ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಲೋಕಸಭೆಯಲ್ಲಿ ʻಭಾರತೀಯ ನ್ಯಾಯ ಸಂಹಿತಾ ಮಸೂದೆ-2023ʼ, ʻಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮಸೂದೆ-2023ʼ ಮತ್ತು ʻಭಾರತೀಯ ಸಾಕ್ಷ್ಯ ಮಸೂದೆ-2023ʼ ಅನ್ನು ಮಂಡಿಸಿದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಗಸ್ಟ್ 15 ರಂದು ದೇಶದ ಮುಂದೆ ಕೈಗೊಂಡ ಐದು ʻಪ್ರಾಣʼಗಳಲ್ಲಿ ಒಂದು - ಗುಲಾಮಗಿರಿಯ ಎಲ್ಲಾ ಚಿಹ್ನೆಗಳನ್ನು ಕೊನೆಗೊಳಿಸುವುದು - ಇಂದಿನ ಈ ಮೂರು ಮಸೂದೆಗಳು ಶ್ರೀ ಮೋದಿಯವರ ಈ ಸಂಕಲ್ಪವನ್ನು ಈಡೇರಿಸಲಿವೆ
ಇಂದು ನಾವು ಬ್ರಿಟಿಷರು ಜಾರಿಗೆ ತಂದಿದ್ದ ಮತ್ತು ಬ್ರಿಟಿಷ್ ಸಂಸತ್ತು ಅಂಗೀಕರಿಸಿದ್ದ ʻಭಾರತೀಯ ದಂಡ ಸಂಹಿತೆ-1860ʼ, ʻಕ್ರಿಮಿನಲ್ ಪ್ರೊಸೀಜರ್ ಕೋಡ್ (1898),- 1973ʼ ಮತ್ತು ʻಭಾರತೀಯ ಸಾಕ್ಷ್ಯ ಕಾಯ್ದೆ-1872ʼ ಅನ್ನು ರದ್ದುಗೊಳಿಸುವ ಮೂಲಕ 3 ಹೊಸ ಮಸೂದೆಗಳನ್ನು ತಂದಿದ್ದೇವೆ
ʻಭಾರತೀಯ ದಂಡ ಸಂಹಿತೆ-1860ʼ ಸ್ಥಾನವನ್ನು ʻಭಾರತೀಯ ನ್ಯಾಯ ಸಂಹಿತಾ ಮಸೂದೆ- 2023ʼ, ʻಕ್ರಿಮಿನಲ್ ಪ್ರೊಸೀಜರ್ ಕೋಡ್-1898ʼ ಸ್ಥಾನವನ್ನು ʻಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮಸೂದೆ-2023ʼ ಮತ್ತು ʻಭಾರತೀಯ ಸಾಕ್ಷ್ಯ ಕಾಯ್ದೆ-1872ʼ ಸ್ಥಾನವನ್ನು ʻಭಾರತೀಯ ಸಾಕ್ಷ್ಯ ಮಸೂದೆ-2023ʼ ತುಂಬಲಿವೆ
ರದ್ದತಿಗೆ ಉದ್ದೇಶಿಸಲಾದ ಈ ಮೂರು ಕಾನೂನುಗಳನ್ನು ಬ್ರಿಟಿಷ್ ಆಡಳಿತವನ್ನು ಬಲಪಡಿಸಲು ಮತ್ತು ರಕ್ಷಿಸಲು ರೂಪಿಸಲಾಗಿತ್ತು, ಅವುಗಳ ಉದ್ದೇಶ ಶಿಕ್ಷೆ ನೀಡುವುದು ಆಗಿತ್ತೇ ಹೊರತು, ನ್ಯಾಯವನ್ನು ನೀಡುವುದಲ್ಲ
ಸಂವಿಧಾನವು ಭಾರತೀಯ ನಾಗರಿಕರಿಗೆ ನೀಡಿರುವ ಎಲ್ಲಾ ಹಕ್ಕುಗಳನ್ನು ರಕ್ಷಿಸುವುದೇ ಮೂರು ಹೊಸ ಕಾನೂನುಗಳ ಮೂಲ ಉದ್ದೇಶವಾಗಿದೆ. ಇವುಗಳ ಉದ್ದೇಶವು ಶಿಕ್ಷಿಸುವುದಲ್ಲ, ಬದಲಿಗೆ ನ್ಯಾಯವನ್ನು ನೀಡುವುದು
ಭಾರತೀಯ ಚಿಂತನಾ ವಿಧಾನದೊಂದಿಗೆ ರೂಪಿಸಲಾದ ಈ ಮೂರು ಕಾನೂನುಗಳು ನಮ್ಮ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಯನ್ನು ತರಲಿವೆ
ಆಡಳಿತದ ಬದಲು ನಾಗರಿಕರನ್ನು ಕೇಂದ್ರ ಸ್ಥಾನದಲ್ಲಿರಿಸಲು ಮೋದಿ ಸರ್ಕಾರವು ಬಹಳ ತಾತ್ವಿಕ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ಈ ಕಾನೂನನ್ನು ತಂದಿದೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2019ರಲ್ಲಿ, ಬ್ರಿಟಿಷರ ಕಾಲದಲ್ಲಿ ಎಲ್ಲಾ ಇಲಾಖೆಗಳಲ್ಲಿ ಮಾಡಿದ ಎಲ್ಲಾ ಕಾನೂನುಗಳನ್ನು ಇಂದಿನ ಸಮಯಕ್ಕೆ ಅನುಗುಣವಾಗಿ ಬದಲಾಯಿಸಬೇಕು, ಜೊತೆಗೆ ಭಾರತೀಯ ಸಮಾಜದ ಹಿತದೃಷ್ಟಿಯಿಂದ ಸಾಕಷ್ಟು ಚರ್ಚೆ ಮತ್ತು ಪರಿಗಣನೆಯ ನಂತರ ಅವುಗಳನ್ನು ರೂಪಿಸಬೇಕು ಎಂದು ಹೇಳಿದ್ದರು
18 ರಾಜ್ಯಗಳು, 6 ಕೇಂದ್ರಾಡಳಿತ ಪ್ರದೇಶಗಳು, ಸುಪ್ರೀಂ ಕೋರ್ಟ್, 16 ಹೈಕೋರ್ಟ್ಗಳು, 5 ನ್ಯಾಯಾಂಗ ಅಕಾಡೆಮಿಗಳು, 22 ಕಾನೂನು ವಿಶ್ವವಿದ್ಯಾಲಯಗಳು, 142 ಸಂಸತ್ ಸದಸ್ಯರು, ಸುಮಾರು 270 ಶಾಸಕರು ಮತ್ತು ಸಾರ್ವಜನಿಕರು ಈ ಹೊಸ ಕಾನೂನುಗಳ ಬಗ್ಗೆ ತಮ್ಮ ಸಲಹೆಗಳನ್ನು ನೀಡಿದ್ದಾರೆ
4 ವರ್ಷಗಳ ಕಾಲ ಈ ಕಾನೂನುಗಳ ಬಗ್ಗೆ ತೀವ್ರ ಚರ್ಚೆಗಳು ನಡೆದಿವೆ ಮತ್ತು 158 ಸಮಾಲೋಚನಾ ಸಭೆಗಳಲ್ಲಿ ಸ್ವತಃ ನಾನು ಭಾಗವಹಿಸಿದ್ದೇನೆ ಎಂದು ಗೃಹ ಸಚಿವರು ಹೇಳಿದರು
Posted On:
11 AUG 2023 7:32PM by PIB Bengaluru
ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಲೋಕಸಭೆಯಲ್ಲಿ ʻಭಾರತೀಯ ನ್ಯಾಯ ಸಂಹಿತಾ ಮಸೂದೆ- 2023ʼ, ʻಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮಸೂದೆ-2023ʼ ಮತ್ತು ʻಭಾರತೀಯ ಸಾಕ್ಷ್ಯ ಮಸೂದೆ- 2023ʼ ಅನ್ನು ಮಂಡಿಸಿದರು.
ಇಂದು ʻಆಜಾದಿ ಕಾ ಅಮೃತ ಮಹೋತ್ಸವʼ ಮುಕ್ತಾಯಗೊಳ್ಳುತ್ತಿದೆ ಮತ್ತು ʻಅಮೃತಕಾಲʼ ಆರಂಭವಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ʻಆಜಾದಿ ಕಾ ಅಮೃತ ಮಹೋತ್ಸವʼವು ಆಗಸ್ಟ್ 15 ರಂದು ಕೊನೆಗೊಳ್ಳಲಿದ್ದು, ಸ್ವಾತಂತ್ರ್ಯದ 75 ರಿಂದ 100 ವರ್ಷಗಳ ಪ್ರಯಾಣವು ಆಗಸ್ಟ್ 16ರಿಂದ ಪ್ರಾರಂಭವಾಗಲಿದೆ. ಇದು ʻಶ್ರೇಷ್ಠ ಭಾರತʼ ಸೃಷ್ಟಿಗೆ ದಾರಿ ಮಾಡಲಿದೆ. ಆಗಸ್ಟ್ 15 ರಂದು ಕೆಂಪು ಕೋಟೆಯ ಕೊತ್ತಲಗಳಿಂದ ಮಾಡಿದ ಭಾಷಣದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ʻಪಂಚ ಪ್ರಾಣʼವನ್ನು ದೇಶದ ಜನರ ಮುಂದಿರಿಸಿದ್ದರು. ಇವುಗಳ ಪೈಕಿ ಗುಲಾಮಗಿರಿಯ ಎಲ್ಲಾ ಚಿಹ್ನೆಗಳನ್ನು ಕೊನೆಗೊಳಿಸುವುದು ಸಹ ಒಂದಾಗಿತ್ತು. ಇಂದು ಪರಿಚಯಿಸಲಾದ ಈ ಮೂರು ಮಸೂದೆಗಳು ಮೋದಿ ಅವರು ಕೈಗೊಂಡ ಐದು ಸಂಕಲ್ಪಗಳಲ್ಲಿ ಒಂದನ್ನು ಈಡೇರಿಸುತ್ತವೆ ಎಂದು ಅಮಿತ್ ಶಾ ಹೇಳಿದರು. ಈ ಎಲ್ಲಾ ಮೂರು ಮಸೂದೆಗಳು ಕ್ರಿಮಿನಲ್ ನ್ಯಾಯ ವ್ಯವಸ್ಥೆಗೆ ಅಗತ್ಯವಾದ ಮೂಲಭೂತ ಕಾನೂನುಗಳನ್ನು ಹೊಂದಿವೆ. ಇಂದು ನಾವು ಬ್ರಿಟಿಷ್ ಸಂಸತ್ತು ಅಂಗೀಕರಿಸಿದ್ದ ʻಭಾರತೀಯ ದಂಡ ಸಂಹಿತೆ-1860ʼ, ʻಕ್ರಿಮಿನಲ್ ಪ್ರೊಸೀಜರ್ ಕೋಡ್(1898)-1973ʼ ಮತ್ತು ʻಭಾರತೀಯ ಸಾಕ್ಷ್ಯ ಕಾಯ್ದೆ-1872ʼ ಅನ್ನು ರದ್ದುಗೊಳಿಸುವ ಮೂಲಕ ಮೂರು ಹೊಸ ಕಾನೂನುಗಳನ್ನು ತಂದಿದ್ದೇವೆ ಎಂದು ಅವರು ಹೇಳಿದರು. ʻಭಾರತೀಯ ದಂಡ ಸಂಹಿತೆ-1860ʼ ಸ್ಥಾನವನ್ನು ʻಭಾರತೀಯ ನ್ಯಾಯ ಸಂಹಿತಾ ಮಸೂದೆ-2023ʼ, ʻಕ್ರಿಮಿನಲ್ ಪ್ರೊಸೀಜರ್ ಕೋಡ್-1898ʼ ಸ್ಥಾನವನ್ನು ʻಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮಸೂದೆ-2023ʼ ಮತ್ತು ʻಭಾರತೀಯ ಸಾಕ್ಷ್ಯ ಕಾಯ್ದೆ-1872ʼ ಸ್ಥಾನವನ್ನು ʻಭಾರತೀಯ ಸಾಕ್ಷ್ಯ ಮಸೂದೆ-2023ʼ ತುಂಬಲಿವೆ. ಬದಲಾವಣೆಗೆ ಒಳಗಾದ ಈ ಮೂರು ಕಾಯಿದೆಗಳನ್ನು ಬ್ರಿಟಿಷ್ ಆಡಳಿತವನ್ನು ಬಲಪಡಿಸಲು ಮತ್ತು ರಕ್ಷಿಸಲು ರೂಪಿಸಲಾಗಿತ್ತು. ಅವುಗಳ ಉದ್ದೇಶ ಶಿಕ್ಷೆ ನೀಡುವುದಾಗಿತ್ತೇ ಹೊರತು ನ್ಯಾಯವನ್ನು ನೀಡುವುದಾಗಿರಲಿಲ್ಲ. ಈ ಎರಡೂ ಮೂಲಭೂತ ಅಂಶಗಳಲ್ಲಿ ನಾವು ಬದಲಾವಣೆಗಳನ್ನು ತರಲಿದ್ದೇವೆ. ಸಂವಿಧಾನವು ಭಾರತೀಯ ನಾಗರಿಕರಿಗೆ ನೀಡಿರುವ ಎಲ್ಲಾ ಹಕ್ಕುಗಳನ್ನು ರಕ್ಷಿಸುವುದು ಈ ಮೂರು ಹೊಸ ಕಾನೂನುಗಳ ಮೂಲ ಉದ್ದೇಶವಾಗಿದೆ. ಇವುಗಳ ಹಿಂದಿನ ಉದ್ದೇಶವು ನ್ಯಾಯ ನೀಡುವುದೇ ಹೊರತು ಶಿಕ್ಷಿಸುವುದಲ್ಲ. ಈ ಪ್ರಕ್ರಿಯೆಯಲ್ಲಿ ಅಪರಾಧವನ್ನು ಮಾಡದಂತೆ ತಡೆಯಲು ಎಚ್ಚರ ಮೂಡಿಸಲು ಅಗತ್ಯವಿರುವಲ್ಲಿ ಶಿಕ್ಷೆಯನ್ನು ನೀಡಲಾಗುವುದು ಎಂದು ಶ್ರೀ ಅಮಿತ್ ಶಾ ಮಾಹಿತಿ ನೀಡಿದರು.
1860 ರಿಂದ 2023ರವರೆಗೆ, ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಬ್ರಿಟಿಷ್ ಸಂಸತ್ತು ಮಾಡಿದ ಕಾನೂನುಗಳ ಆಧಾರದ ಮೇಲೆ ನಿರ್ವಹಿಸಲಾಗುತ್ತಿತ್ತು. ಆದರೆ ಈಗ ಈ ಮೂರು ಕಾನೂನುಗಳನ್ನು ಭಾರತೀಯ ಆತ್ಮವನ್ನು ಒಳಗೊಂಡ ಹೊಸ ಕಾನೂನುಗಳೊಂದಿಗೆ ಬದಲಾಯಿಸಲಾಗುವುದು. ಇದು ನಮ್ಮ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಯನ್ನು ತರುತ್ತದೆ ಎಂದು ಕೇಂದ್ರ ಗೃಹ ಸಚಿವರು ಲೋಕಸಭೆಗೆ ಭರವಸೆ ನೀಡಿದರು. ಪ್ರಸ್ತುತ ಕಾನೂನುಗಳಲ್ಲಿ ಕೊಲೆ ಅಥವಾ ಮಹಿಳೆಯರ ವಿರುದ್ಧದ ಅಪರಾಧದಂತಹ ಘೋರ ಅಪರಾಧಗಳ ಕುರಿತಾದ ನಿಬಂಧನೆಗಳ ಪ್ರಮಾಣ ಬಹಳ ಕಡಿಮೆ ಇದೆ. ದೇಶದ್ರೋಹ, ದರೋಡೆ ಮತ್ತು ಸರ್ಕಾರದ ಅಧಿಕಾರಿಯ ಮೇಲಿನ ಹಲ್ಲೆಯಂತಹ ಅಪರಾಧಗಳಿಗೆ ಇವುಗಳಿಗಿಂತ ದೊಡ್ಡ ಸ್ಥಾನ ನೀಡಲಾಗಿದೆ ಅವರು ಹೇಳಿದರು. ನಾವು ಈ ವಿಧಾನವನ್ನು ಬದಲಾಯಿಸುತ್ತಿದ್ದೇವೆ ಮತ್ತು ಈ ಹೊಸ ಕಾನೂನುಗಳ ಮೊದಲ ಅಧ್ಯಾಯವು ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳ ಬಗ್ಗೆ ಇರುತ್ತದೆ ಎಂದು ಅವರು ಹೇಳಿದರು. ಎರಡನೇ ಅಧ್ಯಾಯವು ಕೊಲೆ / ನರಹತ್ಯೆ ಮತ್ತು ಮಾನವ ದೇಹದೊಂದಿಗಿನ ಅಪರಾಧದ ಬಗ್ಗೆ ಇರುತ್ತದೆ. ಆಡಳಿತದ ಬದಲು ನಾಗರಿಕರನ್ನು ಕೇಂದ್ರ ಸ್ಥಾನದಲ್ಲಿರಿಸುವ ಅತ್ಯಂತ ತಾತ್ವಿಕ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ನಾವು ಈ ಕಾನೂನನ್ನು ತಂದಿದ್ದೇವೆ ಎಂದು ಸಚಿವರು ವಿವರಿಸಿದರು.
ಈ ಕಾನೂನುಗಳನ್ನು ರೂಪಿಸುವಲ್ಲಿ ದೀರ್ಘ ಪ್ರಕ್ರಿಯೆಯನ್ನು ಅನುಸರಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. 2019ರಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬ್ರಿಟಿಷರ ಕಾಲದಲ್ಲಿ ಎಲ್ಲಾ ಇಲಾಖೆಗಳಲ್ಲಿ ಮಾಡಿದ ಎಲ್ಲಾ ಕಾನೂನುಗಳನ್ನು ಪ್ರಸ್ತುತ ಸಮಯಕ್ಕೆ ಅನುಗುಣವಾಗಿ ಬದಲಾಯಿಸಬೇಕು ಮತ್ತು ಭಾರತೀಯ ಸಮಾಜದ ಹಿತದೃಷ್ಟಿಯಿಂದ ಚರ್ಚಿಸಿ, ಪರಿಶೀಲಿಸಬೇಕು ಎಂದು ನಮ್ಮೆಲ್ಲರಿಗೂ ಮಾರ್ಗದರ್ಶನ ನೀಡಿದ್ದರು. ಈ ಕಾನೂನುಗಳನ್ನು ಮಾಡಲು ಎಲ್ಲೆಡೆ ವ್ಯಾಪಕ ಸಮಾಲೋಚನೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ 2019ರ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್‌ನ ಎಲ್ಲಾ ನ್ಯಾಯಮೂರ್ತಿಗಳು, ದೇಶದ ಎಲ್ಲಾ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು ಮತ್ತು ದೇಶದ ಎಲ್ಲಾ ಕಾನೂನು ವಿಶ್ವವಿದ್ಯಾಲಯಗಳಿಗೆ ಪತ್ರಗಳನ್ನು ಬರೆದಿದ್ದೇನೆ ಎಂದು ಅಮಿತ್ ಶಾ ತಿಳಿಸಿದರು. 2020ರಲ್ಲಿ, ಎಲ್ಲಾ ಸಂಸದರು, ಮುಖ್ಯಮಂತ್ರಿಗಳು, ರಾಜ್ಯಪಾಲರು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಾರರಿಗೆ ಪತ್ರಗಳನ್ನು ಬರೆಯಲಾಯಿತು. ವ್ಯಾಪಕ ಸಮಾಲೋಚನೆಯ ನಂತರ, ಇಂದು ಈ ಪ್ರಕ್ರಿಯೆಯು ಕಾನೂನಾಗಿ ಬದಲಾಗಲಿದೆ. 18 ರಾಜ್ಯಗಳು, 6 ಕೇಂದ್ರಾಡಳಿತ ಪ್ರದೇಶಗಳು, ಸುಪ್ರೀಂ ಕೋರ್ಟ್, 16 ಹೈಕೋರ್ಟ್ಗಳು, 5 ನ್ಯಾಯಾಂಗ ಅಕಾಡೆಮಿಗಳು, 22 ಕಾನೂನು ವಿಶ್ವವಿದ್ಯಾಲಯಗಳು, 142 ಸಂಸತ್ ಸದಸ್ಯರು, ಸುಮಾರು 270 ಶಾಸಕರು ಮತ್ತು ಸಾರ್ವಜನಿಕರು ಈ ಹೊಸ ಕಾನೂನುಗಳಿಗೆ ಸಂಬಂಧಿಸಿದಂತೆ ತಮ್ಮ ಸಲಹೆಗಳನ್ನು ನೀಡಿದ್ದಾರೆ ಎಂದು ಅವರು ಹೇಳಿದರು. 4 ವರ್ಷಗಳ ಕಾಲ ಇವುಗಳನ್ನು ಆಳವಾಗಿ ಚರ್ಚಿಸಲಾಗಿದೆ ಮತ್ತು 158 ಸಭೆಗಳಲ್ಲಿ ಸ್ವತಃ ನಾನೇ ಹಾಜರಾಗಿದ್ದೇನೆ ಎಂದು ಶ್ರೀ ಶಾ ಅವರು ಹೇಳಿದರು.
ʻಸಿಆರ್‌ಪಿಸಿʼಯ ಸ್ಥಾವನ್ನು ತುಂಬಲಿರುವ ಹೊಸ ʻಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮಸೂದೆʼಯು ಈಗ 533 ವಿಭಾಗಗಳನ್ನು ಹೊಂದಿರುತ್ತದೆ, 160 ವಿಭಾಗಗಳನ್ನು ಬದಲಾಯಿಸಲಾಗಿದೆ, 9 ಹೊಸ ವಿಭಾಗಗಳನ್ನು ಸೇರಿಸಲಾಗಿದೆ ಮತ್ತು 9 ವಿಭಾಗಗಳನ್ನು ರದ್ದುಪಡಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ʻಐಪಿಸಿʼಯನ್ನು ಬದಲಿಸಲಿರುವ ʻಭಾರತೀಯ ನ್ಯಾಯ ಸಂಹಿತಾ ಮಸೂದೆʼಯು ಹಿಂದಿನ 511 ವಿಭಾಗಗಳ ಬದಲು 356 ವಿಭಾಗಗಳನ್ನು ಹೊಂದಿರುತ್ತದೆ, 175 ವಿಭಾಗಗಳನ್ನು ತಿದ್ದುಪಡಿ ಮಾಡಲಾಗಿದೆ, 8 ಹೊಸ ವಿಭಾಗಗಳನ್ನು ಸೇರಿಸಲಾಗಿದೆ ಮತ್ತು 22 ವಿಭಾಗಗಳನ್ನು ರದ್ದುಪಡಿಸಲಾಗಿದೆ. ʻಸಾಕ್ಷ್ಯ ಕಾಯ್ದೆʼಯನ್ನು ಬದಲಿಸಲಿರುವ ʻಭಾರತೀಯ ಸಾಕ್ಷ್ಯ ಮಸೂದೆʼಯು ಹಿಂದಿನ 167ರ ಬದಲು ಈಗ 170 ವಿಭಾಗಗಳನ್ನು ಹೊಂದಿರುತ್ತದೆ, 23 ವಿಭಾಗಗಳನ್ನು ಬದಲಾಯಿಸಲಾಗಿದೆ, 1 ಹೊಸ ವಿಭಾಗವನ್ನು ಸೇರಿಸಲಾಗಿದೆ ಮತ್ತು 5 ವಿಭಾಗಗಳನ್ನು ರದ್ದುಪಡಿಸಲಾಗಿದೆ ಎಂದು ಅಮಿತ್ ಶಾ ಮಾಹಿತಿ ನೀಡಿದರು.
ಈ ಮೂರು ಹಳೆಯ ಕಾನೂನುಗಳು ಗುಲಾಮಗಿರಿಯ ಚಿಹ್ನೆಗಳಿಂದ ತುಂಬಿವೆ. ಬ್ರಿಟಿಷ್ ಸಂಸತ್ತು ಅವುಗಳನ್ನು ಅಂಗೀಕರಿಸಿದೆ ಮತ್ತು ನಾವು ಅವುಗಳನ್ನು ಅಳವಡಿಸಿಕೊಂಡಿದ್ದೇವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಈ ಕಾನೂನುಗಳು ಬ್ರಿಟನ್ ಸಂಸತ್ತು, ಅಲ್ಲಿನ ಪ್ರಾಂತೀಯ ಕಾಯ್ದೆಗಳು, ಕ್ರೌನ್ ಪ್ರತಿನಿಧಿಯ ಅಧಿಸೂಚನೆಗಳು, ಲಂಡನ್ ಗೆಜೆಟ್, ತೀರ್ಪುಗಾರರು ಮತ್ತು ಬ್ಯಾರಿಸ್ಟರ್‌ಗಳು, ಲಾಹೋರ್ ಸರ್ಕಾರ, ಕಾಮನ್ವೆಲ್ತ್ ನಿರ್ಣಯಗಳು, ಯುನೈಟೆಡ್ ಕಿಂಗ್ಡಮ್ ಆಫ್ ಗ್ರೇಟ್ ಬ್ರಿಟನ್ ಮತ್ತು ಐರ್ಲೆಂಡ್ ಸಂಸತ್ತನ್ನು ಉಲ್ಲೇಖಿಸುತ್ತವೆ. ಈ ಕಾನೂನುಗಳು ʻಹರ್ ಮೆಜೆಸ್ಟಿಸ್ʼ ಮತ್ತು ʻಪ್ರಿವಿ ಕೌನ್ಸಿಲ್ʼ ಉಲ್ಲೇಖಗಳನ್ನು ಒಳಗೊಂಡಿವೆ. ಈ ಕಾನೂನುಗಳು ಲಂಡನ್ ಗೆಜೆಟ್‌ನಲ್ಲಿನ ಪ್ರತಿಗಳು ಮತ್ತು ಸಾರಗಳ ವಿಷಯವನ್ನು ಆಧರಿಸಿವೆ. ಅಲ್ಲದೆ, ಬ್ರಿಟಿಷ್ ಸಿಂಹಾಸನ, ʻಇಂಗ್ಲೆಂಡ್ ಕೋರ್ಟ್ ಆಫ್ ಜಸ್ಟೀಸ್ʼ ಮತ್ತು ʻಹರ್ ಮೆಜೆಸ್ಟಿಸ್ ಡೊಮಿನಿಯನ್ʼಗಳನ್ನು ಸಹ ಈ ಕಾನೂನುಗಳಲ್ಲಿ ಅನೇಕ ಸ್ಥಳಗಳಲ್ಲಿ ಉಲ್ಲೇಖಿಸಲಾಗಿದೆ. ಗುಲಾಮಗಿರಿಯ ಈ 475 ಚಿಹ್ನೆಗಳನ್ನು ಕೊನೆಗೊಳಿಸುವ ಮೂಲಕ, ನಾವು ಇಂದು ಹೊಸ ಕಾನೂನುಗಳನ್ನು ತಂದಿದ್ದೇವೆ ಎಂದು ಶಾ ಅವರು ಹೇಳಿದರು. ನಾವು ಹೊಸ ಯುಗವನ್ನು ಈ ಕಾನೂನುಗಳೊಂದಿಗೆ ಸಂಪರ್ಕಿಸಲು ಪ್ರಯತ್ನಿಸಿದ್ದೇವೆ. ನಮ್ಮ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಬಹಳ ಸಮಯ ಹಿಡಿಯುವಂಥದ್ದು, ಅದರಲ್ಲಿ ನ್ಯಾಯದಾನ ತುಂಬಾ ವಿಳಂಬವಾಗುತ್ತದೆ, ಅಲ್ಲಿ ನ್ಯಾಯಕ್ಕೆ ಯಾವುದೇ ಅರ್ಥವಿಲ್ಲ, ಜನರು ನ್ಯಾಯಾಂಗದ ಮೇಲೆ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಮತ್ತು ನ್ಯಾಯಾಲಯವನ್ನು ಸಂಪರ್ಕಿಸಲು ಹೆದರುತ್ತಿದ್ದಾರೆ ಎಂದು ಅವರು ತಿಳಿಸಿದರು.
ಈ ಹೊಸ ಕಾನೂನುಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ ಎಂದು ಗೃಹ ಸಚಿವರು ಹೇಳಿದರು. ಎಲೆಕ್ಟ್ರಾನಿಕ್ ಅಥವಾ ಡಿಜಿಟಲ್ ದಾಖಲೆಗಳು, ಇ-ಮೇಲ್‌ಗಳು, ಸರ್ವರ್ ಲಾಗ್‌ಗಳು, ಕಂಪ್ಯೂಟರ್‌ಗಳು, ಸ್ಮಾರ್ಟ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಎಸ್ಎಂಎಸ್, ವೆಬ್‌ಸೈಟ್‌ಗಳು, ಸ್ಥಳ ಪುರಾವೆಗಳು, ಮೇಲ್‌ಗಳು ಮತ್ತು ಉಪಕರಣಗಳಲ್ಲಿ ಲಭ್ಯವಿರುವ ಸಂದೇಶಗಳನ್ನು ಸೇರಿಸಲು ದಾಖಲೆಗಳ ವ್ಯಾಖ್ಯಾನವನ್ನು ವಿಸ್ತರಿಸಲಾಗಿದೆ. ಇದನ್ನು ನ್ಯಾಯಾಲಯಗಳಲ್ಲಿ ಬಳಸಬಹುದು, ಇದು ಕಾಗದಗಳ ತಾಪತ್ರಯದಿಂದ ಸ್ವಾತಂತ್ರ್ಯವನ್ನು ನೀಡುತ್ತದೆ. ʻಎಫ್ಐಆರ್ʼನಿಂದ ಹಿಡಿದು ಕೇಸ್ ಡೈರಿವರೆಗೆ, ಕೇಸ್ ಡೈರಿಯಿಂದ ಹಿಡಿದು ಆರೋಪ ಪಟ್ಟಿಯವರಿಗೆ ಮತ್ತು ಆರೋಪ ಪಟ್ಟಿಯಿಂದ ತೀರ್ಪಿನವರೆಗೆ ಇಡೀ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸಲು ಈ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು. ಪ್ರಸ್ತುತ, ನ್ಯಾಯಾಲಯದಲ್ಲಿ ಆರೋಪಿಗಳ ಹಾಜರಾತಿಯನ್ನು ಮಾತ್ರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾಡಬಹುದು, ಆದರೆ ಈಗ ಪಾಟಿ ಸವಾಲು ಸೇರಿದಂತೆ ಸಂಪೂರ್ಣ ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಲಾಗುವುದು. ದೂರುದಾರರು ಮತ್ತು ಸಾಕ್ಷಿಗಳನ್ನು ಪ್ರಶ್ನಿಸುವುದು; ಕೆಳ ನ್ಯಾಯಾಲಯ ಮತ್ತು ಹೈಕೋರ್ಟ್ನಲ್ಲಿ ವಿಚಾರಣೆ ವೇಳೆ ಸಾಕ್ಷ್ಯಗಳ ಪರಿಶೀಲನೆ ಮತ್ತು ದಾಖಲೆ ಹಾಗೂ ಸಂಪೂರ್ಣ ಮೇಲ್ಮನವಿ ವಿಚಾರಣೆ ಈಗ ಡಿಜಿಟಲ್ ಮೂಲಕ ಸಾಧ್ಯವಾಗುತ್ತದೆ. ಈ ವಿಷಯದ ಬಗ್ಗೆ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ಮತ್ತು ದೇಶಾದ್ಯಂತದ ವಿದ್ವಾಂಸರು ಮತ್ತು ತಾಂತ್ರಿಕ ತಜ್ಞರೊಂದಿಗೆ ಚರ್ಚಿಸಿದ ನಂತರ ನಾವು ಇದನ್ನು ಮಾಡಿದ್ದೇವೆ. ಶೋಧ ಮತ್ತು ವಶಪಡಿಸಿಕೊಳ್ಳುವ ಸಮಯದಲ್ಲಿ ನಾವು ವಿಡಿಯೊ ಚಿತ್ರೀಕರಣವನ್ನು ಕಡ್ಡಾಯಗೊಳಿಸಿದ್ದೇವೆ. ಇದು ಪ್ರಕರಣದ ಭಾಗವಾಗಿರುತ್ತದೆ. ಇದರಿಂದ ಮುಗ್ಧ ನಾಗರಿಕರನ್ನು ಪ್ರಕರಣದಲ್ಲಿ ಸಿಲುಕಿಸದಂತೆ ತಪ್ಪಿಸಬಹುದು. ಅಂತಹ ವಿಡಿಯೊ ಚಿತ್ರೀಕರಣ ಇಲ್ಲದೆ ಪೊಲೀಸರು ದಾಖಲಿಸುವ ಯಾವುದೇ ಆರೋಪ ಪಟ್ಟಿಯೂ ಮಾನ್ಯವಾಗುವುದಿಲ್ಲ.
ಸ್ವಾತಂತ್ರ್ಯದ 75 ವರ್ಷಗಳ ನಂತರವೂ, ನಮ್ಮಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗುವ ಪ್ರಕರಣಗಳ ಪ್ರಮಾಣ ತುಂಬಾ ಕಡಿಮೆ ಇದೆ. ಅದಕ್ಕಾಗಿಯೇ ನಾವು ವಿಧಿವಿಜ್ಞಾನ ವಿಜ್ಞಾನವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇವೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ʻರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯʼ ಸ್ಥಾಪಿಸುವ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದಾರೆ. ಮೂರು ವರ್ಷಗಳ ನಂತರ, ದೇಶವು ಪ್ರತಿವರ್ಷ 33,000 ವಿಧಿವಿಜ್ಞಾನ ತಜ್ಞರು ಮತ್ತು ವಿಜ್ಞಾನಿಗಳನ್ನು ಪಡೆಯುತ್ತದೆ. ಈ ಕಾನೂನಿನಲ್ಲಿ, ಅಪರಾಧಿಗಳಿಗೆ ಶಿಕ್ಷೆಯಾಗುವ ಪ್ರಕರಣಗಳ ಅನುಪಾತವನ್ನು ಶೇ.90ಕ್ಕಿಂತ ಹೆಚ್ಚಿನ ಮಟ್ಟಕ್ಕೆ ಕೊಂಡೊಯ್ಯುವ ಗುರಿಯನ್ನು ನಾವು ಹೊಂದಿದ್ದೇವೆ. ಇದಕ್ಕಾಗಿ, 7 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆ ವಿಧಿಸಬಹುದಾದ ಅಪರಾಧಗಳಿಗೆ ಅಪರಾಧ ಸ್ಥಳಕ್ಕೆ ವಿಧಿವಿಜ್ಞಾನ ತಂಡದ ಭೇಟಿಯನ್ನು ಕಡ್ಡಾಯಗೊಳಿಸುವ ಪ್ರಮುಖ ನಿಬಂಧನೆಯನ್ನು ಸೇರಿಸಲಾಗಿದೆ. ಈ ಮೂಲಕ, ಪೊಲೀಸರು ವೈಜ್ಞಾನಿಕ ಪುರಾವೆಗಳನ್ನು ಹೊಂದಿರುತ್ತಾರೆ, ಆ ಮೂಲಕ ನ್ಯಾಯಾಲಯದಲ್ಲಿ ಅಪರಾಧಿಗಳನ್ನು ಖುಲಾಸೆಗೊಳಿಸುವ ಸಾಧ್ಯತೆಗಳು ಗಮನಾರ್ಹವಾಗಿ ಕಡಿಮೆಯಾಗುತ್ತವೆ. ನಾವು 2027ರ ವೇಳೆಗೆ ದೇಶದ ಎಲ್ಲಾ ನ್ಯಾಯಾಲಯಗಳನ್ನು ಗಣಕೀಕರಣಗೊಳಿಸುತ್ತೇವೆ. ಅಂತೆಯೇ ಮೊಬೈಲ್ ಫೋರೆನ್ಸಿಕ್ ವ್ಯಾನ್‌ಗಳನ್ನು ಸಹ ಲಭ್ಯವಾಗಿಸಲಾಗಿದೆ. 7 ವರ್ಷಗಳಿಗಿಂತ ಹೆಚ್ಚಿನ ಶಿಕ್ಷೆಗೆ ಅವಕಾಶವಿರುವ ಯಾವುದೇ ಅಪರಾಧ ಪ್ರಕರಣಗಳಲ್ಲಿ ʻಎಫ್ಎಸ್ಎಲ್ʼ ತಂಡವು ಅಪರಾಧದ ಸ್ಥಳಕ್ಕೆ ಭೇಟಿ ನೀಡುವ ಯಶಸ್ವಿ ಪ್ರಯೋಗವನ್ನು ನಾವು ದೆಹಲಿಯಲ್ಲಿ ಮಾಡಿದ್ದೇವೆ. ಇದಕ್ಕಾಗಿ ನಾವು ʻಮೊಬೈಲ್ ಎಫ್ಎಸ್ಎಲ್ʼ ಪರಿಕಲ್ಪನೆಯನ್ನು ಪ್ರಾರಂಭಿಸಿದ್ದೇವೆ. ಇದೊಂದು ಯಶಸ್ವಿ ಪರಿಕಲ್ಪನೆಯಾಗಿದೆ. ಪ್ರತಿ ಜಿಲ್ಲೆಯಲ್ಲಿ 3 ಮೊಬೈಲ್ ʻಎಫ್ಎಸ್ಎಲ್ʼಗಳು ಇರಲಿದ್ದು, ಅಪರಾಧ ಸ್ಥಳಕ್ಕೆ ಹೋಗುತ್ತವೆ.
ಸ್ವಾತಂತ್ರ್ಯದ 75 ವರ್ಷಗಳ ನಂತರ ಮೊದಲ ಬಾರಿಗೆ, ನಾಗರಿಕರ ಅನುಕೂಲವನ್ನು ಖಚಿತಪಡಿಸಿಕೊಳ್ಳಲು ನಾವು ʻಶೂನ್ಯ ಎಫ್ಐಆರ್ʼ ಅನ್ನು ಪ್ರಾರಂಭಿಸುತ್ತಿದ್ದೇವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಇದರಿಂದ ಅಪರಾಧ ಎಲ್ಲೇ ನಡೆದರೂ, ನಾಗರಿಕರು ತಮ್ಮ ಪೊಲೀಸ್ ಠಾಣೆ ಪ್ರದೇಶದ ಹೊರಗೆ ಸಹ ದೂರು ನೀಡಲು ಸಾಧ್ಯವಾಗುತ್ತದೆ. ಅಪರಾಧ ದಾಖಲಾದ 15 ದಿನಗಳ ಒಳಗೆ, ಅದನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ರವಾನಿಸಬೇಕಾಗುತ್ತದೆ. ಮೊದಲ ಬಾರಿಗೆ ನಾವು ʻಇ-ಎಫ್ಐಆರ್ʼ ನಿಬಂಧನೆಯನ್ನು ಸೇರಿಸುತ್ತಿದ್ದೇವೆ. ಪ್ರತಿ ಜಿಲ್ಲೆ ಮತ್ತು ಪೊಲೀಸ್ ಠಾಣೆಯು ಪೊಲೀಸ್ ಅಧಿಕಾರಿಯನ್ನು ನೇಮಿಸಲಿದ್ದು, ಅವರು ಬಂಧನದ ಬಗ್ಗೆ ಆನ್‌ಲೈನ್‌ನಲ್ಲಿ ಮತ್ತು ವೈಯಕ್ತಿಕವಾಗಿ ಬಂಧಿತ ವ್ಯಕ್ತಿಯ ಕುಟುಂಬಕ್ಕೆ ತಿಳಿಸುತ್ತಾರೆ. ಲೈಂಗಿಕ ದೌರ್ಜನ್ಯದ ಸಂದರ್ಭದಲ್ಲಿ ಸಂತ್ರಸ್ತೆಯ ಹೇಳಿಕೆ ದಾಖಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಮತ್ತು ಲೈಂಗಿಕ ಕಿರುಕುಳದ ಸಂದರ್ಭದಲ್ಲಿ ಹೇಳಿಕೆಯ ವೀಡಿಯೊ ರೆಕಾರ್ಡಿಂಗ್ ಅನ್ನು ಸಹ ಕಡ್ಡಾಯಗೊಳಿಸಲಾಗಿದೆ ಎಂದು ಶ್ರೀ ಶಾ ಹೇಳಿದರು. ಪೊಲೀಸರು ದೂರಿನ ಸ್ಥಿತಿಯನ್ನು 90 ದಿನಗಳ ಒಳಗೆ ದೂರುದಾರರಿಗೆ ತಿಳಿಸಬೇಕು ಮತ್ತು ನಂತರ ಪ್ರತಿ 15 ದಿನಗಳಿಗೊಮ್ಮೆ ಈ ಬಗ್ಗೆ ನೀಡುವುದು ಕಡ್ಡಾಯವಾಗಿರುತ್ತದೆ. ಸಂತ್ರಸ್ತರನ್ನು ಕೇಳದೆ ಯಾವುದೇ ಸರ್ಕಾರವು 7 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಯ ಪ್ರಕರಣವನ್ನು ಹಿಂತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಈ ನಿಯಮವು ನಾಗರಿಕರ ಹಕ್ಕುಗಳನ್ನು ರಕ್ಷಿಸುತ್ತದೆ. ಈ ಕಾನೂನಿನ ಅಡಿಯಲ್ಲಿ, ಮೊದಲ ಬಾರಿಗೆ, ನಾವು ಸಮುದಾಯ ಸೇವೆಯನ್ನು ಶಿಕ್ಷೆಯಾಗಿ ತರುತ್ತಿದ್ದೇವೆ. ಸಣ್ಣ ಪ್ರಕರಣಗಳಲ್ಲಿ ಕ್ಷಿಪ್ರ ವಿಚಾರಣೆಯ ವ್ಯಾಪ್ತಿಯನ್ನು ಸಹ ಹೆಚ್ಚಿಸಲಾಗಿದೆ, ಈಗ 3 ವರ್ಷಗಳವರೆಗೆ ಶಿಕ್ಷಾರ್ಹ ಅಪರಾಧಗಳನ್ನು ಕ್ಷಿಪ್ರ ವಿಚಾರಣೆ ವ್ಯಾಪ್ತಿಗೆ ಸೇರಿಸಲಾಗುವುದು, ಈ ನಿಬಂಧನೆಯೊಂದಿಗೆ ಸೆಷನ್ಸ್ ನ್ಯಾಯಾಲಯಗಳಲ್ಲಿ ಶೇಕಡಾ 40ಕ್ಕಿಂತ ಹೆಚ್ಚು ಪ್ರಕರಣಗಳು ಇತ್ಯರ್ಥಗೊಳ್ಳಲಿವೆ. ಆರೋಪ ಪಟ್ಟಿ ಸಲ್ಲಿಸಲು 90 ದಿನಗಳ ಕಾಲಮಿತಿಯನ್ನು ನಿಗದಿಪಡಿಸಲಾಗಿದೆ ಮತ್ತು ಪರಿಸ್ಥಿತಿಯನ್ನು ಅವಲಂಬಿಸಿ, ನ್ಯಾಯಾಲಯವು ಇನ್ನೂ 90 ದಿನಗಳವರೆಗೆ ಅನುಮತಿ ವಿಸ್ತರಿಸಲು ಅವಕಾಶವಿದೆ. ಈ ರೀತಿಯಾಗಿ, 180 ದಿನಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸಿ, ಪ್ರಕರಣವನ್ನು ವಿಚಾರಣೆಗೆ ಕಳುಹಿಸಬೇಕಾಗುತ್ತದೆ. ನ್ಯಾಯಾಲಯಗಳು ಈಗ ಆರೋಪಿ ವ್ಯಕ್ತಿಗೆ ಆರೋಪ ಪಟ್ಟಿ ರೂಪಿಸುವ ಬಗ್ಗೆ 90 ದಿನಗಳಲ್ಲಿ ನೋಟಿಸ್ ನೀಡುವುದು ಕಡ್ಡಾಯವಾಗಿರುತ್ತದೆ. ಮಾನ್ಯ ನ್ಯಾಯಾಧೀಶರು ವಾದ ಪೂರ್ಣಗೊಂಡ 30 ದಿನಗಳಲ್ಲಿ ತೀರ್ಪನ್ನು ನೀಡಬೇಕಾಗುತ್ತದೆ. ಇದರಿಂದ ತೀರ್ಪು ನೀಡುವಿಕೆ ವರ್ಷಗಳವರೆಗೆ ಬಾಕಿ ಉಳಿಯುವುದಿಲ್ಲ. ಅಲ್ಲದೆ, ತೀರ್ಪಿನ ಪ್ರತಿಯನ್ನು 7 ದಿನಗಳಲ್ಲಿ ಆನ್‌ಲೈನ್ ನಲ್ಲಿ ಲಭ್ಯವಾಗುವಂತೆ ಮಾಡಬೇಕಾಗುತ್ತದೆ ಎಂದರು.
ನಾಗರಿಕ ಸೇವಕ ಸಿಬ್ಬಂದಿ ಅಥವಾ ಪೊಲೀಸ್ ಅಧಿಕಾರಿಯ ವಿರುದ್ಧದ ವಿಚಾರಣೆಗೆ ಅನುಮತಿಯ ಬಗ್ಗೆ ಸರ್ಕಾರವು 120 ದಿನಗಳಲ್ಲಿ ನಿರ್ಧರಿಸಬೇಕಾಗುತ್ತದೆ, ಇಲ್ಲದಿದ್ದರೆ ಅದನ್ನು ʻಡೀಮ್ಡ್ ಅನುಮತಿʼ ಎಂದು ಪರಿಗಣಿಸಿ ವಿಚಾರಣೆಯನ್ನು ಪ್ರಾರಂಭಿಸಲಾಗುವುದು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ನಾವು ಮತ್ತೊಂದು ದೊಡ್ಡ ಕ್ರಾಂತಿಕಾರಿ ಬದಲಾವಣೆಯನ್ನು ಮಾಡಿದ್ದೇವೆ. ಅದೇನೆಂದರೆ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ವರಿಷ್ಠಾಧಿಕಾರಿಯೇ ಕಡತವನ್ನು ನೋಡಿದ ನಂತರ ಸಾಕ್ಷಿ ನೀಡುತ್ತಾರೆ, ಹಿಂದಿನ ಸಂಬಂಧಿತ ಅಧಿಕಾರಿ ವಿಚಾರಣೆಗೆ ಬರುವ ಅಗತ್ಯವಿಲ್ಲ. ಇದು ತ್ವರಿತ ಸಾಕ್ಷ್ಯ ಪರಿಶೀಲನೆಗೆ ದಾರಿ ಮಾಡುತ್ತದೆ ಮತ್ತು ಆಮೂಲಕ ನ್ಯಾಯ ದಾನ ಕ್ಷಿಪ್ರವಾಗಿ ದೊರೆಯಲಿದೆ. ಇದಲ್ಲದೆ, ಘೋಷಿತ ಅಪರಾಧಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ನಿಬಂಧನೆಯನ್ನೂ ನಾವು ತಂದಿದ್ದೇವೆ. ಈ ಕಾನೂನಿನಲ್ಲಿ ಅಂತರರಾಜ್ಯ ಗ್ಯಾಂಗ್‌ಗಳು ಮತ್ತು ಸಂಘಟಿತ ಅಪರಾಧಗಳ ವಿರುದ್ಧ ವಿವಿಧ ರೀತಿಯ ಕಠಿಣ ಶಿಕ್ಷೆಯ ಹೊಸ ನಿಬಂಧನೆಯನ್ನು ನಾವು ಸೇರಿಸುತ್ತಿದ್ದೇವೆ. ಮಹಿಳೆಯರ ವಿರುದ್ಧದ ಅಪರಾಧ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಎದುರಿಸಲು ನಾವು ಅನೇಕ ನಿಬಂಧನೆಗಳನ್ನು ಮಾಡಿದ್ದೇವೆ. ಇದೇ ಮೊದಲ ಬಾರಿಗೆ ಮದುವೆ, ಉದ್ಯೋಗ ಮತ್ತು ಬಡ್ತಿಯ ಆಮಿಷವೊಡ್ಡಿ ಅಥವಾ ಸುಳ್ಳು ಭರವಸೆಗಳ ಆಧಾರದ ಮೇಲೆ ಮತ್ತು ಸುಳ್ಳು ಗುರುತಿನ ಆಧಾರದ ಮೇಲೆ ಲೈಂಗಿಕ ಸಂಭೋಗವನ್ನು ಅಪರಾಧೀಕರಿಸಲು ಅವಕಾಶ ಕಲ್ಪಿಸಲಾಗಿದೆ. ಸಾಮೂಹಿಕ ಅತ್ಯಾಚಾರದ ಎಲ್ಲಾ ಪ್ರಕರಣಗಳಲ್ಲಿ, 20 ವರ್ಷಗಳ ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆಯ ನಿಬಂಧನೆಯನ್ನು ಮಾಡಲಾಗಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಮರಣದಂಡನೆ ವಿಧಿಸುವ ನಿಬಂಧನೆಯನ್ನು ಸಹ ಸೇರಿಸಲಾಗಿದೆ. ಜನಸಮೂಹದಿಂದ ಹತ್ಯೆಗೆ(ಲಿಂಚಿಂಗ್) 7 ವರ್ಷಗಳ ಶಿಕ್ಷೆ, ಜೀವಾವಧಿ ಶಿಕ್ಷೆ ಮತ್ತು ಮರಣದಂಡನೆ - ಎಲ್ಲಾ ಮೂರು ನಿಬಂಧನೆಗಳನ್ನು ಇರಿಸಲಾಗಿದೆ. ಮಹಿಳೆಯರಿಂದ ಮೊಬೈಲ್ ಫೋನ್ ಕಸಿಯುವುದು ಅಥವಾ ಸರಗಳ್ಳತನಕ್ಕೆ ಯಾವುದೇ ಕಾನೂನು ನಿಬಂಧನೆ ಇರಲಿಲ್ಲ, ಈಗ ಅದಕ್ಕೂ ಅವಕಾಶ ಕಲ್ಪಿಸಲಾಗಿದೆ ಎಂದು ಅಮಿತ್ ಶಾ ಅವರು ಮಾಹಿತಿ ನೀಡಿದರು.
ಗಂಭೀರ ಗಾಯ ಮತ್ತು ಸಣ್ಣ ಗಾಯ ಎರಡೂ ಪ್ರಕರಣಗಳಲ್ಲಿ 7 ವರ್ಷಗಳ ಶಿಕ್ಷೆಗೆ ಮಾತ್ರ ಅವಕಾಶವಿತ್ತು. ಈಗ ನಾವು ಎರಡನ್ನೂ ಪ್ರತ್ಯೇಕಿಸಿದ್ದೇವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಶಾಶ್ವತ ಅಂಗವೈಕಲ್ಯ ಅಥವಾ ಮೆದುಳು ನಿಷ್ಕ್ರಿಯಗೊಂಡರೆ 10 ವರ್ಷ ಅಥವಾ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಮಕ್ಕಳ ಮೇಲಿನ ಅಪರಾಧಗಳಿಗೆ ಶಿಕ್ಷೆಯನ್ನು 7 ವರ್ಷದಿಂದ 10 ವರ್ಷಗಳಿಗೆ ಹೆಚ್ಚಿಸಲಾಗಿದೆ. ಅನೇಕ ಅಪರಾಧಗಳಲ್ಲಿ ದಂಡದ ಮೊತ್ತವನ್ನು ಹೆಚ್ಚಿಸಲು ಸಹ ಅವಕಾಶ ಕಲ್ಪಿಸಲಾಗಿದೆ. ಕಸ್ಟಡಿಯಿಂದ ಓಡಿಹೋಗುವ ಅಪರಾಧಿಗಳಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಅವಕಾಶವೂ ಇದೆ. ಕ್ಷಮಾದಾನವನ್ನು ರಾಜಕೀಯ ಲಾಭಕ್ಕಾಗಿ ಬಳಸಿದ ಅನೇಕ ಪ್ರಕರಣಗಳಿವೆ. ಹಾಗಾಗಿ ಈಗ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ, ಜೀವಾವಧಿ ಶಿಕ್ಷೆಯನ್ನು ಕನಿಷ್ಠ 7 ವರ್ಷಗಳಿಗೆ ಮತ್ತು 7 ವರ್ಷಗಳ ಶಿಕ್ಷೆಯನ್ನು ಕನಿಷ್ಠ 3 ವರ್ಷಗಳಿಗೆ ಬದಲಾಯಿಸಲು ಮಾತ್ರ ಅವಕಾಶವಿದೆ. ಆದರೆ ಯಾವುದೇ ಅಪರಾಧಿಯ ಬಿಡುಗಡೆಗೆ ಅವಕಾಶವಿಲ್ಲ.
ಭಾರತವು ಪ್ರಜಾಪ್ರಭುತ್ವ ದೇಶವಾಗಿರುವುದರಿಂದ ಮತ್ತು ಪ್ರತಿಯೊಬ್ಬರಿಗೂ ಮಾತನಾಡುವ ಹಕ್ಕಿರುವುದರಿಂದ ಮೋದಿ ಸರ್ಕಾರವು ದೇಶದ್ರೋಹ ಕಾನೂನನ್ನು ಸಂಪೂರ್ಣವಾಗಿ ಕೊನೆಗೊಳಿಸಲು ಹೊರಟಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಈ ಮೊದಲು ಭಯೋತ್ಪಾದನೆಗೆ ಯಾವುದೇ ವ್ಯಾಖ್ಯಾನವಿರಲಿಲ್ಲ, ಆದರೆ ಈಗ ಪ್ರತ್ಯೇಕತೆ, ಸಶಸ್ತ್ರ ಬಂಡಾಯ, ವಿಧ್ವಂಸಕ ಚಟುವಟಿಕೆಗಳು, ಪ್ರತ್ಯೇಕತಾವಾದ, ಭಾರತದ ಏಕತೆ, ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಸವಾಲೊಡ್ಡುವಂತಹ ಅಪರಾಧಗಳನ್ನು ಈ ಕಾನೂನಿನಲ್ಲಿ ಮೊದಲ ಬಾರಿಗೆ ವ್ಯಾಖ್ಯಾನಿಸಲಾಗಿದೆ. ಈ ಅಪರಾಧಗಳಿಗೆ ಸಂಬಂಧಿಸಿದವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಹಕ್ಕುಗಳನ್ನು ನೀಡಲಾಗಿದೆ. ತನಿಖಾಧಿಕಾರಿಯ ಅರಿವಿನ ಮೇರೆಗೆ ನ್ಯಾಯಾಲಯವು ಈ ಕುರಿತು ಆದೇಶಿಸುತ್ತದೆ ಎಂದು ಮಾಹಿತಿ ನೀಡಿದರು. ಗೈರುಹಾಜರಿ ವಿಚಾರಣೆಗೆ ಸಂಬಂಧಿಸಿದಂತೆ ಮೋದಿ ಸರ್ಕಾರ ಐತಿಹಾಸಿಕ ನಿರ್ಧಾರ ಕೈಗೊಂಡಿದೆ ಎಂದರು. ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು, ಸೂಕ್ತ ಪ್ರಕ್ರಿಯೆಯ ನಂತರ, ದೇಶಭ್ರಷ್ಟ ಎಂದು ಘೋಷಿಸಲ್ಪಟ್ಟ ವ್ಯಕ್ತಿಯು ಜಗತ್ತಿನಲ್ಲಿ ಎಲ್ಲಿ ಅಡಗಿದ್ದರೂ ಆತನ ಗೈರುಹಾಜರಿಯಲ್ಲೇ ವಿಚಾರಣೆ ನಡೆಸಿ ಶಿಕ್ಷೆ ವಿಧಿಸಲು ಪ್ರಯತ್ನಿಸುತ್ತಾರೆ. ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಆ ವ್ಯಕ್ತಿಗಳು ಭಾರತೀಯ ಕಾನೂನು ಮತ್ತು ನ್ಯಾಯಾಲಯವನ್ನು ಆಶ್ರಯಿಸಬೇಕಾಗುತ್ತದೆ.
ದೇಶಾದ್ಯಂತ ಪೊಲೀಸ್ ಠಾಣೆಗಳಲ್ಲಿ ಪ್ರಕರಣದ ಸ್ವತ್ತುಗಳು ಹೆಚ್ಚಿನ ಸಂಖ್ಯೆಯಲ್ಲಿ ರಾಶಿ ಬಿದ್ದಿವೆ. ಇವುಗಳನ್ನು ವಿಡಿಯೋಗ್ರಫಿ ಮೂಲಕ ವಿಲೇವಾರಿ ಮಾಡಬಹುದು ಮತ್ತು ಪರಿಶೀಲಿಸಿದ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬಹುದು ಎಂದು ಶ್ರೀ ಅಮಿತ್ ಶಾ ಹೇಳಿದರು. ಈ ಕಾನೂನಿನಲ್ಲಿ ಒಟ್ಟು 313 ಬದಲಾವಣೆಗಳನ್ನು ಮಾಡಲಾಗಿದೆ. ಇದು ನಮ್ಮ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆಯನ್ನು ತರುತ್ತದೆ ಮತ್ತು ಯಾವುದೇ ವ್ಯಕ್ತಿಯು ಗರಿಷ್ಠ 3 ವರ್ಷಗಳಲ್ಲಿ ನ್ಯಾಯವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಈ ಕಾನೂನಿನಲ್ಲಿ ಮಹಿಳೆಯರು ಮತ್ತು ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿದೆ. ಅಪರಾಧಿಗಳಿಗೆ ಶಿಕ್ಷೆಯಾಗುವುದನ್ನು ಖಚಿತಪಡಿಸಲಾಗಿದೆ ಮತ್ತು ಪೊಲೀಸರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ಅನೇಕ ನಿಬಂಧನೆಗಳನ್ನು ಸಹ ಮಾಡಲಾಗಿದೆ ಎಂದು ಶ್ರೀ ಶಾ ಹೇಳಿದರು. ಒಂದೆಡೆ, ದೇಶದ್ರೋಹದಂತಹ ಕಾನೂನುಗಳನ್ನು ರದ್ದುಪಡಿಸಲಾಗಿದೆ. ಮತ್ತೊಂದೆಡೆ, ಮೋಸ ಮತ್ತು ಜನಸಮೂಹ ಹತ್ಯೆಯಂತಹ ಘೋರ ಅಪರಾಧಗಳನ್ನು ಎಸಗುವವರಿಗೆ, ಮಹಿಳೆಯರನ್ನು ಶೋಷಿಸುವವರಿಗೆ ಶಿಕ್ಷೆಯ ನಿಬಂಧನೆ ಸೇರಿಸಲಾಗಿದೆ. ಸಂಘಟಿತ ಅಪರಾಧಗಳು ಮತ್ತು ಭಯೋತ್ಪಾದನೆಯನ್ನು ಹತ್ತಿಕ್ಕುವ ಕೆಲಸವನ್ನು ಸಹ ಮಾಡಲಾಗಿದೆ ಎಂದು ಶ್ರೀ ಅಮಿತ್ ಶಾ ಅವರು ಮಾಹಿತಿ ನೀಡಿದರು.
****
(Release ID: 1948051)
Visitor Counter : 365