ಸಹಕಾರ ಸಚಿವಾಲಯ

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಲೋಕಸಭೆಯಲ್ಲಿ ಬಹು ರಾಜ್ಯ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆ 2022 ರ ಮೇಲಿನ ಚರ್ಚೆಗೆ ಉತ್ತರಿಸಿದರು, ಲೋಕಸಭೆಯು ಚರ್ಚೆಯ ನಂತರ ಮಸೂದೆಯನ್ನು ಅಂಗೀಕರಿಸಿತು.


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟವು ಬಹು-ರಾಜ್ಯ ಸಹಕಾರಿ ಸಂಘಗಳಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಲಾಭವನ್ನು ಹೆಚ್ಚಿಸಲು ಈ ಮಸೂದೆಗೆ ಅನುಮೋದನೆ ನೀಡಿದೆ.

ಈ ಸದನವು ಮಸೂದೆಯನ್ನು ಅಂಗೀಕರಿಸುವುದರೊಂದಿಗೆ ದೇಶದ ಸಹಕಾರಿ ಚಳವಳಿಯಲ್ಲಿ ಹೊಸ ಯುಗ ಆರಂಭವಾಗಲಿದೆ

ಮೋದಿ ಸರ್ಕಾರವು ಪಿ ಎ ಸಿ ಎಸ್  ಗಳನ್ನು ಪುನಶ್ಚೇತನಗೊಳಿಸಲು, ಅವುಗಳನ್ನು ಕಾರ್ಯಸಾಧ್ಯವಾದ ಮತ್ತು ಬಹು ಆಯಾಮದ ಸಂಸ್ಥೆಗಳನ್ನಾಗಿ ಮಾಡಲು ಹಲವಾರು ಕ್ರಮಗಳನ್ನು ಕೈಗೊಂಡಿದೆ.

ಸದಸ್ಯರ ಚುನಾವಣಾ ಪ್ರಕ್ರಿಯೆಯನ್ನು ಸುಧಾರಿಸುವುದು, ಸಂಘದಲ್ಲಿ ಪಾರದರ್ಶಕತೆ ತರುವುದು, ಮೇಲ್ವಿಚಾರಣಾ ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ವ್ಯವಹಾರವನ್ನು ಸುಲಭಗೊಳಿಸುವುದು ಮುಂತಾದ ವಿಷಯಗಳಿಗೆ ವಿವರವಾದ ನಿಬಂಧನೆಗಳನ್ನು ಮಸೂದೆಯಲ್ಲಿ ಮಾಡಲಾಗಿದೆ.

ಒಂದು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ಮತ್ತು ಒಬ್ಬ ಮಹಿಳೆಗೆ ಸಮಿತಿಗಳಲ್ಲಿ ಮೀಸಲಾತಿ ಒದಗಿಸುವ ನಿಬಂಧನೆಯನ್ನು ಈ ಮಸೂದೆಯಲ್ಲಿ ಸೇರಿಸಲಾಗಿದೆ, ಇದು ಈ ವರ್ಗಗಳ ಪ್ರಾತಿನಿಧ್ಯವನ್ನು ಹೆಚ್ಚಿಸುತ್ತದೆ.

Posted On: 25 JUL 2023 7:59PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಲೋಕಸಭೆಯಲ್ಲಿ ಬಹು ರಾಜ್ಯಗಳ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆ 2022 ರ ಮೇಲಿನ ಚರ್ಚೆಗೆ ಉತ್ತರಿಸಿದರು. ಲೋಕಸಭೆಯು ಚರ್ಚೆಯ ನಂತರ ಮಸೂದೆಯನ್ನು ಅಂಗೀಕರಿಸಿತು.

ಲೋಕಸಭೆಯಲ್ಲಿ ಮಸೂದೆಯ ಮೇಲಿನ ಚರ್ಚೆಗೆ ಉತ್ತರಿಸಿದ ಸಹಕಾರ ಸಚಿವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಹು ರಾಜ್ಯಗಳ ಸಹಕಾರ ಸಂಘಗಳಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಲಾಭವನ್ನು ಹೆಚ್ಚಿಸಲು ಈ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದರು. ಈ ವಿಧೇಯಕದಲ್ಲಿ ನ್ಯಾಯಸಮ್ಮತ ಚುನಾವಣೆ ನಡೆಸಲು ಚುನಾವಣಾ ಪ್ರಾಧಿಕಾರಕ್ಕೆ ಚುನಾವಣಾ ಸುಧಾರಣಾ ಕ್ರಮಗಳನ್ನು ಜಾರಿಗೆ ತರಲು ಅವಕಾಶ ಕಲ್ಪಿಸಲಾಗಿದ್ದು, ಪ್ರಾಧಿಕಾರವು ಚುನಾವಣಾ ಆಯೋಗದಷ್ಟೇ ಶಕ್ತಿಶಾಲಿಯಾಗಲಿದ್ದು, ಇದರಲ್ಲಿ ಸರ್ಕಾರದ ಹಸ್ತಕ್ಷೇಪ ಇರುವುದಿಲ್ಲ ಎಂದರು. ಜತೆಗೆ ಮಂಡಳಿಯಲ್ಲಿ ಮೂರನೇ ಒಂದರಷ್ಟು ಸ್ಥಾನಗಳು ಖಾಲಿಯಾದರೆ ಖಾಲಿ ಇರುವ ಸ್ಥಾನಗಳಿಗೆ ಮತ್ತೆ ಚುನಾವಣೆ ನಡೆಸಲು ನಿಯಮ ರೂಪಿಸಲಾಗಿದೆ. ಇದರೊಂದಿಗೆ ಮಂಡಳಿಯ ಸಭೆಗಳಲ್ಲಿ ಶಿಸ್ತು ಮತ್ತು ಸಹಕಾರ ಸಂಘಗಳ ಸುಗಮ ಕಾರ್ಯನಿರ್ವಹಣೆಗೆ ನಿಬಂಧನೆಗಳನ್ನು ಮಾಡಲಾಗಿದೆ. ಸಮಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು 3 ತಿಂಗಳೊಳಗೆ ಮಂಡಳಿಯ ಸಭೆಯನ್ನು ಕರೆಯಬೇಕಾಗುತ್ತದೆ. ಸಹಕಾರಿ ಸಂಘದ ಆಡಳಿತದಲ್ಲಿ ಪಾರದರ್ಶಕತೆ ತರಲು ಈಕ್ವಿಟಿ ಷೇರುದಾರರಿಗೆ ಬಹುಮತ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಈ ಮಸೂದೆಯಲ್ಲಿ ಒಂದು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ಮತ್ತು ಒಬ್ಬ ಮಹಿಳೆಗೆ ಮೀಸಲಾತಿಯನ್ನು ಒದಗಿಸಲಾಗಿದೆ, ಇದು ಸಮಿತಿಗಳಲ್ಲಿ ಈ ವರ್ಗಗಳ ಪ್ರಾತಿನಿಧ್ಯವನ್ನು ಹೆಚ್ಚಿಸುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ವಿವಿಧ ಸಾಂವಿಧಾನಿಕ ಅವಶ್ಯಕತೆಗಳನ್ನು ಅನುಸರಿಸದಿರುವುದು ಮಂಡಳಿ ಸದಸ್ಯರ ಅನರ್ಹತೆಗೆ ಕಾರಣವಾಗಬಹುದು ಎಂದು ಅವರು ಹೇಳಿದರು. ಉದ್ಯೋಗಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಯಾರಿಗೂ ರಕ್ತ ಸಂಬಂಧಿ ಅಥವಾ ದೂರದ ಸಂಬಂಧಿಗೆ ಕೆಲಸ ನೀಡುವುದಿಲ್ಲ ಎಂದು ಶ್ರೀ ಶಾ ಹೇಳಿದರು. ಈ ಮಸೂದೆಯಲ್ಲಿ ಮಾಹಿತಿ ಹಕ್ಕನ್ನೂ ಸೇರಿಸಲಾಗಿದೆ ಎಂದರು.

ಈ ಸದನವು ಈ ಮಸೂದೆಯನ್ನು ಅಂಗೀಕರಿಸುವುದರೊಂದಿಗೆ ದೇಶದ ಸಹಕಾರಿ ಚಳವಳಿಯಲ್ಲಿ ಹೊಸ ಯುಗ ಪ್ರಾರಂಭವಾಗಲಿದೆ ಎಂದು ಸಹಕಾರ ಸಚಿವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಹಕಾರ ಸಚಿವಾಲಯವು ದೇಶದಲ್ಲಿ ಸಹಕಾರ ಸಂಸ್ಥೆಗಳನ್ನು ಬಲಪಡಿಸಲು ಕೈಗೊಂಡಿರುವ ವಿವಿಧ ಕ್ರಮಗಳ ಬಗ್ಗೆಯೂ ಕೇಂದ್ರ ಸಹಕಾರ ಸಚಿವರು ಲೋಕಸಭೆಗೆ ತಿಳಿಸಿದರು. ಸ್ವಾತಂತ್ರ್ಯ ಬಂದಾಗಿನಿಂದಲೂ ದೇಶದ ಸಹಕಾರಿ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ಜನರು ಸಹಕಾರಿ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಪ್ರಾಮುಖ್ಯತೆ ನೀಡಬೇಕು ಮತ್ತು ಪ್ರತ್ಯೇಕ ಸಹಕಾರ ಸಚಿವಾಲಯವನ್ನು ರಚಿಸಬೇಕು ಎಂದು ಬಯಸಿದ್ದರು. ಈ ದಶಕಗಳಷ್ಟು ಹಿಂದಿನ ಬೇಡಿಕೆಯನ್ನು ಈಡೇರಿಸಲು ಪ್ರಧಾನಿ ಮೋದಿ ಅವರು ಪ್ರತ್ಯೇಕ ಸಹಕಾರ ಸಚಿವಾಲಯವನ್ನು ರಚಿಸಿದ್ದಾರೆ ಎಂದು ಶ್ರೀ ಶಾ ಹೇಳಿದರು.

ಭಾರತದಲ್ಲಿ ಸಹಕಾರಿ ಆಂದೋಲನವು ಸುಮಾರು 115 ವರ್ಷಗಳಷ್ಟು ಹಳೆಯದಾಗಿದೆ ಮತ್ತು ಈ ಆಂದೋಲನವು ದೇಶಕ್ಕೆ ಅಮುಲ್, ಕ್ರಿಬ್ಕೋ, ಇಫ್ಕೋ ದಂತಹ ಹಲವಾರು ಪ್ರಮುಖ ಉದ್ಯಮಗಳನ್ನು ನೀಡಿದೆ, ಅವು ಇಂದು ಲಕ್ಷಾಂತರ ಜನರಿಗೆ ಉದ್ಯೋಗದ ಮೂಲವಾಗಿವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಕಳೆದ 75 ವರ್ಷಗಳಲ್ಲಿ ಸಹಕಾರಿ ಸಂಘಗಳತ್ತ ಗಮನ ಹರಿಸಲಿಲ್ಲ, ರಾಷ್ಟ್ರ ಅಥವಾ ರಾಜ್ಯ ಮಟ್ಟದಲ್ಲಿ ದೇಶದ ಸಂಸತ್ತಿನಲ್ಲಿ ಈ ಬಗ್ಗೆ ಚಿಂತನ ಮಂಥನವೂ ನಡೆಯಲಿಲ್ಲ ಎಂದರು. ಸಹಕಾರ ಸಚಿವಾಲಯ ರಚನೆಯಾದ ಮುಂದಿನ 25 ವರ್ಷಗಳಲ್ಲಿ ಸಹಕಾರಿ ಕ್ಷೇತ್ರವು ಮತ್ತೊಮ್ಮೆ ದೇಶದ ಅಭಿವೃದ್ಧಿಗೆ ಬಲವಾಗಿ ಕೊಡುಗೆ ನೀಡಲಿದೆ ಎಂದು ಶ್ರೀ ಶಾ ಹೇಳಿದರು.

ಶ್ರೀ ಮೋದಿಯವರ ನೇತೃತ್ವದಲ್ಲಿ ಕಳೆದ ಎರಡು ವರ್ಷಗಳಲ್ಲಿ ದೇಶದ ಸಹಕಾರಿ ಕ್ಷೇತ್ರದಲ್ಲಿ ಹಲವು ಪ್ರಮುಖ ಬದಲಾವಣೆಗಳಾಗಿವೆ ಎಂದು ಕೇಂದ್ರ ಸಹಕಾರ ಸಚಿವರು ಹೇಳಿದರು. ಕೇಂದ್ರ ಸರ್ಕಾರವು ಪಿ ಎ ಸಿ ಎಸ್ ಗಳನ್ನು ಪುನಶ್ಚೇತನಗೊಳಿಸಲು, ಅವುಗಳನ್ನು ಕಾರ್ಯಸಾಧ್ಯ ಮತ್ತು ಬಹು ಆಯಾಮದ ಸಂಸ್ಥೆಗಳನ್ನಾಗಿ ಮಾಡಲು ಹಲವಾರು ಪ್ರಯತ್ನಗಳನ್ನು ಮಾಡಿದೆ ಎಂದು ಅವರು ಹೇಳಿದರು. 2500 ಕೋಟಿ ರೂ.ವೆಚ್ಚದಲ್ಲಿ ದೇಶದಾದ್ಯಂತ 63,000 ಪಿ ಎ ಸಿ ಎಸ್ ಗಳ ಗಣಕೀಕರಣದ ಕೆಲಸವನ್ನು ಪ್ರಧಾನಿ ಮೋದಿ ಮಾಡಿದ್ದಾರೆ ಎಂದರು. ಇದು ಜಿಲ್ಲಾ ಸಹಕಾರಿ ಬ್ಯಾಂಕ್ಗಳು, ರಾಜ್ಯ ಸಹಕಾರಿ ಬ್ಯಾಂಕ್ಗಳು ಮತ್ತು ನಬಾರ್ಡ್ನೊಂದಿಗೆ ಪಿ ಎ ಸಿ ಎಸ್ ಗಳ ಸಂಪರ್ಕವನ್ನು ಖಚಿತಪಡಿಸುತ್ತದೆ.

ಗಣಕೀಕರಣದ ನಂತರ, ಪಿ ಎ ಸಿ ಎಸ್ ಗಳ ಲೆಕ್ಕಪರಿಶೋಧನೆಯ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್ಲೈನ್ ಆಗಿರುತ್ತದೆ ಮತ್ತು ಅವುಗಳು ವಿವಿಧ ರೀತಿಯ ವ್ಯವಹಾರಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಶ್ರೀ ಶಾ ಹೇಳಿದರು. ಮೋದಿ ಸರ್ಕಾರವು ಪಿ ಎ ಸಿ ಎಸ್ ಗೆ ಮಾದರಿ ಬೈ-ಲಾಗಳನ್ನು ತಯಾರಿಸಿ ಎಲ್ಲಾ ರಾಜ್ಯಗಳಿಗೆ ಕಳುಹಿಸಿದೆ ಮತ್ತು ಬಂಗಾಳ ಮತ್ತು ಕೇರಳ ಹೊರತುಪಡಿಸಿ ಎಲ್ಲಾ ರಾಜ್ಯಗಳು ಅದನ್ನು ಒಪ್ಪಿಕೊಂಡಿವೆ ಮತ್ತು ಇಂದು ದೇಶಾದ್ಯಂತ ಪಿ ಎ ಸಿ ಎಸ್ ಇದೇ ಕಾನೂನಿನ ಅಡಿಯಲ್ಲಿ ನಡೆಯುತ್ತಿವೆ ಎಂದು ಹೇಳಿದರು. ಈಗ ಪಿ ಎ ಸಿ ಎಸ್ ಗಳು ಎಫ್ ಪಿ ಒ ಕೆಲಸವನ್ನೂ ಮಾಡಲು ಸಾಧ್ಯವಾಗುತ್ತದೆ ಮತ್ತು 1100 ಪಿ ಎ ಸಿ ಎಸ್ ಗಳನ್ನು ಈಗಾಗಲೇ ಎಫ್ ಪಿ ಒ ಆಗಿ ನೋಂದಾಯಿಸಲಾಗಿದೆ ಎಂದು ಶ್ರೀ ಶಾ ಹೇಳಿದರು.

ಶ್ರೀ ಮೋದಿಯವರು ದೇಶದ ಕೋಟ್ಯಂತರ ಜನರಿಗೆ ಗ್ಯಾಸ್ ಸಿಲಿಂಡರ್ಗಳನ್ನು ನೀಡಿದ್ದಾರೆ ಮತ್ತು ಈಗ ಪಿ ಎ ಸಿ ಎಸ್ ಗಳು ಎಲ್ ಪಿ ಜಿ ವಿತರಣೆಯ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಅದೇ ರೀತಿ, ಶ್ರೀ ಮೋದಿಯವರು ದೇಶದ ಕೋಟಿಗಟ್ಟಲೆ ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ನೀಡುತ್ತಿದ್ದಾರೆ ಮತ್ತು ಈಗ ಪಿ ಎ ಸಿ ಎಸ್ ಸಹ ಚಿಲ್ಲರೆ ಅಂಗಡಿಗಳಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಈಗ ಪಿ ಎ ಸಿ ಎಸ್ ಕೂಡ ಜನೌಷಧಿ ಕೇಂದ್ರಗಳನ್ನು ನಡೆಸಲು ಸಾಧ್ಯವಾಗುತ್ತದೆ ಮತ್ತು ಜಲ ಸಮಿತಿಯಾಗಿ ಕಾರ್ಯನಿರ್ವಹಿಸುವ ಮೂಲಕ ನೀರು ವಿತರಣೆಯ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ. ಶ್ರೀ ಮೋದಿಯವರು ಪಿ ಎ ಸಿ ಎಸ್ ಗಳನ್ನು ದಾಸ್ತಾನು ವ್ಯವಸ್ಥೆಯೊಂದಿಗೆ ಸಂಪರ್ಕಿಸಿದ್ದಾರೆ ಮತ್ತು ಈಗ ಅವುಗಳು  ಸಂಗ್ರಹಣೆಯಲ್ಲಿ ತೊಡಗಿಸಿಕೊಂಡಿವೆ ಎಂದು ಅವರು ಹೇಳಿದರು. ಈ ಬಜೆಟ್ನಲ್ಲಿ ಶ್ರೀ ಮೋದಿಯವರು ಸಹಕಾರಿ ಸಂಸ್ಥೆಗಳಿಗೆ ಹಲವು ವರ್ಷಗಳಿಂದ ಮಾಡಿದ ಅನ್ಯಾಯವನ್ನು ಕೊನೆಗೊಳಿಸಿದ್ದಾರೆ ಮತ್ತು ಸಹಕಾರಿ ಮತ್ತು ಕಾರ್ಪೊರೇಟ್ ತೆರಿಗೆಗಳನ್ನು ಸಮಾನವಾಗಿ ತಂದಿದ್ದಾರೆ ಎಂದು ಶ್ರೀ ಶಾ ಹೇಳಿದರು. ಮಹಾರಾಷ್ಟ್ರ, ಗುಜರಾತ್, ಕರ್ನಾಟಕ ಮತ್ತು ಉತ್ತರ ಪ್ರದೇಶದ ರೈತರು ತಮ್ಮ ಕಬ್ಬನ್ನು ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಮಾರಾಟ ಮಾಡುತ್ತಾರೆ, ಆದರೆ ಅದರ ಮೇಲೆ 30 ಪ್ರತಿಶತ ಆದಾಯ ತೆರಿಗೆ ವಿಧಿಸಲಾಗುತ್ತಿತ್ತು. ಶ್ರೀ ಮೋದಿಯವರು ರೈತರ ಲಾಭದ ಮೇಲಿನ ತೆರಿಗೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿದ್ದಾರೆ ಮತ್ತು ಅಷ್ಟೇ ಅಲ್ಲ, ಹಿಂದೆ ಪಾವತಿಸಿದ ತೆರಿಗೆಯನ್ನು ಮರುಪಾವತಿಸಲು ಅವಕಾಶ ಕಲ್ಪಿಸಿದ್ದಾರೆ ಎಂದು ಅವರು ಹೇಳಿದರು.

ಸಹಕಾರಿ ಸಂಸ್ಥೆಗಳನ್ನು ಬಲಪಡಿಸಲು 3 ಹೊಸ ಬಹು-ರಾಜ್ಯ ಸಂಘಗಳನ್ನು ರಚಿಸಲು ಮೋದಿ ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಸಹಕಾರ ಸಚಿವರು ಹೇಳಿದರು. ಮೊದಲ ಸಂಘವು ರೈತರ ಉತ್ಪನ್ನಗಳನ್ನು ರಫ್ತು ಮಾಡಲು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಎರಡನೇ ಸಂಘವು ಸಣ್ಣ ರೈತರನ್ನು ಬೀಜಗಳ ಉತ್ಪಾದನೆಯೊಂದಿಗೆ ಸಂಯೋಜಿಸುತ್ತದೆ ಮತ್ತು ಈ ಮೂಲಕ 1 ಎಕರೆ ಜಮೀನು ಹೊಂದಿರುವ ರೈತರು ಬೀಜ ಉತ್ಪಾದನೆಯೊಂದಿಗೆ ಸಹ ಸಂಬಂಧ ಹೊಂದಲು ಸಾಧ್ಯವಾಗುತ್ತದೆ. ಮೂರನೇ ಸಂಘವು ರೈತರ ಸಾವಯವ ಉತ್ಪನ್ನಗಳನ್ನು ದೇಶ ಮತ್ತು ಪ್ರಪಂಚದಾದ್ಯಂತ ಮಾರಾಟ ಮಾಡುವ ಮೂಲಕ ಅವರ ಉತ್ಪನ್ನಗಳಿಗೆ ಸೂಕ್ತ ಬೆಲೆಯನ್ನು ನೀಡುತ್ತದೆ. ಇದಲ್ಲದೇ ಮುಂದಿನ ದಿನಗಳಲ್ಲಿ ಸಹಕಾರಿ ಶಿಕ್ಷಣಕ್ಕಾಗಿ ಸಹಕಾರಿ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಿರ್ಧರಿಸಿದ್ದಾರೆ ಎಂದು ಶ್ರೀ ಶಾ ಹೇಳಿದರು. ರಾಷ್ಟ್ರೀಯ ಸಹಕಾರಿ ಡೇಟಾಬೇಸ್ ಅನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶೀಘ್ರದಲ್ಲೇ ಪ್ರಾರಂಭಿಸಲಿದ್ದಾರೆ. 2003 ರಿಂದ 2020 ರ ನಡುವೆ ದೇಶದಲ್ಲಿ ಎಂದಿಗೂ ರಾಷ್ಟ್ರೀಯ ಸಹಕಾರಿ ನೀತಿ ಇರಲಿಲ್ಲ, ಆದರೆ ಶ್ರೀ ಮೋದಿಯವರ ನೇತೃತ್ವದಲ್ಲಿ ಈ ವರ್ಷದ ದೀಪಾವಳಿಯ ಮೊದಲು ಹೊಸ ರಾಷ್ಟ್ರೀಯ ಸಹಕಾರಿ ನೀತಿಯನ್ನು ರೂಪಿಸಲಾಗುವುದು, ಅದು ಮುಂದಿನ 25 ವರ್ಷಗಳವರೆಗೆ ಸಹಕಾರಿ ಸಂಸ್ಥೆಗಳ ಮಾರ್ಗನಕ್ಷೆಯನ್ನು ದೇಶದ ಮುಂದೆ ಇಡಲಿದೆ ಎಂದು ಹೇಳಿದರು.

ಕಳೆದ 9 ವರ್ಷಗಳಲ್ಲಿ ದೇಶದ ಕೋಟ್ಯಂತರ ಜನರನ್ನು ಬಡತನದಿಂದ ಮುಕ್ತಗೊಳಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರಮಿಸಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ದೇಶದಲ್ಲಿ ಉದ್ಯೋಗ ಸೃಷ್ಟಿಸಲು ಕೃಷಿ ಮತ್ತು ಸಹಕಾರಿ ಸಂಸ್ಥೆಗಳು ಏಕೈಕ ಮಾರ್ಗವಾಗಿವೆ ಮತ್ತು ಇದಕ್ಕಾಗಿ ಪ್ರತ್ಯೇಕ ಸಹಕಾರ ಸಚಿವಾಲಯವನ್ನು ಪ್ರಧಾನಿ ಸ್ಥಾಪಿಸಿದ್ದಾರೆ ಎಂದು ಅವರು ಹೇಳಿದರು.

ಸದಸ್ಯರ ಚುನಾವಣಾ ಪ್ರಕ್ರಿಯೆಯನ್ನು ಸುಧಾರಿಸುವುದು, ಸಂಘದಲ್ಲಿ ಪಾರದರ್ಶಕತೆ ತರುವುದು, ಮೇಲ್ವಿಚಾರಣಾ ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ವ್ಯವಹಾರವನ್ನು ಸುಲಭಗೊಳಿಸುವುದು ಮುಂತಾದ ವಿಷಯಗಳಿಗೆ ವಿವರವಾದ ನಿಬಂಧನೆಗಳನ್ನು ಮಸೂದೆಯಲ್ಲಿ ಮಾಡಲಾಗಿದೆ ಎಂದು ಅವರು ಹೇಳಿದರು.

ಸಂಘದ ಸದಸ್ಯರಲ್ಲಿ ಶಿಸ್ತು ಮತ್ತು ವೃತ್ತಿಪರತೆ, ನಿರ್ದೇಶಕರ ಮಂಡಳಿಯಲ್ಲಿ ದುರ್ಬಲ ಮತ್ತು ನಿರ್ಲಕ್ಷಿತ ವರ್ಗಗಳ ಪ್ರಾತಿನಿಧ್ಯದ ಬಗ್ಗೆಯೂ ಮಸೂದೆಯಲ್ಲಿ ನಿಬಂಧನೆಗಳನ್ನು ಮಾಡಲಾಗಿದೆ. ಉದ್ಯೋಗಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವುದು, ಕೇಂದ್ರೀಯ ರಿಜಿಸ್ಟ್ರಾರ್ ಅನುಮೋದಿಸಿದ ಸಮಿತಿಯಿಂದ ಲೆಕ್ಕ ಪರಿಶೋಧಕರ ನೇಮಕ ಮತ್ತು ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರಗಳ ನಿಗದಿತ ಮಾನದಂಡಗಳ ಮೂಲಕ ಆರ್ಥಿಕ ಶಿಸ್ತು ತರುವುದು ಮುಂತಾದ ವಿಷಯಗಳಿಗೆ ಸಂಬಂಧಿಸಿದ ನಿಬಂಧನೆಗಳನ್ನು ಮಸೂದೆ ಒಳಗೊಂಡಿದೆ.

ಮಸೂದೆಯಲ್ಲಿ, ಏಕಕಾಲದ ಲೆಕ್ಕಪರಿಶೋಧನೆಯ ಮೂಲಕ ತ್ವರಿತವಾಗಿ ಸರಿಪಡಿಸುವ ಕ್ರಮ, ಸೊಸೈಟಿಯ ಮೋಸದ ಮತ್ತು ಕಾನೂನುಬಾಹಿರ ಚಟುವಟಿಕೆಗಳಿಗೆ ಕೇಂದ್ರೀಯ ರಿಜಿಸ್ಟ್ರಾರ್ ಅವರ ಶಿಸ್ತಿನ ಅನುಸರಣೆ, ಅದರ ರಚನೆ ಮತ್ತು ಅದರ ಕಾರ್ಯಚಟುವಟಿಕೆ ಮತ್ತು ಆರ್ಥಿಕ ಸ್ಥಿತಿಯ ತನಿಖೆಯನ್ನು ಸಹ ಒತ್ತಿಹೇಳಲಾಗಿದೆ. ಸುಲಭವಾಗಿ ವ್ಯವಹಾರ ಮಾಡುವುದನ್ನು ಖಚಿತಪಡಿಸಿಕೊಳ್ಳಲು, ನೋಂದಣಿ ಕಾರ್ಯವಿಧಾನಗಳಲ್ಲಿ ತಿದ್ದುಪಡಿ, ಅರ್ಜಿಗಳ ತ್ವರಿತ ವಿಲೇವಾರಿ ಮತ್ತು ಅರ್ಜಿಗಳು, ದಾಖಲೆಗಳು ಮತ್ತು ಅವುಗಳ ಪರಿಶೀಲನೆ ಇತ್ಯಾದಿಗಳ ಎಲೆಕ್ಟ್ರಾನಿಕ್ ಸಲ್ಲಿಕೆಗೆ ಸಹ ಮಸೂದೆಯು ನಿಬಂಧನೆಗಳನ್ನು ಹೊಂದಿದೆ.

ಸರ್ಕಾರದ ಪೂರ್ವಾನುಮತಿಯೊಂದಿಗೆ ಸರ್ಕಾರಿ ಷೇರುಗಳನ್ನು ಮರುಪಡೆಯಲು, ಬಹು-ರಾಜ್ಯ ಸಹಕಾರ ಸಂಘದಿಂದ ವಿಚಾರಣೆಗೆ ಅವಕಾಶವನ್ನು ಒದಗಿಸಿದ ನಂತರ ಪರಿಸಮಾಪ್ತಿ ಮಾಡಲು ಮತ್ತು ಸಹಕಾರಿ ಬ್ಯಾಂಕುಗಳಲ್ಲಿ ಬ್ಯಾಂಕಿಂಗ್ ನಿಯಂತ್ರಣ (ಬಿಆರ್) ಕಾಯಿದೆ, 1949 ಅನ್ನು ಜಾರಿಗೊಳಿಸಲು ಮಸೂದೆಯು ಅವಕಾಶ ಒದಗಿಸುತ್ತದೆ.

****



(Release ID: 1942624) Visitor Counter : 168