ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav

ಅಮೆರಿಕಕ್ಕೆ  ತಾಜಾ ದಾಳಿಂಬೆಯ ಮೊದಲ ಪ್ರಯೋಗಾತ್ಮಕ ರವಾನೆಯನ್ನು  ವಿಮಾನದ ಮೂಲಕ ರಫ್ತು ಮಾಡಿದ ಅಪೇಡಾ


ಅಮೆರಿಕಕ್ಕೆ ದಾಳಿಂಬೆ ರಫ್ತು ಹೆಚ್ಚಿಸಿರುವುದು ಹೆಚ್ಚಿನ ಬೆಲೆ ಪಡೆಯಲು ಮತ್ತು ರೈತರ ಆದಾಯವನ್ನು ಹೆಚ್ಚಿಸಲು ಪೂರಕವಾಗಿದೆ

ಅಮೆರಿಕದ ಆಮದುದಾರರಿಂದ ಉತ್ತೇಜಕ ಪ್ರತಿಕ್ರಿಯೆ

Posted On: 08 AUG 2023 1:33PM by PIB Bengaluru

ಹಣ್ಣಿನ ರಫ್ತು ಸಾಮರ್ಥ್ಯವನ್ನು ವೃದ್ಧಿಸುವ ಪ್ರಯತ್ನದಲ್ಲಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದಡಿ ಕಾರ್ಯನಿರ್ವಹಿಸುವ ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (APEDA), ತಾಜಾ ದಾಳಿಂಬೆ ಮೊದಲ ಬ್ಯಾಚ್ ನ್ನು ಅಮೆರಿಕಕ್ಕೆ ವಾಯು ಮಾರ್ಗದ ಮೂಲಕ ರಫ್ತು ಮಾಡಿದೆ. APEDA ತನ್ನ ಮೊದಲ ಬ್ಯಾಚ್ ದಾಳಿಂಬೆಯನ್ನು ಅಮೆರಿಕಕ್ಕೆ ಭಾರತೀಯ ರಾಷ್ಟ್ರೀಯ ಸಸ್ಯ ಸಂರಕ್ಷಣಾ ಸಂಸ್ಥೆ (NPPO) ಮತ್ತು ಅಮೆರಿಕದ  ಪ್ರಾಣಿ ಮತ್ತು ಸಸ್ಯ ಆರೋಗ್ಯ ತಪಾಸಣೆ ಸೇವೆ (US-APHIS), ಮಹಾರಾಷ್ಟ್ರ ರಾಜ್ಯ ಕೃಷಿ ಮಾರುಕಟ್ಟೆ ಬೋರ್ಡ್ (MSAMB) ಸಹಯೋಗದೊಂದಿಗೆ, ICAR-ದಾಳಿಂಬೆ ರಾಷ್ಟ್ರೀಯ ಸಂಶೋಧನಾ ಕೇಂದ್ರ, ಸೋಲಾಪುರ (NRC-Solapur) ಮತ್ತು ಇತರರೊಂದಿಗೆ ಸೇರಿ ರಫ್ತು ಮಾಡಿದೆ.

ಎಪಿಇಡಿಎ ಅಧ್ಯಕ್ಷ ಶ್ರೀ ಅಭಿಷೇಕ್ ದೇವ್ ಮಾತನಾಡಿ, ಅಮೆರಿಕಕ್ಕೆ ದಾಳಿಂಬೆ ರಫ್ತು ಹೆಚ್ಚಳದಿಂದ ಹೆಚ್ಚಿನ ಬೆಲೆ ಲಭಿಸುತ್ತದೆ ಮತ್ತು ರೈತರ ಆದಾಯ ಹೆಚ್ಚಳವಾಗುತ್ತದೆ ಎಂದರು. ಅಲ್ಲದೆ ದಾಳಿಂಬೆ ಆಮದುದಾರರಿಂದ ಉತ್ತೇಜಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಕೂಡಾ ಹೇಳಿದರು.

ಭಾರತದಿಂದ ಹಣ್ಣುಗಳು ಮತ್ತು ತರಕಾರಿಗಳ ರಫ್ತುದಾರರಲ್ಲಿ ಅಗ್ರಮಾನ್ಯರಾಗಿರುವ APEDA ನೋಂದಾಯಿತ 'INI ಫಾರ್ಮ್ಸ್' ದಾಳಿಂಬೆಯ ಪರೀಕ್ಷಾ ರಫ್ತನ್ನು ಮಾಡಿದೆ. ರೈತರೊಂದಿಗೆ ನೇರ ಸಂಪರ್ಕ ಸಾಧಿಸುವ ಮೂಲಕ ಬಾಳೆ ಹಾಗೂ ದಾಳಿಂಬೆಯ ಮೌಲ್ಯಯುತ ಸರಪಳಿಯನ್ನು ಇದು ನಿರ್ಮಿಸಿದೆ. ಆಗ್ರೋಸ್ಟಾರ್ ಗ್ರೂಪ್ ‌ನ ಭಾಗವಾಗಿ,  ಪ್ರಪಂಚದಾದ್ಯಂತ 35 ಕ್ಕೂ ಹೆಚ್ಚು ದೇಶಗಳಿಗೆ ಉತ್ಪನ್ನಗಳನ್ನು ರಫ್ತು ಮಾಡುವುದು ಅಲ್ಲದೆ ರೈತರಿಗೆ ಕೃಷಿ ಅರ್ಥಶಾಸ್ತ್ರ, ಕೃಷಿ ಪರಿಕರಗಳು ಮತ್ತು ಉತ್ಪನ್ನಗಳ ಖರೀದಿವರೆಗೆ ಎಲ್ಲ ಬಗೆಯ ಸೇವೆಗಳನ್ನು ಒದಗಿಸುತ್ತದೆ. ಮಾರುಕಟ್ಟೆ ದೂರದ ಪ್ರದೇಶಗಳಲ್ಲಿದ್ದ ಕಾರಣ ಸರಬರಾಜು ವೆಚ್ಚ ಹೆಚ್ಚಾಗಿತ್ತು. ಹೀಗಾಗಿ ವ್ಯಾಪಾರ ವಹಿವಾಟು ಆರಂಭಿಸಲು ಅಡ್ಡಿ ಉಂಟಾಗುತ್ತಿತ್ತು. ದಾಳಿಂಬೆ ಪ್ರಾಯೋಗಿಕ ರಫ್ತು ಗುಣಮಟ್ಟದ ಹಣ್ಣುಗಳನ್ನು ರಫ್ತು ಮಾಡುವುದನ್ನು ಖಚಿತಪಡಿಸುವುದರೊಂದಿಗೆ ಭಾರತೀಯ ರಫ್ತುದಾರರು ಮತ್ತು ಅಮೆರಿಕದ ಆಮದುದಾರರ ನಡುವೆ ಸಾಮರ್ಥ್ಯ ವೃದ್ಧಿಗೆ ಸಹಾಯ ಮಾಡುತ್ತದೆ.

ಅಮೆರಿಕದ ಮಾರುಕಟ್ಟೆಗಳಲ್ಲಿ ಭಾರತೀಯ ಮಾವಿನ ಹಣ್ಣನ್ನು ಸ್ವೀಕರಿಸುವುದರಿಂದ ಉತ್ತೇಜಿತರಾಗಿರುವ ರಫ್ತುದಾರರು ದಾಳಿಂಬೆ ಕೂಡ ಅಮೆರಿಕದಲ್ಲಿ ಯಶಸ್ವಿ ಉತ್ಪನ್ನವಾಗಬಹುದೆಂಬ ಭರವಸೆ ಹೊಂದಿದ್ದಾರೆ. ದಾಳಿಂಬೆ ರಫ್ತು ಮೌಲ್ಯ ಸರಪಳಿಯ ಸಾಮರ್ಥ್ಯವನ್ನು ಖಚಿತಪಡಿಸಿಕೊಳ್ಳಲು, APEDA ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ 'ಅನಾರ್-ನೆಟ್' ಅಡಿಯಲ್ಲಿ ತೋಟಗಳನ್ನು ನೋಂದಾಯಿಸಲು ನಿಯಮಿತವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಉತ್ತಮ ಗುಣಮಟ್ಟದ ಭಾರತೀಯ ದಾಳಿಂಬೆಗಳನ್ನು ರಫ್ತು ಮಾಡುವ ಮೂಲಕ ಅಮೆರಿಕ ಮತ್ತು ಆಸ್ಟ್ರೇಲಿಯಾದಲ್ಲಿ ಮಾರುಕಟ್ಟೆ ಪ್ರವೇಶವನ್ನು ಪಡೆಯುವಲ್ಲಿ APEDA ಪ್ರಮುಖ ಪಾತ್ರ ವಹಿಸಿದೆ.

ಹೆಚ್ಚಿನ ಉತ್ಕರ್ಷಣ ನಿರೋಧಕ ಅಂಶ ಮತ್ತು ಉತ್ತಮ ಹಣ್ಣಿನ ಗುಣಲಕ್ಷಣಗಳಿಂದಾಗಿ, ಮಹಾರಾಷ್ಟ್ರದ 'ಭಗ್ವಾ' ದಾಳಿಂಬೆ ಗಣನೀಯ ಪ್ರಮಾಣದ ರಫ್ತು ಸಾಮರ್ಥ್ಯವನ್ನು ಹೊಂದಿದೆ. 'ಭಗ್ವಾ' ತಳಿಯ ದಾಳಿಂಬೆಗೆ ವಿದೇಶಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ದೇಶದ ದಾಳಿಂಬೆ ರಫ್ತಿನಲ್ಲಿ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯು ಶೇಕಡಾ 50 ರಷ್ಟು ಕೊಡುಗೆ ನೀಡುತ್ತಿದೆ.

2022-23 ರಲ್ಲಿ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸೇರಿದಂತೆ ಬಾಂಗ್ಲಾದೇಶ, ನೇಪಾಳ, ನೆದರ್ಲ್ಯಾಂಡ್ಸ್, ಸೌದಿ ಅರೇಬಿಯಾ, ಶ್ರೀಲಂಕಾ, ಥೈಲ್ಯಾಂಡ್, ಬಹ್ರೇನ್, ಓಮನ್ ದೇಶಗಳಿಗೆ 58.36 ದಶಲಕ್ಷ ಅಮೆರಿಕ ಡಾಲರ್ ಮೌಲ್ಯದ 62,280 ಮೆಟ್ರಿಕ್ ಟನ್ ದಾಳಿಂಬೆ ರಫ್ತು ಮಾಡಲಾಗಿದೆ. ಭಾರತವು ತೋಟಗಾರಿಕೆ ಬೆಳೆಗಳಲ್ಲಿ ಎರಡನೇ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ. 2021-22 ರಲ್ಲಿ, ಭಾರತವು ಒಟ್ಟು 333.20 ದಶಲಕ್ಷ ಮೆಟ್ರಿಕ್ ಟನ್ (MMT) ತೋಟಗಾರಿಕೆ ಬೆಳೆಗಳ ಉತ್ಪಾದನೆಯನ್ನು ದಾಖಲಿಸಿದೆ, ಅದರಲ್ಲಿ ಹಣ್ಣುಗಳು ಮತ್ತು ತರಕಾರಿಗಳ ಪಾಲು ಶೇಕಡಾ 90 ರಷ್ಟಿದೆ. 2021-22ನೇ ಸಾಲಿನಲ್ಲಿ ಹಣ್ಣುಗಳ ಒಟ್ಟು ಉತ್ಪಾದನೆಯು 107.10 ದಶಲಕ್ಷ ಮೆಟ್ರಿಕ್ ಟನ್ ಮತ್ತು ದಾಳಿಂಬೆ ಉತ್ಪಾದನೆಯು ಸುಮಾರು ಮೂರು ದಶಲಕ್ಷ ಮೆಟ್ರಿಕ್ ಟನ್ ಆಗಿತ್ತು.

ಪ್ರಪಂಚದಲ್ಲಿ ದಾಳಿಂಬೆ ಉತ್ಪಾದನೆಯಲ್ಲಿ ಭಾರತವು ಏಳನೇ ಸ್ಥಾನದಲ್ಲಿದೆ ಮತ್ತು ದಾಳಿಂಬೆ ಕೃಷಿಯ ಒಟ್ಟು ಪ್ರದೇಶವು ಸುಮಾರು 2,75,500 ಹೆಕ್ಟೇರ್ ಆಗಿದೆ. ಭಾರತದಲ್ಲಿ ದಾಳಿಂಬೆಯನ್ನು ಉತ್ಪಾದಿಸುವ ಪ್ರಮುಖ ರಾಜ್ಯಗಳೆಂದರೆ ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ರಾಜಸ್ಥಾನ ಮತ್ತು ಆಂಧ್ರಪ್ರದೇಶ. APEDA ದಾಳಿಂಬೆ ರಫ್ತು ಉತ್ತೇಜಿಸಲು ಮತ್ತು ಪೂರೈಕೆ ಸರಪಳಿಯ ಅಡ್ಡಿ ಆತಂಕಗಳನ್ನು ತೊಡೆದುಹಾಕಲು ದಾಳಿಂಬೆ ರಫ್ತು ಪ್ರಚಾರ ವೇದಿಕೆ (EPF) ಅನ್ನು ಸ್ಥಾಪಿಸಿದೆ. ವಾಣಿಜ್ಯ ಇಲಾಖೆ, ಕೃಷಿ ಇಲಾಖೆ, ರಾಜ್ಯ ಸರ್ಕಾರಗಳು, ರಾಷ್ಟ್ರೀಯ ಉಲ್ಲೇಖಿತ ಪ್ರಯೋಗಾಲಯಗಳು ಮತ್ತು ಈ ಉತ್ಪನ್ನದ ಪ್ರಮುಖ ಹತ್ತು ರಫ್ತುದಾರ ಪ್ರತಿನಿಧಿಗಳನ್ನು EPF ಒಳಗೊಂಡಿದೆ.

ನಿರಂತರ ಪ್ರಕ್ರಿಯೆಯಾಗಿ, ದಾಳಿಂಬೆ ಮೌಲ್ಯ ಸರಪಳಿಯಲ್ಲಿನ ಸಮಸ್ಯೆಗಳನ್ನು ಪೂರ್ವ ಕೊಯ್ಲು, ನಂತರದ ಕೊಯ್ಲು, ಸಾಗಾಣಿಕೆ, ಬ್ರ್ಯಾಂಡಿಂಗ್ ‌ನಿಂದ ಮಾರುಕಟ್ಟೆ ಚಟುವಟಿಕೆಗಳವರೆಗೆ APEDA ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಖಾಸಗಿ ವಲಯದಲ್ಲಿ ಯುರೋಪಿಯನ್ ಒಕ್ಕೂಟದ ರಫ್ತು ನಿಯಮಾವಳಿಗಳನ್ನು ಪೂರೈಸುವ 250 ಕ್ಕೂ ಹೆಚ್ಚು ಪ್ಯಾಕ್ ಹೌಸ್ ‌ಗಳನ್ನು ಸ್ಥಾಪಿಸುವುದರ ಜೊತೆಗೆ, ರಫ್ತಿಗೆ ಮೂಲಸೌಕರ್ಯಗಳನ್ನು ಒದಗಿಸುವ  ಅಡಿಯಲ್ಲಿ ಸಾಮಾನ್ಯ ಮೂಲಸೌಕರ್ಯ ಅಭಿವೃದ್ಧಿ ಉತ್ತೇಜನ ಸಾಮರ್ಥ್ಯಕ್ಕಾಗಿ ರಾಜ್ಯ ಸರ್ಕಾರಗಳಿಗೆ ಹಣಕಾಸಿನ ಸಹಾಯವನ್ನು ಸಹ ಒದಗಿಸಲಾಗಿದೆ. ಆಯಾ ದೇಶಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ರಫ್ತು ಪ್ರಚಾರ ಕಾರ್ಯಕ್ರಮಗಳಿಗಾಗಿ APEDA ಕಾರ್ಯತಂತ್ರಗಳನ್ನು ರೂಪಿಸಿದೆ, ಜೊತೆಗೆ ಹೊಸ ಮಾರುಕಟ್ಟೆಗಳಲ್ಲಿ ರಫ್ತು ಸಾಮರ್ಥ್ಯವನ್ನು ಸಂಪೂರ್ಣವಾಗಿ ವಿಸ್ತರಿಸಲು ಯುರೋಪಿಯನ್ ಒಕ್ಕೂಟ ರಾಷ್ಟ್ರಗಳು, ಮಧ್ಯಪ್ರಾಚ್ಯ ಮತ್ತು ಆಗ್ನೇಯ ಏಷ್ಯಾದ ದೇಶಗಳಿಗೆ ಅಂತಾರಾಷ್ಟ್ರೀಯ ಖರೀದಿದಾರ-ಮಾರಾಟಗಾರರ ಸಭೆಗಳನ್ನು ಆಯೋಜಿಸಿದೆ.

ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತಿನಲ್ಲಾದ ಅಭಿವೃದ್ಧಿಯು ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತುಗಳನ್ನು ಉತ್ತೇಜಿಸಲು APEDA ತೆಗೆದುಕೊಂಡ ವಿವಿಧ ಉಪಕ್ರಮಗಳ ಪರಿಣಾಮವಾಗಿದೆ, ಉದಾಹರಣೆಗೆ ಭಾರತೀಯ ರಾಯಭಾರ ಕಚೇರಿಗಳ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ವಿವಿಧ ದೇಶಗಳಲ್ಲಿ B2B ಪ್ರದರ್ಶನಗಳನ್ನು ಆಯೋಜಿಸುವುದು ಮತ್ತು ಉತ್ಪನ್ನ ಆಧಾರಿತ ಹಾಗೂ ಸಾಮಾನ್ಯ ಮಾರುಕಟ್ಟೆ ಪ್ರಚಾರಗಳ ಮೂಲಕ ಹೊಸ ಸಂಭಾವ್ಯ ಮಾರುಕಟ್ಟೆಗಳನ್ನು ಕಂಡುಹಿಡಿಯುವುದು ಮುಂತಾದವು. APEDA ಈಶಾನ್ಯ ರಾಜ್ಯಗಳಿಂದ ನೈಸರ್ಗಿಕ, ಸಾವಯವ ಮತ್ತು GI-ಕೃಷಿ ಉತ್ಪನ್ನಗಳ ರಫ್ತು ಸಾಮರ್ಥ್ಯವನ್ನು ಹೆಚ್ಚಿಸುವ ಕುರಿತು ಅಸ್ಸಾಂನ ಗುವಾಹಟಿಯಲ್ಲಿ ಸಮಾವೇಶವನ್ನು ಕೂಡ  ಆಯೋಜಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಸಂಪರ್ಕವನ್ನು ಸೃಷ್ಟಿಸುವ ಮೂಲಕ ಅಸ್ಸಾಂ ಮತ್ತು ನೆರೆಯ ರಾಜ್ಯಗಳಲ್ಲಿ ಬೆಳೆದ ನೈಸರ್ಗಿಕ, ಸಾವಯವ ಮತ್ತು ಜಿಐ ಕೃಷಿ ಉತ್ಪನ್ನಗಳ ರಫ್ತನ್ನು ಉತ್ತೇಜಿಸುವುದು ಈ ಸಮ್ಮೇಳನದ ಉದ್ದೇಶವಾಗಿದೆ.

ಲಡಾಖ್ ನ ಏಪ್ರಿಕಾಟ್ ‌ಗಳು ಮತ್ತು ಇತರ ಕೃಷಿ ಉತ್ಪನ್ನಗಳ ರಫ್ತು ವೃದ್ಧಿಯ ಗುರಿಯೊಂದಿಗೆ ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ‌ನ ಸಹಯೋಗದೊಂದಿಗೆ, ಇತ್ತೀಚೆಗೆ APEDA ಅಂತಾರಾಷ್ಟ್ರೀಯ ಖರೀದಿದಾರ ಮತ್ತು ಮಾರಾಟಗಾರರ ಸಭೆಯನ್ನು ಆಯೋಜಿಸಿತ್ತು. ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಗಳ ಹದಿನೆಂಟು ಉದ್ಯಮಿಗಳು ಏಪ್ರಿಕಾಟ್ ಮತ್ತು ಇತರ ಕೃಷಿ ಉತ್ಪನ್ನಗಳ ಶ್ರೇಣಿಯನ್ನು ಪ್ರದರ್ಶಿಸಿದರು. ಭಾರತ, ಅಮೆರಿಕ, ಬಾಂಗ್ಲಾದೇಶ, ಓಮನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ಇಪ್ಪತ್ತು ಖರೀದಿದಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

***


(Release ID: 1946717) Visitor Counter : 163