ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಭಾರತದ ರಾಷ್ಟ್ರಪತಿಯವರು ಮಹಾತ್ಮ ಗಾಂಧಿಜೀಯವರ 12 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಿದರು  ಮತ್ತು ಗಾಂಧಿ ದರ್ಶನದಲ್ಲಿ 'ಗಾಂಧಿ ವಾಟಿಕಾ'ವನ್ನು ಉದ್ಘಾಟಿಸಿದರು

Posted On: 04 SEP 2023 1:43PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಸೆಪ್ಟೆಂಬರ್ 4, 2023) ನವದೆಹಲಿಯ ಗಾಂಧಿ ದರ್ಶನದಲ್ಲಿ ಮಹಾತ್ಮ ಗಾಂಧಿಯವರ 12 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಿದರು ಮತ್ತು 'ಗಾಂಧಿ ವಾಟಿಕಾ'ವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಯವರು, "ಮಹಾತ್ಮಾ ಗಾಂಧಿಜೀಯವರು ಇಡೀ ವಿಶ್ವ ಸಮುದಾಯಕ್ಕೆ ವರದಾನವಾಗಿದ್ದಾರೆ.  ಅವರ ಆದರ್ಶಗಳು ಮತ್ತು ಮೌಲ್ಯಗಳು ಇಡೀ ಜಗತ್ತಿಗೆ ಹೊಸ ದಿಕ್ಕನ್ನು ನೀಡಿವೆ.  ಮಹಾಯುದ್ಧಗಳ ಕಾಲದಲ್ಲಿ ಜಗತ್ತು ಹಲವಾರು ರೀತಿಯ ದ್ವೇಷ ಮತ್ತು ವೈಷಮ್ಯಗಳಿಂದ ಬಳಲುತ್ತಿದ್ದ ಸಮಯದಲ್ಲಿ ಅವರು ಅಹಿಂಸೆಯ ಮಾರ್ಗವನ್ನು ತೋರಿಸಿದರು.  ಗಾಂಧೀಜಿಯವರ ಸತ್ಯ ಮತ್ತು ಅಹಿಂಸೆಯ ಪ್ರಯೋಗವು ಅವರಿಗೆ ಶ್ರೇಷ್ಠ ಮಾನವನ ಸ್ಥಾನಮಾನವನ್ನು ನೀಡಿತು" ಎಂದು ಅವರು ಹೇಳಿದರು.  

"ಗಾಂದೀಜೀಯವರ ಪ್ರತಿಮೆಗಳನ್ನು ಅನೇಕ ದೇಶಗಳಲ್ಲಿ ಸ್ಥಾಪಿಸಲಾಗಿದೆ ಮತ್ತು ಪ್ರಪಂಚದಾದ್ಯಂತದ ಜನರು ಅವರ ಆದರ್ಶಗಳನ್ನು ನಂಬುತ್ತಾರೆ" ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ. " ಗಾಂಧೀಜೀಯವರು ತೋರಿಸಿದ ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ಲೋಕಕಲ್ಯಾಣದ ಮಾರ್ಗವೆಂದು ನೆಲ್ಸನ್ ಮಂಡೇಲಾ, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಮತ್ತು ಬರಾಕ್ ಒಬಾಮಾ ಮುಂತಾದ ಅನೇಕ ಮಹಾನ್ ನಾಯಕರು ಪರಿಗಣಿಸಿದ್ದಾರೆ" ಎಂದು ಅವರು ಹೇಳಿದರು.  "ಗಾಂಧೀಜೀಯವರು ತೋರಿದ ಮಾರ್ಗದಲ್ಲಿ ನಡೆಯುವುದರಿಂದ ವಿಶ್ವಶಾಂತಿಯ ಗುರಿಯನ್ನು ಸಾಧಿಸಬಹುದು" ಎಂದು ರಾಷ್ಟ್ರಪತಿಯವರು ಹೇಳಿದರು.

 "ಗಾಂಧೀಜಿಯವರು ಸಾರ್ವಜನಿಕವಾಗಿ ಹಾಗೂ ವೈಯಕ್ತಿಕ ಜೀವನದಲ್ಲಿ ಪಾವಿತ್ರ್ಯತೆಗೆ ಹೆಚ್ಚಿನ ಒತ್ತು ನೀಡಿದ್ದರು. ನೈತಿಕ ಬಲದ ಆಧಾರದ ಮೇಲೆ ಮಾತ್ರ ಹಿಂಸೆಯನ್ನು ಅಹಿಂಸೆಯ ಮೂಲಕ ಎದುರಿಸಬಹುದು ಎಂದು ಅವರು ನಂಬಿದ್ದರು.  ಆತ್ಮವಿಶ್ವಾಸವಿಲ್ಲದೆ, ಪ್ರತಿಕೂಲ ಪರಿಸ್ಥಿತಿಗಳಲ್ಲಿ ಪರಿಶ್ರಮದಿಂದ ವರ್ತಿಸಲು ಸಾಧ್ಯವಿಲ್ಲ ಎಂದು ಅವರು ಆಗಾಗ ಹೇಳುತ್ತಿದ್ದರು.  ಇಂದಿನ ವೇಗವಾಗಿ ಬದಲಾಗುತ್ತಿರುವ ಮತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ ಆತ್ಮ ವಿಶ್ವಾಸ ಮತ್ತು ಸಂಯಮದ ಅವಶ್ಯಕತೆಯಿದೆ , ಇದನ್ನು ಗಾಂಧೀಜಿ ಪ್ರತಿಪಾದಿಸಿ ತೋರಿಸಿದ್ದರು" ಎಂದು ರಾಷ್ಟ್ರಪತಿಯವರು ಹೇಳಿದರು.

"ಗಾಂಧೀಜಿಯವರ ಆದರ್ಶಗಳು ಮತ್ತು ಮೌಲ್ಯಗಳು ನಮ್ಮ ದೇಶ ಮತ್ತು ಸಮಾಜಕ್ಕೆ ಬಹಳ ಪ್ರಸ್ತುತವಾಗಿವೆ" ಎಂದು ರಾಷ್ಟ್ರಪತಿಯವರು ಹೇಳಿದರು. " ಪ್ರತಿಯೊಬ್ಬ ನಾಗರಿಕರು, ವಿಶೇಷವಾಗಿ ಯುವಕರು ಮತ್ತು ಮಕ್ಕಳು ಗಾಂಧೀಜಿಯವರ ಬಗ್ಗೆ ಸಾಧ್ಯವಾದಷ್ಟು ಓದಲು ಮತ್ತು ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸಬೇಕೆಂದು ರಾಷ್ಟ್ರಪತಿಯವರು  ಒತ್ತಾಯಿಸಿದರು.  "ಈ ನಿಟ್ಟಿನಲ್ಲಿ ಗಾಂಧಿ ಸ್ಮೃತಿ ಮತ್ತು ದರ್ಶನ ಸಮಿತಿ ಮತ್ತು ಇತರ ಸಂಸ್ಥೆಗಳ ಪಾತ್ರ ಬಹಳ ಮುಖ್ಯವಾಗಿದೆ. ಪುಸ್ತಕಗಳು, ಚಲನಚಿತ್ರಗಳು, ವಿಚಾರ ಸಂಕಿರಣಗಳು, ವ್ಯಂಗ್ಯಚಿತ್ರಗಳು ಮತ್ತು ಇತರ ಮಾಧ್ಯಮಗಳ ಮೂಲಕ ಗಾಂಧೀಜಿಯವರ ಜೀವನ ಬೋಧನೆಗಳ ಬಗ್ಗೆ ಯುವಕರು ಮತ್ತು ಮಕ್ಕಳಿಗೆ ಹೆಚ್ಚು ಅರಿವು ಮೂಡಿಸುವ ಮೂಲಕ ಗಾಂಧೀಜಿಯವರ ಕನಸಿನ ಭಾರತವನ್ನು ನಿರ್ಮಿಸುವಲ್ಲಿ ಈ ಸಂಸ್ಥೆ ಗಣನೀಯ ಕೊಡುಗೆ ನೀಡಬಹುದು ಎಂದು ರಾಷ್ಟ್ರಪತಿಯವರು ಹೇಳಿದರು.

ರಾಷ್ಟ್ರಪತಿಯವರ ಭಾಷಣವನ್ನು ನೋಡಲು ದಯವಿಟ್ಟು ಇಲ್ಲಿರುವ ಕೊಂಡಿಯನ್ನು ಕ್ಲಿಕ್ ಮಾಡಿ -

****


(Release ID: 1954641) Visitor Counter : 299