ಸಂಸ್ಕೃತಿ ಸಚಿವಾಲಯ

ಕರ್ನಾಟಕದ ಹಂಪಿಯಲ್ಲಿ ಇಂದು ಪ್ರಾರಂಭವಾದ ಮೂರನೇ ಜಿ-20ರ ಸಂಸ್ಕೃತಿ ಕಾರ್ಯಕಾರಿ ಗುಂಪಿನ (ಸಿಡಬ್ಲ್ಯೂಜಿ) ಸಭೆ


ಮುಂದಿನ ಮೂರರಿಂದ ಆರು ತಿಂಗಳಲ್ಲಿ ಸುಮಾರು 150 ಪ್ರಾಚೀನ ವಸ್ತುಗಳು ಹಾಗೂ ಕಲಾಕೃತಿಗಳು ಅಮೇರಿಕಾದಿಂದ ಭಾರತಕ್ಕೆ ಮರಳುವ ನಿರೀಕ್ಷೆಯಿದೆ: ಶ್ರೀ ಗೋವಿಂದ್ ಮೋಹನ್

ಲಂಬಾಣಿ ಕುಸುರಿ ಕಸೂತಿಯ ಅತಿದೊಡ್ಡ ಪ್ರದರ್ಶನದ ಮೂಲಕ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಗೆ ಪ್ರವೇಶಿಸುವ ಗುರಿಯನ್ನು ಹೊಂದಿರುವ ಸಾಂಸ್ಕೃತಿಕ ಕಾರ್ಯಕಾರಿ ಗುಂಪು

ಸಭೆಯ ಅಂಗವಾಗಿ ವಿಜಯವಿಠ್ಠಲ ದೇವಸ್ಥಾನ ಮತ್ತು ಹಂಪಿಯ ರಾಯಲ್ ಆವರಣಕ್ಕೆ ಭೇಟಿ ನೀಡಲಿರುವ ಜಿ-20ರ ಪ್ರತಿನಿಧಿಗಳು

Posted On: 09 JUL 2023 7:20PM by PIB Bengaluru

ಕರ್ನಾಟಕದ ಹಂಪಿಯಲ್ಲಿ ಇಂದಿನಿಂದ ಜಿ-20ರ ಮೂರನೇ ಸಂಸ್ಕೃತಿ ಕಾರ್ಯಕಾರಿ ಗುಂಪಿನ (ಸಿಡಬ್ಲ್ಯೂಜಿ) ಸಭೆ ಪ್ರಾರಂಭವಾಯಿತು. ಇಂದು ಹಂಪಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಶ್ರೀ ಗೋವಿಂದ್ ಮೋಹನ್ ಅವರು, ಭಾರತದ ಜಿ-20 ಪ್ರೆಸಿಡೆನ್ಸಿಯ ಅಡಿಯಲ್ಲಿ 3ನೇ ಸಂಸ್ಕೃತಿ ಕಾರ್ಯಕಾರಿ ಗುಂಪಿನ ಸಭೆಯನ್ನು ಜುಲೈ 9ರಿಂದ 12ರವರೆಗೆ ಕರ್ನಾಟಕದ ಹಂಪಿಯಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಈ ಸಭೆಯಲ್ಲಿ ಜಿ-20ರ ಸದಸ್ಯ ರಾಷ್ಟ್ರಗಳು, ಅತಿಥಿ ರಾಷ್ಟ್ರಗಳು ಮತ್ತು ಹಲವಾರು ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಮೊದಲ ಎರಡು ಸಂಸ್ಕೃತಿ ಕಾರ್ಯಕಾರಿ ಗುಂಪಿನ ಸಭೆಗಳು ಖಜುರಾಹೊ ಮತ್ತು ಭುವನೇಶ್ವರದಲ್ಲಿ ನಡೆದಿರುವ ಬಗ್ಗೆ ಅವರು ಮಾಹಿತಿ ನೀಡಿದರು. ಹಂಪಿಯಲ್ಲಿ ನಡೆಯಲಿರುವ ಮೂರನೇ ಸಭೆಯಲ್ಲಿ ಜಿ-20ರ ಸದಸ್ಯ ರಾಷ್ಟ್ರಗಳು, ಆಹ್ವಾನಿತ ದೇಶಗಳು ಮತ್ತು ಏಳು ಬಹುಪಕ್ಷೀಯ ಸಂಸ್ಥೆಗಳಿಂದ ಸುಮಾರು 50 ಆಹ್ವಾನಿತರು ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ತಜ್ಞರ ಜಾಗತಿಕ ವಿಷಯಾಧಾರಿತವಾದ ನಾಲ್ಕು ವೆಬಿನಾರ್ ಗಳನ್ನು ಆಯೋಜಿಸಲಾಗಿದ್ದು, ಎಲ್ಲಾ 29 ದೇಶಗಳು ಮತ್ತು ಏಳು ಬಹುಪಕ್ಷೀಯ ಸಂಸ್ಥೆಗಳು ವೆಬಿನಾರ್ ಗಳಲ್ಲಿ ಯಶಸ್ವಿಯಾಗಿ ಭಾಗವಹಿಸಿವೆ ಎಂಬ ಮಾಹಿತಿಯನ್ನು ಅವರು ನೀಡಿದರು.

ಸಂಸ್ಕೃತಿ ಕಾರ್ಯಕಾರಿ ಗುಂಪಿನ ನಾಲ್ಕು ಆದ್ಯತೆಗಳಿಗೆ ಸಂಬಂಧಿಸಿದಂತೆ ಶಿಫಾರಸುಗಳು ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲಾಗಿದ್ದು, ಅದರ ಬಗ್ಗೆ ಒಮ್ಮತವನ್ನು ಸಾಧಿಸಲು 3ನೇ ಸಂಸ್ಕೃತಿ ಕಾರ್ಯಕಾರಿ ಗುಂಪಿನ ಸಭೆಯಲ್ಲಿ ಪ್ರಯತ್ನಿಸಲಾಗುವುದು ಎಂದು ಶ್ರೀ ಗೋವಿಂದ್ ಮೋಹನ್ ಹೇಳಿದರು. ಸಂಸ್ಕೃತಿ ಕಾರ್ಯ ಗುಂಪಿನ ಸಭೆಗಳು ಭಾರತದ ಜಿ-20ರ ಪ್ರೆಸಿಡೆನ್ಸಿಯಲ್ಲಿ ಸಂಸ್ಕೃತಿಯ ಭಾಗವಾಗಿ ರೂಪಿಸಲಾದ ನಾಲ್ಕು ಪ್ರಮುಖ ಆದ್ಯತೆಯ ಕ್ಷೇತ್ರಗಳ ಸುತ್ತ ಕೇಂದ್ರೀಕೃತವಾಗಿವೆ ಎಂದು ಅವರು ಮಾಹಿತಿ ನೀಡಿದರು. ಈ ನಾಲ್ಕು ಆದ್ಯತೆಯ ಕ್ಷೇತ್ರಗಳು ಯಾವುವೆಂದರೆ: ಸಾಂಸ್ಕೃತಿಕ ಸ್ವತ್ತಿನ ರಕ್ಷಣೆ ಮತ್ತು ಪುನಃಸ್ಥಾಪನೆ; ಸುಸ್ಥಿರ ಭವಿಷ್ಯಕ್ಕಾಗಿ ಜೀವನ ಪರಂಪರೆಯನ್ನು ಬಳಸಿಕೊಳ್ಳುವುದು; ಸಾಂಸ್ಕೃತಿಕ ಮತ್ತು ಸೃಜನಶೀಲ ಕೈಗಾರಿಕೆಗಳು ಮತ್ತು ಸೃಜನಶೀಲ ಆರ್ಥಿಕತೆಯ ಉತ್ತೇಜನ; ಮತ್ತು ಸಂಸ್ಕೃತಿಯ ರಕ್ಷಣೆ ಮತ್ತು ಪ್ರಚಾರಕ್ಕಾಗಿ ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವುದು.

ವಾರಾಣಸಿಯಲ್ಲಿ ಆಗಸ್ಟ್ ತಿಂಗಳಿನಲ್ಲಿ ನಡೆಯಲಿರುವ ಸಂಸ್ಕೃತಿ ಸಚಿವರ ಸಭೆಗಾಗಿ ಸದಸ್ಯ ರಾಷ್ಟ್ರಗಳ ನಡುವೆ ಜಂಟಿ ಹೇಳಿಕೆಯನ್ನು ರೂಪಿಸುವತ್ತ ಗಮನ ಹರಿಸಲಾಗುವುದು ಎಂದು ಶ್ರೀ ಗೋವಿಂದ್ ಮೋಹನ್ ತಿಳಿಸಿದರು.

'ಸಾಂಸ್ಕೃತಿಕ ಸ್ವತ್ತಿನ ರಕ್ಷಣೆ ಮತ್ತು ಪುನಃಸ್ಥಾಪನೆ' ಎಂಬ ವಿಷಯದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿದ ಶ್ರೀ ಗೋವಿಂದ್ ಮೋಹನ್ ಅವರು, 1970ರ ಯುನೆಸ್ಕೋ ಸಮಾವೇಶವು ವಸಾಹತುಶಾಹಿ ಲೂಟಿ ಅಥವಾ ಕಳ್ಳಸಾಗಣೆ, ಕಳ್ಳತನ ಮುಂತಾದ ವಸಾಹತುಶಾಹಿ ದುರುಪಯೋಗದಿಂದಾಗಿ ಇತರ ದೇಶಗಳಿಗೆ ಸೇರಿದ ಕಲಾಕೃತಿಗಳನ್ನು ಸ್ವಯಂಪ್ರೇರಣೆಯಿಂದ ಹಿಂದಿರುಗಿಸಬೇಕೆಂದು ಸಹಿ ಹಾಕಿದ ಬದ್ದ ಪಕ್ಷಗಳಿಗೆ ಆದೇಶಿಸುತ್ತದೆ ಎಂದು ಹೇಳಿದರು. ಎಲ್ಲಾ ಜಿ-20 ರಾಷ್ಟ್ರಗಳು ಈ ಒಪ್ಪಂದಕ್ಕೆ ಬದ್ದವಾಗಿ, ಸಹಿ ಹಾಕಬೇಕೆಂದು ಈ ಸಭೆಗಳಲ್ಲಿ ಉತ್ತೇಜಿಸಲಾಗುವುದು, ಇದರಿಂದ ಭಾರತಕ್ಕೆ ಭಾರಿ ಪ್ರಯೋಜನವಾಗಲಿದೆ ಎಂದು ಅವರು ತಿಳಿಸಿದರು.

ದ್ವಿಪಕ್ಷೀಯವಾಗಿ ಭಾರತವು ಇತರ ದೇಶಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದು, ಇದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಯುನೈಟೆಡ್ ಸ್ಟೇಟ್ಸ್ ಭೇಟಿಯ ಜಂಟಿ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಭಾರತ ಮತ್ತು ಅಮೇರಿಕಾದ ನಡುವೆ ಮಾತುಕತೆ ನಡೆಯುತ್ತಿರುವ ಸಾಂಸ್ಕೃತಿಕ ಆಸ್ತಿ ಒಪ್ಪಂದವು ಯುಎಸ್ ಅಧಿಕಾರಿಗಳಿಗೆ ಕಳ್ಳಸಾಗಣೆ ಮಾಡಿದ ವಸ್ತುಗಳು ಮತ್ತು ಕಲಾಕೃತಿಗಳನ್ನು ತಡೆದು, ಅವುಗಳನ್ನು ತ್ವರಿತವಾಗಿ ಹಿಂದಿರುಗಿಸುವಲ್ಲಿ ಸಹಾಯ ಮಾಡಲಿದೆ. ಮುಂದಿನ ಮೂರರಿಂದ ಆರು ತಿಂಗಳಲ್ಲಿ ಸುಮಾರು 150 ಕಲಾಕೃತಿಗಳು ಅಮೇರಿಕಾದಿಂದ ಭಾರತಕ್ಕೆ ಮರಳುವ ನಿರೀಕ್ಷೆಯಿದೆ ಎಂದು ಅವರು ಮಾಹಿತಿ ನೀಡಿದರು.

'ಸುಸ್ಥಿರ ಭವಿಷ್ಯಕ್ಕಾಗಿ ಜೀವನ ಪರಂಪರೆಯ ಬಳಕೆ' ಎಂಬ ಎರಡನೇ ವಿಷಯದ ಬಗ್ಗೆ ಮಾತನಾಡಿದ ಅವರು, ಈ ವಿಷಯವು ಸ್ಥಳೀಯ ಜನರ ಹಕ್ಕುಗಳನ್ನು ಸುಧಾರಿಸಿ, ಸಾಂಪ್ರದಾಯಿಕ ಆಚರಣೆಗಳ ದುರುಪಯೋಗವನ್ನು ವಿರೋಧಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು. ಈ ವಿಷಯದ ಬಗ್ಗೆ ಚರ್ಚೆಗಳು ನಡೆಯಲಿರುವುದರಿಂದ, ಇದನ್ನು ರೂಢಿಸಿಕೊಂಡಿರುವ ಸಮುದಾಯಗಳು ಜೀವಂತ ಪರಂಪರೆಯ ವಾಣಿಜ್ಯೀಕರಣದಿಂದ ಪ್ರಯೋಜನವನ್ನು ಪಡೆಯಬಹುದಾಗಿದೆ.

'ಸಾಂಸ್ಕೃತಿಕ ಮತ್ತು ಸೃಜನಶೀಲ ಕೈಗಾರಿಕೆಗಳು ಮತ್ತು ಸೃಜನಶೀಲ ಆರ್ಥಿಕತೆಯ ಉತ್ತೇಜನ' ಎಂಬ ಮೂರನೇ ವಿಷಯದ ಬಗ್ಗೆ ಮಾತನಾಡಿದ ಶ್ರೀ ಗೋವಿಂದ್ ಮೋಹನ್ ಅವರು, ಸಾಂಸ್ಕೃತಿಕ ಸ್ಮಾರಕಗಳು, ಸಾಂಸ್ಕೃತಿಕ ಸ್ಥಳಗಳಲ್ಲಿ ಸಾಂಸ್ಕೃತಿಕ ಹೆಗ್ಗುರುತು ಸೃಷ್ಟಿಯಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಂಡು ಆ ತಿಳುವಳಿಕೆಯ ಮೂಲಕ ಸೃಜನಶೀಲ ಆರ್ಥಿಕತೆಯನ್ನು ರಚಿಸಲು ಕಾರ್ಯವಿಧಾನಗಳನ್ನು ರೂಪಿಸುವ ಬಗ್ಗೆ ವಿವರ ನೀಡಲಾಗುವುದು ಎಂದು ಹೇಳಿದರು.

'ಸಂಸ್ಕೃತಿಯ ರಕ್ಷಣೆ ಮತ್ತು ಉತ್ತೇಜನಕ್ಕಾಗಿ ಡಿಜಿಟಲ್ ತಂತ್ರಜ್ಞಾನಗಳ ಬಳಕೆ' ಎಂಬ ನಾಲ್ಕನೇ ವಿಷಯದ ಬಗ್ಗೆ ಮಾತನಾಡಿದ ಅವರು, ಆಗ್ಮೆಂಟೆಡ್ ರಿಯಾಲಿಟಿ, ವರ್ಚುವಲ್ ರಿಯಾಲಿಟಿ ಮತ್ತು ಎಮರ್ಸಿವ್ಸ್ ಮೂಲಕ ಇಡೀ ಸಾಂಸ್ಕೃತಿಕ ಜಗತ್ತು ಡಿಜಿಟಲ್ ಕ್ರಾಂತಿಗೆ ಒಳಗಾಗುತ್ತಿದೆ ಎಂದು ವಿವರಿಸಿದರು. ಅಂತರ-ಕಾರ್ಯಾಚರಣೆಯನ್ನು ಅನುಮತಿಸಲು ಯಾಂತ್ರಿಕತೆಯ ಬಳಕೆಯತ್ತ ಗಮನ ಹರಿಸಲಾಗಿದೆ, ಇದರಿಂದ ಡಿಜಿಟಲ್ ಉತ್ಪನ್ನಗಳನ್ನು ಗಡಿಗಳಾಚೆಯವರೆಗೂ ಹಂಚಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.

ಹಂಪಿಯಲ್ಲಿ 3ನೇ ಜಿ-20ರ ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಸಭೆಯ ಭಾಗವಾಗಿ "ನೇಯ್ದ ನಿರೂಪಣೆಗಳು" ಎಂಬ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು. ಈ ಪ್ರದರ್ಶನದ ಧ್ಯೇಯವಾಕ್ಯವು ಸಾಂಸ್ಕೃತಿಕ ಕಾರ್ಯಕಾರಿ ಗುಂಪು ವಿವರಿಸಿದ ಮೂರನೇ ಆದ್ಯತೆಯಾದ 'ಸಾಂಸ್ಕೃತಿಕ ಮತ್ತು ಸೃಜನಶೀಲ ಕೈಗಾರಿಕೆಗಳು ಮತ್ತು ಸೃಜನಶೀಲ ಆರ್ಥಿಕತೆಯ ಉತ್ತೇಜನ' ಎಂಬುದರ ಮೇಲೆ ಕೇಂದ್ರೀಕೃತವಾಗಿದೆ. ಈ ಪ್ರದರ್ಶನವು ಭಾರತದ ಸೃಜನಶೀಲ ಮತ್ತು ಭೌಗೋಳಿಕವಾಗಿ ಕೈ ನೇಯ್ಗೆಯ ಉತ್ಪಾದನೆ, ವ್ಯಾಪಾರ ಮತ್ತು ಬಳಕೆಯ ವಿಭಿನ್ನ ಪರಿಸರಕ್ಕೆ ಹೆಚ್ಚು ಒತ್ತನ್ನು ನೀಡುತ್ತದೆ. ಕರ-ಕುಶಲಕರ್ಮಿಗಳು, ಕುಶಲಕರ್ಮಿಗಳು, ಕಲಾವಿದರು ಮತ್ತು ವಿನ್ಯಾಸಕರು, ಕೈ ನೇಯ್ಗೆಯಲ್ಲಿ ಪರಿಣತಿ ಮತ್ತು ಕೌಶಲ್ಯಗಳನ್ನು ಪಡೆದವರು ಈ ಪ್ರದರ್ಶನಗಳನ್ನು ಪರಿಕಲ್ಪಿಸಿ ರಚಿಸುತ್ತಾರೆ. ಈ ಪ್ರದರ್ಶನವನ್ನು ಜುಲೈ 14ರಿಂದ ಆಗಸ್ಟ್ 14ರವರೆಗೆ ಸಾರ್ವಜನಿಕರಿಗೆ ತೆರೆಯಲಾಗುವುದು ಎಂಬ ಮಾಹಿತಿಯನ್ನು ಅವರು ನೀಡಿದರು.

ಮಾಧ್ಯಮಗಳ ಜಂಟಿ ಕಾರ್ಯದರ್ಶಿಯಾದ ಲಿಲಿ ಪಾಂಡಿಯಾ ಅವರು ಮಾತನಾಡಿ, ಮೂರನೇ ಸಂಸ್ಕೃತಿ ಕಾರ್ಯಕಾರಿ ಗುಂಪಿನ ಸಭೆಯಲ್ಲಿ ಎಲ್ಲಾ 20 ದೇಶಗಳು ಮತ್ತು ಅತಿಥಿ ರಾಷ್ಟ್ರಗಳ 9 ಸಂವಾದ ಪಾಲುದಾರರು ಮತ್ತು ಏಳು ಅಂತರರಾಷ್ಟ್ರೀಯ ಸಂಸ್ಥೆಗಳು ಭಾಗವಹಿಸುತ್ತಿವೆ ಎಂದು ಹೇಳಿದರು. 

ಈ ಸಭೆಯಲ್ಲಿ ಸಂಸ್ಕೃತಿ ಸಚಿವರ ಘೋಷಣೆಯ ಬಗ್ಗೆ ಒಮ್ಮತಕ್ಕೆ ಬರುವ ಗುರಿಯ ಬಗ್ಗೆ ಅವರು ಮಾಹಿತಿ ನೀಡಿದರು.

ಈ ವರ್ಷದ ಆಗಸ್ಟ್ 26ರಂದು ವಾರಣಾಸಿಯಲ್ಲಿ ನಡೆಯಲಿರುವ ಸಂಸ್ಕೃತಿ ಸಚಿವರ ಸಭೆಯಲ್ಲಿ ಜಾಗತಿಕ ವಿಷಯಾಧಾರಿತ ವೆಬಿನಾರ್ ಗಳ ವರದಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು. ಕಳೆದ ಸಭೆಯಲ್ಲಿ ಕ್ರಿಯಾ ಆಧಾರಿತ ಸ್ಪಷ್ಟ ಫಲಿತಾಂಶಗಳೊಂದಿಗೆ ದೃಢವಾದ ಘೋಷಣೆಯನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.

ಲಂಬಾಣಿ ಕಸೂತಿ ಕಲಾ ಪ್ರದರ್ಶನದ ಬಗ್ಗೆ ಮಾತನಾಡಿದ ಶ್ರೀಮತಿ ಪಾಂಡಿಯಾ ಅವರು, ಲಂಬಾಣಿ ಕುಸುರಿ ಕಸೂತಿಗಳ ಅತಿದೊಡ್ಡ ಪ್ರದರ್ಶನವನ್ನು ರಚಿಸುವ ಮೂಲಕ ಸಂಸ್ಕೃತಿ ಕಾರ್ಯಕಾರಿ ಗುಂಪು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಗೆ ಪ್ರವೇಶಿಸುವ ಗುರಿಯನ್ನು ಹೊಂದಿದೆ ಎಂದು ಅವರು ತಿಳಿಸಿದರು. ಪ್ರದರ್ಶನದ ಧ್ಯೇಯವಾಕ್ಯವು 'ಸಂಸ್ಕೃತಿ ಎಲ್ಲರನ್ನೂ ಒಂದುಗೂಡಿಸುತ್ತದೆ' ಎಂಬುದಾಗಿದ್ದು, ಇದನ್ನು ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿಯವರು ಉದ್ಘಾಟಿಸಲಿದ್ದಾರೆ. ಈ ಪ್ರಯತ್ನದಲ್ಲಿ ಲಂಬಾಣಿ ಸಮುದಾಯದ 450ಕ್ಕೂ ಹೆಚ್ಚು ಮಹಿಳಾ ಕುಶಲಕರ್ಮಿಗಳು ಭಾಗವಹಿಸಲಿದ್ದು ಅವರು ಸಂಡೂರು ಕುಶಾಲ ಕಲಾ ಕೇಂದ್ರದೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಅವರು ತಯಾರಿಸಿದ ಸುಮಾರು 1300 ಲಂಬಾಣಿ ಕುಸುರಿ ಕಸೂತಿಯನ್ನು ಪ್ರದರ್ಶಿಸಲಿದ್ದಾರೆ.

ಸಾಂಸ್ಕೃತಿಕ ಅನುಭವ ಶ್ರೇಣಿಯನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಲಾಗಿದ್ದು, ಪ್ರತಿನಿಧಿಗಳು ತಮ್ಮ ಭೇಟಿಯ ಅಂಗವಾಗಿ ಪಾರಂಪರಿಕ ತಾಣಗಳನ್ನು ಭೇಟಿ ಮಾಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಇವುಗಳಲ್ಲಿ ವಿಜಯ ವಿಠ್ಠಲ ದೇವಸ್ಥಾನ, ರಾಯಲ್ ಎನ್ಕ್ಲೋಷರ್ ಮತ್ತು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಹಂಪಿ ಸ್ಮಾರಕಗಳ ಗುಂಪಿನ ಯಡೂರು ಬಸವಣ್ಣ ಸಂಕೀರ್ಣದಂತಹ ಪಾರಂಪರಿಕ ತಾಣಗಳ ಭೇಟಿ ಒಳಗೊಂಡಿದೆ.

ಈ ಸಭೆಯ ಪ್ರತಿನಿಧಿಗಳು ತುಂಗಭದ್ರ ನದಿಯಲ್ಲಿ ಪ್ರಸಿದ್ಧ ಕೊರಾಕಲ್ ಸವಾರಿಯಲ್ಲಿಯೂ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಸ್ವತಃ ಅಥವಾ ಸ್ವಂತ ಉಪಕ್ರಮದ ಚಟುವಟಿಕೆಗಳಾದ ಚರ್ಮದ ಬೊಂಬೆಯಾಟ, ಗಂಜಿಫಾ ಕಲಾಕೃತಿ, ಬಿದ್ರಿ ಕಲಾಕೃತಿ ಮತ್ತು ಕಿನ್ಹಾಲ್ ಕರಕುಶಲತೆಯಲ್ಲಿ ಪ್ರತಿನಿಧಿಗಳು ಭಾಗವಹಿಸಿ, ಅವುಗಳನ್ನು ಗೌರವಿಸಲು ವ್ಯವಸ್ಥೆ ಮಾಡಲಾಗಿದೆ. ಬಿದಿರು ಸಿಂಫನಿ ಬ್ಯಾಂಡ್ ಮತ್ತು ಇತರ ಸಾಂಸ್ಕೃತಿಕ ಪ್ರದರ್ಶನಗಳನ್ನು ಪ್ರತಿನಿಧಿಗಳಿಗೆ ಪ್ರಸ್ತುತಪಡಿಸಲಾಗುವುದು.

ಸಂಸ್ಕೃತಿ ಕಾರ್ಯಕಾರಿ ಗುಂಪು ಜಿ-20ರ ಸದಸ್ಯರು, ಅತಿಥಿ ರಾಷ್ಟ್ರಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಆಳವಾದ ಚರ್ಚೆಗಳ ಅಂತರ್ಗತ ಪ್ರಕ್ರಿಯೆಯ ಮೂಲಕ ಕಾರ್ಯನಿರ್ವಹಿಸುತ್ತಿದೆ. ಈ ಚರ್ಚೆಗಳು ಸಹಯೋಗದ ಕ್ರಮವಾಗಿ ನಿರ್ಣಾಯಕ ಕ್ಷೇತ್ರಗಳನ್ನು ಪುನರುಚ್ಚರಿಸುವ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಸ್ಪಷ್ಟವಾದ ಶಿಫಾರಸುಗಳು ಮತ್ತು ಉತ್ತಮ ಅಭ್ಯಾಸಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿವೆ ಎಂದು ಅವರು ಮಾಹಿತಿ ನೀಡಿದರು.

****



(Release ID: 1938339) Visitor Counter : 134