ಪ್ರಧಾನ ಮಂತ್ರಿಯವರ ಕಛೇರಿ
ನವದೆಹಲಿಯಲ್ಲಿ ‘ಅಂತಾರಾಷ್ಟ್ರೀಯ ವಕೀಲರ ಸಮ್ಮೇಳನ 2023’ ಉದ್ಘಾಟಿಸಿದ ಪ್ರಧಾನಿ
"ವರ್ಷಗಳ ಕಾಲ, ನ್ಯಾಯಾಂಗ ಮತ್ತು ವಕೀಲರ ಸಂಘಗಳು(ಬಾರ್) ಭಾರತದ ನ್ಯಾಯಾಂಗ ವ್ಯವಸ್ಥೆಯ ರಕ್ಷಕರಾಗಿದ್ದಾರೆ"
"ವಕೀಲ ವೃತ್ತಿಯ ಅನುಭವವು ಸ್ವತಂತ್ರ ಭಾರತದ ಅಡಿಪಾಯ ಬಲಪಡಿಸಲು ಕೆಲಸ ಮಾಡಿದೆ; ಇಂದಿನ ನಿಷ್ಪಕ್ಷಪಾತ ನ್ಯಾಯಾಂಗ ವ್ಯವಸ್ಥೆಯು ಭಾರತದಲ್ಲಿ ವಿಶ್ವದ ವಿಶ್ವಾಸ ಹೆಚ್ಚಿಸಲು ಸಹಾಯ ಮಾಡಿದೆ"
"ನಾರಿ ಶಕ್ತಿ ವಂದನ್ ಕಾಯಿದೆಯು ಭಾರತದಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಗೆ ಹೊಸ ದಿಕ್ಕು ಮತ್ತು ಶಕ್ತಿ ನೀಡುತ್ತಿದೆ"
"ಅಪಾಯಗಳು ಜಾಗತಿಕವಾಗಿರುವಾಗ, ಅವುಗಳನ್ನು ಎದುರಿಸುವ ಮಾರ್ಗಗಳು ಸಹ ಜಾಗತಿಕವಾಗಿರಬೇಕು"
"ಕಾನೂನು ತಮಗೆ ಸೇರಿದ್ದು ಎಂದು ನಾಗರಿಕರು ಭಾವಿಸಬೇಕು"
"ನಾವು ಈಗ ಭಾರತದಲ್ಲಿ ಹೊಸ ಕಾನೂನುಗಳನ್ನು ಸರಳ ಭಾಷೆಯಲ್ಲಿ ಕರಡು ಮಾಡಲು ಪ್ರಯತ್ನಿಸುತ್ತಿದ್ದೇವೆ"
" ಕಾನೂನು ವೃತ್ತಿಯು ಹೊಸ ತಾಂತ್ರಿಕ ಪ್ರಗತಿ ಬಳಸಿಕೊಳ್ಳಬೇಕು"
Posted On:
23 SEP 2023 11:50AM by PIB Bengaluru
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ವಿಜ್ಞಾನ ಭವನದಲ್ಲಿ 'ಅಂತಾರಾಷ್ಟ್ರೀಯ ವಕೀಲರ ಸಮ್ಮೇಳನ 2023' ಉದ್ಘಾಟಿಸಿದರು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಾಮುಖ್ಯತೆಯ ವಿವಿಧ ಕಾನೂನು ವಿಷಯಗಳ ಕುರಿತು ಅರ್ಥಪೂರ್ಣ ಸಂವಾದ ಮತ್ತು ಚರ್ಚೆಗೆ ವೇದಿಕೆಯಾಗಿ ಕಾರ್ಯ ನಿರ್ವಹಿಸಲು ಸಮ್ಮೇಳನವು ಉದ್ದೇಶಿಸಿದೆ. ಇದು ವಿಚಾರಗಳು ಮತ್ತು ಅನುಭವಗಳ ವಿನಿಮಯವನ್ನು ಉತ್ತೇಜಿಸುತ್ತದೆ. ಅಲ್ಲದೆ, ಅಂತಾರಾಷ್ಟ್ರೀಯ ಸಹಕಾರ ಮತ್ತು ಕಾನೂನು ಸಮಸ್ಯೆಗಳ ತಿಳುವಳಿಕೆಯನ್ನು ಬಲಪಡಿಸುತ್ತದೆ.
ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, ಜಾಗತಿಕ ಕಾನೂನು ಭ್ರಾತೃತ್ವದ ಶ್ರೇಷ್ಠರೊಂದಿಗೆ ಸಂವಾದ ನಡೆಸುವ ಅವಕಾಶ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಇಂಗ್ಲೆಂಡ್‌ನ ಲಾರ್ಡ್ ಚಾನ್ಸಲರ್, ಶ್ರೀ ಅಲೆಕ್ಸ್ ಚಾಕ್ ಮತ್ತು ಇಂಗ್ಲೆಂಡ್‌ನ ಬಾರ್ ಅಸೋಸಿಯೇಶನ್‌ನ ಪ್ರತಿನಿಧಿಗಳು, ಕಾಮನ್‌ವೆಲ್ತ್ ಮತ್ತು ಆಫ್ರಿಕಾ ದೇಶಗಳ ಪ್ರತಿನಿಧಿಗಳು ಮತ್ತು ದೇಶಾದ್ಯಂತದ ಜನರ ಉಪಸ್ಥಿತಿಯನ್ನು ಪ್ರಸ್ತಾಪಿಸಿದ ಪ್ರಧಾನಿ, 2023ರ ಅಂತಾರಾಷ್ಟ್ರೀಯ ವಕೀಲರ ಸಮ್ಮೇಳನವು 'ವಸುಧೈವ ಕುಟುಂಬಕಂ' ಎಂಬ ಚೈತನ್ಯದ ಪ್ರತೀಕವಾಗಿದೆ ಎಂದರು. ವಿದೇಶಿ ಗಣ್ಯರನ್ನು ಸ್ವಾಗತಿಸಿದ ಪ್ರಧಾನಿ, ಈ ಕಾರ್ಯಕ್ರಮ ಆಯೋಜಿಸುವಲ್ಲಿ ಮುಂದಾಳತ್ವ ವಹಿಸಿದ್ದಕ್ಕಾಗಿ ಭಾರತೀಯ ವಕೀಲರ ಸಂಘಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.
ಯಾವುದೇ ದೇಶದ ಅಭಿವೃದ್ಧಿಯಲ್ಲಿ ಕಾನೂನಿನ ಪಾತ್ರ ಪ್ರಮುಖ. "ವರ್ಷಗಳ ಕಾಲ, ನ್ಯಾಯಾಂಗ ಮತ್ತು ವಕೀಲರ ಸಂಘಗಳು(ಬಾರ್) ಭಾರತದ ನ್ಯಾಯಾಂಗ ವ್ಯವಸ್ಥೆಯ ರಕ್ಷಕರಾಗಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಕಾನೂನು ವೃತ್ತಿಪರರ ಪಾತ್ರ ಮರೆಯಲಾಗದು. ಮಹಾತ್ಮ ಗಾಂಧಿ, ಬಾಬಾ ಸಾಹೇಬ್ ಅಂಬೇಡ್ಕರ್, ಬಾಬು ರಾಜೇಂದ್ರ ಪ್ರಸಾದ್, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭ ಬಾಯ್ ಪಟೇಲ್, ಲೋಕಮಾನ್ಯ ತಿಲಕ್ ಮತ್ತು ವೀರ್ ಸಾವರ್ಕರ್ ಅವರನ್ನು ಉದಾಹರಿಸಿದ ಪ್ರಧಾನಿ, "ವಕೀಲ ವೃತ್ತಿಯ ಅನುಭವವು ಸ್ವತಂತ್ರ ಭಾರತದ ಅಡಿಪಾಯ ಬಲಪಡಿಸಲು ಕೆಲಸ ಮಾಡಿದೆ. ಇಂದಿನ ನಿಷ್ಪಕ್ಷಪಾತ ನ್ಯಾಯಾಂಗ ವ್ಯವಸ್ಥೆಯು ಭಾರತದಲ್ಲಿ ವಿಶ್ವದ ವಿಶ್ವಾಸ ಹೆಚ್ಚಿಸಲು ಸಹಾಯ ಮಾಡಿದೆ" ಎಂದರು.
ರಾಷ್ಟ್ರವು ಹಲವಾರು ಐತಿಹಾಸಿಕ ನಿರ್ಧಾರಗಳಿಗೆ ಸಾಕ್ಷಿಯಾಗಿರುವ ಸಮಯದಲ್ಲಿ ಅಂತಾರಾಷ್ಟ್ರೀಯ ವಕೀಲರ ಸಮ್ಮೇಳನ ನಡೆಯುತ್ತಿದೆ. ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ 33 ಪ್ರತಿಶತ ಮೀಸಲಾತಿ ನೀಡುವ ನಾರಿ ಶಕ್ತಿ ವಂದನ್ ಅಧಿನಿಯಮವನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕರಿಸಿದ್ದನ್ನು ಅವರು ಸ್ಮರಿಸಿದರು. "ನಾರಿ ಶಕ್ತಿ ವಂದನ್ ಕಾಯಿದೆಯು ಭಾರತದಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಗೆ ಹೊಸ ದಿಕ್ಕು ಮತ್ತು ಶಕ್ತಿಯನ್ನು ನೀಡುತ್ತದೆ". ನವದೆಹಲಿಯಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಜಿ-20 ಶೃಂಗಸಭೆಯಲ್ಲಿ ಭಾರತದ ಪ್ರಜಾಪ್ರಭುತ್ವ, ಬೃಹತ್ ಜನಸಂಖ್ಯೆ ಮತ್ತು ರಾಜತಾಂತ್ರಿಕತೆಯ ಒಂದು ನೋಟವನ್ನು ಜಗತ್ತು ಪಡೆದುಕೊಂಡಿದೆ. ಇದೇ ದಿನ, ಒಂದು ತಿಂಗಳ ಹಿಂದೆ, ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ 3 ಅನ್ನು ಯಶಸ್ವಿಯಾಗಿ ಇಳಿಸಿದ ವಿಶ್ವದ ಮೊದಲ ರಾಷ್ಟ್ರ ಭಾರತವಾಯಿತು. ಈ ಸಾಧನೆಗಳನ್ನು ಎತ್ತಿ ಹಿಡಿದ ಪ್ರಧಾನ ಮಂತ್ರಿ, ಆತ್ಮಸ್ಥೈರ್ಯದಿಂದ ತುಂಬಿರುವ ಇಂದಿನ ಭಾರತವು 2047ರ ವೇಳೆಗೆ 'ವಿಕ್ಷಿತ್ ಭಾರತ್' ಗುರಿ ಸಾಧಿಸಲು ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಕಾನೂನಿಗೆ ಬಲವಾದ, ಸ್ವತಂತ್ರ ಮತ್ತು ಪಕ್ಷಪಾತವಿಲ್ಲದ ಅಡಿಪಾಯ ಹಾಕುವ ಅಗತ್ಯವಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರದ ಗುರಿ ಸಾಧಿಸಲು ಅಂತಾರಾಷ್ಟ್ರೀಯ ವಕೀಲರ ಸಮ್ಮೇಳನ 2023 ಅತ್ಯಂತ ಯಶಸ್ವಿಯಾಗಲಿದೆ. ಪ್ರತಿ ದೇಶವು ಇತರ ರಾಷ್ಟ್ರಗಳ ಉತ್ತಮ ಅಭ್ಯಾಸಗಳಿಂದ ಕಲಿಯುವ ಅವಕಾಶವನ್ನು ಪಡೆಯುತ್ತದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.
ಇಂದಿನ ಪ್ರಪಂಚದ ಆಳವಾದ ಸಂಪರ್ಕ ಇಂದಿನ ಅಗತ್ಯವಾಗಿದೆ. ಇಂದು ಜಗತ್ತಿನಲ್ಲಿ ಗಡಿ ಮತ್ತು ಅಧಿಕಾರ ವ್ಯಾಪ್ತಿಯ ಬಗ್ಗೆ ಕಾಳಜಿ ವಹಿಸದ ಅನೇಕ ಶಕ್ತಿಗಳಿವೆ. "ಅಪಾಯಗಳು ಜಾಗತಿಕವಾದಾಗ, ಅವುಗಳನ್ನು ಎದುರಿಸುವ ಮಾರ್ಗಗಳು ಜಾಗತಿಕವಾಗಿರಬೇಕು". ಸೈಬರ್ ಭಯೋತ್ಪಾದನೆ, ಅಕ್ರಮ ಹಣ ವರ್ಗಾವಣೆ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ದುರುಪಯೋಗದ ಸಾಧ್ಯತೆ ವಿಷಯಗಳ ಬಗ್ಗೆ ಜಾಗತಿಕ ಮಾರ್ಗಸೂಚಿ ಸಿದ್ಧಪಡಿಸುವುದು ಕೇವಲ ಸರ್ಕಾರಿ ಕ್ರಮ ಅಥವಾ ವಿಷಯಗಳನ್ನು ದಾಟಿದ ಪ್ರಮುಖ ವಿಷಯವಾಗಿದೆ. ಅದು ವಾಸ್ತವವಾಗಿ ವಿವಿಧ ದೇಶಗಳ ಕಾನೂನು ಚೌಕಟ್ಟಿನ ನಡುವೆ ನಿರಂತರ ಸಂಪರ್ಕ ಬಯಸುತ್ತದೆ ಎಂದು ಹೇಳಿದರು.
ಪರ್ಯಾಯ ವಿವಾದ ಪರಿಹಾರ ಕುರಿತು ಮಾತನಾಡಿದ ಪ್ರಧಾನ ಮಂತ್ರಿ, ವಾಣಿಜ್ಯ ವಹಿವಾಟುಗಳ ಸಂಕೀರ್ಣತೆಯೊಂದಿಗೆ, ಪರ್ಯಾಯ ವಿವಾದ ಪರಿಹಾರ(ಎಡಿಆರ್) ವಿಶ್ವಾದ್ಯಂತ ಕರೆನ್ಸಿಯನ್ನು ಗಳಿಸಿದೆ. ಭಾರತದಲ್ಲಿ ವಿವಾದ ಪರಿಹಾರದ ಅನೌಪಚಾರಿಕ ಸಂಪ್ರದಾಯವನ್ನು ವ್ಯವಸ್ಥಿತಗೊಳಿಸುವ ಸಲುವಾಗಿ, ಭಾರತ ಸರ್ಕಾರವು ಮಧ್ಯಸ್ಥಿಕೆ ಕಾಯಿದೆಯನ್ನು ಜಾರಿಗೆ ತಂದಿದೆ. ಅದೇ ರೀತಿ ಲೋಕ್ ಅದಾಲತ್‌ಗಳು ದೊಡ್ಡ ಪಾತ್ರ ವಹಿಸುತ್ತಿದ್ದು, ಕಳೆದ 6 ವರ್ಷಗಳಲ್ಲಿ ಸುಮಾರು 7 ಲಕ್ಷ ಪ್ರಕರಣಗಳನ್ನು ಲೋಕ್ ಅದಾಲತ್‌ಗಳು ಬಗೆಹರಿಸಿವೆ.
ನ್ಯಾಯ ವಿತರಣೆಯ ಪ್ರಮುಖ ಅಂಶವನ್ನು ಎತ್ತಿ ಹಿಡಿದ ಪ್ರಧಾನಿ, ಭಾಷೆ ಮತ್ತು ಕಾನೂನಿನ ಸರಳತೆ ಇಂದಿನ ಅಗತ್ಯ. ಈ ನಿಟ್ಟಿನಲ್ಲಿ ಸರ್ಕಾರದ ಕಾರ್ಯವಿಧಾನಗಳ ಬಗ್ಗೆ ಒಳನೋಟಗಳನ್ನು ನೀಡಿದರು. ಯಾವುದೇ ಕಾನೂನನ್ನು 2 ಭಾಷೆಗಳಲ್ಲಿ ಪ್ರಸ್ತುತಪಡಿಸುವ ಬಗ್ಗೆ ನಡೆಯುತ್ತಿರುವ ಚರ್ಚೆಗಳನ್ನು ಪ್ರಸ್ತಾಪಿಸಿದ ಪ್ರಧಾನಿ, ಒಂದು ಕಾನೂನು ವ್ಯವಸ್ಥೆಯು ಒಗ್ಗಿಕೊಂಡಿರುವ ಮತ್ತು ಇನ್ನೊಂದು ಸಾಮಾನ್ಯ ನಾಗರಿಕರಿಗೆ ಸಂಬಂಧಿಸಿದ್ದಾಗಿದೆ. "ನಾಗರಿಕರು ಕಾನೂನು ಅವರಿಗೆ ಸೇರಿದ್ದು ಎಂದು ಭಾವಿಸಬೇಕು", ಸರಳ ಭಾಷೆಯಲ್ಲಿ ಹೊಸ ಕಾನೂನುಗಳನ್ನು ಕರಡು ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ. ದತ್ತಾಂಶ(ಡೇಟಾ) ಸಂರಕ್ಷಣಾ ಕಾನೂನು ಇದಕ್ಕೆ ಒಂದು ಉದಾಹರಣೆ ಎಂದರು. ಭಾರತದ ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪುಗಳನ್ನು 4 ಸ್ಥಳೀಯ ಭಾಷೆಗಳಾದ ಹಿಂದಿ, ತಮಿಳು, ಗುಜರಾತಿ ಮತ್ತು ಒರಿಯಾ ಭಾಷೆಗಳಿಗೆ ಭಾಷಾಂತರಿಸಲು ವ್ಯವಸ್ಥೆ ಮಾಡಿದ್ದಕ್ಕಾಗಿ ಪ್ರಧಾನಿ ಅಭಿನಂದಿಸಿದರು, ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿನ ಸ್ಮರಣೀಯ ಬದಲಾವಣೆಯನ್ನು ಅವರು ಶ್ಲಾಘಿಸಿದರು.
ಸಮಾರೋಪದಲ್ಲಿ, ತಂತ್ರಜ್ಞಾನ, ಸುಧಾರಣೆಗಳು ಮತ್ತು ಹೊಸ ನ್ಯಾಯಾಂಗ ಪ್ರಕ್ರಿಯೆಗಳ ಮೂಲಕ ಕಾನೂನು ಪ್ರಕ್ರಿಯೆಗಳನ್ನು ಸುವ್ಯವಸ್ಥಿತಗೊಳಿಸುವ ಮಾರ್ಗಗಳನ್ನು ಕಂಡುಕೊಳ್ಳುವ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು. ತಾಂತ್ರಿಕ ಪ್ರಗತಿಯು ನ್ಯಾಯಾಂಗ ವ್ಯವಸ್ಥೆಗೆ ಹೊಸ ಮಾರ್ಗಗಳನ್ನು ತೆರೆದಿದೆ. ಹಾಗಾಗಿ, ವಕೀಲ ವೃತ್ತಿಯು ತಾಂತ್ರಿಕ ಸುಧಾರಣೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಭಾರತದ ಮುಖ್ಯ ನ್ಯಾಯಮೂರ್ತಿ, ಡಾ. ಡಿ.ವೈ. ಚಂದ್ರಚೂಡ್, ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ, ಶ್ರೀ ಅರ್ಜುನ್ ರಾಮ್ ಮೇಘವಾಲ್, ಭಾರತದ ಅಟಾರ್ನಿ ಜನರಲ್, ಶ್ರೀ ಆರ್. ವೆಂಕಟರಮಣಿ, ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ಶ್ರೀ ತುಷಾರ್ ಮೆಹ್ತಾ, ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಶ್ರೀ ಮನನ್ ಕುಮಾರ್ ಮಿಶ್ರಾ ಮತ್ತು ಯುಕೆಯ ಲಾರ್ಡ್ ಚಾನ್ಸೆಲರ್ ಶ್ರೀ ಅಲೆಕ್ಸ್ ಚಾಕ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
2023 ಸೆಪ್ಟೆಂಬರ್ 23, 24ರಂದು 'ನ್ಯಾಯ ವಿತರಣಾ ವ್ಯವಸ್ಥೆಯಲ್ಲಿ ಉದಯೋನ್ಮುಖ ಸವಾಲುಗಳು' ಎಂಬ ವಿಷಯದ ಮೇಲೆ ಬಾರ್ ಕೌನ್ಸಿಲ್ ಆಫ್ ಇಂಡಿಯಾವು ಅಂತಾರಾಷ್ಟ್ರೀಯ ವಕೀಲರ ಸಮ್ಮೇಳನ 2023 ಆಯೋಜಿಸಿದೆ. ಸಮ್ಮೇಳನವು ವಿವಿಧ ಕಾನೂನು ವಿಷಯಗಳ ಕುರಿತು ಅರ್ಥಪೂರ್ಣ ಸಂವಾದ ಮತ್ತು ಚರ್ಚೆಗೆ ವೇದಿಕೆಯಾಗಿ ಕಾರ್ಯ ನಿರ್ವಹಿಸುವ ಗುರಿ ಹೊಂದಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಾಮುಖ್ಯತೆ, ವಿಚಾರಗಳು ಮತ್ತು ಅನುಭವಗಳ ವಿನಿಮಯ ಉತ್ತೇಜಿಸುವುದು ಮತ್ತು ಅಂತಾರಾಷ್ಟ್ರೀಯ ಸಹಕಾರ ಮತ್ತು ಕಾನೂನು ಸಮಸ್ಯೆಗಳ ತಿಳುವಳಿಕೆ ಬಲಪಡಿಸುವುದು ಇದರ ಉದ್ದೇಶವಾಗಿದೆ. ದೇಶದಲ್ಲೇ ಪ್ರಥಮ ಬಾರಿಗೆ ಆಯೋಜಿಸಲಾಗುತ್ತಿರುವ ಈ ಸಮ್ಮೇಳನದಲ್ಲಿ ಉದಯೋನ್ಮುಖ ಕಾನೂನು ಪ್ರವೃತ್ತಿಗಳು, ಗಡಿಯಾಚೆಗಿನ ವ್ಯಾಜ್ಯಗಳಲ್ಲಿನ ಸವಾಲುಗಳು, ಕಾನೂನು ತಂತ್ರಜ್ಞಾನ, ಪರಿಸರ ಕಾನೂನು ಇತ್ಯಾದಿ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.
ಕಾರ್ಯಕ್ರಮವು ಪ್ರತಿಷ್ಠಿತ ನ್ಯಾಯಾಧೀಶರು, ಕಾನೂನು ವೃತ್ತಿಪರರು ಮತ್ತು ಜಾಗತಿಕ ಕಾನೂನು ಭ್ರಾತೃತ್ವದ ನಾಯಕರ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು.
***
*
(Release ID: 1959925)
Visitor Counter : 147
Read this release in:
Marathi
,
English
,
Urdu
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam