ಸಹಕಾರ ಸಚಿವಾಲಯ

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳ (ಪಿಎಸಿಎಸ್) ಸಾಮಾನ್ಯ ಸೇವಾ ಕೇಂದ್ರ (ಸಿ ಎಸ್ ಸಿ) ಸೇವೆಗಳನ್ನು ಪ್ರಾರಂಭಿಸುವ ಕುರಿತ ರಾಷ್ಟ್ರೀಯ ಬೃಹತ್ ಸಮಾವೇಶವನ್ನು ಉದ್ಘಾಟಿಸಿದರು


ಪಿಎಸಿಎಸ್ ಮತ್ತು ಸಿ ಎಸ್ ಸಿ ಗಳ ಏಕೀಕರಣದೊಂದಿಗೆ, ಸಹಕಾರ ಸಂಘಗಳನ್ನು ಬಲಪಡಿಸುವ ಮತ್ತು ಡಿಜಿಟಲ್ ಇಂಡಿಯಾವನ್ನು ಉತ್ತೇಜಿಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಎರಡು ಸಂಕಲ್ಪಗಳು ಇಂದು ನೆರವೇರುತ್ತಿವೆ.

ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ 300 ಕ್ಕೂ ಹೆಚ್ಚು ಯೋಜನೆಗಳನ್ನು ಸಿ ಎಸ್ ಸಿ ಯೊಂದಿಗೆ ಜೋಡಿಸಲಾಗಿದೆ, ಹಳ್ಳಿಯಲ್ಲಿರುವ ಬಡ ಜನರ ಬಳಿಗೆ ಸಿ ಎಸ್ ಸಿ ಯನ್ನು ಕೊಂಡೊಯ್ಯಲು ಪಿಎಸಿಎಸ್ ಗಿಂತ ದೊಡ್ಡದಾದ ಮಾರ್ಗವಿಲ್ಲ.

ಪಿಎಸಿಎಸ್ ಮತ್ತು ಸಿ ಎಸ್ ಸಿ ಗಳ ಏಕೀಕರಣದಿಂದ ಬಡವರಿಗೆ ಸೌಲಭ್ಯಗಳು ಹೆಚ್ಚಾಗುತ್ತವೆ, ಇದರೊಂದಿಗೆ ಗ್ರಾಮೀಣ ಆರ್ಥಿಕತೆಗೆ ಹೊಸ ಶಕ್ತಿ ಮತ್ತು ಬಲ ದೊರೆಯುತ್ತದೆ, ಇದು ದೇಶದ ಅಭಿವೃದ್ಧಿಗೆ ಗರಿಷ್ಠ ಸಾಮರ್ಥ್ಯವನ್ನು ಬಳಸಿಕೊಳ್ಳುವಲ್ಲಿ ನಮಗೆ ಸಹಾಯ ಮಾಡುತ್ತದೆ.

ಸಹಕಾರಿ ಆಂದೋಲನವನ್ನು ಬಲಗೊಳಿಸಬೇಕಾದರೆ ಅದರ ಚಿಕ್ಕ ಘಟಕವಾದ ಪಿಎಸಿಎಸ್ ಅನ್ನು ಬಲಪಡಿಸಬೇಕು, ಪಿಎಸಿಎಸ್ ಬಲಗೊಳ್ಳದವರೆಗೆ ಸಹಕಾರಿ ಚಳುವಳಿ ಶಕ್ತಿಯುತವಾಗುವುದಿಲ್ಲ.

ಮೋದಿ ಸರ್ಕಾರವು ಪಿಎಸಿಎಸ್ ಗಳನ್ನು ಪಾರದರ್ಶಕವಾಗಿ ಮಾಡುವ ಮೂಲಕ ಹೊಣೆಗಾರಿಕೆಯನ್ನು ಖಾತ್ರಿಪಡಿಸುತ್ತಿದೆ ಮತ್ತು ಸರ್ಕಾರದ ಯೋಜನೆಗಳನ್ನು ಪಿಎಸಿಎಸ್ ನೊಂದಿಗೆ ಜೋಡಿಸಲು ಅವುಗಳನ್ನು ಆಧುನೀಕರಿಸುತ್ತಿದೆ.

'ಭ್ರಷ್ಟಾಚಾರ ರಹಿತ ಕೊನೆಯ ಮೈಲಿ ವಿತರಣೆಯೊಂದಿಗೆ ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ' ಎಂಬ ಮಂತ್ರವನ್ನು ಸಾಕಾರಗೊಳಿಸಲು ಸಿ ಎಸ್ ಸಿ ಗಿಂತ ಉತ್ತಮವಾದ ಮಾರ್ಗವಿಲ್ಲ.

ಸಿ ಎಸ್ ಸಿ ಯಲ್ಲಿ ಇದುವರೆಗೆ 17,176 ಪಿಎಸಿಎಸ್ ಗಳು ನೋಂದಣಿಯಾಗಿದ್ದು, ಈ ಪೈಕಿ 6,670 ತಮ್ಮ ಕೆಲಸ ಆರಂಭಿಸಿವೆ, ಮುಂದಿನ 15 ದಿನಗಳಲ್ಲಿ ಉಳಿದ ಪಿಎಸಿಎಸ್ ಗಳೂ ಕೆಲಸ ಆರಂಭಿಸಲಿದ್ದು, ಇದರಿಂದ ಸುಮಾರು 14,000 ಗ್ರಾಮೀಣ ಯುವಕರಿಗೆ ಉದ್ಯೋಗ ದೊರೆಯಲಿದೆ.

ಮೋದಿ ಸರ್ಕಾರದ ಸಹಕಾರಿ ಯೋಜನೆಗಳು ಮತ್ತು ನಿರಂತರ ಸುಧಾರಣೆಗಳು ತಳಮಟ್ಟವನ್ನು ತಲುಪುತ್ತವೆ, ಆಗ ಸಹಕಾರಿ ಚಳುವಳಿ ಬಲಗೊಳ್ಳುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.

Posted On: 21 JUL 2023 4:18PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳ (ಪಿಎಸಿಎಸ್) ಸಾಮಾನ್ಯ ಸೇವಾ ಕೇಂದ್ರ (ಸಿ ಎಸ್ ಸಿ) ಸೇವೆಗಳನ್ನು ಪ್ರಾರಂಭಿಸುವ ಕುರಿತ ರಾಷ್ಟ್ರೀಯ ಬೃಹತ್ ಸಮಾವೇಶವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ, ಕೇಂದ್ರ ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್, ಕೇಂದ್ರ ಸಹಕಾರ ರಾಜ್ಯ ಸಚಿವ ಶ್ರೀ ಬಿ ಎಲ್ ವರ್ಮಾ, ಸಹಕಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಜ್ಞಾನೇಶ್ ಕುಮಾರ್, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಲ್ಕೇಶ್ ಕುಮಾರ್ ಶರ್ಮಾ ಮತ್ತು ಸಿ ಎಸ್ ಸಿ-ಎಸ್ ಪಿ ವಿ ಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಸಂಜಯ್ ರಾಕೇಶ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರು, ಪಿಎಸಿಎಸ್ ಮತ್ತು ಸಿ ಎಸ್ ಸಿ ಗಳ ಏಕೀಕರಣದೊಂದಿಗೆ ಸಹಕಾರ ಸಂಘಗಳನ್ನು ಬಲಪಡಿಸುವ ಮತ್ತು ಡಿಜಿಟಲ್ ಇಂಡಿಯಾವನ್ನು ಉತ್ತೇಜಿಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಎರಡು ಸಂಕಲ್ಪಗಳು ಇಂದು ಈಡೇರುತ್ತಿವೆ ಎಂದು ಹೇಳಿದರು. ಡಿಜಿಟಲ್ ಇಂಡಿಯಾ ಮಿಷನ್ ಅಡಿಯಲ್ಲಿ ಸಿ ಎಸ್ ಸಿ ಮೂಲಕ ಆಡಳಿತದಿಂದ ಭ್ರಷ್ಟಾಚಾರವನ್ನು ತೊಡೆದುಹಾಕಲು ಮತ್ತು ಬಡ ಜನರ ಮನೆ ಬಾಗಿಲಿಗೆ ಸೌಲಭ್ಯಗಳನ್ನು ತಲುಪಿಸಲು ಮತ್ತು ಸಹಕಾರ ಸಚಿವಾಲಯವನ್ನು ರಚಿಸುವ ಮೂಲಕ ಪಿಎಸಿಎಸ್ನಿಂದ ಅಪೆಕ್ಸ್ ವರೆಗೆ ಸಂಪೂರ್ಣ ಸಹಕಾರ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ಪ್ರಧಾನಿ ಮೋದಿಯವರು ಕೈಗೊಂಡ ನಿರ್ಣಯಗಳು ಇಂದು ಸಾಕಾರವಾಗಿವೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸಹಕಾರ ಸಚಿವಾಲಯಕ್ಕೆ ಮಹತ್ತರವಾದ ದೂರದೃಷ್ಟಿಯಿಂದ ಮಾರ್ಗದರ್ಶನ ನೀಡಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಸಹಕಾರಿ ಆಂದೋಲನವನ್ನು ಬಲಪಡಿಸಬೇಕಾದರೆ ಅದರ ಚಿಕ್ಕ ಘಟಕವಾದ ಪಿಎಸಿಎಸ್ ಅನ್ನು ಬಲಪಡಿಸಬೇಕು. ಪಿಎಸಿಎಸ್ ಬಲಗೊಳ್ಳುವವರೆಗೂ ಸಹಕಾರಿ ಚಳವಳಿಯನ್ನು ಬಲಪಡಿಸಲು ಸಾಧ್ಯವಿಲ್ಲ ಎಂದು ಶ್ರೀ ಶಾ ಹೇಳಿದರು. ಆದ್ದರಿಂದ, ಪಿಎಸಿಎಸ್ ಗಳನ್ನು ಪಾರದರ್ಶಕವಾಗಿಸಲು, ಅವುಗಳ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅವುಗಳನ್ನು ಆಧುನೀಕರಿಸಲು ಸರ್ಕಾರ ನಿರ್ಧರಿಸಿದೆ, ಇದರಿಂದ ಸರ್ಕಾರದ ಡಿಜಿಟಲೀಕರಣ ಯೋಜನೆಗಳನ್ನು ಪಿಎಸಿಎಸ್ನೊಂದಿಗೆ ಸಂಯೋಜಿಸಬಹುದು. ಸಹಕಾರ ಸಚಿವಾಲಯ ರಚನೆಯಾದ 20 ದಿನಗಳಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಿಎಸಿಎಸ್ ಗಳ ಗಣಕೀಕರಣಕ್ಕಾಗಿ 2,500 ಕೋಟಿ ರೂ.ಗಳನ್ನು ಒದಗಿಸಿದ್ದಾರೆ, ಈ ಕಾರಣದಿಂದಾಗಿ 65,000 ಪಿಎಸಿಎಸ್ ಗಳನ್ನು ಗಣಕೀಕರಣಗೊಳಿಸಲಾಗುತ್ತಿದೆ ಎಂದು ಶ್ರೀ ಶಾ ಹೇಳಿದರು.

‘ಭ್ರಷ್ಟಾಚಾರ ರಹಿತ ಕೊನೆಯ ಮೈಲಿ ವಿತರಣೆಯೊಂದಿಗೆ ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತʼಎಂಬ ಸೂತ್ರವನ್ನು ಜಾರಿಗೆ ತರಲು ಸಿ ಎಸ್ ಸಿ ಗಿಂತ ದೊಡ್ಡ ಮಾರ್ಗ ಇನ್ನೊಂದಿಲ್ಲ ಎಂದು ಕೇಂದ್ರ ಸಹಕಾರ ಸಚಿವರು ಹೇಳಿದರು. ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ 300 ಕ್ಕೂ ಹೆಚ್ಚು ಸಣ್ಣ ಫಲಾನುಭವಿ ಯೋಜನೆಗಳನ್ನು ಸಿ ಎಸ್ ಸಿ ಯೊಂದಿಗೆ ಸಂಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಹಳ್ಳಿಗಳಲ್ಲಿನ ಬಡವರು, ಭೂರಹಿತ ಕೃಷಿ ಕಾರ್ಮಿಕರು ಮತ್ತು ದಲಿತ ಮತ್ತು ಬುಡಕಟ್ಟು ಸಮುದಾಯಗಳಿಗೆ ಸಿ ಎಸ್ ಸಿ ಸೇವೆಗಳನ್ನು ತಲುಪಿಸಲು ಪಿಎಸಿಎಸ್ ಗಿಂತ ಉತ್ತಮ ಮಾರ್ಗವಿಲ್ಲ ಎಂದು ಅವರು ಹೇಳಿದರು. ಇಂದು ಪಿಎಸಿಎಸ್ ಮತ್ತು ಸಿ ಎಸ್ ಸಿ ಏಕೀಕರಣಗೊಳ್ಳುತ್ತಿವೆ, ಇದು ಬಡವರ ಸೌಲಭ್ಯಗಳನ್ನು ಹೆಚ್ಚಿಸುವುದಲ್ಲದೆ, ಗ್ರಾಮೀಣ ಆರ್ಥಿಕತೆಯು ಹೊಸ ಶಕ್ತಿ ಮತ್ತು ಬಲನ್ನು ಪಡೆಯುತ್ತದೆ. ಇದರೊಂದಿಗೆ, ನಾವು ದೇಶದ ಅಭಿವೃದ್ಧಿಗೆ ಗರಿಷ್ಠ ಸಾಮರ್ಥ್ಯವನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.


 

ಇದುವರೆಗೆ 17,176 ಪಿಎಸಿಎಸ್ ಗಳನ್ನು ಸಿ ಎಸ್ ಸಿ ಗಳೊಂದಿಗೆ ನೋಂದಾಯಿಸಲಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಎರಡು ತಿಂಗಳ ಅಲ್ಪಾವಧಿಯಲ್ಲಿ 17,000 ಕ್ಕೂ ಹೆಚ್ಚು ಪಿಎಸಿಎಸ್ ಗಳು ಇದರಲ್ಲಿ ಸೇರಿರುವುದು ದೊಡ್ಡ ಸಾಧನೆಯಾಗಿದೆ ಎಂದು ಅವರು ಹೇಳಿದರು. ಈ ಮಹತ್ವದ ಸಾಧನೆಗಾಗಿ ಸಹಕಾರ ಸಚಿವಾಲಯದ ಕಾರ್ಯದರ್ಶಿ ಮತ್ತು ಸಚಿವಾಲಯದ ಸಂಪೂರ್ಣ ತಂಡವನ್ನು ಶ್ರೀ ಶಾ ಅಭಿನಂದಿಸಿದರು. 17,176 ಪಿಎಸಿಎಸ್ ಗಳಲ್ಲಿ ಸುಮಾರು 6,670 ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಉಳಿದ ಪಿಎಸಿಎಸ್ ಗಳು ಸಹ ಮುಂದಿನ 15 ದಿನಗಳಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತವೆ ಎಂದು ಅವರು ಹೇಳಿದರು. ಇದರಿಂದ ಸುಮಾರು 14,000 ಗ್ರಾಮೀಣ ಯುವಕರಿಗೆ ಉದ್ಯೋಗ ದೊರೆಯಲಿದೆ ಮತ್ತು ಈ ಯುವಕರು ಗ್ರಾಮೀಣ ಆರ್ಥಿಕತೆ ಮತ್ತು ಹಳ್ಳಿಗಳಲ್ಲಿನ ಸೌಲಭ್ಯಗಳನ್ನು ಬಲಪಡಿಸಲು ಕೆಲಸ ಮಾಡುತ್ತಾರೆ. ನಮ್ಮ ದೇಶದ ಜನಸಂಖ್ಯೆಯ ಶೇ.60-65 ರಷ್ಟು ಜನರು ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ಆದ್ದರಿಂದ ನಾವು “ಸಹಕಾರ್ ಸೇ ಸಮೃದ್ಧಿ” ಮಂತ್ರದೊಂದಿಗೆ ಗ್ರಾಮೀಣ ಆರ್ಥಿಕತೆಯನ್ನು ವೇಗಗೊಳಿಸಲು ಮತ್ತು ವೈವಿಧ್ಯಗೊಳಿಸಲು ಪ್ರಯತ್ನಿಸಬೇಕು ಎಂದು ಸಹಕಾರ ಸಚಿವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕಳೆದ 9 ವರ್ಷಗಳಲ್ಲಿ ಭಾರತ ಸರ್ಕಾರವು 60 ಕೋಟಿ ಜನರಿಗೆ ಐದು ಲಕ್ಷ ರೂಪಾಯಿಗಳವರೆಗೆ ಪಡಿತರ, ವಸತಿ, ವಿದ್ಯುತ್, ನೀರು, ಅಡುಗೆ ಅನಿಲ, ಶೌಚಾಲಯ ಮತ್ತು ಆರೋಗ್ಯ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಈಗ 17,000 ಕ್ಕೂ ಹೆಚ್ಚು ಪಿಎಸಿಎಸ್ ಈ ಎಲ್ಲಾ ಸೌಲಭ್ಯಗಳಿಗೆ ನೋಂದಣಿ ಒದಗಿಸುವ ಮತ್ತು ಗ್ರಾಮೀಣ ಜನರ ಸಮಸ್ಯೆಗಳನ್ನು ಸರ್ಕಾರಕ್ಕೆ ತಲುಪಿಸುವ ಮಾಧ್ಯಮವಾಗಲಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನ್-ಧನ್ ಖಾತೆ, ಆಧಾರ್ ಕಾರ್ಡ್ ಮತ್ತು ಮೊಬೈಲ್ ನೀಡಿರುವುದು ಮಾತ್ರವಲ್ಲದೆ, ಡಿಜಿಟಲ್ ಇಂಡಿಯಾ ಮಿಷನ್ ಅಡಿಯಲ್ಲಿ ಹಳ್ಳಿಗಳು ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಆಪ್ಟಿಕಲ್ ಫೈಬರ್ ನೆಟ್ವರ್ಕ್ ಹಾಕುವ ಬೃಹತ್ ಕಾರ್ಯವನ್ನುಸಹ ಮಾಡಿದ್ದಾರೆ ಎಂದು ಅವರು ಹೇಳಿದರು.

ಕಳೆದ 9 ವರ್ಷಗಳಲ್ಲಿ ದೇಶದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ 250 ಪ್ರತಿಶತದಷ್ಟು ಹೆಚ್ಚಾಗಿದೆ ಮತ್ತು ಪ್ರತಿ ಜಿಬಿ ಡೇಟಾದ ವೆಚ್ಚವು ಶೇ.96 ರಷ್ಟು ಕಡಿಮೆಯಾಗಿದೆ, ಇದರಿಂದಾಗಿ ಬಡವರು ಮತ್ತು ಹಿಂದುಳಿದ ಜನರು ಈ ಸೌಲಭ್ಯವನ್ನು ಬಳಸಲು ಸಾಧ್ಯವಾಗುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು. ಪಿಎಸಿಎಸ್ ಅನ್ನು ಗಣಕೀಕರಣಗೊಳಿಸುವ ಮೂಲಕ ಸರ್ಕಾರವು ಅವುಗಳನ್ನು ಬಹುಪಯೋಗಿಯನ್ನಾಗಿ ಮಾಡಿದೆ ಮತ್ತು ಎಫ್ ಪಿ ಒ ಗಳಾಗಿ (ರೈತ ಉತ್ಪಾದಕ ಸಂಸ್ಥೆ) ಕಾರ್ಯನಿರ್ವಹಿಸಲು ಅವುಗಳಿಗೆ ಅಧಿಕಾರ ನೀಡಿದೆ ಎಂದು ಹೇಳಿದರು. ಇದರೊಂದಿಗೆ, ಬೀಜ ಉತ್ಪಾದನೆ, ಸಾವಯವ ಕೃಷಿಯ ಮಾರುಕಟ್ಟೆ ಮತ್ತು ರೈತರ ಉತ್ಪನ್ನಗಳ ರಫ್ತಿಗಾಗಿ ಮೂರು ಬಹು-ರಾಜ್ಯ ಸಹಕಾರ ಸಂಘಗಳನ್ನು ರಚಿಸಲಾಗಿದೆ. ವಿಶ್ವದ ಅತಿ ದೊಡ್ಡ ಆಹಾರ ಧಾನ್ಯ ದಾಸ್ತಾನು ಯೋಜನೆಯೂ ಆರಂಭವಾಗಿದೆ. ಮುಂದಿನ 5 ವರ್ಷಗಳಲ್ಲಿ, ಸಣ್ಣ ಪಿಎಸಿಎಸ್ ದೇಶದ ಶೇ.30 ಆಹಾರ ಧಾನ್ಯಗಳಿಗೆ ಸಂಗ್ರಹ ಸಾಮರ್ಥ್ಯವನ್ನು ಒದಗಿಸಲಿದೆ ಎಂದು ಶ್ರೀ ಶಾ ಹೇಳಿದರು.

ಈಗ ಪಿಎಸಿಎಸ್ ಎಲ್ ಪಿ ಜಿ, ಡೀಸೆಲ್ ಮತ್ತು ಪೆಟ್ರೋಲ್ ವಿತರಣೆ ಕಾರ್ಯವನ್ನೂ ಆರಂಭಿಸಬಹುದು ಎಂದು ಶ್ರೀ ಅಮಿತ್ ಶಾ ಹೇಳಿದರು. ಅವುಗಳು ನ್ಯಾಯಬೆಲೆ ಅಂಗಡಿ, ಜನೌಷಧಿ ಕೇಂದ್ರ, ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರ ಮತ್ತು ರಸಗೊಬ್ಬರ ಅಂಗಡಿಯನ್ನು ಸಹ ತೆರೆಯಬಹುದು. ಈ ಕೆಲಸಗಳ ಮೂಲಕ ಪಿಎಸಿಎಸ್ ಗ್ರಾಮದ ಆರ್ಥಿಕ ಚಟುವಟಿಕೆಗಳ ಆತ್ಮವಾಗಲಿದೆ ಎಂದರು. ಪಿಎಸಿಎಸ್ ಏಳಿಗೆ ಹೊಂದಿದರೆ ಅದರ ಲಾಭ ನೇರವಾಗಿ ರೈತರ ಖಾತೆಗೆ ಜಮಾ ಆಗುವುದರಿಂದ ರೈತ ಸಮೃದ್ಧನಾಗಿರುತ್ತಾನೆ ಎಂದು ಶ್ರೀ ಶಾ ಹೇಳಿದರು. ಸರ್ಕಾರವು ಸಹಕಾರಿ ಕ್ಷೇತ್ರದಲ್ಲಿ ಹಲವಾರು ಕಾನೂನು ಮತ್ತು ಆಡಳಿತಾತ್ಮಕ ಸುಧಾರಣೆಗಳನ್ನು ಮಾಡಿದೆ ಮತ್ತು ಬಹು ಆಯಾಮದ ರೀತಿಯಲ್ಲಿ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸಿದೆ ಎಂದು ಅವರು ಹೇಳಿದರು. ಮೋದಿ ಸರ್ಕಾರದ ಸಹಕಾರಿ ಯೋಜನೆಗಳು ಮತ್ತು ನಿರಂತರ ಸುಧಾರಣೆಗಳು ತಳಮಟ್ಟವನ್ನು ತಲುಪುತ್ತವೆ, ಆಗ ಸಹಕಾರಿ ಆಂದೋಲನವು ಬಲಗೊಳ್ಳುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶ್ರೀ ಶಾ ಹೇಳಿದರು. ಪಿಎಸಿಎಸ್ ಅನ್ನು ಬಲಪಡಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳುವಂತೆ ಮತ್ತು ʼಪಿಎಸಿಎಸ್ ಅನ್ನು ಬಲಪಡಿಸುವ ಮೂಲಕ ಗ್ರಾಮದ ಸಮೃದ್ಧಿ' ಎಂಬ ಮಂತ್ರವನ್ನು ಅಳವಡಿಸಿಕೊಳ್ಳುವ ಮೂಲಕ ಅದರ ಪ್ರಗತಿಯನ್ನು ಸಾಧಿಸುವಂತೆ ಶ್ರೀ ಶಾ ಮನವಿ ಮಾಡಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಹಕಾರ ಸಚಿವಾಲಯವು ಇತ್ತೀಚೆಗೆ ಹೊಸ ಉಪಕ್ರಮವನ್ನು ಕೈಗೊಂಡಿದೆ ಮತ್ತು ಸಹಾರಾ ಗ್ರೂಪ್ ನ ಸಹಕಾರಿ ಸಂಘಗಳಲ್ಲಿ ಸಿಲುಕಿರುವ ಠೇವಣಿದಾರರ ಹಣವನ್ನು ಮರುಪಾವತಿ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಸಹಕಾರ ಸಚಿವಾಲಯವು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ. ಈ ಅರ್ಜಿಯ ಮೇಲೆ ಸುಪ್ರೀಂ ಕೋರ್ಟ್ ಸಹಾರಾ ಸಮೂಹದ ಸಹಕಾರಿ ಸಂಘಗಳ ನಿಜವಾದ ಠೇವಣಿದಾರರಿಗೆ ನ್ಯಾಯಸಮ್ಮತವಾಗಿ ಬಾಕಿ ಪಾವತಿಸಲು "ಸಹಾರಾ-ಸೆಬಿ ಮರುಪಾವತಿ ಖಾತೆ" ಯಿಂದ ಕೇಂದ್ರ ಸಹಕಾರ ಸಂಘಗಳ ರಿಜಿಸ್ಟ್ರಾರ್ (ಸಿ ಆರ್ ಸಿ ಎಸ್) ಗೆ 5000 ಕೋಟಿ ರೂ.ಗಳನ್ನು ವರ್ಗಾಯಿಸಲು ನಿರ್ದೇಶಿಸಿದೆ. ಈ ನಿರ್ದೇಶನದ ಅನ್ವಯ, ಜುಲೈ 18, 2023 ರಂದು 'ಸಿ ಆರ್ ಸಿ ಎಸ್-ಸಹಾರಾ ಮರುಪಾವತಿ' ಪೋರ್ಟಲ್ ಅನ್ನು ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು. ಇದುವರೆಗೆ 5 ಲಕ್ಷ ಜನರು ಪೋರ್ಟಲ್ನಲ್ಲಿ ನೋಂದಾಯಿಸಿಕೊಂಡಿದ್ದಾರೆ ಮತ್ತು ನಿಜವಾದ ಠೇವಣಿದಾರರಿಗೆ ಹಣವನ್ನು ಮರುಪಾವತಿ ಮಾಡುವ ಪ್ರಕ್ರಿಯೆಯು ನಡೆದಿದೆ ಎಂದು ಶ್ರೀ ಅಮಿತ್ ಶಾ ತಿಳಿಸಿದರು. ಸರಕಾರ ಮುತುವರ್ಜಿ ವಹಿಸಿ ಕೆಲಸ ಮಾಡಿದರೆ ಜಟಿಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ ಎಂಬುದಕ್ಕೆ ಇದೊಂದು ಉತ್ತಮ ನಿದರ್ಶನವಾಗಿದೆ ಎಂದು ಅವರು ಎಂದರು.

****



(Release ID: 1941567) Visitor Counter : 108