ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

2022-23ನೇ ಸಾಲಿನ ಮುಂಗಾರು ಮಾರುಕಟ್ಟೆ ಹಂಗಾಮಿನಲ್ಲಿ ಸುಗಮ ರೀತಿಯಲ್ಲಿ ಸಾಗಿದ ಭತ್ತ ಖರೀದಿ ಕಾರ್ಯಾಚರಣೆ : 2023ರ ಜೂನ್ 19ರ ವರೆಗೆ 830 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿ


ಹಾಲಿ ನಡೆಯುತ್ತಿರುವ ಭತ್ತ ಖರೀದಿ ಪ್ರಕ್ರಿಯೆಯಲ್ಲಿ 1,71,000 ಕೋಟಿ ರೂ. ಎಂಎಸ್ ಪಿ ಜಮೆ, ಸುಮಾರು 1.22 ಕೋಟಿ ರೈತರಿಗೆ ಅನುಕೂಲ  

ಈ ವರ್ಷ ಗೋಧಿ ಮತ್ತು ಭತ್ತಕ್ಕೆ ಎಂಎಸ್ ಪಿ ಪಾವತಿ 2,26,829 ಕೋಟಿ ರೂ. ಕಳೆದ ವರ್ಷದ ಪಾವತಿ 2,05,896 ಕೋಟಿ ರೂ. 

Posted On: 21 JUN 2023 11:55AM by PIB Bengaluru

2022-23ನೇ ಸಾಲಿನ ಮುಂಗಾರು ಮಾರುಕಟ್ಟೆ ಹಂಗಾಮು(ಕೆಎಂಎಸ್)ನಲ್ಲಿ ಭಾರತ ಸರ್ಕಾರದಿಂದ ಭತ್ತ ಖರೀದಿ ಪ್ರಕ್ರಿಯೆ ಸುಗಮ ರೀತಿಯಲ್ಲಿ ಮುಂದುವರಿದಿದೆ. ಕನಿಷ್ಠ ಬೆಂಬಲ ಬೆಲೆ(ಎಂಎಸ್ ಪಿ) ಕಾರ್ಯಾಚರಣೆ ಅಡಿ 19.06.2023ರ ವರೆಗೆ ಕೇಂದ್ರದಿಂದ 830 ಲಕ್ಷ ಮೆಟ್ರಿಕ್ ಟನ್(ಎಲ್ಎಂಟಿ)ಗೂ ಅಧಿಕ ಭತ್ತವನ್ನು ಖರೀದಿ ಮಾಡಲಾಗಿದೆ. 2022-23ನೇ ಸಾಲಿನ ಸದ್ಯ ನಡೆಯುತ್ತಿರುವ ಕೆಎಂಎಸ್ ಭತ್ತ ಖರೀದಿ ಕಾರ್ಯಾಚರಣೆಯಿಂದ ಸುಮಾರು 1.22 ಕೋಟಿ ರೈತರಿಗೆ ಅನುಕೂಲವಾಗಿದೆ ಹಾಗೂ ಅವರ ಖಾತೆಗಳಿಗೆ ನೇರವಾಗಿ ಕನಿಷ್ಠ ಬೆಂಬಲ ಬೆಲೆ(ಎಂಎಸ್ ಪಿ) ಹಣ 1,71,000 ಕೋಟಿ ರೂ. ವರ್ಗಾವಣೆಯಾಗಿದೆ. 

ಸರ್ಕಾರ ಯಾವುದೇ ಅಡೆತಡೆಯಿಲ್ಲದೆ ಖರೀದಿ ಪ್ರಕ್ರಿಯೆಯನ್ನು ನಡೆಸಲು ಎಲ್ಲ ವ್ಯವಸ್ಥೆಗಳನ್ನು ಖಾತ್ರಿಪಡಿಸಿದೆ. ಭತ್ತ ಖರೀದಿಗೆ ಬದಲಾಗಿ ಅಕ್ಕಿ ವಿತರಣೆಯೂ ಕೂಡ ಪ್ರಗತಿಯಲ್ಲಿದೆ. 830 ಟನ್ ಭತ್ತ ಖರೀದಿಗೆ ಬದಲಾಗಿ(558 ಎಲ್ಎಂಟಿ ಅಕ್ಕಿ) ಸುಮಾರು 401 ಎಲ್ಎಂಟಿ ಅಕ್ಕಿಯನ್ನು 19.06.2023ರ ವರೆಗೆ ಕೇಂದ್ರ ಸ್ವೀಕರಿಸಿದೆ. ಇನ್ನೂ 150 ಎಲ್ಎಂಟಿ ಸ್ವೀಕರಿಸಬೇಕಿದೆ.  

2023-24ರ ಹಿಂಗಾರು ಮಾರುಕಟ್ಟೆ ಹಂಗಾಮು(ಆರ್ ಎಂಎಸ್)ನಲ್ಲಿ ಗೋಧಿ ಖರೀದಿ ಪ್ರಕ್ರಿಯೆ ಸುಗಮವಾಗಿ ಸಾಗಿದೆ. 19.06.2023ರ ವರೆಗೆ ಸದ್ಯದ ಹಂಗಾಮಿನಲ್ಲಿ 262 ಲಕ್ಷ ಮೆಟ್ರಿಕ್ ಟನ್ ಗೋಧಿ ಖರೀದಿ ಪ್ರಕ್ರಿಯೆಯನ್ನು ನಡೆಸಲಾಗಿದ್ದು, ಕಳೆದ ವರ್ಷ ಒಟ್ಟು 188 ಲಕ್ಷ ಮೆಟ್ರಿಕ್ ಟನ್ ಖರೀದಿಸಲಾಗಿದ್ದು, ಅದಕ್ಕೆ ಹೋಲಿಸಿದರೆ 74 ಲಕ್ಷ ಮೆಟ್ರಿಕ್ ಟನ್ ಅಧಿಕವಾಗಿದೆ. ಸದ್ಯದ ಗೋಧಿ ಖರೀದಿ ಕಾರ್ಯಾಚರಣೆಯಿಂದ ಸುಮಾರು 21.29 ಲಕ್ಷ ರೈತರಿಗೆ ಈಗಾಗಲೇ ಅನುಕೂಲವಾಗಿದೆ ಮತ್ತು 55,680 ಕೋಟಿ ರೂ. ಎಂಎಸ್ ಪಿ ಸಂದಾಯವಾಗಿದೆ. ಖರೀದಿ ಪ್ರಕ್ರಿಯೆಯಲ್ಲಿ ಪಂಜಾಬ್, ಮಧ್ಯಪ್ರದೇಶ ಮತ್ತು ಹರಿಯಾಣ ರಾಜ್ಯಗಳ ಕೊಡುಗೆ ಹೆಚ್ಚಿನ ಪ್ರಮಾಣದಲ್ಲಿದ್ದು, ಕ್ರಮವಾಗಿ ಆ ರಾಜ್ಯಗಳಿಂದ 121.27 ಎಲ್ಎಂಟಿ, 70.98 ಎಲ್ಎಂಟಿ ಮತ್ತು 63.17 ಎಲ್ಎಂಟಿ ಖರೀದಿಸಲಾಗಿದೆ. 

ಈ ವರ್ಷ ಗೋಧಿ ಮತ್ತು ಭತ್ತ ಖರೀದಿಗೆ ರೈತರಿಗೆ ಒಟ್ಟು ಪಾವತಿಸಿರುವ ಕನಿಷ್ಠ ಬೆಂಬಲ ಬೆಲೆ ಮೊತ್ತ ಒಗ್ಗೂಡಿಸಿದರೆ ಅದು 2,26,829 ಕೋಟಿ ರೂ. ಆಗುತ್ತದೆ. ಕಳೆದ ವರ್ಷ ಪಾವತಿ ಮಾಡಿರುವುದು 2,05,896 ಕೋಟಿ ರೂ. ಸದ್ಯದ ಗೋಧಿ ಮತ್ತು ಅಕ್ಕಿ ಖರೀದಿ ಪ್ರಕ್ರಿಯೆಯಿಂದ ಸರ್ಕಾರಿ ಗೋದಾಮುಗಳಲ್ಲಿ ಅಗತ್ಯ ಆಹಾರಧಾನ್ಯಗಳ ದಾಸ್ತಾನು ಕಾಯ್ದುಕೊಳ್ಳಲಾಗಿದೆ. ಅಕ್ಕಿ ಮತ್ತು ಗೋಧಿ ಎರಡೂ ಸೇರಿದರೆ ಸದ್ಯ ದಾಸ್ತಾನು ಪ್ರಮಾಣ 570 ಲಕ್ಷ ಮೆಟ್ರಿಕ್ ಟನ್ ತಲುಪಿದ್ದು, ಇದು ದೇಶದ ಆಹಾರಧಾನ್ಯಗಳ ಅಗತ್ಯತೆ ಪೂರೈಸಲು ಉತ್ತಮ ಸ್ಥಾನ ತಲುಪುವಂತೆ ಮಾಡಿದೆ. 

**


(Release ID: 1934035) Visitor Counter : 136