ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

​​​​​​​ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿ " ರಾಷ್ಟ್ರೀಯ ವಿಜ್ಞಾನ ಪುರಸ್ಕಾರ " ಎಂದು ಕರೆಯಲ್ಪಡುವ ಹೊಸ ರಾಷ್ಟ್ರೀಯ ಪ್ರಶಸ್ತಿಗಳನ್ನು ಸರ್ಕಾರ ಹೊರತಂದಿದೆ.


ರಾಷ್ಟ್ರೀಯ ವಿಜ್ಞಾನ ಪುರಸ್ಕಾರವು ಭಾರತದ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿ ಅತ್ಯುನ್ನತ ಮನ್ನಣೆಗಳಲ್ಲಿ ಒಂದಾಗಿದೆ

Posted On: 21 SEP 2023 10:13AM by PIB Bengaluru

ಭಾರತ ಸರ್ಕಾರವು ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿ " ರಾಷ್ಟ್ರೀಯ ವಿಜ್ಞಾನ ಪುರಸ್ಕಾರ " ಎಂದು ಕರೆಯಲ್ಪಡುವ ಹೊಸ ರಾಷ್ಟ್ರೀಯ ಪ್ರಶಸ್ತಿಗಳನ್ನು ಪರಿಚಯಿಸಿದೆ.

ವಿಜ್ಞಾನ, ತಂತ್ರಜ್ಞಾನ ಮತ್ತು ತಂತ್ರಜ್ಞಾನ ಆಧಾರಿತ ಆವಿಷ್ಕಾರದ ವಿವಿಧ ಕ್ಷೇತ್ರಗಳಲ್ಲಿ ವಿಜ್ಞಾನಿಗಳು, ತಂತ್ರಜ್ಞರು ಮತ್ತು ನಾವೀನ್ಯಕಾರರು ವೈಯಕ್ತಿಕವಾಗಿ ಅಥವಾ ತಂಡಗಳಲ್ಲಿ ನೀಡಿದ ಗಮನಾರ್ಹ ಮತ್ತು ಸ್ಫೂರ್ತಿದಾಯಕ ಕೊಡುಗೆಯನ್ನು ಗುರುತಿಸುವುದು ರಾಷ್ಟ್ರೀಯ ವಿಜ್ಞಾನ ಪುರಸ್ಕಾರದ (ಆರ್ ವಿಪಿ ) ಉದ್ದೇಶವಾಗಿದೆ.

ರಾಷ್ಟ್ರೀಯ ವಿಜ್ಞಾನ ಪುರಸ್ಕಾರವು ಭಾರತದ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿ ಅತ್ಯುನ್ನತ ಮನ್ನಣೆಗಳಲ್ಲಿ ಒಂದಾಗಿದೆ. ಸರ್ಕಾರಿ, ಖಾಸಗಿ ವಲಯದ ಸಂಸ್ಥೆಗಳಲ್ಲಿ ಕೆಲಸ ಮಾಡುವ ವಿಜ್ಞಾನಿಗಳು / ತಂತ್ರಜ್ಞರು / ನಾವೀನ್ಯಕಾರರು ಅಥವಾ ಯಾವುದೇ ಸಂಸ್ಥೆಯ ಹೊರಗೆ ಕೆಲಸ ಮಾಡುವ ಯಾವುದೇ ವ್ಯಕ್ತಿ, ವಿಜ್ಞಾನ, ತಂತ್ರಜ್ಞಾನ ಅಥವಾ ತಂತ್ರಜ್ಞಾನ ಆಧಾರಿತ ಆವಿಷ್ಕಾರದ ಯಾವುದೇ ಕ್ಷೇತ್ರದಲ್ಲಿ ಹೊಸ ಸಂಶೋಧನೆ ಅಥವಾ ನಾವೀನ್ಯತೆ ಅಥವಾ ಆವಿಷ್ಕಾರದ ವಿಷಯದಲ್ಲಿ ವಿಶಿಷ್ಟ ಕೊಡುಗೆಗಳನ್ನು ನೀಡಿದ ಯಾವುದೇ ವ್ಯಕ್ತಿ ಪ್ರಶಸ್ತಿಗಳಿಗೆ ಅರ್ಹರಾಗಿರುತ್ತಾರೆ. ಭಾರತೀಯ ಸಮುದಾಯಗಳು ಅಥವಾ ಸಮಾಜಕ್ಕೆ ಪ್ರಯೋಜನಕಾರಿಯಾದ ಅಸಾಧಾರಣ ಕೊಡುಗೆಗಳೊಂದಿಗೆ ವಿದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದ ಜನರು ಸಹ ಪ್ರಶಸ್ತಿಗಳಿಗೆ ಅರ್ಹರಾಗಿರುತ್ತಾರೆ. ಪ್ರಶಸ್ತಿಗಳನ್ನು ಈ ಕೆಳಗಿನ ನಾಲ್ಕು ವಿಭಾಗಗಳಲ್ಲಿ ನೀಡಲಾಗುವುದು :-

ಎ. ವಿಜ್ಞಾನ ರತ್ನ (ವಿಆರ್) ಪ್ರಶಸ್ತಿಯು ವಿಜ್ಞಾನ ಮತ್ತು ತಂತ್ರಜ್ಞಾನದ ಯಾವುದೇ ಕ್ಷೇತ್ರದಲ್ಲಿ ಮಾಡಿದ ಜೀವಮಾನದ ಸಾಧನೆಗಳು ಮತ್ತು ಕೊಡುಗೆಗಳನ್ನು ಗುರುತಿಸುತ್ತದೆ.

ಬಿ. ವಿಜ್ಞಾನ ಶ್ರೀ (ವಿಎಸ್) ಪ್ರಶಸ್ತಿಯು ವಿಜ್ಞಾನ ಮತ್ತು ತಂತ್ರಜ್ಞಾನದ ಯಾವುದೇ ಕ್ಷೇತ್ರದಲ್ಲಿ ವಿಶಿಷ್ಟ ಕೊಡುಗೆಗಳನ್ನು ಗುರುತಿಸುತ್ತದೆ.

ಸಿ. ವಿಜ್ಞಾನ ಯುವ-ಶಾಂತಿ ಸ್ವರೂಪ್ ಭಟ್ನಾಗರ್ (ವಿವೈ-ಎಸ್ಎಸ್ ಬಿ) ಪ್ರಶಸ್ತಿಯು ವಿಜ್ಞಾನ ಮತ್ತು ತಂತ್ರಜ್ಞಾನದ ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆ ನೀಡಿದ 45 ವರ್ಷದವರೆಗಿನ ಯುವ ವಿಜ್ಞಾನಿಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತದೆ.

ಡಿ. ವಿಜ್ಞಾನ ತಂಡ (ವಿಟಿ) ವಿಜ್ಞಾನ ಮತ್ತು ತಂತ್ರಜ್ಞಾನದ ಯಾವುದೇ ಕ್ಷೇತ್ರದಲ್ಲಿ ಒಂದು ತಂಡದಲ್ಲಿ ಅಸಾಧಾರಣ ಕೊಡುಗೆ ನೀಡಿದ ಮೂವರು ಅಥವಾ ಹೆಚ್ಚಿನ ವಿಜ್ಞಾನಿಗಳು / ಸಂಶೋಧಕರು / ನಾವೀನ್ಯಕಾರರನ್ನು ಒಳಗೊಂಡ ತಂಡಕ್ಕೆ ಈ ಪ್ರಶಸ್ತಿಯನ್ನು ನೀಡಲಾಗುವುದು.

ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ವಿಜ್ಞಾನದ ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುವ ವಿಜ್ಞಾನಿಗಳು, ತಂತ್ರಜ್ಞರು ಮತ್ತು ಆವಿಷ್ಕಾರಿಗಳು , ವಿಜ್ಞಾನದ ಯಾವುದೇ ಕ್ಷೇತ್ರದಲ್ಲಿ ಹೊಸ ಸಂಶೋಧನೆ, ತಂತ್ರಜ್ಞಾನ ಆಧಾರಿತ ನಾವೀನ್ಯತೆ ಅಥವಾ ಆವಿಷ್ಕಾರ ಅಥವಾ ಗಮನಾರ್ಹ ಸಾಮಾಜಿಕ ಪರಿಣಾಮ ಬೀರುವ ನವೀನ ತಂತ್ರಜ್ಞಾನಗಳು / ಉತ್ಪನ್ನಗಳ ಅಭಿವೃದ್ಧಿಗೆ ಕೊಡುಗೆ ನೀಡಿದ ಅಥವಾ ಕೈಗೊಂಡ ಆವಿಷ್ಕಾರಿಗಳು ಪ್ರಶಸ್ತಿಗೆ ಅರ್ಹರಾಗಿರುತ್ತಾರೆ.

ಭಾರತೀಯ ಸಮುದಾಯಗಳು ಅಥವಾ ಸಮಾಜಕ್ಕೆ ಪ್ರಯೋಜನವಾಗುವ ಅಸಾಧಾರಣ ಕೊಡುಗೆಗಳೊಂದಿಗೆ ವಿದೇಶದಲ್ಲಿರುವ ಭಾರತೀಯ ಮೂಲದ ವಿಜ್ಞಾನಿಗಳು, ತಂತ್ರಜ್ಞರು ಮತ್ತು ನಾವೀನ್ಯಕಾರರು ಸಹ ಅರ್ಹರಾಗಿರುತ್ತಾರೆ.

ರಾಷ್ಟ್ರೀಯ ವಿಜ್ಞಾನ ಪುರಸ್ಕಾರವನ್ನು ಭೌತಶಾಸ್ತ್ರ, ರಸಾಯನಶಾಸ್ತ್ರ, ಜೈವಿಕ ವಿಜ್ಞಾನ, ಗಣಿತ ಮತ್ತು ಕಂಪ್ಯೂಟರ್ ವಿಜ್ಞಾನ, ಭೂ ವಿಜ್ಞಾನ, ವೈದ್ಯಕೀಯ, ಎಂಜಿನಿಯರಿಂಗ್ ವಿಜ್ಞಾನ, ಕೃಷಿ ವಿಜ್ಞಾನ, ಪರಿಸರ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ, ಪರಮಾಣು ಶಕ್ತಿ, ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಇತರ 13 ಕ್ಷೇತ್ರಗಳಲ್ಲಿ ನೀಡಲಾಗುವುದು. ಲಿಂಗ ಸಮಾನತೆ ಸೇರಿದಂತೆ ಪ್ರತಿ ಕಾರ್ಯಕ್ಷೇತ್ರ/ ಕ್ಷೇತ್ರದ ಪ್ರಾತಿನಿಧ್ಯವನ್ನು ಖಚಿತಪಡಿಸಲಾಗುವುದು.

ರಾಷ್ಟ್ರೀಯ ವಿಜ್ಞಾನ ಪುರಸ್ಕಾರ ಪ್ರಶಸ್ತಿಗಳಿಗೆ ಸ್ವೀಕರಿಸುವ ಎಲ್ಲಾ ನಾಮನಿರ್ದೇಶನಗಳನ್ನು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ (ಪಿಎಸ್ಎ) ನೇತೃತ್ವದ ರಾಷ್ಟ್ರೀಯ ವಿಜ್ಞಾನ ಪುರಸ್ಕಾರ ಸಮಿತಿ (ಆರ್ ವಿಪಿಸಿ) ಮುಂದೆ ಇಡಬೇಕು ಮತ್ತು ವಿಜ್ಞಾನ ಇಲಾಖೆಗಳ ಕಾರ್ಯದರ್ಶಿಗಳು, ವಿಜ್ಞಾನ ಮತ್ತು ಎಂಜಿನಿಯರಿಂಗ್ ಅಕಾಡೆಮಿಗಳ ಸದಸ್ಯರು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದ ವಿವಿಧ ಕ್ಷೇತ್ರಗಳ ಕೆಲವು ಪ್ರಖ್ಯಾತ ವಿಜ್ಞಾನಿಗಳು ಮತ್ತು ತಂತ್ರಜ್ಞರನ್ನು ಒಳಗೊಂಡಿರುತ್ತದೆ.

ಈ ಪ್ರಶಸ್ತಿಗಳ ಗುಚ್ಛಕ್ಕೆ ನಾಮನಿರ್ದೇಶನಗಳನ್ನು ಪ್ರತಿವರ್ಷ ಜನವರಿ 14 ರಂದು ಆಹ್ವಾನಿಸಲಾಗುವುದು , ಇದು ಪ್ರತಿವರ್ಷ ಫೆಬ್ರವರಿ 28 ರವರೆಗೆ (ರಾಷ್ಟ್ರೀಯ ವಿಜ್ಞಾನ ದಿನ) ತೆರೆದಿರುತ್ತದೆ. ಈ ಪ್ರಶಸ್ತಿಗಳನ್ನು ಪ್ರತಿ ವರ್ಷ ಮೇ 11 ರಂದು (ರಾಷ್ಟ್ರೀಯ ತಂತ್ರಜ್ಞಾನ ದಿನ) ಘೋಷಿಸಲಾಗುತ್ತದೆ . ಎಲ್ಲಾ ವರ್ಗದ ಪ್ರಶಸ್ತಿಗಳ ಪ್ರಶಸ್ತಿ ಪ್ರದಾನ ಸಮಾರಂಭವು ಆಗಸ್ಟ್ 23 ರಂದು (ರಾಷ್ಟ್ರೀಯ ಬಾಹ್ಯಾಕಾಶ ದಿನ) ನಡೆಯಲಿದೆ. ಎಲ್ಲಾ ಪ್ರಶಸ್ತಿಗಳು ಸನದ್ ಮತ್ತು ಪದಕವನ್ನು ಹೊಂದಿರುತ್ತವೆ.

ಈ ಹೊಸ ರಾಷ್ಟ್ರೀಯ ಪ್ರಶಸ್ತಿಗಳು ಭಾರತ ಸರ್ಕಾರವು ಅತ್ಯುನ್ನತ ಮಟ್ಟದಲ್ಲಿ ವೈಜ್ಞಾನಿಕ ಸಮುದಾಯದ ಸಾಧನೆಗಳನ್ನು ಗುರುತಿಸುವಲ್ಲಿ ಒಂದು ಪರಿವರ್ತಕ ಹೆಜ್ಜೆಯಾಗಿದೆ. ಇಡೀ ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯೊಂದಿಗೆ, ವೈಜ್ಞಾನಿಕ ಆವಿಷ್ಕಾರಕರು ಮತ್ತು ತಂತ್ರಜ್ಞರ ಎಲ್ಲಾ ವಿಭಾಗಗಳು ಮಾಡಿದ ಕೆಲಸವನ್ನು ಇತರ ರಾಷ್ಟ್ರೀಯ ಪ್ರಶಸ್ತಿಗಳಿಗೆ ಸಮಾನವಾಗಿ ನೀಡಲಾಗುವುದು.

***

 



(Release ID: 1959417) Visitor Counter : 243