ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಮಧ್ಯಪ್ರದೇಶದ ಬೀನಾದಲ್ಲಿ 50,700 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದ ಪ್ರಧಾನಮಂತ್ರಿ


ಬೀನಾದಲ್ಲಿ ಪೆಟ್ರೋಕೆಮಿಕಲ್‌ ಸಂಸ್ಕರಣಾ ಸಂಕಿರಣಕ್ಕೆ ಶಿಲಾನ್ಯಾಸ

ನರ್ಮದಾಪುರಂ  ವಿದ್ಯುತ್‌ ಮತ್ತು ನವೀಕೃತ ಇಂಧನ ಉತ್ಪಾದನಾ ವಲಯ ಮತ್ತು ರಾತಲಂನಲ್ಲಿ ಬೃಹತ್ ಕೈಗಾರಿಕಾ ಪಾರ್ಕ್‌ ಗೆ ಶಿಲಾನ್ಯಾಸ  

ಇಂದೋರ್‌ ನಲ್ಲಿ ಎರಡು ಮಾಹಿತಿ ತಂತ್ರಜ್ಞಾನ ಪಾರ್ಕ್‌ ಮತ್ತು ರಾಜ್ಯದ ವಿವಿಧೆಡೆ ಆರು ಹೊಸ ಕೈಗಾರಿಕಾ ಪಾರ್ಕ್‌  ಗಳಿಗೆ ಶಂಕು ಸ್ಥಾಪನೆ

ಇಂದಿನ ಯೋಜನೆಗಳು ಮಧ್ಯಪ್ರದೇಶದಲ್ಲಿ ನಮ್ಮ ಸಕಾರಾತ್ಮಕ ನಿರ್ಧಾರಗಳ ಅಗಾಧತೆಯ ಪ್ರತೀಕವಾಗಿವೆ

“ಯಾವುದೇ ದೇಶ ಅಥವಾ ರಾಜ್ಯದ ಅಭಿವೃದ್ಧಿ ಕುರಿತಾದ ಆಡಳಿತ ಪಾರದರ್ಶಕ ಮತ್ತು ಭ್ರಷ್ಟಾಚಾರವನ್ನು ತೊಡೆದುಹಾಕುವಂತಿರುವುದು ಅಗತ್ಯ

“ಭಾರತ ಗುಲಾಮಗಿರಿ ಮನಸ್ಥಿತಿಯನ್ನು ಹಿಂದೆ ಬಿಟ್ಟಿದೆ ಮತ್ತು ಸ್ವಾಯತ್ತತೆಯ ವಿಶ್ವಾಸಗೊಂದಿಗೆ ಮುನ್ನಡೆಯುತ್ತಿದೆʼ

“ಸನಾತನವನ್ನು ಮುರಿಯುವ ಬಗ್ಗೆ ಜನತೆ ಜಾಗೃತರಾಗಬೇಕು, ಇದರಿಂದಾಗಿಯೇ ಭಾರತ ಏಕೆತೆಯಿಂದಿದೆ”

ಜಿ-20 ಅಧ್ಬುತ ಯಶಸ್ಸು  140 ಕೋಟಿ ಭಾರತೀಯರ ಯಶಸ್ಸಾಗಿದೆ”

“ಭಾರತ ಜಗತ್ತನ್ನು ಒಟ್ಟುಗೂಡಿಸುವ ಪರಿಣಿತಿಯನ್ನು ಪ್ರದರ್ಶಿಸುತ್ತಿದೆ ಮತ್ತು ವಿಶ್ವದ ಮಿತ್ರನಾಗಿ ಹೊರ ಹೊಮ್ಮಿದೆ”

“ಅವಕಾಶ ವಂಚಿತರಿಗೆ ಆದ್ಯತೆ ನೀಡುವುದು ನಮ್ಮ ಸರ್ಕಾರದ ಮೂಲಭೂತ ಮಂತ್ರವಾಗಿದೆ”

“ಮೋದಿಯ ಭರವಸೆಯ ದಾಖಲೆ ನಿಮ್ಮ ಮುಂದಿದೆ”

“ರಾಣಿ ದುರ್ಗಾವತಿ ಅವರ 500 ನೇ ಜನ್ಮ ವರ್ಷಾಚರಣೆಯನ್ನು ಅತ್ಯಂತ ಆಡಂಬರದಿಂದ ಆಚರಿಸಲಾಗುವುದು ಮತ್ತು 2023 ರ ಅಕ್ಟೋಬರ್ 5 ರಂದು ನೀವು ಇದನ್ನು ನೋಡಲಿದ್ದೀರಿ”

“ ಜಗತ್ತು ಇಂದು ʼಸಬ್ಕಾ ಸಾಥ್ ಸಬ್ಕಾ ವಿಕಾಸ್ʼ ಮಾದರಿಯನ್ನು ನೋಡುತ್ತಿದೆ”

Posted On: 14 SEP 2023 1:43PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಬಿನಾದಲ್ಲಿ 50,700 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದರು. ಬೀನಾದಲ್ಲಿ ಪೆಟ್ರೋ ಕೆಮಿಕಲ್ಸ್‌ ಸಂಸ್ಕರಣಾ ಘಟಕವನ್ನು [ಬಿಪಿಸಿಎಲ್]ವನ್ನು 49,000 ಸಾವಿರ ಕೋಟಿ ರೂಪಾಯಿ ಮೊತ್ತದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ನರ್ಮದಾಪುರಂ ವಿದ್ಯುತ್‌ ಮತ್ತು ನವೀಕೃತ ಇಂಧನ ಉತ್ಪಾದನಾ ವಲಯ ಮತ್ತು ರಾತಲಂನಲ್ಲಿ ಬೃಹತ್ ಕೈಗಾರಿಕಾ ಪಾರ್ಕ್‌ ಗೆ ಶಿಲಾನ್ಯಾಸ ಇಂದೋರ್‌ ನಲ್ಲಿ ಎರಡು ಮಾಹಿತಿ ತಂತ್ರಜ್ಞಾನ ಪಾರ್ಕ್‌ ಮತ್ತು ರಾಜ್ಯದ ವಿವಿಧೆಡೆ ಆರು ಹೊಸ ಕೈಗಾರಿಕಾ ಪಾರ್ಕ್‌ ಗಳಿಗೆ ಪ್ರಧಾನಮಂತ್ರಿ ಅವರು ಶಂಕು ಸ್ಥಾಪನೆ ನೆರವೇರಿಸಿದರು.  

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬುಂದೇಲ್‌ ಖಂಡ್‌ ಸೇನಾನಿಗಳ ಭೂಮಿಯಾಗಿದ್ದು, ಒಂದೇ ತಿಂಗಳಲ್ಲಿ ಮಧ್ಯಪ್ರದೇಶದ ಸಾಗರ್‌ ಗೆ ಮತ್ತೆ ಭೇಟಿ ನೀಡುತ್ತಿರುವುದನ್ನು ಉಲ್ಲೇಖಿಸಿದರು ಮತ್ತು ಇಂತಹ ಅವಕಾಶ ಕಲ್ಪಿಸಿದ ಮಧ್ಯಪ್ರದೇಶ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದರು. ಸಂತ ರವಿದಾಸ್‌ ಜೀ ಅವರ ಸ್ಮಾರಕ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದನ್ನು ಅವರು ಸ್ಮರಿಸಿಕೊಂಡರು.

ಇಂದಿನ ಕಾರ್ಯಕ್ರಮದಲ್ಲಿ ಯೋಜನೆಗಳಿಗೆ ಚಾಲನೆ ನೀಡಿರುವುದರಿಂದ ಈ ವಲಯದ ಅಭಿವೃದ್ದಿಗೆ ಹೊಸ ಶಕ್ತಿ ದೊರೆತಿದೆ. ಇಂದು 50 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದು, ಇದು ದೇಶದ ಕೆಲವು ರಾಜ್ಯಗಳ ಬಜೆಟ್‌ ಗಿಂತಲೂ ಅಧಿಕ ಮೊತ್ತವಾಗಿದೆ. ಇದು ಮಧ್ಯಪ್ರದೇಶದಲ್ಲಿ ಕೈಗೊಂಡಿರುವ ನಿರ್ಧಾರಗಳ ಅಗಾಧತೆಯ ಪ್ರತೀಕವಾಗಿದೆ ಎಂದರು.  

ಸ್ವಾತಂತ್ರ್ಯದ ಅಮೃತ ಕಾಲದಲ್ಲಿ ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ಪರಿವರ್ತನೆಗೆ ಪ್ರತಿಯೊಬ್ಬ ಭಾರತೀಯನ ಸಂಕಲ್ಪವಿದೆ. ಸ್ವಾವಲಂಬಿ ಭಾರತದ ಮಹತ್ವ ಕುರಿತು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ವಿದೇಶಗಳಿಂದ ಆಮದು ಮಾಡಿಕೊಳ್ಳದೇ ಪೆಟ್ರೋಲ್‌ ಮತ್ತು ಡೀಸೆಲ್ ನಲ್ಲಿ ಸ್ವಾಯತ್ತತೆ ಸಾಧಿಸಬೇಕು. ಬಿನಾದಲ್ಲಿನ ಪೆಟ್ರೋ ಕೆಮಿಕಲ್ಸ್‌ ಸಂಕಿರಣವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಇದು ಪೆಟ್ರೋ ಕೆಮಿಕಲ್ಸ್‌ ಕೈಗಾರಿಕಾ ವಲಯದಲ್ಲಿ ಸ್ವಾವಲಂಬನೆ ಸಾಧಿಸುವ ಅತಿ ದೊಡ್ಡ ಹೆಜ್ಜೆಯಾಗಿದೆ. ಕೊಳವೆಗಳು, ಕೊಳಾಯಿಗಳು, ಪೀಠೋಪಕರಣಗಳು, ಬಣ್ಣಗಳು, ಕಾರುಗಳ ಪರಿಕರಗಳು, ವೈದ್ಯಕೀಯ ಉಪಕರಣಗಳು, ಪ್ಯಾಕೇಜಿಂಗ್‌ ಪರಿಕರಗಳು ಮತ್ತು ಕೃಷಿ ಪರಿಕರಗಳಂತಹ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ಉದಾಹರಣೆಯಾಗಿ ನೀಡಿದ ಪ್ರಧಾನಮಂತ್ರಿಯವರು, ಇವುಗಳ ಉತ್ಪಾದನೆಯಲ್ಲಿ ಪೆಟ್ರೋಕೆಮಿಕಲ್ಸ್‌ ಮಹತ್ವದ ಪಾತ್ರ ನಿರ್ವಹಿಸುತ್ತದೆ. “ಬಿನಾದಲ್ಲಿರುವ ಪೆಟ್ರೋಕೆಮಿಕಲ್ ಸಂಕಿರಣ ಇಡೀ ಪ್ರದೇಶದ ಬೆಳವಣಿಗೆಯನ್ನು ಉತ್ತೇಜಿಸಲಿದೆ ಮತ್ತು ಅಭಿವೃದ್ಧಿಯಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ನಾನು ನಿಮಗೆ ಖಾತರಿ ನೀಡುತ್ತೇನೆ.” ಇದರಿಂದ ಹೊಸ ಕೈಗಾರಿಕೆಗಳ ಹುಟ್ಟಿಗೆ ಮಾತ್ರ ಕಾರಣವಾಗುವುದಿಲ್ಲ, ಸಣ್ಣ ರೈತರು ಮತ್ತು ಉದ್ಯಮಶೀಲತೆಗೆ ಉತ್ತೇಜನ ದೊರೆಯಲಿದ್ದು, ಯುವ ಸಮೂಹಕ್ಕೆ ಸಹಸ್ರಾರು ಉದ್ಯೋಗಾವಕಾಶಗಳು ದೊರೆಯಲಿವೆ ಎಂದರು. ಉತ್ಪಾದನಾ ವಲಯದ ಮಹತ್ವದ ಬಗ್ಗೆ ಮಾತನಾಡಿದ ಅವರು, ಇಂದು ಆರಂಭವಾಗುತ್ತಿರುವ ಹತ್ತು ಹೊಸ ಕೈಗಾರಿಕಾ ಯೋಜನೆಗಳ ಕುರಿತು ಮಾಹಿತಿ ನೀಡಿದರು. ನರ್ಮದಾಪುರಂ, ಇಂದೋರ್‌ ಮತ್ತು ರಾತಲಂನಲ್ಲಿನ ಯೋಜನೆಗಳಿಂದ ಕೈಗಾರಿಕಾ ಶಕ್ತಿ ವೃದ್ಧಿಸಲಿದ್ದು, ಮಧ್ಯಪ್ರದೇಶದ ಎಲ್ಲಾ ಜನರಿಗೆ ಅನುಕೂಲವಾಗಲಿದೆ ಎಂದರು.

“ಯಾವುದೇ ದೇಶ ಅಥವಾ ರಾಜ್ಯದ ಅಭಿವೃದ್ಧಿಯಲ್ಲಿ ಆಡಳಿತ ಪಾರದರ್ಶಕವಾಗಿರುವ ಜೊತೆಗೆ ಭ್ರಷ್ಟಾಚಾರವನ್ನು ತೊಡೆದುಹಾಕುವಂತಿರುವುದು ಅಗತ್ಯವಾಗಿದೆ. ಒಂದು ಕಾಲದಲ್ಲಿ ಮಧ್ಯಪ್ರದೇಶ ಹಿಂದುಳಿದ ಮತ್ತು ದುರ್ಬಲ ರಾಜ್ಯ ಎಂದು ಕರೆಸಿಕೊಳ್ಳುತ್ತಿತ್ತು. “ದಶಕಗಳ ಕಾಲ ಮಧ್ಯಪ್ರದೇಶದಲ್ಲಿ ಆಡಳಿತ ನಡೆಸಿದ್ದವರು ಅಪರಾಧ ಮತ್ತು ಭ್ರಷ್ಟಾಚಾರ ಹೊರತುಪಡಿಸಿ ಉಳಿದ ಯಾವುದೇ ಕೊಡುಗೆ ನೀಡಿರಲಿಲ್ಲ. ಅಪರಾಧಿಗಳಿಗೆ ರಾಜ್ಯ ಮುಕ್ತ ಅವಕಾಶ ನೀಡಿದ ಕಾರಣದಿಂದ ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಜನ ನಂಬಿಕೆ ಕಳೆದುಕೊಂಡಿದ್ದರು. ಅಂತಹ ಪರಿಸ್ಥಿತಿಯಲ್ಲಿ ಕೈಗಾರಿಕೆಗಳು ರಾಜ್ಯದಿಂದ ದೂರ ಉಳಿದಿದ್ದವು. ಮಧ್ಯಪ್ರದೇಶದ ಪರಿಸ್ಥಿತಿಯನ್ನು ಬದಲಿಸಲು, ಸುಧಾರಣೆ ತರಲು ವ್ಯಾಪಕ ಪ್ರಯತ್ನಗಳನ್ನು ಈ ಸರ್ಕಾರ ಮೊದಲ ಸಲ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ಕೈಗೊಂಡ ಕ್ರಮಗಳನ್ನು ಉಲ್ಲೇಖಿಸಿದರು. ಸರ್ಕಾರದ ಸಾಧನೆಗಳನ್ನು ಒತ್ತಿ ಹೇಳಿದ ಅವರು, ಕಾನೂನು ಸುವ್ಯವಸ್ಥೆಯನ್ನು ಪುನರ್‌ ಸ್ಥಾಪಿಸಲಾಗಿದ್ದು, ಜನರಲ್ಲಿದ್ದ ಭೀತಿಯನ್ನು ತೊಡೆದುಹಾಕಿದೆ. ರಸ್ತೆಗಳ ನಿರ್ಮಾಣ ಮತ್ತು ವಿದ್ಯುತ್‌ ಪೂರೈಕೆಯಲ್ಲಿ ಸಾಧನೆ ಮಾಡಿದೆ. ಸಂಪರ್ಕದಲ್ಲಿ ಆದ ಸುಧಾರಣೆಯಿಂದಾಗಿ ಸಕಾರಾತ್ಮಕ ಪರಿಸರ ನಿರ್ಮಾಣವಾಗಿದ್ದು, ದೊಡ್ಡ ಕೈಗಾರಿಕೆಗಳು ತನ್ನ ಕಾರ್ಖಾನೆಗಳನ್ನು ಈಗಾಗಲೇ ಸ್ಥಾಪಿಸಿವೆ. ಮುಂದಿನ ಕೆಲವು ವರ್ಷಗಳಲ್ಲಿ ಮಧ್ಯಪ್ರದೇಶ ಕೈಗಾರಿಕಾಭಿವೃದ್ಧಿಯಲ್ಲಿ ಹೊಸ ಎತ್ತರಕ್ಕೆ ಏರಲಿದೆ ಎಂದು ಹೇಳಿದರು.

ನವಭಾರತ ತ್ವರಿತವಾಗಿ ಪರಿವರ್ತನೆಹೊಂದುತ್ತಿದ್ದು, “ಎಲ್ಲರ ಪ್ರಯತ್ನದಿಂದ” ಮುನ್ನಡೆಯುತ್ತಿದ್ದೇವೆ ಮತ್ತು ಗುಲಾಮಗಿರಿ ಮನಸ್ಥಿತಿಯಿಂದ ನಾವು ಹೊರ ಬಂದಿದ್ದೇವೆ. “ಭಾರತ ಗುಲಾಮಗಿರಿ ಮನಸ್ಥಿತಿಯನ್ನು ಹಿಂದೆ ಬಿಟ್ಟಿದೆ ಮತ್ತು ಸ್ವಾಯತ್ತತೆಯ ವಿಶ್ವಾಸಗೊಂದಿಗೆ ಮುನ್ನಡೆಯುತ್ತಿದೆʼ. ಇತ್ತೀಚೆಗೆ ನಡೆದ ಜಿ-20 ಶೃಂಗಸಭೆಯಲ್ಲಿ ಇದು ಪ್ರತಿಬಿಂಬಿತವಾಗಿದ್ದು, ಇದು ಚಳವಳಿಯಾಗಿ ಮಾರ್ಪಟ್ಟಿದೆ ಮತ್ತು ದೇಶದ ಸಾಧನೆಗಳ ಬಗ್ಗೆ ಎಲ್ಲರೂ ಹೆಮ್ಮೆಪಡುತ್ತಾರೆ. ಜಿ-20 ಶೃಂಗಸಭೆಯ ಯಶಸ್ಸಿನ ಲಾಭ ಜನರಿಗೆ ದೊರೆಯಬೇಕಾಗಿದೆ. “ಇದು 140 ಕೋಟಿ ಭಾರತೀಯ ಗೆಲುವಾಗಿದೆ” ಎಂದರು. ವಿವಿಧ ನಗರಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಭಾರತದ ವೈವಿಧ್ಯತೆ, ಸಾಮರ್ಥ್ಯದ ಪ್ರದರ್ಶನವಾಗಿದೆ ಮತ್ತು ವಿದೇಶಿಯರನ್ನು ಅತೀವವಾಗಿ ಪ್ರಭಾವಿಸಿದೆ. ಖಜುರಾಹೋ, ಇಂದೋರ್‌, ಭೋಪಾಲ್‌ ನಲ್ಲಿ ನಡೆದ ಜಿ-20 ಕಾರ್ಯಕ್ರಮಗಳಿಂದಾಗಿ ಜಗತ್ತಿನ ದೃಷ್ಟಿಯಲ್ಲಿ ಮಧ್ಯಪ್ರದೇಶದ ಚಿತ್ರಣವನ್ನು ಬದಲಿಸಿದಂತಾಗಿದೆ. ಭಾರತ ಜಗತ್ತನ್ನು ಒಟ್ಟುಗೂಡಿಸುವ ಪರಿಣಿತಿಯನ್ನು ಪ್ರದರ್ಶಿಸುತ್ತಿದೆ ಮತ್ತು ವಿಶ್ವದ ಮಿತ್ರನಾಗಿ ಹೊರ ಹೊಮ್ಮಿದೆ. ಮತ್ತೊಂದೆಡೆ ರಾಷ್ಟ್ರ ಮತ್ತು ಸಮಾಜವನ್ನು ವಿಭಜಿಸಲು ನರಕಯಾತನೆಗೊಳಿಸುವ ಕೆಲವು ಸಂಘಟನೆಗಳಿವೆ ಎಂದರು. ಇತ್ತೀಚೆಗೆ ರಚನೆಯಾದ ಮೈತ್ರಿಕೂಟ ಕುರಿತು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಅವರ ನೀತಿಗಳು ಭಾರತದ ಮೌಲ್ಯಗಳನ್ನು ಪ್ರಶ್ನಿಸಲು ಮಾತ್ರ ಸೀಮಿತವಾಗಿವೆ ಮತ್ತು ಸಹಸ್ರಾರು ವರ್ಷಗಳ ಸಿದ್ಧಾಂತ, ತತ್ವ ಮತ್ತು ಸಂಪ್ರದಾಯ ಪ್ರತಿಯೊಬ್ಬರನ್ನು ಒಂದುಗೂಡಿಸಿತ್ತು, ಇಂತಹ ಉದಾತ್ತ ವಿಷಯಗಳನ್ನು ‍ಧ್ವಂಸಗೊಳಿಸುವ ಕಾರ್ಯದಲ್ಲಿ ಇವು ನಿರತವಾಗಿವೆ.ಹೊಸದಾಗಿ ರಚನೆಯಾದ ಮೈತ್ರಿಕೂಟ ಸನಾತನವನ್ನು ಕೊನೆಗೊಳಿಸಲು ಬಯಸಿದೆ. ರಾಣಿ ಅಹಲ್ಯಾಭಾಯಿ ಹೋಳ್ಕರ್‌ ಅವರು ತಮ್ಮ ಸಾಮಾಜಿಕ ಕಾರ್ಯದ ಮೂಲಕ ದೇಶದ ನಂಬಿಕೆಯನ್ನು ರಕ್ಷಿಸಿದ್ದರು. ಝಾನ್ಸಿಯ ರಾಣಿ ಲಕ್ಷ್ಮೀ ಭಾಯಿ ಬ್ರಿಟೀಷರಿಗೆ ಸವಾಲಾಗಿದ್ದರು. ಮಹಾತ್ಮಾಗಾಂಧೀಜಿ ಅವರ ಅಸ್ಪೃಶ್ಯತೆ ಆಂದೋಲನ ಭಗವಾನ್‌ ರಾಮನಿಂದ ಸ್ಫೂರ್ತಿ ಪಡೆದಿತ್ತು. ಸ್ವಾಮಿ ವಿವೇಕಾನಂದರು ಸಮಾಜದ ವಿವಿಧ ಕೆಡಕುಗಳ ಕುರಿತು ಜನರಲ್ಲಿ ಅರಿವು ಮೂಡಿಸಿದ್ದರು ಮತ್ತು ಲೋಕಮಾನ್ಯ ಬಾಲಗಂಗಾಧರ ತಿಲಕ್‌ ಅವರು ಭಾರತ ಮಾತೆಯನ್ನು ರಕ್ಷಿಸಲು ಉಪಕ್ರಮಗಳನ್ನು ತೆಗೆದುಕೊಂಡಿದ್ದು, ಇದಕ್ಕಾಗಿ ಸ್ವಾತಂತ್ರ್ಯೋತ್ಸವದಲ್ಲಿ ಗಣೇಶೋತ್ಸವವನ್ನು ಜೋಡಿಸಿದ್ದಾಗಿ ಹೇಳಿದರು.   

ಸನಾತನ ಸಕ್ತಿ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿಯಾಗಿತ್ತು, ಸಂತ ರವಿದಾಸ್‌, ಮಾತಾ ಶಬರಿ ಮತ್ತು ಮಹರ್ಷಿ ವಾಲ್ಮೀಕಿ ಅವರನ್ನು ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು. ಈಗ ಸನಾತನವನ್ನು ವಿರೋಧಿಸುತ್ತಿರುವವರು ಅರ್ಥಮಾಡಿಕೊಳ್ಳಬೇಕು, ಇದು ಭಾರತವನ್ನು ಒಂದುಗೂಡಿಸಿತ್ತು ಮತ್ತು ಇಂತಹ ಪ್ರವೃತ್ತಿಗಳ ಕುರಿತು ಜನತೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.

ಸರ್ಕಾರ ದೇಶ ಭಕ್ತಿ ಮತ್ತು ಸಾರ್ವಜನಿಕ ಸೇವೆಗೆ ಸಮರ್ಪಿತವಾಗಿದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಅವಕಾಶ ವಂಚಿತರಿಗೆ ಆದ್ಯತೆ ನೀಡುವುದು ನಮ್ಮ ಸರ್ಕಾರದ ಮೂಲಭೂತ ಮಂತ್ರವಾಗಿದ್ದು, ಇದು ಸರ್ಕಾರದ ಸೂಕ್ಷ್ಮತೆಯನ್ನು ಪ್ರದರ್ಶಿಸುತ್ತದೆ. ಸಾಂಕ್ರಾಮಿಕ ಸಂದರ್ಭದಲ್ಲಿ ಜನಪರವಾಗಿ ನಡೆಸಿದ ಆಡಳಿತದ ಹೆಜ್ಜೆಗಳ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, 80 ಕೋಟಿ ಜನರಿಗೆ ಉಚಿತ ಪಡಿತರ ವಿತರಣೆ ಮಾಡಲಾಗಿತ್ತು ಎಂದರು.

“ನಮ್ಮ ನಿರಂತರ ಪ್ರಯತ್ನದಿಂದಾಗಿ ಮಧ್ಯಪ್ರದೇಶ ಅಭಿವೃದ್ಧಿಯ ಹೊಸ ಎತ್ತರಕ್ಕೆ ಏರಿದ್ದು, ಮಧ್ಯಪ್ರದೇಶದ ಪ್ರತಿಯೊಬ್ಬರ ಜೀವನ ಸುಗಮವಾಗಿದೆ ಮತ್ತು ಪ್ರತಿಯೊಂದು ಮನೆಯಲ್ಲಿ ಸಮೃದ್ಧತೆ ತರಲಾಗಿದೆ”. “ಮೋದಿಯ ಭರವಸೆಯ ದಾಖಲೆ ನಿಮ್ಮ ಮುಂದಿದೆ”.  ರಾಜ್ಯದ ಬಡವರ ಆಶಯಗಳನ್ನು ಪೂರೈಸಲು 40 ಲಕ್ಷ ಪಕ್ಕಾ ಮನೆಗಳನ್ನು ನಿರ್ಮಿಸಲಾಗಿದೆ ಮತ್ತು ಶೌಚಾಲಯ, ಉಚಿತ ಚಿಕಿತ್ಸೆ, ಬ್ಯಾಂಕ್‌ ಖಾತೆಗಳನ್ನು ತೆರೆಯುವ ಹೊಗೆರಹಿತ ಅಡುಗೆ ಮನೆಗಳ ವಾಗ್ದಾನಗಳನ್ನು ಈಡೇರಿಸಿದ್ದೇವೆ. ರಕ್ಷಾ ಬಂಧನ್‌ ದಿನದಂದು ಅಡುಗೆ ಅನಿಲದ ದರ ಕಡಿತಗೊಳಿಸಿರುವುದನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, “ಇದರಿಂದಾಗಿ ಉಜ್ವಲ ಯೋಜನೆಯಡಿ ಸಹೋದರಿಯರು ಅಡುಗೆ ಅನಿಲ ಸಿಲೆಂಡರ್‌ ಗಳನ್ನು 400  ರೂಪಾಯಿ ಕಡಿಮೆ ದರದಲ್ಲಿ ಪಡೆಯುತ್ತಿದ್ದಾರೆ. ಆದ್ದರಿಂದ ಸರ್ಕಾರ ನಿನ್ನೆ ಮತ್ತೊಂದು ನಿರ್ಧಾರ ಕೈಗೊಂಡಿದ್ದು, ದೇಶದ 75 ಲಕ್ಷಕ್ಕೂ ಅಧಿಕ ಸಹೋದರಿಯರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಒದಗಿಸುವ ನಿರ್ಧಾರ ಕೈಗೊಂಡಿದೆ ಎಂದು ಪ್ರಧಾನಮಂತ್ರಿಯರು ಹೇಳಿದರು.

ಪ್ರತಿಯೊಂದು ಆಶ್ವಾಸನೆಯನ್ನು ಈಡೇರಿಸಲು ಸರ್ಕಾರ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಪ್ರತಿಯೊಬ್ಬರಿಗೂ ಸೌಲಭ್ಯಗಳನ್ನು ನೇರವಾಗಿ ತಲುಪಿಸಲಾಗುತ್ತಿದೆ ಮತ್ತು ಪಿಎಂ ಕಿಸಾನ್‌ ಸಮ್ಮಾನ್‌ ನಿಧಿಯಡಿ ಪ್ರತಿಯೊಬ್ಬ ರೈತರು ಸಹ ಫಲಾನುಭವಿಯಾಗಿದ್ದು, ಅವರು 28,000 ರೂಪಾಯಿ ಮೊತ್ತವನ್ನು ನೇರವಾಗಿ ಬ್ಯಾಂಕ್‌ ಖಾತೆಗಳಿಗೆ ಪಡೆದುಕೊಂಡಿದ್ದಾರೆ. ಈ ಯೋಜನೆಗೆ ಸರ್ಕಾರ ಈವರೆಗೆ 2,60,000 ಕೋಟಿ ರೂಪಾಯಿ ಮೊತ್ತವನ್ನು ವೆಚ್ಚ ಮಾಡಿದೆ ಎಂದರು.

ಕಳೆದ 9 ವರ್ಷಗಳಲ್ಲಿ ಕೇಂದ್ರ ಸರ್ಕಾರ ರೈತರ ವೆಚ್ಚವನ್ನು ಕಡಿಮೆ ಮಾಡಲು ಪ್ರಯತ್ನಿಸಿದೆ ಮತ್ತು ಸುಲಭದರದಲ್ಲಿ ರಸಗೊಬ್ಬರ ಪೂರೈಸಿದೆ. 9 ವರ್ಷಗಳಲ್ಲಿ 10 ಲಕ್ಷ ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ವೆಚ್ಚ ಮಾಡಿದೆ. ಅಮೆರಿಕದಲ್ಲಿ ರೈತರಿಗೆ ಯೂರಿಯಾ 3000  ರೂಪಾಯಿ ದರದಲ್ಲಿ ದೊರೆಯುತ್ತಿದ್ದು, ಭಾರತದಲ್ಲಿ ರೈತರಿಗೆ 300 ರೂಪಾಯಿ ದರದಲ್ಲಿ ಸಿಗುತ್ತಿದೆ. ಈ ಹಿಂದೆ ಯೂರಿಯಾ ಹಗರಣದ ಮೊತ್ತ ಸಹಸ್ರಾರು ಕೋಟಿ ರೂಪಾಯಿಗಳಾಗಿತ್ತು ಮತ್ತು ಇದೇ ಯೂರಿಯಾ ಇದೀಗ ಸುಲಭ ದರದಲ್ಲಿ ದೊರೆಯುತ್ತಿದೆ ಎಂದರು.  

ಬುಂದೇಲ್‌ ಖಂಡ್‌ ಗಿಂತ ಉತ್ತಮವಾದ ನೀರಾವರಿ ಸೌಲಭ್ಯ ನೋಡಲು ಸಾಧ್ಯವೇ. ಡಬಲ್‌ ಎಂಜಿನ್‌ ಸರ್ಕಾರ ಬುಂದೇಲ್‌ ಖಂಡ್‌ ನಲ್ಲಿ ನೀರಾವರಿ ವಲಯದಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ವಿಶೇಷವಾಗಿ ಪ್ರಸ್ತಾಪಿಸಿದರು. ಕೇನ್‌ - ಬೇತ್ವಾ ಸಂಪರ್ಕ ನಾಲೆ ಕುರಿತು ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು ಮತ್ತು ಇದರಿಂದ ಬುಂದೇಲ್‌ ಖಂಡ್ ವಲಯದ ಹಲವಾರು ಜಿಲ್ಲೆಗಳ ರೈತರಿಗೆ ಅನುಕೂಲವಾಗಿದೆ. ಪ್ರತಿಯೊಂದು ಮನೆಗೆ ಕೊಳಾಯಿ ಮೂಲಕ ನೀರು ಪೂರೈಸುತ್ತಿದ್ದು, ಕಳೆದ 4 ವರ್ಷಗಳಲ್ಲಿ ದೇಶದ 10 ಕೋಟಿ ಹೊಸ ಕುಟುಂಬಗಳು ಮತ್ತು ಮಧ್ಯಪ್ರದೇಶದ ಸುಮಾರು 65 ಲಕ್ಷ ಕುಟುಂಬಗಳಿಗೆ ಶುದ್ಧ ನೀರು ಪೂರೈಸಲಾಗಿದೆ. ಬುಂದೇಲ್‌ ಖಂಡ್‌ ನಲ್ಲಿ ದೊಡ್ಡ ಮಟ್ಟದಲ್ಲಿ ಕೆಲಸ ನಡೆಯುತ್ತಿದ್ದು, ಅಂತರ್ಜಲ ವೃದ್ಧಿಗಾಗಿ ಅಟಲ್‌ ಅಂತರ್ಜಲ ಯೋಜನೆ ಜಾರಿಯಲ್ಲಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

ಸರ್ಕಾರ ಈ ವಲಯದ ಸಂಪೂರ್ಣ ಅಭಿವೃದ್ಧಿಗೆ ಬದ್ಧವಾಗಿದೆ ಮತ್ತು “ರಾಣಿ ದುರ್ಗಾವತಿ ಅವರ 500 ನೇ ಜನ್ಮ ವರ್ಷಾಚರಣೆಯನ್ನು ಅತ್ಯಂತ ಆಡಂಬರದಿಂದ ಆಚರಿಸಲಾಗುವುದು ಮತ್ತು 2023 ರ ಅಕ್ಟೋಬರ್‌ 5 ರಂದು ನೀವು ಇದನ್ನು ನೋಡಲಿದ್ದೀರಿ” ಎಂದರು.

ತಮ್ಮ ಭಾಷಣದ ಕೊನೆಯಲ್ಲಿ ಪ್ರಧಾನಮಂತ್ರಿಯವರು, ದಲಿತರು, ಬಡವರು, ಹಿಂದುಳಿದ ವರ್ಗದವರು ಮತ್ತು ಬುಡಕಟ್ಟು ಜನತೆ ಸರ್ಕಾರದ ಬಹುತೇಕ ಕಾರ್ಯಕ್ರಮಗಳಲ್ಲಿ ಲಾಭ ಪಡೆಯುತ್ತಿದ್ದಾರೆ. ಸರ್ಕಾರ ಅವಕಾಶ ವಂಚಿತರಿಗೆ ಆದ್ಯತೆ ನೀಡುತ್ತಿದ್ದು, “ ಜಗತ್ತು ಇಂದು ʼಸಬ್ಕಾ ಸಾಥ್‌ ಸಬ್ಕಾ ವಿಕಾಸ್‌ʼ ಮಾದರಿಯನ್ನು ನೋಡುತ್ತಿದೆ”. ದೇಶ ಜಗತ್ತಿನ ಮೊದಲ ಮೂರು ಅಗ್ರ ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಗುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಉಲ್ಲೇಖಿಸಿದರು.  ರೈತರು, ಕೈಗಾರಿಕೆಗಳು ಮತ್ತು ಯುವ ಸಮೂಹಕ್ಕಾಗಿ ಸರ್ಕಾರ ಹೊಸ ಅವಕಾಶಗಳನ್ನು ಸೃಜಿಸಿದೆ. ಇಂದು ಆರಂಭಿಸಿರುವ ಯೋಜನೆಗಳಿಂದಾಗಿ ಅಭಿವೃದ್ಧಿಯಲ್ಲಿ ರಾಜ್ಯ ತ್ವರಿತ ಮುನ್ನಡೆ ಸಾಧಿಸಲಿದೆ. “ಮುಂದಿನ ಐದು ವರ್ಷಗಳಲ್ಲಿ ಮಧ್ಯಪ್ರದೇಶದ ಅಭಿವೃದ್ಧಿಯಲ್ಲಿ ಇದು ಹೊಸ ಎತ್ತರಕ್ಕೆ ಏರಲಿದೆ” ಎಂದು ಹೇಳಿದರು.

ಮಧ್ಯಪ್ರದೇಶ ರಾಜ್ಯಪಾಲರಾದ ಶ್ರೀ ಮಂಗುಭಾಯಿ ಪಟೇಲ್‌, ಮಧ್ಯಪ್ರದೇಶ ಮುಖ್ಯಮಂತ್ರಿ ‍ಶ್ರೀ ಶಿವರಾಜ್‌ ಸಿಂಗ್‌ ಚೌವ್ಹಾಣ್‌, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಶ್ರೀ ಹರ್ದೀಪ್‌ ಸಿಂಗ್‌ ಪುರಿ ಮತ್ತಿತರ ಗಣ್ಯರು ಪಾಲ್ಗೊಂಡರು.

ಹಿನ್ನೆಲೆ

ರಾಜ್ಯದಲ್ಲಿ ಕೈಗಾರಿಕಾಭಿವೃದ್ಧಿಗೆ ಉತ್ತೇಜನ ನೀಡುವ ಯೋಜನೆಗಳು ಇವಾಗಿದ್ದು, ಬಿನಾದಲ್ಲಿ ಪ್ರಧಾನಮಂತ್ರಿಯವರು ಭಾರತ್‌ ಪೆಟ್ರೋಲಿಯಂ ಲಿಮಿಟೆಡ್‌ ನ ಸಂಸ್ಕರಣಾ ಘಟಕ [ಬಿಪಿಸಿಎಲ್]‌ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದರು. ಇದು ಅತ್ಯಾಧುನಿಕ ಸಂಗ್ರಹಣಾಗಾರವಾಗಿದ್ದು, ಇದನ್ನು 49,000 ಕೋಟಿ ರೂಪಾಯಿ ಮೊತ್ತದಲ್ಲಿ ನಿರ್ಮಿಸಲಾಗುತ್ತಿದೆ. ಇದು ವಾರ್ಷಿಕ 1200 ಕೆಟಿಪಿಎ [ವಾರ್ಷಿಕ ಪ್ರತಿ ಕಿಲೋಟನ್‌]  ಎಥಿಲಿನ್‌ ಮತ್ತು ಪ್ರೊಪೋಲಿನ್‌ ಅನ್ನು ಉತ್ಪಾದಿಸಲಿದ್ದು, ಇದು ಜವಳಿ, ಪ್ಯಾಕೇಜಿಂಗ್‌, ಔಷಧ ಮತ್ತಿತರೆ ಕ್ಷೇತ್ರಗಳಿಗೆ ಪ್ರಮುಖ ಅಂಶಗಳಾಗಿವೆ. ಇದರಿಂದ ದೇಶದ ಆಮದು ಅವಲಂಬನೆ ತಗ್ಗಲಿದೆ ಮತ್ತು ಪ್ರಧಾನಮಂತ್ರಿಯವರ ʼಸ್ವಾವಲಂಬಿ ಭಾರತʼ ನಿರ್ಮಾಣದ ನಿರೀಕ್ಷೆಗಳನ್ನು ಸಾಕಾರಗೊಳಿಸಲಿದೆ. ಮೆಗಾ ಯೋಜನೆಯಿಂದ ಉದ್ಯೋಗ ಸೃಜನೆಯಾಗಲಿದೆ ಮತ್ತು ಪೆಟ್ರೋಲಿಯಂ ವಲಯದಲ್ಲಿ ಕೆಳ ಹಂತದ ಕೈಗಾರಿಕೆಗಳನ್ನು ಉತ್ತೇಜಿಸಲಿದೆ.  

ಮಧ್ಯಪ್ರದೇಶದ ನರ್ಮದಾಪುರಂನಲ್ಲಿ ವಿದ್ಯುತ್‌ ಮತ್ತು ನವೀಕೃತ ಇಂಧನ ಉತ್ಪಾದನಾ ವಲಯ ಮತ್ತು ರಾತಲಂನಲ್ಲಿ ಬೃಹತ್ ಕೈಗಾರಿಕಾ ಪಾರ್ಕ್‌ ಗೆ ಶಿಲಾನ್ಯಾಸ  ಇಂದೋರ್‌ ನಲ್ಲಿ ಎರಡು ಮಾಹಿತಿ ತಂತ್ರಜ್ಞಾನ ಪಾರ್ಕ್‌ ಮತ್ತು ರಾಜ್ಯದ ವಿವಿಧೆಡೆ ಆರು ಹೊಸ ಕೈಗಾರಿಕಾ ಪಾರ್ಕ್‌ ಗಳಿಗೆ ಪ್ರಧಾನಮಂತ್ರಿ ಅವರು ಶಂಕು ಸ್ಥಾಪನೆ ನೆರವೇರಿಸಿದರು.  

ನರ್ಮದಾಪುರಂನಲ್ಲಿ ʼವಿದ್ಯುತ್‌ ಮತ್ತು ನವೀಕೃತ ಇಂಧನ ಉತ್ಪಾದನಾ ವಲಯʼವನ್ನು 460 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತಿದ್ದು, ಇದರಿಂದ ಆರ್ಥಿಕ ಅಭಿವೃದ್ಧಿ ಮತ್ತು ಈ ವಲಯದಲ್ಲಿ ಉದ್ಯೋಗ ಸೃಜನೆಗೆ ಸಹಕಾರಿಯಾಗಲಿದೆ. ಇಂದೋರ್‌ ನಲ್ಲಿ ಮೂರು ಮತ್ತು ನಾಲ್ಕನೇ ಐಟಿ ಪಾರ್ಕ್‌ ಅನ್ನು 550 ಕೋಟಿ ರೂಪಾಯಿ ಮೊತ್ತದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಐಟಿ ಮತ್ತು ಐಟಿಇಎಸ್‌ ವಲಯಕ್ಕೆ ಪುಷ್ಟಿ ದೊರೆಯಲಿದೆ ಹಾಗೂ ಯುವ ಸಮೂಹಕ್ಕೆ ಉದ್ಯೋಗಾವಕಾಶಗಳು ತೆರೆದುಕೊಳ್ಳಲಿವೆ.

ರಾತಲಂನಲ್ಲಿ ಮೆಗಾ ಕೈಗಾರಿಕಾ ಪಾರ್ಕ್‌ ಅನ್ನು 460 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಮತ್ತು ಇದು ಜವಳಿ, ಆಟೋಮೊಬೈಲ್ಸ್‌ ಮತ್ತು ಔಷಧ ವಲಯದ ಪ್ರಮುಖ ತಾಣವಾಗಲಿದೆ. ಈ ಪಾರ್ಕ್‌ ದೆಹಲಿ – ಮುಂಬೈ ಎಕ್ಸ್‌ ಪ್ರೆಸ್‌ ಹೆದಾರಿಯನ್ನು ಸಂಪರ್ಕಿಸಲಿದೆ. ಸಂಪೂರ್ಣ ವಲಯದಲ್ಲಿ ಆರ್ಥಿಕಾಭಿವೃದ್ಧಿಗೆ ಪುಷ್ಟಿ ದೊರೆಯಲಿದ್ದು, ಯುವ ಜನಾಂಗಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯೋಗ ಸೃಜನೆಯಾಗಲಿದೆ.  

ಸಮತೋಲಿತ ವಲಯಾಭಿವೃದ್ಧಿ ಮತ್ತು ಏಕರೂಪದ ಉದ್ಯೋಗಾವಕಾಶಗ ಸೃಜನೆಗೆ ರಾಜ್ಯದಲ್ಲಿ ಉತ್ತೇಜನ ನೀಡುವುದು ಇದರ ಗುರಿಯಾಗಿದ್ದು, ಶಾಜಪುರ್‌, ಗುನ, ಮೌಗುನ, ಅಗರ್‌ ಮಾಲ್ವಾ, ನರ್ಮದಾಪುರಂ ಮತ್ತು ಮಸ್ಕಿ ಪ್ರದೇಶದಲ್ಲಿ ಆರು ಕೈಗಾರಿಕಾ ಪ್ರದೇಶಗಳನ್ನು 310 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

***


(Release ID: 1958395) Visitor Counter : 119