. ಗುಜರಾತ್‌ನ ಶಾಲೆಗಳಾದ್ಯಂತ ನಿರ್ಮಿಸಲಾದ ಸಾವಿರಾರು ಹೊಸ ತರಗತಿ ಕೊಠಡಿಗಳು, ಸ್ಮಾರ್ಟ್ ತರಗತಿಗಳು, ಕಂಪ್ಯೂಟರ್ ಲ್ಯಾಬ್‌ಗಳು, STEM (ವಿಜ್ಞಾನ, ತಂತ್ರಜ್ಞಾನ ಎಂಜಿನಿಯರಿಂಗ್ ಮತ್ತು ಗಣಿತ) ಲ್ಯಾಬ್‌ಗಳು ಮತ್ತು ಇತರ ಮೂಲಸೌಕರ್ಯಗಳನ್ನು ಪ್ರಧಾನಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ. ಮಿಷನ್ ಅಡಿ, ಗುಜರಾತ್ ಶಾಲೆಗಳಾದ್ಯಂತ ಸಾವಿರಾರು ತರಗತಿ ಕೊಠಡಿಗಳನ್ನು ಸುಧಾರಿಸಲು ಮತ್ತು ನವೀಕರಿಸಲು ಅವರು ಶಂಕುಸ್ಥಾಪನೆ ನೆರವೇರಿಸಿದರು.

ಪ್ರಧಾನ ಮಂತ್ರಿ ಅವರು ‘ವಿದ್ಯಾ ಸಮೀಕ್ಷಾ ಕೇಂದ್ರ 2.0’ ಯೋಜನೆಯ ಅಡಿಗಲ್ಲು ಹಾಕಿದರು. ಗುಜರಾತ್‌ನಲ್ಲಿ ಶಾಲೆಗಳ ನಿರಂತರ ಮೇಲ್ವಿಚಾರಣೆ ಮತ್ತು ವಿದ್ಯಾರ್ಥಿಗಳ ಕಲಿಕಾ ಫಲಿತಾಂಶಗಳಲ್ಲಿ ಸುಧಾರಣೆ ಖಚಿತಪಡಿಸಿರುವ ‘ವಿದ್ಯಾ ಸಮೀಕ್ಷಾ ಕೇಂದ್ರ’ದ ಯಶಸ್ಸಿನ ಮೇಲೆ ಈ ಯೋಜನೆಗಳನ್ನು ನಿರ್ಮಿಸಲಾಗಿದೆ. ‘ವಿದ್ಯಾ ಸಮೀಕ್ಷಾ ಕೇಂದ್ರ 2.0’ ಗುಜರಾತ್‌ನ ಎಲ್ಲಾ ಜಿಲ್ಲೆಗಳು ಮತ್ತು ಬ್ಲಾಕ್‌ಗಳಲ್ಲಿ ವಿದ್ಯಾ ಸಮೀಕ್ಷಾ ಕೇಂದ್ರಗಳ ಸ್ಥಾಪನೆಗೆ ಕಾರಣವಾಗಿದೆ.

ಕಾರ್ಯಕ್ರಮ ಸಂದರ್ಭದಲ್ಲಿ, ವಡೋದರ ಜಿಲ್ಲೆಯ ತಾಲೂಕಾ ಸಿನೋರ್‌ನಲ್ಲಿ 'ವಡೋದರಾ ದಭೋಯಿ-ಸಿನೋರ್-ಮಲ್ಸಾರ್-ಆಸಾ ರಸ್ತೆ'ಯಲ್ಲಿ ನರ್ಮದಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಹೊಸ ಸೇತುವೆ ಸೇರಿದಂತೆ ಬಹುಅಭಿವೃದ್ಧಿ ಯೋಜನೆಗಳನ್ನು ಪ್ರಧಾನ ಮಂತ್ರಿ ರಾಷ್ಟ್ರಕ್ಕೆ ಸಮರ್ಪಿಸಿದರು. ಚಬ್ ತಲವ್ ಮರುಅಭಿವೃದ್ಧಿ ಯೋಜನೆ, ದಾಹೋದ್‌ನಲ್ಲಿ ನೀರು ಸರಬರಾಜು ಯೋಜನೆ, ವಡೋದರಾದಲ್ಲಿ ಆರ್ಥಿಕ ದುರ್ಬಲ ವರ್ಗದವರಿಗೆ ಹೊಸದಾಗಿ ನಿರ್ಮಿಸಲಾದ ಸುಮಾರು 400 ಮನೆಗಳು, ಗುಜರಾತ್‌ನಾದ್ಯಂತ 7,500 ಹಳ್ಳಿಗಳಲ್ಲಿ ಗ್ರಾಮ ವೈಫೈ ಯೋಜನೆ ಮತ್ತು ದಾಹೋಡ್‌ನಲ್ಲಿ ಹೊಸದಾಗಿ ನಿರ್ಮಿಸಲಾದ ಜವಾಹರ್ ನವೋದಯ ವಿದ್ಯಾಲಯ ಇದರಲ್ಲಿ ಸೇರಿವೆ.

ಛೋಟೌಡೆಪುರದಲ್ಲಿ ನೀರು ಸರಬರಾಜು ಯೋಜನೆಗೆ ಅಡಿಗಲ್ಲು ಹಾಕಿದ ಪ್ರಧಾನಿ; ಗೋಧ್ರಾ, ಪಂಚಮಹಲ್‌ನಲ್ಲಿ ಮೇಲ್ಸೇತುವೆ ಮತ್ತು ಕೇಂದ್ರ ಸರ್ಕಾರದ 'ಬ್ರಾಡ್‌ಕಾಸ್ಟಿಂಗ್ ಇನ್‌ಫ್ರಾಸ್ಟ್ರಕ್ಚರ್ ಅಂಡ್ ನೆಟ್‌ವರ್ಕ್ ಡೆವಲಪ್‌ಮೆಂಟ್ (ಬಿಐಎನ್‌ಡಿ)' ಯೋಜನೆಯಡಿ, ದಹೋದ್‌ನಲ್ಲಿ ಎಫ್‌ಎಂ ರೇಡಿಯೊ ಸ್ಟುಡಿಯೊ ನಿರ್ಮಿಸಲಾಗುತ್ತದೆ.

 

*****



(Release ID: 1962177) Visitor Counter : 71