ರಾಷ್ಟ್ರಪತಿಗಳ ಕಾರ್ಯಾಲಯ

ದುಂಡಿಗಲ್ ವಾಯುಪಡೆಯ ಅಕಾಡೆಮಿಯಲ್ಲಿ ಸಂಯೋಜಿತ ಪದವಿ ಪರೇಡ್ ಪರಿಶೀಲಿಸಿದ ರಾಷ್ಟ್ರಪತಿ

Posted On: 17 JUN 2023 1:37PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (2023 ರ ಜೂನ್ 17) ಹೈದರಾಬಾದ್ ನ ದುಂಡಿಗಲ್ ನ ವಾಯುಪಡೆ ಅಕಾಡೆಮಿಯಲ್ಲಿ ಸಂಯೋಜಿತ ಪದವಿ ಪರೇಡ್ ಅನ್ನು ಪರಿಶೀಲಿಸಿದರು.

ಕೆಡೆಟ್ ಗಳನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಅವರು, ವಾಯು ಪಡೆ ಸಿಬ್ಬಂದಿಯ ವೃತ್ತಿಜೀವನವು ಸವಾಲಿನ, ಪ್ರತಿಫಲದಾಯಕ ಮತ್ತು ಅತ್ಯಂತ ಗೌರವಾನ್ವಿತವಾಗಿದೆ ಎಂದು ಹೇಳಿದರು. ಅವರಿಗಿಂತ ಮೊದಲು ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದವರ ಶ್ರೇಷ್ಠ ಪರಂಪರೆಯನ್ನು ಅವರು ಮುಂದುವರಿಸಬೇಕು. ಭಾರತೀಯ ವಾಯುಪಡೆಯು 'ವೈಭವದಿಂದ ಆಕಾಶವನ್ನು ಸ್ಪರ್ಶಿಸಿ', 'ನಭಾ ಸ್ಪ್ರಿಶಮ್ ದೀಪ್ತಮ್' ಎಂಬ ಸ್ಪೂರ್ತಿದಾಯಕ ಧ್ಯೇಯವಾಕ್ಯವನ್ನು ಹೊಂದಿದೆ ಎಂದು ಅವರು ಹೇಳಿದರು. ಕೆಡೆಟ್ ಗಳು ಈ ಧ್ಯೇಯವಾಕ್ಯದ ಸ್ಫೂರ್ತಿಯನ್ನು ಅಳವಡಿಸಿಕೊಳ್ಳುತ್ತಾರೆ ಮತ್ತು ರಾಷ್ಟ್ರವು ಅವರಿಂದ ಹೊಂದಿರುವ ನಿರೀಕ್ಷೆಗಳಿಗೆ ಅನುಗುಣವಾಗಿ ಬದುಕುತ್ತಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

1948, 1965 ಮತ್ತು 1971 ರಲ್ಲಿ ಪ್ರತಿಕೂಲ ನೆರೆಯ ರಾಷ್ಟ್ರದೊಂದಿಗಿನ ಯುದ್ಧಗಳಲ್ಲಿ ದೇಶವನ್ನು ರಕ್ಷಿಸುವಲ್ಲಿ ಭಾರತೀಯ ವಾಯುಪಡೆಯ ಧೈರ್ಯಶಾಲಿ ಯೋಧರು ವಹಿಸಿದ ದೊಡ್ಡ ಪಾತ್ರವನ್ನು ಸುವರ್ಣಾಕ್ಷರಗಳಲ್ಲಿ ಬರೆಯಲಾಗಿದೆ ಎಂದು ರಾಷ್ಟ್ರಪತಿ ಹೇಳಿದರು. ಕಾರ್ಗಿಲ್ ಸಂಘರ್ಷದಲ್ಲಿ ಮತ್ತು ನಂತರ ಬಾಲಕೋಟ್ ನಲ್ಲಿ ಭಯೋತ್ಪಾದಕ ಅಡಗುತಾಣವನ್ನು ನಾಶಪಡಿಸುವಲ್ಲಿ ಅವರು ಅದೇ ಸಂಕಲ್ಪ ಮತ್ತು ಕೌಶಲ್ಯವನ್ನು ಪ್ರದರ್ಶಿಸಿದರು. ಹೀಗಾಗಿ, ಭಾರತೀಯ ವಾಯುಪಡೆಯು ವೃತ್ತಿಪರತೆ, ಸಮರ್ಪಣೆ ಮತ್ತು ಸ್ವಯಂ ತ್ಯಾಗದ ಐತಿಹ್ಯದ ಖ್ಯಾತಿಯನ್ನು ಹೊಂದಿದೆ ಎಂದರು.

ಐಎಎಫ್ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರಕ್ಕೂ ಕೊಡುಗೆ ನೀಡುತ್ತದೆ ಎಂದು ರಾಷ್ಟ್ರಪತಿ ಉಲ್ಲೇಖಿಸಿದರು. ಟರ್ಕಿ ಮತ್ತು ಸಿರಿಯಾದಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕಂಪದ ಸಮಯದಲ್ಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ಹೊರತಾಗಿಯೂ ವೈದ್ಯಕೀಯ ನೆರವು ಮತ್ತು ವಿಪತ್ತು ಪರಿಹಾರವನ್ನು ಒದಗಿಸಲು ಐಎಎಫ್ ಇತ್ತೀಚೆಗೆ ಕಾರ್ಯಪ್ರವೃತ್ತವಾಗಿತ್ತು. ಈ ಹಿಂದೆ, ಕಾಬೂಲ್ ನಲ್ಲಿ ಸಿಲುಕಿರುವ 600 ಕ್ಕೂ ಹೆಚ್ಚು ಭಾರತೀಯರು ಮತ್ತು ಇತರ ನಾಗರಿಕರನ್ನು ಯಶಸ್ವಿಯಾಗಿ ಸ್ಥಳಾಂತರಿಸುವ ಕಾರ್ಯಾಚರಣೆಯು ಪ್ರತಿಕೂಲ ವಾತಾವರಣದಲ್ಲಿ ಹಾರಾಟ ಮತ್ತು ಇಳಿಯುವಿಕೆಯನ್ನು ಒಳಗೊಂಡಿದೆ, ಇದು ಭಾರತೀಯ ವಾಯುಪಡೆಯ ಉನ್ನತ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ ಎಂದು ವಾಯುಪಡೆಯ ಸೇವೆಯನ್ನು ಸ್ಮರಿಸಿದರು.

ಭೂಮಿ, ಸಮುದ್ರ ಮತ್ತು ವಾಯುವಿನಲ್ಲಿ ರಕ್ಷಣಾ ಸನ್ನದ್ಧತೆಗೆ ತಂತ್ರಜ್ಞಾನವನ್ನು ತ್ವರಿತ ಗತಿಯಲ್ಲಿ ಅಳವಡಿಸಿಕೊಳ್ಳುವ ಸಾಮರ್ಥ್ಯ ಅತ್ಯಗತ್ಯ ಎಂದು ರಾಷ್ಟ್ರಪತಿ ಪ್ರತಿಪಾದಿಸಿದರು. ಸಶಸ್ತ್ರ ಪಡೆಗಳ ಪ್ರತಿಯೊಬ್ಬ ಅಧಿಕಾರಿಯು ರಕ್ಷಣಾ ಸನ್ನದ್ಧತೆಯ ಸಮಗ್ರ ದೃಷ್ಟಿಕೋನವನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದ ಅವರು, ನೆಟ್ ವರ್ಕ್ -ಕೇಂದ್ರಿತ ಭವಿಷ್ಯದ ಯುದ್ಧ ಸ್ಥಳದಲ್ಲಿ ಉನ್ನತ ತಂತ್ರಜ್ಞಾನದ ಯುದ್ಧವನ್ನು ಎದುರಿಸುವ ಸವಾಲುಗಳು ಸೇರಿದಂತೆ ಒಟ್ಟಾರೆ ಭದ್ರತಾ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ವಾಯುಪಡೆಯು ಸದಾ ಸಿದ್ಧವಾಗಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ರಾಷ್ಟ್ರಪತಿ ಅವರ ಭಾಷಣ ವೀಕ್ಷಿಸಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.

****



(Release ID: 1933106) Visitor Counter : 106